ಕಾಡು ಮತ್ತು ಕೃಷಿ

ಕಾಡು ಮತ್ತು ಕೃಷಿ

ಕೈಗಾರೀಕರಣದ ಪರಿಣಾಮವಾಗಿ ಉದ್ಭವಿಸಿದ ಆಧುನಿಕ ಕೃಷಿ ಪದ್ಧತಿಯು ನಿಸರ್ಗದ ನಿಯಮಗಳನ್ನು ಮೀರಿ ಬಹಳ ಮುಂದೆ ಸಾಗಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳು ನಿಸರ್ಗದ ಎಷ್ಟೋ ಜೀವಿಗಳಿಗೆ ಮಾರಣಾಂತಿಕವಾಗಿ ಮಾರ್ಪಟ್ಟು ವಿಷದ ರೂಪದಲ್ಲಿ ನಮ್ಮಲ್ಲೂ ಸಹ ಸೇರುತ್ತಿವೆ ಹಾಗೆಯೇ ಎಂದೂ ಕೇಳರಿಯದ ವಿಚಿತ್ರ ಕಾಯಿಲೆಗಳಿಗೆ ಬುನಾದಿಯಾಗುತ್ತಿದೆ. ಇದನ್ನು ತಡೆಯಬೇಕೆಂದರೆ ಮತ್ತೆ ನಾವೆಲ್ಲಾ ನಿಸರ್ಗವು ಪಾಲಿಸುತ್ತಿರುವ ಕೃಷಿಯ ವಿಧಾನಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಹಲವಾರು ಮಹನೀಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಒಳ್ಳೆ ಪ್ರತಿಫಲ ಸಹ ಪಡೆದು ಹಲವಾರು ಕೃಷಿಕರಿಗೆ ಮಾದರಿಯಾಗಿದ್ದಾರೆ.

ಅಂತಹ ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿರುವ ಒಂದು ಸಣ್ಣ ಸಂಸ್ಥೆ ಚಿಗುರು ಯುವಜನ ಸಂಘ. ಈ ಸಂಸ್ಥೆಯು ತಮ್ಮಲ್ಲಿರುವ ಜ್ಞಾನವನ್ನು WCG ತಂಡದವರೊಡನೆ ಹಾಗೂ WCG ತಂಡವು ತಮ್ಮಲ್ಲಿರುವ ವನ್ಯಜೀವಿಗಳ ಬಗೆಗಿನ ಜ್ಞಾನವನ್ನು ಅವರೊಂದಿಗೆ ಹಂಚಿಕೊಳ್ಳುವ ಕಾರ್ಯವನ್ನು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ 6 ಮತ್ತು 7 ತಾರೀಖಿನ ಅಕ್ಟೋಬರ್ ತಿಂಗಳಿನಂದು ಹಮ್ಮಿಕೊಳ್ಳಲಾಗಿತ್ತು. ಸುಮಾರು 16 ಜನ ಭಾಗವಹಿಸಿದ್ದ ಈ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಕೃಷಿ, ಕಾಡು, ವನ್ಯಜೀವಿ, ಸಾಮಾನ್ಯ ಕೃಷಿಕನ ಕಷ್ಟ-ಕಾರ್ಪಣ್ಯಗಳು, ಅವುಗಳಿಗೆ ಇರುವ ಪರಿಹಾರ, ನಿಸರ್ಗದ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ಮುಂತಾದ ವಿಚಾರಗಳನ್ನು ಚರ್ಚಿಸಲಾಯಿತು.

ಕಾಡಿನ ಬಗ್ಗೆ ತಿಳಿಯಬೇಕೆಂದರೆ ಅದರ ಸೌಂದರ್ಯವನ್ನು ಆಸ್ವಾದಿಸಬೇಕು ಹಾಗೂ ಸುತ್ತಲಿನ ವನ್ಯಜೀವಿಗಳ ಬಗ್ಗೆ ತಿಳಿಯಬೇಕೆಂಬ ಉದ್ದೇಶದಿಂದ ಒಂದು ಸಣ್ಣ ನಿಸರ್ಗ ನಡಿಗೆಯನ್ನು ಸಹ ಏರ್ಪಡಿಸಲಾಗಿತ್ತು.
ಎರಡು ದಿನದ ಈ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ವನ್ಯಜೀವಿ, ಕಾಡು ಹಾಗೂ ಕೃಷಿ ಬಗೆಗಿನ ಹಲವಾರು ವಿಷಯಗಳನ್ನು ಚರ್ಚಿಸಿ ಭಾಗವಹಿಸಿದ ಎಲ್ಲರೂ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರು. ಈ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ಅಭ್ಯರ್ಥಿಗಳ ಅನಿಸಿಕೆಗಳು ಕೆಳಕಂಡಂತಿವೆ.

ಜಲಜ, ಚಿಗುರು ಯುವಜನ ಸಂಘ :-

        ಬನ್ನೇರುಘಟ್ಟ ಪ್ರವಾಸ ಕುರಿತು ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ಸರಿ ಸುಮಾರು ಮಧ್ಯಾಹ್ನ 12 ಗಂಟೆಗೆ, 13 ಅಭ್ಯರ್ಥಿಗಳನ್ನೊಳಗೊಂಡ ನಮ್ಮ ತಂಡವು  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಒಳ ಭಾಗದಲ್ಲಿರುವ WCG ಸಂಸ್ಥೆಯ  ಅಡವಿ ಫೀಲ್ಡ್ ಸ್ಟೇಷನ್ ಗೆ ಬಂದು ತಲುಪಿದೆವು. ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ರಸ್ತೆಯಲ್ಲಿ ಬರುವಾಗಲೇ ಅಕ್ಕ-ಪಕ್ಕದಲ್ಲಿ ಉದ್ದುದ್ದ ಬೆಳೆದು ನಿಂತಿದ್ದ ಮರಗಳನ್ನು ಕಂಡು ಎಲ್ಲರೂ ನಿಬ್ಬೆರಗಾದೆವು. ಅಡವಿ ಫೀಲ್ಡ್ ಸ್ಟೇಷನ್ ಗೆ ತಲುಪಿದ ನಮ್ಮನ್ನು WCG  ಸಂಸ್ಥೆಯ ಸದಸ್ಯರು ಸ್ವಾಗತಿಸಿದರು. ನಂತರ ಎಲ್ಲರೂ  ಪರಸ್ಪರ ಪರಿಚಯ ಮಾಡಿಕೊಂಡೆವು. 2 ಘಂಟೆಗಳ ಕಾಲ WCG ತಂಡದವರ ಜೊತೆ ಕೃಷಿ ಮತ್ತು ನಿಸರ್ಗದ ಬಗ್ಗೆ ನಡೆಸಿದ ಚರ್ಚೆ ಬಹಳಷ್ಟು ವಿಷಯಗಳನ್ನು ತಿಳಿಸಿಕೊಟ್ಟಿತು. ಅಶ್ವಥ್ ರವರು ಹುಲ್ಲುಗಾವಲುಗಳ ಬಗ್ಗೆ ಹೇಳಿದ ಮಾಹಿತಿಯಂತು ಹುಲ್ಲುಗಾವಲಿನ ಬಗ್ಗೆ ಹೊಸ ದೃಷ್ಟಿ ಕೋನವನ್ನೇ ಸೃಷ್ಟಿಸಿತು. ಹುಲ್ಲುಗಾವಲುಗಳನ್ನು ಬರೀ ಖಾಲಿ ಜಾಗಗಳೆಂಬ ಕಲ್ಪನೆ ಹೊಂದಿದ್ದ ನಮಗೆ ಇದರ ಮಹತ್ವ ತಿಳಿಯಿತು. ಮಧ್ಯಾಹ್ನದ ಊಟದ ನಂತರ ಸುಮಾರು 6 ಕಿ . ಮೀ ಚಾರಣಕ್ಕೆ ಹೊರಟೆವು. ಅರಣ್ಯವನ್ನು ನೋಡಲು ಬಹಳ ಕಾತುರದಿಂದ ಕಾಯುತ್ತಿದ್ದ ನಮಗೆ ಸುಂದರವಾದ ಮತ್ತು ಅಚ್ಚರಿಯಾದ ಕೆಲವು ಎತ್ತರದ ಮರಗಿಡಗಳನ್ನು ವಿವಿಧ ರೀತಿಯ ಸಸ್ಯ ಪ್ರಭೇದಗಳನ್ನು ನೋಡಿ ಬಹಳ ಖುಷಿ ಆಯಿತು. ನಂತರ ಬೆಟ್ಟದ ಮೇಲೆ ಏರಲು ಸಿದ್ಧವಾದೆವು.  

ಬೆಟ್ಟದಿಂದ ಕೆಳಗೆ ನೋಡಿದಾಗಲೆಲ್ಲ ಸ್ವಲ್ಪ ಭಯವನ್ನು ಹುಟ್ಟಿಸುವಂತಿದ್ದರೂ ಸಹ ತುಂಬಾ ಖುಷಿಯನ್ನುಂಟು ಮಾಡಿತು. ಆನೆಗಳು ಇವೆ ಎಂಬುದನ್ನು ಕೇಳಿ ಬಹಳ ಗಾಬರಿ ಉಂಟಾದರೂ ನಿಸರ್ಗದ ಸೌಂದರ್ಯವನ್ನು ನೋಡಿ ಭಯವು ಕಣ್ಮರೆಯಾಯಿತು. ಸಂಜೆ ಬೆಟ್ಟದ ಮೇಲೆ ಏರುವಷ್ಟರಲ್ಲಿ 5 ಗಂಟೆ ಸಮಯವಾಗಿತ್ತು. ಸಂಜೆ ಹೊತ್ತು ನಿಶ್ಯಬ್ಧದಿಂದ ಪ್ರಕೃತಿಯೊಂದಿಗೆ ಇರುವಂತಹ ಒಂದು ಅವಕಾಶ ಸಿಕ್ಕಿತು. ಇದರಿಂದಾಗಿ ಮನಸ್ಸಿಗೆ ಏನೋ ಒಂದು ರೀತಿಯ ಮುದನೀಡಿತು. ರಾತ್ರಿ ಸುಮಾರು 8.45 ಸುಮಾರಿಗೆ ಅಡವಿ ಫೀಲ್ಡ್ ಸ್ಟೇಷನ್ ಗೆ ಹಿಂದಿರುಗಿ ಬಂದೆವು. ಕತ್ತಲೆ ಸಮಯದಲ್ಲಿ ಕಾಡಿನ ಮಧ್ಯೆ ನಡೆದು ಬಂದುದು ಸ್ವಲ್ಪ ಭಯವನ್ನು ಉಂಟು ಮಾಡಿತು. ಅಶ್ವಥ್ ಸರ್ ಮಾತುಗಳಂತೆ ಎಲ್ಲರೂ ಗಲಾಟೆ ಮಾಡದೆ ಮುಂದೆ ಸಾಗಿದೆವು. ನಂತರ ಎಲ್ಲರೊಂದಿಗೆ ಸೇರಿ ಊಟಮಾಡಿ ರಾತ್ರಿ ಸುಮಾರು 11 ಗಂಟೆಯ ವೇಳೆಯಲ್ಲಿ ಅಶ್ವಥ್ ಸರ್ ರವರು ಅವರ ಹಿಂದಿನ ದಿನಗಳ ಅನುಭವ ಮತ್ತು ಆನೆಗಳ ಜೊತೆಗೆ ನಡೆದ ಕೆಲವು ಘಟನೆಗಳನ್ನು ಕೇಳಿ ಬಹಳ ಗಾಬರಿಯಾಯಿತು. ಅವರು ಯಾವ ರೀತಿ ಆನೆಗಳಿಂದ ತಪ್ಪಿಸಿಕೊಂಡು ಬಂದರು ಎಂಬುದನ್ನು ಕೇಳಿ ಮೈ ಜುಮ್ ಎಂದಿತು. ನಂತರ ರಾತ್ರಿ ಮಲಗಿದೆವು. ಬೆಳಿಗ್ಗೆ ಎದ್ದು ಪಕ್ಷಿ ವೀಕ್ಷಣೆಗೆ ಮತ್ತೆ ಕಾಡಿನಲ್ಲಿ ಪ್ರಯಾಣ ಮಾಡಿದೆವು. ಪಕ್ಷಿಗಳು ಚಲನವಲನ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಲಾಯಿತು. ಬೇರೆ ಕಡೆಯಿಂದ ವಲಸೆ ಬರುವಂತಹ ಪಕ್ಷಿಗಳ ಕುರಿತು ಅನೇಕ ಮಾಹಿತಿಗಳನ್ನು ತಿಳಿದೆವು. ನಂತರ ಉಪಹಾರ ಸೇವಿಸಿ ನಮ್ಮ ಕೆಲವು ಅರಣ್ಯದ ಅನುಭವವನ್ನು ಕೊನೆಯಲ್ಲಿ ಹಂಚಿಕೊಳ್ಳಲಾಯಿತು. ಎಲ್ಲರು ಸಹ ಚಿತ್ರನಟ ಕಿಶೋರ್ ಅವರ ತೋಟಕ್ಕೆ ಭೇಟಿ ನೀಡಿದೆವು. ಅವರು ಯಾವ ರೀತಿ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿಯಲಾಯಿತು. ಅವರ ಮನೆಯು ಹಳೆಯ ಕಾಲದ ಸುಮಾರು ವಸ್ತುಗಳನ್ನು ಬಳಸಿ ಕಟ್ಟಿದ ಮನೆಯಾಗಿತ್ತು. ಅವರು ಬೆಳಸಿರುವ ಹಣ್ಣಿನ ಗಿಡಗಳು ಬಹಳ ಸುಂದರವಾಗಿಯು ಹಾಗೂ ಆರೋಗ್ಯಭರಿತವಾಗಿಯು ಇದ್ದವು. ಒಟ್ಟಾರೆ ನಮ್ಮ ಬನ್ನೇರುಘಟ್ಟದ ಕೃಷಿ ಮತ್ತು ಕಾಡು ಪ್ರವಾಸ ಬಹಳ ಸಂತೋಷದಾಯಕವಾಗಿತ್ತು. ನಾನು ಎಂದಿಗೂ ಮರೆಯಲಾಗದ ಅನುಭವಗಳನ್ನು ಈ ಪ್ರವಾಸದಲ್ಲಿ ಪಡೆದೆನು ಹಾಗೂ ನನ್ನ ಜೀವನದಲ್ಲಿ ತುಂಬಾ ಖುಷಿಕೊಟ್ಟಂತಹ ಒಂದು ಪ್ರಯಾಣವಾಗಿತ್ತು.

ಮಂಜುನಾಥ್ ಅಮಲಗೊಂದಿ, ಚಿಗುರು ಯುವಜನ ಸಂಘ: ನಾನು ಎರಡು ವರ್ಷದ ಹಿಂದೆ ಕೃಷಿ ಬಗ್ಗೆ ಕಲಿತುಕೊಳ್ಳಲು ನಟ ಕಿಶೋರ್ ತೋಟಕ್ಕೆ ಆಗಮಿಸಿದ್ದಾಗ WCG ಯ ಅಶ್ವತ್ಥ್ ರವರು ಪರಿಚಯವಾದರು. ಆ ದಿನ ಅವರು ಹೇಳಿದ ಕಾಡಿನ ಅನುಭವಗಳು ನನ್ನಲ್ಲಿನ ಪರಿಸರ ಕಾಳಜಿಯನ್ನು ಹೆಚ್ಚಿಸಿತ್ತು… ಅಂದು ನಮ್ಮೊಂದಿಗೆ ಬೆಸೆಯಿತು ಇರ್ವರ ಹಸಿರ ಪಯಣದ ಹಾದಿಗಳು.. ಜೊತೆಗೆ ಅವರ ಮತ್ತು ನಮ್ಮ ಸ್ನೇಹತ್ವ ಬಿಡಿಸಲಾಗದ ಬೆಸುಗೆಯಾಗಿಬಿಟ್ಟಿತು… ಎರಡು ವರ್ಷಗಳ ನಂತರ ಮೊನ್ನೆಯಷ್ಟೇ ಅವರ ತಂಡದ ಅಡವಿ ಫೀಲ್ಡ್ ಸ್ಟೇಷನ್ ಗೆ ಹೋಗಿ ಮುಖಾಮುಖಿ ಭೇಟಿ ಮಾಡಿದ್ದು… ಆದರೆ ನಮ್ಮಗಳ ಸ್ನೇಹ ಬಹಳ ವರ್ಷಗಳ ರೀತಿ ಭಾವನಾತ್ಮಕವಾಯಿತು. WCG  ತಂಡದ ಗೆಳೆಯರು ನಮ್ಮ ಯುವಜನರಿಗೆ ಬನ್ನೇರುಘಟ್ಟ ಅರಣ್ಯದ ಪರಿಚಯ ಮಾಡಿಕೊಟ್ಟರು. ಜೊತೆಯಲ್ಲಿ ಎಲ್ಲರ ಪರಸ್ಪರ ಪರಿಚಯವಾಯಿತು. ಪ್ರಸ್ತುತ ಪರಿಸರದ ಬಗ್ಗೆ ಚರ್ಚೆಯ ಮೂಲಕ ಪ್ರಾರಂಭಿಸಿದರು.

ಪರಿಸರ ಸಂರಕ್ಷಣೆಗಾಗಿ WCG  ತಂಡದವರು ಮಾಡುತ್ತಿರುವ ಕಾರ್ಯಗಳ ಬಗ್ಗೆ ಸವಾಲು ಮತ್ತು ಸಾಧ್ಯತೆಗಳನ್ನು ಪರಸ್ಪರ ಹಂಚಿಕೊಳ್ಳಲಾಯಿತು. ರಾಷ್ಟ್ರೀಯ ಉದ್ಯಾನವನಗಳ ಬಗೆಗಿನ ಸೂಕ್ಷ್ಮವಾದ ಮಾಹಿತಿಗಳನ್ನು ತಿಳಿದುಕೊಳ್ಳಲಾಯಿತು. ಊಟದ ನಂತರ ಇಳಿಹೊತ್ತಿನಲ್ಲಿ ಬನ್ನೇರುಘಟ್ಟ ಕಾಡಿನ ಕಡೆ ಹೆಜ್ಜೆಗಳನ್ನು ಹಾಕುತ್ತಾ ಹೊರಟೆವು… ಕಾಡಿನ ಸೌಂದರ್ಯ ಸವಿಯುತ್ತಾ ಮುಂದೆ ಸಾಗಿದೆವು… ಕತ್ತಲಾಗುವವರೆಗೆ ಕಾಡಿನ ಎತ್ತರ ಪ್ರದೇಶದಲ್ಲಿ ಸುತ್ತಲಿನ ಅರಣ್ಯವನ್ನು ನೋಡಿ… ಆನೆಗಳು ಬರುವ ಭಯದ ಮನಸ್ಥಿತಿಯಲ್ಲಿ ಕೆಳಗಿಳಿದು ಅಡವಿ ಫೀಲ್ಡ್ ಸ್ಟೇಷನ್ ಗೆ ಬಂದೆವು. ರಾತ್ರಿ ಸಮಯ ಫಯರ್ ಕ್ಯಾಂಪ್ ಮಾಡಿ… ಅದರ ಸುತ್ತ ಕೂತು ನಮ್ಮವರು ಮತ್ತು WCG ತಂಡದ ರಾಕೇಶ್ ತತ್ವಪದ, ಜಾನಪದ ಮತ್ತು ಪರಿಸರ ಗೀತೆಗಳನ್ನು ಹೇಳಿದ್ದು ಮರೆಯಲಾಗದ ಅನುಭವ…

        ಇವೆಲ್ಲಾ ಸಂತೋಷದ ಜತೆ ಕಾಡಿನಿಂದ ಹೊರ ಬರುವವರೆಗೆ ಭಯವಾಗುತ್ತಿತ್ತು. ಏಕೆಂದರೆ ಆನೆಗಳು ಬರುವ ಜಾಗಗಳಿವು. ಅಶ್ವತ್ಥ್ ಸರ್ ಪ್ರತಿಸಲ ಆನೆಗಳು ಕಾಣಿಸಿದರೆ ಹೆದರಬಾರದು, ನಾನು ಕೊಡುವ ಸಲಹೆ, ಸನ್ನೆಗಳನ್ನು ಅನುಸರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕು… ನನ್ನ ಹಿಂದೆಯೇ ಬರಬೇಕೆಂದು ಹೇಳುತ್ತಿದ್ದರು..‌ ನನಗೆ ನನ್ನ ಜೀವಕ್ಕಿಂತ ನನ್ನ ಜೊತೆ ಬಂದವರ ಜೀವಗಳ ಬಗ್ಗೆಯೇ ಚಿಂತೆಯಾಗಿಬಿಟ್ಟಿತ್ತು… ಪ್ರತಿ ಸಲ ಕತ್ತಲಿನಲ್ಲಿ ಅವರನ್ನು ಗಮನಿಸುವುದು, ಹೆಸರು ಕರೆಯುವುದು… ಹಿಂದೆ ಇದ್ದಾರಾ, ಮುಂದೆ ಇದ್ದಾರಾ ಎಂದು ಪರಿಶೀಲಿಸಿದ ಮೇಲೆಯೇ ನನಗೆ ಸಮಾಧಾನ. ಆದರೂ ಯುವಜನರಿಗೆ ಕಾಡಿನ ಅನುಭವ ನೀಡಿದ್ದು ನನಗೆ ಸವಾಲಾಗಿದ್ದರೂ ಸಾಧ್ಯವಾಯಿತು… ಬೆಳಿಗ್ಗೆ ಅಡವಿಯ ಸುತ್ತಮುತ್ತಲೂ ಒಂದು ಘಂಟೆ ಕಾಲ ಪಕ್ಷಿ ವೀಕ್ಷಣೆ ಮಾಡಲಾಯಿತು. ಒಟ್ಟು 15 ಕ್ಕೂ ಹೆಚ್ಚು ಬಗೆಯ ಪಕ್ಷಿಗಳನ್ನು ಮತ್ತು ಒಟ್ಟು 5 ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳನ್ನು ಗುರ್ತಿಸಿ ನೋಡಲಾಯಿತು. ನನ್ನೊಡನೆ ಬಂದು ಪರಿಸರವನ್ನು ಸವಿದ ನಮ್ಮ ತಂಡದವರು ಉತ್ತಮವಾದ ಅಭಿಪ್ರಾಯಗಳನ್ನು ಹೇಳಿದ್ದು ಸಂತೋಷವಾಯಿತು. WCG ಯ ಆತ್ಮೀಯರಿಗೆ ಧನ್ಯವಾದಗಳು…

-ಚಿಗುರು ಯುವಜನ ಸಂಸ್ಥೆ
ತುಮಕೂರು

Print Friendly, PDF & Email
Spread the love
error: Content is protected.