ಗುಳಿ ಮಂಡಲ ಹಾವು

ಗುಳಿ ಮಂಡಲ ಹಾವು

© ನಾಗೇಶ್ ಕೆ ಜಿ

ಈ ಹಾವುಗಳು‌  ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ, ಇವುಗಳು ಅಲ್ಲಿಯ ಪ್ರಾಂತ್ಯ, ಕಾಲ ಹಾಗೂ ಹುಟ್ಟಿನ ಅನುಗುಣವಾಗಿ ಬಣ್ಣವನ್ನು  ಹೊಂದಿರುತ್ತವೆ. ಇವುಗಳು ನಿಧಾನಗತಿಯ ಚಲನೆ, ಶೀಘ್ರವಾಗಿ ಕಚ್ಚುವ ಗುಣ ಹಾಗೂ ವಿಷವನ್ನು (Venomous) ಹೊಂದಿರುವ ಹಾವುಗಳು. ಇವು ಮೂಗಿನ ತುದಿಯಲ್ಲಿ ಗುಳಿ(Pit)ಗಳನ್ನು ಹೊಂದಿರುತ್ತವೆ. ರೆಂಬೆ ಕೊಂಬೆಗಳು ಬಿದ್ದ ಮರಗಳಲ್ಲಿ ಇವುಗಳ ವಾಸ. ಬೇರೆ ಹಾವುಗಳು ತಮ್ಮ ನಾಲಿಗೆಯ ಮುಖಾಂತರ ಬೇಟೆಗಾರ ಪ್ರಾಣಿಯ ವಾಸನೆಯನ್ನು ಗ್ರಹಿಸಿ ಬೇಟೆಯಾಡುತ್ತವೆ ಆದರೆ ಈ ಹಾವುಗಳು ತನ್ನ ಮೂಗಿನಲ್ಲಿ ಇರುವ ಗುಳಿಗಳ ಸಹಾಯದಿಂದ ಬೇಟೆಗಾರ ಪ್ರಾಣಿಯ ಶಾಖವನ್ನು ಗ್ರಹಿಸಿ ಬೇಟೆಯಾಡುತ್ತವೆ.

ಗುಳಿಮಂಡಲ ಹಾವುಗಳು ಅನೇಕ ಬಣ್ಣಗಳಲ್ಲಿ ಕಾಣಸಿಗುತ್ತವೆ, ನೋಡಲು ಬಹಳ ಸುಂದರವಾಗಿ ಕಾಣುತ್ತವೆ. ಇತರೆ ಬೇಟೆಗಾರ ಹಾವು ಹಾಗೂ ಹದ್ದುಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಅನೇಕ ಬಣ್ಣವನ್ನೂ ಹೊಂದಿ ಅದೇ ಬಣ್ಣವನ್ನು ಹೋಲುವ ಮರ, ಮರದ ತೊಗಟೆ, ಬಿದ್ದ ಮರಗಳಲ್ಲಿ ಅಡಗಿಕೊಂಡು ಜೀವಿಸುತ್ತವೆ. ಇವುಗಳು ನಿಧಾನವಾದ ಚಲನೆ ಹಾಗೂ ಗುಳಿ ಹೊಂದಿರುವ ಕಾರಣ ಇವುಗಳನ್ನು “ನಿದ್ದೆ ಮಂಡಲ ಹಾವು” ಅಥವಾ “ಗುಳಿ ಮಂಡಲ ಹಾವು” ಎಂದು ಕರೆಯುತ್ತಾರೆ.

© ನಾಗೇಶ್ ಕೆ ಜಿ

ಈ ಹಾವುಗಳು ನಿಶಾಚರಿಗಳಾಗಿದ್ದು ತಟಸ್ಥವಾಗಿ ಒಂದೇ ಕಡೆ ಕೂತು ತನ್ನ ಗುಳಿ(pit)ಯ ಸಹಾಯದಿಂದ ಶಾಖ ಗ್ರಹಣೆ ಮಾಡಿ ಬೇಟೆಯಾಡುತ್ತವೆ. ಕಪ್ಪೆಗಳು ಇದರ ಪ್ರಮುಖ ಆಹಾರ, ನಿಧಾನವಾದ ಚಲನೆ ಮತ್ತೆ ಒಂದು ಅಥವಾ ಎರಡು ದಿನ ಒಂದೇ ಸ್ಥಳದಲ್ಲಿ ತಂಗುತ್ತವೆ. ಆದ್ದರಿಂದ ಇವುಗಳಿಗೆ “ನಿದ್ದೆ ಮಂಡಲ” ಎಂದೂ ಕರೆಯುತ್ತಾರೆ. ಹಾವು ಎಂದರೆ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಭಯ, ಏಕೆಂದು ಕಾರಣ ಕೇಳಿದರೆ ಸಾವಿರ ಕಥೆ ಹೇಳುತ್ತಾರೆ. ಭಾರತದಲ್ಲಿ ಕಂಡುಬರುವ ಎಲ್ಲ ಹಾವುಗಳು ವಿಷಕಾರಿ ಹಾವುಗಳಲ್ಲ. ಆದರೆ ಮನುಷ್ಯನ ಅಲ್ಪ ಜ್ಞಾನದಿಂದ ಹಾವು ಕಂಡ ಕಡೆ ಮಾರಣಹೋಮ ನಡೆಯುತ್ತಿದೆ.

© ನಾಗೇಶ್ ಕೆ ಜಿ

ಅನೇಕರು ಹೇಳುವ ಪ್ರಕಾರ ಹಾವುಗಳು ದ್ವೇಷ ಸಾಧಿಸುತ್ತದೆಂದು, ಅದೆಲ್ಲ ಸಿನೆಮಾ ಮತ್ತು ಧಾರವಾಹಿಗಳಿಗೆ ಮಾತ್ರ ಸೀಮಿತ. ಹಾವುಗಳಿಗೆ ನೆನಪಿನ ಶಕ್ತಿ ಕಡಿಮೆ. ಅವುಗಳನ್ನು ಆಕಸ್ಮಿಕವಾಗಿ ತುಳಿದಾಗ ಮತ್ತು ಘಾಸಿಗೊಳಿಸಿದಾಗ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲೆ ಯಾವುದಾದರೂ ಬಿಲಗಳಲ್ಲಿ, ಸಂದಿಗಳಲ್ಲಿ ಅವಿತುಕೊಳ್ಳುತ್ತದೆ. ಅದಕ್ಕೆ ತಾನು ಸುರಕ್ಷಿತ ಅಂತ ಅನ್ನಿಸುವರೆಗೂ ಅಲ್ಲೇ ತಂಗಬಹುದು. ಘಾಸಿಯಾದ ಕೆಲವು ಗಂಟೆಗಳ ನಂತರ ಅಥವಾ ಮಾರನೇ ದಿನ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಹಾವನ್ನು ಕಂಡ ಕೆಲವೊಂದು ಜನ ದ್ವೇಷ ಸಾಧಿಸಲು ಹುಡುಕಿಕೊಂಡು ಬಂದಿವೆ ಅಂತಲೇ ನಂಬುತ್ತಾರೆ. ಆದರೆ ವಾಸ್ತವವೇ ಬೇರೆ.

© ನಾಗೇಶ್ ಕೆ ಜಿ

ಮೊದಲ ಸಲ ಈ ಹಾವುಗಳ ಮಿಲನ ನೋಡುವವರಿಗೆ ಆಗುವ ಅಚ್ಚರಿ ಹಾಗು ಸೋಜಿಗವೇ ಗಂಡು-ಹೆಣ್ಣು ಹಾವಿನ ಗಾತ್ರ. ಬಹುತೇಕ ಮಂದಿ ದೊಡ್ಡ ಗಾತ್ರದ ಹಾವು ಗಂಡು, ಸಣ್ಣ ಗಾತ್ರದ ಹಾವು ಹೆಣ್ಣು ಅಂತಲೇ ನಂಬಿದ್ದಾರೆ. ಆದ್ರೆ ನಿಜಾಂಶ ಅಂದರೆ ಹೆಣ್ಣು ದೊಡ್ಡದು, ಸಣ್ಣದು ಗಂಡು. ಹಾವುಗಳಲ್ಲಿ ಹೆಚ್ಚಿನವು (ಶೇ 80%ಅಧಿಕ) ಮೊಟ್ಟೆ ಇಟ್ಟು ಮರಿ ಮಾಡುತ್ತವೆ! (Oviparous) ಇನ್ನು ಕೆಲವು ಹಾವುಗಳು ಮರಿಹಾಕುತ್ತವೆ! (Viviparous) ಆದರೆ ಗುಳಿ ಮಂಡಲ ಹಾವಿನಲ್ಲಿ, ಅದರ ಹೊಟ್ಟೆಯೊಳಗೆ ಮೊಟ್ಟೆ ಅಭಿವೃದ್ಧಿಯಾಗಿ ನಂತರ ಅದು ಮರಿ ಹಾಕುತ್ತದೆ (Ovoviviparous) ಇದು ಒಮ್ಮೆಲೇ 10 ರಿಂದ 20 ಮರಿಗಳನ್ನು ಹಾಕುತ್ತದೆ‌.

ಗುಳಿ ಮಂಡಲ ಹಾವುಗಳು ಅನೇಕ‌ ಬಣ್ಣಗಳಲ್ಲಿ ಕಾಣಸಿಗುತ್ತದೆ. ಅದರ ಬಣ್ಣಕ್ಕೆ ಸರಿಯಾಗಿ ಹೊಂದುವ ಮರ, ಬಿದ್ದ ಮರ, ಮರದ ಪೊಟರೆಗಳಲ್ಲಿ ಜೀವನ, ಭಾರತದ ನಾಲ್ಕು ಅತ್ಯಂತ ವಿಷಕಾರಿ ಹಾವುಗಳಲ್ಲಿ ನಾಗರಹಾವು ಬಿಟ್ಟು ಈ ಕೊಳಕು ಮಂಡಲ ಸೇರಿ ಉಳಿದ ಮೂರು ಹಾವುಗಳು ನಿಶಾಚರಿ (Nocturnal) ಗಳು, ಹಾಗೆಯೇ ಗುಳಿ ಮಂಡಲ ಹಾವುಗಳು ನಿಶಾಚರಿಗಳು.

ಈ ನಾಲ್ಕು ಹಾವುಗಳು ನಡುವೆ ಗುಳಿ ಮಂಡಲ ಹಾಗೂ ಉಬ್ಬು ಮಂಡಲದ ಹಾವುಗಳ venom ನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇವುಗಳಿಂದ ಪ್ರಾಣ ಹಾನಿಗಳು ಕಮ್ಮಿ. ಆದರೂ ಇದರ ಬಗ್ಗೆ ಸಂಶೋಧನೆಗಳು ನಡೆದು ಇದರ ಪ್ರತಿವಿಷ ಕಂಡುಹಿಡಿಯುವುದು ಸೂಕ್ತ.

© ನಾಗೇಶ್ ಕೆ ಜಿ

  ಹಾವುಗಳು ಚಲಿಸುವಾಗ ತನ್ನ ನಾಲಿಗೆ ಹೊರಕ್ಕೆ ಹಾಕುತ್ತ ಚಲಿಸುತ್ತ ಇರುತ್ತದ್ದೆ. ತನ್ನ ನಾಲಿಗೆ ಮುಖಾಂತರ ಅದು ತನ್ನ ದಾರಿ ಮಾಡಿಕೊಳ್ಳುತ್ತೆ.

ಕೆಲವು ಹಾವುಗಳು ನಾಲಿಗೆ ಹೊರ ಹಾಕುವುದರ ಮುಖಾಂತರ ತನ್ನ ಬೇಟೆಯನ್ನು ಹುಡುಕುತ್ತವೆ. ಮೊದಲೇ ಹಾವುಗಳು ಶೀತರಕ್ತ ಪ್ರಾಣಿಗಳು ಆದ್ದರಿಂದ ತನ್ನ ಹತ್ತಿರ ಇರುವ ಬಿಸಿ ರಕ್ತ ಪ್ರಾಣಿಗಳನ್ನು ಗುರುತಿಸುತ್ತದೆ. ಇದರಿಂದ ಅದರ ಬೇಟೆ ಸುಲಭವಾಗುತ್ತದೆ.

ಶೀತರಕ್ತ ಸರಿಸೃಪಗಳಲ್ಲಿ ಜೀರ್ಣಕ್ರಿಯೆ ನಿಧಾನ, ಹಾಗಾಗಿ ಹೊಟ್ಟೆ ತುಂಬಿದ ನಂತರ ಅವುಗಳನ್ನು ಬೇಟೆ ಆಡುವ ಪ್ರಾಣಿ-ಪಕ್ಷಿಗಳಿಂದ ತಪ್ಪಿಸಿಕೊಳ್ಳಲು ಕತ್ತಲ ಜಾಗಗಳಾದ ಪೊಟರೆ ಹಾಗು ಬಿಲಗಳಲ್ಲಿ ವಾಸ ಮಾಡುತ್ತವೆ. ಇದನ್ನೂ  ಕೆಲವು ಕಡೆ‌ ಪ್ರಾದೇಶಿಕ ಭಾಷೆಯಲ್ಲಿ ಕರೆಯುತ್ತಾರೆ. ಕೊಡಗಿನಲ್ಲಿ “ವರ್ಕ್ ಮಂಡಲ” ಎನ್ನುತ್ತಾರೆ “ವರ್ಕ್” ಎಂದರೆ ಕೊಡಗಿನ ಭಾಷೆಯಲ್ಲಿ ನಿದ್ದೆ ಎಂದು ಅರ್ಥ, ಶಿವಮೊಗ್ಗದ ಕಡೆ “ಹಪ್ರೆ” ಮತ್ತು ಮಂಗಳೂರು ಕಡೆ “ಚಟ್ಟೆ ಕಂದಡಿ” ಅಂತ ಹೇಳ್ತಾರೆ… 

© ನಾಗೇಶ್ ಕೆ ಜಿ

ಗುಳಿ (ನಿದ್ದೆ) ಮಂಡಲ ಹಾವು

ಕಲ್ಲ ನಾಗರ ಕಂಡರೆ ಹಾಲನೆರೆವ
ನಿಜದ ನಾಗರ ಕಂಡರೆ ಚಚ್ಚುವ
ಜನ ನಾವು
ಕನ್ನಡದ ರುದ್ರ ಮನೋಹರ ಪದಕ್ಕೆ
ತಕ್ಕ ಪ್ರತಿಮೆ ನೀನು
ನಿನ್ನ ನೋಡಲು ಭಯ
ರೋಮಾಂಚನ
ಒಟ್ಟಿಗೆ ಸಂಭವಿಸುತ್ತದೆ

ಹೌದಪ್ಪ ಮನುಷ್ಯ ಜೀವಿ….
ನಂಗೆ ಬಾಯಲ್ಲಿ ವಿಷ
ನಿಂಗೆ ಮೈಯಲ್ಲೆಲ್ಲ ವಿಷ
ನಿನ್ನ ಹೆಜ್ಜೆ ಸಪ್ಪಳಕ್ಕೆ ಓಡುವೆ ನಾನು
ನಿನ್ನ ಕಂಡರೆ ಎನಗೆ ಹೇವರಿಕೆ

ಆದರೇನು ಮಾಡಲಿ?? ನಮ್ಮ ಪೊದೆಗಳ
ನಿಮ್ಮ ಉರುವಲಿಗಾಗಿ ತರಿದು ಬಿಟ್ಟಿರಿ
ಕೇದಗೆ ಬನಗಳ ಬೆತ್ತದ ವನಗಳ
ಕೊಚ್ಚಿ ಹಾಕಿದಿರಿ
ಹುತ್ತ ಕಟ್ಟಲು ಗೆದ್ದಲುಗಳಿಗೆ ಒಣ ಮರಗಳಿಲ್ಲ
ನನಗೆ ಮನೆಯಿಲ್ಲ, ಅವಿತುಕೊಳಲು ತಾವಿಲ್ಲ

ಅದಕ್ಕೇ ನಿಮ್ಮ ಕೋಳಿ ಒಡ್ಡಿಗೆ ನುಗ್ಗುತ್ತೇನೆ
ಮೊಟ್ಟೆ ಕದಿಯುತ್ತೇನೆ
ಪೊದೆಗಳ ಕಾಣದೆ ನಿಮ್ಮ ಸೌದೆರಾಶಿಯಲ್ಲಿ
ಅವಿತಿಟ್ಟು ಕೊಳ್ಳುತ್ತೇನೆ
ನಿಮ್ಮಗಳ ಕೈಲಿ ಸಿಕ್ಕಿ ಸತ್ತು ಹೋಗುತ್ತೇನೆ

ಈ ಭುವಿಯಿಂದ ನಾ ಮಾಯವಾಗದಂತೆ
ನೀವು ನನ್ನ ಕಾಯಿರಿ
ಇಲ್ಲವೆಂದರೆ ನೀವೇ ಮಾಯವಾಗಿಬಿಡಿ…!

© ನಾಗೇಶ್ ಕೆ ಜಿ

ಚಿತ್ರ – ಲೇಖನ: ನಾಗೇಶ್ ಕೆ ಜಿ
ರಾಮನಗರ
ಜಿಲ್ಲೆ

Spread the love
error: Content is protected.