ವಿ.ವಿ. ಅಂಕಣ – ಸಮುದ್ರದಾಳದ ಗೋಳು!

ವಿ.ವಿ. ಅಂಕಣ – ಸಮುದ್ರದಾಳದ ಗೋಳು!

ನಮ್ಮ ಕೇರಳ ಪ್ರವಾಸ ಮುಗಿಸಿ ವಾಪಾಸ್ ಮನೆಗೆ ತೆರಳುವ ಸಮಯ ಬಂದಾಗಿತ್ತು. ನಮ್ಮ ಪ್ರವಾಸದ ಕೊನೆಯ ತಾಣ ಕ್ಯಾಲಿಕಟ್ ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಎಡ ಭಾಗದಲ್ಲಿ ಸಮುದ್ರವಿದೆ ಎಂದು ಅಲೆಗಳು ಪದೇ ಪದೇ ಸದ್ದು ಮಾಡಿ ಹೇಳುತ್ತಿದ್ದವು. ಆ ಅಲೆಗಳ ಕೂಗನ್ನು ನಿರ್ಲಕ್ಷಿಸಲು ಮನಸ್ಸು ಬಾರದೆ, ನಮ್ಮ ಕಾರಿಗೆ ನಿಲ್ಲಲು ಜಾಗ ಹುಡುಕಿ ಕೂರಿಸಿ ಅಲೆಗಳ ಅರಸುತ್ತ ಹೊರಟೆವು. ಹೋಗುವ ದಾರಿಯಲ್ಲೇ ಬಣ್ಣ ಬಣ್ಣದ ದೀಪಗಳ ಜೊತೆಗೆ, ಬಣ್ಣ ಬಣ್ಣದ ತಿನಿಸುಗಳು ಕಣ್ಣು ಕುಕ್ಕುವಂತಿದ್ದವು. 

ಈಗ ನಾನು ಮತ್ತು ನನ್ನ ಸ್ನೇಹಿತರು ಸಮುದ್ರದ ಅಲೆಗಳಿಗೆ ನಮ್ಮನ್ನು ಮುಟ್ಟುವಂತೆ ಸವಾಲು ಹಾಕಿ ಚಿಕ್ಕ ಮಕ್ಕಳಂತೆ ‘ಮುಟ್ಟೋ ಆಟ’ ಆಡುತ್ತಿದ್ದೆವು. ಅಂಗಡಿಯಲ್ಲಿ ಇದ್ದ ಬಣ್ಣ ಬಣ್ಣದ ತಿನಿಸುಗಳಲ್ಲಿ ಕೆಲವು ನಮ್ಮ ಕೈ ಸೇರಿದ್ದವು. ಸ್ವಲ್ಪ ಹೊತ್ತಿಗೇ ಆಟ ಸುಸ್ತಾಗಿ ಹಿಂದೆ ಬಂದು ಸಮುದ್ರದ ಅಲೆಗಳನ್ನು ಸೋಲಿಸಿದ ಆನಂದವನ್ನು ಕೂತು ಸವಿಯುತ್ತಿದ್ದೆವು. ನಮಗೆ ಅರಿಯದಂತೇ ಕೈ ಮತ್ತು ಬಾಯಿಯ ಸಂಬಂಧ ತಡೆಯಿಲ್ಲದೇ ಬೆಸೆಯುತ್ತಿತ್ತು. ಇಂಥಾ ಸಮಯದಲ್ಲಿ ನನ್ನ ತಲೆಗೆ ಹೊಳೆದದ್ದು, “ಅರೇ ಇಡೀ ಭೂಮಿಯಲ್ಲಿ ಇಷ್ಟು ಸಮುದ್ರವಿದೆ, ಆದರೆ ನಮ್ಮ ಕಾಡಿನಲ್ಲಿ ಸಿಗುವ ಹಾಗೆ ಒಂದು ಪ್ರಾಣಿಯೂ ಕಣ್ಣಿಗೆ ಕಾಣ ಸಿಗುವುದಿಲ್ಲವಲ್ಲ…! ಇಷ್ಟು ಸಮುದ್ರವಿದ್ದಾದರೂ ಏನು ಪ್ರಯೋಜನ?” ಎನಿಸುತ್ತಿತ್ತು. ಆದರೆ ಸಮುದ್ರದ ಜೀವವೈವಿಧ್ಯದ ಆಳ ಪರಿಚಯಿಸಿದ ಡೇವಿಡ್ ಅಟೆನ್ಬರೋ ನಿರೂಪಣೆಯ ವೀಡಿಯೋಗಳನ್ನು ಎಷ್ಟು ಮೆಚ್ಚಿದರೂ ಸಾಲದು.

ಮೇಲೆ ಶಾಂತವಾಗಿ ಕಾಣುವ ಸಮುದ್ರಗಳ ಒಳಗೆ ನಡೆಯುವ ವಿಸ್ಮಯಗಳನ್ನು ಬಲ್ಲವರೇ ಬಲ್ಲರು. ಹೀಗಿರುವ ಸಮುದ್ರದಾಳದ ವಿಸ್ಮಯಗಳ ಸವಿಯುವ ಬದಲು, ಸಮುದ್ರದ ಆಳಕ್ಕೆ ಹೋಗಿ ಗಣಿಗಾರಿಕೆ ನಡೆಸಿದರೆ ಏನನ್ನುವುದು ಹೇಳಿ? ಅದಿರಲಿ ಕೆಲವರ ಈ ಮಾತು ಕೇಳಿ… “ಅರೇ ಅದರಲ್ಲೇನು ತಪ್ಪು? ಕೆಲವು ಖನಿಜಗಳು ಸಮುದ್ರದ ಆಳದಲ್ಲಿಯೇ ಹೇರಳವಾಗಿ ಸಿಗುತ್ತವೆ. ಈಗ ಪೆಟ್ರೋಲಿಯಮ್ ಪದಾರ್ಥಗಳನ್ನು ಕೊಳವೆ ಬಾವಿ ಕೊರೆದು ತೆಗೆಯುವ ಹಾಗೆ ತೆಗೆಯುವುದು ಅಷ್ಟೇ!” ಎಂದು ಉದಾಸೀನ ಮಾಡುವವರಿಗೆ ಈ ಸಂಶೋಧನೆ ಎಚ್ಚರಿಕೆ ಘಂಟೆಯೇ ಸರಿ.

1989 ರಿಂದ 1994 ವರೆಗೆ ನಡೆದ DISCOL (DISturbance and reCOLonization) ಎಂಬ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಸಮುದ್ರದ ತಳದಲ್ಲಿ ಸಿಗಬಹುದಾದ ತಾಮ್ರ, ನಿಕ್ಕಲ್ ಮತ್ತು ಕೋಬಾಲ್ಟ್ ನಂತಹ ಅಮೂಲ್ಯ ಲೋಹಗಳ ಅದಿರಿನ ಅನ್ವೇಷಣೆಗಾಗಿ ಅಗೆದ ಪರಿಣಾಮ ಅಲ್ಲಿನ ಸೂಕ್ಷ್ಮಜೀವಿಗಳ ಸಾಮಾಜಿಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಹಾಗೂ ಇಪ್ಪತ್ತಾರು ವರ್ಷಗಳ ದೀರ್ಘಾವಧಿಯ ನಂತರವೂ ಅಲ್ಲಿನ ಸೂಕ್ಷ್ಮಜೀವಿಗಳ ಪರಿಸ್ಥಿತಿ ಮೊದಲಿನ ಸ್ಥಿತಿಗೆ ಮರಳಲಿಲ್ಲ ಎಂಬುದು ಹೊಸ ಸಂಶೋಧನೆಯ ವಿಷಾದನೀಯ ಸಾರ.

ಈ ಪ್ರಯೋಗದ ಸಮಯದಲ್ಲಿ ಸಮುದ್ರದ ತಳದಲ್ಲಿ ನಾವು ಹೊಲ ಉಳುವ ರೀತಿಯಲ್ಲಿ ಅಗೆದು ಬಿಡಲಾಗಿತ್ತು. ಆಗಿನ ವಿಜ್ಞಾನಿಗಳ ತಂಡವೂ ಸಹ ಅಲ್ಲಿನ ಜೀವರಾಶಿಯ ಬಗ್ಗೆ ಹಾಗೂ ನೀರಿನ ಮತ್ತು ಮಣ್ಣಿನ ಸಾರಜನಕದ ಚಕ್ರದ ಬಗೆಗಿನ ವಿಚಾರಗಳಿಗೆ ಒಲವು ತೋರಿದ್ದರೂ, ಈ ಗಣಿಗಾರಿಕೆಯಿಂದ ಆಗುವ ಪರಿಣಾಮಗಳ ಬಗೆಗಿನ ವಿಷಯಗಳು ಬೆರಳೆಣಿಕೆಯಷ್ಟಿವೆ. ಜೊತೆಗೆ ಇಷ್ಟು ನಡೆದದ್ದು 1996ರಲ್ಲಿ. ಆದ್ದರಿಂದ ಆರ್ಕ್ತಿಕ್ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿ ವಿಜ್ಞಾನಿಗಳು ಮತ್ತೊಂದು ಪ್ರಯೋಗವನ್ನು 2015ರಲ್ಲಿ ಮಾಡಲು ನಿರ್ಧರಿಸಿದರು.

ಅದರಲ್ಲಿ ಇಪ್ಪತ್ತಾರು ವರ್ಷದ ಹಳೆಯ, ಅಗೆದ ಜಾಗವನ್ನು ಐದು ವಾರಗಳ ಹಿಂದೆ ಅಗೆದ ಸಮುದ್ರದ ತಳದ ಜೊತೆಗೆ ಹೋಲಿಸಿ ನೋಡಿದರು. ಗಣಿಗಾರಿಕೆ ನಡೆಯದ ಸಮುದ್ರದ ನೆಲದಲ್ಲಿನ ಸೂಕ್ಷ್ಮಜೀವಿಗಳ ಸಂಖ್ಯೆಗೆ ಹೋಲಿಸಿದರೆ ಐದು ವಾರಗಳ ಹಿಂದೆ ಅಗೆದ ಜಾಗದಲ್ಲಿ ಸೂಕ್ಷ್ಮಜೀವಿಗಳ ಸಂಖ್ಯೆ ಐವತ್ತರಷ್ಟು ಕಡಿಮೆಯಾಗಿದ್ದರೆ, ಇಪ್ಪತ್ತಾರು ವರ್ಷಗಳ ಹಳೆಯ ಅಗೆದ ಜಾಗದಲ್ಲಿ ಈಗಲೂ ಸೂಕ್ಷ್ಮಜೀವಿಗಳ ಸಂಖ್ಯೆ ಮೂವತ್ತರಷ್ಟು ಕಡಿಮೆ ಇದೆ. ಹಾಗೂ ಇಷ್ಟು ಬದಲಾಗಿರುವ ಅಲ್ಲಿನ ಜೀವಿಗಳ ಜೀವನ ಶೈಲಿ ಯಥಾಸ್ಥಿತಿಗೆ ಮರಳಲು ಇನ್ನೂ ಐವತ್ತು ವರ್ಷಗಳು ಬೇಕು ಎನ್ನುತ್ತಿದ್ದಾರೆ ವಿಜ್ಞಾನಿಗಳು.

ನಮ್ಮ ಬಿಡುವಿಲ್ಲದ ಸ್ವ-ವಿನಾಶಕಾರಿ ಪ್ರಯತ್ನಗಳನ್ನು ಮೂದಲಿಸುವ ಮುಂಚೆ ಸಮುದ್ರದ ಆಳದಷ್ಟು ಯೋಚಿಸಬೇಕೆಂದು, ತನ್ನ ಗೋಳು ತೋಡಿಕೊಳ್ಳುತ್ತಿರುವ ಸಮುದ್ರದ ಅಳಲಿನ ಮೂಲಕ ಹೇಳುತ್ತಿರುವ, ಪ್ರಕೃತಿಯ ಮಾತುಗಳ ಆಲಿಸಲು ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ ಎಂಬುದು ನನ್ನ ಅನಿಸಿಕೆ.

ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ತಿಳಿಸಿ.
ನಮ್ಮ ಇ-ಮೇಲ್ ವಿಳಾಸ: [email protected]

ಲೇಖನ: ಜೈಕುಮಾರ್ ಆರ್.
ಡಬ್ಲೂ. ಸಿ. ಜಿ., ಬೆಂಗಳೂರು

Print Friendly, PDF & Email
Spread the love
error: Content is protected.