ಪ್ರಕೃತಿ ಬಿಂಬ
©ಪೃಥ್ವಿ ಬಿ., ಮೈಸೂರು, ನೀರುನಾಯಿ
ಮಾಂಸಹಾರಿಗಳಲ್ಲೊಂದಾದ ನೀರು ನಾಯಿಗಳನ್ನು ಇಂಗ್ಲೀಷ್ನಲ್ಲಿ ಒಟರ್ ಎಂದು ಕರೆಯುತ್ತಾರೆ. ಇವುಗಳ ವಾಸಸ್ಥಳವಾದ ಬಿಲಗಳನ್ನು ಹೊಲ್ಟ್ ಎನ್ನುವರು. ಇವುಗಳ ಮರಿಗಳನ್ನು ಹೆಣ್ಣು ನಾಯಿಗಳು ಸಾಕುತ್ತವೆ. 16 ವರ್ಷ ಜೀವಿತಾವಧಿ ಹೊಂದಿರುವ ಇವುಗಳಲ್ಲಿ, ಹೆಣ್ಣು ನಾಯಿಗಳು ಎರಡು ವರ್ಷಕ್ಕೆ ಪ್ರೌಢಾವಸ್ಥೆಗೆ ಬಂದರೆ ಗಂಡು ನಾಯಿಗಳಿಗೆ ಮೂರು ವರ್ಷ ಬೇಕಾಗುತ್ತದೆ. ಮರಿಗಳು ಒಂದು ತಿಂಗಳು ಕಳೆದಂತೆಯೆ ಸ್ವತಂತ್ರವಾಗಿ ಬದುಕುವ ಸಾಮರ್ಥ್ಯ ಹೊಂದಿದ್ದು ಎರಡು ತಿಂಗಳು ಆಗುತ್ತಿದ್ದಂತೆಯೆ ಸರಾಗವಾಗಿ ಈಜುವ ಶಕ್ತಿ ಹೊಂದಿರುತ್ತವೆ. ಸಾಮಾನ್ಯವಾಗಿ ಮರಿಗಳು ತಮ್ಮ ಕುಟುಂಬದೊಂದಿಗೆ ಒಂದು ವರ್ಷದವರೆಗೆ ಬೆಳೆಯುತ್ತವೆ. ನೀರುನಾಯಿಯೆಂದು ಕರೆಸಿಕೊಂಡಿರುವುದರಿಂದ ಇದರ ಅಹಾರವು ಮೀನುಗಳು, ಕಪ್ಪೆಗಳು, ಆಗಾಗ ಪಕ್ಷಿಗಳು.
©ಪೃಥ್ವಿ ಬಿ., ಮೈಸೂರು, ಚಿರತೆ
ಚಿರತೆಗಳು ಅತ್ಯಂತ ಗುಪ್ತಚರ ಜೀವಿಗಳು ಇವುಗಳ ಮೈಬಣ್ಣ ಚಿನ್ನದಂತೆ ಇದ್ದು ಕಪ್ಪು ಚುಕ್ಕಿಗಳನ್ನು ಹೊಂದಿವೆ. ಇವುಗಳು ಯಾವ ಪರಿಸರಕ್ಕಾದರು ಹೊಂದಿಕೊಳ್ಳುವ ಸಾಮರ್ಥ್ಯವಿದೆ. ಕೊರೆಯುವ ಚಳಿ ಪ್ರದೇಶದಿಂದ ಹಿಡಿದು ಸುಡುವ ಬಿಸಿಲಿನಲ್ಲಿಯೂ ಕೂಡ ಬದುಕಬಲ್ಲವು. ಚಿರತೆಗಳಿಗಿಂತ ನಿಗೂಢ ಪ್ರಾಣಿ ಬೇರೆಯಿಲ್ಲ, ಇರುಳಿನ ಸಮಯದಲ್ಲಿ ಇವುಗಳ ಚಟುವಟಿಕೆಗಳು ಹೆಚ್ಚಾಗಿರುತ್ತದೆ. ಹುಲಿಗಳಿಗಿಂತ ಸರಾಗವಾಗಿಮರಹತ್ತ ಬಲ್ಲ ಇವುಗಳು ಗಂಟೆಗೆ 60 ಕಿಲೋಮೀಟರ್ ವೇಗವಾಗಿ ಓಡ ಬಲ್ಲವು ಗಾತ್ರದಲ್ಲಿ ಹುಲಿಗಳಿಗಿಂತಚಿಕ್ಕದಾದರೂ ಹುಲಿಯಷ್ಟೆ ಅಪಾಯಕಾರಿ, ತಮ್ಮ ಬೇಟೆಯನ್ನು ಸರಾಗವಾಗಿಮರದಮೇಲೆ ಎಳೆದೊಯ್ಯಬಲ್ಲವು. ಹೇಗೆ ಒಂದು ಹುಲಿಯ ಪಟ್ಟೆ ಬೇರೆ ಹುಲಿಯನ್ನು ಹೋಲುವುದಿಲ್ಲವೋ ಹಾಗೆಯೇ ಇವುಗಳ ಮೇಲಿರುವ ಚುಕ್ಕಿಗಳು ವಿಭಿನ್ನವಾಗಿದ್ದು ಒಂದನ್ನೊಂದು ಹೋಲುವುದಿಲ್ಲ.
©ಪೃಥ್ವಿ ಬಿ., ಮೈಸೂರು, ಕರಡಿ
ಪ್ರಪಂಚದಲ್ಲಿ ಒಟ್ಟು ಎಂಟು ಪ್ರಭೇದದ ಕರಡಿಗಳಿವೆ. ಅವುಗಳಲ್ಲಿ ನಾಲ್ಕು ಪ್ರಭೇದದ ಕರಡಿಗಳು ನಮ್ಮ ಭಾರತದಲ್ಲಿವೆ, ಈ ನಾಲ್ಕು ಪ್ರಭೇದಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದೇ ಈ ಸ್ಲಾತ್ ಕರಡಿಗಳು. ಸ್ಲಾತ್ ಕರಡಿಗಳು ಕೀಟಾಹಾರಿ ಪ್ರಾಣಿಗಳು. ಇವು ಹಣ್ಣು, ಜೇನು ಹಾಗು ಕೀಟಗಳಲ್ಲೊಂದಾದ ಗೆದ್ದಲು ಹುಳುಗಳನ್ನು ಹೆಚ್ಚಾಗಿ ತಿನ್ನುತ್ತವೆ, ಇನ್ನುಳಿದ ಪ್ರಭೇದದ ಕರಡಿಗಳ ಹಾಗೆ ಈ ಚಳಿಯಲ್ಲಿ ನಿದ್ರೆ ಮಾಡುವುದಿಲ್ಲ. ಏಳು ತಿಂಗಳುಗಳ ಕಾಲ ಗರ್ಭದಲ್ಲಿ ಮರಿಯನ್ನು ಹೊರುವ ಇವು, ಒಂದು ಬಾರಿಗೆ ಹೆಚ್ಚೆಂದರೆ ಎರಡು ಮರಿಗಳನ್ನು ಹಾಕುತ್ತವೆ. ಮಾನವನ ಬೆರಳಚ್ಚೆ ವಿಭಿನ್ನವಾಗಿರುವ ಹಾಗೆ ಈ ಕರಡಿಗಳ ಎದೆ ಭಾಗದಲ್ಲಿರುವ ಬಿಳಿ ಮಚ್ಚೆಗಳು ಒಂದಕ್ಕೊಂದು ವಿಭಿನ್ನವಾಗಿರುತ್ತವೆ.
©ಪೃಥ್ವಿ ಬಿ., ಮೈಸೂರು, ಕಪ್ಪು ಚಿರತೆ
ಕಪ್ಪು ಚಿರತೆಯನ್ನು ನೋಡಿದಾಕ್ಷಣ ನನಗೆ ನೆನಪಾಗುವುದು ‘ಜಂಗಲ್ ಬುಕ್’ ಸಿನಿಮಾದಲ್ಲಿ ಬರುವ ಭಗೀರ ಎಂದು ಹೆಸರುವಾಸಿಯಾದ ಕಪ್ಪು ಚಿರತೆ. ಈ ಕಪ್ಪು ಚಿರತೆ, ಚಿರತೆಯ ಬೇರೆ ತಳಿಯೇನಲ್ಲ. ಮೆಲನಿನ್ನಿಂದಾಗಿ ಕಪ್ಪು ಬಣ್ಣವಿರುತ್ತದೆ ಅಷ್ಟೆ. ಕಬಿನಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಪ್ರಮುಖ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದು. ಕೆಲವು ಬಾರಿ ಈ ಕಪ್ಪು ಚಿರತೆಯು ಇಲ್ಲಿ ಕಂಡುಬಂದಿರುವುದಾಗಿ ಕೇಳಿದ್ದೆ. ಈ ಚಿರತೆಯು ಕಬನಿಯಲ್ಲದೆ ಕರ್ನಾಟಕದ ನಿತ್ಯ ಹರಿದ್ವರ್ಣಕಾಡುಗಳಾದ ಅಂಶಿ ಮತ್ತು ದಾಂಡೇಲಿಯಲ್ಲಿಯೂ ಸಹ ಇವೆ. ಉಳಿದ ಚಿರತೆಗಳ ಹಾಗೆ ಈ ಕಪ್ಪು ಚಿರತೆಯು ನಿಗೂಢ ಪ್ರಾಣಿಯಾಗಿದ್ದು. ಇವುಗಳು ಸುಲಭವಾಗಿ ತಮ್ಮ ಬೇಟೆಯೊಂದಿಗೆ ಮರ ಹತ್ತಬಲ್ಲವು.
ಚಿತ್ರಗಳು: ಪೃಥ್ವಿ ಬಿ., ಮೈಸೂರು
ವಿವರಣೆ: ಧನರಾಜ್ ಎಂ