2019 ರ ಬೇಸಿಗೆ ಶಿಬಿರ

2019 ರ ಬೇಸಿಗೆ ಶಿಬಿರ

ಕಾಡಿನ ಅಂಚಿನಲ್ಲಿ ವಾಸವಾಗಿರುವ ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಕಾಡಿನ ಬಗ್ಗೆ ಹಾಗು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು WCG ತಂಡವು ಹತ್ತು ವರ್ಷಗಳಿಂದ ಹಲವಾರು ಪರಿಸರಪೂರಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರತೀ  ವರ್ಷವೂ   ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸುವುದು ಈ ನಮ್ಮ

ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅದೇ ರೀತಿ ಈ ವರ್ಷವೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ವಾಸವಿರುವ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಎರಡು ದಿನದ ಬೇಸಿಗೆ ಶಿಬಿರವನ್ನು 11 ಮತ್ತು 12 ನೇ ಮೇ 2019 ರಂದು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಆಯೋಜಿಸಲಾಗಿತ್ತು. ವಿವಿಧ ಶಾಲೆಯ ಸುಮಾರು 20 ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 9 ಗಂಟೆಗೆ ಅಡವಿ ಫೀಲ್ಡ್  ಸ್ಟೇಷನ್ ಗೆ ಬಂದ  ಶಿಬಿರಾರ್ಥಿಗಳನ್ನು ಪರಿಚಯಿಸಿಕೊಂಡ ನಮ್ಮ ತಂಡವು ಪಕ್ಷಿವೀಕ್ಷಣೆಗೆ ಅವರನ್ನು ಕರೆದೊಯ್ಯಲಾಯಿತು. ಸರಿ ಸುಮಾರು ಒಂದು ಗಂಟೆಗಳ ಕಾಲ ವಿವಿಧ ಪಕ್ಷಿಗಳನ್ನು ವೀಕ್ಷಿಸಿ ಬಂದ  ಮಕ್ಕಳಿಗೆ ರುಚಿಯಾದ ತಿಂಡಿಯನ್ನು ನೀಡಿ ಮುಂದಿನ ಕಾರ್ಯಕ್ರಮಕ್ಕೆ ಶಕ್ತಿ ತುಂಬಲಾಯಿತು. ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ಬೋರ್ಡ್, ಬಳಪ ಗಳನ್ನು ಉಪಯೋಗಿಸಿ ಪಾಠ ಕಲಿಸುವುದು ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟು ಹಾಕುವುದಿಲ್ಲ. ಅದರ ಬದಲು ಅವರಲ್ಲಿರುವ ಸೃಜನಶೀಲತೆಯನ್ನು ಕಡಿಮೆಗೊಳಿಸುತ್ತದೆ ಎಂದು ನಂಬಿರುವ ನಮ್ಮ ತಂಡವು ಪರಿಸರದ ಎಲ್ಲ ಜೀವಿಗಳ ಹಾಗೂ ಪರಿಸರ ಸಂಪನ್ಮೂಲಗಳ ಮಹತ್ವವನ್ನು ತಿಳಿಸಲು ಹಲವಾರು ಚಟುವಟಿಗಳನ್ನು ವಿನ್ಯಾಸಗೊಳಿಸಿದೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ, ಆಹಾರ ಜಾಲ, ನೀರಿನ ಸರಪಳಿ, ಚಿಟ್ಟೆಗಳ ಬಣ್ಣ, ನಿಸರ್ಗ ಚಿತ್ರಕಲೆ, ನಾಯಿ- ಮೂಳೆ, ಗುಂಪುಗಾರಿಕೆ, ನಟಿಸಿದಂತೆ ನುಡಿ ಇತ್ಯಾದಿ …

ತಿಂಡಿ ಮುಗಿಸಿದ ಮಕ್ಕಳಿಗೆ  ನಮ್ಮ ಈ ಚಟುವಟಿಕೆಗಳ  ಮುಖಾಂತರ   ನಮ್ಮ ಸುತ್ತಲಿರುವ ವಿವಿಧ  ಜೀವಿಗಳನ್ನು ಪರಿಚಯಿಸಲಾಯಿತು. ಉದಾಹರಣೆಗೆ ಪ್ರತಿ ಮಗುವನ್ನು ವಿವಿಧ ಜೀವಿಗಳ ಹೆಸರನ್ನು ನೀಡಿ ಪರಿಸರದಲ್ಲಿ ಆ ಜೀವಿಯು  ಆಹಾರಕ್ಕಾಗಿ ಯಾವುದರ ಮೇಲೆ ಅವಲಂಬಿತವಾಗಿದೆ ಹಾಗು ಇದರ ಮೇಲೆ ಯಾವ ಜೀವಿ ಅವಲಂಬಿತವಾಗಿದೆ ಅದನ್ನು ಮಕ್ಕಳಲ್ಲಿಯೇ ಕೇಳಿ, ಸಂಬಂಧವಿರುವ ಜೀವಿಗೆ(ಅದೆ ಹೆಸರಿನ ಬೇರೆ ಶಿಬಿರಾರ್ಥಿಗೆ)  ದಾರವನ್ನು ಕಟ್ಟಲಾಯಿತು. ನಮ್ಮ ಸ್ವಾರ್ಥದಿಂದ ಭೂಮಿಯಿಂದ ಯಾವುದಾದರೂ  ಜೀವಿ ನಿರ್ನಾಮವಾದರೆ ಈ ಆಹಾರ ಕೊಂಡಿ ಹೇಗೆ ಸಡಿಲಗೊಳ್ಳುತ್ತದೆ ಹಾಗು ಪರಿಸರದಲ್ಲಿ ಹೇಗೆ ಅಸಮತೋಲನ ಉಂಟಾಗುತ್ತದೆ ಎಂದು ತೋರಿಸುವ ಚಟುವಟಿಕೆಯನ್ನು ಮಾಡಿಸಲಾಯಿತು.  ಹೀಗೆಯೇ ಸಂಜೆಯ  ತನಕ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳು ಹಲವಾರು ಬಗೆಯ ಜೀವಿಗಳ ಬಗ್ಗೆ ಹಾಗು ನೀರು ಮತ್ತು ಮಣ್ಣಿನ ಮಹತ್ವವನ್ನು ತಿಳಿದುಕೊಂಡರು. ಸಂಜೆಯ ಅಕಾಲಿಕ ಮಳೆಯು  ಸಕಲ ಜೀವಿಗಳಲ್ಲಷ್ಟೇ ಅಲ್ಲದೆ ನಮ್ಮ ಶಿಬಿರಾರ್ಥಿಗಳಲ್ಲೂ ಚೈತನ್ಯವನ್ನು ತುಂಬಿತು. ಮಳೆ ನಿಂತಾಕ್ಷಣ ಪಡುವಣದಲ್ಲಿ ಕೆಂಪಾಗಿ ಮಿನುಗುತ್ತಿದ್ದ ಸೂರ್ಯನನ್ನು ಕಣ್ತುಂಬಿಸಿಕೊಳ್ಳಲು ಪಕ್ಕದಲ್ಲಿಯೇ ಇದ್ದ ಗುಡ್ಡಕ್ಕೆ ಮಕ್ಕಳನ್ನು ಸೂರ್ಯಾಸ್ತ ವೀಕ್ಷಿಸಲು ಕರೆದೊಯ್ಯಲಾಯಿತು..

ಸೂರ್ಯಾಸ್ತ ಗಮನಿಸಿ ಹಿಂತಿರುಗಿದ ಮಕ್ಕಳಿಗೆ ಪರಿಸರಕ್ಕೆ ಸಂಬಂಧಿಸಿದ ಕೆಲವು ಆಟಗಳನ್ನು ಆಡಿಸಲಾಯಿತು. ಸಂಜೆಯ ಊಟವನ್ನು ನೀಡಿದ ಮಕ್ಕಳಿಗೆ, ಮಳೆಯಿಂದ ಎಚ್ಚೆತ್ತು ತಮ್ಮ ಸಂಗಾತಿಗಳನ್ನು ಹುಡುಕುವಲ್ಲಿ ಸಕ್ರಿಯಗೊಂಡಿದ್ದ ಕಪ್ಪೆಗಳನ್ನು ಗಮನಿಸಲು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಒಂದು ಸುತ್ತು ಕರೆದೊಯ್ದು ವಿವಿಧ ಪ್ರಭೇದದ ಕಪ್ಪೆಗಳ ಬಗ್ಗೆ ಮಾಹಿತಿ ಕೊಡಲಾಯಿತು. ಶಿಬಿರಾರ್ಥಿಗಳು ಬಲು ಕುತೂಹಲದಿಂದ ಕಾಯುತ್ತಿದ್ದ ‘ಕ್ಯಾಂಪ್ ಫೈರ್’ ಪ್ರಾರಂಭಿಸಿ ಹಲವು ಪರಿಸರ ಗೀತೆಗಳನ್ನು ಹಾಡಲಾಯಿತು ಮತ್ತು ನಮ್ಮ ತಂಡದವರು ತಮ್ಮ ಕಾಡಿನ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.

ನಮ್ಮ ನಿಸರ್ಗದ ಸೌಂದರ್ಯವನ್ನು ನಮ್ಮ ಶಿಬಿರಾರ್ಥಿಗಳಿಗೂ ತೋರಿಸಬೇಕು ಎಂದು ಅವರನ್ನು 12 ನೇ ಭಾನುವಾರ ತಿಂಡಿಯ ನಂತರ ಸುಮಾರು 3 ಕಿ. ಮೀ ದೂರವಿರುವ ಜಿ. ಡಿ ಬೆಟ್ಟಕ್ಕೆ ಚಾರಣ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಕಾಣುವ ಪಕ್ಷಿ, ಮರ, ಕೀಟಗಳ ಬಗ್ಗೆ  ತಿಳಿಸಿಕೊಡಲಾಯಿತು. ಮಧ್ಯಾಹ್ನ ಚಾರಣದಿಂದ ಹಿಂತಿರುಗಿದ ಮಕ್ಕಳ ಅನುಭವವನ್ನು ಹಂಚಿಕೊಳ್ಳುವ ಮುಖಾಂತರ ಶಿಬಿರವನ್ನು ಅಂತ್ಯಗೊಳಿಸಲಾಯಿತು.

“ಮುಂದಿನ ಕ್ಯಾಂಪ್ ಯಾವಾಗ ಅಣ್ಣ, ಮತ್ತೆ ಯಾವತ್ತು ಬರ್ಬಹುದು ನಾವು” ಎಂದು ಕೇಳುವ ಮಕ್ಕಳ ಮಾತೇ ಶಿಬಿರದ ಸಾರಾಂಶವನ್ನು ತಿಳಿಸುವಂತಿತ್ತು. ಮಕ್ಕಳಿಗೆ, ಯುವಕರಿಗೆ ಹಾಗೂ ಸಾಮಾನ್ಯ ಜನರಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಡಲು WCG ಯು ಅಡವಿ ಫೀಲ್ಡ್ ಸ್ಟೇಷನ್ ಪ್ರತಿ ತಿಂಗಳು ಒಂದೊಂದು ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಆಸಕ್ತರು www.indiawcg.org ಗೆ ಭೇಟಿ ನೀಡಿ ಅಥವಾ
ಸಂಪರ್ಕಿಸಿ 9008261066 (ನಾಗೇಶ್)
9740919832 (ಅಶ್ವಥ್)

– ನಾಗೇಶ್ ಓ ಎಸ್
ಡಬ್ಲ್ಯೂ ಸಿ ಜಿ ., ಬೆಂಗಳೂರು

Print Friendly, PDF & Email
Spread the love
error: Content is protected.