ಪಕ್ಷಿ ಗೂಡಿನ ಅಣಬೆ

ಪಕ್ಷಿ ಗೂಡಿನ ಅಣಬೆ

ಮ್ಯಾಕ್ರೊ ಫೋಟೋಗ್ರಫಿಗಾಗಿ ಶಿವಣ್ಣ ಕಲ್ಲಜ್ಜನವರ ಹೊಲದ ಎತ್ತರದ ಬದುವನ್ನು ಹತ್ತಲು ಹರಸಾಹಸ ಪಟ್ಟು ಪ್ರಯಾಸದಿಂದ ಬದುವನ್ನು ಹತ್ತಿ ಇನ್ನೇನು ಆಕಡೆ ಇರುವ ನಮ್ಮ ಹೊಲಕ್ಕೆ ಇಳಿಯಬೇಕೆನ್ನುವಷ್ಟರಲ್ಲಿ ಮಣ್ಣಿನ ಹೆಂಟೆಯ ಮೇಲೆ ಇದ್ದ ಸಣ್ಣ ಹಕ್ಕಿಗೂಡಿನಂಥದ್ದು ಗಮನ ಸೆಳೆಯಿತು, ಹತ್ತಿರ ಹೋಗಿ ನೋಡಿದೆ. ಅದೊಂದು ಶಿಲೀಂಧ್ರವೆಂದು ಗೊತ್ತಾಯಿತು. ನಾನು ಕಷ್ಟಪಟ್ಟು ಫೋಟೋಗ್ರಫಿ ಮಾಡುತ್ತಿದ್ದುದನ್ನು ನೋಡಿದ ಅಲ್ಲೇ ಹತ್ತಿರದಲ್ಲಿ ಹೊಲ ಉಳುತ್ತಿದ್ದ ಕಲ್ಲಾಪುರ ಹನುಮಂತಣ್ಣ ಅಲ್ಲಿಗೆ ಬಂದು “ಏನ್ರಿ ಸ್ವಾಮ್ಯಾರ ಅದು” ಅಂದ. ಅವನಿಗೆ ಅಲ್ಲಿರುವ ಹಕ್ಕಿಗೂಡು ತೋರಿಸಿದೆ. ಅದಕ್ಕೆ ಹನುಮಂತಣ್ಣ, ಇಂತಾ ಸಣ್ಣ್ ಗೂಡಗಿಡಾ ನೋಡೆಯಿಲ್ಲ ಈ ವರ್ಷ ಮಳೆ ಬಾಳಾ ಸುರಿದು ಪಿಕ್ಕು ಹಾಳಾಗಿ ಹೋಗ್ಯಾವ. ಮಳೆ ಬಾಳಾ ಆಯ್ತಲ್ಲಾ ಅದ್ಕ ಇಂತ ಗಿಡಾ ಹುಟ್ಯಾವ ನೋಡ್ರಿ. ಅವ ಹೇಳಿದ್ರಾಗ ಖರೆ ಐತಿ ಅಂತಾ ನನಗೂ ಅನಿಸ್ತು. ಕೊಳೆತ ವಸ್ತುಗಳ ಮೇಲೆ ಶಿಲೀಂಧ್ರಗಳು ಬೆಳೆಯುವ ಗುಣಧರ್ಮ ರೂಢಿಸಿಕೊಂಡಿವೆ. ಅದರ ಫೋಟೊಗಳನ್ನು ವಿವಿಧ ಕೋನಗಳಲ್ಲಿ ಕ್ಲಿಕ್ಕಿಸಿಕೊಂಡೆ.

ಇಳಿಜಾರಿನ ಬದುವನ್ನು ಇಳಿದು ಮ್ಯಾಕ್ರೊ ಫೋಟೊಗ್ರಫಿಗಾಗಿ ನಡೆದೆ. ತಲ್ಯಾಗ ಆ ಶಿಲೀಂಧ್ರದ ಹುಳ ಬಿಟ್ಕೊಂಡು ಮುಂದೆ ಹೋಗೋದು ಹೇಗೆ ಸಾಧ್ಯ. ಮನೆಗೆ ಮರಳಿ ಬಂದು ನನಗೆ ಕಾಲೇಜಿನಲ್ಲಿ ಸಸ್ಯಗಳ ಉಪನ್ಯಾಸಕರಾಗಿದ್ದ ಚೂಡಾಮಣಿ ಮೆಡಮ್‌ ರಿಗೆ ನಾಲ್ಕು ಇಮೇಜ್ ಪ್ರೊಸಸ್ ಮಾಡಿ ವಾಟ್ಸ್ಆ್ಯಪ್‌ಗೆ ಹಾಕಿ ಅದರ ಹೆಸರು ತಿಳಿಸುವಂತೆ ಕೇಳಿಕೊಂಡೆ. ಅದನ್ನು ಗುರುತಿಸಿ ಅವರು ತಕ್ಷಣವೇ ಇದು Bird’s Nest Fungi ಅಂದರೆ ಹಕ್ಕಿ ಗೂಡಿನ ಶಿಲೀಂಧ್ರ ಎಂದು ತಿಳಿಸಿದರು.

©ಶಶಿಧರಸ್ವಾಮಿ ಆರ್ ಹಿರೇಮಠ

ಹೌದು ಕಾಲೇಜು ದಿನಗಳಲ್ಲಿ ಅಧ್ಯಯನ ಮಾಡುವಾಗ ಈ ಬಗ್ಗೆ ಓದಿದ ನೆನಪು. ಮೊಟ್ಟೆಗಳಿಂದ ತುಂಬಿದ ಸಣ್ಣ ಪಕ್ಷಿಗಳ ಗೂಡನ್ನು ಹೋಲುವುದರಿಂದ ಇವಕ್ಕೆ ಪಕ್ಷಿ ಗೂಡಿನ ಶಿಲೀಂಧ್ರ ಎಂದು ಕರೆಯಲಾಗುತ್ತದೆ. “ಮೊಟ್ಟೆಗಳಿಂದ” ತುಂಬಿದ ಸಣ್ಣ ಪಕ್ಷಿಗಳ ಗೂಡುಗಳನ್ನು ಹೋಲುವುದರಿಂದ ಈ ಹೆಸರು ಬಂದಿದೆ. ನಮ್ಮೂರಾಗ ಇವಕ್ಕೆ ಚಿಕ್ಕಣಬೆ ಎಂದು ಕರೆಯುತ್ತಾರೆ. ಮೊಟ್ಟೆಗಳನ್ನು ಪೆರಿಡಿಯೋಲ್ಸ್ ಎನ್ನುವರು. ಈ ಮೊಟ್ಟೆಗಳು ಬೀಜಕಗಳನ್ನು ಹೊಂದಿರುವ ಸಂತಾನೋತ್ಪತ್ತಿ ರಚನೆಗಳಾಗಿವೆ. ಈ ಮೊಟ್ಟೆಗಳ ಒಳ ಮೇಲ್ಮೈಗೆ ಫ್ಯೂನಿಕುಲಸ್ ಎಂದು ಕರೆಯಲ್ಪಡುವ ಕವಕ ಜಾಲಗಳು ಸ್ಥಿತಿಸ್ಥಾಪಕದಿಂದ ಸಧೃಡವಾಗಿ ಜೋಡಿಸಲ್ಪಟ್ಟಿವೆ. ಸ್ಥಿತಿಸ್ಥಾಪಕಗಳು  4 ರಿಂದ 8 ಮಿಮೀ ಅಗಲ ಮತ್ತು 7 ರಿಂದ 18 ಮಿಮೀ ಎತ್ತರದಷ್ಟು  ಚಿಕ್ಕ ಗಾತ್ರಗಳಲ್ಲಿವೆ. ಕಂದು ಬಣ್ಣದಿಂದ ಬೂದು-ಕಂದು ಬಣ್ಣದಲ್ಲಿರುತ್ತವೆ ಮತ್ತು ಹೊರಗಿನ ಮೇಲ್ಮೈಯಲ್ಲಿ ಕೂದಲಿನಂತಹ ನಾರಿನ ಸಣ್ಣ ರಚನೆಗಳಿವೆ.

©ಶಶಿಧರಸ್ವಾಮಿ ಆರ್ ಹಿರೇಮಠ

ಇವು ಸಾಮಾನ್ಯವಾಗಿ ಕೊಳೆಯುತ್ತಿರುವ ಮರ ಅಥವಾ ಮರದ ಅವಶೇಷಗಳ ಮೇಲೆ, ಹಸುಗಳ ಸಗಣಿ ಮತ್ತು ಕುದುರೆಗಳ ಲದ್ದಿಯ ಮೇಲೆ ಅಥವಾ ತೇವಾಂಶಯುಕ್ತ ಮಣ್ಣಿನಲ್ಲಿ ಬೆಳೆಯುತ್ತವೆ. ಇವುಗಳು ಲೈಂಗಿಕವಾಗಿ ಅರೆವಿದಳನ (ಮಿಯೋಸಿಸ್) ರೀತಿಯಿಂದ ಹಾಗೂ ಬೀಜಕಗಳ (ಸ್ಪೊರ್) ಮೂಲಕ ಅಲೈಂಗಿಕವಾಗಿ ಸಂತಾನೋತ್ಪತ್ತಿ ನಡೆಸುತ್ತವೆ.

ಇವು ಕೊಳೆಯುತ್ತಿರುವ ಪದಾರ್ಥಗಳಿಂದ ಸಾವಯವ ಪೋಷಕಾಂಶಗಳನ್ನು ಪಡೆದು ಬೆಳೆಯುತ್ತವೆ. ಇವು ವಿಷಯುಕ್ತವಾಗಿದ್ದು ತಿನ್ನಲು ಯೋಗ್ಯವಲ್ಲದ ಅಣಬೆಗಳಾಗಿವೆ. ಹಲವಾರು ಸೈಥಸ್ ಪ್ರಭೇದಗಳು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಉತ್ಪಾದಿಸುವುದರಿಂದ ಔಷಧೀಯ ಗುಣಗಳನ್ನು ಹೊಂದಿವೆ. ಕೆಲ ಪ್ರಭೇದಗಳಿಂದ ಕೋಶಭಿತ್ತಿಗೆ ನಾರುಸ್ವರೂಪ ನೀಡಲು ಕಾರಣವಾದ ಸೆಲ್ಯುಲೋಸ್‌ನಂಥ ಒಂದು ಪಾಲಿಮರ್ ಸಂಯುಕ್ತವಾದ ಲಿಗ್ನಿನ್ ಎಂಬ ಕಿಣ್ವಗಳಿಂದ ಜೈವಿಕ ಪರಿಹಾರ (ಬಯೋರೆಮಿಡಿಯೇಶನ್) ವಾಗಿ ಕೃಷಿಯಲ್ಲಿ ಉಪಯೋಗಿಸಲ್ಪಡುತ್ತದೆ.

ಸೈಥಸ್ ಪ್ರಭೇದಗಳನ್ನು “ನಿಡುಲಾರೇಶಿಯ” ಕುಟುಂಬಕ್ಕೆ ಸೇರಿಸಲಾಗಿದೆ. ಪ್ರಪಂಚದಾದ್ಯಂತ 45 ಪ್ರಭೇದಗಳ ಹಕ್ಕಿ ಗೂಡಿನ ಶಿಲೀಂಧ್ರಗಳು ಕಾಣಸಿಗುತ್ತದೆ. ಈ ಸೈಥಸ್ ಶಿಲೀಂಧ್ರಗಳನ್ನು ಫ್ಲೆಮಿಶ್ ಸಸ್ಯವಿಜ್ಞಾನಿ ಕರೋಲಸ್ ಕ್ಲೂಸಿಯಸ್ ಅವರು ರರಿಯೊರಮ್ ಪ್ಲಾಂಟಾರಮ್ ಹಿಸ್ಟೋರಿಯಾದಲ್ಲಿ 1601 ರಲ್ಲಿ ಪ್ರಪ್ರಥಮವಾಗಿ ಗುರುತಿಸಿದರು. ಯುರೋಪಿನಲ್ಲಿ ಸೈಥಸ್ ಸ್ಟೆರ್ಕೊರಿಯಸ್ ಎಂಬ ಹಕ್ಕಿ ಗೂಡಿನ ಶಿಲೀಂಧ್ರವು ವಿನಾಶದ ಅಂಚಿನಲ್ಲಿದೆ.

©ಶಶಿಧರಸ್ವಾಮಿ ಆರ್ ಹಿರೇಮಠ

– ಲೇಖನ ಮತ್ತು ಛಾಯಾಚಿತ್ರ: ಶಶಿಧರಸ್ವಾಮಿ ಆರ್ ಹಿರೇಮಠ
ಹಾವೇರಿ

Print Friendly, PDF & Email
Spread the love
error: Content is protected.