ನೀವೂ ಕಾನನಕ್ಕೆ ಬರೆಯಬಹುದು
ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಕನಕದಾಸರು ಈ ಹಿಂದೆಯೇ ಹೇಳಿದ್ದಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ಎಲ್ಲಾರೂ ಮಾಡುವುದು ತೊಟ್ಟು ನೀರಿಗಾಗಿ ಅಂಥ ಹೇಳಿದರು ಆಶ್ಚರ್ಯವೇನಿಲ್ಲ. ಎಲ್ಲರಿಗೂ ತಿಳಿದಿರುವ ಹಾಗೆ, ನೀರು ಎಲ್ಲಾ ಜೀವ-ಜಂತುಗಳಿಗೂ ಅತ್ಯಮೂಲ್ಯ ವಸ್ತುವಾಗಿದೆ. ನೀರಿಲ್ಲದೆ ನಮ್ಮ ಜೀವನವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಮನುಷ್ಯ ಜಾತಿಗೆ ಮಾತ್ರ ನೀರಿನ ಮೌಲ್ಯತಿಳಿದಿಲ್ಲ ಎಂದು ಕಾಣಿಸುತ್ತದೆ. ನೀರನ್ನು ಜಾಸ್ತಿ ವ್ಯಯ ಮಾಡದೇ ಮಿತವಾಗಿ ಹೇಗೆ ಬಳಸಬೇಕೆಂದು ಗೊತ್ತಿಲ್ಲ. ಮನುಷ್ಯ ನೀರು ತನ್ನ ಆಸ್ತಿಯೆಂದು ತಿಳಿದುಕೊಂಡು, ಮನಸ್ಸು ಬಂದಂತೆ ಉಪಯೋಗಿಸುತ್ತಿದ್ದಾನೆ. ಅದನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಮಾತ್ರ ಅರಿಯದ ಬುದ್ದಿಹೀನ ಪ್ರಾಣಿ ಈ ಮನುಷ್ಯ. ಅವನಿಗೆ ಸ್ವಲ್ಪವಾದರು ನೀರಿನ ಪ್ರಾಮುಖ್ಯತೆ ತಿಳಿಸಿಕೊಡಬೇಕು. ಭೂಮಿಯ ಮೇಲ್ಮೈಭಾಗವನ್ನು 70% ರಷ್ಟು ನೀರು ಆವರಿಸಿದೆ. ಏನಪ್ಪ ಇಷ್ಟೊಂದು ನೀರು ಭೂಮಿ ಮೇಲೆ ಇದೆಯಲ್ಲ. ಹಾಗಾದ್ರೆ ನೀರಿಗೇನಪ್ಪ ತೊಂದರೆ? ಆದರೆ ಆ 70% ರಷ್ಟರಲ್ಲಿ ಕೇವಲ 3% ರಷ್ಟು ಮಾತ್ರ ಕುಡಿಯಲು ಯೋಗ್ಯವೆಂದು ಪರಿಗಣಿಸಲಾಗಿದೆ. ಆದರೆ ಈ 3% ರಷ್ಟು ನೀರು ನೇರವಾಗಿ ಮನುಷ್ಯರಿಗೆ ಲಭ್ಯವಿಲ್ಲ. ಬದಲು 0.4% ರಷ್ಟು ನೀರು ಮಾತ್ರ ಲಭ್ಯವಿದೆ. ಹಾಗಾದರೆ 2.6%ರಷ್ಟು ನೀರು ಎಲ್ಲಿದೆ? ಮಂಜುಗಡ್ಡೆ, ಹಿಮನದಿಗಳು, ವಾಯುಮಂಡಲ ಹಾಗೂ ಅಂತರ್ಜಲದಲ್ಲಿ ಸೇರಿಕೊಂಡಿದೆ. 0.4% ರಷ್ಟು ನೀರು ನಮಗೆ ನದಿ, ಹೊಳೆ, ಬಾವಿ, ಹಾಗೂ ಮುಂತಾದವುಗಳಿಂದ ಲಭ್ಯವಾಗಿದೆ. ಆದರೆ ನಮ್ಮ ಪ್ರಪಂಚದ ಜನಸಂಖ್ಯೆ 7.7 ಬಿಲಿಯನ್. ನಾವು ಈಗ ಯೋಚಿಸಬೇಕಾದ ಸಂಗತಿಯೆಂದರೆ, ಈ ಜನಸಂಖ್ಯೆಗೆ 0.4% ರಷ್ಟು ನೀರು ನಿಜವಾಗಿ ಸಾಲುತ್ತದೆಯೇ? ಭೂಮಿಯ ಮೇಲೆ ಮನುಷ್ಯರು ಮಾತ್ರವಲ್ಲ, ಬೇರೆ ಜೀವವೈವಿಧ್ಯತೆಗಳಿವೆ. ಇವುಗಳಿಗೆಲ್ಲ ಇಷ್ಟು ಪ್ರಮಾಣದ ನೀರು ಸಾಕೆ? ನಿಜವಾಗಿಯು ಸಾಕಾಗುವುದಿಲ್ಲ. ಈ ಬೇಸಿಗೆ ಕಾಲದಲ್ಲಿ ಎಲ್ಲ ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಅಂತರ್ಜಲ ಮಟ್ಟ ಕುಸಿದು ಬೀಳುತ್ತಿದೆ. ನೀರನ್ನು ದುಡ್ಡಿಗಾಗಿ ಕೊಂಡುಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲ ಕಾರಣವೇನು? ಇದಕ್ಕೆ ಏನಾದರು ಪರಿಹಾರವಿದೆಯೇ? ನೀರಿನ ಬಗ್ಗೆ ಜಾಗೃತಿ ಜನರಲ್ಲಿ ಹೇಗೆ ಮೂಡಿಸಬಹುದು? ನೀವೂ ಒಮ್ಮೆ ಯೋಚಿಸಿ ಮತ್ತು ಈ ನಮ್ಮದೊಂದು ಪುಟ್ಟ ಪ್ರಯತ್ನಕ್ಕೆ ನೀವೂ ಕೂಡ ಕೈಜೋಡಿಸಬಹುದು.
ಈ ಮೇ ತಿಂಗಳ ಸಂಚಿಕೆಗೆ ಜೀವ ವೈವಿದ್ಯತೆ ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.