ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ!?

ನಿನ್ನ ತಲೆಯಲ್ಲೇನು ಮಣ್ಣಿದಿಯೇ? ಎಂದು ಕೋಪಗೊಂಡ ಕೆಲವರೆಲ್ಲಾ ಬೈಯುವುದು ಸಹಜವಾದದ್ದು. ಆದರೆ ಇಂದು ಹೀಗೆ ಬೈಯುವಾಗ ಆಲೋಚಿಸಬೇಕಾಗಿದೆ. ಜನರನ್ನು ತೆಗಳಲು, ಹೊಗಳಲು ಮಣ್ಣು ಬೇಕೇಬೇಕು. ನಿಮಗೆ ಆಶ್ಚರ್ಯವಾಗಬಹುದು ಏನು ಹೀಗೆ ಹೇಳುತ್ತಿದ್ದಾರಲ್ಲಾ ಎಂದು. ನಿಜ ನಾವು ಉಸಿರಾಡಬೇಕಾದರೆ, ಮಾತನಾಡಬೇಕಾದರೆ, ಕೆಲಸ ಮಾಡಬೇಕಾದರೆ ಶಕ್ತಿ ಬೇಕಾಗುತ್ತದೆ. ಆ ಶಕ್ತಿ ನಾವು ತಿನ್ನುವ ಆಹಾರದಿಂದ ಮಾತ್ರ ಸಿಗಲು ಸಾಧ್ಯ. ಆಹಾರ ಬೆಳೆಯಲು ಮಣ್ಣು ಬೇಕೇಬೇಕಲ್ಲವೆ. ಅದರಲ್ಲೂ ಆರೋಗ್ಯಯುತವಾದ ಮಣ್ಣು ಬೇಕು. ಮಣ್ಣು ಆರೋಗ್ಯವಿಲ್ಲದೆ ಆಹಾರ ಬೆಳೆದರೆ ನಮಗೆ ಶಕ್ತಿ ಬರಲು ಸಾಧ್ಯವೇ ಇಲ್ಲ. ಆದ್ದರಿಂದ ಎಲ್ಲರ ಪ್ರತಿನಿತ್ಯದ ಬದುಕು ಮಣ್ಣಿನಿಂದಲೇ ನಡೆಯುತ್ತದೆ. ಆರೋಗ್ಯಯುತ ಮಣ್ಣಿನಿಂದ ಕೂಡಿದ ಪ್ರದೇಶಗಳಿಂದ ದೇಶ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ.
ಜೀವಿಗಳು ಹುಟ್ಟಿನಿಂದ ಸಾಯುವವರೆಗೆ ಮಣ್ಣನ್ನೇ ಅವಲಂಬಿಸಿರುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಮಣ್ಣಿನ ಮೇಲೇ ಓಡಾಡುತ್ತೇವೆ, ಮಣ್ಣಿನಿಂದ ಬೆಳೆದ ಆಹಾರವನ್ನೇ ಸೇವಿಸುತ್ತೇವೆ, ಸೇವಿಸಿದ ಆಹಾರದ ತ್ಯಾಜ್ಯವನ್ನು ನಾನಾ ರೂಪದಲ್ಲಿ ಮಣ್ಣಿಗೇ ಸೇರಿಸುತ್ತೇವೆ. ಮನುಷ್ಯ ಮತ್ತು ಮಣ್ಣಿನೊಡನೆ ಇರುವ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಮನುಷ್ಯರು ಹುಟ್ಟಿದ ಮಣ್ಣಿನಲ್ಲೇ ಮಣ್ಣಾಗಬೇಕೆಂದು ಬಯಸುತ್ತಾರೆ. ಆದ್ದರಿಂದಲೇ ಎಲ್ಲೇ ಮರಣ ಹೊಂದಿದರೂ ಹುಟ್ಟಿದ ಊರಿಗೆ ತಂದು ಮಣ್ಣು ಮಾಡುತ್ತಾರೆ. ಇಷ್ಟೆಲ್ಲಾ ಮಣ್ಣಿನೊಂದಿಗಿನ ಸಂಬಂಧ ಇದ್ದರೂ ಸಹ ಮಣ್ಣಿನ ಆರೋಗ್ಯವನ್ನೇ ದುರಾಸೆಯ ಮಾನವರು ಹಾಳು ಮಾಡುತ್ತಿದ್ದಾರೆ. ಮಣ್ಣನ್ನು ಕೊಚ್ಚುವುದು, ಬಗೆದು ಬಗೆದು ಮಾರುವುದು, ಸುಡುವುದು, ಮಣ್ಣಿಗೆ ಅರಗಿಸಿಕೊಳ್ಳಲಾಗದ ವಸ್ತುಗಳನ್ನು ಮಣ್ಣಿಗೆ ಸುರಿಯುವುದು. ಹೀಗೆ ಮಣ್ಣಿನ ಮೇಲಿನ ಶೋಷಣೆಗೆ ಎಲ್ಲೆ ಇಲ್ಲವಾಗುತ್ತಿದೆ.

ಮಣ್ಣಿನಿಂದ ಕಾಯ… ಮಣ್ಣಿನಿಂದ ಜೀವ… ಮಣ್ಣ ಬಿಟ್ಟವರಿಗೆ ಆಧಾರವಿಲ್ಲ… ಎಂಬ ಪುರಂದರದಾಸರ ನುಡಿಗಳನ್ನು ಕೇಳಿದರೆ ಮಣ್ಣಿನ ಮಹಿಮೆಯನ್ನು ಅರಿಯಬಹುದು. ಇಂತಹ ಮಣ್ಣನ್ನು ಪ್ರತಿಯೊಬ್ಬರು ಸಂರಕ್ಷಿಸಬೇಕಿದೆ. ಮಣ್ಣನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಬೇಕಾದರೆ ಮಣ್ಣಿನ ಕೆಲ ಮಾಹಿತಿಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಗ್ಲೋಬಲ್ ಸಾಯಿಲ್ ಡೈವರ್ಸಿಟಿ ಆಟ್ಲಾಸ್ ಪ್ರಕಾರ ಜಗತ್ತಿನಲ್ಲಿ 3,00,000 ಬಗೆಯ ಮಣ್ಣಿನ ವಿಧಗಳಿವೆ. ಮಣ್ಣಲ್ಲಿ ಸಾವಿರಾರು ರೀತಿಯ ಬ್ಯಾಕ್ಟೀರಿಯಾಗಳಿವೆ, ಲಕ್ಷಾಂತರ ಬಗೆಯ ಫಂಗಿಗಳಿವೆ. ಸಹಸ್ರಾರು ಜಾತಿಯ ಕ್ರಿಮಿಕೀಟಗಳಿವೆ. ಒಂದು ಪ್ರದೇಶದ ಮಣ್ಣಿನ ಬಣ್ಣ ಮತ್ತೊಂದು ಪ್ರದೇಶದ ಮಣ್ಣಿನ ಬಣ್ಣಕ್ಕಿಂತ ಭಿನ್ನವಾಗಿರುತ್ತದೆ. ಜಗತ್ತಿನ ಮಣ್ಣು ಸಾವಿರಾರು ಬಗೆಯ ಬಣ್ಣಗಳಿಂದ ಕೂಡಿದೆ. ಮಣ್ಣಿನ ಬಣ್ಣ ಮತ್ತು ರಚನೆ ಆ ಪ್ರದೇಶದ ವಾತಾವರಣ ಮತ್ತು ತಾಯಿ ಬಂಡೆಯ ಸ್ಥಿತಿ-ಗತಿಯನ್ನು ಅವಲಂಬಿಸಿರುತ್ತದೆ. ಮಣ್ಣಿನಲ್ಲಿರುವ ಖನಿಜಾಂಶ ಮತ್ತು ಲವಣಗಳ ಮೂಲ ಅಲ್ಲಿ ಇರುವ ಬಂಡೆ {ಇಗ್ನಿಯಸ್, ಮೆಟಾಮಾರ್ಫ಼ಿಕ್ ಅಥವಾ ಸೆಡಿಮೆಂಟರಿ ಬಂಡೆ ಇರಬಹುದು). ಅದನ್ನು ತಾಯಿ ಬಂಡೆ ಎಂದು ಕರೆಯುತ್ತಾರೆ.
ಮಣ್ಣಿನಲ್ಲಿರುವ ಪ್ರಧಾನ ಪೋಷಕಾಂಶಗಳೆಂದರೆ ರಂಜಕ, ಪೊಟ್ಯಾಸಿಯಂ ಮತ್ತು ಸಾರಜನಕ. ಮಣ್ಣಿನ ಕಿರು ಪೋಷಕಾಂಶಗಳೆಂದರೆ ಸುಣ್ಣ, ಬೋರಾನ್, ತಾಮ್ರ, ಕಬ್ಬಿಣ, ಸತು, ಮ್ಯಾಂಗನೀಸ್, ಮಾಲಿಬ್ದೆನಂ, ಕ್ಲೋರೀನ್, ಸಿಲಿಕಾನ್, ಮೆಗ್ನೇಷಿಯಂ, ಸೋಡಿಯಂ ಮತ್ತು ಗಂಧಕ. ಪ್ರತಿನಿತ್ಯ ನಾವುಗಳು ತಿನ್ನುವ ಆಹಾರ ಶೇಖಡಾ 95 ಭಾಗ ಈ ಎಲ್ಲಾ ಪೋಷಕಾಂಶಗಳನ್ನೊಳಗೊಂಡ ಮಣ್ಣಿಂದಲೇ ದೊರಕುತ್ತದೆ. ಇಂತಹ ಅಮೂಲ್ಯವಾದ ಮಣ್ಣನ್ನು ನಾವು ಸಮತಟ್ಟು ಮಾಡುವ ಮೂಲಕ ಮೇಲ್ಮಣ್ಣಿನ ಫಲವತ್ತತೆಯನ್ನು ಅವೈಜ್ಞಾನಿಕವಾಗಿ ಹಾಳುಮಾಡಲಾಗುತ್ತಿದೆ. ಭಾರತದಲ್ಲಿ ಸ್ವಾತಂತ್ರಪೂರ್ವದಲ್ಲಿ ಮಣ್ಣಿನಲ್ಲಿನ ಇಂಗಾಲದ ಪ್ರಮಾಣ 3ರಷ್ಟು ಇತ್ತೆಂದು ಕೆಲವು ಅಧ್ಯಯನಗಳಿಂದ ತಿಳಿದಿದೆ. ಇತ್ತೀಚೆಗೆ ಭಾರತದಲ್ಲಿ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಿದಾಗ ಇಂಗಾಲದ ಪ್ರಮಾಣ 0.75 ರಷ್ಟಿದೆ ಎಂದು ತಿಳಿದುಬರುತ್ತಿದೆ. ಇದು ತುಂಬಾ ಆತಂಕಕಾರಿಯಾದ ವಿಚಾರವಾಗಿದೆ. ಇದಕ್ಕೆ ಮೂಲ ಕಾರಣ ಹಸಿರು ಕ್ರಾಂತಿಯ ಹೆಸರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ನಮ್ಮ ಹೊಲ ತೋಟಗಳನ್ನು ಆಕ್ರಮಿಸಿಕೊಂಡದ್ದು, ಕುಲಾಂತರಿ ಬೀಜಗಳನ್ನು ಬಳಸಿದ್ದು, ಅತಿಯಾದ ಯಂತ್ರಗಳನ್ನು ಕೃಷಿಯಲ್ಲಿ ಬಳಸಲು ಪ್ರಾರಂಭಿಸಿದ್ದಾಗಿದೆ. ನಮ್ಮಲ್ಲಿದ್ದ 5 ಮಣ್ಣಿನ ಅವನತಿ ಆಗಿನಿಂದಲೇ ಪ್ರಾರಂಭವಾಯಿತು. ಜೊತೆಗೆ ಮನುಷ್ಯರ ಮತ್ತು ಮಣ್ಣಿನ ನಡುವಿನ ಸಂಬಂಧ ನಿಧಾನವಾಗಿ ಕಡಿಮೆಯಾಗತೊಡಗಿತು.
ಮಣ್ಣು ಒಮ್ಮೆ ನಾಶವಾದರೆ ಪುನರ್ ಪಡೆಯಲಾಗದ ಅಮೂಲ್ಯ ಸಂಪತ್ತು. ಸಜೀವ ಮಣ್ಣು ತನ್ನ ಮೇಲಿನ ಜೀವಿಗಳಿಗೆ ಆಹಾರ, ಮೇವು, ವಸತಿ, ವಸ್ತ್ರ ಮತ್ತು ಇಂಧನ ಇತ್ಯಾದಿಗಳನ್ನು ಕೊಡುತ್ತಿವೆ. ಮಣ್ಣು ಮಳೆನೀರನ್ನು ಸಂಗ್ರಹಿಸಿ ಶುದ್ಧಮಾಡುತ್ತದೆ, ಸಾವಯವ/ಕೊಳೆಯುವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸುತ್ತದೆ, ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತದೆ. ಪ್ರವಾಹವನ್ನು ತಡೆಯುತ್ತದೆ, ಹವಾಮಾನದ ಏರುಪೇರನ್ನು ತಡೆಯುತ್ತದೆ, ಇಡೀ ಭೂಮಿಯ ಮೇಲಿನ ಜೀವಜಂತುಗಳಿಗೆ ಆಶ್ರಯವನ್ನು ನೀಡುತ್ತದೆ. ಇಂತಹ ಮಣ್ಣನ್ನು ಸೃಷ್ಟಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಮಣ್ಣಿನ ಫಲವತ್ತತೆಯನ್ನೂ ಸಹ ಹಾಳು ಮಾಡುವ ಯಾವ ಹಕ್ಕೂ ಮಾನವರಿಗಿಲ್ಲ. ಆದರೂ ಮಾನವರು ತಮ್ಮ ದುರಾಸೆಗೋಸ್ಕರ ಮಣ್ಣಿನಲ್ಲಿರುವ ಕೋಟ್ಯಾನುಕೋಟಿ ಜೀವಿಗಳನ್ನು ಸರ್ವನಾಶ ಮಾಡುತ್ತಿದ್ದಾರೆ. ಮಣ್ಣು ಮಕ್ಕಳಂತೆ ನಾವು ಕೊಟ್ಟಿದ್ದನ್ನು ತೆಗೆದುಕೊಳ್ಳುತ್ತದೆ, ಬೆಳೆಸಿದಂತೆ ಬೆಳೆಯುತ್ತದೆ. ಸಾವಯವ ಮತ್ತು ಸಹಜ ಕೃಷಿಯನ್ನು ಮಾಡುವ ಮೂಲಕ ಮಣ್ಣನ್ನು ಸಂರಕ್ಷಿಸಬಹುದಾಗಿದೆ. ಇದಲ್ಲದೆ ಕಾಡಿನ ಮತ್ತು ಹುಲ್ಲುಗಾವಲಿನ ಅವನತಿಯಿಂದ ಮಣ್ಣಿನ ಸವಕಳಿಯು ಹೆಚ್ಚುತ್ತಿದೆ, ಗುಡ್ಡಗಳು ಕುಸಿಯುತ್ತಿವೆ. ಇದರಿಂದ ಭೂಮಿಯಲ್ಲಿನ ಮಣ್ಣಿನಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ.

ಈ ಮೇಲಿನ ಪರಿಣಾಮಗಳು ಉಂಟಾಗಲು ಮಾನವರು ಪ್ರಮುಖವಾದರೂ ಅದರ ಪರಿಣಾಮವನ್ನು ಮಣ್ಣನ್ನು ಅವಲಂಬಿಸಿರುವ ಸಕಲ ಜೀವಿಗಳೂ ಅನುಭವಿಸಬೇಕಾಗುತ್ತಿದೆ. ಇಂತಹ ಪರಿಣಾಮಗಳಿಂದ ದೂರವಿರಲು ಮಣ್ಣನ್ನು ಫಲವತ್ತಾಗಿಸಬೇಕಾಗಿದೆ. ಅದಕ್ಕಾಗಿ ಮಾನವರು ಕಾಡಿನ ಪ್ರಮಾಣವನ್ನು ಹೆಚ್ಚಿಸಬೇಕಿದೆ, ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ, ರಾಸಾಯನಿಕ ಕೃಷಿಯ ಬದಲು ಸಹಜ, ಸಾವಯವ, ಅರಣ್ಯ ಕೃಷಿ ಪದ್ದತಿ ಮತ್ತು ಬಹುಬೆಳೆ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ. ಕೆಲವು ಮಣ್ಣಿನ ತಜ್ಞರ ಪ್ರಕಾರ ಈ ಕೆಳಗಿನ ನಾಲ್ಕು ಅಂಶಗಳಿಂದ ಮಣ್ಣನ್ನು ಫಲವತ್ತಾಗಿಸಬಹುದಾಗಿದೆ. ಅವೆಂದರೆ ಖನಿಜಾಂಶ, ತೇವಾಂಶ, ಜೀವಾಂಶ ಮತ್ತು ಹೊದಿಕೆಯ ಅಂಶ.
ಖನಿಜಾಂಶ :- ಖನಿಜಾಂಶಗಳು ಮತ್ತು ಲಘು ಪೋಷಕಾಂಶಗಳು ಮಣ್ಣಲ್ಲಿ ಸಮತೋಲನ ಪೋಷಕಾಂಶಗಳನ್ನು ತುಂಬಿ, ಆ ಮೂಲಕ ಗಿಡಗಳು ಆರೋಗ್ಯವಾಗಿ ಬೆಳೆಯುವಂತೆ ಮಾಡುತ್ತವೆ. ಗಿಡವೊಂದರ ಬೆಳವಣಿಗೆಗೆ ಅತ್ಯಗತ್ಯವಾಗಿರುವ ಸಕಲ ಪೋಷಕಾಂಶಗಳು ಸಕಾಲದಲ್ಲಿ ಗಿಡಗಳಿಗೆ ತಲುಪುವಂತೆ ಮಾಡುತ್ತದೆ.
ತೇವಾಂಶ :- ಆರೋಗ್ಯಕರ ಮಣ್ಣಲ್ಲಿ ಮಣ್ಣು ಜೀವಾಣುಗಳ ಚಲನವಲನಗಳಿಂದ ಮಣ್ಣಲ್ಲಿ ಸೃಷ್ಟಿಯಾಗುವ ಅಸಂಖ್ಯಾತ ಸಣ್ಣ ಸಣ್ಣ ರಂಧ್ರಗಳು, ಸುರಂಗಗಳಾಗುತ್ತವೆ. ಈ ರಂಧ್ರಗಳಲ್ಲಿ ನೀರು ತುಂಬಿ ಮಣ್ಣು ಸದಾಕಾಲ ತೇವಾಂಶದಿಂದ ಕೂಡಿರುತ್ತದೆ.
ಜೀವಾಂಶ :- ಮಣ್ಣು ಉತ್ತಮವಾಗಿ ರೂಪುಗೊಳ್ಳಲು ಮಣ್ಣಲ್ಲಿನ ಜೀವಾಣುಗಳ ಕೊಡುಗೆ ಬಹಳ ಮುಖ್ಯ. ಮಣ್ಣಿಗೆ ಹಾಕುವ ಸಾವಯವ ಅಂಶವನ್ನು ಕೊಳೆಯಿಸುವ ಪ್ರಕ್ರಿಯೆ ನಡೆಯುವುದೇ ಈ ಮಣ್ಣಿನಲ್ಲಿರುವ ಜೀವಿಗಳಿಂದ. ಸಾವಯವ ವಸ್ತುಗಳನ್ನು ಪೋಷಕಾಂಶಗಳಾಗಿ ಪರಿವರ್ತಿಸುವ ಕಾರ್ಯವು ಈ ಸಣ್ಣಜೀವಿಗಳಿಂದಲೇ ಸಾಧ್ಯವಾಗಿದೆ.
ಹೊದಿಕೆ ಅಂಶ :- ಸೂರ್ಯನ ಬಿಸಿ ಮಣ್ಣಿಗೆ ತಾಕದಂತೆ ಮಣ್ಣ ಮೇಲೆ ಹರಡುವ ಸಾವಯವ ವಸ್ತುಗಳಾದ ಒಣಗಿದ ವಸ್ತುಗಳು, ಸಜೀವ ಹೊದಿಕೆಯ ಬೆಳೆಗಳು ಮಣ್ಣಿನಲ್ಲಿನ ತೇವಾಂಶವನ್ನು ಆವಿಯಾಗದಂತೆ ತಡೆಯುತ್ತದೆ.

ಹೀಗೆ ಮಾನವರು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯ ಮಾಡಬೇಕಾಗುತ್ತದೆ. ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಕೊಳೆತು ಮಣ್ಣಿನೊಳಗೆ ಲೀನವಾಗುತ್ತಿದೆ ಎಂದರೆ ಆ ಮಣ್ಣು ಆರೋಗ್ಯಕರವಾಗಿದೆ ಎಂದು ನಿರ್ಧರಿಸಬಹುದಾಗಿದೆ. ಹಾಗಾದರೆ ಸಾವಯವ ಪದಾರ್ಥಗಳೆಂದರೇನು ಎಂಬ ಪ್ರಶ್ನೆ ಮೂಡಬಹುದು. ಸಾವಯವ ಪದಾರ್ಥ ಎಂದರೆ ಬೇರೇನೂ ಅಲ್ಲ, ಮಣ್ಣಿನೊಳಗೆ ಮಣ್ಣಿಗೆ ಯಾವುದೇ ತೊಂದರೆಯಾಗದೆ ಕರಗುವಂತಹ, ಕೊಳೆಯುವಂತಹ ಪದಾರ್ಥಗಳಾಗಿವೆ. ಮಣ್ಣು ಇಂತಹ ಅದೆಷ್ಟೋ ಪದಾರ್ಥಗಳನ್ನು ತನ್ನೊಳಗೆ ಕರಗಿಸಿಕೊಂಡು ಬಿಟ್ಟಿದೆ. ಮಣ್ಣಿನಲ್ಲಿ ಕರಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಾಗಿ ಮಣ್ಣು ತನ್ನ ಕಾರ್ಯವನ್ನು ನಿಲ್ಲಿಸಿಬಿಟ್ಟರೆ, ಮನುಷ್ಯರು ಭೂಮಿಯನ್ನು ಊಹಿಸಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ. ಇಂತಹ ದುರಾಸೆಯ ಮನುಷ್ಯರೂ ಸಹ ಸತ್ತಾಗ ಅವರನ್ನೂ ಮಣ್ಣು ತನ್ನೊಳಗೆ ವಿಲೀನಮಾಡಿಕೊಳ್ಳುತ್ತದೆ. ಆದರೆ ಮಣ್ಣೇ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡಾಗ? ಅದು ಸತ್ತುಹೋಗುತ್ತದೆ, ತನ್ನ ಉಸಿರಾಟವನ್ನು ನಿಲ್ಲಿಸುತ್ತದೆ. ಆದ್ದರಿಂದ ಮನುಷ್ಯರಾದ ನಾವೆಲ್ಲರೂ ಆಲೋಚಿಸಿ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ, ನಾವು ಸತ್ತರೆ ಮಣ್ಣಿಗೆ, ಮಣ್ಣೇ ಸತ್ತರೆ ಎಲ್ಲಿಗೆ?… ಎಂಬುದಾಗಿ.

– ಮಂಜುನಾಥ್ ಅಮಲಗೊಂದಿ
ತುಮಕೂರು ಜಿಲ್ಲೆ

ಪರಿಸರ ಸಮಾಜಕಾರ್ಯಕರ್ತರು.
ಪರಿಸರ, ವನ್ಯಜೀವಿ ಮತ್ತು ಸುಸ್ಥಿರ ಕೃಷಿಯ ಬಗ್ಗೆ ಬರೆಯುವ ಲೇಖಕರು.
ಅಧ್ಯಕ್ಷರು, ಚಿಗುರು ಯುವಜನ ಸಂಘ, ಅಮಲಗೊಂದಿ, ಸಿರಾ ತಾ.