ತಿಮಿಂಗಿಲಗಳ ಪಿಸುಮಾತು

ತಿಮಿಂಗಿಲಗಳ ಪಿಸುಮಾತು

ಈಗಿರುವ ಹಾಗೆ ನಮ್ಮ ಚಿಕ್ಕಂದಿನಲ್ಲಿ, ಮನೆಯ ಒಂದೇ ಜಾಗದಲ್ಲಿ ಕೂತು ಒಬ್ಬರೇ ಆಡುವ ಆಟಗಳು ಯಾವುದೂ ಇರಲಿಲ್ಲ. ಆಟ ಎಂದರೆ ಸುತ್ತ ಮುತ್ತಲಿನ ಅಥವಾ ನಮ್ಮ ಬೀದಿಯ ಮಕ್ಕಳೆಲ್ಲಾ ಸೇರಿ ಆಡುವಂತಿತ್ತು. ಆದರೆ ಈಗ ಅತೀ ಚಿಕ್ಕ ವಯಸ್ಸಿನ ಮಕ್ಕಳೆಲ್ಲಾ ಫೋನ್ ಹಿಡಿದು ಒಂದು ಕಡೆ ಕೂತು ಬಿಟ್ಟರೆ ಮುಗಿಯಿತು. ಅವರ ಅಪ್ಪ ಅಮ್ಮ ಬಂದರೂ ಅಲುಗಾಡುವುದಿಲ್ಲ. ಇದರಿಂದ ನಷ್ಟವೇ ಹೆಚ್ಚು. ಇದರಿಂದ ಮಕ್ಕಳು ಇನ್ನೊಬ್ಬರ ಜೊತೆ ಬೆರೆಯುವ, ಪೋಷಕರೊಂದಿಗೆ ಸಂವಾದಿಸುವ, ಅಜ್ಜಿಯ ಕಥೆ ಕೇಳುವ, ಮಣ್ಣಿನಲ್ಲಿ ಬಿದ್ದು-ಏಳುವ, ಇನ್ನು ಹತ್ತು ಹಲವು ಜ್ಞಾನದ ಅನುಭವಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ದುರ್ದೈವ ಎಂದರೆ ಇದನ್ನು ಅರಿಯದ ಪೋಷಕರು ತಮ್ಮ ಮಗು ಫೋನಿನ ಲಾಕ್ ಅನ್ನು ತಾನಾಗಿಯೇ ತೆಗೆಯುತ್ತದೆ, ಬೇಕಾದುದನ್ನು ತಾನೆ ಹಾಕಿಕೊಳ್ಳುತ್ತದೆ ಎಂದು ಬೀಗಿಕೊಳ್ಳುತ್ತಾರೆ. ಅದಿರಲಿ ಬಿಡಿ ಅದು ಅವರವರ ವೈಯಕ್ತಿಕ ವಿಷಯ. ಹೇಳುವುದು ಧರ್ಮವೆಂದೆನಿಸಿ ಹೇಳಿದೆ. ವಾಪಾಸು ನಮ್ಮ ಚಿಕ್ಕಂದಿಗೆ ಹೊರಟರೆ ನಾವು ಆಡುತ್ತಿದ್ದ ಆ ಕಣ್ಣಾಮುಚ್ಚಾಲೆ ಆಟವನ್ನು ಒಮ್ಮೆ ನೆನಪಿಸಿಕೊಳ್ಳಿ, ಆಹ್ ಎಂತ ಚಂದ. ಹತ್ತು ಹಲವು ಮಕ್ಕಳು ಸೇರಿ ಕಣ್ಣಾ ಮುಚ್ಚೇ… ಕಾಡೇ ಗೂಡೇ… ಹೇಳಿ ಅವಿತುಕೊಂಡು, ಪಕ್ಕ ಪಕ್ಕ ಇದ್ದವರು ಪಿಸುಮಾತಿನಲ್ಲೇ ಮಾತನಾಡಿಕೊಂಡು, ಪ್ಲಾನ್ ಮಾಡಿ ಔಟ್ ಮಾಡುತ್ತಿದ್ದುದು… ಅಂದಿನ ಆಟಗಳಲ್ಲಿದ್ದ ಮಜಾ ಈಗಿನ ಪಬ್ ಜಿ ಎಂಬ ಹುಚ್ಚಾಟವೂ ನೀಡುವುದಿಲ್ಲ. ಏನನ್ನುತ್ತೀರಿ? ಇಂತಹ ಅನುಭವಗಳ  ಹೊಂದಿದ ಪೋಷಕರು ನೀವು, ನಿಮ್ಮ ಮಕ್ಕಳಿಗೆ ಈ ಫೋನಿನ ಹುಚ್ಚು ಆಟಗಳ ಮೊರೆ ಹೋಗಲು ಬಿಡುವುದು ಎಷ್ಟರಮಟ್ಟಿಗೆ ನ್ಯಾಯ?

ಮಗು ಮೊಬೈಲ್ ಕೇಳಿದಾಗ ತಾಯಿ ಪಿಸುಮಾತಿನಲ್ಲೇ ಸಮಾಧಾನಪಡಿಸಿ ಬೆರೆತು ಆಡುವ ಆಟಗಳ ಆಡಿಸುವುದೇ ಉತ್ತಮ. ಏಕೆಂದರೆ ಅದರಿಂದಲೇ ಮಕ್ಕಳ ಕಲಿಕೆ ಜಾಸ್ತಿ. ನಾವು ”ಬೇಡ” ಎಂದರೂ ಮಕ್ಕಳು ಬೆಳೆದಂತೆ ಮೊಬೈಲ್ ಅನ್ನು ಬಳಸಲು ಕಲಿತೇ ಕಲಿಯುವರು ಅಲ್ಲವೇ? ಹಾಗಾದರೆ ನನ್ನದೊಂದು ಪ್ರಶ್ನೆ.  ನಮ್ಮ ತಾಯಂದಿರ ಈ ಆರೈಕೆ, ಪಾಲನೆ-ಪೋಷಣೆ ಮನುಷ್ಯರಲ್ಲಿ ಮಾತ್ರವೋ ಅಥವಾ ಪ್ರಾಣಿ-ಪಕ್ಷಿಗಳಲ್ಲೂ ಇವೆಯೋ? ಖಂಡಿತಾ ಇವೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಆಹಾರ ಉಣಿಸುವ ಹಕ್ಕಿಗಳ ನೋಡಿ, ಸದಾ ತಾಯಿಯ ಜೊತೆಗೇ ಇರುವ ಆನೆಯ ಮರಿ ಹಾಗು ತಾಯಿ ಮರಿಗೆ ಸ್ನಾನ ಮಾಡಿಸುವ ಪರಿ… ಕಂಡವರೇ ಪುಣ್ಯವಂತರು. ಹಾಗೆಯೇ ಆಪತ್ಕಾಲದಲ್ಲಿ ತಾಯಿಯ ರಕ್ಷಣಾ ಪ್ರತಿಕ್ರಿಯೆಗಳು . ಇದು ಕೇವಲ ಭೂ-ಪ್ರದೇಶದ ಪ್ರಾಣಿಗಳಿಗೆ ಮೀಸಲಿರದೇ, ಸಮುದ್ರದಲ್ಲಿ ವಾಸಿಸುವ ಸಣ್ಣ ಸಣ್ಣ ಮೀನುಗಳಿಂದ ಹಿಡಿದು ದೊಡ್ಡ ದೊಡ್ಡ ತಿಮಿಂಗಿಲಗಳ ವರೆಗೂ ಇದೇ ನಡವಳಿಕೆಯನ್ನು  ನೋಡಬಹುದು. ಆದರೇ… ಸಂಶೋಧನೆಯೊಂದು ತಾಯಿ ತಿಮಿಂಗಿಲದ ಇನ್ನೊಂದು ಹೊಸ ನಡವಳಿಕೆಯನ್ನು ಅನಾವರಣಗೊಳಿಸಿದೆ.

ತಿಮಿಂಗಿಲಗಳು ಸಮುದ್ರದ ಆಳದಲ್ಲಿ ಶಬ್ಢ ಮಾಡಿ ಸಂವಹಿಸುತ್ತವೆ. ಇದೇನು ಹೊಸತೇನಲ್ಲ ಹೀಗೆ ಡಾಲ್ಫಿನ್ ಗಳು ಸಹ ಸಂವಹಿಸುತ್ತವೆ. ಆದರೇ ತಿಮಿಂಗಿಲಗಳು ಮಾಡುವ ಶಬ್ಢಗಳು ಸ್ವಲ್ಪ ಜೋರಾಗಿದ್ದು ಹೆಚ್ಚು ದೂರದವರೆಗೆ ಕ್ರಮಿಸುತ್ತವೆ ಎಂದು ಈ ವರೆಗೆ ನಾವು ತಿಳಿದದ್ದು. ಆದರೆ ಈಗ ಹೊರಬಂದ ತಾಜಾ ಸುದ್ದಿಯೆಂದರೆ ಅದೇ ತಿಮಿಂಗಿಲಗಳು ಪಕ್ಕದಲ್ಲೇ ಇರುವ ತಮ್ಮ ಮರಿಗಳ ಜೊತೆಗೆ ಮಾತನಾಡಲು, ಅಪಾಯದ ಸಮಯದಲ್ಲಿ ಎಚ್ಚರಿಸಲು ಪಿಸುಮಾತಿನಲ್ಲಿ ಮಾತನಾಡುತ್ತವೆಯಂತೇ…!

ಓರ್ಕಾ ಎಂಬುದು ಡಾಲ್ಫಿನ್ ಗಳ ಒಂದು ಪ್ರಭೇದದ ಹೆಸರು. ಇವುಗಳು ಗುಂಪಿನಲ್ಲಿ ಸೇರಿ ಬೇಟೆಯಾಡಿದರೆ ದೊಡ್ಡ ಗಾತ್ರದ ಜಲವಾಸಿಗಳಾದ ತಿಮಿಂಗಿಲಗಳ ಮರಿಗಳನ್ನೂ ಸಹ ಬೇಟೆಯಾಡುತ್ತವೆಯಂತೆ. ಹೀಗಿರುವಾಗ ಮರಿ ತಾಯಿಯ ಬಳಿಯೇ ಇದ್ದರೂ ಅಪಾಯ ತಪ್ಪಿದ್ದಲ್ಲ. ಇದಕ್ಕಾಗಿ ಆ ತಾಯಿ – ಮಗುವಿನ ನಡುವೆ ಸಂವಾದ ಜೋರಾಗಿ ನಡೆದರೆ ಮರಿಗಳಿಗೇ ಅಪಾಯ. ಹಾಗಾಗಿ ಇವುಗಳು ಸಣ್ಣ ದನಿಯಲ್ಲಿ ಸಂವಹಿಸುತ್ತವೆಯಂತೆ. ಈ ದನಿಯೂ ಕೇವಲ 200ಮೀ ಗಳ ವರೆಗೆ ಚಲಿಸಬಹುದು ಅಷ್ಟೇ. ಎನ್ನುತ್ತಾರೆ ಮಿಯಾ ನೀಲ್ಸೆನ್, ಇವರು ಪ್ರಾಣಿಗಳ ನಡವಳಿಕೆಗಳ ಅಭ್ಯಸಿಸುವ ವಿಜ್ಞಾನಿ.  ಇವರು ಕೆಲವು ತಾಯಿ ತಿಮಿಂಗಿಲಗಳಿಗೆ ಆಡಿಯೋ ರೆಕಾರ್ಡರ್ಗಳ ಅಳವಡಿಸಿ ಅವುಗಳು ನೀರಿನೊಳಗೆ ಮಾಡುವ ಆ ಸಣ್ಣ ಸಣ್ಣ ಶಬ್ಧಗಳ ಆಲಿಸಿ, ಈ ತೀರ್ಮಾನಕ್ಕೆ ಬಂದರು. ಜೊತೆಗೆ ಅಪಾಯದ ಸಮಯದಲ್ಲಿ ತಿಮಿಂಗಿಲಗಳು ತಮ್ಮ ಮರಿಗಳ ಆದಷ್ಟು ಸಮುದ್ರ ತೀರಕ್ಕೆ ಕರೆದೊಯ್ದು ತಾವು ಮಾಡುವ ಸಂವಹನವು ಆ ಬೇಟೆಗಾರರಿಗೆ ಕೇಳದಂತೆ ಎಚ್ಚರ ವಹಿಸುತ್ತವೆಯಂತೆ. ಅದು ಹೇಗೆಂದರೆ ಅವುಗಳು ಮಾಡುವ ಆ ಸಣ್ಣ ಶಬ್ಧವೂ ಸಹ ಹತ್ತಿರವೇ ಇರಬಹುದಾದ ಬೇಟೆಗಾರ ಡಾಲ್ಫಿನ್ ಗಳಿಗೆ ಕೇಳಬಹುದು. ಆದರೆ ಸಮುದ್ರ ತೀರದ ಹತ್ತಿರದಲ್ಲಿ ಅಲೆಗಳ ಶಬ್ಧಕ್ಕೆ ಪಕ್ಕ ಪಕ್ಕ ದಲ್ಲಿ ಮಾತನಾಡುವ ತಾಯಿ ಮರಿಯ ಸಂವಾದ ಹೆಚ್ಚು ದೂರ ಕ್ರಮಿಸುವುದಿಲ್ಲ ಅಲ್ಲವೇ? ಇದರಿಂದ ಮರಿಯೂ ಸುರಕ್ಷಿತ.

ಜೀವವಿಜ್ಞಾನಿಗಳು ಹೆಚ್ಚಾಗಿ ಪ್ರಾಣಿಗಳ ದೊಡ್ಡ ಪ್ರಮಾಣದ ಶಬ್ಧಗಳನ್ನು ಆಲಿಸಿ ಅಭ್ಯಸಿಸುತ್ತಾರೆ. ಆದರೆ ಇಂತಹ ಸಂಶೋಧನೆಗಳು ಪ್ರಾಣಿಗಳ ನಡುವಿನ ಅರಿಯದ ವಿಸ್ಮಯಗಳ ಸವಿಯ ತೋರುವ ಹೊಸ ದಾರಿಗಳಂತೆ ನನಗೆ ಕಾಣುತ್ತಿವೆ. ನಿಮಗೇ…?

ನಿಮ್ಮ ಅನಿಸಿಕೆಗಳ ನಮಗೆ ಬರೆದು ತಿಳಿಸಿ.
ಮೂಲ ಲೇಖನ: ScienceNewsforStudents

– ಲೇಖನ : ಜೈ ಕುಮಾರ್ ಆರ್
ಡಬ್ಲ್ಯೂ ಸಿ ಜಿ , ಬೆಂಗಳೂರು

Spread the love
error: Content is protected.