ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಸ್ಮಿತಾ ರಾವ್ , ಬದನಿಕೆ ಹಕ್ಕಿ

ಭಾರತದ ಅತ್ಯಂತ ಚಿಕ್ಕ ಪಕ್ಷಿಯಾಗಿರುವ ಇದರ ಉದ್ದ ಕೇವಲ  8 ಸೆಂ.ಮೀ. ಆಹಾರಕ್ಕಾಗಿ ಹೂವಿನ ಮಕರಂದ ಹಾಗು ಸಣ್ಣ ಸಣ್ಣ  ಹಣ್ಣುಗಳ ಮೇಲೆ ಅವಲಂಬಿತವಾಗಿರುವ ಇವು ಸಾಮಾನ್ಯವಾಗಿ ದಕ್ಷಿಣ ಭಾರತದೆಲ್ಲೆಡೆ ಹಾಗು ಶ್ರೀಲಂಕಾದಲ್ಲಿ ಕಾಣಸಿಗುತ್ತವೆ. ಬೂದು ಬಣ್ಣದ ಈ ಪಕ್ಷಿಗಳು ಕೆಲವು ಜಾತಿಯ ಗಿಡಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಜನನಿಬಿಡ ನಗರಗಳಲ್ಲಿನ ಹೂ ಗಿಡಗಳಿಗೆ ಆಕರ್ಷಿತವಾಗಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತಿವೆ. ಫೆಬ್ರವರಿಯಿಂದ ಜೂನ್‌ ತಿಂಗಳುಗಳ ನಡುವೆ ಮರದ ಎತ್ತದರಲ್ಲಿರುವ ರೆಂಬೆಯ ತುದಿಗಳಲ್ಲಿ ಸಣ್ಣ ಗಾತ್ರದ ಗೂಡನ್ನು ಮಾಡಿ ಎರಡು ಅಥವಾ ಮೂರು ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ. ಕೆಲವೊಮ್ಮೆ ಸೆಪ್ಟೆಂಬರ್ ತಿಂಗಳಲ್ಲಿ ಅದೇ ವರ್ಷ ಎರಡನೇ ಸಲ ಮರಿಮಾಡುವ ಸಾಧ್ಯತೆಗಳು ಇವೆ.

© ಸ್ಮಿತಾ ರಾವ್,        ಶಿಕ್ರಾ

ಶಿಕ್ರಾ ಎಸಿಪಿಟ್ರಿಡೇ ಕುಟುಂಬಕ್ಕೆ ಸೇರಿರುವ ಬೇಟೆಯಾಡುವ ಒಂದು ಸಣ್ಣ ಹಕ್ಕಿಯಾಗಿದೆ. ಹೆಚ್ಚಾಗಿ ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ವ್ಯಾಪಕವಾಗಿ ಕಾಣಸಿಗುತ್ತವೆ. ಇದನ್ನು ಪುಟ್ಟ ಬ್ಯಾಂಡೆಡ್ ಗೋಶಾಕ್ ಎಂದೂ ಕೂಡ ಕರೆಯುತ್ತಾರೆ. ಇದರ ಕರೆಯನ್ನು ಕಾಜಾಣಗಳು ಮತ್ತು ಕೋಗಿಲೆಚಾಣಗಳು ಅನುಕರಿಸುತ್ತವೆ. ಕಾಡು, ಕೃಷಿ ಭೂಮಿ ಹಾಗೂ ನಗರಗಳಲ್ಲಿ ಗಾಳಿಯಲ್ಲಿ ತೇಲುತ್ತಿರುವುದು ಕಾಣುತ್ತದೆ. ಆಹಾರವನ್ನಾಗಿ ಅಳಿಲುಗಳನ್ನು, ಸರೀಸೃಪ, ಕೀಟ ಹಾಗು ಸಣ್ಣ ಪಕ್ಷಿಗಳನ್ನು ಸಹ ಬೇಟೆಯಾಡುತ್ತವೆ.  ಸಣ್ಣ ಪಕ್ಷಿಗಳು ಇದರಿಂದ ತಪ್ಪಿಸಿಕೊಳ್ಳಲು ಎಲೆಗಳ ಕೆಳಗೆ ಮರೆಯಾದರೆ ಸಣ್ಣ ನೀಲಿ ಮಿಂಚುಳ್ಳಿಯು ನೀರಿನಲ್ಲಿ ಮುಳುಗುತ್ತವೆ. ಇವು ಸಣ್ಣ ಬಾವಲಿಗಳಿಗಾಗಿ ಮುಸ್ಸಂಜೆಯಲ್ಲಿ ಬೇಟೆಯಾಡುವುದೂ ಸಹ ಕಂಡುಬರುತ್ತದೆ. ಭಾರತದಲ್ಲಿ ಇದರ ಸಂತಾನೋತ್ಪತ್ತಿ ಸಮಯವು ಮಾರ್ಚ್ ನಿಂದ ಜೂನ್ ವರೆಗಿರುತ್ತದೆ. ಕಾಗೆಗಳಂತೆಯೇ ಗೂಡನ್ನು ಹುಲ್ಲಿನಿಂದ ಮುಚ್ಚಿರುತ್ತದೆ. ತಿಳಿ ನೀಲಿ ಬಣ್ಣದ ಮೂರ್ನಾಲ್ಕು ಮೊಟ್ಟೆಗಳನ್ನಿಟ್ಟು 18-21 ದಿನಗಳ ಕಾಲ ಕಾವು ಕೊಡುತ್ತವೆ. ಶಿಕ್ರಾ ಎಂಬ ಪದಕ್ಕೆ ಹಿಂದಿ ಭಾಷೆಯಲ್ಲಿ ಬೇಟೆಗಾರ ಎಂದು ಅರ್ಥ.

© ಸ್ಮಿತಾ ರಾವ್ , ಚಮಚದ ಕೊಕ್ಕು

ಈ ಪಕ್ಷಿಯ ಹೆಸರೇ ಹೇಳುವಂತೆ ಇದರ ಕೊಕ್ಕು ಚಮಚದ ರೀತಿ ಇದ್ದು ಇದು ತನ್ನ ಆಹಾರವನ್ನಾಗಿ ನೀರಿನಲ್ಲಿರುವ ಸಣ್ಣ ಸಣ್ಣ ಮೀನುಗಳನ್ನು, ಕಪ್ಪೆ, ಗೊದಮಟ್ಟೆ, ಕೀಟಗಳನ್ನು ಹಿಡಿಯಲು ಸಹಕಾರಿಯಾಗಿದೆ. ಇದರ ದೇಹವು ಪೂರ್ತಿ ಬಿಳಿಬಣ್ಣವಿದ್ದು ಕಪ್ಪು ಬಣ್ಣದ ಕೊಕ್ಕು, ಕಾಲುಗಳನ್ನು ಹೊಂದಿರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ತಲೆಯ ಹಿಂದೆ ಸ್ವಲ್ಪ ಜುಟ್ಟು ಬೆಳೆದಿರುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಕಾಣಸಿಗುವ ಇವು ಸಂತಾನೋತ್ಪತ್ತಿ ಕಾಲದಲ್ಲಿ ಸಾಮಾನ್ಯವಾಗಿ ಸೂಕ್ತವಾದ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಈ ಗುಂಪಿನ ಹಲವಾರು ಪ್ರಭೇದದ ಪಕ್ಷಿಗಳು ಸಂತಾನೋತ್ಪತ್ತಿ ಕಾಲದಲ್ಲಿ ವಲಸೆ ಹೋಗಿ ಏಪ್ರಿಲ್ ತಿಂಗಳಿನಲ್ಲಿ ನದಿ ದಂಡೆಯಲ್ಲೋ ನದಿಯ ಮಧ್ಯೆ ಇರುವ ಬಂಡೆಯಂತಹ ದ್ವೀಪಗಳಲ್ಲೋ ಕಡ್ಡಿ ಇಂದ ಕೂಡಿರುವ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತವೆ.

© ಸ್ಮಿತಾ ರಾವ್,   ದೊಡ್ಡ ಕುಟ್ರ

ದೊಡ್ಡ ಕುಟ್ರ ಎಂದು ಕರೆಯಲ್ಪಡುವ ಈ ಪಕ್ಷಿಯು ಗುಬ್ಬಚ್ಚಿಗಿಂತ ಗಾತ್ರದಲ್ಲಿ ತುಸು ದೊಡ್ಡದು. ಇದರ ಕತ್ತು ಮತ್ತು ಎದೆಯ ಭಾಗವು ಕಂದು ಬಣ್ಣದಿಂದ ಕೂಡಿದ್ದು ಕಣ್ಣಿನ ಸುತ್ತ ಹಳದಿ ಬಣ್ಣವಿರುತ್ತದೆ. ತಮ್ಮ ಗೂಡನ್ನು ಮರದ ಪೊಟರೆಗಳಲ್ಲಿ ಮಾಡುತ್ತವೆ ಮತ್ತು ಪ್ರಧಾನವಾಗಿ ಕೀಟಗಳನ್ನು ತಿನ್ನುತ್ತವೆ. ಇವುಗಳ ವಾಸಸ್ಥಾನ ಬದಲಾವಣೆಯಾಗುವುದರಿಂದ ವರ್ಷದ ಬಹುಪಾಲು ಸಂತಾನೋತ್ಪತ್ತಿ ಮಾಡುತ್ತದೆ. ಹೆಚ್ಚಾಗಿ ಭಾರತದಲ್ಲಿ ಇದರ ಸಂತಾನೋತ್ಪತ್ತಿಯು ಫೆಬ್ರವರಿ ಇಂದ ಏಪ್ರಿಲ್ ತಿಂಗಳಿನವರೆಗೆ ನಡೆಯುತ್ತದೆ. ಗೂಡಿನಲ್ಲಿ ಮೂರ್ನಾಲ್ಕು ಮೊಟ್ಟೆಗಳನ್ನಿಟ್ಟು, ಗಂಡು ಹಾಗು ಹೆಣ್ಣು ಎರಡೂ ಸಹ ಎರಡು ವಾರಗಳ ಕಾಲ ಕಾವು ಕೊಟ್ಟು ಮರಿಮಾಡುತ್ತವೆ.

ಚಿತ್ರಗಳು: ಸ್ಮಿತಾ ರಾವ್
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.