ಪರಿಸರ ನಡಿಗೆ

ಜ್ಞಾನ ಎಂಬುದು ಸಾಗರವಿದ್ದಂತೆ. ಅದನ್ನು ಮಕ್ಕಳಿಗೆ ತರಗತಿ ಬೋಧನೆಯ ಜೊತೆ ಜೊತೆಗೆ ಬೇರೆ ಬೇರೆ ವಿಧಾನಗಳಿಂದಲೂ ನೀಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ WCG ತಂಡದ ಸದಸ್ಯರು ಮಕ್ಕಳಿಗೆ ಪರಿಸರದ ಬಗ್ಗೆ ಹಾಗೂ ಸುತ್ತಮುತ್ತಲಿನ ಜೀವವೈವಿಧ್ಯದ ಬಗ್ಗೆ ತಿಳಿಸಿಕೊಡಲು ಹಲವಾರು ಪರಿಸರ ಶಿಬಿರಗಳನ್ನು , ಪರಿಸರ ನಡಿಗೆಗಳನ್ನು ಹಮ್ಮಿಕೊಂಡಿದೆ.
WCGಯ ಶಿಬಿರ ಕೇಂದ್ರವಾಗಿರುವ ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಡಿಸೆಂಬರ್ 10 ಮತ್ತು 13 ನೇ ತಾರೀಖಿನಂದು ಗೋದೂರು ಹಾಗೂ ಬನವಾಸಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಒಂದೊಂದು ದಿನದ ಪ್ರಕೃತಿ ಶಿಬಿರವನ್ನು ಏರ್ಪಡಿಸಲಾಗಿತ್ತು. 10 ನೇ ತಾರೀಖು ನಡೆದ ಶಿಬಿರದಲ್ಲಿ ಗೋದೂರು ಶಾಲೆಯ 20 ವಿದ್ಯಾರ್ಥಿಗಳು ಹಾಗೂ 13 ನೇ ತಾರೀಖು ನಡೆದ ಶಿಬಿರದಲ್ಲಿ ಬನವಾಸಿ ಶಾಲೆಯ 19 ವಿದ್ಯಾರ್ಥಿಗಳು ಭಾಗವಹಿಸಿ ಚಟುವಟಿಕೆಗಳ ಜೊತೆ ಜೊತೆಗೆ ನಿಸರ್ಗದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದುಕೊಂಡರು.

ಬೆಳಗ್ಗೆ 10 ಗಂಟೆಗೆ ಅಡವಿ ಫೀಲ್ಡ್ ಸ್ಟೇಷನ್ ಗೆ ಬಂದ ಮಕ್ಕಳನ್ನು ’ಗುಂಪುಗಾರಿಕೆ’ ಎಂಬ ಒಂದು ಚಟುವಟಿಕೆಯ ಮೂಲಕ ವಿವಿಧ ಗುಂಪುಗಳನ್ನಾಗಿ ವಿಭಜಿಸಿ ಪರಿಸರ ವೀಕ್ಷಣೆಗೆ ಕರೆದೊಯ್ಯಲಾಯಿತು. ಎರಡು ಗಂಟೆಗಳ ಕಾಲ ಪರಿಸರ ವೀಕ್ಷಣೆಯಲ್ಲಿ ಮಕ್ಕಳಿಗೆ ಸುಮಾರು 20 ಪ್ರಭೇದದ ಪಕ್ಶಿಗಳನ್ನು, ವಿವಿಧ ಬಗೆಯ ಚಿಟ್ಟೆ, ಕೀಟ, ಮರ-ಗಿಡಗಳನ್ನು ಪರಿಚಯಿಸಲಾಯಿತು. ಮಕ್ಕಳು ಕೇಳುತ್ತಿದ್ದ ಪ್ರಶ್ನೆಗಳು ಅವರಲ್ಲಿರುವ ಸೃಜನಶೀಲತೆಯನ್ನು, ಆಸಕ್ತಿಯನ್ನು ಪ್ರತಿಬಿಂಬಿಸುತ್ತಿತ್ತು. ಪರಿಸರ ವೀಕ್ಷಣೆಯಿಂದ ಹಿಂದಿರುಗಿದ ಶಿಬಿರಾರ್ಥಿಗಳಿಗೆ ರುಚಿಯಾದ ಊಟವನ್ನು ನೀಡಿ ’ನಮ್ಮೂರ ಕೆರೆ’, ’ಜೌಗು ಪ್ರದೇಶ’ ಎಂಬ ವಿಷಯಗಳ ಬಗ್ಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚಿತ್ರಕಲಾ ಸ್ಪರ್ಧೆಯ ನಂತರ ಮಕ್ಕಳಿಗೆ ಕಿರು ನಾಟಕವನ್ನು ಮಾಡಲು ’ಆನೆ ಮತ್ತು ಮಾನವ’ ,’ಹುಲಿ’ ಎಂಬ ವಿಷಯಗಳನ್ನು ನೀಡಿ 15 ನಿಮಿಷ ಕಾಲಾವಕಾಶ ನೀಡಲಾಯಿತು.

ಅವರು ಆ 15 ನಿಮಿಷದಲ್ಲಿ ಕಥೆಯನ್ನು ರಚಿಸಿ ಪಾತ್ರ ಹಂಚಿಕೆಮಾಡಿಕೊಂಡು ಒಮ್ಮೆ ಅಭ್ಯಸಿಸಿ ಬಂದು ನೀಡಿದ ಪ್ರದರ್ಶನವು ಎಲ್ಲಾ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತು. ಉತ್ತಮ ಚಿತ್ರಕಲೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಶಿಬಿರದಲ್ಲಿ ಭಾಗಿಯಾದ ಎಲ್ಲರಿಗೂ ಹಾವುಗಳ ಬಗೆಗಿನ ಭಿತ್ತಿಚಿತ್ರಗಳನ್ನು ನೀಡಲಾಯಿತು. ಮಕ್ಕಳ ಮುಖದಲ್ಲಿನ ಮಂದಹಾಸವು ದಿನದ ಕಾರ್ಯಕ್ರಮಗಳ ಫಲಿತಾಂಶವನ್ನು ಹೇಳುತ್ತಿತ್ತು.
ಶಿಬಿರದಲ್ಲಿ ಭಾಗವಹಿಸಿದ್ದ ಕೆಲವು ವಿದ್ಯಾರ್ಥಿಗಳ ಅನಿಸಿಕೆಗಳು :

ಪ್ರಕೃತಿ ಎಂಬುದು ಮಾತಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೊಂದು ಅದ್ಭುತ. ಪ್ರಕೃತಿ ಇಲ್ಲ ಅಂದ್ರೆ ಮನುಷ್ಯರೂ ಇಲ್ಲ, ಅದನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಕೃತಿಯಲ್ಲಿ ಎಷ್ಟು ಪ್ರಾಣಿಗಳು, ಪಕ್ಷಿಗಳು ವಾಸಮಾಡುತ್ತವೆ ಎಂದು ಇವತ್ತು ನನಗೆ ತಿಳಿಯಿತು. ಎಷ್ಟು ವಿಧದ ಪಕ್ಷಿಗಳು ಅವುಗಳ ಬಣ್ಣಗಳು ತುಂಬಾ ಚೆನ್ನಾಗಿತ್ತು. ನಾವು ಪುಸ್ತಕದಲ್ಲಿಯೂ ಕಲಿಯಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ತಿಳಿದುಕೊಳ್ಳಬೇಕು. ಇಲ್ಲಿ ನಡೆದ ಯೋಜನೆಗಳು ತಿಳಿಸಿಕೊಟ್ಟ ವಿಚಾರಗಳು ನನಗೆ ತುಂಬಾ ಇಷ್ಟವಾಯಿತು. ಇವೆಲ್ಲವನ್ನು ನೋಡಿದರೆ ಪ್ರಕೃತಿ ಎಂಬುದು ನಮಗೆ ಬೇಕಾದ ಮುಖ್ಯವಾದ ಅಂಶ. ಅದಕ್ಕೆ ನಾವೆಲ್ಲರೂ ಪ್ರಕೃತಿಯನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಹೇಗೆಂದರೆ ಮಕ್ಕಳನ್ನು ದೇವರು ಎಂದು ಮತ್ತು ಅವರನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತೇವೆ ಹಾಗೆಯೇ ಪ್ರಕೃತಿಯನ್ನು ದೇವರು ಎಂದು ಜಾಗರೂಕತೆಯಿಂದ ನೋಡಿಕೊಳ್ಳಬೇಕು
– ನಂದಿನಿ ಜಿ.ಆರ್
8 ನೇ ತರಗತಿ, GHPS ಗೋದೂರು
ಶುಕ್ರವಾರದಂದು ನಮ್ಮ ಶಾಲೆಯ 7ನೇ ತರಗತಿಯವರನ್ನು ಪ್ರಕೃತಿ ಶಿಬಿರಕ್ಕೆ ಎಂದು ಆಡವಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಾವು ವಿವಿಧ ಬಗೆಯ ಪಕ್ಷಿಗಳನ್ನು, ಚಿಟ್ಟೆಗಳನ್ನು ನೋಡಿದೆವು. ಜೌಗು ಪ್ರದೇಶವನ್ನು ನೋಡಿ ಅದರಲ್ಲಿ ವಾಸಿಸುವ ಕೆಲವು ಕೀಟಗಳನ್ನು ನೋಡಿದೆವು. ಊಟದ ನಂತರ ಚಿತ್ರಕಲೆ ಸ್ಪರ್ಧೆ ಇತ್ತು ಅದರಲ್ಲಿ ಚೆನ್ನಾಗಿ ಮಾಡಿದವರಿಗೆ ಬಹುಮಾನ ಕೊಟ್ಟರು. ಅಡವಿಯಲ್ಲಿ ನಡೆಸಿದ ಎಲ್ಲಾ ಚಟುವಟಿಕೆಗಳು ನನಗೆ ಇಷ್ಟವಾದವು.
– ಮನೋಜ್ ಎಸ್
7ನೇ ತರಗತಿ, GHPS ಬನವಾಸಿ


– ನಾಗೇಶ್ ಓ.ಎಸ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು.