ಕಲ್ ಕರಗಿಸುವ ಸಸ್ಯ

ಕಲ್ ಕರಗಿಸುವ ಸಸ್ಯ

ನೀವೇನಾದರೂ ಹಳ್ಳಿಯ ಮುದುಕರ ಬಳಿ ನನಗೆ ಆ ಊಟ ಸೇರುವುದಿಲ್ಲ, ಇದು ಜೀರ್ಣವಾಗದು ಎಂದು ಯವುದಾದರು ಸುಸಂದರ್ಭದಲ್ಲಿ ರಾಗ ಎಳೆದರೆ, ನೀವು ತಪ್ಪದೆ ಕೇಳುವ ವಾಕ್ಯವೆಂದರೆ “ಏನ್ರುಲ್ಲಾ ನಿಮ್ ವಯಸ್ನಲ್ಲಿ ನಾನು ಕಲ್ ತಿಂದು ಕರ್ಗುಸ್ಕೋತಿದ್ದೆ, ಈಗಿನ್ ಕಾಲುದ್ ಹೈಕ್ಳು ಏನಕ್ಕೂ ಬ್ಯಾಡ. ತತ್!” ಎಂದು ಶುರುಮಾಡಿ ಅವರ ಹಳೆಯ ಬ್ಲಾಕ್ ಅಂಡ್ ವೈಟ್ ದಿನಗಳ ನೆನಪುಗಳಿಗೆ ಜಾರಿ, ನೀವು ಒಪ್ಪದಿದ್ದರೂ ನಿಮ್ಮನ್ನೂ ಎಳೆದೊಯ್ಯುವರು. ನಂತರ ಆ ಜಾಲದಿಂದ ತಪ್ಪಿಸಿಕೊಂಡು ಬರುವ ದಾರಿ ನಿಮ್ಮ ಜಾಣ್ಮೆಗೆ ಬಿಟ್ಟಿದ್ದು.

ಹಾಗೆಂದರೆ ನಿಜವಾಗಿಯೂ ಆಗಿನ ಕಾಲದ ಹಿರಿಯರು ಕಲ್ಲನ್ನು ತಿಂದು ಕರಗಿಸಿಕೊಳ್ಳುತ್ತಿದ್ದರೆ? ಎಂಬುದಲ್ಲ ಪ್ರಶ್ನೆ ಈಗ. ಏಕೆಂದರೆ ಅದು ನಿಜವೂ ಆಗಿರಬಹುದು, ನಮ್ಮ ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಆಮ್ಲಗಳು ಸಣ್ಣ ಸಣ್ಣ ಕಲ್ಲುಗಳನ್ನು ಕರಗಿಸಿರಬಹುದು. ಅದೇ…ಯಾವುದಾದರೂ ಒಂದು ಜಾತಿ ಸಸ್ಯ “ಲೋ ಹೈಕ್ಳಾ… ಎಲ್ಲಾ ವಯಸ್ನಲ್ಲೂ ನಾನು ಕಲ್ ತಿಂದು ಕರ್ಗುಸ್ಕೋತೀನಿ ಗೊತ್ತಾ?” ಎಂದರೆ ನಂಬುವಿರಾ?

ನಂಬದಿದ್ದರೆ ಮುಂದೆ ಓದಿ… ಹೌದು  ಎಂದು ನಂಬುವುದಾದರೆ ಇಲ್ಲಿಗೆ ನಿಲ್ಲಿಸಿಬಿಡಿ. ಏಕೆಂದರೆ ನಾನು ಮುಂದೆ ಹೇಳುವ ವಿಷಯ ನಿಮಗೆ ಈಗಾಗಲೇ ತಿಳಿದಿದೆ ಎಂದಾಯಿತು.

ನೋಡಿದಿರಾ ಕೆಲವರು ಓದುವುದೇ ನಿಲ್ಲಿಸಿಬಿಟ್ಟರು. ಹೋದವರು ಹೋಗಲಿ ಬಿಡಿ! ನೀವಾದರೂ ಇದ್ದೀರಲ್ಲ. ಮುಂದೆ ಹೋಗೋಣ. ಈ ಮೇಲೆ ಹೇಳಿದಂತೆ ಕೆಲವು ಸಸ್ಯಗಳು ಕಲ್ಲನ್ನು ಕರಗಿಸಿ ಊಟ ಮಾಡಿ ಬದುಕುತ್ತಿವೆ ಎನ್ನುತ್ತಾರೆ ಬ್ರೆಜಿಲ್ ನಲ್ಲಿನ ಒಂದು ವಿಶ್ವವಿದ್ಯಾಲಯದ ಸಸ್ಯವಿಜ್ಞಾನಿ. ಅರೇ ಇದೇನಿದು ಅವರ ಹೆಸರನ್ನೇ ಹೇಳಲಿಲ್ಲ, ವಿ ವಿ ಅಂಕಣದಲ್ಲಿ ಈಗೇನು ಕತೆ ಹೇಳುವುದು ಶುರುಮಾಡಿಬಿಟ್ಟಿರಾ! ಎಂದು ಬೇಸರ ಮಾಡಿಕೊಳ್ಳಬೇಡಿ. ಅವರ ವಿಚಿತ್ರ ಹೆಸರು  ಹೇಗೆ ಹೇಳುವುದು ಎಂದು ತಿಳಿಯಲಿಲ್ಲ ಅಷ್ಟೆ . ವಿಷಯಕ್ಕೆ ಬಂದರೆ, ಅಂತಹ ಸಸ್ಯಗಳು ಸಿಗುವುದಾದರೂ ಎಲ್ಲಿ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಂತಹ ಕಲ್ಲನ್ನು ಕರಗಿಸುವ ಸಸ್ಯಗಳು ಸಿಗುವುದು ಬ್ರೆಜಿಲ್ ಮತ್ತು ಆಸ್ಟ್ರೇಲಿಯಾ ದೇಶಗಳ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ. ಎಂದರೆ ನಿಮ್ಮ ದಾರಿ ತಪ್ಪಿಸಿದ ಹಾಗಾಗುತ್ತದೆ. ಏಕೆಂದರೆ ನಮ್ಮ ದೇಶದ ಬಂಡೆ ಪ್ರದೇಶಗಳಲ್ಲಿ ಬಂಡೆಗಳ ಮೇಲೆ ಬೆಳೆಯುವ ಸಸ್ಯಗಳೂ ಸಹ ಇದೇ ಉಪಾಯವನ್ನು ಬದುಕಲು ಬಳಸಿಕೊಂಡಿರಬಹುದು. ಹೇಗೆ ಎಂಬುದು ನಿಮಗೆ ಮುಂದೆ ತಿಳಿಯಲಿದೆ.

ನಮ್ಮ ಬ್ರೆಜಿಲ್ ಸಸ್ಯವಿಜ್ಞಾನಿಗಳ ಸಂಶೋಧನೆ ಪ್ರಕಾರ, ಸಸ್ಯಗಳಿಗೆ ಬೇಕಾದ ಪೋಷಕಾಂಶಗಳ ಕೊರತೆ ಇರುವ ಅಥವಾ ಹೆಚ್ಚು ಕಡಿಮೆ ಇಲ್ಲವೇ ಇಲ್ಲ ಎಂದು ನಮಗನ್ನಿಸುವ ಬಂಡೆಗಳ ಮೇಲೆ ಬೆಳೆಯುವ ಸಸ್ಯಗಳು. ತಮಗೆ ಬೇಕಾದ ಪೋಷಕಾಂಶಗಳನ್ನು ಕಲ್ಲನ್ನು ಕರಗಿಸಿ ಪಡೆಯುತ್ತವೆ ಎನ್ನುತ್ತಾರೆ. ಹೌದು! ನಾವು ಮೇಲ್ನೋಟಕ್ಕೆ ನೋಡಿದಾಗ ಬಂಡೆ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸಸ್ಯಗಳ ಜೀವ ವೈವಿಧ್ಯತೆಯನ್ನು ನೋಡಿರುವುದಿಲ್ಲ. ಆದರೆ ಅದೇ ಸತ್ಯವೆಂದು ನಂಬುವುದಾದರೆ ಅದು ನಮ್ಮ ನಮ್ಮ ಮೂರ್ಖತನ. ಏಕೆಂದರೆ, ಬ್ರೆಜಿಲ್ ನ ಕೇವಲ ಶೇಕಡಾ 1 ಭಾಗ ಆವರಿಸಿರುವ ಬಂಡೆಯುಕ್ತ ಹುಲ್ಲುಗಾವಲಿನಲ್ಲಿ ಆ ದೇಶದ 5000 ವಿವಿದ ಜಾತಿಯ ಸಸ್ಯಗಳಿವೆ. ಎಂದರೆ ಬ್ರೆಜಿಲ್ ನ ಎಲ್ಲಾ ಸಸ್ಯ ಜೇವವೈವಿಧ್ಯತೆಯಲ್ಲಿ ಶೇಖಡಾ 15  ಭಾಗ. ಹಾಗಾದರೆ ಮಣ್ಣು ಮತ್ತು ಪೋಷಕಾಂಶಗಳ ಕೊರತೆ ಇರುವ ಅಂತಹ ಪ್ರದೇಶದಲ್ಲಿ ಅಷ್ಟು ವೈವಿಧ್ಯ ಸಸ್ಯಜಾತಿ ಹೇಗೆ ಸಾಧ್ಯ? ಎಂಬುದು ಸರಿಯಾದ ಪ್ರಶ್ನೆ.

ಇದೇ ಪ್ರಶ್ನೆ ನಮ್ಮ ವಿಜ್ಞಾನಿಗಳಿಗೂ ಮೂಡಿ, ಅದನ್ನು ತಿಳಿಯಲು ಬಂಡೆ ಕಲ್ಲುಗಳ ಮೇಲೆ ಬೆಳೆಯುವ ಬಾರ್ಬೇಸೀನಿಯ ಟೊಮೆಂಟೊಸಾ ಮತ್ತು ಬಿ.ಮೆಕ್ರಾಂತ ಎಂಬ ಎರಡು ಜಾತಿಯ 30 ಸಸ್ಯಗಳನ್ನು ಪರೀಕ್ಷೆಗೆಂದು ತೆಗೆದುಕೊಂಡರು.

ಹೀಗೆ ತೆಗೆಯುವಾಗ ಅವರಿಗೆ ಒಂದು ಆಶ್ಚರ್ಯಕರ ವಿಷಯ ತಿಳಿಯಿತು. ಅದೆಂದರೆ ಬಂಡೆಯ ಮೇಲೆ ಬೆಳೆಯುವ ಈ ಸಸ್ಯಗಳ ಬೇರುಗಳು ಬಂಡೆಗಳಲ್ಲೇ ಕನಿಷ್ಟ 10 ಸೆಂ. ಮೀ ಇರುತ್ತಿತ್ತಂತೆ. ಬಂಡೆಯೊಳಗೆ 10 ಸೆಂ ಮೀ ಹೋಗುವುದೆಂದರೆ ಸುಲಭದ ಮಾತೇನು? ಆದರೂ ಹೇಗೋ ಕಷ್ಟಪಟ್ಟು 30 ಸಸ್ಯಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪದಡಿಸಿದರು. ಸೂಕ್ಷ್ಮದರ್ಶಕ ಮತ್ತು ರಾಸಾಯನಿಕ ಪರೀಕ್ಷೆಗಳಿಗೆ ಒಳಪಡಿಸಿದ ನಂತರ ಅವರಿಗೆ ಎರಡು ಮುಖ್ಯ ವಿಷಯಗಳು ತಿಳಿದವು. ಆ ಎರಡು ವಿಷಯಗಳೇ ಆ ಸಸ್ಯಗಳ ಅಂತಹ ಪ್ರದೇಶಗಳಲ್ಲಿನ ಉಳಿವಿಕೆಗೆ ಬಲವಾದ ಕಾರಣಗಳು ಎನ್ನಬಹುದು. ಅವೆಂದರೆ…

 ಒಂದು : ಸೂಕ್ಷ್ಮದರ್ಶಕದಲ್ಲಿ ಗಮನಿಸಿದಾಗ ಮೊದಲಿಗೆ ತಿಳಿದಿದ್ದು ಆ ಸಸ್ಯಗಳ ಬೇರುಗಳ ತುದಿಯಲ್ಲಿ ಇನ್ನು ಹಲವಾರು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಬೇರುಗಳು ಕಂಡುಬಂದವು.

ಎರಡು : ಆ ಸೂಕ್ಷ್ಮ ಬೇರುಗಳಿಂದ ಆ ಸಸ್ಯಗಳು ಮ್ಯಾಲಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲಗಳನ್ನು ಸ್ರವಿಸುತ್ತಿತ್ತು.

 ಹೀಗೆ ಸಸ್ಯಗಳು ಆಮ್ಲಗಳನ್ನು ಸ್ರವಿಸುವ ಮೂಲಕ ಬಂಡೆ ಕಲ್ಲನ್ನು ಕರಗಿಸಿ ಅಲ್ಲಿಂದ ಸಿಗುವ ಸಸ್ಯಾವಶ್ಯಕ ರಂಜಕಗಳನ್ನು ಪಡೆದುಕೊಳ್ಳುತ್ತವೆಯಂತೆ. ಆ ರಂಜಕದ ಸಹಾಯದಿಂದ ಆಹಾರ ತಯಾರಿಸಿಕೊಳ್ಳುತ್ತವೆ. ಹಾಗಾದರೆ ಈ ಸಸ್ಯಗಳು ಒಂದು ರೀತಿಯಲ್ಲಿ ಕಲ್ಲನ್ನು ಕರಗಿಸಿ ಜೀರ್ಣಿಸಿಕೊಂಡಂತೆ ಅಲ್ಲವೇ?

ಖಂಡಿತ ಹೌದು. ಹಾಗೆಯೇ ಈ ರೀತಿ ರಾಸಾಯನಿಕಗಳನ್ನು ಸ್ರವಿಸಿ ಪೋಷಕಾಂಶಗಳನ್ನು ಪಡೆಯುವ ಬೇರೆ ಸಸ್ಯಗಳೂ ಇದ್ದಾವೆ. ಆದರೆ ಅವು ಯಾವುವೂ ಸಹ ಕಲ್ಲನ್ನು ಕರಗಿಸಿ ಅಲ್ಲಿನ ಪೋಷಕಾಂಶಗಳನ್ನು ಪಡೆದುಕೊಳ್ಳುವುದಿಲ್ಲ. ಬದಲಿಗೆ ರಂಜಕದ ಪ್ರಮಾಣ ಕಡಿಮೆ ಇರುವ ಮಣ್ಣಿನಲ್ಲಿ ಹೀಗೆ ರಾಸಾಯನಿಕ ಶಕ್ತಿ ಬಳಸಿ ರಂಜಕ ಪಡೆಯುತ್ತಿರುವ ಉದಾಹರಣೆಗಳಿವೆ ಅಷ್ಟೆ.

ಅದೆಲ್ಲಾ ಸರಿ. ಹುಂ… ತುಂಬಾ ಒಳ್ಳೆಯ ಸಂಶೋಧನೆ. ಆದರೆ ಇಂತಹ ಸಂಶೋಧನೆಗಳಿಂದ ಏನು ನಿಜವಾದ ಉಪಯೋಗ? ನನಗೇನು ಪ್ರಯೋಜನ? ಎಂಬುದು ತುಂಬ ಒಳ್ಳೆಯ ಪ್ರಶ್ನೆ. ಸಹಜವಾಗಿ ಮೂಡಬೇಕಾದ ಪ್ರಶ್ನೆ.

ಈ ಸಸ್ಯಗಳು ಎಷ್ಟು ಪೋಷಕಾಂಶಹೀನ ಪ್ರದೇಶದಲ್ಲಿ ಬೆಳೆಯುತ್ತವೆ ಎಂದರೆ, ಆ ಕಲ್ಲಿನಲ್ಲಿ ಪ್ರತೀ ಗ್ರಾಂ ಗೆ  ಕೇವಲ 0.12 ಮಿಲಿ ಗ್ರಾಮ್ ನಷ್ಟು ರಂಜಕ ಮಾತ್ರ ದೊರೆಯುತ್ತದೆ. ಅಂತಹ ಪ್ರದೇಶಗಳಲ್ಲಿಯೇ ಇವುಗಳು ಬದುಕಿ ತೋರಿಸುತ್ತಿವೆ. ಹಾಗಾದರೆ ಸಸ್ಯಗಳ ಈ ಗುಣಗಳನ್ನು ನಾವು ನಮ್ಮ ಬೆಳೆ ಬೆಳೆಯುವ ಸಸ್ಯಗಳಲ್ಲಿ ತಂದರೆ, ಪೋಷಕಾಂಶಹೀನ ಎಷ್ಟೋ ಪ್ರದೇಶಗಳಲ್ಲಿ ಒಳ್ಳೆಯ ಬೆಳೆ ಬೆಳೆಯಬಹುದಲ್ಲವೇ? ರೈತರ ಏಳ್ಗೆಯಾಗುವುದಿಲ್ಲವೇ? ನೀವು ಸಹ ಒಳ್ಳೆಯ ಆಹಾರ ಸೇವಿಸುವ ಹಾಗಾಗುವುದಲ್ಲವೇ? ಒಮ್ಮೆ ಯೋಚಿಸಿ ನೋಡಿ.

ಅಷ್ಟೇ ಅಲ್ಲ! ಇವುಗಳಿಂದ ಒಂದು ಜೀವನ ಪಾಠವನ್ನೂ ಸಹ ಕಲಿಯಬಹುದು. ಎಷ್ಟೋ ಬಾರಿ ಕ್ಷುಲ್ಲಕ ಕಾರಣಳಿಗೆ ಆತ್ಮಹತ್ಯೆ ಮಾಡಿಕೊಂಡು ಸಾವಿನ ಮೊರೆ ಹೋಗುವ ಮೂರ್ಖ ಜೀವಜಾತಿ ನಮ್ಮದಾದರೆ,  ಅಷ್ಟು ಕಠಿಣ ಪ್ರದೇಶ-ಪರಿಸ್ಥಿತಿಗಳಲ್ಲಿಯೂ ಸಹ ಜೀವನ ನಡೆಸುವ ಆ ಜೀವಗಳಿಗೆ ಹೋಲಿಸಿದರೆ ನಮ್ಮ ಕಷ್ಟಗಳೆಲ್ಲಿ?!

ಮೂಲ ಲೇಖನ ScienceNewsforStudents.

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.