ಕಸ್ತೂರಿ ಚಿಟ್ಟೆ ಕೋಶದಿಂದ ಹೊರ ಬಂದ ಕಥನ

ಕಸ್ತೂರಿ ಚಿಟ್ಟೆ ಕೋಶದಿಂದ ಹೊರ ಬಂದ ಕಥನ

ಚೈತ್ರನ ಆಗಮನದಿಂದ ಪ್ರಕೃತಿಯಲ್ಲಿ ಗಿಡ-ಮರಗಳು ಚಿಗುರುತ್ತಿದ್ದವು. ಕಂತೀಸ್ವಾಮಿ ಮಠದ ಆವರಣದ ತೋಟದಲ್ಲಿರುವ ಕರಿಬೇವಿನ ಗಿಡವು ಇದಕ್ಕೆ ಹೊರತಾಗಿರಲಿಲ್ಲ. ಚಿಕ್ಕ ರೆಂಬೆಯ ಚಿಗುರೆಲೆ ಎಸಳಿನಲ್ಲಿ ಎಲೆಯ ಬಣ್ಣವನ್ನೇ ಹೋಲುವ ಹಸಿರಿನ ಕಂಬಳಿಹುಳುವು ಚಿಗುರೆಲೆಗಳನ್ನು ಬಕಾಸುರನಂತೆ ಭಕ್ಷಿಸುತ್ತಿತ್ತು. ಮನೆಗೆ ಬಂದು ಕ್ಯಾಮರಾವನ್ನು ತೆಗೆದುಕೊಂಡು ಹೋಗಿ ಅದರ ಫೋಟೊ ಕ್ಲಿಕ್ಕಿಸಿಕೊಂಡೆ. ಆ ಕಂಬಳಿಹುಳುವು ಕಸ್ತೂರಿ ಚಿಟ್ಟೆಯದಾಗಿತ್ತು. ಹಿಂದೆ ಕಸ್ತೂರಿ ಚಿಟ್ಟೆಗಳು ಈ ಮಠದ ಆವರಣದಲ್ಲಿ ಮಿಲನಗೊಂಡಿರುವುದನ್ನು ಕಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದೆ.

ದಿನವೂ ಮಠದ ಆವರಣದಲ್ಲಿರುವ ಕರಿಬೇವಿನ ಗಿಡದಲ್ಲಿಯ ಕಂಬಳಿಹುಳದ ಬೆಳವಣಿಗೆಯನ್ನು ವೀಕ್ಷಿಸಿ, ಫೋಟೊ ಕ್ಲಿಕ್ಕಿಸಿಕೊಂಡು ದಾಖಲಿಸತೊಡಗಿದೆ. ದಿನದಿಂದ ದಿನಕ್ಕೆ ಅದು ಬೆಳೆಯುತ್ತಾ ದೊಡ್ಡದಾಗ ತೊಡಗಿತು. ಅದು ಹಚ್ಚಹಸಿರು ಬಣ್ಣದ್ದಾಗಿದ್ದು ದೇಹದ ನಾಲ್ಕನೇ ಖಂಡದ ಮೇಲ್ಭಾಗದಲ್ಲಿ ಸುಂದರವಾದ ಅಡ್ಡಪಟ್ಟಿಗಳಿದ್ದು ಈ ಪಟ್ಟೆಗಳ ತುದಿಯಲ್ಲಿ ಕಣ್ಣಿನಂತಹ ರಚನೆಯಿದೆ. ಐದನೇ ಖಂಡದಲ್ಲಿ ಬಿಳಿ ಮಚ್ಚೆಗಳ ಕಂದುಪಟ್ಟೆಯು ಎರಡೂ ಬದಿಯಲ್ಲಿ ಸೇರಿಕೊಂಡಿವೆ. ಎಂಟು ಹಾಗೂ ಒಂಬತ್ತನೇ ಖಂಡಗಳ ಎರಡು ಬದಿಯಲ್ಲಿ ಕಂದು-ಬಿಳಿ ಬಣ್ಣದ ಮಚ್ಚೆಯಿದೆ. ಹತ್ತನೆಯ ಖಂಡದ ಎರಡು ಮಗ್ಗಲಿನಲ್ಲಿ ದೊಡ್ಡದಾದ ಬಿಳಿ-ಕಂದು ಮಚ್ಚೆಯಿದೆ. ಆರನೆಯ ಖಂಡದಿಂದ ಕೊನೆಯ ಖಂಡದ ಎರಡು ಮಗ್ಗಲಿನಲ್ಲಿ ಬಿಳಿ ಪಟ್ಟೆಯಿದೆ. ಈ ಕಂಬಳಿಹುಳು ಸುಮಾರು ನಲವತ್ತು ಎಂ. ಎಂ. ಉದ್ದವಾಗಿದೆ. ದಿನವು ನನ್ನ ವೀಕ್ಷಣೆ ಮುಂದುವರೆದಿತ್ತು.

ಎಂದಿನಂತೆ ಆ ದಿನ ಮುಂಜಾನೆ ಕರಿಬೇವಿನ ಗಿಡದ ಸನಿಹಕ್ಕೆ ಹೋದಾಗ ನನಗೆ ಅಚ್ಚರಿ ಕಾಯ್ದಿತ್ತು. ಕಂಬಳಿಹುಳುವು ಸೂಕ್ಷ್ಮ ರೇಷ್ಮೆಯಂತಹ ದಾರದಿಂದ ತನ್ನ ಎದೆಯಿಂದ ರೆಂಬೆಯ ಎಸಳಿಗೆ ತನ್ನನ್ನು ಬಂಧಿಯಾಗಿಸಿಕೊಂಡು ನಿಶ್ಚಲವಾಗಿ ತಲೆ ಕೆಳಗಾಗಿ ನೇತಾಡುತ್ತಾ ಕುಳಿತಿತ್ತು. ಹೌದು ಅದು ಕೋಶಾವಸ್ಥೆಗೆ ಮಾರ್ಪಡುತ್ತಿತ್ತು, ನೈಸರ್ಗಿಕ ತಪಸ್ಸಿಗೆ ಸನ್ನದ್ಧವಾಗಿದ್ದು ಅದರ ರೂಪಾಂತರ ಧ್ಯಾನಕ್ಕೆ ಧಕ್ಕೆಯನ್ನು ತರದೇ ಎರಡು ಫೋಟೋ ಕ್ಲಿಕ್ಕಿಸಿಕೊಂಡು ಮನೆಗೆ ಮರಳಿದೆ. ಮರುದಿನ ಬೆಳಿಗ್ಗೆ ಹೋದಾಗ ಲವಲವಿಕೆಯಿಂದ ಗಿಡದ ತುಂಬೆಲ್ಲಾ ಓಡಾಡಿಕೊಂಡಿದ್ದ ಕಂಬಳಿಹುಳು ಕೋಶವಾಗಿ ಮಾರ್ಪಟ್ಟಿತ್ತು. ಈ ಕೋಶವು ಹಸಿರು ಬಣ್ಣದ್ದಿದ್ದು ಮಧ್ಯದಲ್ಲಿ ಹಳದಿ ಮಿಶ್ರಿತ ಹಸಿರು. ತಲೆಯ ಮುಂಭಾಗದಲ್ಲಿ ಎರಡು ಮೊನಚಾದಂತಿರುವ ರಚನೆಗಳಿವೆ. ಎದೆ ಭಾಗವು ಸ್ಪಲ್ಪ ಉಬ್ಬಿಕೊಂಡಿದೆ. ಈ ಕೋಶವು ಸುಮಾರು ಮೂವತ್ತೊಂದು ಎಂ.ಎಂ. ಉದ್ದವಾಗಿದೆ. ಕೋಶದಲ್ಲಿ ಚಿಟ್ಟೆಯ ರೂಪಾಂತರ ಬೆಳವಣಿಗೆ ನಡೆಯುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ, ಕೋಶದ ಒಳಗೆ ಕಣ್ಣು, ರೆಕ್ಕೆ, ಗ್ರಹಣಾಂಗ, ಕಾಲುಗಳು ಮೂಡತೊಡಗುತ್ತವೆ. ಪ್ರೌಢಚಿಟ್ಟೆಯಾಗಿ ಕೋಶದಿಂದ ಹೊರಬರಲು ಸರಿ ಸುಮಾರು ಎಂಟರಿಂದ ದಿನಗಳು ಬೇಕಾಗುತ್ತದೆ. ಈ ನಡುವೆ ಒಂದುದಿನ ಸಾಯಂಕಾಲ ಜೋರಾಗಿ ಮಳೆ ಬಂದಾಗ ಎಲ್ಲಿ ಕೋಶವು ಬಿದ್ದು ಹೋಗುತ್ತೊ ಎಂಬ ಆತಂಕ ಕಾಡಿತು. ಮಳೆ ಬಿಟ್ಟ ತಕ್ಷಣ ಹೋಗಿ ಟಾರ್ಚ್ ಹಿಡಿದು ಮಠದ ಆವರಣದಲ್ಲಿರುವ ಕರಿಬೇವಿನ ರೆಂಬೆಗೆ ನೇತಾಡುತ್ತಿದ್ದ ಕೋಶವನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿಯಾಯಿತು. ನಾನು ದಿನಬಿಟ್ಟು ದಿನ ಆ ಕೋಶವನ್ನು ಹೋಗಿ ನೋಡಿ ಬರುವುದನ್ನು ಕಾಯಕವನ್ನಾಗಿಸಿಕೊಂಡೆ.

ಎಂಟನೆಯ ದಿನ ಮುಂಜಾನೆ ಏಳುಗಂಟೆಗೆ ಕ್ಯಾಮರಾ ಹಿಡಿದು ಕಂತೀಸ್ವಾಮಿ ಮಠದ ಆವರಣದ ಕೋಶವಿದ್ದ ಕರಿಬೇವಿನ ಎಸಳನ್ನು ನೋಡಿದರೆ ಆಗಲೆ ಪ್ರೌಢ ಚಿಟ್ಟೆಯು ಕೋಶದಿಂದ ಹೊರ ಬಂದು ಕೋಶಬಿಂಬ ಹಾಗೂ ಎಲೆಯನ್ನು ಕಾಲಿನಿಂದ ಹಿಡಿದು ಜೋತಾಡುತ್ತಾ ಕುಳಿತಿತ್ತು. ನವಜಾತ ಪ್ರೌಢ ಚಿಟ್ಟೆಯು ಗಂಡು ಕಸ್ತೂರಿ ಚಿಟ್ಟೆಯಾಗಿತ್ತು. ಕಸ್ತೂರಿ ಚಿಟ್ಟೆಯನ್ನು ಆಂಗ್ಲಭಾಷೆಯಲ್ಲಿ ಕಾಮನ್ ಮಾರ್ಮೊನ್ (Common Mormon) ಎಂದು ಕರೆದು, ವೈಜ್ಞಾನಿಕವಾಗಿ ಪ್ಯಾಪಿಲಿಯೊ ಪಾಲಿಟ್ಸ್ (Papilio polytes) ಎಂದು ಹೆಸರಿಸಿ, ಸಂದಿಪದಿಗಳ ಕೀಟ (Insecta) ವರ್ಗದ, ಲೆಪಿಡೋಪ್ಟೆರಾ (Lepidoptera) ಗಣದ, ಬಾಲದ ಚಿಟ್ಟೆಗಳ (Swallow tail Butterflies) ಪ್ಯಾಪಿಲಿಯಾನಿಡೇ (Papilionidae) ಕುಟುಂಬಕ್ಕೆ ಸೇರಿಸಲಾಗಿದೆ.

ಸುಮಾರು ತೊಂಭತ್ತರಿಂದ ನೂರು ಮಿ.ಮೀಟರ್ ರೆಕ್ಕೆಗಳ ಹರವು ಹೊಂದಿರುವ ಮಧ್ಯಮ ಗಾತ್ರದ ಕಪ್ಪಾದ ಚಿಟ್ಟೆ. ಮುಂದಿನ ಹಾಗೂ ಹಿಂದಿನ ರೆಕ್ಕೆಗಳು ಮತ್ತು ದೇಹಕೋಶವು ಕಪ್ಪಾಗಿದೆ. ಮುಂದಿನ ರೆಕ್ಕೆಗಳ ಅಂಚಿನಲ್ಲಿ ಬಿಳಿ ಮಚ್ಚೆಗಳಿವೆ. ಹಿಂದಿನ ರೆಕ್ಕೆಗಳ ಮುಂಭಾಗದ ತಳದ ಹೊರಭಾಗದಲ್ಲಿ ಬಿಳಿ ಮಚ್ಚೆಗಳ ಪಟ್ಟಿಯಿದೆ. ಹಿಂದಿನ ರೆಕ್ಕೆಗಳ ಮೇಲಿನ ಅಂಚಿನ ಒಳಭಾಗದಲ್ಲಿ ಸಣ್ಣ ಕೆಂಪು ಮಚ್ಚೆಗಳಿರುವ ಸಾಲಿದೆ ಮತ್ತು ಅಂಚಿನಲ್ಲಿ ಅರ್ಧ ಚಂದ್ರಾಕೃತಿಯ ಬಿಳಿ ಮಚ್ಚೆಗಳು ಮತ್ತು ಬಾಲವಿದೆ. ಹಗಲೆಲ್ಲಾ ಚುರುಕಾಗಿದ್ದು ನೆಲಮಟ್ಟದಿಂದ ಸ್ವಲ್ಪ ಎತ್ತರದಲ್ಲಿ ಮಧ್ಯಮ ವೇಗದಲ್ಲಿ ಹಾರಾಡುತ್ತಿರುತ್ತವೆ. ಹೂವಿನಿಂದ ಮಕರಂದ ಹೀರುವಾಗ ರೆಕ್ಕೆಗಳನ್ನು ಬಡಿಯುತ್ತಿರುತ್ತವೆ. ಮುಂಜಾನೆ ಹಾಗೂ ಸಂಜೆ ರೆಕ್ಕೆಗಳನ್ನು ಅಗಲಿಸಿಕೊಂಡು ಗಿಡಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತವೆ. ಕುರುಚಲು ಕಾಡು, ಎಲೆ ಉದುರಿಸುವ ಕಾಡು, ನಿತ್ಯ ಹರಿದ್ವರ್ಣ ಕಾಡು, ಕೃಷಿ ಭೂಮಿ, ತೋಟಗಾರಿಕೆ ಪ್ರದೇಶಗಳು ಇವುಗಳ ಆವಾಸ ತಾಣಗಳಾಗಿವೆ. ಕರಿಬೇವು, ಬಿಲ್ವ ಪತ್ರೆ, ಮಾದಳ, ನಿಂಬೆ, ಲಿಂಬೆ ಹಾಗೂ ಕಾಡು ಕರಿಬೇವು ಗಿಡಗಳು ಕಸ್ತೂರಿ ಚಿಟ್ಟೆಯ ಕಂಬಳಿಹುಳದ ಆಹಾರ ಸಸ್ಯಗಳು.

ಸಮಯವು ಜಾರಿದಂತೆ ರೆಕ್ಕೆಗಳ ಒದ್ದೆಯು ಒಣಗಿದಾಗ ನಿಧಾನವಾಗಿ ಕಸ್ತೂರಿ ಚಿಟ್ಟೆಯು ಎಲೆಯ ಮೇಲ್ಭಾಗಕ್ಕೆ ಬಂದು ಹಾರುತ್ತ ಹತ್ತಿರದಲ್ಲಿದ್ದ ಕೊಮ್ಮೆ ಗಿಡದ ಮೇಲೆ ಕುಳಿತು ವಿಶ್ರಾಂತಿ ಪಡೆದು ಮತ್ತೆ ಹಾರುತ್ತಾ ತೋಟದ ಗಿಡಗಳಲ್ಲಿ ಮರೆಯಾಗಿತ್ತು. ಇನ್ನೂ ಮುಂದೆ, ಅಡುಗೆಗೆ ಒಗ್ಗರಣೆ ಹಾಕುವಾಗ ಕರಿಬೇವಿನ ಎಲೆಯಲ್ಲಿ ಕಸ್ತೂರಿ ಚಿಟ್ಟೆಯ ಮೊಟ್ಟೆ, ಕಂಬಳಿಹುಳು ಇವೆಯೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ, ಇದ್ದರೆ ಕರಿಬೇವಿನ ಗಿಡದ ಳಿ ಇಟ್ಟುಬನ್ನಿ. ಇದರಿಂದ ಚಿಟ್ಟೆಗಳನ್ನು ಪ್ರಕೃತಿಯಲ್ಲಿ ಸಂರಕ್ಷಿಸಿದಂತಾಗುತ್ತದೆ.

ಶಶಿಧರಸ್ವಾಮಿ ಆರ್. ಹಿರೇಮಠ
ಕದರಮಂಡಲಗಿ, ಹಾವೇರಿ

Print Friendly, PDF & Email
Spread the love
error: Content is protected.