ತುಂತುರು ಮಾಲೆ

ತುಂತುರು ಮಾಲೆ

ಭೂರಮೆಗೆ ಅಂದದ ಸರವು
ಹನಿ ಹನಿ ಇಬ್ಬನಿಯಿಂದ ಕೂಡಿದ ಬಿಂದುವು
ಸ್ಫಟಿಕದಂತೆ ಪರಿಶುದ್ಧವು
ಹೊಳಪಿನ ಹೊಂಗಿರಣವು

ಇಡೀ ಸೃಷ್ಟಿಯು ದೇವರ ಕೈಚಳಕವು
ಯಾರಿಲ್ಲ ಈ ಕಲೆಗಾರನಿಗೆ ಸರಿಸಾಟಿಯು
ವರ್ಣಿಸಲಾಗದ ಕಲಾಸಿರಿಯು
ಇದ ನೋಡುವುದೇ ನಮ್ಮ ಭಾಗ್ಯವು

ತುಂತುರು ಹನಿಗಳ ಅಂದದ ಚಿತ್ತಾರ
ಕಣ್ತುಂಬಿಕೊಳ್ಳಲು ಏನೋ ಸಡಗರ
ಕಣ್ಮನ ರಂಜಿಸಲು ಬಂದಿಹ ಮಾಯಗಾರ
ತಿಳಿಸುವೆಯಾ ನಿನ್ನ ಸೌಂದರ್ಯದ ಆಗರ

ತುಂತುರು ಹನಿಗಳ ಸಿಂಚನ
ಮೈವನವೆಲ್ಲಾ ರೋಮಾಂಚನ
ಕುಂತರು, ನಿಂತರು ನಿನ್ನದೇ ಧ್ಯಾನ
ನೀನಾಗಿರುವೆ ಹಸಿರೆಲೆಗಳ ಮೇಲೆ ಮೌನ

ಹೊಳೆಹೊಳೆದು ನೀ ನಗುತಿರುವಂತೆ
ನೋಡುವಾಗ ಮಾಯವಾಯಿತು ಚಿಂತೆ
ಯಾವುದೋ ಮಾಯಲೋಕದಿ ಧರೆಗಿಳಿದಂತೆ
ಭುವಿಯನು ಸಿಂಗಾರಗೊಳಿಸಲು ಬಂದಂತೆ

ಜನಾರ್ಧನ್ ಎಂ. ಎನ್
ಭಟ್ಕಳ, ಉ.ಕ. ಜಿಲ್ಲೆ


Print Friendly, PDF & Email
Spread the love
error: Content is protected.