ಪಶುವೈದ್ಯನ ನೋಟದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಪರಿಚಯ

ಪಶುವೈದ್ಯನ ನೋಟದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಪರಿಚಯ

ಈ ಲೇಖನವು ಹೆಚ್ಚು ಪರಿಸರ ಸ್ನೇಹಿಯಾಗಿದೆ ಎಂಬುದು ನನ್ನ ದೃಢವಾದ ನಂಬಿಕೆ. ಕಾರಣ ಇದರಲ್ಲಿರುವ ಪದಗಳೆಲ್ಲಾ ಪುನರ್ಬಳಕೆಗೊಳ್ಳುತ್ತಿರುವವೆ ಆಗಿವೆ. ಮಾನವ-ವನ್ಯಜೀವಿಗಳ ಸಂಘರ್ಷ ಚರ್ಚಿಸಬೇಕಾದಂತಹ ಹೊಸವಿಷಯವೇನಲ್ಲದಿದ್ದರೂ, ಅದನ್ನು ಅರಿತುಕೊಳ್ಳಲು ನಾವು ತುಂಬಾ ವಿಫಲರಾಗಿದ್ದೇವೆ. ಈ ಸಂಘರ್ಷವು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಕೃತ್ಯ. ಇದಕ್ಕೆ ಸಾಕ್ಷಿಯೆಂಬಂತೆ ಪಳಯುಳಿಕೆಗಳಲ್ಲಿಯೂ ನಾವು ಕಾಣಬಹುದು.

ಮಾನವ-ಪ್ರಾಣಿ ಸಂಘರ್ಷವೆಂದರೆ ಮನುಷ್ಯ ಹಾಗೂ ಕಾಡುಪ್ರ‍ಾಣಿಗಳ ನಡುವಿನ ಸ್ಪರ್ಧೆ ಎನ್ನಬಹುದು. ಈ ಜಂಜಾಟವು ಯಾರಿಗೆ ಬೇಕಾದರೂ ಹಾನಿಯುಂಟುಮಾಡುತ್ತದೆ. ಈ ಹಾನಿಯು ಮನುಷ್ಯನ ಸಾಮಾನ್ಯ ಜೀವನವ್ಯವಸ್ಥೆಯನ್ನೋ, ಅವನ ಸಂಸ್ಕೃತಿಯನ್ನೋ, ಅವನ ಮನಸ್ಥಿತಿಯನ್ನೋ ಅಥವಾ ಆರ್ಥಿಕತೆಯನ್ನೋ ಕದಡಬಹುದು. ಹಾಗೆಯೇ ವನ್ಯಜೀವಿಗಳ ಕಡೆ ಗಮನಹರಿಸಿದರೆ ಅವುಗಳ ಉಳಿವಿನ ಸಂಖ್ಯೆಯಲ್ಲಿ ಹಾಗೂ ಪರಿಸರದ ಸಮತೋಲನದಲ್ಲಿ ಕೆಟ್ಟ ಪರಿಣಾಮ ಬೀಳಬಹುದು. ಈ ಸಂಘರ್ಷಗಳಿಗೆ ಕಾರಣ ತುಂಬಾ ಸರಳವಾದಂತಹುದು.

ನೈಸರ್ಗಿಕ ಆವಾಸದ ಕುಸಿತ ಅಥವಾ ನಾಶ, ಗಣನೀಯವಾಗಿ ವೃದ್ಧಿಸುತ್ತಿರುವ ಜನಸಂಖ್ಯೆ, ಮೂಲಸೌಕರ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಕಾಡುಗಳ ಒತ್ತುವರಿ, ಬೆಳವಣಿಗೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಯೋಜನೆಗಳು ಮತ್ತು ನಮ್ಮ ಪರಿಸರವನ್ನು ಅರ್ಥೈಸಿಕೊಳ್ಳುವಲ್ಲಿ ನಾವು ಎಡವುತ್ತಿರುವುದು. ವನ್ಯಜೀವಿಗಳ ನಡವಳಿಕೆಯಲ್ಲಿ ನಮ್ಮಲ್ಲಿರುವ ಅತ್ಯಲ್ಪ ಜ್ಞಾನ. ಮಾನವನಲ್ಲಿ ಅಥವಾ ವನ್ಯಜೀವಿಗಳಲ್ಲಿ ಆಹಾರದ ಕೊರತೆ, ನೀರಿನ ಕೊರತೆ, ಆವಾಸದ ನಾಶ, ಆರೋಗ್ಯದಲ್ಲಿನ ತೊಂದರೆ ಹಾಗೂ ಜೀವನಶೈಲಿಗೆ ತೊಂದರೆ ಎಂದೆನಿಸಿದಾಗ ಈ ಸಂಘರ್ಷ ಕಣ್ದೆರೆಯುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ ಮಾನವನ ಗುರಿಗಳಲ್ಲಿ ಹಾಗೂ ವನ್ಯಜೀವಿಗಳ ಅಗತ್ಯಗಳಲ್ಲಿರುವ ಅಜಗಜಾಂತರ ವ್ಯತ್ಯಾಸ.

© ಲೇನು ಕಣನ್

ಇನ್ನು ವಿಶಾಲ ದೃಷ್ಟಿಯಲ್ಲಿ ನೋಡುವುದಾದರೆ ಮನಬಂದಂತೆ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಈ ಮಾನವ-ವನ್ಯಜೀವಿಗಳ ಸಂಘರ್ಷವು ಉಪಕ್ರಮಿಸುತ್ತದೆ. ಅದರಲ್ಲೂ ನೈಸರ್ಗಿಕ ಸಂಪನ್ಮೂಲಗಳಾದ ಮರ, ಗಿಡ, ಎಲೆ, ಜೇನು, ಮೀನು, ಮಾಂಸಗಳನ್ನು ಪಡೆಯುವ ಮಾನವನ ದುರಾಸೆಗೆ ಆಹಾರ ಸರಪಳಿಯ ಕೊಂಡಿಯೊಂದು ಕಳಚುತ್ತದೆ ಅಥವಾ ಈ ನೈಸರ್ಗಿಕ ಸರಪಳಿಗೆ ಅಗಾಧವಾದ ತೊಂದರೆಯಾಗುತ್ತದೆ. ವನ್ಯಜೀವಿಗಳಲ್ಲಿರುವ ರೋಗ ನಿರೋಧಕ ಶಕ್ತಿ ಸಾಕುಪ್ರಾಣಿಗಳಿಗಿಂತ ವಿಭಿನ್ನವಾಗಿರುತ್ತದೆ. ಆದ್ದರಿಂದ ಒಂದರಿಂದ ಇನ್ನೊಂದಕ್ಕೆ ರೋಗಗಳು ಹರಡುವುದು ಸಹಜ. ಉದಾಹರಣೆಗೆ KFD, FMD, ರೇಬಿಸ್ ಮುಂತಾದವುಗಳು. ಈ ಮಾನವ-ವನ್ಯಜೀವಿಗಳ ಸಂಘರ್ಷವೆಂಬ ಚರ್ಚೆಯ ಮೊದಲಿಗರು ದಾಸ್ ಮತ್ತು ಗುಹರವರು. ಇವರು ಈ ಸಂಘರ್ಷದ ಎರಡು ಬದಿಯ ಪ್ರಭಾವವನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಒಂದು ಬದಿಯಲ್ಲಿ, ಈ ಸಂಘರ್ಷದ ಮೂಲ ಕಾಡಿನ ಪಕ್ಕದ ಹಳ್ಳಿಗರನ್ನು ಕಾಡಿನ ಸಂಪನ್ಮೂಲಗಳ ಬಳಕೆಯನ್ನು ನಿಲ್ಲಿಸಲು ಯತ್ನಿಸುವುದರಿಂದ ಉದ್ಭವಿಸಿದರೆ, ಮತ್ತೊಂದು ಬದಿಯಲ್ಲಿ ಕಾಡಿನ ಪ್ರ‍ಾಣಿಗಳಿಂದ ಈ ಜನರಿಗೆ ಆಗುತ್ತಿರುವ ತೊಂದರೆಗಳಿಂದ ಉದ್ಭವಿಸುತ್ತದೆ. ನಮ್ಮ ದೇಶದಲ್ಲಿ ಆನೆ, ಚಿರತೆ, ಕಾಡು ಹಂದಿ, ಕರಡಿ, ರಣಹದ್ದು, ನವಿಲು, ನೀಲ್ಗಾಯ್, ರಿಡ್ಲಿ ಕಡಲಾಮೆ, ಹುಲಿ, ಸರಿಸೃಪಗಳ ಜೊತೆ ಪ್ರಾಂತ್ಯ ಮತ್ತು ಅವುಗಳ ಸಂಖ್ಯೆಗೆ ಅನುಗುಣವಾಗಿ ಸಂಘರ್ಷಕ್ಕೊಳಗಾಗುತ್ತಿದ್ದೇವೆ.

ಅರಣ್ಯ ವಲಯದ ವೃದ್ಧಿಯಲ್ಲಿ ಭಾರತ ದೇಶವು 1900 ರಿಂದ 2000 ಇಸವಿಯಲ್ಲಿ ಪ್ರಪಂಚದಲ್ಲೇ 5ನೇ ಸ್ಥಾನದಲ್ಲಿದೆ, ಹಾಗೂ 2000 ದಿಂದ 2010 ರಷ್ಟರಲ್ಲಿ ಅರಣ್ಯ ವಲಯ ವೃದ್ಧಿಯಲ್ಲಿ 3ನೇ ಸ್ಥಾನದಲ್ಲಿದೆ ಎಂದು FAO ಸಮೀಕ್ಷಿಸಿದೆ. ಆದರೆ ಕಳೆದೆರಡು ವರ್ಷದಲ್ಲಿಯೇ ಭಾರತವು 367ಚದುರ ಕಿ.ಮೀ. ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ. 2011ರ ಫೆಬ್ರುವರಿಯಲ್ಲಿ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ (FSI) ರವರ ಅರಣ್ಯ ಸ್ಥಿತಿಗಳ ವರದಿ ಪ್ರಕಾರ, ನಮ್ಮ ದೇಶದಲ್ಲಿನ ಅರಣ್ಯ ವಲಯದ ವಿಸ್ತೀರ್ಣ 6,92,027 ಚ.ಕಿ.ಮೀ ಗಿಂತಲೂ ಕಡಿಮೆ ಇದೆ, ಅಂದರೆ ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ.21.05 ರಷ್ಟು. ಇಷ್ಟು ಅರಣ್ಯ ಕಡಿಮೆಮಾಡಿರುವುದಲ್ಲದೆ ವನ್ಯಜೀವಿಗಳು ಶತಮಾನಗಳಿಂದ ವಲಸೆ ಹೋಗಲು ಬಳಸುತ್ತಿದ್ದ ದಾರಿಯಲ್ಲಿನ ಕಾಡುಗಳನ್ನು ಕಡಿದು ಪ್ರಾಣಿಗಳು ವಲಸೆ ಹೋಗಲು ಅಡ್ಡಗಾಲು ಹಾಕಿದ್ದೇವೆ. ಅಷ್ಟೆ ಅಲ್ಲದೆ ದಟ್ಟ ಅರಣ್ಯಗಳ ಹೃದಯಭಾಗದಲ್ಲಿ ರಸ್ತೆ, ರೈಲ್ವೇ ಹಳಿಗಳು, ವಿದ್ಯುತ್ ಬೇಲಿಗಳನ್ನು ಹಾಕುವ ಮೂಲಕ ಅರಣ್ಯವನ್ನು ಛಿದ್ರಗೊಳಿಸಿದ್ದೇವೆ.

ಈ ರೀತಿಯ ಅಡಚಣೆಗಳಿಂದ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಊರಿನ ಕಡೆ ಬರುವುದು ಸಹಜವೇ ಸರಿ. ಆಗ ಮಾನವ-ವನ್ಯಜೀವಿ ಸಂಘರ್ಷ ತಲೆದೋರುತ್ತದೆ. ಉದಾಹರಣೆಗೆ ನಮ್ಮ ರಾಜ್ಯದಲ್ಲೇ 2010-11 ಮತ್ತು 2013-14 ರ ನಡುವೆ ಮಾನವ-ವನ್ಯಜೀವಿ ಸಂಘರ್ಷದಿಂದ 5 ಹುಲಿ, 17 ಚಿರತೆ ಮತ್ತು 62 ಆನೆಗಳನ್ನು ಕಳೆದುಕೊಂಡಿದ್ದೇವೆ. ಇನ್ನು ಮಾನವರ ವಿಷಯಕ್ಕೆ ಬಂದರೆ 129 ಜನರು ಈ ಸಂಘರ್ಷದಿಂದ ಮೃತಪಟ್ಟಿದ್ದಾರೆ.

ಉತ್ತರಾಖಂಡ್ ರಾಜ್ಯವು 2000 ಮತ್ತು 2015 ರ ನಡುವೆ ಸರಿಸುಮಾರು 90 ಹುಲಿಗಳನ್ನು, 800 ಚಿರತೆಯನ್ನು ಮತ್ತು 280 ಆನೆಗಳನ್ನು ಈ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಕಳೆದುಕೊಂಡಿದೆ. ಹಾಗೆಯೇ 400 ಜನರೂ ಸಹ ಈ ಸಂಘರ್ಷದ ಪರಿಣಾಮದಿಂದ ಮೃತಪಟ್ಟಿದ್ದಾರೆ.

© ಲೇನು ಕಣನ್

 ಸಂಘರ್ಷದ ಪರಿಣಾಮಗಳು

ಮಾನವ-ವನ್ಯಜೀವಿ ಸಂಘರ್ಷದಿಂದ ಹಲವಾರು ದುಷ್ಪರಿಣಾಮಗಳಾಗುತ್ತವೆ. ಜನರು ಅವರ ಬೆಳೆಗಳನ್ನು, ಸಾಕುಪ್ರಾಣಿಗಳನ್ನು, ಅವರ ಸ್ವತ್ತುಗಳನ್ನು ಕೆಲವೊಮ್ಮೆ ಜೀವಗಳನ್ನೂ ಸಹ ಕಳೆದುಕೊಳ್ಳುತ್ತಾರೆ. ಇನ್ನು ಮಾನವರು ಸೇಡಿನಿಂದ ಪ್ರಾಣಿಗಳನ್ನು ಸಾಯಿಸುವ ಕಾರಣ ಅವುಗಳ ಸಂಖ್ಯೆ ಕ್ಷೀಣಿಸಿದೆ.    ಈ ಸಂಘರ್ಷಗಳ ಬಹುಮುಖ್ಯ ಪರಿಣಾಮಗಳು

  • ಮಾನವನಿಗೆ, ಸಾಕುಪ್ರಾಣಿಗಳಿಗೆ ಅಥವಾ ವನ್ಯಜೀವಿಗಳಿಗೆ ಬಲವಾದ ಗಾಯಗಳಾಗಬಹುದು ಅಥವಾ ಜೀವವನ್ನೇ ಕಳೆದುಕೊಳ್ಳಬಹುದು.
  • ಬೆಳೆ ಹಾನಿ, ಸಾಕು ಪ್ರಾಣಿಗಳ ಬೇಟೆ.
  • ಮಾನವನ ಆಸ್ತಿ ನಾಶ ಅಥವಾ ವನ್ಯಜೀವಿಗಳ ಆವಾಸ ನಾಶ.
  • ವನ್ಯಜೀವಿಗಳ ಸಂತತಿಯ ಕುಸಿತ ಅಥವಾ ಅರಣ್ಯ ಪ್ರದೇಶದ ಕುಗ್ಗುವಿಕೆ.

ವನ್ಯಜೀವಿಗಳು ಮಾನವನ ವಾಸಸ್ಥಳಕ್ಕೆ ಬಂದರೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು

  • ಗಾಬರಿಗೊಳ್ಳದೆ ಕಾಡು ಪ್ರಾಣಿಯು ಅದರ ಆವಾಸಕ್ಕೆ ಹಿಂದಿರುಗಲು ವಿಸ್ತಾರವಾದ ಜಾಗ ಬಿಡುವುದು.
  • ಬಂದ ಪ್ರಾಣಿಯನ್ನು ಓಡಿಸಲು ಕಲ್ಲಿನಿಂದ ಹೊಡೆಯಬಾರದು, ಕಿರುಚಬಾರದು, ಅದನ್ನು ಓಡಿಸಿಕೊಂಡು ಹೋಗಬಾರದು ಹಾಗೂ ಅದು ಗಾಬರಿಗೊಳ್ಳುವಂತಹ ವಾತಾವರಣ ನಿರ್ಮಿಸಬಾರದು. ಅದನ್ನು ಜನರ ಅಥವಾ ಬೆಂಕಿಯ ಸಹಾಯದಿಂದ ಒಂದು ಮೂಲೆಗೆ ಸಿಲುಕಿಸಬಾರದು.

ಸಂಘರ್ಷ ನಿರ್ವಹಣಾ ತಂತ್ರಗಳು

ನಮ್ಮ ಮುಂದೆ ಈಗ ಇರುವ ಬಹುಮುಖ್ಯ ಕಾರ್ಯವೆಂದರೆ ಯಾವುದೇ ಗೊಡ್ಡು ನಂಬಿಕೆಗಳಿಗೆ ಆಸ್ಪದಕೊಡದೆ ವೈಜ್ಞಾನಿಕವಾದ ದೀರ್ಘಾವಧಿಯ ಸಂಘರ್ಷ ನಿರ್ವಹಣಾ ತಂತ್ರಗಳನ್ನು ರೂಪಿಸುವುದು.  ಈ ತಂತ್ರಗಳನ್ನು ಸಾಧಿಸಲು ನಮ್ಮಲ್ಲಿರುವ ಸಂಪನ್ಮೂಲಗಳು, ಎದುರಿಗೆ ಇರುವ ಜೀವಿಯ ವೈಜ್ಞಾನಿಕ ತಿಳುವಳಿಕೆ, ಸಂಘರ್ಷ ನಡೆಯುತ್ತಿರುವ ಪ್ರಾಂತ್ಯವು ಬಹು ಮುಖ್ಯವಾಗುತ್ತದೆ.

ಹಿಂದೆ ಈ ಸಂಘರ್ಷ ನಿರ್ವಹಣಾ ತಂತ್ರಗಳು ಮಾರಕವಾದ ನಿಯಂತ್ರಣ, ಸ್ಥಳಾಂತರಿಸುವುದನ್ನು, ಅವುಗಳ ಸಂಖ್ಯೆಯನ್ನು ನಿರ್ವಹಿಸುವುದು ಹಾಗೂ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಜೋಪಾನ ಮಾಡುವುದು ಆಗಿತ್ತು. ಆದರೆ ಈಗಿನ ನಿರ್ವಹಣಾ ತಂತ್ರಗಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ವೈಜ್ಞಾನಿಕ ಸಂಶೋಧಿತ ತಂತ್ರಗಳ ಕಡೆ ಗಮನಹರಿಯುತ್ತಿದೆ. ಉದಾಹರಣೆಗೆ ಪ್ರಾಣಿಗಳ ನಡವಳಿಕೆಯನ್ನು ಅರಿತು ಅದರಲ್ಲಿ ಸ್ವಲ್ಪ ಬದಲಾವಣೆ ತರಲು ಯತ್ನಿಸುವುದು ಹಾಗೂ ವನ್ಯಜೀವಿಗಳ ಜೊತೆಗಿನ ಮುಖಾಮುಖಿ ಒಡನಾಟವನ್ನು ಕಡಿಮೆ ಮಾಡಿಕೊಳ್ಳುವುದು. ಈ ಸಂಘರ್ಷಗಳು ನೇರವಾಗಿ ಅಥವಾ ಪರೋಕ್ಷವಾಗಿ ಸಮಾಜದ ಸಂಪನ್ಮೂಲಗಳಿಗೆ ಧಕ್ಕೆತರುವುದರಿಂದ ಇದನ್ನು ನಿಯಂತ್ರಿಸಿ ಜೀವವೈವಿಧ್ಯತೆ ಉಳಿಸಿ, ಬೆಳೆಸಬೇಕು. ಅವುಗಳನ್ನು ಕಾಪಾಡಿಕೊಳ್ಳಲು ಉಳಿಸಿಕೊಂಡಿರುವ ರಕ್ಷಿತಾ ಪ್ರದೇಶಗಳಿಗೂ ಬಹುಮುಖ್ಯ ಕಾರ್ಯವಾಗಿದೆ.

ವನ್ಯಜೀವಿಗಳನ್ನು ನಿಗ್ರಹಿಸಲು ಎರಡು ವಿಧಾನಗಳಿವೆ. ಮೊದಲನೆಯದು ವನ್ಯಜೀವಿಗಳ ಸಂತತಿಯನ್ನು ಕಡಿಮೆ ಮಾಡುವುದು. ಎರಡನೆಯದು ವನ್ಯಜೀವಿಗಳ ಜೀವಕ್ಕೆ ಹಾನಿಮಾಡದೆ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು, ರಕ್ಷಿತಾರಣ್ಯಗಳಲ್ಲಿ ಅವುಗಳ ಸಂತತಿಯನ್ನು ಕಾಪಾಡುವುದು ಆಗಿದೆ.

ಈ ಕೆಳೆಗಿನವುಗಳು ಕೆಲವು ಸಂಘರ್ಷ ನಿರ್ವಹಣಾ ತಂತ್ರಗಳಾಗಿವೆ

  • ಸ್ವಚ್ಛತೆ ಕಾಪಾಡುವುದು: ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ಹಾಗೂ ವನ್ಯಜೀವಿಗಳು ತಿನ್ನಬಹುದಾದ ಕಸವನ್ನು ನಾವು ವಾಸಿಸುವ ಜಾಗದ ಸುತ್ತಮುತ್ತ ಬಿಸಾಡದಂತೆ ನೋಡಿಕೊಳ್ಳುವುದು.
  • ಅರಣ್ಯ ಉತ್ಪನ್ನಗಳ ಮೇಲೆ ಕಡಿಮೆ ಅವಲಂಬಿತವಾಗುವುದು: ಕಾಡನ್ನು ಹೆಚ್ಚು ನಾಶಮಾಡುವುದರಿಂದ ಕಾಡಿನಲ್ಲಿರುವ ಜೀವಿಗಳಿಗೆ ಆಹಾರದ ತೊಂದರೆಯಾಗಿ ಊಟವನ್ನರಸಿ ನಾಡಿನ ಕಡೆ ಬರಬಹುದು.
  • ಪರಿಸರದ ಸೇವೆಗಾಗಿ ನಿಧಿ: ಬೆಳವಣಿಗೆ ಎಂಬ ಉದ್ದೇಶಕ್ಕೆ ಪರಿಸರದ ಉತ್ಪನ್ನಗಳನ್ನು ಬಳಸುತ್ತಿರುವುದರಿಂದ ಪರಿಹಾರವಾಗಿ ಪರಿಸರ ಸಂರಕ್ಷಣೆಗೆ ಆರ್ಥಿಕ ನೆರವನ್ನು ನೀಡುವುದು. ಉದಾಹರಣೆ ‘ಕಾಂಪಾ’ ನಿಧಿ.
  • ಅರಣ್ಯ ಸಮಿತಿ: ಕಾಡಿನ ಸುತ್ತಮುತ್ತ ವಾಸವಾಗಿರುವ ಅರಣ್ಯ ಜ್ಞಾನವುಳ್ಳ ಅಲ್ಲಿನ ಸಮುದಾಯದವರನ್ನೇ ಬಳಸಿಕೊಂಡು ಪರಿಸರ ಶಿಬಿರ ಹಾಗೂ ಪರಿಸರ ಸಂರಕ್ಷಣೆಗೆ ಉಪಕಾರಿಯಾಗುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಅಲ್ಲಿನ ಸಮುದಾಯದ ಜನರಿಗೂ ಆರ್ಥಿಕ ನೆರವು ಸಿಗುತ್ತದೆ.
© ಲೇನು ಕಣನ್
  • ಪರಿಹಾರ ಹಾಗೂ ವಿಮೆ: ಕಾಡಿನ ಸುತ್ತಮುತ್ತ ವಾಸಿಸುವ ಬಹಳಷ್ಟು ಜನರು ತಮ್ಮ ಹೊಟ್ಟೆಪಾಡಿಗೆ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಪ್ರಾಣಿಗಳು ಅವರ ಬೆಳೆಗಳನ್ನು ನಾಶ ಮಾಡಿದರೆ ಸೂಕ್ತ ಪರಿಹಾರ ನೀಡಿ ಅವರಿಗೆ ಆರ್ಥಿಕ ನೆರವನ್ನು ನೀಡಿ ಸಹಾಯಮಾಡುವುದು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರಾಂತ್ಯಗಳಲ್ಲಿ ಹಳ್ಳಿಗರಿಗೆ ಜೀವವಿಮೆ ಮಾಡಿಸುವುದರಿಂದ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ
  • ಸಮರ್ಪಕ ನಿರ್ವಹಣೆ: ಮಾನವನ ಸಂಖ್ಯೆ ಹೆಚ್ಚಿದಂತೆಲ್ಲಾ ಪ್ರಾಣಿಗಳ ಆವಾಸ ಸ್ಥಳ ಕಡಿಮೆಯಾಗುತ್ತಿದೆ. ಇದೇ ಮಾನವ-ಪ್ರಾಣಿ ಸಂಘರ್ಷಕ್ಕೆ ಮೂಲ ಕಾರಣ. ಅದಕ್ಕಾಗಿಯೇ ಇರುವ ಭೂಮಿಯನ್ನು ಸಮರ್ಪಕವಾಗಿ ಬಳಸಿ ಕಾಡಿನ ಪ್ರದೇಶ ಕಡಿಮೆಯಾಗದಂತೆ ವಿಂಗಡಿಸಿಕೊಳ್ಳುವುದು ಒಳ್ಳೆಯದು. ವ್ಯವಸಾಯ, ಕಾರ್ಖಾನೆ, ಮೂಲಭೂತ ಸೌಕರ್ಯಗಳಿಗೆ ಹಾಗೂ ಅವುಗಳನ್ನು ಒದಗಿಸುವ ಗಣಿಗಳಿಗೆ ಮತ್ತು ಕಲ್ಲು ಕ್ವಾರಿಗಳಿಗೆ ಅರಣ್ಯೇತರ ಜಮೀನುಗಳನ್ನು ನಿಖರವಾಗಿ ಗುರುತಿಸಬೇಕು. ಅಷ್ಟೇ ಅಲ್ಲದೆ ನೀರಿನ ಉಪಲಬ್ದತೆ, ಮಣ್ಣಿನ ಸಾರಾಂಶ ಮಾರುಕಟ್ಟೆಯ ಮೌಲ್ಯ ಎಲ್ಲವನ್ನು ಗಮನಿಸಿ ಪ್ರತೀ ಪ್ರದೇಶಗಳಿಗೂ ಯೋಗ್ಯವಾಗುವಂತಹ ಬೆಳೆಗಳನ್ನು ಬೆಳೆಯುವಂತೆ ಗಮನಹರಿಸಬೇಕು. ಪ್ರತೀ ಅರಣ್ಯವು ಮತ್ತೊಂದು ಪ್ರದೇಶದ ಅರಣ್ಯಕ್ಕೆ ಸಂಪರ್ಕಕಲ್ಪಿಸುವ ಅರಣ್ಯದ ಜಾಡು ಇರಬೇಕು ಇಲ್ಲವಾದಲ್ಲಿ ಆ ಪ್ರದೇಶಕ್ಕೆ ಸೀಮಿತವಾಗಿರುವ ದೇಶಿತಳಿಯ ಮರಗಳನ್ನು ನೆಟ್ಟು ಪ್ರಾಣಿಗಳು ಸ್ವಚ್ಛಂದವಾಗಿ ಒಂದು ಅರಣ್ಯ ಪ್ರದೇಶದಿಂದ ಮತ್ತೊಂದು ಅರಣ್ಯ ಪ್ರದೇಶಕ್ಕೆ ಹೋಗುವಂತಹ ಸಂಪರ್ಕ ಕಲ್ಪಿಸಬೇಕು.
  • ಅಡೆತಡೆಗಳ ರಚನೆ: ಕಾಡುಪ್ರಾಣಿಗಳು ಸರಾಗವಾಗಿ ಮಾನವರ ವಾಸಸ್ಥಳಗಳಿಗೆ ನುಗ್ಗದಂತೆ ತಡೆಯಲು ಅಡೆತಡೆಗಳಾದ ಕಂದಕಗಳನ್ನು, ವಿದ್ಯುತ್ ಬೇಲಿಗಳನ್ನು, ಕಬ್ಬಿಣದ ಬೇಲಿಗಳನ್ನು ನಿರ್ಮಿಸಬೇಕು. ಈ ಬೇಲಿಗಳ ಆಸು-ಪಾಸಿನಲ್ಲಿ ಜೇನನ್ನು ಸಾಕುವುದರಿಂದ, ಎಣ್ಣೆಯ ಜೊತೆ ಖಾರದ ಪುಡಿಯನ್ನೋ ಅಥವಾ ತಂಬಾಕು ಪುಡಿಯನ್ನೋ ಕಲಸಿ ಬೇಲಿಗಳಿಗೆ ಸವರುವುದರಿಂದ ಪ್ರಾಣಿಗಳು ಮತ್ತಷ್ಟು ಹೆದರಿ ಕಾಡಿಗೆ ಹಿಂದಿರುಗುತ್ತವೆ.
© ಲೇನು ಕಣನ್
  • ಮಾರುವೇಷ: ಭಾರತದ ಒಂದು ಹಳ್ಳಿಯಲ್ಲಿ ಮಾನವರು ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಮೂರು ವರುಷಗಳ ಕಾಲ ಒಂದು ಆಶ್ಚರ್ಯಕರ ಪ್ರಯೋಗವನ್ನು ಮಾಡಿದ್ದಾರೆ. ಆ ಹಳ್ಳಿಗರು ತಮ್ಮ ತಲೆಯ ಹಿಂಬದಿ ಒಂದು ಮುಖವಾಡವನ್ನು ಧರಿಸಿದ್ದರು. ಮೂರು ವರ್ಷಗಳ ತರುವಾಯ ಮುಖವಾಡ ಧರಿಸದೇ ಇದ್ದವರು 29 ಮಂದಿ ಬಲಿಯಾಗಿದ್ದಾರೆ, ಧರಿಸಿದವರು ಬಚಾವಾಗಿದ್ದಾರೆ.
  • ಜಿ. ಪಿ. ಎಸ್: ಆನೆಯಂತಹ ಪ್ರಾಣಿಗಳಿಗೆ ರೇಡಿಯೋ ಕಾಲರ್ ಅನ್ನು ಅಳವಡಿಸಿ ಅದರ ಚಲನವಲನವನ್ನು ಅರಣ್ಯ ಸಿಬ್ಬಂದಿಯು ಗಮನಿಸುವಂತೆ ಮಾಡುವುದು ಹಾಗೂ ಆನೆಯು ಕಾಡಿನಿಂದ ಹೊರಗಡೆ ಬಂದರೆ ಅರಣ್ಯಸಿಬ್ಬಂದಿಗೆ SMS ಮುಖಾಂತರ ಸಂದೇಶ ಬರುವಂತೆ ಮಾಡುವುದರಿಂದ ಅರಣ್ಯ ಸಿಬ್ಬಂದಿ ಆ ಪ್ರಾಣಿಯನ್ನು ಮತ್ತೆ ಕಾಡಿಗೆ ಕಳುಹಿಸಿ ಸಂಘರ್ಷವನ್ನು ತಡೆಯಬಹುದು.
  • ಕ್ಷಿಪ್ರ ಪಡೆ ಮತ್ತು ಮರು ವಸತಿ ಕೇಂದ್ರಗಳು: ಪ್ರತಿ ಜಿಲ್ಲೆ/ರಾಜ್ಯಗಳಲ್ಲಿ ತರಬೇತಿ ಹೊಂದಿರುವ ಪಶುವೈದ್ಯರು ಮತ್ತು ಸ್ವಯಂಸೇವಕರನ್ನು ಒಳಗೊಂಡ ಕಾರ್ಯೋನ್ಮುಖ ತಂಡವನ್ನು ರಚಿಸಬೇಕು ಈ ತಂಡವು ಸಂಘರ್ಷಗಳ ಸಮಯದಲ್ಲಿ ಜನರ ಗುಂಪನ್ನು ನಿಯಂತ್ರಿಸಿ ಆ ಸಮಯದಲ್ಲಾಗುವ ಹಾನಿಯನ್ನು ತಡೆಯಲು ಸಹಕರಿಸಬೇಕು. ಹಾಗೆಯೇ ಸುಸಜ್ಜಿತವಾದ ಮರುವಸತಿ ಕೇಂದ್ರವನ್ನು ಸ್ಥಾಪಿಸಿ, ಪ್ರಾಣಿಗಳಿಗೆ ಚಿಕಿತ್ಸೆ ನೀಡಬೇಕು.
  • ಜಾಗೃತಿ ಮೂಡಿಸುವುದು: ಪರಿಸರ ಹಾಗೂ ವನ್ಯಜೀವಿಗಳ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ ವನ್ಯಜೀವಿಗಳ, ಮುಖಾಮುಖಿಯಾದಾಗ ನಡೆದುಕೊಳ್ಳಬೇಕಾದ ರೀತಿಯ ಬಗ್ಗೆಯೂ ಜಾಗೃತಿ ಮೂಡಿಸುವುದು ತುಂಬಾ ಪ್ರಮುಖವಾದದ್ದು. ಈ ಕಾರ್ಯಕ್ರಮಗಳಲ್ಲಿ ಜನರಿಗೆ ಪ್ರಾಣಿಗಳಿಂದ ಸುರಕ್ಷಿತ ದೂರದಲ್ಲಿ ಇರುವುದರ ಬಗ್ಗೆ, ಪ್ರಾಣಿಯು ನಿಶಾಚರಿಯೇ ಅಲ್ಲವೇ ಎಂದು ಗಮನಿಸುವ ಬಗ್ಗೆ, ಪ್ರಾಣಿಗಳು ಮೇಲೆರಗಿದಾಗ ಮಾಡಬೇಕಾದಂತಹ ಪ್ರಥಮ ಚಿಕಿತ್ಸೆಯ ಬಗ್ಗೆ, ದಿನನಿತ್ಯದ ಬಳಕೆಗೆ ಬೇಕಾದ ನೀರಿನ ಮೂಲವು ಆದಷ್ಟು ಸುರಕ್ಷಿತ ಇರುವಂತೆ, ರಾತ್ರಿಸಮಯಗಳಲ್ಲಿ ಕಾಡುಗಳಲ್ಲಿ ಒಡಾಡದಂತೆ, ಆಹಾರ ಸರಪಳಿ ಮುಂತಾದವುದರ ಬಗ್ಗೆ ಅರಿವು ಮೂಡಿಸುವುದರಿಂದ ಈ ಮಾನವ-ಸಂಘರ್ಷದಿಂದ ಆಗುವ ಅನಾಹುತಗಳನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ವರ್ಷದ ಒಂದು ವಾರವನ್ನೋ/ದಿನವನ್ನೋ ’ಮಾನವ-ವನ್ಯಜೀವಿ ಸಂಘರ್ಷ’ ದಿನ ಎಂದು ಘೋಷಣೆ ಮಾಡಿದರೆ ಈ ವಾರ/ ದಿನದಲ್ಲಿ ಜನರಿಗೆ ಹೆಚ್ಚೆಚ್ಚು ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವೆಡೆಗೆ ಗಮನಹರಿಸುವಂತೆ ಹಾಗೂ ಮಾನವ ವನ್ಯಜೀವಿಗಳು ಸಹಬಾಳ್ವೆಯಿಂದಲೇ ಶಾಂತ ಪರಿಸರ ಸಮತೋಲನ ಸಾಧ್ಯ, ನಮ್ಮ ಉಳಿವೂ ಸಾಧ್ಯ ಎಂದು ಮನವರಿಕೆ ಮಾಡಿಕೊಡುವಲ್ಲಿ  ಪರಿಸರ ಆಸಕ್ತರು ನಿಗಾವಹಿಸಬಹುದು.

  • ಪರಿಸರ ಪ್ರಭಾವದ ಮೌಲ್ಯಮಾಪನ: ಯಾವುದೇ ಒಂದು ಪ್ರಸ್ತಾಪಿತ ಅಭಿವೃದ್ಧಿ ಯೋಜನೆಯಿಂದ ಪರಿಸರದ ಮೇಲೆ ಆಗುವ ಪ್ರಭಾವದ ಮೌಲ್ಯಮಾಪನವನ್ನು ನಾಮಕಾವಸ್ತೆಗಷ್ಟೆ ಅಲ್ಲದೆ ಪ್ರಾಮಾಣಿಕತೆಯಿಂದ ಮಾಡಬೇಕು ಹಾಗೂ ಇದರ ಆಧಾರದ ಮೇಲೆ ಯೋಜನೆಯ ಕಾರ್ಯವೈಖರಿಯನ್ನು ರೂಪಿಸಿ ಪರಿಸರಕ್ಕೆ ಆಗುವ ಹೊಡೆತವನ್ನು ತಡೆಯುವಲ್ಲಿ ಈ ಮೌಲ್ಯಮಾಪನ ಸಹಕರಿಸಬೇಕು.
  • ಜಾನುವರುಗಳಿಗೆ ಮೇವಿನ ಅನುದಾನ: ಕಾಡಿನ ಅಂಚಿನಲ್ಲಿರುವ ದೇಶದ ಒಣ ಪ್ರದೇಶದ ಗ್ರಾಮದವರಿಗೆ ಬೇಸಿಗೆ ಕಾಲದಲ್ಲಿ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಜಾನುವಾರು ಮೇವನ್ನು ಒದಗಿಸಬೇಕು. ಈ ಕಾರ್ಯದಿಂದ ಸಾಕು ಪ್ರಾಣಿಗಳು ಮೇವಿಗಾಗಿ ಕಾಡಿನ ಹುಲ್ಲುಗಾವಲನ್ನು ಅವಲಂಬಿಸುವುದು ತಪ್ಪುತ್ತದೆ. ಆದ ಕಾರಣ ಮಾನವ-ವನ್ಯಜೀವಿಗಳ ಅಥವಾ ಜಾನುವಾರು-ವನ್ಯಜೀವಿಗಳ ಸಂಘರ್ಷ ಕಡಿಮೆ ಆಗುತ್ತದೆ.
© ಲೇನು ಕಣನ್

ಮುಂದುವರೆಯುವುದು. . . . . . . . . . . .

ಕನ್ನಡಕ್ಕೆ ಅನುವಾದ: ನಾಗೇಶ್ ಓ ಎಸ್
ಮೂಲ ಲೇಖನ: ಡಾ. ಅರುಣ್ ಎ. ಶಾ
ವೈಲ್ಡ್ ಲೈಫ್ ಎಸ್ ಒ ಎಸ್ ಬನ್ನೇರುಘಟ್ಟ

Print Friendly, PDF & Email
Spread the love
error: Content is protected.