ಚಳಿಗಾಲದಲ್ಲಿ ನವರಂಗಿ ಹಕ್ಕಿಯ ಆಟ

ಚಳಿಗಾಲದಲ್ಲಿ ನವರಂಗಿ ಹಕ್ಕಿಯ ಆಟ

ಏಕೋ 2019ರ ಹೊಸವರ್ಷ ತುಂಬಾ ಚಳಿ ಅನಿಸುತ್ತಿತ್ತು. ಬಂಡಿಪುರದಲ್ಲಂತೂ ಚಳಿಯೋ ಚಳಿ, ಪ್ರತಿ ದಿನ ಮುಂಜಾನೆ ಸಫಾರಿಗೆ ಹೋಗುವ ನಾನು ಚಳಿಯಲ್ಲಿ ನಡುಗಿ ಹೋಗುತ್ತಿದ್ದೆ.  ಆದರೂ ಆ ಚಳಿಯಲ್ಲೂ ಕಾಡಲ್ಲಿ ಅಲೆಯುವುದು ಒಂಥರಾ ಮನಸ್ಸಿಗೆ ಮುದ ನೀಡುವುದಂತೂ ಸುಳ್ಳಲ್ಲ. ಅಂದು ಬೆಳಗಿನ  ಆರರ ಸಮಯ ಎದ್ದು  ಸ್ವೆಟರ್ ಸ್ಕಾರ್ಫ್ ಹಾಕಿ ಹೆಗಲಿಗೆ ಬೈನಾಕುಲರ್ ಏರಿಸಿ ಸಫಾರಿಗೆ ಹೊರಟೆ. ಗಂಟೆ ಆರಾದರೂ ಸ್ವಲ್ಪ ಮಬ್ಬು ಮಬ್ಬು ಏಕೋ ನಮ್ಮ ಸೂರ್ಯ ಮಂಜಿನಲ್ಲಿ ಮುಳುಗಿ ಹೋದಂತೆ ಭಾಸವಾಗುತ್ತಿತ್ತು. ಕೊರೆಯುವ ಚಳಿ, ದಾರಿಯೇ  ಕಾಣದಷ್ಟು ದಟ್ಟವಾಗಿ ಮಂಜು ಕವಿದಿತ್ತು. ದಾರಿ ಸಾಗಿದಂತೆ ಸೂರ್ಯ ಹರಸಾಹಸಪಟ್ಟು ಮಂಜನ್ನು ಬದಿಗಟ್ಟಿ ಬೆಳಕು ಚೆಲ್ಲಲಾರಂಭಿಸಿದರೂ ಏನೋ ಒಂಥರಾ ಚಳಿ. ಜೀಪಿನಲ್ಲಿದ್ದ ಅತಿಥಿಗಳಿಗೆ ದಾರಿಯುದ್ದಕ್ಕೂ ಸಿಗುವ ಪಕ್ಷಿಗಳನ್ನ ವಿವರಿಸುತ್ತಿದ್ದೆ.

ಕಾಡಿನಲ್ಲೆಲ್ಲಾ ಅರಳಿನಿಂತ ಮುತ್ತುಗದ ಹೂವಿನ ಬಣ್ಣವೇ ಪ್ರತಿಫಲಿಸುತ್ತಿದ್ದು, ಅತಿಥಿಗಳು ಅವಕ್ಕೆ ಆಕರ್ಷಿತರಾದರು. ಜೀಪ್ ನಿಲ್ಲಿಸಿ ಮುತ್ತುಗ ಮತ್ತು ಅದರ ವೈಶಿಷ್ಟ್ಯತೆಗಳನ್ನು ವಿವರಿಸಿದೆ. ಚಳಿಗಾಲದಲ್ಲಿ ಈ ಮುತ್ತುಗದ ಮರಗಳು ಕಾಡಿನ ಹಲವಾರ ಪಕ್ಷಿಗಳಿಗೆ ಉಪಹಾರ ನೀಡುವ ಕ್ಯಾಂಟೀನ್ ಆಗಿ ಮಾರ್ಪಡುತ್ತವೆ ಎಂದರೆ ತಪ್ಪಾಗಲಾರದು. ಏಕೆಂದರೆ ಮುಂಜಾನೆಯಿಂದ ಸಂಜೆಯವರೆಗೆ ಈ ಮರ ಚಟುವಟಿಕೆಯ ಗೂಡಾಗಿ ಪರಿವರ್ತಿತವಾಗಿರುತ್ತದೆ. ಅದರ ಜೊತೆಗೆ ಲಂಗೂರ್ ಕೋತಿಗಳಿಗೂ ಒಂದಷ್ಟು ಹೂವಿನರುಚಿ ನೋಡುವ ತವಕ. ಒಂದೆರಡು ಲಂಗೂರ್ ಕೋತಿಗಳು ಹೂ ತಿನ್ನುವ ಕೆಲಸದಲ್ಲಿ ಬ್ಯುಸಿಯಾಗಿದ್ದವು. ನಾವು ನಮ್ಮ ದಾರಿ ಮುಂದುವರಿಸಿದೆವು.

ಮುಂದೆ ಸಾಗುತ್ತಿದ್ದಂತೆ ನಮ್ಮ ಜೀಪ್ ಡ್ರೈವರ್ ದಾರಿಯಲ್ಲಿ ಹುಲಿ ಹೆಜ್ಜೆ ಗುರುತನ್ನ ಕಂಡು ಜೀಪ್ ನಿಲ್ಲಿಸಿದರು. ದೊಡ್ಡ ಹೆಜ್ಜೆ ಗುರುತು, ಗಂಡು ಹುಲಿಯ ಹೆಜ್ಜೆಯಂತೆ ಕಾಣುತ್ತಿತ್ತು. ಬಹುಶಃ ಹುಲಿ ಹಿಂದಿನ ರಾತ್ರಿ ಒಡಾಡಿರಬಹುದು. ಅಷ್ಟರಲ್ಲಿ ಹಿಂದಿನ ಸೀಟಿನಲ್ಲಿ ಕೂತಿದ್ದ ನಮ್ಮ ಅತಿಥಿಯೊಬ್ಬರು ರಸ್ತೆಪಕ್ಕದ ಬೇಲಿಯೊಳಗೆ ಕುಳಿತಿದ್ದ ಪಕ್ಷಿಯೊಂದನ್ನು ಕಂಡು “which bird is that green in colour” ಎಂದು  ಕೈ ಮಾಡಿ ತೋರಿದರು. ಅಷ್ಟರಲ್ಲಿ ಆ ಪಕ್ಷಿ ನೆಲದಲ್ಲೇ ನೆಗೆಯುತ್ತಾ ಬೇಲಿಯಿಂದ ಇನಿತು ದೂರ ಹೊರಬಂದು ನೆಲದಲ್ಲಿ ಏನೋ ಕುಟುಕಲಾರಂಭಿಸಿತು. ಮೈನಾ ಗಾತ್ರದ ಪಕ್ಷಿ, ಬೆನ್ನಮೇಲೆ ಹಸಿರು, ನೀಲಿ ಕಂದು, ಕಪ್ಪು ಬಣ್ಣ ಹಾಗು ಮೋಟು ಬಾಲದ ಕೆಳಗೆ ಕೆಂಪು. ಹೋ ಇದು “ನವರಂಗಿ” “it’s a indian pitta, a migratory bird” ಎಂದು ಹೇಳಿ ಪಕ್ಷಿಯನ್ನು ವಿವರಿಸಿದೆ. ಚಳಿಗಾಲ ಏಕಪ್ಪಾ ಎಂದು ಮೂಗಮುರಿಯುತ್ತೇವೆ. ಆದರೆ ಈ ಚಳಿಗಾಲ ಹಲವಾರು ವಲಸೆ ಪಕ್ಷಿಗಳ ಸಂತಾನೋತ್ಪತ್ತಿಗೆ ತಕ್ಕನಾದ ಸಮಯ. ಹಲವಾರು ವಲಸೆ ಪಕ್ಷಿಗಳು ಸಾವಿರಾರು ಕಿ.ಮೀ ಗಳಿಂದ ಹಾರಿ ಬಂದು ತಮ್ಮ ಸಂತಾನೋತ್ಪತಿಗೆ ಸೂಕ್ತ ಜಾಗ ಹುಡುಕಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿ ತನ್ನ ಕುಟುಂಬದೊಂದಿಗೆ ಮತ್ತೆ ತಮ್ತಮ್ಮ ಊರುಗಳಿಗೆ ಹಿಂತಿರುಗುತ್ತವೆ. ಬಂಡಿಪುರ ಹುಲಿ ಅಭಯಾರಣ್ಯಕ್ಕೂ ಹಲವಾರು ಹಕ್ಕಿಗಳು ವಲಸೆ  ಬರುತ್ತವೆ.

ಇಂಡಯನ್ ಪಿಟ್ಟಾ(ನವರಂಗಿ) (Pitta brachyura) ಭಾರತದ ಹಿಮಾಲಯ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಇವು, ಚಳಿಗಾಲದಲ್ಲಿ ಹಿಮಾಲಯದಿಂದ  ದಕ್ಷಿಣ ಭಾರತ ಮತ್ತು ಶ್ರೀಲಂಕಾಕ್ಕೆ ವಲಸೆ ಬರುತ್ತವೆ. ತುಂಬಾ ನಾಚಿಕೆ ಸ್ವಭಾವದ ಈ ಪಕ್ಷಿಗಳು ಬೇಲಿಗಳ ಕೆಳಗೆ ಅಡಗಿ ಕುಣಿಯುತ್ತ ಸಾಗುವ ಇವುಗಳ ಕಾಲುಗಳು ಬಲಿಷ್ಟವಾಗಿರುತ್ತವೆ. ಶಿಳ್ಳೆ ಹೊಡೆಯುವಂತೆ ಕೂಗುವ ಇವು ಕೇವಲ ಮುಂಜಾನೆ ಮತ್ತು ಸಂಜೆ ಮಾತ್ರ ಕೂಗುತ್ತವೆ. ಸುಮಾರು ಒಂಬತ್ತು ಬಣ್ಣಗಳನ್ನು ಹೊಂದಿರುವುದರಿಂದ ಈ ಪಕ್ಷಿಯನ್ನು ನವರಂಗಿ ಎಂದು ಕರೆಯುತ್ತಾರೆ.

ಬೇಲಿಗಳಲ್ಲೆ ನೆಗೆಯುತ್ತ ಓಡಾಡುವ ಈ ಪಕ್ಷಿಗಳು ನೆಲದಲ್ಲಿ ಸಿಗುವ ಕೀಟಗಳನ್ನು ಹೆಕ್ಕಿ ತಿನ್ನುತ್ತವೆ. ಸಾಮಾನ್ಯವಾಗಿ ಜೂನ್ ಇಂದ ಆಗಸ್ಟ್ ತಿಂಗಳುಗಳಲ್ಲಿ ಸಂತಾನೋತ್ಪತಿ ಮಾಡುವ ಇವು ನೆಲ ಅಥವಾ ಬೇಲಿಯ ಕೆಳ ಕೊಂಬೆಗಳಲ್ಲಿ ಗೋಳಾಕಾರದ ಗೂಡುಗಳನ್ನ ಒಣಗಿದ ಎಲೆಗಳನ್ನ ಉಪಯೋಗಿಸಿ ಕಟ್ಟಿ ನಾಲ್ಕರಿಂದ ಐದು  ಬಿಳಿ ಬಣ್ಣದ ಗೋಳಾಕಾರದ  ಮೊಟ್ಟೆ ಇಡುತ್ತವೆ.

ಇತ್ತೀಚಿನ ಬೆಳವಣಿಗೆಗಳಲ್ಲಿ ಜನಸಂಖ್ಯೆ ಹೆಚ್ಚಿದಂತೆ ನಮ್ಮ ಸ್ವಾರ್ಥಕ್ಕಾಗಿ ಕಾಡುಗಳನ್ನ ಕಡಿದು ನಗರೀಕರಣ ಹಾಗೂ ಆವಾಸಗಳ ನಾಶದಿಂದ ಹಲವಾರು ವಲಸೆ ಪಕ್ಷಿ ಪ್ರಾಣಿಗಳು ತೊಡಕುಗಳನ್ನ ಅನುಭವಿಸಬೇಕಾಗುತ್ತಿದೆ. ಹೊರಗಿನಿಂದ ವಲಸೆ ಬರುವ ಹಲವಾರು ಪಕ್ಷಿಗಳಿಗೆ ನಗರದ ವಾತಾವರಣ ದಿಕ್ಕು ತಪ್ಪಿಸುತ್ತಿದೆ. ಬಾನೆತ್ತರಕ್ಕೆ ಎದ್ದು ನಿಂತ ಕಟ್ಟಡಗಳು ಹಾಗೂ ಅವುಗಳಿಗೆ ಜೋಡಿಸುವ ಪ್ರತಿಫಲಕ ಗಾಜುಗಳಿಗೆ ಡಿಕ್ಕಿ ಹೊಡೆದು ಹಲವಾರು ಪಕ್ಷಿಗಳು ತಮ್ಮ ಅಂತ್ಯವನ್ನ ಕಾಣುತ್ತಿರುವುದು ನೋವಿನ ಸಂಗತಿ. ಇನ್ನು ಉಳಿದಂತೆ ಹಲವಾರು ವಲಸೆ ಪಕ್ಷಿಗಳು ಬೇಟೆಗಾರರ ಪಾಲಾಗುತ್ತಿವೆ. ಇನ್ನು ನಗರೀಕರಣದ ನೆಪದಲ್ಲಿ ಕೆರೆ ಕೊಳ್ಳ ನದಿಗಳು ಎನ್ನದೆ ಎಲ್ಲವನ್ನು ಹಾಳುಮಾಡುತ್ತಿರುವ ನಾವು ವಲಸೆ ಹಾಗೂ ನಿವಾಸಿ ಪಕ್ಷಿ ಸಂಕುಲಗಳ ಆವಾಸವನ್ನೇ ಹಾಳು ಮಾಡಿಬಿಟ್ಟಿದ್ದೇವೆ. ಅಳಿದುಳಿದ ಕಾಡು ನದಿ ಕೊಳ್ಳಗಳನ್ನು ಈಗಲಾದರೂ ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಲೇಖನ: ಮಹದೇವ ಕೆ. ಸಿ.
ಜೆ ಎಲ್ ಆರ್ ., ಬಂಡೀಪುರ ರಾಷ್ಟ್ರೀಯ ಉದ್ಯಾನವನ

Spread the love
error: Content is protected.