ಓತಿ ಬಣ್ಣದ ತೊಗಲಂಗಿ ತೊಟ್ಟಾಗ…

ಓತಿ ಬಣ್ಣದ ತೊಗಲಂಗಿ ತೊಟ್ಟಾಗ…

© ಅಶ್ವಥ ಕೆ ಎನ್

ಬಳ್ಳಾರಿಯ ಮೂಕಾ ಹತ್ತಿರದ ಪಕ್ಷಿಗಳ ಛಾಯಾಗ್ರಹಣ ಮುಗಿಸಿಕೊಂಡು ಬೈಕಿನಲ್ಲಿ ನಾನು, ಕಾಶಿನಾಥ ಮತ್ತು ನಿಜಗುಣಸ್ವಾಮಿ ಮನೆಗೆ ಮರಳಿ ಬರುತ್ತಿದ್ದೆವು. ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟ ಗಿಡಕ್ಕೆ ಆಸರೆಗಾಗಿ ನಿಲ್ಲಿಸಿದ ಒಂದು ಕಟ್ಟಿಗೆ ಗೂಟದ ತುದಿಯಲ್ಲಿ ಕೂತ ಓತಿಯನ್ನು ನೋಡಿ ತಕ್ಷಣ ಬೈಕನ್ನು ನಿಲ್ಲಿಸಲು ತಿಳಿಸಿದೆ. ಕ್ಯಾಮರವಾನ್ನು ಅದರತ್ತ ಗುರಿಮಾಡಿ ನೋಡಿದಾಗ ಅದು ನಾನಾ ಬಣ್ಣದ ತೊಗಲಂಗಿ ತೊಟ್ಟು ಯಾರಿಗೋ ಕಾದು ಕುಳಿತಂತಿತ್ತು. ತೊಗಲಂಗಿ ಕಳಚುವುದರೊಳಗೆ ಫೋಟೊ ಕ್ಲಿಕ್ಕಿಸಿಕೊಳ್ಳಬೇಕೆಂದು ನಿಧಾನವಾಗಿ ಬೈಕಿನಿಂದ ಇಳಿದು ಕಳ್ಳ ನಡಿಗೆ ನಡೆದು ಬೈಲು ಹೊಲವನ್ನು ಹಿನ್ನೆಲೆಯಾಗಿ ಇರಿಸಿಕೊಂಡು ಫೋಟೋ ಕ್ಲಿಕ್ಕಿಸತೊಡಗಿದೆವು.

ನಾನು ಓತಿಯನ್ನು ಸಾಮಾನ್ಯವಾಗಿ ತಲೆ ಭಾಗವು ಮಾತ್ರ ಕೆಂಪಾಗಿದ್ದನ್ನು ಕಂಡಿದ್ದೆ. ಆದರೆ ಇದು ತಲೆಯ ಭಾಗದಲ್ಲಿ ಕೆಂಪು, ಗಂಟಲಿನಿಂದ ದೇಹದ ಅರ್ಧ ಭಾಗ ಹಾಗೂ ಮುಂಗಾಲು ಕಪ್ಪಾಗಿಯೂ, ದೇಹದ ಇನ್ನರ್ಧ ಭಾಗ ಹಾಗೂ ಹಿಂಗಾಲು ನೀಲಿ ಬಣ್ಣ, ಬಾಲದ ಮೇಲ್ಭಾಗವು ತಿಳಿ ಹಳದಿ ಮತ್ತು ಬಾಲವು ಹಳದಿ ಹಾಗೂ ಕಪ್ಪು ಪಟ್ಟೆಗಳ ಬಣ್ಣ ಬಣ್ಣದ ತೊಗಲಂಗಿ ತೊಟ್ಟು ನಿಂತು ಪ್ರೇಯಸಿಗಾಗಿ, ಮತ್ತೊಂದು ಗಂಡಿನೊಂದಿಗೆ ಗುದ್ದಾಡಲು ಅಣಿಯಾದಂತಿತ್ತು.

©ಶಶಿಧರಸ್ವಾಮಿ ಆರ್. ಹಿರೇಮಠ

ಈ ಬಣ್ಣ ಬದಲಿಸುವ ಪ್ರಕ್ರಿಯೆಯು ಲೈಂಗಿಕ ಆಕರ್ಷಣೆಗಾಗಿ ಇಲ್ಲವೇ ಎರಡು ಬಲಿಷ್ಠ ಗಂಡು ಓತಿಗಳ ನಡುವಿನ ‘ಮಿಲನಪೂರ್ವ’, ಹೋರಾಟಕ್ಕಾಗಿ ಗೆದ್ದ ಗಂಡು ಓತಿಯೂ ಹೆಣ್ಣು ಓತಿಯನ್ನು ಸೇರುತ್ತದೆ. ಗಂಡು ಓತಿಗಳ ಈ ನಡುವಳಿಕೆಯು ಒಂದಕ್ಕಿಂತ ಹೆಚ್ಚು ಸಂದೇಶ ಸ್ವೀಕೃತದಾರರೊಂದಿಗೆ ಸಂವಹನವನ್ನು ಹೊರಹಾಕಿ ಜೊತೆಗಾತಿಯನ್ನು ಹುಡುಕಿ ಎದುರಾಳಿ ಗಂಡು ಓತಿಗಳನ್ನು ಹಿಮ್ಮೆಟ್ಟಿಸಿ ಸಂತಾನೋತ್ಪತ್ತಿಯಲ್ಲಿ ಯಶಸ್ಸನ್ನು ಹೊಂದುತ್ತವೆ. ವಿವಿಧ ಬಣ್ಣಗಳಿಗೆ ಓತಿಗಳು ಪ್ರತಿ ಸ್ಪಂದಿಸುತ್ತವೆ. ಹೆಣ್ಣು ಓತಿಗಳು “ಕಿತ್ತಳೆ” ಬಣ್ಣಕ್ಕೆ ಸ್ಪಂದಿಸುತ್ತವೆ. ಇಲ್ಲಿ ಕಿತ್ತಳೆ ಬಣ್ಣವು ಹೆಣ್ಣನ್ನು ಪರವಶಗೊಳಿಸಿ ಮಿಲನಕ್ಕಾಗಿ ನಿವೇದಿಸುವ ಬಣ್ಣವಾಗಿ ಹೊರ ಹೊಮ್ಮುತ್ತದೆ. ಗಂಡು ಓತಿಗಳು “ನೀಲಿ ಹಾಗೂ ಕಪ್ಪು” ಬಣ್ಣಕ್ಕೆ ಸ್ಪಂದನೆ ನೀಡುತ್ತವೆ. ಇಲ್ಲಿ ಇದು ತಮ್ಮ ಪೌರುಷತ್ವದ ದ್ಯೋತಕವಾಗಿ ಎರಡು ಗಂಡು ಓತಿಗಳು ಕಾದಾಟ ಅಥವಾ ಸ್ಪರ್ಧೆಗೆ ಅಣಿಯಾಗಿ ಎದುರಾಳಿಗೆ ನೀಡುವ ಸಂವಹನ ಸಂದೇಶವಾಗಿರುತ್ತದೆ. ಈ ಬಣ್ಣದ ಸಂಕೇತ ಸಂದೇಶಗಳನ್ನು

© ಅಶ್ವಥ ಕೆ ಎನ್

ಹೊರಹೊಮ್ಮಿಸುವುದು ಅವು ತಮ್ಮ ಲೈಂಗಿಕ ದ್ವಿರೂಪತೆ ಮತ್ತು ದ್ವಿವರ್ಣತೆಯು ಅನುವಂಶಿಯವಾಗಿ ವಿಕಸನದಿಂದ ಬಳುವಳಿಯಾಗಿ ಬಂದಿವೆ. ಈ ಗುಣ ಲಕ್ಷಣಗಳನ್ನು ಯಾವ ಓತಿ ಹೊಂದಿರುವುದೋ ಆ ಓತಿ ಬಲು ಸುಲಭವಾಗಿ ಸಂಗಾತಿಯನ್ನು ಪಡೆದುಕೊಳ್ಳತ್ತವೆ. ಈ ಗುಣ ಲಕ್ಷಣಗಳೇ ವರ್ಣತಂತುಗಳ ಮೂಲಕ ಅನುವಂಶಿಯವಾಗಿ ಮುಂದಿನ ಪೀಳಿಗೆಗೆ ರವಾನೆಯಾಗುತ್ತವೆ.

ಸಮಯವು ಕಳೆದ ಹಾಗೆ ಅದು ತನ್ನ ಬಣ್ಣದ ತೊಗಲಂಗಿಯನ್ನು ನಿಧಾನಗಾಗಿ ಕಳಚುತ್ತಾ ಕಟ್ಟಿಗೆಯ ಗೂಟಕ್ಕೆ ಅಪ್ಪಿಕೊಂಡು ಕುಳಿತುಕೊಂಡಿತು. ಅದರ ಪ್ರತಿ ಹಂತದ ಫೋಟೋ ಕ್ಲಿಕ್ಕಿಸಿಕೊಂಡ ನಾವುಗಳು ಬೈಕ್ ಏರಿ ಮನೆಯತ್ತ ನಡೆದೆವು.

ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ-ಜಿಲ್ಲೆ

Spread the love
error: Content is protected.