ನೀಲ್ ಗಾಯ್
ಏನಪ್ಪಾ ಇದು “ನೀಲ್ ಗಾಯ್” ಎಂದುಕೊಂಡಿದ್ದೀರಾ? ಹೌದು ಇದು ಜಿಂಕೆಯನ್ನೇ ಹೋಲುವ ಬೃಹತ್ ಗಾತ್ರದ ಪ್ರಾಣಿ. ದೇಶಿಯ ಪದ ನೀಲ್ ಗಾಯ್, ಹಿಂದಿ ಮತ್ತು ಉರ್ದು ಭಾಷೆಯ ಸಮ್ಮಿಶ್ರದಿಂದ ಬಂದಿದೆ. ಈ ಶಬ್ದವನ್ನು ಪ್ರಥಮ ಬಾರಿಗೆ 1882ರಲ್ಲಿ ಬಳಸಲಾಯಿತೆಂಬ ಉಲ್ಲೇಖವಿದೆ. ನೀಲ್ ಎಂದರೆ ನೀಲಿ ಘಾಯ್ ಎಂದರೆ ಆಕಳು ಎಂದರ್ಥ. ಇವು ಪ್ರಾದೇಶಿಕವಾಗಿ ನೀಲ್ಘೆ, ನೀಲ್ಗೌ, ನೀಲ್ಗೋ, ನೀಲ್ಗವು, ಬಿಳಿಗಾಲಿನ ಚಿಗರೆ ಎಂದೆಲ್ಲಾ ವೈವಿಧ್ಯಮಯ ಹೆಸರಿನಿಂದ ಕರೆಯಲ್ಪಡುತ್ತದೆ.
ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ 1658- 1702 ನೀಲ್ಗಾಯ್ ಗಳನ್ನು ನಿಲ್ಘೋರ್ ಎಂದು ಕರೆಯಲ್ಪಡುತ್ತಿದ್ದವು. ಇವು ಸಾಮಾನ್ಯವಾಗಿ ನೋಡಲು ಕುದುರೆಗಳಂತೆ ಬಲಿಷ್ಠವಾಗಿದ್ದು ಕಾಲಿನಿಂದ ಭುಜದವರೆಗೆ 3.5 ರಿಂದ 5 ಅಡಿಗಳಷ್ಟು ಎತ್ತರವಿರುತ್ತವೆ. ಸುಮಾರು 100ರಿಂದ 290 ಕೆಜಿ ತುಕವಿದ್ದು, ಹಿಂಬದಿ ಇಳಿಜಾರಾದ ಬೆನ್ನನ್ನು ಹೊಂದಿವೆ. ಉದ್ದನೆಯ ಕತ್ತಿನೊಂದಿಗೆ ಗಂಟಲಿನ ಅಡಿಯಲ್ಲಿ ಬಿಳಿಬಣ್ಣದ ಕೂದಲನ್ನ ಹೊಂದಿರುತ್ತವೆ. ಮುಖದಲ್ಲಿ ಬಿಳಿಬಣ್ಣದ ಮಚ್ಚೆಗಳಿದ್ದು ಕೂದಲು ಜುಟ್ಟಿನಂತಿರುತ್ತವೆ, ಕೇವಲ ಗಂಡು ನೀಲ್ಗಾಯ್ ಗಳಿಗೆ ಹೀಗೆ ಕೂದಲಿದ್ದು ಹೆಣ್ಣು ನೀಲ್ಗಾಯ್ ಗಳಿಗೆ ಕೂದಲು ಇರುವುದಿಲ್ಲ. ಈ ಪ್ರಾಣಿಗಳು 3 ರೀತಿಯ ಗುಂಪುಗಳಲ್ಲಿ ವಾಸಿಸುತ್ತವೆ. ಒಂದರಿಂದ ಎರಡು ಹೆಣ್ಣು ನೀಲ್ಗಾಯ್ ಗಳು ಸಣ್ಣ ಸಣ್ಣ ಮರಿಗಳೊಂದಿಗೆ ವಾಸಿಸಿದರೆ, ಎರಡನೆಯ ಗುಂಪಿನಲ್ಲಿ ಕೇವಲ ಗಂಡು ನೀಲ್ಗಾಯ್ ಗಳು ವಾಸಿಸುತ್ತವೆ. ಮೂರನೆಯ ಗುಂಪಿನಲ್ಲಿ ಗಂಡು ಮತ್ತು ಹೆಣ್ಣು ನೀಲ್ಗಾಯ್ ಗಳು ತಮ್ಮ ಮರಿಗಳೊಂದಿಗೆ ವಾಸಿಸುತ್ತವೆ.ಗುಣದಲ್ಲಿ ತೀರಾ ಅಂಜುಬುರಕ ಪ್ರಾಣಿಯಾಗಿದ್ದು ಸಾಮಾನ್ಯವಾಗಿ ಅಡಚಣೆಗಳಿಂದ ದೂರವಿರಲು ಬಯಸುತ್ತವೆ.
ಜರ್ಮನ್ ನ ಪ್ರಸಿದ್ದ ಪ್ರಾಣಿಶಾಸ್ತ್ರಜ್ಞರಾದ ಪೀಟರ್ ಸಿಮನ್ ಪಾಲ್ಡಾಸೌ ಈ ನೀಲ್ಗಾಯ್ ನ ವೈಜ್ಞಾನಿಕ ಹೆಸರು “ಬೊಸೆಲಫುಸ್ ಟ್ರಗಕ್ಯಾಮೆಲಸ್” ಎಂದು ಇಟ್ಟರಂದು ಹೇಳಲಾಗುತ್ತದೆ. “ಬೊಸೆಲಫುಸ್” ಶಬ್ದವು ಲ್ಯಾಟನ್ ಭಾಷೆಯಿಂದ ಬಂದಿದ್ದು ಬೊಸ್ ಎಂದರೆ “ಹಸು” ಎಂದು, ಹಾಗೂ ಗ್ರೀಕ್ ಭಾಷೆಯಿಂದ ಬಂದ ಎಲಫೊಸ್ ಎಂದರೆ ಚಿಗರೆ ಅಥವಾ ಜಿಂಕೆ ಇದರರ್ಥ.
ನಿಲ್ಗಾಯ್ ಏಷ್ಯಾ ಖಂಡದಲ್ಲೇ ಅಂತ್ಯಂತ ದೊಡ್ಡ ಗಾತ್ರದ ಚಿಗರೆಗಳೆಂದು ಹೇಳಲಾಗಿದೆ. ನೀಲ್ಗಾಯ್ ಗಳು ಸಸ್ಯಾಹಾರಿಗಳಾಗಿದ್ದು. ಹುಲುಸಾದ ಹುಲ್ಲನ್ನು ಮತ್ತು ಚಿಗುರಿದ ಗಿಡಮೂಲಿಕೆ ಜಾತಿಯ ಸಸ್ಯಗಳನ್ನು ಬಹುವಾಗಿ ಇಷ್ಟಪಡುತ್ತವೆ, ಭಾರತದ ಉಷ್ಣವಲಯ ಪ್ರದೇಶದಲ್ಲಿ ವಾಸಿಸುವ ನೀಲ್ಗಾಯ್ಗಳು ದಟ್ಟಾರಣ್ಯದ ಸೊಪ್ಪನ್ನು ತಿಂದು ಬದುಕುತ್ತವೆ. ಸುಮಾರು ಎರಡರಿಂದ ನಾಲ್ಕು ವರ್ಷಕ್ಕೆ ಪ್ರೌಢಾವಸ್ಥೆಗೆ ಬರುವ ಇವುಗಳು, ಮಿಲನದ ಅವಧಿಯಲ್ಲಿ ಜೋಡಿಗಳು ಗುಂಪಿನಿಂದ ದೂರ ಉಳಿಯುತ್ತವೆ. ಎಂಟರಿಂದ ಒಂಬತ್ತು ತಿಂಗಳು ಗರ್ಭಾವಸ್ಥೆಯನ್ನು ಹೊಂದಿದ್ದು, ಒಮ್ಮೆ ಒಂದು ಅಥವ ಅಪರೂಪಕ್ಕೆ ಎರಡರಿಂದ ಮೂರು ಮರಿಗಳಿಗೆ ಜನ್ಮನೀಡುತ್ತವೆ. ಮರಿಗಳನ್ನು ಹಲವು ವಾರಗಳಕಾಲ ಗುಪ್ತವಾಗಿಯೇ ಬೆಳೆಸುತ್ತವೆ ಹಾಗು ಇವುಗಳ ಜೀವಿತಾವಧಿ ಸುಮಾರು ಹತ್ತು ವರ್ಷಗಳು.
ಹೆಚ್ಚಾಗಿ ಕುರುಚಲು ಕಾಡು ವಿಶಾಲ ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ. ಉತ್ತರಭಾರತದ ಹಿಮಾಲಯದ ತಪ್ಪಲಿನಲ್ಲಿ ಇವುಗಳ ಸಂತತಿಯನ್ನು ಹೆಚ್ಚಾಗಿ ಕಾಣಬಹುದು. ಪಾಕಿಸ್ಥಾನ, ನೇಪಾಳದಲ್ಲಿ ಇವುಗಳ ಸಂತತಿ ವಿರಳವಾಗಿದ್ದು, ಇವುಗಳ ಸಂತತಿ ಬಾ0ಗ್ಲಾದೇಶದಲ್ಲಿ ಸಂಪೂರ್ಣವಾಗಿ ನಶಿಸಿಹೋಗಿದೆ ಎಂದು ಹೇಳಲಾಗಿದೆ. ಗಾತ್ರ ಮತ್ತು ಬಣ್ಣಗಳಿಂದ ಗಂಡು ಮತ್ತು ಹೆಣ್ಣು ನೀಲ್ಗಾಯ್ ಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಒಂದು ಅಧ್ಯಯನದ ಪ್ರಕಾರ ನೀಲ್ಗಾಯ್ ಗಳು ಪ್ರಥಮವಾಗಿ 1920 ರ ದಶಕದಲ್ಲಿ ಅಮೆರಿಕಾದ ಟೆಕ್ಸಾಸ್ ಕಾಡುಗಳಲ್ಲಿ ಕಂಡುಬಂದಿದ್ದು 2001ರ ವೇಳೆಗೆ ಇವುಗಳ ಸಂಖ್ಯೆ 37000 ಇದ್ದವು ಎಂದು ಅಂಕಿ ಅಂಶ ಹೇಳುತ್ತವೆ. ಇವುಗಳು ನೋಡಲು ಹಸುವಿನಂತೆ ಕಾಣುವುದರಿಂದ ನಮ್ಮ ದೇಶದಲ್ಲಿ ಹಸುಗಳನ್ನ ಪೂಜ್ಯನೀಯ ಭಾವನೆಯಿಂದ ನೋಡುತ್ತರಾದರೂ ಉತ್ತರ ಭಾರತ ಕೆಲವೊಂದು ರಾಜ್ಯಗಳಲ್ಲಿ ವಿಶೇಷವಾಗಿ ಬಿಹಾರದಲ್ಲಿ ಇವುಗಳನ್ನ ರೈತ ಪೀಡಕನೆಂದು ಕರೆಯುವುದುಂಟು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ನೀಲ್ಗಾಯ್ ಒಂದನ್ನ ಜೀವಂತ ಗುಂಡಿಯಲ್ಲಿ ಮುಚ್ಚುವ ವಿಡಿಯೋ ಒಂದು ಹರಿದಾಡುತ್ತಿದ್ದದ್ದು ವಿಷಾದನೀಯ.
ಇಂದು ಮಾನವನ ಅತಿರೇಕದ ಮೋಜು ಹಾಗೂ ಬೇಟೆ, ಅರಣ್ಯನಾಶ ಮೊದಲಾದ ಕಾರಣದಿಂದಾಗಿ ಇವುಗಳ ಸಂತತಿ ಕ್ಷೀಣಿಸುತ್ತಿರುವುದು ವಿಷಾದನೀಯ. ಹಾಗಾಗಿ ನಮ್ಮ ದೇಶದಲ್ಲಿ ಇವುಗಳನ್ನ ಸಂರಕ್ಷಿತ ಪ್ರಾಣಿ ಎಂದು ಘೋಷಿಸಲಾಗಿದೆ. ಉತ್ತರ ಭಾರತದ ಘಿರ್, ಬಂದಾವ್ ಘರ್, ಸತ್ಪುರ, ತಡೋಬಾ, ರಣ್ತ0ಬುರ್, ರಾಷ್ಟ್ರೀಯ ಉದ್ಯಾನವನ ಹಾಗೂ ಬೋರಿ, ಕುಂಬಾಲ್ಘರ್, ವನ್ಯಜೀವಿ ರಕ್ಷಿತಾರಣ್ಯಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ಸದಾ ಜಾಗೃತವಾಗಿರುವ ಇವು ಅಪಾಯದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಸುಮಾರು ಎತ್ತರಕ್ಕೆ ಜಿಗಿದು ವೇಗವಾಗಿ ಓಡುವ ಸಾಮರ್ಥ್ಯವನ್ನು ಹೊಂದಿವೆ ಹಾಗೂ ಹುಲಿ ಸಿಂಹ ಮೊದಲಾದ ಪ್ರಾಣಿಗಳು ಬೇಟೆಯಾಡಲು ಯತ್ನಿಸಿದಾಗ ವಿಶಿಷ್ಟವಾಗಿ ಕೂಗುವ ಮೂಲಕ ತನ್ನ ಜೊತೆಗಾರರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡುತ್ತವೆ. ಇವುಗಳಲ್ಲಿ ಗಂಡು ಮತ್ತು ಹೆಣ್ಣುಗಳು ಕಾದಾಡುವುದು ಸಾಮಾನ್ಯವಾಗಿದ್ದು ಕಾದಾಟದ ಸಮಯದಲ್ಲಿ ತಮ್ಮ ಕತ್ತನ್ನು ಎರಡೂ ದಿಕ್ಕಿನಲ್ಲಿ ಹೊಯ್ದಾಡುವ ಮೂಲಕ ಎದುರಾಳಿಯ ಮೇಲೆ ದಾಳಿ ನಡೆಸುತ್ತವೆ, ಕಾದಾಟದಲ್ಲಿ ಚರ್ಮ ಸಿಗಿದು ರಕ್ತಸ್ರಾವವಾಗುವವರೆಗೂ ಛಲದಂಕ ಮಲ್ಲರಂತೆ ಕಾದಾಡುವ ಛಾತಿಯನ್ನು ಹೊಂದಿವೆ.
ದೇಶದ ಅತ್ಯಂತ ವಿರಳ ಪ್ರಾಣಿಗಳ ಸಾಲಿನಲ್ಲಿ ನೀಲ್ಗಾಯ್ ಕೂಡ ಒಂದು. ಇವುಗಳ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಹಾಗೂ ಸರ್ಕಾರದ ಆದ್ಯ ಕರ್ತವ್ಯ, ಅರಣ್ಯದ ತಪ್ಪಲಿನಲ್ಲಿ ವಾಸಿಸುವ ರೈತರು, ಹಾಗು ಜನಸಾಮಾನ್ಯರು ವಿಶೇಷವಾಗಿ ಈ ಪ್ರಾಣಿಗಳ ಸಂರಕ್ಷಣೆಗೆ ಸಂಕಲ್ಪವನ್ನ ಮಾಡಿದಾಗ ಮಾತ್ರ ನೀಲ್ಗಾಯ್ ಗಳ ಸಂತತಿಯನ್ನು ಮುಂದಿನ ದಿನಗಳಲ್ಲಿ ಯತೇಚ್ಛವಾಗಿ ಕಾಣಬಹುದಾಗಿದೆ.
ಚಿತ್ರ – ಲೇಖನ: ಸಂತೋಷ್ ರಾವ್ ಪೆರ್ಮುಡ
ದಕ್ಷಿಣ ಕನ್ನಡ ಜಿಲ್ಲೆ
ಉದ್ಯೋಗ: ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು.
ಹವ್ಯಾಸಗಳು: ಚಾರಣ, ಬರವಣಿಗೆ, ಗಾರ್ಡನಿಂಗ್, ಹಾಡು ಮತ್ತು ಚಿತ್ರಕಲೆ, ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ.
ಬರಹಗಳು: ರಾಜ್ಯಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಬರವಣಿಗೆಗಳು ಪ್ರಕಟಗೊಂಡಿವೆ.
ಪ್ರಕಟಣೆಗಳು: ಪರ್ಯಟನೆ. ದಿಕ್ಸೂಚಿ ಮತ್ತು ಪರಿಭ್ರಮಣ ಪುಸ್ತಕಗಳ ಪ್ರಕಟಣೆ, ಪರಿವರ್ತನಾ ಎಂಬ ಸ್ವಂತ ಜಾಲತಾಣಪುಟದಲ್ಲಿ 350ಕ್ಕೂ ಮಿಕ್ಕಿದ ಸಂಚಿಕೆಗಳ ಪ್ರಕಟಣೆ.