ಮರ ದೇವತೆ

ಓ ತಾಯಿ ಮರ ದೇವತೆ
ನಿಸ್ವಾರ್ಥ ಸೇವೆಯ ಜಗದೊಡತೆ !!

ಮನುಷ್ಯನಿಗೆ ಹುಟ್ಟಿದಾಗ ತೊಟ್ಟಿಲವಾದೆ
ಸತ್ತಾಗ ಹೊತ್ತೊಯ್ಯುವ ಬಂಡಿಯಾದೆ
ಜೀವ ಜಂತುಗಳು, ಜೋತ ಭಾವಲಿಗಳು
ಖಗ-ಮೃಗಗಳಾದಿಯಾಗಿ, ಅಸಂಖ್ಯಾತ
ಜೀವ ಪ್ರಭೇದಗಳು !
ನಿನ್ನಾಶ್ರಯದಿ ಒಂದೇ ? ಎರಡೇ ?

ನಿನ್ನ ಚಿಗುರಲೆ ಹೂ ಹಣ್ಣು
ನಿನ್ನಾಶ್ರಯದಿ ಕಟ್ಟುವ ಜೇನು, ಕಿತ್ತಿ ತಿನ್ನುವರು
ಮರಮಟ್ಟು ಆಸೆಗಾಗಿ, ನಿನ್ನ ನೆರಳಲ್ಲೆ ಕುಳಿತು
ಕತ್ತಿ-ಕೊಡಲಿ ಮಸೆದು, ದಣಿವಾರಿದ ಮೇಲೆ
ನಿನ್ನನ್ನೆ ಕಡಿದು ನೆಲಕ್ಕುರುಳಿಸುವರು !

ಗಡಿ-ಭಾಷೆ, ಕುಲ-ಗೋತ್ರಗಳ ಗೊಡ್ಡು ಪ್ರತಿಷ್ಠೆಗೆ
ಜೀವ ತೆತ್ತಿ ರಕ್ತ ಹರಿಸುವರು, ಈ ಜಗದ ಜನರು
ಬುಡ ಕಡಿದರು ಮತ್ತೆ ಚಿಗೊರೆಡೆಯಲೆತ್ನಿಸುವೆ
ನಿನ್ನ ನಿಸ್ವಾರ್ಥ ಸೇವೆ ಮಾಡಲು

ಬುದ್ಧನೇ ಬಂದುದ್ದಲವೇ ನಿನ್ನನ್ನಾ ಶಿಸಿ?
ಪತಂಜಲಿಯು ಪ್ರಖ್ಯಾತಿ ಪಡೆದುದ್ದಲ್ಲವೇ
ನಿನ್ನನ್ನು ಉಪಯೋಗಿಸಿ
ವಿಜ್ಞಾನ-ವೇದ-ಪುರಾಣಗಳೆಲ್ಲ ಹುಟ್ಟಿ ಬೆಳೆದುದ್ದಲ್ಲವೇ ?
ನಿನ್ನ ಅಕ್ಕರೆಯ ಮಡಿಲಲ್ಲಿ

ಹಸಿರು ಹಂದರದ ವಿಶಾಲ ಭೂಪಥದಲಿ
ಗಿರಿಧರೆಯ ಏರಿಳಿತದಲಿ
ಸ್ಥಿರ ನಿಂತು ವರ ನೀಡುವ
ಮರ ದೇವತೆಯೇ,- ನನ್ನಾಸೆ ಇಷ್ಟೇ
ನನ್ನ ಈ ಜನ್ಮ ಸಾರ್ಥಕವಾಗುವುದೆಂದಾರೆ
ನಿನ್ನೊಡಲಿನಲ್ಲಿ ಜನಿಸಿ, ನಿನ್ನೊಡನೆ ಇದ್ದು,

ನಿನ್ನನ್ನೆ ಉಪಯೋಗಿಸಿ, ನಿನ್ನಂತಾಗದ ನನ್ನೀದೇಹ
ಸತ್ತಮೇಲೆ ಸುಟ್ಟರೆ ಬೂದಿಯಾಗಿ ನಿನ್ನ ಬೇರು ಸೇರಲಿ
ಮಣ್ಣು ಗೂಡಿಸಿದ್ದರೆ ನನ್ನ ಗೋರಿಯ ಮೇಲೊಂದು ಬೀಜವು
ಮೊಳಕೆ ಒಡೆದು ಹೆಮ್ಮರವಾಗಲಿ !!!

-ಸೋಮು ಎಚ್. ಹಿಪ್ಪರಗಿ
ಧಾರವಾಡ ಜಿಲ್ಲೆ

Print Friendly, PDF & Email
Spread the love
error: Content is protected.