ಟೇಲರ್ ಬರ್ಡ್

ಟೇಲರ್ ಬರ್ಡ್

© ಶಂತನು ಕುವೆಸ್ಕರ್

ಮಗಳು ಶಾಲೆಯಿಂದ ಮನೆಗೆ ಬರುವ ಹೊತ್ತಾಗಿತ್ತು. ಮನೆಯ ಒಳಗಿನ ಕಿಟಕಿಯಿಂದ ಹೊರಗಿನ ರಸ್ತೆಯ ಕಡೆಗೆ ದೃಷ್ಟಿ ನೆಟ್ಟು, ಆಕೆಯ ಬರುವನ್ನೆ ನಿರೀಕ್ಷೆ ಮಾಡುತ್ತ ನಿಂತಿದ್ದ ನನ್ನ ಕಣ್ಣ ಮುಂದೆ ಏನೋ ಚಲಿಸಿದಂತಾಯಿತು. `ಅರೆ ಏನದು? ಚಿಟ್ಟೆನಾ?’ ಎಂಬ ಭಾವನೆ ಬಂತು. ಈಗ ಬಹಳ ಎಚ್ಚರಿಕೆಯಿಂದ ಕಿಟಕಿಯ ಹೊರಗೆ ನೋಡತೊಡಗಿದೆ. ದೊಡ್ಡ ಚಿಟ್ಟೆ ಸುಳಿದಂತಾಗಿ ಜಾಗೃತಳಾದೆ. ಮೂರನೆಯ ಬಾರಿಗೆ ದಿಟ್ಟಿಸಿದೆ. ಅದೊಂದು ಸಣ್ಣ ಗಾತ್ರದ ಹಕ್ಕಿಯಾಗಿತ್ತು.

ಆ ಹಕ್ಕಿಯನ್ನು ಹತ್ತಿರದಿಂದ ನೋಡುವ ಕುತೂಹಲದಿಂದ, ಬಾಗಿಲು ತೆರೆದು ಹೊರಗೆ ಬಂದು ನಿಂತು ನೋಡತೊಡಗಿದೆ. ಆ ಹಕ್ಕಿ, ಗಾತ್ರದಲ್ಲಿ ಗುಬ್ಬಿಗಿಂತಲೂ ಚಿಕ್ಕದಾಗಿತ್ತು. `ಹೌದಲ್ಲ… ಈ ಹಕ್ಕಿಯನ್ನು ಹೋದ ವರ್ಷವೂ ನೋಡಿದ್ದೆ’ ಎಂದು ನೆನಪಿಸಿಕೊಂಡೆ. ಆ ಹಕ್ಕಿ ನಮ್ಮ ಮನೆಯ ಕಾಂಪೌಂಡಿನಲ್ಲಿರುವ ಮರದಲ್ಲಿ ಗೂಡು ಮಾಡಿದೆ ಎಂಬುದು ನನ್ನ ಅರಿವಿಗೆ ಬಂತು. ಆಗ ನಾನು ನಿಧಾನವಾಗಿ ನಡೆದು ಅದರ ವಾಸಸ್ಥಳವನ್ನು ನೋಡಿ ಒಂದು ಕ್ಷಣ ಅವಾಕ್ಕಾದೆ. ಎಷ್ಟು ನಾಜೂಕಾಗಿ ಎಲೆಗಳಿಗೆ ಹೊಲಿಗೆ ಹಾಕಿತ್ತೆಂದರೆ ಕಸೂತಿಗಿಂತಲೂ ಸೂಕ್ಷ್ಮವಾಗಿತ್ತು.

© ಶಂತನು ಕುವೆಸ್ಕರ್

‘ಪಾಪ, ಹಕ್ಕಿ ಗೂಡು ಕಟ್ಟಿದೆ, ಅದು ಆಹಾರಕ್ಕೆ ಅಂತ ಅಲ್ಲಿ ಇಲ್ಲಿ ಯಾಕೆ ಹೋಗಬೇಕು. ನಾನೆ ಸ್ವಲ್ಪ ಕಾಳು ಚೆಲ್ಲಿ ಕುಡಿಯಲು ನೀರಿಟ್ಟರಾಯಿತು’ ಎಂದು ಯೋಚಿಸಿದೆ. ಅಕ್ಕಿ, ಬೇಳೆ-ಕಾಳು ಮಿಶ್ರಿತ ಧಾನ್ಯಗಳನ್ನು ಒಂದು ಮುಷ್ಟಿಯಲ್ಲಿ ತಂದು ಹೊರಗಿನ ಮರದ ಬುಡದಲ್ಲಿಯೇ ಚೆಲ್ಲಿದೆ. ಹಕ್ಕಿಗೆ ಉಪಕಾರವಾದೀತು ಎಂಬ ಭಾವನೆಯಿಂದ, ಮಾರನೆಯ ಬೆಳಿಗ್ಗೆ, ಕಾಳುಗಳನ್ನು ಚೆಲ್ಲಿದ ಜಾಗವನ್ನು ತವಕದಿಂದ ನೋಡಿದೆ. ಇನ್ನಷ್ಟು ಕಾಳುಗಳನ್ನು ಚೆಲ್ಲುವ ಉದ್ದೇಶದಿಂದ. ಆದರೆ, ಪಾಪ ಉಪಕಾರವಾದೀತು’ ಎಂಬ ನನ್ನ ಚಿಂತನೆಗೆ ಸವಾಲನ್ನು ಹಾಕಿತ್ತು ಆ ಹಕ್ಕಿ. ಹ್ಯಾಗೆ ಅಂತೀರಾ?’ ನಾನು ಚೆಲ್ಲಿದ ಕಾಳುಗಳಲ್ಲಿ ಅದು ಒಂದನ್ನೂ ಮುಟ್ಟಿರಲಿಲ್ಲ.

ಮೊದಲೆ ಗೊತ್ತಾದ ಹಾಗೆ ಇದು ಗುಬ್ಬಚ್ಚಿಗಿಂತಲೂ ಚಿಕ್ಕದು. ಸುಮಾರು ಐದು ಇಂಚಿನಷ್ಟು ಗಾತ್ರದ್ದು. ದೇಹದ ಮೇಲ್ಭಾಗದ ಬಣ್ಣ ತಿಳಿ ಹಳದಿ ಛಾಯೆಯ ಹಸಿರು ಎಂದು ಹೇಳಬಹುದು. ಕೆಳಭಾಗ ಬಿಳಿ, ನೆತ್ತಿ ಕಂದು, ಉದ್ದವಾದ ಮೇಲೆತ್ತಿದ ಬಾಲ ಇದಕ್ಕುಂಟು. ಅತ್ತಿಂದಿತ್ತ ಕುಪ್ಪಳಿಸುತ್ತಾ ಇರುತ್ತದೆ. ನಿಂತಕಡೆ ನಿಲ್ಲುವುದಿಲ್ಲ. ಈ ಹಕ್ಕಿಯು ಕಟ್ಟುವ ಗೂಡು ವಿಶೇಷವಾಗಿರುತ್ತದೆ. ಅದರ ಗೂಡಿನಿಂದಲೇ ಇದಕ್ಕೆ ಸಿಂಪಿಗ ಹಕ್ಕಿ ಎಂದು ಹೆಸರು ಬಂದಿದೆ ಎಂದು ಹೇಳುತ್ತಾರೆ. ಇದಕ್ಕೆ ದರ್ಜಿ ಹಕ್ಕಿ ಎಂತಲೂ ಕರೆಯುತ್ತಾರೆ. ಇದು ಗೂಡು ನಿರ್ಮಿಸಲು ಅಗಲವಾದ ಎಲೆಯನ್ನು ಆರಿಸಿಕೊಳ್ಳುತ್ತದೆ. ಅದನ್ನು ಒಂದು ರೀತಿಯಲ್ಲಿ ಪೊಟ್ಟಣದ ಆಕಾರಕ್ಕೆ ತಿರುಗಿಸಿ, ಹೊಲಿಗೆ ಹಾಕುತ್ತದೆ. ಒಂದು ವೇಳೆ ದೊಡ್ಡ ಎಲೆಯೇನಾದರೂ ಸಿಗದಿದ್ದ ಸಂದರ್ಭದಲ್ಲಿ ಎರಡು ಸಣ್ಣ ಎಲೆಗಳನ್ನು ಸೇರಿಸಿ ಗೂಡನ್ನು ನಿರ್ಮಿಸುತ್ತದೆ. ಇದು ಗೂಡನ್ನು ಹೊಲೆಯಲು ಹತ್ತಿಯ ಎಳೆಯನ್ನು ಬಳಸುತ್ತದೆ. ಒಂದು ವೇಳೆ ಸಿಗದೆ ಇದ್ದಲ್ಲಿ ಬಳ್ಳಿಯ ತೆಳುವಾದ ನಾರನ್ನು ಹೊಸೆದು ದಾರವನ್ನಾಗಿ ಸಿದ್ಧಪಡಿಸಿಕೊಳ್ಳುತ್ತದೆ. ಅದರಿಂದ ತನ್ನ ಗೂಡಿನ ಎಲೆಗಳ ಅಂಚಿಗೆ ಹೊಲಿಗೆ ಹಾಕುತ್ತದೆ. ಒಳಗೆ ಹತ್ತಿ ನಾರು ಮತ್ತು ಇತರ ಮೃದು ವಸ್ತುಗಳನ್ನು ತುಂಬಿ ಗೂಡನ್ನು ತಯಾರು ಮಾಡುತ್ತದೆ. ಹೊಲಿಗೆ ಬಿಚ್ಚಿಕೊಳ್ಳದೆ ಇರಲು ದಾರದ ತುದಿಗೆ ಗಂಟನ್ನು ಹಾಕುತ್ತದೆ. ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಸಂದರ್ಭದಲ್ಲಿ ಟುವ್ವಿ….ಟುವ್ವಿ…. ಎಂದು ಎಡಬಿಡದೆ ನಿರಂತರವಾಗಿ ಕೂಗುತ್ತಿರುತ್ತದೆ. ಕುಳಿತಲ್ಲಿ ಕೂರದೆ ಯಾವಾಗಲೂ ಚಟುವಟಿಕೆಯಿಂದಿರುವ ಈ ಹಕ್ಕಿಯ ಆಹಾರವೆಂದರೆ, ಜೇಡ, ಗೋಡೆಗೆ ಅಂಟಿ ಕುಳಿತಿರುವ ಪತಂಗ ಮತ್ತು ಹೂವು ಎಲೆಗಳ ಮೇಲಿರುವ ಸಣ್ಣ ಕೀಟಗಳು. ಇದು ಒಂಟಿಯಾಗಿ ಅಥವಾ ಜೋಡಿಯಾಗಿ ದಟ್ಟಕಾಡು, ಕುರುಚಲು ಕಾಡಿನಲ್ಲಿ ಕಾಣಸಿಗುತ್ತದೆ. ಹಳ್ಳಿಗಳ ಸುತ್ತಮುತ್ತ, ಮನೆಯ ಕೈತೋಟಗಳಲ್ಲೂ ನಿರ್ಭಯವಾಗಿ ಓಡಾಡುತ್ತದೆ. ಈ ಹಕ್ಕಿಯ ಕಂಠದಿಂದ ಹೊರಡುವ ಮಧುರವಾದ ಸ್ವರವು ಅಚ್ಚರಿಯನ್ನು ಮೂಡಿಸುತ್ತದೆ. ಇದು ಮೊಟ್ಟೆಯಿಟ್ಟು ಮರಿಮಾಡುವ ಕಾಲ ಏಪ್ರಿಲ್ ನಿಂದ ಸೆಪ್ಟೆಂಬರ್. ಈ ಹಕ್ಕಿ ನಮ್ಮ ದೇಶದಲ್ಲಷ್ಟೇ ಅಲ್ಲದೆ ನೆರೆ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್, ಬರ್ಮಾಗಳಲ್ಲಿಯೂ ಕಾಣಸಿಗುತ್ತದೆ. ಟೇಲರ್ ಬರ್ಡ್, ಸಿಂಪಿಗ ಹಕ್ಕಿ, ಚಿಪ್ಪಿಗನ ಹಕ್ಕಿ, ಟುವ್ವಿ , ದರ್ಜಿ ಹಕ್ಕಿ ಎಂತಲೂ ಕರೆಯುತ್ತಾರೆ. ಇದನ್ನು ಸಂಸ್ಕೃತದಲ್ಲಿ “ಪತ್ರಪುಟ”, “ಪುಟಿಕಾ” ಎನ್ನುತ್ತಾರೆ. ಹೀಗೆ ಹಕ್ಕಿಗಳೊಂದಿಗೆ ನಾವೂ ಕೂಡ ಹಾರಾಡುತ್ತಾ ಹೋದಂತೆಲ್ಲ, ಮೈ-ಮನಸುಗಳು ಹಗುರವಾಗಿ ಆಕಾಶದೆತ್ತರಕ್ಕೆ ಜಿಗಿಯಬೇಕೆಂಬ ಬಯಕೆ ಚಿಗುರೊಡೆಯುವುದಂತೂ ನಿಜ.

ಪ್ರೇಮಾ ಶಿವಾನಂದ
ದಾರವಾಡ ಜಿಲ್ಲೆ

Print Friendly, PDF & Email
Spread the love
error: Content is protected.