ಹಸಿರು ಹಾದಿಯಲಿ… ಕಾಡಂಚಿನ ಅನುಭವ ಕಥನ
ಮುಂಜಾನೆ ಚಿಕ್ಕಬಳ್ಳಾಪುರಕ್ಕೆ ಬಸ್ ಹಿಡಿದು ಹೊರಟೆ. ಈ ಹಿಂದಿನ ದಿನಗಳಲ್ಲಿ ಶಿರಸಿ ಭಾಗದ ಅರಣ್ಯ ಪ್ರದೇಶಕ್ಕೆ ಹೋಗಬೇಕೆಂದು ದಿನಾಂಕ ನಿಗದಿ ಮಾಡಿ. ಬೇರೆ ಬೇರೆ ಕಾರಣದಿಂದ ರದ್ದಾಗುತ್ತಿದ್ದವು. ಕೊನೆಗೂ ಪ್ರಯತ್ನ ಮಾಡಿ ಕಾತೂರ್ ಅರಣ್ಯ ವಲಯ ಅರಣ್ಯಾಧಿಕಾರಿಯಾದ ವಿರೇಶ್ ರವರಿಗೆ ಕರೆ ಮಾಡಿ ಜನವರಿ 25 ಮತ್ತು 26 ರಂದು ನಿಗದಿ ಮಾಡಿಯೇ ಬಿಟ್ಟೆ. ಈಗ ಹೋಗುವುದು ಖಚಿತವಾಗಿತ್ತು. ನಾನೊಬ್ಬನೇನಾ? ಎಂಬ ಪ್ರಶ್ನೆ ಮೂಡಿತು. ಅಷ್ಟರಲ್ಲಿ ಪರಿಸರಾಸಕ್ತರಾದ ಜಲಜ, ಹರೀಶ್, ಮಂಜು ಆಲದಮರ, ವಿನಯ್, ಅಶ್ವಥ್ ಸರ್ ಕೂಡ ಬರುವುದಾಗಿ ನನಗೆ ಮಾಹಿತಿ ನೀಡಿದರು. ಜೊತೆಯಾಗಿ ಎಲ್ಲರೂ ಅಲೆಮಾರಿಗಳಾಗಿ ತಿರುಗಬಹುದೆಂದು ಸ್ವಲ್ಪ ಸಂತಸವಾಯಿತು.. ಅಂದಿನಿಂದ ಪ್ರತಿದಿನ ನಾವು ಏನು ಮಾಡಿದರೆ ಕಡಿಮೆ ಹಣದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಹೋಗಬಹುದೆಂದು ಲೆಕ್ಕ ಹಾಕುತ್ತಿದ್ದೆ…
ಬೆಂಗಳೂರಿನ ನಮ್ಮ ಸ್ನೇಹಿತರಾದ ಡಾ. ಲೋಕೇಶ್ ಜೀವಾಂಕುರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭೇಟಿಯಾದರು. ಪ್ರವಾಸದ ಯೋಜನೆಯ ಬಗ್ಗೆ ಚರ್ಚಿಸಿದೆವು. ಹೀಗೆ ಮಾತನಾಡುತ್ತಾ ಮಾತನಾಡುತ್ತಾ ನಮ್ಮ ಮಾತು ಗಿಡ ನೆಡುವ ಕಡೆ ವಾಲಿತು. ಸರ್ ನಮ್ಮೂರಿನ (ಚಳ್ಳಕೆರೆಯ ಹಳ್ಳಿಯೊಂದು) ಜನರಿಗೆ ಪರಿಸರದ ಬಗ್ಗೆ ಕಾಳಜಿನೇ ಇಲ್ಲ, ನಮ್ಮೂರಿನ ದೇವಸ್ಥಾನದ ಹತ್ತಿರ ಗಿಡಗಳನ್ನು ಹಾಕಲು ಹೋದೆ, ಅಲ್ಲಿನವರು ಹೇಳಿದ್ರು, ನೀನೇನ್ ಗಿಡ ಹಾಕ್ಬಿಟ್ಟು ಹೋಗ್ಬಿಡ್ತಿಯಾ, ನೀರ್ ಯಾರ್ ಹಾಕ್ತಾರೆ? ಅಂತಾರೆ. ನನಗೆ ಅವರ ಈ ಮಾತು ಕೇಳಿ ಬೇಸರವಾಯಿತು. ನಾನೇ ಪ್ರತಿವಾರ ಬೆಂಗಳೂರಿಂದ ಬಂದು ನೀರನ್ನು ಹಾಕುತ್ತೇನೆಂದರೂ ಅವರು ಗಿಡ ನೆಡಲು ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಷ್ಟರಲ್ಲಾಗಲೇ ಸೂರ್ಯನು ತನ್ನ ನಾಳೆಯ ದಿನಗಳಿಗೆ ತಯಾರಾಗುವಂತೆ ಸಾಗುತ್ತಿದ್ದ.. ಬಸ್ ನಿಲ್ದಾಣಕ್ಕೆ ಬಂದರೂ ನಮ್ಮ ಮಾತುಗಳು ಮುಗಿಯಲಿಲ್ಲ… ಕೊನೆಗೆ ನಾನು ಊರಿಗೆ ಬರಬೇಕಾದ್ದರಿಂದ ಮತ್ತೆ ಪ್ರವಾಸಕ್ಕೆ ಹೋಗುವ ದಿನ ಸಿಗೋಣ ಅಂತೇಳಿ ಹೊರಟೆ. ಅವರು ಮೆಟ್ರೋ ಕಡೆ ಹೊರಟರು.
ಪ್ರವಾಸದ ದಿನ ಹತ್ತಿರಾಗುತ್ತಿರಲು ಸಮಯವಿರದ ಕೆಲ ಗೆಳೆಯರು ಮತ್ತೊಮ್ಮೆ ಹೋಗೋಣವೇ? ಎಂದರು, ರೈಲ್ವೆ ಟಿಕೇಟು ಸಿಗಲಿಲ್ಲ. ತತ್ಕಾಲ್ ಟಿಕೇಟು ದುಬಾರಿ ಆಯಿತು. ಹೀಗೆ ಎಲ್ಲ ತೊಂದರೆಗಳನ್ನು ಮೀರಿ, ನಾವು ಹೊರಟ ಟ್ರೈನ್ ಶನಿವಾರ ಬೆಳಿಗ್ಗೆ ಐದೂ ಮೂವತ್ತಕ್ಕೆ ತಲುಪಬೇಕಿದ್ದದ್ದು ಆರೂವರೆಗೆ ಹುಬ್ಬಳ್ಳಿ ತಲುಪಿತು. ಅಲ್ಲಿಂದ ಇಳಿದು, ಆಟೋರಿಕ್ಷಾ ಹತ್ತಿ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣಕ್ಕೆ ಬಂದಿಳಿದೆವು. ಅಷ್ಟರಲ್ಲಾಗಲೇ ವೀರೇಶ್ ಸರ್ ಕರೆ ಮಾಡಿ ಮುಂಡುಗೋಡು ಬಸ್ ಹತ್ತಿ ವಡಗಟ್ಟ ಚೆಕ್ ಪೋಸ್ಟ್ ಹತ್ತಿರ ಇಳಿಯುವಂತೆ ಸೂಚಿಸಿದರು. ಬಸ್ ನಿಲ್ದಾಣದಿಂದ ಹೊರ ಬರುತ್ತಿದ್ದ ಬಸ್ ನೋಡಿದೆ. ಮುಂಡಗೋಡು ಅಂತ ಬೋರ್ಡ್ ಹಾಕಿದ್ರು. ಆದರೂ ಇಳಿಯುವ ಸ್ಥಳ ಕೇಳಿ ಬಸ್ ಹತ್ತಿದ್ವಿ. ಒಂದು ತಾಸು ಪ್ರಯಾಣದೊಳಗೆ ವಡಗಟ್ಟ ಚೆಕ್ ಪೋಸ್ಟ್ ಹತ್ತಿರ ನಮ್ಮನ್ನು ಧುಮುಕಿಸಿದರು.
ಸ್ವಲ್ಪ ಸಮಯದಲ್ಲಿ ನಾವಿದ್ದಲ್ಲಿಗೇ ಒಬ್ಬ ವ್ಯಕ್ತಿ ಬೈಕ್ ನಲ್ಲಿ ಬಂದು ತಲೆಗೆ ಹಾಕಿದ್ದ ಹೆಲ್ಮೆಟ್ ತೆಗೆದರು. ನೋಡಿದರೆ ಅವರು ನಮ್ಮ ಪಕ್ಷಿ ತಜ್ಞ ಮಹೇಶಣ್ಣ. ಹಣೆಮೇಲೆ ವಿಭೂತಿ ಪಟ್ಟೆ ಹೊಡೆದಿದ್ದರು. ಹೆಲ್ಮೆಟ್ ಹಾಕಿಕೊಂಡು ಬಂದಿದ್ದರಿಂದ ಅವರ ಹಣೆ ಹಳೆಯ ಶಾಸನಗಳ ರೀತಿ ಅಚ್ಚೊಡೆದಿತ್ತು. ಹಿಂದಿನ ವರ್ಷ ನೋಡಿದ್ದು ಇವರನ್ನು. ಬಹಳ ಸಂತೋಷವಾಗಿ ಮುಗುಳ್ನಕ್ಕು ಕೈಕುಲುಕಿದೆವು. ಮಹೇಶ್ ರವರು ತಾವು ತಂದಿದ್ದ ಬೈನಾಕ್ಯುಲಾರ್ ಹೊರತೆಗೆದು ಪಕ್ಕದಲ್ಲಿದ್ದ ಕೊಳದ ಕಡೆ ಕೈ ತೋರುತ್ತಾ, ನೋಡಿ Spot billed duck (ಚುಕ್ಕೆ ಕೂಕ್ಕಿನ ಬಾತು) ಎಂದು ತೋರಿಸಿದರು. ಆಗಲೇ intermediate egret (ಬೆಳ್ಳಕ್ಕಿ) ಮತ್ತು ಬಾಯ್ಕಳಕ ಕೊಕ್ಕರೆ ಹಾರಿ ಬಂದವು. ಅವುಗಳ ಚಲನವಲನಗಳನ್ನು ಕಣ್ತುಂಬಿಕೊಂಡೆವು. ನೋಡ ನೋಡುತ್ತಿದ್ದಂತೆ ಪೊದೆಯಿಂದ ಹಂದಿಗಳ ಸಾಲು, ಅವುಗಳ ಹಿಂದೆ ಅವುಗಳ ಮರಿಗಳ ಸಾಲು ಹೊರಬಂದವು… ನಾವು ಹಿಂದೆಂದೂ ಅಷ್ಟು ಹಂದಿಗಳನ್ನು ಒಂದೇ ಕಡೆ ಇಷ್ಟು ಹತ್ತಿರದಿಂದ ನೋಡಿರಲಿಲ್ಲ. ಬೈನಾಕ್ಯುಲರ್ ನ ಬೆಲ್ಟನ್ನು ಕೊರಳಿಗೆ ಹಾಕಿಕೊಂಡು ಹಂದಿಗಳ ರಂಪಾಟವನ್ನು ನೋಡಿ ಮೊದಲ ಪ್ರಾಣಿ ದರ್ಶನವನ್ನೂ ಮಾಡಿದ್ದಾಯಿತು. ಅಷ್ಟರೊಳಗೆ ವೀರೇಶ್ ಸರ್ ಕೂಡಾ ಬೈಕ್ ನಲ್ಲಿ ಬಂದು ನಮ್ಮೊಂದಿಗೆ ಜೊತೆಯಾದರು. ಅವರಿಗೂ ಸಹ ಹಂದಿಗಳ ದರ್ಶನವನ್ನು ಮಾಡಿಸಿದೆವು. ತಕ್ಷಣವೇ ಮಹೇಶಣ್ಣ ಒಂದು ಪಕ್ಷಿ ಶಬ್ದ ಕೇಳಿ ನಮ್ ಕಡೆ ಕೈ ಬೀಸಿ, ಬನ್ನಿ ಬನ್ನಿ ಇಲ್ಲಿ ಎನ್ನುತ್ತ ನಮ್ಮ ಪಕ್ಕದಲ್ಲೇ ಇದ್ದ ಮರದಲ್ಲಿ Racket tailed drongo (ಭೀಮರಾಜ) ಪಕ್ಷಿಯನ್ನು ತೋರಿಸಿದರು. ಅದನ್ನು ಬಹು ಕುತೂಹಲದಿಂದ ಬೈನಾಕ್ಯುಲರ್ ನಿಂದ ಕಣ್ಣಿಗೆ ಮುತ್ತಿಕ್ಕುವಂತೆ ಅಪ್ಪಿಕೊಂಡು ನೋಡಲು ಪ್ರಾರಂಭಿಸಿದೆವು. ಅಷ್ಟರಲ್ಲಿ ಅದೇ ಮರದಲ್ಲಿ ಕೆಂದಳಿಲು ಮರದಿಂದ ಮರಕ್ಕೆ ಜಿಗಿಯುತ್ತಿತ್ತು. ಅದು ಮರದಿಂದ ಮರಕ್ಕೆ ಮಾಡುತ್ತಿದ್ದ ಜಂಪಿಂಗ್ ನಿಂದಾಗಿ ಹೆಚ್ಚು ಹೊತ್ತು ನೋಡಲಾಗಲಿಲ್ಲ. ಇನ್ನೂ ಸ್ವಲ್ಪ ಅದರ ಜಂಪಿಂಗ್ ನೋಡಲು ಆಸೆ ಇದ್ದರೂ ಅದು ಬೇಗ ಮರೆಯಾಗಿ ಹೋಗಿತ್ತು. ಅಷ್ಟರಲ್ಲಿ ವೀರೇಶ್ ಸ್ನೇಹಿತರಾದ ರುಸ್ತುಮ್ ರವರು ಬೈಕ್ ನಲ್ಲಿ ಬಂದರು. ಎಲ್ಲರನ್ನೂ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಂಡು, ಬೈಕ್ ಹತ್ತಿಕೊಂಡು ಅತ್ತಿವೇರಿ ಪಕ್ಷಿಧಾಮದ ಕಡೆ ಪಯಣ ಮುಂದುವರೆಸಲಾಯಿತು.
ಹೋಗುವ ದಾರಿಯಲ್ಲಿ ಕೆಂಡದಂತೆ ಹೊಳೆಯುವ ಮುತ್ತುಗ ಮರದ ಹೂ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದಂತೆ ಭಾಸವಾಗುತ್ತಿತ್ತು. ದಾರಿ ಪಕ್ಕದ ಕುರುಚಲು ಕಾಡಿನಲ್ಲಿ ದಾರಿ ತಪ್ಪಿದಂತೆ ನರಿ ಹೋಗುತ್ತಿದ್ದುದು ಮಂಜು ಅಮಲಗುಂದ, ಮಹೇಶ್ ರವರ ಕಣ್ಣಿಗೆಬಿತ್ತು. ನವಿಲು ಸಹ ರೆಕ್ಕೆ ಬಿಚ್ಚಿದ್ದನ್ನು ನೋಡಿ ನಾವು ಖುಷಿಪಟ್ಟೆವು ಎಂದು ಸಂತಸ ವ್ಯಕ್ತಪಡಿಸಿದರು. ಅದೇ ದಾರಿಯಲ್ಲಿ ಹೋಗುವಾಗ Brahminy Starling, Plum Headed Parakeet (ಕೆಂದಲೆ ಗಿಳಿ), ಮೈನಾ, ಕಾಜಾಣ ಪಕ್ಷಿಗಳನ್ನು ನೋಡುತ್ತಾ ಮುಂದೆ ಸಾಗಿದೆವು. ಕೆಲವೇ ನಿಮಿಷಗಳಲ್ಲಿ ಅತ್ತಿವೇರಿ ಪಕ್ಷಿಧಾಮವನ್ನ ತಲುಪಿದೆವು. ಪಕ್ಷಿಧಾಮದಲ್ಲಿ ನಮಗೆ ತಿಂಡಿ ಮಾಡುವಂತೆ ವಿರೇಶ್ ಸರ್ ರವರು ಹೇಳಿದರು. ನಮ್ಮೆಲ್ಲಾ ಬ್ಯಾಗುಗಳನ್ನು ಅಲ್ಲೇ ಇಟ್ಟು, ಪಕ್ಷಿ ವೀಕ್ಷಣೆಗೆ ಕೆರೆಯ ಏರಿಯ ಮೇಲೆ ನಡೆಯುತ್ತಾ ಮಹೇಶ್ ಸರ್ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೆವು.
ಮಹೇಶ್ ರವರನ್ನು ಪಕ್ಷಿಪ್ರಪಂಚದ ಬ್ರಹ್ಮಾಂಡವೆಂದೇ ಹೇಳಬಹುದು. ಒಂದು ಪಕ್ಷಿ ನೋಡಿದೊಡನೆ ಅದರ ಇತಿಹಾಸ, ಗುಣಲಕ್ಷಣಗಳ, ದಿನನಿತ್ಯದ ಚಟುವಟಿಕೆಗಳಬಗ್ಗೆ ಕೂಲಂಕುಶವಾಗಿ ಹೇಳತೊಡಗುತ್ತಿದ್ದರು. ಬೂದು ಕಾಜಾಣ, ಮಧುರಕಂಠ, ಕೆಮ್ಮೀಸೆ ಪೀಕಳಾರ, Collored Dove, River Turn (ನದಿ ರೀವ), ಜೊಂಡು ಉಲಿಯಕ್ಕಿ, ಕವಲು ತೋಕೆ, ಸಣ್ಣ ಕಳ್ಳಿಪೀರ, ಸ್ವರ್ಗದ ಪಕ್ಷಿ ನೋಡುತ್ತಾ ಮುಂದೆ ಕೆರೆಯ ಮೇಲೆ ಹೆಜ್ಜೆ ಹಾಕುತ್ತಿದ್ದೆವು. ಕೆರೆಯ ಮಧ್ಯದಲ್ಲಿ ಜಾಲಿಗಿಡದ ಮೇಲೆ ಹೊನ್ನಕ್ಕಿ, ನೀರು ಕಾಗೆ, Spoon Bills ಗಳು ನೀರಲ್ಲಿ ಮುಳುಗಿ ಬಂದು ರೆಕ್ಕೆ ಬಿಚ್ಚಿಕೊಂಡು ಟೊಂಗೆಯ ಮೇಲೆ ಕುಳಿತಿದ್ದವು. ವಿನಯ್ ಕೆಲ ಪಕ್ಷಿಗಳನ್ನು ಗುರುತಿಸುತ್ತಿದ್ದರು. ನಾನು ಮತ್ತು ಮಂಜು, ಗುರುತಿಸಲು ಪ್ರಯತ್ನ ಮಾಡುತ್ತಿದ್ದೆವು. ಹಾಗೆಯೇ ಪಕ್ಷಿಗಳನ್ನು ವೀಕ್ಷಿಸುತ್ತಾ ಮುಂದೆ ಸಾಗಿದೆವು. ಕೆಲ ಸಮಯದ ನಂತರ ವಾಪಸ್ ಬಂದು ಟೀ ಕುಡಿದು ಕೆರೆಯೊಳಗಿನ ಕಬ್ಬಿಣದ ಸೇತುವೆಯ ಕಡೆ ನಡೆದೆವು.
ಉದ್ಯಾನವನದ ಸಿಮೆಂಟ್ ದಾರಿಯಲ್ಲಿ ಸಾಗುತ್ತಿದ್ದಾಗ ಸ್ವರ್ಗದ ಪಕ್ಷಿ ಮಹೇಶಣ್ಣನ ಕಣ್ಣಿಗೆ ಬಿತ್ತು, ನೀವೆಲ್ಲಾ ಇಂದು ತುಂಬಾ ಅದೃಷ್ಟ ಮಾಡಿದ್ದೀರಾ ಎಂದು, ಆ ಪಕ್ಷಿಯನ್ನು ತೋರಿಸಿದರು. ಅದರ ಬಾಲವು ಉದ್ದದ ಎರಡು ರೆಕ್ಕೆಯಿಂದ ಕೂಡಿದ್ದು, ಈ ಬಾಲದ ರೆಕ್ಕೆಗಳಿಗೆ ತಲೆಯ ಪೇಟಕ್ಕಿಡಲು ಬಹಳ ಬೇಡಿಕೆಯಿದೆ, ಆ ಬಾಲ ಇರುವುದು ಗಂಡು ಹಕ್ಕಿಯಾಗಿರುತ್ತದೆ. ಅದು ಪ್ರಾಯಕ್ಕೆ ಬರುವಾಗ ಬಂಗಾರದ ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ, ಆಗ ಗಂಡು-ಹೆಣ್ಣು ಎರಡೂ ಪಕ್ಷಿಗಳು ಸೇರಿ ಸಂಸಾರ ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ ಎಂಬ ಮಾಹಿತಿಯನ್ನು ಹೇಳುತ್ತಿರುವಾಗಲೇ, ಮಂಜು ಅಮಲಗುಂದ ಮಾತಿನ ಬಾಣವನ್ನು ಮಹೇಶ್ ರವರ ಕಡೆ ಬಿಡುತ್ತಾ, “ಸರ್ ಪಕ್ಷಿಗಳಲ್ಲಿ ಇಂಟರ್ ಕ್ಯಾಸ್ಟ್ ಮದುವೆ ಇದೆಯಾ” ಎಂದು ಕೇಳಿದ. ಇವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ ತಲೆ ಅಲ್ಲಾಡಿಸುತ್ತಾ ಹಾಗೆಲ್ಲಾ ಇಲ್ಲವೆಂದರು. ಹೀಗೆ ಹಾಸ್ಯಮಯ ಪ್ರಶ್ನೆಗಳಿಗೆ ನಗುತ್ತಾ ಕೆರೆಯ ಮಧ್ಯೆ ಇರುವ ಸೇತುವೆ ಕಡೆ ನಡೆದೆವು. ಅಲ್ಲಿ ಹೊನ್ನಕ್ಕಿ ತನ್ನ ಬಾಲದಲ್ಲಿ ಎರಡು ತಂತಿಗಳನ್ನು ಸಿಕ್ಕಿಸಿಕೊಂಡಂತೆ ಕಾಣಿಸಿತು. ಅದರ ಬಗ್ಗೆ ತಿಳಿದುಕೊಳ್ಳುತ್ತಾ, ಅವು ಆ ಸೇತುವೆಯ ಕೆಳಗೆ ಮಣ್ಣಿನಿಂದ ಗೂಡುಕಟ್ಟಿ ವಾಸ ಮಾಡುತ್ತಿರುತ್ತವೆ. ತಕ್ಷಣವೇ ವಿನಯ್ ಮಹೇಶ್ ರವರನ್ನು ಕೇಳುತ್ತಾ “ಪಕ್ಷಿಗಳು ವಲಸೆ ಬರುವಾಗ ಅದೇ ಜಾಗಕ್ಕೆ ಹೇಗೆ ಮುಂದಿನ ವರ್ಷ ಬರುತ್ತವೆ?” ಎಂದು ಪ್ರಶ್ನಿಸಿದರು.
ಪಕ್ಷಿಗಳಿಗೆ ಮನುಷ್ಯರಷ್ಟು ನೆನಪಿನ ಶಕ್ತಿ ಇರುವುದಿಲ್ಲ. ಆದರೆ ಅವುಗಳ ಜೀನ್ ನಲ್ಲೇ ಆ ಸ್ಥಳದ ಬಗ್ಗೆ ತಿಳಿದಿರುತ್ತದೆ. ಅವುಗಳು ವಲಸೆ ಬಂದು ಮೊಟ್ಟೆ ಇಟ್ಟು ಮರಿಮಾಡಿ ವಾಪಸ್ ಹೋಗಿ ಮುಂದಿನ ವರ್ಷ ಮತ್ತೆ ಅದೇ ಜಾಗಕ್ಕೆ ಬರುತ್ತವೆ ಎಂದು ಹೇಳಿದರು. ಈ ವರ್ಷ ವಲಸೆ ಪಕ್ಷಿಗಳು ಕಡಿಮೆ ಬಂದಿವೆ, ಬೇರೆ ದೇಶದ ಪಕ್ಷಿಗಳು ತಮ್ಮ ಪ್ರದೇಶದಲ್ಲಿನ ಚಳಿಗಾಲದಿಂದ ಬಚಾವ್ ಆಗಲು ಈ ಕಡೆ ಬರುತ್ತವೆಂದು ಹೇಳಿದರು. ವೀರೇಶ್ ಸರ್ ಅಲ್ಲಿನ ಸಿಬ್ಬಂದಿಗೆ ಕರೆ ಮಾಡಿ ಕೆರೆಯೊಳಗೆ ಬೋಟ್ ನಲ್ಲಿ ವಿಹರಿಸಲು ಚಾವಿ ತರುವಂತೆ ಹೇಳಿದರು. ಕೂಡಲೇ ಅವರು ಬಂದು ನಾಲ್ಕು ಜನರನ್ನು ಕೂರಿಸಿಕೊಂಡು ಕೆರೆಯೊಳಗಿನ ಪ್ರಪಂಚದ ರುಚಿ ತೋರಿಸಿದರು. ಕೆರೆಯ ಮಧ್ಯದಲ್ಲಿ ಗಿಡದ ಮೇಲೆ ನೀರು ಕಾಗೆ, Spoon bill ಗಳನ್ನು ನೋಡಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ಅಲ್ಲಿನ ಮುಳ್ಳಿನ ಪೊದೆಯೊಳಗೆ ಕೆಲ ಪಕ್ಷಿಗಳು ಸತ್ತು ಬಿದ್ದಿದ್ದು ನೋಡಿ ಬೇಸರವಾಯಿತು. ಅವುಗಳ ಪಕ್ಕದಲ್ಲೇ ಒಂದು ಮರದಲ್ಲಿದ್ದ ಹದ್ದು ನಾವು ಹೋಗುತ್ತಿದ್ದಂತೆಯೆ ಮೇಲೆ ಹಾರಿ ಒಂದು ಸುತ್ತು ಹೊಡೆದು ಬಂದು ಅಲ್ಲಿಯೇ ಕುಳಿತಿತು. ಅದನ್ನು ನೋಡುತ್ತಲೇ ಬೋಟ್ ಪ್ರಯಾಣ ಮುಗಿಸಿ ಹೊರ ಬಂದು ತಿಂಡಿಯನ್ನು ತಿಂದು, ಚಹಾ ಕುಡಿದು ಮುಂಡಗೋಡು ಕಡೆ ನಮ್ಮ ಪಯಣ ಬೆಳೆಸಿದೆವು. ಇಷ್ಟೊತ್ತಿಗೆ ಮಹೇಶ್ ರವರ ಸ್ನೇಹ ಹತ್ತಾರು ವರ್ಷಗಳಿದ್ದಂತೆ ಭಾಸವಾಯಿತು. ಅವರ ನಗು, ಮುಗ್ದತೆ, ಸೂಕ್ಷ್ಮತೆ, ವಿಚಾರಶೀಲತೆಗೆ, ಶ್ರದ್ಧೇ ಮತ್ತು ತಾಳ್ಮೆಗೆ ಯಾವ ಪ್ರಶಸ್ತಿಯನ್ನು ಕೊಟ್ಟರೂ ಸಾಲದು. ಒಟ್ಟಾರೆ ಪಕ್ಷಿಗಳ ಪ್ರಪಂಚದಿಂದ ನಾವುಗಳು ಕಲಿಯಬೇಕಿರುವುದು ಸಾಕಷ್ಟಿದೆ ಎಂಬುದು ಅರ್ಥವಾಯಿತು.
ಮುಂದುವರೆಯುವುದು . . . . .
ಚಿತ್ರ-ಲೇಖನ: ಮಂಜುನಾಥ್ ಅಮಲಗೊಂದಿ
ತುಮಕೂರು ಜಿಲ್ಲೆ
ಪರಿಸರ ಸಮಾಜಕಾರ್ಯಕರ್ತರು.
ಪರಿಸರ, ವನ್ಯಜೀವಿ ಮತ್ತು ಸುಸ್ಥಿರ ಕೃಷಿಯ ಬಗ್ಗೆ ಬರೆಯುವ ಲೇಖಕರು.
ಅಧ್ಯಕ್ಷರು, ಚಿಗುರು ಯುವಜನ ಸಂಘ, ಅಮಲಗೊಂದಿ, ಸಿರಾ ತಾ.