ಕಾನನದ ದಶಮಾನೋತ್ಸವ
ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ? ಕನ್ನಡ ಸಾಹಿತ್ಯ ಪ್ರಿಯರಿಗೆ ತೇಜಸ್ವಿ ಅಚ್ಚು ಮೆಚ್ಚು. ಇವರ ಲೇಖನಗಳು ಅದೆಷ್ಟೋ ಜನರನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿವೆ. ವಿಜ್ಞಾನ ಹಾಗೂ ಪರಿಸರದ ಬಗೆಗಿನ ವಿಷಯಗಳನ್ನು ಸರಳ, ಸುಂದರ, ಹಾಸ್ಯ ಭರಿತ ಕಥೆಗಳ ಮುಖಾಂತರ ತಿಳಿಸುವ ಇವರ ಪುಸ್ತಕಗಳು ನಮ್ಮ WCG ತಂಡದವರನ್ನೂ ಅಪಾರವಾಗಿ ಸೆಳೆದಿವೆ. ಅವರ ಬರಹದ ಶೈಲಿಯಿಂದ ಅವರ ಪರಿಸರ ಕಾಳಜಿಯಿಂದ ಪ್ರೇರಿತರಾದ ನಾವು ಕನ್ನಡದಲ್ಲಿ ಪರಿಸರದ ಬಗ್ಗೆ ಮಾಹಿತಿ ಒದಗಿಸಬೇಕು ಎಂಬ ಆಶಯದಿಂದ “ಕಾನನ” ಎಂಬ ಇ-ಮಾಸ ಪತ್ರಿಕೆಯನ್ನು 2010 ರಲ್ಲಿ ಶುರುಮಾಡಿದೆವು.
ಅಂದು ಶುರುವಾದ ಕಾನನವು ನೂರಾರು ಜನರ ಸಹಾಯದಿಂದ 10 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಎಲ್ಲಾ ಲೇಖಕರನ್ನು, ಛಾಯಾಗ್ರಾಹಕರನ್ನು ಒಂದೆಡೆ ಸೇರಿಸಬೇಕು ಹಾಗೂ ಅವರ ನಿಸ್ವಾರ್ಥ ಸಹಾಯಕ್ಕೆ ಧನ್ಯವಾದ ತಿಳಿಸಬೇಕೆಂಬ ಕಾರಣದಿಂದ 19ನೇ ಜನವರಿ 2020 ರಂದು “ಉದಯಭಾನು ಕಲಾಸಂಘ” ದಲ್ಲಿ ಕಾನನ ಇ-ಮಾಸ ಪತ್ರಿಕೆಯ 10ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಹಾಗೆಯೇ, ಕಾನನ ಪತ್ರಿಕೆಯಲ್ಲಿ ಪ್ರಕಟವಾದ ಕೆಲವು ಉತ್ತಮ ಲೇಖನಗಳನ್ನು “ಜೀವಾಂಕುರ” ಎಂಬ ಪುಸ್ತಕದ ರೂಪದಲ್ಲಿ ಹೊರತರಲಾಯಿತು.
ಪ್ರಖ್ಯಾತ ಪರಿಸರ ಸಾಹಿತಿಗಳಾದ ನಾಗೇಶ್ ಹೆಗಡೆ ರವರು, ಜಾಗೃತ ಕೃಷಿಕರಾದ ಎ.ಪಿ ಚಂದ್ರಶೇಖರ್ ರವರು, ವಲಯ ಅರಣ್ಯ ಅಧಿಕಾರಿಗಳಾದ ಮೊಹಮ್ಮದ್ ಮನ್ಸೂರ್ ರವರು ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.
ಸಂಜೆ 4.30 ಕ್ಕೆ ಪರಿಸರ ಕಾವ್ಯ ವಾಚನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಕಾನನ ವೃಂದಕ್ಕೂ, ಪರಿಸರಾಸಕ್ತರಿಗೂ, WCG ತಂಡದ ಅಧ್ಯಕ್ಷರಾದ ಕೆ.ಪಿ.ಶಂಕರಪ್ಪನವರು WCG ತಂಡದ ಕಿರುಪರಿಚಯವನ್ನು ಮಾಡಿಕೊಟ್ಟರು. WCG ತಂಡದ ಕಾರ್ಯದರ್ಶಿಗಳಾದ ಅಶ್ವಥ ಕೆ.ಎನ್ ರವರು ಕಾನನ ನಡೆದು ಬಂದ ಹಾದಿಯನ್ನು ತಿಳಿಸಿಕೊಟ್ಟರು. ಮುಖ್ಯ ಅಥಿತಿಗಳಾದ ನಾಗೇಶ್ ಹೆಗಡೆ ರವರು, ಎ.ಪಿ ಚಂದ್ರಶೇಖರ್ ರವರು, ಮೊಹಮ್ಮದ್ ಮನ್ಸೂರ್ ರವರು “ಜೀವಾಂಕುರ” ಪುಸ್ತಕವನ್ನು ಬಿಡುಗಡೆ ಮಾಡಿ ಎಲ್ಲರೊಡನೆ ಪರಿಸರದ ಬಗೆಗಿನ ತಮ್ಮ ಜ್ಞಾನವನ್ನು, ಅನುಭವಗಳನ್ನು ಹಂಚಿಕೊಂಡರು. ಪರಿಸರಕ್ಕೆ ಮಾನವರಾದ ನಾವು ಯಾವ ರೀತಿಯ ದೌರ್ಜನ್ಯವನ್ನು ಮಾಡುತ್ತಿದ್ದೇವೆ, ಇನ್ನೂ ಹೆಚ್ಚಿನ ದೌರ್ಜನ್ಯವನ್ನು ತಡೆಯಲು ತಡೆಯಬೇಕಾದರೆ ಯಾವ ರೀತಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾನನ ಪತ್ರಿಕೆಯ ಲೇಖಕ ವೃಂದಕ್ಕೂ, ಛಾಯಾಗ್ರಾಹಕರಿಗೂ ನೆನೆಪಿನ ಕಾಣಿಕೆಯನ್ನು, ಜೀವಾಂಕುರ ಪುಸ್ತಕವನ್ನು ನೀಡಲಾಯಿತು. ಕೆಲವು ಲೇಖಕರು ಕಾನನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಎಲ್ಲರೊಡನೆ ಹಂಚಿಕೊಂಡರು. ಸುಮಾರು 8 ಗಂಟೆಗೆ ಲಘು ಉಪಹಾರದ ಮೂಲಕ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.
ಈ ಇ-ಕಾನನದ ಹತ್ತು ವರ್ಷದ ಸುಧೀರ್ಘ ಪ್ರಯಾಣಕ್ಕೆ ಸಹಕರಿಸಿದ ಎಲ್ಲಾ ಕಾನನ ವೃಂದಕ್ಕೂ, ಛಾಯಾಗ್ರಾಹಕರಿಗೂ, ಪರಿಸರಾಸಕ್ತರಿಗೂ, “ಜೀವಾಂಕುರ” ಪುಸ್ತಕವನ್ನು ಹೊರತರಲು ಸಹಕರಿಸಿದ ಎಲ್ಲರಿಗೂ, WCG ತಂದಡ ವತಿಯಿಂದ ಅನಂತ ಧನ್ಯವಾದಗಳು.
ಜೀವಾಂಕುರ ಪುಸ್ತಕವು ಕಾನನ ಇ-ಮಾಸಿಕದಲ್ಲಿ ಕಳೆದ ಹತ್ತು ವರ್ಷದಲ್ಲಿ ಪ್ರಕಟವಾದ ಪರಿಸರ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕೌತುಕದ ಕತೆಗಳ ಸಂಕಲನ. ಇಲ್ಲಿ ಜೀವಜಾಲದ ಮಾಯಾಲೋಕವಿದೆ. ಕಾಡುಪ್ರಾಣಿಗಳ ಮತ್ತು ಮಾನವನ ನಡುವಿನ ಸಂಘರ್ಷದ ಚಿತ್ರಣವಿದೆ. ಮಕ್ಕಳಿಗೆ ಬೆರಗು ಮೂಡಿಸುವ ಪರಿಸರ ವಿಜ್ಞಾನದ ಸಂಗತಿಗಳಿವೆ. ಜೀವವಿಕಾಸದ ಸೆಳೆತ, ಕಾಡು-ಜೀವಿಗಳ ನಡುವಣ ಸಂಬಂಧವೂ ಇಲ್ಲಿ ಅನಾವರಣಗೊಂಡಿದೆ. ಪರಿಸರಾಸಕ್ತಿಯನ್ನು ಕೆರಳಿಸಿ , ನಿಸರ್ಗ ಪ್ರೇಮವನ್ನು ಉದ್ದೀಪನಗೊಳಿಸಲು ಬೇಕಾದ ಸರಕು ಈ ಪುಸ್ತಕದಲ್ಲಿ ಹೇರಳವಾಗಿದೆ.
– ನಾಗೇಶ್ ಓ. ಎಸ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು.