ಭೂಗತಲೋಕದಿಂದ ಬಂದ ಸಿಕಾಡ

ಭೂಗತಲೋಕದಿಂದ ಬಂದ ಸಿಕಾಡ

©ನಾಗೇಂದ್ರ ಎನ್ ಬಿ

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಲುಗಿರುವ ಬಂಡೀಪುರ ಕಾಡು ಮುಂಗಾರಿನ ಸಿಂಚನದಿಂದ ನವೋಲ್ಲಾಸಗೊಂಡಿದೆ. ಬೆಂಕಿಯಲ್ಲಿ ಬೆಂದು ಮಸಣದಂತಾಗಿದ್ದ ಕಾಡಲ್ಲಿ ಹೂ ಅರಳಿ, ಅದರ ಸುಗಂಧ ಕಾಡನ್ನೆಲ್ಲ ಪಸರಿಸುತ್ತಿದೆ. ಮಳೆಯ ಸಿಂಚನದಿಂದ ಕಾಡಿನಲ್ಲಿ ಹೊಸ ಸಂಚಲನಮೂಡಿ ಮರಗಳೆಲ್ಲ ಚಿಗುರಿ ವನದೇವಿ ಹಸಿರ ಸೀರೆಯುಟ್ಟು ಕಂಗೊಳಿಸುತ್ತಿರುವಂತೆ ಇದೆ. ಅಲ್ಲಲ್ಲಿ ನೃತ್ಯ ಮಾಡುತ್ತಿರುವ  ನವಿಲುಗಳು ಕಾಡಲ್ಲಿ ಮಳೆ ಹಬ್ಬದ ಸೊಬಗನ್ನ ಸಾರಿ  ಹೇಳುತ್ತಿವೆ. ಕಾಡಿನ ಈ ಹೊಸ ಚೇತನವನ್ನು ಕಂಡು ಮನಸ್ಸಿಗೇನೋ ಸಮಾಧಾನದುಸಿರು, ಅಂತೂ ಇನ್ನು ಬೆಂಕಿಯ ಭಯವಿಲ್ಲ. ಜಿಂಕೆಯಾದಿಯಾಗಿ ಸಸ್ಯಾಹಾರಿ ಪ್ರಾಣಿಗಳಿಗೆ ಹಸಿರಿನ ಹುಲ್ಲು ಕೈಬೀಸಿ ಕರೆಯುವಂತೆ ಚಿಗುರಿ ನಿಂತಿದೆ. ಇಷ್ಟು ಲವಲವಿಕೆಯ ಆಗರವಾದ ಕಾಡಿನಲ್ಲಿ ಅಂದು ಸಂಜೆಯ ಸಫಾರಿ ಹಾಗೂ ಹನಿ ಮಳೆ ಎರಡೂ ಮನಸ್ಸಿಗೆ ಒಂಥರಾ ಆಹ್ಲಾದ ನೀಡಿದ್ದಂತೂ ಸುಳ್ಳಲ್ಲ…. ಸಂಜೆ ಸಫಾರಿಯಲ್ಲಿ ತೊಯ್ದು ಹೋಗಿದ್ದರೂ ಮನಸ್ಸಿನಲ್ಲಿ ಏನೋ ಒಂದು ಸಂತಸ. ಸಫಾರಿ ಮುಗಿಸಿ ಬಂದರೂ ಮಳೆ ಜಿನುಗುತ್ತಿತ್ತು. ಬಂದು ಆರಾಮಾಗಿ ವಿಶ್ರಮಿಸಿ ರಾತ್ರಿ ಊಟ ಮುಗಿಸಿ ನಿದ್ದೆಗೆ ಜಾರಿದೆ.

ಮುಂಜಾವು 5.30 ಕ್ಕೆ ಎದ್ದವನೆ ಬೈನಾಕ್ಯುಲರ್ ಅನ್ನು ಹೆಗಲಿಗೆ  ಏರಿಸಿ  ಜೀಪ್ ಹತ್ತಿ ಸಫಾರಿಗೆ ಹೊರಟೆ. 

ಕಾನನ ಎಂದರೆ ನಿಶ್ಯಬ್ಧ ಹಾಗೂ ಪ್ರಶಾಂತ ವಾತಾವರಣ.. ಆದರೆ ಅಂದು ಸಫಾರಿಯಲ್ಲಿ ಏನೊ ಗದ್ದಲ,  ಮರಗಳಿಂದ ಚಿರ್ರನೆ ಚೀರುವ,  ಕಿವಿ ಕಿತ್ತುಹೋಗುವಂತಹ ಶಬ್ಧ. ಈ ಶಬ್ಧ ಕೇಳಿದ ನಮ್ಮ ಅತಿಥಿಗಳು “what’s that sound”  ಎಂದು ಕೇಳಿದರು. ಶಬ್ಧವು ಕೇಳಲು ಕಿವಿಗೆ ಕಿರಿಕಿರಿಯಾಗುತ್ತಿದ್ದರೂ ಒಂಥರಾ ಆಹ್ಲಾದ ನೀಡುತ್ತಿತ್ತು. ಇಂತಹ ಆಹ್ಲಾದ ನೀಡುತ್ತಿದ್ದದ್ದು ಒಂದು ಸಣ್ಣ ಕೀಟ, ಹೌದು ಅದುವೇ ಸಿಕಾಡ.

ಸಿಕಾಡಗಳದ್ದು ವಿಸ್ಮಯಕರವಾದ ಜೀವನ ಚಕ್ರ. ವಿಶ್ವದಾದ್ಯಂತ ಸರಿಸುಮಾರು 3000 ಪ್ರಭೇದ ಸಿಕಾಡಗಳು ಕಾಣಸಿಗುತ್ತವೆ. ಅವುಗಳಲ್ಲಿ 250 ಪ್ರಭೇದದ ಸಿಕಾಡಗಳನ್ನು  ನಮ್ಮ ದೇಶದಲ್ಲಿ ಕಾಣಬಹುದಾಗಿದೆ.

ಹೆಚ್ಚಾಗಿ ಗಿಡ ಮರಗಳಲ್ಲೇ ವಾಸಿಸುವ ಇವುಗಳು ಸಸ್ಯದ ರಸವನ್ನು(sap) ಹೀರುತ್ತವೆ. ಗಂಡು ಕೀಟವು   ಮಾತ್ರ ಈ ರೀತಿಯ ಚಿರ್ರನೆ ಶಬ್ಧ ಮಾಡಬಲ್ಲವು. ಅವು ತನ್ನ ಸಂಗಾತಿಯನ್ನು ಆಕರ್ಷಿಸುವುದಕ್ಕಾಗಿ ತನ್ನ ಹೊಟ್ಟೆಯ ಕೆಳಭಾಗದಲ್ಲಿರುವ ಟಿಂಬಲ್ ಎಂಬ ಅಂಗವನ್ನು ನಿರಂತರವಾಗಿ ಹಿಗ್ಗಿಸಿ-ಕುಗ್ಗಿಸಿ ಶಬ್ಧವನ್ನು ಹೊರಡಿಸುತ್ತವೆ. ಕೆಲವೊಂದು ಸಿಕಾಡಗಳ ಶಬ್ಧ 120 ಡೆಸಿಬಲ್‍ಗಳಷ್ಟಿರುತ್ತದೆ. ಆದರೆ ಮನುಷ್ಯನ ಶ್ರವಣದ ಗರಿಷ್ಟ ಮಿತಿ 80 ಡೆಸಿಬಲ್‍ಗಳು, ಎಂದರೆ ಸಿಕಾಡ ಹೊರಡಿಸುವ ಶಬ್ಧದ ತೀವ್ರತೆ ಅರ್ಥವಾಗುತ್ತದೆ. ಆದರೆ ಎಲ್ಲ ಗಂಡು ಸಿಕಾಡಗಳು ಒಂದೇ ಸಮನೆ ಕೂಗಿ, ಒಂದೇ ಸಮ ಕೂಗುವುದನ್ನು ನಿಲ್ಲಿಸುವುದು ಒಂದು ವಿಸ್ಮಯ. ಇವುಗಳ ಕೂಗಿಗೆ ಆಕರ್ಷಿತವಾದ ಹೆಣ್ಣು ಗಂಡಿನೊಂದಿಗೆ ಮಿಲನ ಕ್ರಿಯೆ ನಡೆಸುತ್ತದೆ. ನಂತರ ಮರಗಳ ತೊಗಟೆಯ ಬಿರುಕಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಸಂತಾನೋತ್ಪತ್ತಿ ಕೆಲಸವಾದೊಡನೆ ಈ ಹೆಣ್ಣು ಸಿಕಾಡಗಳು ಸಾಯುತ್ತವೆ.

© ಅಶ್ವಥ ಕೆ ಎನ್

ಚಿಟ್ಟೆಗಳಂತೆ ಇವುಗಳಲ್ಲಿಯೂ ಕೂಡ 2 ಹಂತದ ಜೀವನ ಕ್ರಮವಿದೆ(metamorphosis).

ಮೊಟ್ಟೆಯು ಒಡೆದು ಹೊರಬರುವ ಮರಿಗೆ(nimph)ರೆಕ್ಕೆಗಳಿರುವುದಿಲ್ಲ.
ಈ ಸಿಕಾಡಗಳಿಗೂ ಶತ್ರುಗಳ ಕಾಟವಿದೆ. ಸಾಮಾನ್ಯವಾಗಿ ಪಕ್ಷಿಗಳು, ಬಾವಲಿ, ಇರುವೆಗಳು, ಮಿಡತೆಗಳು, ಜೇಡ ಮೊದಲಾದವುಗಳು, ಒಂದೇ ಸಮಯದಲ್ಲಿ ಹೆಚ್ಚಾಗುವ ಈ ಸಿಕಾಡಗಳನ್ನು ತಮ್ಮ ದೈನಂದಿನ ಆಹಾರವನ್ನಾಗಿಸಿಕೊಳ್ಳುತ್ತವೆ.
ಈ ಶತ್ರುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಹಲವಾರು ಪ್ರಭೇದದ ಸಿಕಾಡಗಳು ತಮ್ಮನ್ನು ತಾವು ಮರೆಮಾಚಿಕೊಳ್ಳಲು ಪಾರದರ್ಶಕ ರೆಕ್ಕೆಗಳನ್ನು ಹೊಂದಿವೆ. ಹಾಗಾಗಿಯೇ ನಾವು ಸಿಕಾಡಗಳನ್ನು ಅಷ್ಟು ಸುಲಭವಾಗಿ ಪತ್ತೆ ಮಾಡಲು ಆಗುವುದಿಲ್ಲ.

ಲೇಖನ: ಮಹದೇವ ಕೆ ಸಿ
ಬೆಂಗಳೂರು
ಜಿಲ್ಲೆ

Print Friendly, PDF & Email
Spread the love
error: Content is protected.