ಕಣ್ಮರೆಯಾದ ರಣಹದ್ದು?

ಕಣ್ಮರೆಯಾದ ರಣಹದ್ದು?

© ಬಿ. ಶಶಿಕುಮಾರ್

ಪ್ರಕೃತಿಯಲ್ಲಿ ಎಲ್ಲಾ ಪ್ರಾಣಿಗಳ ಪಾತ್ರ ಬಹಳ ಪ್ರಮುಖವಾದದ್ದು. ಅದು ನೆಲದ ಮೇಲೆ ಕಂಡು ಬರುವ ಬೃಹತ್ ಆಕಾರದ ಆನೆಯಿರಬಹುದು, ಕಾನನದಲ್ಲಿ ಪುಟ್ಟ ಪುಟ್ಟ ರೆಕ್ಕೆಯನ್ನು ಬಡಿಯುತ್ತ ಹಾರಾಡುವ ಚಿಟ್ಟೆಗಳಿರಬಹುದು ಅಥವಾ ನೀರಿನಲ್ಲಿ ಕಂಡು ಬರುವ ಏಕಕೋಶ ಜೀವಿಯಾದ ಅಮೀಬಾ ಇರಬಹುದು. ಯಾವುದೇ ಜೀವಿಯನ್ನು ನೋಡಿದರೂ ಈ ಪರಿಸರದಲ್ಲಿ ಅದರದ್ದೇ ಆದ ಕೊಡುಗೆ ಇದೆ. ಆದರೆ ಮನುಷ್ಯರಾಗಿ  ಈ ಪ್ರಕೃತಿಗೆ ನಮ್ಮ ಕೊಡುಗೆ ಏನು? ಒಮ್ಮೆ ಯೋಚಿಸಿ. ಹಾಳುಮಾಡುವುದೇ ಪರಿಸರಕ್ಕೆ ಉಡುಗೊರೆಯಾಗಿದೆ ಅನಿಸುತ್ತದೆ, ಯಾಕೆಂದರೆ ಅವನು ಬುದ್ಧಿವಂತ ಪ್ರಾಣಿ.

ಪೂರ್ಣಚಂದ್ರ ತೇಜಸ್ವಿಯವರು ಒಂದು ಮಾತು ಹೇಳುತ್ತಾರೆ “ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ” ಎಂದು. ಬೇರೆ ಜೀವಿಗಳಿಂದ ಈ ಪ್ರಕೃತಿಯಲ್ಲಿ ತುಂಬ ಉಪಯೋಗವಿದೆ. ಜೊತೆಗೆ ಜೀವಸಂಕುಲಕ್ಕೆ ಬಹಳ ಅನುಕೂಲಕರವಾಗಿದೆ ಮತ್ತು ಪರಿಸರದ ಸಮತೋಲನ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಇದರಲ್ಲಿ ಪಕ್ಷಿಗಳನ್ನು ಮಾತ್ರ ತೆಗೆದುಕೊಂಡರೂ ಸಹ ಅವುಗಳ ಪಾತ್ರ ದೊಡ್ಡದು.  ಪಕ್ಷಿಗಳಲ್ಲಿ ಬರೀ ಮಾಂಸಾಹಾರಿ ಪಕ್ಷಿಗಳನ್ನು ಮಾತ್ರ ನೋಡುವುದಾದರೆ,  ಇವು ಸತ್ತ ಪಕ್ಷಿ ಪ್ರಾಣಿಗಳನ್ನು ತಿಂದು ನೈಸರ್ಗಿಕ ತೋಟಿಯಂತೆ ಬದುಕುತ್ತವೆ. ಇವು ವಾತಾವರಣವನ್ನು ಶುಭ್ರವಾಗಿರುವಂತೆ ನೋಡಿಕೊಳ್ಳುತ್ತವೆ.  ಇವುಗಳ ಪಟ್ಟಿಯಲ್ಲಿ ಗರುಡ, ಚೊಟ್ಟಿ ಗರುಡ, ಜೌಗು ಸೆಳೆವ, ಡೇಗೆ, ಮೀನು ಗಿಡುಗ, ರಾಮದಾಸ ಹಕ್ಕಿ, ವೈನತೇಯ, ಹಾವು ಗಿಡುಗ, ಗೂಬೆ, ಹದ್ದು ಮತ್ತು ವಿಶೇಷವಾಗಿ ರಣಹದ್ದುಗಳು ಸೇರಿವೆ.

© ಬಿ. ಶಶಿಕುಮಾರ್

1980 ರ ದಶಕದಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ರಣಹದ್ದುಗಳು ಭಾರತದಲ್ಲಿ ಕಂಡು ಬರುತ್ತಿದ್ದವು. ಆಗ ಸಾವಿರಾರು ರಣಹದ್ದುಗಳು ಆಕಾಶದಲ್ಲಿ ಲೀಲಾಜಾಲವಾಗಿ ಹಾರಾಡುತ್ತಿದ್ದವು. ನಮ್ಮಲ್ಲಿ ಬಿಯರ್ಡೆಡ್ ವಲ್ಚರ್ (Bearded vulture), ಈಜಿಪ್ಷಿಯನ್ ವಲ್ಚರ್ (egyptian vulture), ಸ್ಲೆಂಡರ್ ಬಿಲ್ಡ್ ವಲ್ಚರ್ (Slender billed vulture), ಸಿನರಸ್ ವಲ್ಚರ್ (cinereous vulture), ಕಿಂಗ್ ವಲ್ಚರ್ (King Vulture) ಯುರೇಷಿಯನ್ ವಲ್ಚರ್ (Eurasian Vulture) ಲಾಂಗ್ ಬಿಲ್ಡ್ ವಲ್ಚರ್ (Long Billed Vulture), ಹಿಮಾಲಯನ್ ಗ್ರಿಫನ್ ವಲ್ಚರ್ (Himalayan Griffon Vulture) ಮತ್ತು ವೈಟ್ ಬ್ಯಾಕ್ಡ್ ವಲ್ಚರ್ (White backed vulture) ಎಂಬ ಒಂಭತ್ತು ಪ್ರಭೇದದ ರಣಹದ್ದುಗಳನ್ನು ಕಾಣಬಹುದು.

ಸಾಮಾನ್ಯವಾಗಿ ಎಲ್ಲರಿಗೂ ರಣಹದ್ದುಗಳ ಪರಿಚಯ ಇದೆ. ರಣಹದ್ದುಗಳು ಪ್ರಕೃತಿಯಲ್ಲಿ ಪ್ರಮುಖ ಕರ್ತವ್ಯವನ್ನು ನಿರ್ವಹಿಸುತ್ತವೆ. ಹಿಂದೆ ಯಾರ ಮನೆಗಳಲ್ಲಾದರು  ದನ-ಕರು, ಮೇಕೆ-ಕುರಿಗಳು ಮೃತಪಟ್ಟರೆ ಅವುಗಳ ಚರ್ಮಸುಲಿದು ಊರಿನಿಂದಾಚೆ ತೆಗೆದುಕೊಂಡು ಹೋಗಿ ಹಾಕಿ ಬರುತ್ತಿದ್ದರು. ಪಾರ್ಸಿ ಜನಾಂಗದವರು, ತಮ್ಮಲ್ಲಿ ಸತ್ತುಹೋದವರನ್ನು ಮಣ್ಣಿನಲ್ಲಿ ಹೂತು ಹಾಕದೇ  ಅಥವಾ ಬೆಂಕಿಯಲ್ಲಿ ಸುಡದೆ ದೇಹವನ್ನು ದೇವರಿಗೆ ಅರ್ಪಿಸಬೇಕೆಂದು ತೆರೆದಿರುವ ಜಾಗದಲ್ಲಿ ಇಡುತ್ತಿದ್ದರು, ಅಷ್ಟು ದೂರವೇಕೆ ಇಲ್ಲೇ ನಮ್ಮ ಬೆಂಗಳೂರಿನ ಸುತ್ತಮುತ್ತಲಿರುವ ಕಾಡುಗಳ ಅಂಚಿನಲ್ಲಿ ವಾಸಿಸುವ ಕಾಡು ಪೂಜರ ಜನಾಂಗದವರು ಸುಮಾರು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದೆ ಯಾರಾದರು ಸತ್ತರೆ ಹೆಣಗಳನ್ನು ಮಣ್ಣು ಮಾಡದೆ ಅಥವಾ ಸುಡದೆ ಕಾಡಿನ ಕಲ್ಲು ಗುಡ್ಡಗಳ ಮೇಲೆ ಕಲ್ಲಿನಿಂದ ಕಟ್ಟಿದ ಚಾವಣಿಯ ಕೆಳಗೆ ಇರಿಸಿ, ಒಂದು ಮಣ್ಣಿನ ಗಡಿಗೆಯಲ್ಲಿ ಕುಡಿಯಲು ನೀರಿಟ್ಟು ಪ್ರಾಣಿ-ಪಕ್ಷಿಗಳು ತಿಂದು-ಕುಡಿದುಹೋಗಲಿ ಎಂದು ಬರುತ್ತಿದ್ದರು. ಮೃತದೇಹಕ್ಕೋಸ್ಕರವೇ ಕಾಯ್ದು ಕುಳಿತುಕೊಂಡಿರುವ ರಣಹದ್ದುಗಳು ಅವುಗಳನ್ನು ಕಂಡ ಕ್ಷಣವೇ ಗುಂಪಿನಲ್ಲಿ ಬಂದು, ಮೃತ ದೇಹವನ್ನು ತಿಂದು ಖಾಲಿಮಾಡುತ್ತಿದ್ದವು. ಹದ್ದುಗಳು ಸತ್ತ ಪ್ರಾಣಿಯ ದೇಹವನ್ನು ತಿನ್ನುವುದರಿಂದ, ಸತ್ತಪ್ರಾಣಿಗಳಿಂದ ಹೊರಬರುವ ದುರ್ವಾಸನೆ, ಅದರಿಂದ ಹಬ್ಬುವ ರೋಗಗಳು, ನೀರು ಕಲುಷಿತಗೊಳ್ಳುವುದು ತಪ್ಪಿ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತದೆ. ಆದ್ದರಿಂದ ಪರಿಸರ ಸ್ವಚ್ಚತೆಯನ್ನು ಕಾಪಾಡುವುದರಲ್ಲಿ  ರಣಹದ್ದುಗಳದ್ದೇ ಮೇಲುಗೈ. ಈಗ ನಮಗೆ ರಣಹದ್ದುಗಳ ಪ್ರಾಮುಖ್ಯತೆ ಎಷ್ಟಿದೆ ಎಂದು ತಿಳಿಯಿತು. ಅವುಗಳ ಸಂತತಿಯು ನಶಿಸುತ್ತಿದೆ. ಕಾರಣ ಏನು ಎಂಬುದು ಬಹುದೊಡ್ಡ ಪ್ರಶ್ನೆ .

© ಬಿ. ಶಶಿಕುಮಾರ್

ಇದರ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ, ನಡೆಯುತ್ತಲೂ ಇವೆ. ಒಂದು ಕಡೆ ಮನುಷ್ಯನ ಅಗತ್ಯಗಳನ್ನು ಪೂರೈಸಲು ನಗರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಭಿವೃದ್ಧಿಯಿಂದ ನೇರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅತಿಯಾದ ಒತ್ತಡ ಬೀರುತ್ತಿದೆ. ಅರಣ್ಯಗಳ ನಾಶ, ಗಣಿಗಾರಿಕೆಯಂತಹ ಚಟುವಟಿಕೆಯಿಂದ ಇವುಗಳ ಆವಾಸ ನಷ್ಟವಾಗುತ್ತಿದೆ. ಮೊತ್ತೊಂದು ಕಡೆ ಅವುಗಳ ಆಹಾರದ ಕೊರತೆ, ಮೊದಲು ಭಾರತದಲ್ಲಿ ರಣಹದ್ದುಗಳಿಗೆ ಆಹಾರದ ಸಮಸ್ಯೆ ಇರಲಿಲ್ಲ.  ಕೃಷಿಕರ ಎಲ್ಲ ಮನೆಗಳಲ್ಲೂ ದನ-ಕರುಗಳು ಇದ್ದೆ ಇರುತ್ತಿದ್ದವು. ಆಗ ಭಾರತ ವಿಶ್ವದಲ್ಲಿಯೇ ಜಾನುವಾರುಗಳ ಸಾಕಾಣೆಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಿತ್ತು. ಆದರೆ ಬರಬರುತ್ತಾ ಈ ಜಾನುವಾರುಗಳನ್ನು ಮಾಂಸಕ್ಕಾಗಿ ವಿದೇಶಗಳಿಗೆ ರಪ್ತುಮಾಡುವುದು ಆರಂಭವಾಯಿತು. ಹಾಗಾಗಿ ರಣಹದ್ದುಗಳ ಆಹಾರದ ಒಂದು ದೊಡ್ಡಪಾಲು ಇಲ್ಲವಾಯಿತು. 1973 ರಲ್ಲಿ ಡೈಕ್ಲೋಫಿನಾಕ್ ಸೋಡಿಯಂ ಎಂಬ ಔಷಧಿ ಕಂಡುಹಿಡಿದ ಬಳಿಕ, ಜಾನುವಾರುಗಳಿಗೆ ಬರುತ್ತಿದ್ದ ಉರಿಯೂತದ ಅಸ್ವಸ್ಥತೆಗಳು, ಮಸ್ಕ್ಯುಲೋಸ್ಕೆಲಿಟಲ್, ವಿಶೇಷವಾಗಿ ಸಂಧಿವಾತ, ಪಾಲಿಮಿಯೊಸಿಟಿಸ್, ಡರ್ಮಟೊಮಿಯೊಸಿಟಿಸ್, ಅಸ್ಥಿಸಂಧಿವಾತ, ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ ಮತ್ತು  ಮುಖ್ಯವಾಗಿ ನೋವಿನಿಂದ ನರಳುವ ಜಾನುವಾರುಗಳನ್ನು ಕಾಪಾಡಿಕೊಳ್ಳಲು ರೈತರು ಪಶುವೈದ್ಯರ ಮೊರೆಹೋಗುತ್ತಿದ್ದರು. ಪಶುವೈದ್ಯರು ನೋವು ಕಡಿಮೆಯಾಗಲಿ ಎಂದು ಡೈಕ್ಲೋಫಿನಾಕ್ ಸೋಡಿಯಂ ರಾಸಾಯನಿಕವನ್ನು ಕೊಡುತ್ತಿದ್ದರು. ಈ ಔಷಧಿ ಕೊಟ್ಟ ತಕ್ಷಣವೇ ಎತ್ತುಗಳು ನೆಲದಲ್ಲಿ ಹೊರಳಾಡಿ ಸ್ವಲ್ಪ ಸಮಯದ ನಂತರ ಚೇತರಿಸಿಕೊಳ್ಳುತ್ತವೆ. ಈ ಡೈಕ್ಲೋಫಿನಾಕ್ ಸೋಡಿಯಂ ಪ್ರಾಣಿಗಳ ದೇಹದಲ್ಲಿ ಸ್ವಲ್ಪ ದಿನಗಳ ಕಾಲ ಹಾಗೇ ಇರುತ್ತದೆ. ಜಾನವಾರುಗಳು ಏನಾದರು ತಕ್ಷಣ ಮರಣ ಹೊಂದಿದರೆ. ಅವುಗಳನ್ನು ರೈತರು ಊರಿನಿಂದಾಚೆ ಎಸೆದು ಬರುವ ಸಂಪ್ರದಾಯ ನಮ್ಮಲ್ಲಿ ಮೊದಲಿಂದಲೂ ಇದೆ, ಈಗಲೂ ಎಸೆದು ಬರುತ್ತಾರೆ. ಎಸೆದ ಜಾನುವಾರುಗಳ ಕಳೇಬರವನ್ನು ತಿನ್ನಲು ಬರುವ ರಣಹದ್ದುಗಳು ಡೈಕ್ಲೋಫಿನಾಕ್  ಸೋಡಿಯಂ ಒಳಗೊಂಡಿರುವ ಮಾಂಸವನ್ನು ತಿನ್ನುತ್ತವೆ. ಡೈಕ್ಲೋಫಿನಾಕ್ ಸೋಡಿಯಂ ರಣಹದ್ದುಗಳ ದೇಹಕ್ಕೆ ಸೇರಿದ ತಕ್ಷಣವೇ ದೇಹದಲ್ಲಿ ಹೆಚ್ಚಿನ ಅಂಶದಲ್ಲಿ ಲವಣಗಳು ಶೇಕರಣೆಯಾಗುವ ರೀತಿ ಮಾಡುತ್ತದೆ. ಇದನ್ನು ಶುದ್ಧಿಗೊಳಿಸಲು ಆಗದೆ ಕಿಡ್ನಿ ವೈಫಲ್ಯದಿಂದ ರಣಹದ್ದುಗಳು ಸಾಯುತ್ತವೆ. ಇದರ ಪರಿಣಾಮವನ್ನು ಅರಿತ ಕರ್ನಾಟಕ ಸರ್ಕಾರ ಡೈಕ್ಲೋಫಿನಾಕ್ ಸೋಡಿಯಂ ನಂತಹ ಔಷಧಿಯನ್ನು ರದ್ದುಗೊಳಿಸಿತು.

ರಣಹದ್ದುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುವ ಇನ್ನೊಂದು ಅಂಶವೆಂದರೆ, ಕಾಡಂಚಿನ ಗ್ರಾಮಗಳಲ್ಲಿ ಪಶುಸಾಗಾಟಣೆ ಮಾಡುತ್ತಾರೆ, ಬೆಳಗ್ಗಿನ ಸಮಯ ಎಲ್ಲ ಹಸುಗಳನ್ನು ಮೇಯಲು ಕಾಡಿಗಟ್ಟುತ್ತಾರೆ. ರಾತ್ರಿ ಹಿಂತಿರುಗಿದಾಗ ಒಂದೆರೆಡು ಹಸುಗಳು ಕಮ್ಮಿಯಾಗಿದ್ದರೆ, ಗ್ರಾಮಸ್ಥರು ಅವುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಅಂಥ ಜಾನುವಾರುಗಳೇನಾದರೂ ಬೇಟೆಗೀಡಾಗಿ, ಅದರ ಮಾಂಸವೇನಾದರೂ ಇನ್ನೂ ಉಳಿದುಕೊಂಡಿದ್ದರೆ, ಉಳಿದ ಮಾಂಸಕ್ಕೆ ವಿಷ ಹಾಕಿ ಬರುತ್ತಾರೆ. ಇದರಿಂದ ಮಾಂಸಾಹಾರಿ ಪ್ರಾಣಿಗಳು, ನರಿಗಳು, ರಣಹದ್ದುಗಳು ಎಲ್ಲವೂ ಬಲಿಯಾಗುತ್ತವೆ. ಹೀಗಾಗಿ ರಣಹದ್ದುಗಳ ಸಂತತಿಯೇ ಅಳಿವಿನಂಚಿಗೆ ತಲುಪಿದೆ.

ಆದರೆ ಈಗ ರಣಹದ್ದುಗಳಿಗೆ ಆಹಾರದ ಕೊರತೆಯೂ ಎದುರಾಗಿದೆ.  ರಣಹದ್ದುಗಳು ಬೇಟೆಯಾಡುತ್ತವೆ ಎಂಬ ತಪ್ಪು ಕಲ್ಪನೆ ಜನರ ಮನಸ್ಸಿನಲ್ಲಿದೆ. ಭಾರತದಲ್ಲಿ ಕಂಡುಬರುವ ರಣಹದ್ದುಗಳು ಬೇಟೆಯಾಡುವುದಿಲ್ಲ, ಹಾಗೂಅವುಗಳಿಗೆ ತಿನ್ನಲು ಮೃತದೇಹಗಳು ಸಾಕಷ್ಟು ಸಿಗುತ್ತಿಲ್ಲ. ಹಾಗಾಗಿ ಎಲ್ಲ ರೀತಿಯಿಂದಲೂ ಆಹಾರದ ಕೊರತೆ ಎದುರಾಗಿರುವುದರಿಂದ ರಣಹದ್ದುಗಳ ಸಂಖ್ಯೆ ಕ್ಷೀಣಿಸುತ್ತಿವೆ. ಚಾರ್ಲೆಸ್ ಡಾರ್ವಿನ್ ಸಿದ್ಧಾಂತದ ಪ್ರಕಾರ ‘Nature always select the fittest’  ಅನ್ನುವ ಹಾಗೆ ರಣಹದ್ದುಗಳಿಗೆ ಈ ತರಹದ ಪರಿಸರದಲ್ಲಿ ಬದುಕಲು ತುಂಬಾ ಕಷ್ಟವಾಗುತ್ತಿದೆ. ಇದರಿಂದ ಕೂಡ ಅವನತಿಯನ್ನು ಹೊಂದುತ್ತಿವೆ. ಪರಿಸರದಲ್ಲಿ ಒಂದು ಚಿಕ್ಕ ಏರು-ಪೇರಾದರು ಅದರ ಪರಿಣಾಮದಿಂದ ಜೀವಿಗಳ ನಾಶವಾಗುತ್ತವೆ. ಮನುಷ್ಯ ಅತೀ ಬುದ್ಧಿವಂತನಾದಷ್ಟು ಪ್ರಕೃತಿಗೆ ಅದು ಶಾಪವಾಗುತ್ತದೆ.

© ಬಿ. ಶಶಿಕುಮಾರ್

ಲೇಖನ : ಅಶ್ವಿನಿ ಎಸ್
ಚಿತ್ರಗಳು : ಬಿ. ಶಶಿಕುಮಾರ್

Spread the love
error: Content is protected.