ಕೃಷಿಗೆ ಬಿಕ್ಕಟ್ಟಿಗೆ ಬೇಕಿದೆ ಶಾಶ್ವತ ಚಿಕಿತ್ಸೆ

ಕೃಷಿಗೆ ಬಿಕ್ಕಟ್ಟಿಗೆ ಬೇಕಿದೆ ಶಾಶ್ವತ ಚಿಕಿತ್ಸೆ

ಭಾರತದಲ್ಲಿನ ಉದ್ಯೋಗ ಕ್ಷೇತ್ರದಲ್ಲಿ ಕೃಷಿ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಹೊಂದಿದೆ. ಇಂದು ಕೃಷಿಕರು ಮತ್ತು ಕೃಷಿಯನ್ನು ನಂಬಿ ಬದುಕುತ್ತಿರುವವರು ಅವಸಾನದ ಅಂಚಿಗೆ ಹೋಗುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಇರುವಂತಹ ಸವಾಲುಗಳು ಮತ್ತು ಸಾಧ್ಯತೆಗಳು ಕೃಷಿಕ್ಷೇತ್ರದಲ್ಲೂ ಇರುವುದು ವಾಸ್ತವಾಂಶವಾಗಿದೆ. ಆಧುನಿಕ ಜಗತ್ತಿನಲ್ಲಿ ಆಗುತ್ತಿರುವಬದಲಾವಣೆಗಳು ಕೃಷಿ ಮತ್ತು ಕೃಷಿಯಪೂರಕ ಅಂಶಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿದೆ. ಹಿಂದೆ ನೆಲ ನಂಬಿದವರಿಗೆ ನೆಲೆ ಸಿಗುತ್ತಿತ್ತು, ಇಂದು ನೆಲ ನಂಬಿದವರಿಗೆ ನೆಲವೇ ಅವರ ಬದುಕಿಗೆ ಮುಳುವಾಗುತ್ತಿದೆ ಎಂದು ಕೆಲವರು ಭಾವಿಸುತ್ತಿದ್ದಾರೆ. ಕೃಷಿ ಮಾಡಬೇಕೆಂದರೆ, ಅದೊಂದು ಮಳೆಯೊಂದಿಗಿನ ಜೂಜಾಟವೇ ಸರಿ. ಆದ್ದರಿಂದ ಅನ್ನ ಬೆಳೆಯಲು ಮಾನವ ಶ್ರಮದ ಜೊತೆ ಪ್ರಕೃತಿಯ ಸ್ಪಂದನೆಯೂ ಬಹಳ ಅವಶ್ಯಕ. ಇಂದು ಕೃಷಿ ಕ್ಷೇತ್ರದಲ್ಲಿ ತಲ್ಲಣಗಳು ಉಂಟಾಗಲು ಅನೇಕ ಕಾರಣಗಳನ್ನು ಸರ್ಕಾರಗಳು, ಸಂಸ್ಥೆಗಳು, ಸಂಶೋಧನೆಗಳು, ಮಾಧ್ಯಮಗಳು, ಚಿಂತಕರು ದಿನಗಟ್ಟಲೆ ಮಾತನಾಡುತ್ತಿದ್ದಾರೆ. ಅದೇ ರೀತಿ ಪರಿಹಾರಗಳನ್ನು ಸಹ ಸೂಚಿಸುತ್ತಿದ್ದಾರೆ. ಅವುಗಳು ಎಷ್ಟರಮಟ್ಟಿಗೆ ಕೃಷಿಕ್ಷೇತ್ರದ ಎಲುಬುಗಳನ್ನು ಗಟ್ಟಿಗೊಳಿಸುತ್ತಿವೆ ಎಂಬುದು  ಪ್ರಶ್ನಾರ್ಥಕವಾಗಿ ಉಳಿಯುತ್ತಿದೆ.

ಆಧುನಿಕ ಪೂರ್ವಕಾಲದ ಕೃಷಿಯಲ್ಲಿ ಕೃಷಿಗೆ ಯಾವುದೇ ಒಳಸುರಿವುಗಳು ಇರುತ್ತಿರಲಿಲ್ಲ. ಪ್ರಸ್ತುತ ಕೃಷಿಯಲ್ಲಿ ಬಿತ್ತನೆಬೀಜ, ಗೊಬ್ಬರ, ಕೀಟನಾಶಕ, ಯಂತ್ರಗಳು ಮುಂತಾದ ಕೃಷಿ ಅಗತ್ಯ ವಸ್ತುಗಳ ವೆಚ್ಚಗಳು ಹೊರಸುರಿವುಗಳಿಗಿಂತ(ಆದಾಯ) ಅಧಿಕವಾಗುತ್ತಿದೆ. ಹಾಗಾದರೆ ಕೃಷಿಯು ಲಾಭದಾಯಕವಾಗುವುದು ಯಾವಾಗ? ಯುವಜನರಿಗೆ ಅದರಲ್ಲೂ ಬದುಕು ಕಟ್ಟಿಕೊಳ್ಳಬಹುದೆಂಬ ವಿಶ್ವಾಸ ಬರುವುದು ಯಾವಾಗ? ಎಂಬ ಪ್ರಶ್ನೆಗಳಿಗೆ ಎಲ್ಲರೂ ಉತ್ತರ ಹುಡಕಬೇಕಿದೆ. ಇಂತಹ ಕೃಷಿ ಬಿಕ್ಕಟ್ಟಿನ ಜೊತೆ ಸಾಲು ಸಾಲು ರೈತರ ಆತ್ಮಹತ್ಯೆಗಳು…. ಕೃಷಿ ಎಂದಾಕ್ಷಣ ನಮ್ಮೆಲ್ಲರ ಕಣ್ಣ ಮುಂದೆ ಬರುವ ರೂಪವೇ ರೈತ. ಆದರೆ ಈ ಕೃಷಿ ಬಿಕ್ಕಟ್ಟಿಗೆ ಕೇವಲ ರೈತನೊಬ್ಬನೆ ಕಾರಣವೇ? ಕೃಷಿಯ ಹಿಂದಿರುವ ರಾಷ್ಟ್ರೀಯ, ಅಂತರಾಷ್ಟ್ರೀಯ ಒಪ್ಪಂದಗಳ ಪಾಲೂ ಕೂಡಾ ಇದೆ. ಹಾಗಾದರೆ ಈ ಒಪ್ಪಂದಗಳಿಗೂ ಒಬ್ಬ ಸ್ವಾವಲಂಬಿ ರೈತನಿಗೂ ಸಂಬಂಧಗಳಿವೆಯೇ? ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿದಿದೆ.

1991 ರ ಎಲ್‍.ಪಿ.ಜಿ ಒಪ್ಪಂದಗಳ ನಂತರವೇ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅಂದಾಜಿನಂತೆ ಪ್ರತಿ ಗಂಟೆಗೆ ಇಬ್ಬರು ರೈತರಂತೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚುಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೈತ ಆತ್ಮಹತ್ಯೆಗಳು ಕೇವಲ ಸಾಲಕ್ಕಾಗಿಯೇ, ಸಾಲ ತೀರಿಸಲಾಗದೇ ಮಾಡಿಕೊಂಡರೆಂದರೆ? ಅದಕ್ಕೆ ಉತ್ತರಗಳು ನಿಖರ ಮತ್ತು ಸ್ಪಷ್ಟತೆಯಿಲ್ಲವಾಗಿದೆ. ಆತ್ಮಹತ್ಯೆಗೆ ಸಾಲವೂ ಒಂದು ಭಾಗ ಆಗಿದೆಯೇ ಹೊರತು, ನಡೆದ ಆತ್ಮಹತ್ಯೆಗಳೆಲ್ಲಾ ಕೃಷಿಗಾಗಿ ಪಡೆದ ಸಾಲದಿಂದಲೇ ಆಗಿದೆ ಎಂಬುದು ಆಶ್ಚರ್ಯಕರ. ಕೃಷಿಯನ್ನು ನಂಬಿ ಬದುಕುತ್ತಿರುವವರಲ್ಲಿ ಕೆಲಪ್ರಮಾಣದ ರೈತರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದಕ್ಕೂ, ಆಂಗ್ಲಮಾಧ್ಯಮದ ಹಣ ಕೇಂದ್ರಿತ ಶಿಕ್ಷಣ ಸಂಸ್ಥೆಗಳಿಗೆ ದಾಖಲಿಸುವುದಕ್ಕೂ, ತಮ್ಮ ಮಕ್ಕಳ ಅದ್ಧೂರಿ ಮದುವೆಗೂ, ವೈಭವದ ಜೀವನ ನಡೆಸುವುದಕ್ಕೂ ಸಾಲ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ ಮತ್ತು ಶ್ರೀಮಂತ ರೈತರ ಸಾಲಗಳ ವ್ಯತ್ಯಾಸ ಅಜಗಜಾಂತರವಾಗಿರುತ್ತದೆ. ಪ್ರಸ್ತುತ ಸರ್ಕಾರಗಳು ಇಂತಹ ಕಟು ಸತ್ಯಗಳನ್ನು ತಿಳಿದಿದ್ದರೂ ಸಹ ನೋಡಿಯೂ ನೋಡದಂತೆ ವರ್ತಿಸುತ್ತಿವೆ.

ಶತ ಪ್ರಮಾಣದ ರೈತರಲ್ಲಿ ಅಲ್ಪ ಪ್ರಮಾಣದ ರೈತರ ಸಾಲಗಳನ್ನು ಮನ್ನಾ ಮಾಡುತ್ತಿರುವುದು ಕಣ್ಣೊರೆಸುವ ಪ್ರಯತ್ನಗಳಾಗುತ್ತಿವೆ. ಹಾಗಾದರೆ ನಮ್ಮನ್ನಾಳುವ ಜನರು ಕೃಷಿ ಬಿಕ್ಕಟ್ಟೆಂಬ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ನೀಡುತ್ತಿವೆಯೇ? ಆಳುವ ಕಡೆಯವರು ಹೇಳುತ್ತಾರೆ ಹೌದೆಂದು, ವಿರೋಧ ಪಕ್ಷದವರು ಇಲ್ಲವೆನ್ನುತ್ತಾರೆ. ಇವೆರಡೂ ಸಹ ಪ್ರಸ್ತುತ ಸತ್ಯಗಳಾಗಿವೆ. ಜೊತೆಗೆ ಇವೆರಡೂ ಅಭಿಪ್ರಾಯಗಳನ್ನು ರೈತ ಸಂಘಟನೆಗಳು ತಳ್ಳಿಹಾಕುತ್ತಿವೆ. ರೈತಪರ ಸಂಘಟನೆಗಳು ಅನೇಕ ಪರಿಹಾರೋಪಾಯಗಳನ್ನು ಕೆಳಗಿನಂತೆ ಸಲಹೆಗಳಾಗಿ ನೀಡುತ್ತಿವೆ. “ಡಾ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಿ, ಎಲ್ಲಾ ರೈತರ ಸಾಲಗಳನ್ನು ಮನ್ನಾ ಮಾಡಿ, ವೈಜ್ಞಾನಿಕ ಬೆಲೆ ನೀಡಿ, ರೈತ ಸಮುದಾಯದವರಿಗೆ ಆರೋಗ್ಯ ಮತ್ತು ಶಿಕ್ಷಣಗಳನ್ನು ರಿಯಾಯಿತಿ ದರದಲ್ಲಿ ನೀಡಿ, ಭೂ ದಾಖಲೆಗಳ ವೆಚ್ಚವನ್ನು ಕಡಿತಗೊಳಿಸಿ, ಬೆಳೆನಷ್ಟ ಪರಿಹಾರ, ಬರ ಪರಿಹಾರ, ಕೃಷಿಯ ಒಳಸುರಿವುಗಳಾದ ಗೊಬ್ಬರ, ಬಿತ್ತನೆ ಬೀಜ, ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡಿ ಎಂಬ ಸಲಹೆಗಳನ್ನು ಒತ್ತಾಯ ಮಾಡಿ ಹೇಳುತ್ತಿವೆ. ಈ ಪರಿಸ್ಥಿತಿಗಳನ್ನು ಅರಿತು ಸರ್ಕಾರಗಳು ಕೃಷಿ ಬಿಕ್ಕಟ್ಟಿನ ರೋಗಕ್ಕೆ ದೀರ್ಘಕಾಲಿಕವಾದ ಪರಿಹಾರದ ಚಿಕಿತ್ಸೆಯನ್ನು ನೀಡಬೇಕಾಗಿದೆ. ತಮ್ಮ ಅಧಿಕಾರದ ಲಾಲಸೆಗಳಿಂದ ಮೊಸಳೆ ಕಣ್ಣೀರಿನ ನಾಟಕಗಳು ನಡೆದು ಕೆಲವರ ಸಾಲಗಳನ್ನು ಮಾತ್ರ ಮನ್ನಾ ಮಾಡುತ್ತಿವೆ. ಸಾಲಮನ್ನಾವು ಕೃಷಿಬಿಕ್ಕಟ್ಟಿನ ರೋಗದ ಲಕ್ಷಣಗಳಿಗೆ ಕೊಡುವ ಚಿಕಿತ್ಸೆಯೇ ಹೊರತು, ರೋಗದ ಮೂಲಕ್ಕೆ ನೀಡುವ ಚಿಕಿತ್ಸೆಯಲ್ಲ. ಹಾಗಾದರೆ ಸಾಲ ಮನ್ನಾ ಮಾಡುತ್ತಿರುವುದು ತಪ್ಪೇ? ತಪ್ಪಲ್ಲ. ಏಕೆಂದರೆ ರೈತರು ಚೇತರಿಸಿಕೊಳ್ಳಲು ಒಂದು ಹಂತದ ಸಹಾಯವದು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವುದು, ಸಹಜ ಕೃಷಿಯನ್ನು ಪ್ರೋತ್ಸಾಹಿಸುವುದು, ಒಳಸುರಿವುಗಳನ್ನು ನಿಯಂತ್ರಿಸುವ ತಂತ್ರಗಳ ಉತ್ತೇಜನವನ್ನು ಮಾಡುವುದೇ ರೋಗದ ಮೂಲಕ್ಕೆ ಶಾಶ್ವತ ಚಿಕಿತ್ಸೆ ನೀಡಿದಂತೆ. ಇದು ಶಾಶ್ವತ ಪರಿಹಾರವಾಗುತ್ತದೆ. ಆಗ ರೈತರು ತಾವುಗಳು ಮಾಡಿದ ಸಾಲಗಳನ್ನು ಬರುವ ಹೆಚ್ಚುವರಿ ಆದಾಯಗಳಿಂದ ತೀರಿಸಿಕೊಳ್ಳುತ್ತಾರೆ ಮತ್ತು ಕೃಷಿ ಬಿಕ್ಕಟ್ಟಿಗೆ ಸಿಲುಕಿಕೊಳ್ಳದಂತೆ ಎಚ್ಚರವಹಿಸುತ್ತಾರೆ.

ಚಿತ್ರ – ಲೇಖನ: ಜಿ ಮಂಜುನಾಥ್ ಅಮಲಗೊಂದಿ
ತುಮಕೂರು ಜಿಲ್ಲೆ

Spread the love

One thought on “ಕೃಷಿಗೆ ಬಿಕ್ಕಟ್ಟಿಗೆ ಬೇಕಿದೆ ಶಾಶ್ವತ ಚಿಕಿತ್ಸೆ

  1. “ಹಿಂದೆ ನೆಲ ನಂಬಿದವರಿಗೆ ನೆಲೆ ಸಿಗುತ್ತಿತ್ತು, ಇಂದು ನೆಲ ನಂಬಿದವರಿಗೆ ನೆಲವೇ ಅವರ ಬದುಕಿಗೆ ಮುಳುವಾಗುತ್ತಿದೆ ” ಇದು ಕೆಲವರ ಮಾತಲ್ಲ ಎಲ್ಲರದ್ದೂ ಆಗಿದೆ..ಇದಕ್ಕೆಲ್ಲ ಬಹು ಮುಖ್ಯ ಕಾರಣ ಯುವ ಜನತೆಯ ಋಣಾತ್ಮಕ ಚಿಂತನೆ, ಮತ್ತು ಹಣಕ್ಕಾಗಿ ಪರಾವಲಂಬಿಯಾಗಿ ಬದುಕುತ್ತಿರುವುದು ??

Comments are closed.

error: Content is protected.