ಮಳೆಕಾಡಿನಲ್ಲೊಂದು ಸುತ್ತು
© ಅರವಿಂದ ರಂಗನಾಥ್
ಇದು ರೀಡರ್ಸ್ ಡೈಜೆಸ್ಟ್ 1996 ರಲ್ಲಿ ಪ್ರಕಟಿಸಿದ `Mysteries of the rain forest’ ಎಂಬ ಪುಸ್ತಕದ ಆಯ್ದ ಭಾಗಗಳ ಭಾವಾನುವಾದ. ಇಂದಿಗೆ ಎಷ್ಟೋ ಹೊಸ ಜೀವಿಗಳ ಉಗಮವಾಗಿ, ಅಂದು ಇದ್ದ ಇನ್ನೆಷ್ಟೋ ಜೀವಿಗಳು ನಶಿಸಿ, ಕಾಲದ ಪರದೆಗಳು ಹಿಂದೆ ಸರಿದು ಹೋಗಿವೆ. ಹೆಚ್ಚು ಕಡಿಮೆ ಪ್ರಕೃತಿಯ ಲೆಕ್ಕಾಚಾರವು ಇಂದಿಗೂ ಅದೇ ಆಗಿದ್ದರೂ, ಮನುಷ್ಯನ ಮಧ್ಯಸ್ಥಿಕೆಯಿಂದ ಆ ಲೆಕ್ಕಾಚಾರವು ಸ್ವಲ್ಪ ತಪ್ಪಿದ್ದಿದೆ, ಯಾಕೆಂದರೆ ದಕ್ಷಿಣ ಅಮೇರಿಕಾ, ಆಗ್ನೇಯ ಏಷ್ಯಾ ಕಾಡುಗಳು ಇವತ್ತಿಗೆ ಬರಿದಾಗುತಲಿದೆ. ಹೀಗಾಗಿಯೇ ಸರಾಸರಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ತನ್ನದೇ ಸಮತೋಲನದಲ್ಲಿ ಜೀವ ಜಾಲವನ್ನು ತೂಗಿಸಿಕೊಂಡು, ಪ್ರಕೃತಿಯ ವೈಶಿಷ್ಠ್ಯತೆಗಳೆಲ್ಲವನ್ನು ತನ್ನಲ್ಲಿ ಹಾಸುಹೊಕ್ಕಾಗಿರಿಸಿಕೊಂಡಿರುವ ಮಳೆಕಾಡನ್ನುಪರಿಚಯಿ ಸುವ ಹಂಬಲವೇ ಈ ಲೇಖನ.
ಗುಡುಗೊಂದು ಘರ್ಜಿಸಿ ಇನ್ನೇನು ಮುಂದೆ ಬರುವ ಮಹಾಮಳೆಯ ಮುನ್ಸೂಚನೆ ನೀಡುತಿದೆ; ಕಾಡಿನತ್ತ ಕಣ್ಣು ಹಾಯಿಸಿದರೆ ಮರದ ಕೊಂಬೆಗಳು ಆಗಷ್ಟೇ ಆರಂಭವಾದ ಗಾಳಿಗೆ ಪ್ರತಿಕ್ರಿಯೆ ನೀಡಲೇಬೇಕಾ? ಎಂದು ಕೇಳುವಂತೆ ಒಂದಕ್ಕೊಂದು ಢಿಕ್ಕಿ ಹೊಡೆಯುತಲಿವೆ. ಇದರಲ್ಲಿ ಸೋತ ಕೊಂಬೆಗಳ ಎಲೆಗಳು ಒಂದಷ್ಟು ಗಾಳಿಗೆ ತೂರಿ, ಮನಸ್ಸಿಲ್ಲದೆ ಕೆಳಗೆ ಇಳಿಯುತ್ತಿವೆ. ಆದರೆ ಅದೇ ಕಾಡಿನ ಬುಡದಲ್ಲಿ ಇನ್ನೂ ಏನೂ ಆಗಿಲ್ಲವೇನೋ ಎಂಬಂತೆ ಎಲ್ಲವೂ ಸ್ಥಬ್ಧ. ಮುಂದೆ ಏನೋ ಇನ್ನೂ ಏನಾದರೂ ಆಗಬಹುದೇನೋ ಎಂಬ ಬಹು ದೊಡ್ಡ ನಿರೀಕ್ಷೆಯಲ್ಲಿ ಕಾಡು ಎಲ್ಲವನ್ನೂ ತನ್ನ ಉಸಿರಿನಲ್ಲಿ ಬಿಗಿಹಿಡಿದಿದೆ. ಮೊದಲ ಹನಿಗಳು ಹಸಿರು ಚಪ್ಪರದಿಂದ ಕೆಳಗಿಳಿಯಲು ಉತ್ಸುಕತೆಯಿಂದ ಕಾಯುತ್ತಿದ್ದರೆ, ಇತ್ತ ಕಾಡಿನ ನೆಲದಲ್ಲಿ ನಮಗೂ, ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಎಲ್ಲವೂ ಸಹಜ. ಏಕೆಂದರೆ ಇಲ್ಲಿ ಯಾವುದಕ್ಕೂ ಅವಸರವಿಲ್ಲ, ಅಂತೆಯೇ ಎಲ್ಲವೂ ವಿಳಂಬ. ಇದರಲ್ಲಿ ಯಾವುದೂ ಹೊಸತಲ್ಲ, ಆದರೆ ಎಲ್ಲವೂ ನಿತ್ಯ ನೂತನ. ಇಂದು ಇದ್ದದ್ದು ನಾಳೆ ಇರಬೇಕೆಂದಿಲ್ಲ, ಹಾಗಂತ ನಾಳೆಯ ಇರುವಿಕೆಯ ಬಗ್ಗೆ ಇಂದೇ ಊಹಿಸಲೂ ಅಸಾಧ್ಯ.
ಇನ್ನೂ ಸ್ವಲ್ಪ ಸಮಯ ಸರಿಯುತ್ತಿದ್ದಂತೆ, ಎಲೆಗಳ ಬದಿಯಿಂದ ಒಂದೊಂದೇ ಸ್ತರ ಇಳಿದು ನೋಡು ನೋಡುತ್ತಿದ್ದಂತೆಯೇ ರೆಂಬೆ ಕೊಂಬೆಗಳನ್ನು ಸವರುತ್ತಾ, ಮಳೆಹನಿ ಧರೆಗಿಳಿಯಲು ಸಜ್ಜಾಗುತ್ತದೆ. ಹೀಗೆ ಕಪಟತನದಿಂದಾದರೂ ಧರೆಯನ್ನು ಸ್ಪರ್ಶಿಸಿಯೇ ತೀರುತ್ತೇನೆ ಎಂಬಂತೆ ಕಾಡಿನ ನೆಲದ ಮೇಲಿನ ಎಲೆಗಳ ರಾಶಿಯನ್ನು ಬಂದು ತಾಕುತ್ತದೆ. ಈ ಒಂದು ನಾಟಕ ಪ್ರದರ್ಶನಗೊಂಡು ಮುಗಿಯುತ್ತಿದ್ದಂತೆ, ಏನೂ ಆಗೇ ಇಲ್ಲ ಎಂಬಂತೆ ಮತ್ತೆ ಎಲ್ಲವೂ ಸ್ತಬ್ಧ. ಎಲ್ಲಾ ಅಡೆತಡೆಗಳನ್ನು ದಾಟಿ ನಾಜೂಕಾಗಿ ಹನಿ ಧರೆಗುರುಳುವ ಸಣ್ಣ ಶಬ್ಧ ಹೊರತುಪಡಿಸಿದರೆ, ಎಲ್ಲವೂ ಸ್ಥಿರ. ಹೀಗಿರುವಾಗ, ಇಲ್ಲಿ ಏನಾಗುತ್ತಿರಬಹುದು ಎಂದು ನೋಡಲು ಸೂರ್ಯ ಇಣುಕಿ ಮೋಡದಿಂದ ಹೊರ ಬರುತ್ತಿದ್ದಂತೆ, ಭೂಮಿಯ ಮೇಲಿನ ನೆಲವನ್ನು ಸ್ಪರ್ಶಿಸಲು ಹವಣಿಸುತ್ತಿದ್ದ ಎಷ್ಟೋ ಹನಿಗಳು, ಅವಕಾಶ ವಂಚಿತರಾಗಿ ನಿರಾಸೆಯಿಂದ ಆವಿಯಾಗಲು ಸಜ್ಜಾಗುತ್ತವೆ. ಹೀಗೆ ಎಲೆಗಳ ಮೇಲಿದ್ದ ಮಳೆಹನಿಯಿಂದ ಸೃಷ್ಟಿಯಾದ ಮಂಜು ಈಗ ಮತ್ತೊಂದು ಹೊಸ ಲೋಕವನ್ನು ಅನಾವರಣಗೊಳಿಸುತ್ತದೆ. ಇದೆಲ್ಲ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಹುಳಹುಪ್ಪಟೆಗಳ ಝೇಂಕರಿಸುವ, ಗುಯಿಗುಡುವ ಸದ್ದು ಮೆಲ್ಲನೆ ಆರಂಭವಾಗುತ್ತದೆ.
ಜೀವಧಾರೆ- ಮಳೆ:
ಮಳೆಕಾಡು ಒಂದು ಅದ್ಭುತ ಜೀವಜಗತ್ತಾಗಲು ನೀರೇ ಮೂಲ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಎಡಬಿಡದೆ ದಿನವಿಡೀ ಸುರಿಯುವ ಮಳೆ, ಚಿಕ್ಕ-ದೊಡ್ಡ ತೊರೆಗಳಿಗೆ ಜೀವ ತುಂಬಿ, ನಂತರ ಇವುಗಳು ಕಾಡನ್ನು ಬೇಧಿಸಿ ಹರಿಯುತ್ತಾ, ಕಾಡು ತನಗೆ ಸೇರಿದ್ದು ಎಂಬಂತೆ ವ್ಯಾಪಿಸುತ್ತದೆ. ಒಂದು ಇಂಚಿಗೂ ಹೆಚ್ಚಿನ ಮಳೆ ಕೆಲವೇ ಗಂಟೆಗಳಲ್ಲಿ ಬಂದು ಸುರಿದು ಹೋಗುತ್ತದೆ. ಒಂದಕ್ಕಿಂದ ಒಂದು ಋತುಮಾನ ನೆಲವನ್ನು ಒದ್ದೆಯಾಗಿಸಲು ತವಕಿಸುತ್ತದೆ ಹೊರತು ಎಂದಿಗೂ ಮಳೆ ಇಲ್ಲದ, ಒಣ ಹವಾಮಾನಕ್ಕೆ ಆಸ್ಪದ ನೀಡುವುದಿಲ್ಲ.
ಮೊದಲೇ ಹೇಳಿದಂತೆ ಎಷ್ಟೋ ಮಳೆಗಳಲ್ಲಿ ನೀರ ಹನಿಗಳು ಕಾಡಿನ ನೆಲವನ್ನು ಸ್ಪರ್ಶಿಸದೇ ಮರೆಯಾಗುತ್ತವೆ. ಅಲ್ಲಲ್ಲೇ ವಿವಿಧ ಸ್ತರಗಳ ಎಲೆಗಳ ಹಾಸಿನಲ್ಲಿ ಕಾಯುತ್ತ ನಿಂತ ಹನಿಗಳನ್ನು, ಇತ್ತ ಮಹಾಮಳೆ ಮುಗಿಯುತ್ತಿದ್ದಂತೆ ನೆತ್ತಿಗೇರುವ ಉಷ್ಣವಲಯದ ಶಾಖ ಆವಿಯಾಗಿಸುತ್ತದೆ. ಮತ್ತೆ ಕಾಡಿನಿಂದ ಮೇಲೆದ್ದು ಬಾಷ್ಪೀಕರಣಗೊಂಡು ತಣ್ಣಗಿನ ಗಾಳಿಯನ್ನು ಸೀಳಿ ಮತ್ತೆ ಮೋಡವಾಗಿ ಮಾರ್ಪಾಡಾಗುತ್ತದೆ. ಭೂ ಸ್ಪರ್ಶಿಸಲಾಗದೆ ನಿರಾಸೆಗೊಂಡಿದ್ದ ಅದೇ ಹನಿಗಳು ಅಲ್ಲೇ ಮಳೆಯಾಗಿ ಬೀಳುವ ಅವಕಾಶ ಗಿಟ್ಟಿಸಿಕೊಂಡರೂ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ದಟ್ಟ ಕಾಡಿನ ಮೇಲ್ಛಾವಣಿಯಲ್ಲಿ, ಅಲ್ಲಿನ ವಾತಾವರಣ ತೇವಾಂಶವನ್ನು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಹೋಗುವಂತೆ ಮಾಡಿ, ಮಳೆ ಮತ್ತು ಆವಿಯ ನಡುವೆ ಒಂದು ಲಯಬದ್ಧ ಸಮ್ಮಿಲನಕ್ಕೆ ಸಾಕ್ಷಿಯಾಗುತ್ತದೆ.
ಈ ಮಳೆಕಾಡುಗಳು ಜಗತ್ತಿನ ಶೇಕಡಾ 6 ರಷ್ಟು ಭೂಭಾಗವನ್ನು ಮಾತ್ರ ಆವರಿಸಿದೆ. ಮುಖ್ಯವಾಗಿ ಆಫ್ರಿಕಾ, ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಆಗ್ನೇಯ ಏಷ್ಯಾ,, ಆಸ್ಟ್ರೇಲಿಯಾ ಹಾಗೂ ನ್ಯೂಗಿನಿಯಾದಲ್ಲಿ ಕಂಡುಬರುತ್ತವೆ. ಮಳೆ ಕಾಡು ಎಂದು ಗುರುತಿಸಲ್ಪಡುವುದೇ ವರ್ಷಕ್ಕೆ ಸರಾಸರಿ 80 ಇಂಚಿಗಿಂತ ಹೆಚ್ಚು ಮಳೆ ಬೀಳುವ ಜಾಗಗಳಲ್ಲಿ. ಮನುಷ್ಯ ಹಸ್ತಕ್ಷೇಪ ಮಾಡದೇ ಇರುವ ಇನ್ನೂ ಒಂದಷ್ಟು ಭೂ ಪ್ರದೇಶಗಳು ಈ ಭೂಮಿ ಮೇಲಿದ್ದು, ಅದನ್ನು ಇಂದಿಗೂ ಪ್ರಧಾನವಾದ ತಗ್ಗು ಪ್ರದೇಶದ ಮಳೆಕಾಡುಗಳೆಂದು ಕರೆಯಲಾಗುತ್ತದೆ.
ಉಷ್ಣವಲಯದ ಕಾಡುಗಳೆಂದರೆ ಕಣ್ಣೆದುರಿಗೆ ಬರುವುದು ಎತ್ತರೆತ್ತರದ ಮರಗಳು. ಇವು ಸಾಕಷ್ಟು ಎಲೆಗಳನ್ನು ವರ್ಷವಿಡೀ ಕಾಯ್ದಿರಿಸಿಕೊಂಡೇ ಇರುತ್ತವೆ. ಹೀಗಾಗಿ ಹಸಿರಿನ ಚಾದರವನ್ನು ನಿರಂತರವಾಗಿ ಕಾಡುಗಳು ಹೊದ್ದಿರುತ್ತವೆ. ಅಲ್ಲದೆ ಇಲ್ಲಿನ ಮರಗಳು ಅಸಾಧ್ಯ ಗತಿಯಲ್ಲಿ ಬೆಳೆಯುತ್ತವೆ. ನಾ ಮುಂದು, ತಾ ಮುಂದು ಎಂದು ಉತ್ತುಂಗಕ್ಕೇರಲು ಹವಣಿಸುತ್ತಿರುವ ಈ ಮರಗಳ ಕಾಂಡಗಳನ್ನು ಬಿಗಿದಪ್ಪುವ ಬಳ್ಳಿಗಳು, ಜೋತು ಬಿದ್ದಿರುವ ಪಾಚಿ, ಅನಿಶ್ಚಿತವಾಗಿ ಬೆಳೆದಿರುವ ಆರ್ಕಿಡ್, ಫರ್ನ್ ಗಳು ಮತ್ತಷ್ಟು ಅಲಂಕರಿಸುತ್ತದೆ. ಇನ್ನು ಬೃಹದಾಕಾರವಾಗಿ ಬೆಳೆದ ಈ ಮರಗಳನ್ನು ಸಲಹುವುದೇ, ಕಾಲನ್ನು ಚಾಚಿ ಕುಳಿತಂತೆ ಕಾಣುವ ದೈತ್ಯಾಕಾರದ ಬೇರುಗಳು. ಮಧ್ಯಪ್ರಾಚೀನ ಕಾಲದ ಕ್ಯಾಥೆಡ್ರೆಲ್ ಗಳಂತೆ ತೋರುವ ಇವು ಮನುಷ್ಯನಿಗಿಂತ ದುಪ್ಪಟ್ಟು ಎತ್ತರಕ್ಕಿದ್ದು ಕಾಡಿನುದ್ದಕ್ಕೂ ತಲೆ ಎತ್ತಿ ನಿಂತಿರುತ್ತವೆ!
ಇಲ್ಲಿ ಒಂದೆಡೆ ಗೊಬ್ಬರವಾಗಿ ಕೊಳೆಯುತ್ತಿರುವುದರ ವಾಸನೆ ಮೂಗಿಗೆ ತಾಗುತ್ತಿದ್ದರೆ, ಇನ್ನೊಂದೆಡೆ ಹೊರಹೊಮ್ಮುವುದು ಮಳೆ ಭೂಮಿಗೆ ಸ್ಪರ್ಶಿಸುವುದರಿಂದ ಬೀರುವ ಘಮ. ಮತ್ತೊಂದೆಡೆ ಅಮಲೇರಿಸುವ, ಆಗಷ್ಟೇ ವಿಕಸಿತಗೊಳ್ಳುತ್ತಿರೋ ಹೂವಿನ ಪರಿಮಳ. ಇದು ಗಾಳಿಯನ್ನು ಸೇರಿ, ಪರ್ಯಟನೆ ಹೊರಟು, ಎತ್ತಲೋ ಹೋಗಬೇಕೆಂದಿದ್ದ ಕ್ರಿಮಿಕೀಟಗಳನ್ನು ಪರಾಗಸ್ಪರ್ಶಕ್ಕೆ ಆಹ್ವಾನಿಸುತ್ತದೆ. ಒಂದು ಅದ್ಭುತ ಚಿತ್ರವನ್ನು ತೆಗೆದು ಮಳೆಕಾಡೆಂದರೆ ಹೀಗೆ ಎಂದು ಮಳೆಕಾಡಿನ ಸೊಬಗನ್ನು ಉಣಬಡಿಸುವುದು ಒಂದು ಊಹೆಯಷ್ಟೇ. ಏಕೆಂದರೆ ಮಳೆಕಾಡಿನ ಸರ್ವಸಾರ ಇರುವುದೇ ಅದರ ತರೇವಾರಿ ಪರಿಮಳ ಹಾಗೂ ಅಲ್ಲಿ ಹೊರಹೊಮ್ಮುವ ಶಬ್ಧದಲ್ಲಿ, ಅಲ್ಲಿನ ಶಾಖ ಮತ್ತು ತೇವದಲ್ಲಿ ದೈತ್ಯಾಕಾರವಾಗಿ ವಕ್ರ ವಕ್ರವಾಗಿ ಬೆಳೆದಿರುವ ಮರಗಳ ರೆಂಬೆ-ಕೊಂಬೆಗಳಲ್ಲಿ. ಇನ್ನು ಅದನ್ನು ಅನುಭವಿಸುವ ಹೃದಯಕ್ಕೆ ಅದು ತನ್ನ ಭಾಷೆಯನ್ನೂ ಕಲಿಸುತ್ತದೆ.
ಹಾಗೆ ಒಂದು ಕ್ಷಣ ದಿಟ್ಟಿಸಿ ನೋಡಿದರೆ ಒಂದೇ ನೋಟಕ್ಕೆ ಯಾವ ಜೀವಿಯೂ ಗೋಚರಿಸದಿರಬಹುದು. ಮತ್ತೆ ಇಲ್ಲಿ ಎಷ್ಟೋ ಜೀವಿಗಳು ಹೊರಗಿನ ಪ್ರಪಂಚಕ್ಕೆ ಕಾಲಿಟ್ಟು ತಮ್ಮ ನಿತ್ಯ ಪಾಳಿಯನ್ನು ಆರಂಭಿಸುವುದೇ ರಾತ್ರಿಯಲ್ಲಿ. ರಾತ್ರಿಯಾಗುತ್ತಿದ್ದಂತೆ ಹೇಳಿದ್ದನ್ನೇ ಒಂದೇ ಸಮನೆ ಮತ್ತೆ ಮತ್ತೆ ನಾ ಮೊದಲು, ತಾ ಮೊದಲು ಎಂದು ಹೇಳುವ ಜೀರುಂಡೆ ಸಂಗೀತ, ನಿಲ್ಲಿಸದೆ ವಟಗುಟ್ಟವ ಕಪ್ಪೆಗಳು, ಅಲ್ಲೊಮ್ಮೆ ಇಲ್ಲೊಮ್ಮೆ ತಮ್ಮ ಇರುವಿಕೆಯನ್ನು ಖಚಿತಪಡಿಸುವ ಗೂಬೆ, ಇನ್ನೂ ಹೆಸರು ಗೊತ್ತಿಲ್ಲದ, ಹೆಸರೇ ಇರಿಸಿಕೊಂಡಿರದ ಕ್ರಿಮಿಕೀಟಗಳು ತಮ್ಮ ಇರುವಿಕೆಯನ್ನು ಪ್ರಸ್ತುತಪಡಿಸಿ ಮರೆಯಾಗುತ್ತವೆ. ಅತ್ತ ಅಮೆಜಾನ್ ಕಾಡುಗಳಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆಯೇ ಹೌಲೆರ್ ಮಂಗಗಳ ಧ್ವನಿ ಪ್ರತಿಧ್ವನಿಸುತ್ತಿದ್ದರೆ; ಇತ್ತ ಆಫ್ರಿಕಾದ ಕಾಡುಗಳಲ್ಲಿ ಹಾಗೂ ಮಳೆಕಾಡುಗಳಲ್ಲಿ ಸ್ವಲ್ಪ ಒಣ ಪ್ರದೇಶ ಎಂದು ಗುರುತಿಸಬಹುದಾದ ಕಡೆ ಚಿಂಪಾಜಿಗಳ ಕೂಗು ಕಾಡಿನ ತುಂಬಾ ತುಂಬುತ್ತದೆ. ಇದು ಸ್ವಲ್ಪ ಬಿಡುವು ನೀಡುತ್ತಿದ್ದಂತೆಯೇ ಕೊಲಂಬಸ್ ಮಂಗಗಳು ತಮ್ಮ ಪ್ರದರ್ಶನಕ್ಕೆ ಸಜ್ಜಾಗುತ್ತವೆ. ಇಷ್ಟೆಲ್ಲಾ ಸದ್ದು ಮೊಳಗುತ್ತಿದ್ದರೂ, ಇವೆಲ್ಲವನ್ನೂ ಒಬ್ಬ ನಿಂತು ನೋಡಲು ಬಯಸುವುದಾದರೆ, ಎಲ್ಲವೂ ಅಗೋಚರ. ಸದ್ದು ಬಂದ ದಿಕ್ಕಿನೆಡೆಗೆ ತಿರುಗಬಹುದೇ ಹೊರತು, ಸದ್ದು ಮಾಡುತ್ತಿರುವವರು ಯಾರು ಎಂದು ಹುಡುಕುವುದು ನಮ್ಮ ನಿರೀಕ್ಷೆಗೆ ನಿಲುಕದ್ದು. ದಟ್ಟ ಎಲೆಗಳ ಮರಗಳ ಹಿಂದೆ ಅವಿತು ಕಣ್ಣಾಮುಚ್ಚಾಲೆಯೂ ಆಡುತ್ತಿರಬಹುದು, ಮಾರುವೇಷಧಾರಿಗಳಾಗಿ ಕೂತಲ್ಲೇ ಕೂತೂ ಇರಬಹುದು. ಒಂದೇ ಪದದಲ್ಲಿ ಇದನ್ನು ಹೇಳುವುದಾದರೆ ನಮ್ಮ ಮಲೆನಾಡಿನಲ್ಲಿ ಬಳಕೆಯಲ್ಲಿರುವ `ಮಂಗಮಾಯಾ’ ಎನ್ನುವುದು ಇದಕ್ಕೆ ಹೆಚ್ಚು ಸೂಕ್ತ. ಇನ್ನೂ ಒಂದಷ್ಟು ಜೀವಿಗಳು ಕ್ರಿಯಾಶೀಲವಾಗಿದ್ದರೂ ನಮಗೆ ಕೇಳುವ ಆವರ್ತನದ ಮಿತಿಯಿಂದಾಗಿ ಪಕ್ಕದಲ್ಲೇ ಇದ್ದರೂ ಗುರುತಿಸದೇ ಹೋಗಬಹುದು. ಆಗಾಗ ಬೆಳಕಿನ ಕಿಂಡಿಯಂತೆ ಕಣ್ಣು ಕುಕ್ಕುವ ಆಕರ್ಷಣೆ ಹೊಂದಿರುವ ಮೊರ್ಫ್ ಚಿಟ್ಟೆ ಅಥವಾ ತಲೆಯ ಮೇಲೆ ಚಂಗನೆ ಹಾರುವ ಮಂಗಟ್ಟೆಯಂತಹ ಒಂದಷ್ಟು ಪಕ್ಷಿಗಳು ಬಿಟ್ಟರೆ, ಉಳಿದೆಲ್ಲವೂ ಬೇಕೆಂದೇ ಸೃಷ್ಟಿಯಾದ ನಿಗೂಢ ಲೋಕ.
ಒಟ್ಟಿನಲ್ಲಿ ಇದೆಲ್ಲದಕ್ಕೂ ತಯಾರಾಗದ ಯಾರೇ ಈ ಮಳೆಕಾಡೊಳಗೆ ಕಾಲಿಟ್ಟರೂ ಜೀವನ ದುಸ್ತರ ಎಂದೆನಿಸಬಹುದು. ಪ್ರಕೃತಿಯು ಸೃಷ್ಟಿಯಲ್ಲಿ ಎಲ್ಲಾ ಗಮನವನ್ನು ತನ್ನತ್ತ ಬರಸೆಳೆದು, ಅತಿ ಹೆಚ್ಚು ಪ್ರಾಧಾನ್ಯತೆಯಿಂದಲೇ ನಡೆದ ರಚನೆ ಇದು ಎಂದು ಅನಿಸುವಂತೆ ಮಾಡಿ ಸೃಷ್ಟಿಯ ಸಂಕೀರ್ಣತೆಯನ್ನು ಈ ಮಳೆಕಾಡುಗಳು ಅಚ್ಚರಿಯ ಆಗರವಾಗಿಯೇ ಉಳಿಸಿವೆ.
ಮುಂದುವರೆಯುತ್ತದೆ…
ಲೇಖನ: ಸ್ಮಿತಾ ರಾವ್
ಶಿವಮೊಗ್ಗ ಜಿಲ್ಲೆ.
ಮೂಲತಃ ಮಲೆನಾಡಿನವಳಾದ ನಾನು, ವೃತ್ತಿಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಸಂಶೋಧಕಿ. ಭೌತಶಾಸ್ತ್ರದ ಕೋನದಿಂದ ಪ್ರಕೃತಿಯನ್ನು ಅರಿಯುವುದು ಒಂದೆಡೆಯಾದರೆ, ಇನ್ನೊಂದೆಡೆ ಸೃಷ್ಟಿಯ ಜೀವ ವೈವಿಧ್ಯತೆಯ ಅನಂತತೆಯನ್ನು, ಅದರಲ್ಲಿ ಕಂಡುಕೊಂಡ ತನ್ಮಯತೆಯನ್ನು ಅಭಿವ್ಯಕ್ತಪಡಿಸುವ ಬಯಕೆ ನನ್ನದು. ಅದನ್ನು ಬರಹದ, ಹಾಗೇ ಸೆರೆಹಿಡಿದ ಛಾಯಾಚಿತ್ರಗಳ ಮೂಲಕ ಇತರರನ್ನೂ ತಲುಪುವ ಸಣ್ಣ ಹಂಬಲವನ್ನು ಇಲ್ಲಿ ಕಾಣಬಹುದು.