ಗೆರೆ ಅಲೆಮಾರಿ ಚಿಟ್ಟೆಗಳ ಪ್ರಣಯದ ಆ ಹೊತ್ತು, ಆಯಿತು ಏಡಿ ಜೇಡಕ್ಕೆ ಆಹಾರದ ತುತ್ತು.

ಗೆರೆ ಅಲೆಮಾರಿ ಚಿಟ್ಟೆಗಳ ಪ್ರಣಯದ ಆ  ಹೊತ್ತು, ಆಯಿತು ಏಡಿ ಜೇಡಕ್ಕೆ ಆಹಾರದ ತುತ್ತು.

© ಶಶಿಧರಸ್ವಾಮಿ ಆರ್. ಹಿರೇಮಠ

ಮನೆಯಲ್ಲಿ ಕೀಟಗಳ ಕುರಿತಾದ ಪುಸ್ತಕವನ್ನು ಓದುತ್ತಾ ಕುಳಿತಿದ್ದೆ. ಅಣ್ಣನ ಮಗಳು ಚಂದ್ರಿಕಾ ಗಡಿಬಿಡಿಯಿಂದ ಬಂದು ಮಲ್ಲಿಗೆ ಹೂವಿನ ಗಿಡದಲ್ಲಿ ಎರಡು ಚಿಟ್ಟೆಗಳಿವೆ ಬೇಗ ಬನ್ನಿ ಎಂದು ಒಂದೇ ಉಸಿರಿನಿಂದ ಉಸುರಿದಳು. ತಕ್ಷಣವೇ ಕ್ಯಾಮರ ಹೊತ್ತು ಮಲ್ಲಿಗೆ ಗಿಡದ ಹತ್ತಿರ ಹೋದೆ. ಅವಳು ಕೈ ಮಾಡಿ ತೋರಿಸಿ ನಾನು ಮಲ್ಲಿಗೆ ಹೂ ಕೀಳಲು ಬಂದೆ. ಆ ಎಲೆ-ಹೂವಿನ ಮೇಲೆ ಈ ಎರಡು ಚಿಟ್ಟೆಗಳನ್ನು ಕಂಡೆ ಎನ್ನುವುದರಲ್ಲಿ ನನ್ನ ಕಣ್ಣಿಂದ ಸೂಕ್ಷ್ಮವಾಗಿ ಆ ಜೋಡಿ ಚಿಟ್ಟೆಗಳನ್ನು ನೋಡಿ ದಿಗ್ಬ್ರಾಂತನಾದೆ. ಕಾರಣ ಅಲ್ಲಿ ಚಿಟ್ಟೆ ತಜ್ಞನಾಗಿ ನಾನು ಇದುವರೆಗೂ ನೋಡಿರದ, ಊಹಿಸಿರದ ಪ್ರಕೃತಿ ವಿಸ್ಮಯ ಕ್ರಿಯೆ ನಡೆಯುತ್ತಿತ್ತು. ಅದುವೇ ಮಿಲನಗೊಂಡ ಚಿಟ್ಟೆಗಳಲ್ಲಿ ಒಂದು ಚಿಟ್ಟೆಯನ್ನು ಶ್ವೇತ ಏಡಿ ಜೇಡವು ಭಕ್ಷಿಸುವುದರಲ್ಲಿ ಮಗ್ನವಾಗಿತ್ತು. ತಡಮಾಡದೇ ಕ್ಯಾಮರದಲ್ಲಿ ಆ ಕ್ಷಣಗಳನ್ನು ಕ್ಲಿಕ್ಕಿಸತೊಡಗಿದೆ.

ಈ ಚಿಟ್ಟೆಗಳನ್ನು ಕನ್ನಡದಲ್ಲಿ “ಗೆರೆ ಅಲೆಮಾರಿ” ಚಿಟ್ಟೆ ಎನ್ನುವರು. ಇವನ್ನು ಆಂಗ್ಲ ಭಾಷೆಯಲ್ಲಿ “ಮಾಟಲ್ಡ್ ಎಮಿಗ್ರಂಟ್” ಎಂದು ಕರೆದ ಚಿಟ್ಟೆತಜ್ಞರು, ವೈಜ್ಞಾನಿಕವಾಗಿ “ಕ್ಯಾಟೊಪ್ಸಿಲಿಯಾ ಪಿರಾಂಟ” ಎಂದು ಹೆಸರಿಸಿದ್ದಾರೆ. ಸಂಧಿಪದಿಗಳ ಕೀಟ ವರ್ಗದ ಲೇಫಿಡೊಪ್ಟೆರಾ ಗಣದ ಬಿಳಿ ಮತ್ತು ಹಳದಿ ಚಿಟ್ಟಗಳ “ಪೈಯರಿಡೇ” ಕುಟುಂಬಕ್ಕೆ ಸೇರಿಸಲಾಗಿದೆ.  ಹೂ ಜೇಡವನ್ನು ಕನ್ನಡದಲ್ಲಿ “ಶ್ವೇತ ಏಡಿ ಜೇಡ” ಎಂದೂ, ಆಂಗ್ಲ ಭಾಷೆಯಲ್ಲಿ ವೈಟ್ ಕ್ರ್ಯಾಬ್ ಸ್ಪೈಡರ್ ಅಥವಾ ಪ್ಲಾವರ್ ಸ್ಪೈಡರ್ ಎಂದೂ ಕರೆಯುವರು. “ಥಾಮಿಸಸ್ ಸ್ಪೆಕ್ಟಾಬಿಲಿಸ್” ಎಂದು ವೈಜ್ಞಾನಿಕವಾಗಿ ಹೆಸರಿಸಿ “ಥೋಮಿಸಿಡೆ” ಕುಟುಂಬಕ್ಕೆ ಸೇರಿಸಿದ್ದಾರೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಶ್ವೇತ ವರ್ಣದ ಏಡಿ ಜೇಡವು ಆ ಮಲ್ಲಿಗೆಯ ಹೂವಿನ ಬಿಳಿ ವರ್ಣಕ್ಕೆ ತಕ್ಕಂತೆ ಛದ್ಮವೇಷಧಾರಿಯಾಗಿ ಎಲೆ ಮತ್ತು ಹೂವಿನ ಮಧ್ಯದಲ್ಲಿ ಸುಮಾರು ಸಮಯದವರೆಗೆ ಪರಿಪೂರ್ಣ ಮರೆಮಾಚುವಿಕೆಯಿಂದ ಬೇಟೆಗಾಗಿ ಕಾಯ್ದು ಕುಳಿತಿತ್ತು. ಬಿರಿದುನಿಂತ ಸೂಜಿ ಮಲ್ಲಿಗೆಯ ಸುವಾಸನಾಯುಕ್ತ ಪರಿಮಳಕ್ಕೆ ಮನ ಸೋತ ಹೆಣ್ಣು ಅಲೆಮಾರಿ ಚಿಟ್ಟೆಯು ಮಕರಂದ ಹೀರಲು ಅಲ್ಲಿಗೆ ಬಂದಿದೆ. ಅದು ಸೂಸಿದ ಪ್ಯಾರಾಮೋನ್ ರಸಾಯನ ಅರಸಿ ಅಲ್ಲಿಗೆ ಗಂಡು ಚಿಟ್ಟೆಯು ಬಂದು ಹೆಣ್ಣು ಚಿಟ್ಟೆಯೊಂದಿಗೆ ಸೇರಿ ಮಿಲನಗೊಂಡಿವೆ. ಆ ಸಮಯದಲ್ಲಿ ಛದ್ಮವೇಷಧಾರಿಯಾದ ಈ ಶ್ವೇತ ಏಡಿ ಜೇಡವು ಥಟ್ಟನೆ ಎಗರಿ ಹೆಣ್ಣು ಅಲೆಮಾರಿ ಚಿಟ್ಟೆಯನ್ನು ಹಿಡಿದಪ್ಪಿ ತನ್ನ ವಿಷಯುಕ್ತ ಮೂರ್ಛಾರಸವನ್ನು ಚಿಟ್ಟೆಯ ದೇಹದಲ್ಲಿ ಸ್ರವಿಸಿ ಅದರ ರಸಾಹಾರವನ್ನು ಹೀರುವುದರಲ್ಲಿ ನಿರತವಾಗಿತ್ತು. ಚಿಟ್ಟೆಗಳನ್ನು ಹಿಡಿಯಲು ಪರಭಕ್ಷಕ ಏಡಿ ಜೇಡವು ಒಂದು ಸಂಪೂರ್ಣ ವ್ಯಾಪ್ತಿಯ ತಂತ್ರಗಳನ್ನು ಅಳವಡಿಸಿಕೊಂಡಿರುತ್ತದೆ. ಆಗ ಎಂಥ ಜಾಣನಾದರೂ ಬಲಿಯಾಗುವುದು ಶತಃಸಿದ್ಧ.

© ಶಶಿಧರಸ್ವಾಮಿ ಆರ್. ಹಿರೇಮಠ

ಪ್ರಕೃತಿಯಲ್ಲಿ ಸುಮಾರು 50% ನಷ್ಟು ಚಿಟ್ಟೆಗಳು ಸಂತಾನೋತ್ಪತ್ತಿಗೂ ಮೊದಲೇ ಪರಭಕ್ಷಕಗಳಿಗೆ ಬಲಿಯಾಗುತ್ತವೆ. ಆದರೆ ಇಲ್ಲಿ ಇದೊಂದು ಅಪರೂಪದ ನಿಗೂಡ ಕ್ಷಣ. ಕಾರಣ ಮಿಲನ ಪ್ರಕ್ರಿಯೆಯಲ್ಲಿ ಹೆಣ್ಣೊಂದು ಏಡಿ ಜೇಡಕ್ಕೆ ಬಲಿಯಾಗಿದೆ. ಚಿಟ್ಟೆಗಳು ತಮ್ಮ ಮೊದಲ ಹಾರಾಟಕ್ಕೆ ಮುಂಚೆಯೇ ಅಥವಾ ಕೋಶದಿಂದ ಹೊರ ಬಂದಾಗ ಪರಭಕ್ಷಕಗಳಾದ ಜೇಡ, ಪಕ್ಷಿಗಳು, ಕಣಜ, ಕಪ್ಪೆ, ಓತಿ, ಕೊಡತೆಹುಳು (ಏರೋಪ್ಲೇನ್ ಚಿಟ್ಟೆ), ಮಾಂಟಿಸ್, ಹಲ್ಲಿ, ದರೋಡೆ ನೊಣಗಳಿಂದ ದಾಳಿಗೆ ಒಳಗಾಗಿ ಬಲಿಯಾಗುತ್ತವೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಚಿಟ್ಟೆಗಳ ಕಂಬಳಿಹುಳು, ಮೊಟ್ಟೆ, ಪ್ರೌಢಚಿಟ್ಟೆಯ ಸಂಖ್ಯೆಯು ತ್ವರಿತವಾಗಿ ಬೆಳೆಯುತ್ತದೆ ಮತ್ತು ಲಭ್ಯವಿರುವ ಎಲ್ಲಾ ಆಹಾರ ಸಂಪನ್ಮೂಲಗಳು ತ್ವರಿತವಾಗಿ ಖಾಲಿಯಾಗುತ್ತದೆ. ಕಾರಣ ಪರಭಕ್ಷಕಗಳಿಂದ ಜೀವನ ಚಕ್ರದ ವಿವಿಧ ಹಂತಗಳಲ್ಲಿ ಚಿಟ್ಟೆಗಳು ಬಲಿಯಾಗುವುದು ಪ್ರಕೃತಿಯಲ್ಲಿನ ಸಹಜ ಕ್ರಿಯೆ. ಇಲ್ಲಿ ಪರಭಕ್ಷಕಗಳನ್ನು ಚಿಟ್ಟೆಗಳ ಶತ್ರುಗಳಾಗಿ ಪರಿಗಣಿಸಬಾರದು. ಹೆಚ್ಚಾಗುವ ಚಿಟ್ಟೆ ಸಂಖ್ಯೆಯನ್ನು ನಿಯಂತ್ರಿಸಿ ತಡೆಗಟ್ಟುವ ಪ್ರಕೃತಿಯ ವಿಧಾನ. ಅವುಗಳ ಜೀವನ ಚಕ್ರದ ವಿವಿಧ ಹಂತಗಳಲ್ಲಿ ಈ ರೀತಿಯ ಪರಭಕ್ಷಣೆ ಅತೀ ಅವಶ್ಯ.

ಇನ್ನೊಂದು ಅಂಶವೆಂದರೆ ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗಳಿಗೆ ತಮ್ಮದೆ ಆದ ಆಹಾರ ಸರಪಳಿ ಇದ್ದು, ಇವು ಇನ್ನೊಂದು ಜೀವಿಯನ್ನು ಭಕ್ಷಿಸುವ ಮೂಲಕ ಬದುಕುತ್ತವೆ. ಚಿಟ್ಟೆಗಳನ್ನು ಹಿಡಿದು ತಿನ್ನುವ ಅನೇಕ ಪರಭಕ್ಷಕರು ಈ ಪರಿಸರದಲ್ಲಿವೆ. ಕಡಜಗಳು, ಜೇಡಗಳು, ಕಪ್ಪೆಗಳು, ಪಕ್ಷಿಗಳೇ ಆ ಪರಭಕ್ಷಕರು ಕೆಲವು ಪ್ರಭೇದದ ಕಡಜಗಳು ತಮ್ಮ ಮೊಟ್ಟೆಯನ್ನು ಚಿಟ್ಟೆಯ ಕಂಬಳಿ ಹುಳುಗಳ ಮೇಲೆ ಇಡುತ್ತವೆ. ಮೊಟ್ಟೆಯಿಂದ ಹೊರಬಂದ ಕಣಜದ ಲಾರ್ವವು ಚಿಟ್ಟೆಯ ಕಂಬಳಿ ಹುಳುವನ್ನು ತಿನ್ನುತ್ತಾ ತಮ್ಮ ಮುಂದಿನ ಹಂತದ ಜೀವನಚಕ್ರಕ್ಕೆ ಕಾಲಿಡುತ್ತದೆ. ಚಿಟ್ಟೆಗೆ ತನ್ನ ಸಂಪೂರ್ಣ ಜೀವನ ಚಕ್ರದ ಎಲ್ಲ ಹಂತದಲ್ಲಿ ಆಕ್ರಮಣದ ಭೀತಿ ಇದ್ದೇ ಇರುತ್ತದೆ. ಅಂದರೆ ಪರಭಕ್ಷಕ ಸಾಮಾನ್ಯವಾಗಿ ಮೊಟ್ಟೆ, ಕಂಬಳಿಹುಳು, ಹಾಗೂ ಕೋಶಾವಸ್ಥೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಸಾಮಾನ್ಯವಾಗಿ ಮಿಲನ ಪ್ರಕ್ರಿಯೆಯಲ್ಲಿ ಈ ಪರಭಕ್ಷಣೆ ಅಪರೂಪದ ಸನ್ನಿವೇಷವಾಗಿದೆ. ಅಂದರೆ ಈ ಕ್ಷಣ ಜೀವ ಲೋಕದ ಕೌತುಕದಲ್ಲಿ ಒಂದಾಗಿದೆ. ಇಲ್ಲಿಯೂ ಸಹ ಈ ಶ್ವೇತ ಏಡಿ ಜೇಡವು ಮಿಲನಗೊಂಡ ನೂರಾರು ಮೊಟ್ಟೆಗಳನ್ನು ಇಡುವ ಆ ಹೆಣ್ಣು ಅಲೆಮಾರಿ ಚಿಟ್ಟೆಯನ್ನು ಹಿಡಿದು ಭಕ್ಷಿಸಿದಾಗ ಆಹಾರದ ಸಮತೋಲನವಾಗುತ್ತದೆ.

ಸ್ವಲ್ಪ ಗಾಳಿ ಬೀಸಿತು. ಆಗ ಟೊಂಗೆಯು ಅಲುಗಾಡಿದಾಗ ಬಿರಿದು ನಿಂತ ಹೂವು ಆ ಟೊಂಗೆಯಿಂದ ಬೇರ್ಪಟ್ಟು ಕೆಳಕ್ಕೆ ಬಿತ್ತು. ಆಗ ಗಂಡು ಚಿಟ್ಟೆಯು ಎಲೆಗೆ ಆಧಾರವಾಗಿ ನಿಂತಿತು. ಆಧಾರವಾಗಿದ್ದ ಎಲೆಯು ಗಾಳಿಗೆ ಅಲುಗಾಡಿದಾಗ ಗಂಡು ಚಿಟ್ಟೆ ಪಟಪಟನೆ ರೆಕ್ಕೆಯನ್ನು ಬಡಿದುಕೊಂಡು ಜೀವವಿಲ್ಲದ ಹೆಣ್ಣಿನ ಸಂಗದ ಮಿಲನ ಕೂಟದಿಂದ ತಪ್ಪಿಸಿಕೊಂಡು ಹಾರಿಹೋಯಿತು. ಆದರೆ ಹೆಣ್ಣು, ಏಡಿ ಜೇಡಕ್ಕೆ ಆಹುತಿಯ ತುತ್ತಾಗಿ ತನ್ನ ವಂಶಕ್ಕೆ ಕುತ್ತಾಯಿತು. ಈ ಎಲ್ಲ ದೃಶ್ಯಗಳು ನನ್ನ ಕ್ಯಾಮರದಲ್ಲಿ ಸೆರೆಗೊಳ್ಳುತ್ತಾ ದಾಖಲಾದವು. ಗಂಡು ಚಿಟ್ಟೆಯು ತನ್ನ ವಂಶ ಮುಂದುವರೆಸಲು ಮತ್ತೊಂದು ಸಂಗಾತಿ ಹುಡುಕಿಕೊಂಡು ಪ್ರಕೃತಿಯಲ್ಲಿ ಮಾಯವಾಯಿತು.

© ಶಶಿಧರಸ್ವಾಮಿ ಆರ್. ಹಿರೇಮಠ

 ಚಿತ್ರ – ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ

Spread the love
error: Content is protected.