ಏನೋ ಮಾಡಲು ಹೋಗೀ . .

ಎಲ್ ಕೆ ಜಿ ಯಲ್ಲೇ ಮೊಬೈಲ್ ಹಿಡಿದು, ಸ್ಕ್ರೀನ್ ಅನ್ಲಾಕ್ ಮಾಡಿ, ಗೇಮ್ ಆರಿಸಿಕೊಂಡು ಆಟವಾಡಬಲ್ಲ ಚಾಣಾಕ್ಷ ಮಕ್ಕಳ ಆಧುನಿಕ ದಿನಗಳಿವು. ಆದರೆ ಕೆಲವೇ ವರುಷಗಳ ಹಿಂದೆ ಬಾಲ್ಯದ ಕಡೆ ತಿರುಗಿ ನೋಡಿದರೆ, ಇವುಗಳ ಸುಳಿವೇ ನಮಗಿರಲಿಲ್ಲ. ನೆಲಕ್ಕೆ ಬಿಡದ ಹಾಗೆ ನೇರ ಕೈಯಲ್ಲಿ ಹಿಡಿಯುತ್ತಿದ್ದ ಬುಗುರಿ, ಅದೇ ಬುಗುರಿ ತಿರುಗಿ ಮಾಡುತ್ತಿದ್ದ ಆ ಕಚಗುಳಿ, ಅಪ್ಪ ಹೊಲದಿಂದ ಮನೆಯ ಕಡೆಗೆ ಬರುತ್ತಿರುವುದ ಕಂಡು ಮನೆಗೆ ಓಡುವಾಗ ಚಡ್ಡಿ ಜೇಬಿನಲ್ಲಿ ಆಗುತ್ತಿದ್ದ ಗೋಲಿಗಳ ಸದ್ದು, ಚಿನ್ನಿ-ದಾಂಡುಗಳಿಂದಾದ ಪೆಟ್ಟು… ಅಬ್ಬಾ! ಅವುಗಳ ಸವಿಯೇ ಬೇರೆ… ಅಲ್ಲವೇ? ಅಂತಹ ದಿನಗಳಲ್ಲಿ ಬೇಸಿಗೆಯ ರಜೆ ಕಳೆಯಲು ಮಾವನ ಊರಿಗೆ ಹೋಗಿದ್ದೆ. ಅದಿರುವುದು ಬೆಂಗಳೂರಿನ ನಗರ ಪ್ರದೇಶದಲ್ಲೇ. ಆದ್ದರಿಂದ ಅಲ್ಲಿ ತಂತ್ರಜ್ಞಾನದ ಪರಿಚಯ ಸಹಜವಾಗಿಯೇ ಇದ್ದಿತು. ನನ್ನ ಮಾವ ನಾನು ಊರಿಗೆ ಬಂದ ದಿನಗಳಲ್ಲೇ ಹೊಸದೊಂದು ಮೊಬೈಲ್ ಫೋನನ್ನು (ಹಳೆಯ ಕಪ್ಪು-ಬಿಳಿ ಫೋನ್) ಖರೀದಿಸಿದ್ದರು. ನಾವು ಮೊಬೈಲ್ ಫೋನನ್ನು ಮುಟ್ಟಿ ಸರಿಯಾಗಿ ಹಿಡಿದಿಲ್ಲವಾದರೂ ಅದರ ಬಗ್ಗೆ ಸಾಕಷ್ಟು ಕೇಳಿದ್ದೆವು. ಅದರಲ್ಲಿ ಸಿಗುವ ಹಾವಿನ ಆಟವೂ ತಿಳಿದಿತ್ತು. ಹೀಗಿರುವಾಗ ಊರಿಗೆ ವರುಷಕ್ಕೊಮ್ಮೆ ಬರುವ ನಾನು ಕೇಳಿದರೆ ಮೊಬೈಲ್ ಕೊಡದೇ ಇರುತ್ತಾರೆಯೇ? ಕೇಳಿದ ತಕ್ಷಣ ನನ್ನ ಕೈಯಲ್ಲಿ ಫೋನ್ ಇದ್ದಿತು. ನಾನು ಕೂಡ ಸ್ವಲ್ಪ ತಿಳಿದವನಂತೆಯೇ ಫೋನನ್ನು ಉಪಯೋಗಿಸುತ್ತಿದ್ದೆ. ಅದನ್ನು ಗಮನಿಸಿಯೋ ಏನೋ ನನ್ನ ಮಾವ ನನ್ನನ್ನು ಫೋನಿನೊಂದಿಗೆ ಬಿಟ್ಟು ಹೊರಗೆ ಹೋದರು. ಹಾಗೆ ಆಟವಾಡುತ್ತಾ ಆಡುತ್ತಾ ಬೇಸರವಾಗಿ, ಈ ಫೋನಿನಲ್ಲಿ ಬೇರೆ ಏನೇನಿದೆ? ರಿಂಗ್ ಟೋನ್ ಬದಲಿಸುವುದು ಹೇಗೆ? ಎಂದು ತಿಳಿಯಲು ಫೋನೆಂಬ ಸಮುದ್ರದಲ್ಲಿ ತೇಲುತ್ತಾ ಹೋಗಿ ಯಾವ ತೀರ ತಲುಪಿದೆನೋ ತಿಳಿಯದು, ಇದ್ದಕ್ಕಿದ್ದಹಾಗೆ ಫೋನ್ ಕೆಲಸವನ್ನು ನಿಲ್ಲಿಸಿತು. ಸಮಾಧಿಗೆ ಜಾರಿದ ತಪಸ್ವಿಯಂತೆ ಜಡವಾಗಿಬಿಟ್ಟಿತು. ಅದನ್ನು ಕಂಡು ನನಗೆ ನನ್ನ ಕಿವಿಯೆಲ್ಲಾ ಬಿಸಿಯಾಯಿತು, ಹೃದಯದ ಬಡಿತ ನೇರವಾಗಿ ಕಿವಿಗೆ ತಲುಪುವಷ್ಟು ಹಿರಿದಾಯಿತು. ಅಷ್ಟರಲ್ಲೇ ಸಿನಿಮಾ ರೀತಿಯಲ್ಲಿ ನನ್ನ ಮಾವನ ಆಗಮನವಾಗಿ, ನನ್ನ ಕಣ್ಣಿನಿಂದಲೇ ಪೂರ್ತಿ ವಿಷಯ ಅರ್ಥವಾಗಿ, ಫೋನಿನ ಸರಿಪಡಿಸುವಿಕೆಗೆ ಕೆಲವು ದಿನಗಳ ಪ್ರಯತ್ನವಾಗಿ, ವಿಫಲವಾಗಿ, ಕೊನೆಗೆ ಫೋನು ಕೊನೆಯುಸಿರೆಳೆಯಿತೆಂಬ ವಿಷಾದಕರ ವಿಷಯ ರಜೆ ಮುಗಿಸಿ ಮನೆಗೆ ಬಂದ ಕೆಲವು ದಿನಗಳಲ್ಲಿ ನನ್ನ ಕಿವಿಗೆ ಬಿದ್ದಿತು. ಆ ಘಟನೆಯನ್ನು ಈಗ ನೆನೆದರೆ ಹಳೆಯ ಒಂದು ಕನ್ನಡ ಚಿತ್ರಗೀತೆ ನೆನಪಾಗುತ್ತಿದೆ, ‘ಏನೋ ಮಾಡಲು ಹೋಗೀ… ಏನು ಮಾಡಿದೆ ನೀನು..?

ಈ ರೀತಿಯ ಘಟನೆಗಳು ಕೇವಲ ಬಾಲ್ಯದಲ್ಲಿಯೇ ಆಗಬೇಕೆಂದೇನಿಲ್ಲ. ಇದು ಯಾರಿಗಾದರೂ, ಯಾವ ವಯಸ್ಸಲ್ಲಾದರೂ, ಯಾವ ಕ್ಷೇತ್ರದಲ್ಲಾದರೂ ನಡೆಯಲು ಸಾಧ್ಯ. ಸಂಶೋಧನಾ ಕ್ಷೇತ್ರ ಇದರಿಂದ ಹೊರತೇನಲ್ಲ, ಹಾಗೆ ನೋಡಿದರೆ ಸಂಶೋಧನೆಯ ಅಥವಾ ಪ್ರಯೋಗಗಳ ಸಮಯದಲ್ಲಿಯೇ ಏನೋ ಮಾಡಲು ಹೋಗಿ ಇನ್ನೇನೋ ಆಗುವ ಸಂಭವ ಹೆಚ್ಚು. ಉದಾಹರಣೆಗೆ, ಪ್ರತೀ ದಿನದ ಚಟುವಟಿಕೆಗೆ ಅವಶ್ಯಕವಾದ ವಿದ್ಯುತ್, ಬೆಂಜಮಿನ್ ಫ್ರಾಂಕ್ಲಿನ್ ನ ಫ್ಲೆಮಿಂಗನ ಒಂದು ತಪ್ಪಿನಿಂದ ತಿಳಿದದ್ದು, ಹಾಗೆ ಮೇರಿ ಕ್ಯೂರಿಯ ಕುತೂಹಲತೆಯ ಪರಿಣಾಮವಾಗಿ ಬಂದ ರೇಡಿಯಮ್, ಪೆನಿಸಿಲಿನ್ ಮುಂತಾದವುಗಳು. ಗೂಗಲ್ ನ ಮೊರೆ ಹೋದರೆ ಇಂತಹ ಇನ್ನೆಷ್ಟೊ ಉದಾಹರಣೆಗಳ ಪಟ್ಟಿ ನಿಮ್ಮ ಮುಂದಿರುತ್ತದೆ.

ಇತ್ತೀಚೆಗೆ ನಡೆದ ಇಂತಹುದೇ ಒಂದು ನಿದರ್ಶನ ಇಲ್ಲಿದೆ. ಸಸ್ಯವು ಕ್ರಿಮಿ-ಕೀಟ, ರೋಗ-ರುಜಿನಗಳ ಹಾವಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಲವಾರು ತಂತ್ರಗಳನ್ನು ಹೊಂದಿರುತ್ತವೆ. ನಾವೆಲ್ಲರೂ ನೋಡಿರುವ ‘ಮುಟ್ಟಿದರೆ ಮುನಿ’ ಎಂಬ ಗಿಡ ಇದಕ್ಕೆ ಸ್ಪಷ್ಟ ಉದಾಹರಣೆ ಎನಿಸುತ್ತಿದೆ. ಏಕೆಂದರೆ ಆ ಗಿಡದ ಎಲೆಯನ್ನು ಮುಟ್ಟಿದ ಮರು ಕ್ಷಣ ಗಿಡ ಎಲೆಯನ್ನೆಲ್ಲ ಮುದುಡಿ, ಆ ಎಲೆಗಳನ್ನು ಹೊಂದಿದ್ದ ಸಣ್ಣ ರೆಂಬೆಯನ್ನೂ ಸಹ ಸ್ವಲ್ಪ ಕೆಳಗಿಳಿಸಿ, ಸತ್ತು ಹೋದಂತೆ ನಾಟಕವಾಡುತ್ತದೆ. ಅದನ್ನು ನಿಜವೇ ಎಂದು ತಿಳಿದು ಕೀಟ ಅಲ್ಲಿಂದ ಹಿಂತಿರುಗುತ್ತದೆ. ಕೆಲ ಸಮಯದ ನಂತರ ಆ ಮುದುಡಿದ ಎಲೆಗಳು ಹಾಗೂ

ಕೊಂಬೆಗಳು ಯಥಾ ಸ್ಥಿತಿಗೆ ಬಂದು ತಮ್ಮ ಕಾರ್ಯಗಳಲ್ಲಿ ಪುನಃ ತೊಡಗಿಕೊಳ್ಳುತ್ತವೆ. ಹೀಗೆ ಎಷ್ಟೋ ಉದಾಹರಣೆಗಳಿವೆ. ಆದರೆ ಎಲ್ಲಾ ಸಸ್ಯಗಳಿಗೂ ಇಷ್ಟೇ ಪರಿಣಾಮಕಾರಿಯಾದ ತಂತ್ರಗಳು ತಿಳಿದಿರುವುದಿಲ್ಲ. ಆದ ಕಾರಣ ಕೆಲವು ಕ್ಷೇತ್ರಗಳಿಂದ ಇವುಗಳಿಗೆ ತೊಂದರೆಯಾಗಬಹುದು. ಗಿಡವು ಸಾಯಲೂಬಹುದು. ಗಿಡ ಸತ್ತರೆ, ನಮಗೂ ತೊಂದರೆಯಾಗಬಹುದು. ಹೇಗೆನ್ನುವಿರಾ? ಇಲ್ಲಿ ಕೇಳಿ… ರೈತ ಬೆಳೆಯುವ ಆಹಾರ ಪದಾರ್ಥಗಳು ಬರುವುದು ಸಸ್ಯಗಳಿಂದಲೇ ಅಲ್ಲವೇ? ಅಂತಹ ಗಿಡಗಳಿಗೆ ತೊಂದರೆಯೆಂದರೆ ನಮ್ಮ ಹೊಟ್ಟೆಗೆ ತೊಂದರೆಯಲ್ಲವೇ? ಹೀಗಾಗಬಾರದೆಂದೇ ಕೆಲವು ಸಂಶೋಧಕರು ಹಲವು ಪ್ರಯೋಗಗಳ ನಂತರ ಹೊರತಂದ ಎಷ್ಟೋ ಕ್ರಿಮಿ ನಾಶಕಗಳನ್ನು ರೈತರು ಬಳಸಿದ್ದಾರೆ, ಬಳಸುತ್ತಿದ್ದಾರೆ. ಆದರೆ ಇವುಗಳ ಬಳಕೆಯ ದುಷ್ಪರಿಣಾಮ ಈಗೀಗ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಆದ್ದರಿಂದ ವಿಜ್ಞಾನಿಗಳ ಕೆಲಸ ಸ್ವಾಭಾವಿಕವಾಗಿ ಗಿಡದಲ್ಲಿಯೇ ಈ ಕ್ರಿಮಿಗಳನ್ನು ಹೊರದೂಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಎಂದು ನಾವೇ ಊಹಿಸಬಹುದು. ಅಲ್ಲವೇ?.
ಅದೇ ಕೆಲಸವನ್ನು ಕೆಲವು ವಿಜ್ಞಾನಿಗಳು ಮಾಡಿದ್ದಾರೆ. ಎಷ್ಟೋ ಸಸ್ಯಗಳು ಕೀಟಗಳಿಂದ ರಕ್ಷಣೆಗೆ ಕೆಲವು ರಾಸಾಯನಿಕಗಳನ್ನು ಸ್ರವಿಸಿ ಓಡಿಸುವ ತಂತ್ರವನ್ನು ರೂಪಿಸಿಕೊಂಡಿವೆ. ಅಂದರೆ ಯಾವುದಾದರೂ ಕೀಟವೊಂದು ಬಂದು ಸಸ್ಯವನ್ನು ತಿನ್ನಲು ಪ್ರಯತ್ನಿಸಿದರೆ ಸ್ವಲ್ಪ ಸಮಯದ ನಂತರ ಗಿಡವು ಕೆಲವು ರಾಸಾಯನಿಕಗಳನ್ನು ಸ್ರವಿಸುತ್ತದೆ. ಆ ರಾಸಾಯನಿಕ ಕ್ಷೇತ್ರಕ್ಕೆ ವಿಷವಾಗಿ ಪರಿಣಮಿಸಬಹುದು, ಅಥವಾ ಕೆಟ್ಟ ವಾಸನೆಯನ್ನು ತರಬಹುದು, ಅಥವಾ ಆ ಕೀಟವನ್ನು ತಿನ್ನುವ ಜೀವಿಗೆ “ನನ್ನ ಬಳಿ ನಿನ್ನ ಆಹಾರವಿದೆ. ‘’ನನ್ನ ಬಳಿ ದಯಮಾಡಿಸು” ಎಂಬ ಸಂದೇಶ ಕಳಿಸಬಹುದು. ಹಾಗಾದರೆ ಈ ರಾಸಾಯನಿಕಗಳನ್ನು ಹೆಚ್ಚಾಗಿ ತಯಾರಿಸಲು ಅಥವಾ ತಯಾರಿಸಲು ತಡವಾಗದಂತೆ ಗಿಡವು ಯಾವಾಗಲೂ ಎಚ್ಚರದಿಂದಿರುವಂತೆ ಮಾಡಿದರೆ ಆಯಿತಲ್ಲವೇ? ಸಾಮಾನ್ಯವಾಗಿ ಯೋಚಿಸಿದರೆ ಸರಿಯೆನ್ನಿಸುತ್ತದೆ.
ನಮ್ಮ ಈ ವಿಜ್ಞಾನಿಗಳಿಗೂ ಹೀಗೆಯೇ ಭಾಸವಾಗಿ, ಥೇಲ್ ಕ್ರೆಸ್ಸ್ ಎಂಬ ಇಂಗ್ಲೀಷ್ ಹೆಸರಿನ ಸಾಸಿವೆ ಜಾತಿಯ ಸಸ್ಯಗಳ ಮೇಲೆ ನಡೆಸಿದ ಸಂಶೋಧನೆ ಇಂತಿದೆ. ಈ ಮೇಲೆ ಹೇಳಿದಂತೆ ರಾಸಾಯನಿಕಗಳನ್ನು ಯಾವಾಗ ಉತ್ಪಾದಿಸಬೇಕು, ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬೇಕು ಎಂಬುದನ್ನೂ ನಿರ್ಧರಿಸುವ ಒಂದು ಜೀನ್ಸ್ ಇದೆ. ಅದಕ್ಕೆ JAZ ಜೀನ್ಸ್ ಎಂದು ಹೆಸರು. ಈ ಜೀನ್ಸ್ ಅನ್ನು ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞರ ಹತ್ತು ವರುಷದ ಸತತ ಪ್ರಯತ್ನದಿಂದ 13 ಜೀನ್ಸ್ ಗಳಲ್ಲಿ 10 ಜೀನ್ಸ್ ಗಳನ್ನು ನಿಷ್ಕ್ರಿಯಗೊಳಿಸಿದರು. ಇದರ ಪರಿಣಾಮ ಈ ವಿಶೇಷ ಜೀನ್ಸ್ ನಿಂದ ಹುಟ್ಟಿದ ಸಸ್ಯಗಳು, ಕೀಟಗಳ ಆಕ್ರಮಣ ಸಮಯದಲ್ಲಿ ಮಾತ್ರ ಎಚ್ಚರವಿರುವ ಹಳೆಯ ಸಸ್ಯಗಳಂತೆ ಅಲ್ಲದೇ ಸದಾ ಕಾಲ ಎಚ್ಚರವಿರುವ ಥಟ್ಟನೆ ರಾಸಾಯನಿಕ ಸ್ರವಿಸುವ ಸಾಮರ್ಥ್ಯವನ್ನು ಹೊಂದಿದ್ದ ಗಿಡವಾಯಿತು.!

ಇಷ್ಟಕ್ಕೆ ಸಂಭ್ರಮಿಸಬೇಡಿ, ಮುಂದಿದೆ ಅಸಲು ವಿಷಯ.
ಆದರೆ ಬದಲಿಸಿದ ಹೊಸ ಜೀನ್ ನಿಂದ ಹುಟ್ಟಿದ ಈ ಸಸ್ಯಗಳು ಯಾವುವೂ ಸಹ ತಾವು ಬೆಳೆಯಬೇಕಿದ್ದ ಎತ್ತರಕ್ಕೆ ಬೆಳೆಯಲಿಲ್ಲ. ಹಾಗೂ ಆ ಸಸ್ಯಗಳಲ್ಲಿ ಉತ್ಪತ್ತಿಯಾದ ಯಾವ ಬೀಜವೂ ಮುಂದಿನ ಪೀಳಿಗೆಯನ್ನು ಯಶಸ್ವಿಯಾಗಿ ಮುಂದುವರಿಕೊಂಡು ಹೋಗುವ ಸಾಮರ್ಥ್ಯ ಹೊಂದಿರಲಿಲ್ಲ.! ಅಷ್ಟೇ ಅಲ್ಲ ಕಂದು ಬಣ್ಣಕ್ಕೆ ತಿರುಗಿದ ಎಲೆಗಳು ತಮಗೆ ಸರಿಯಾಗಿ ಇಂಗಾಲ(ಆಹಾರ)ದ ಪೂರೈಕೆಯಾಗುತ್ತಿಲ್ಲ ಎಂದು ಕೂಗಿ ಹೇಳುತ್ತಿದ್ದವು. ಒಟ್ಟಾರೆ ಸಂಪೂರ್ಣ ಗಿಡ ತನ್ನ ಸಾಮಾನ್ಯ ಗುಣಲಕ್ಷಣಗಳನ್ನು ಕಳೆದುಕೊಂಡು, ದುರ್ಬಲವಾಗಿತ್ತು!, ಏಕೆ ಹೀಗಾಯ್ತು? ಇದಕ್ಕೆ ಕಾರಣ ಹುಡುಕುವುದು ಸ್ವಲ್ಪ ಕಠಿಣ ಎನಿಸಿದರೂ ಅಷ್ಟೇನೂ ಕಷ್ಟವಿಲ್ಲ. ಏಕೆಂದರೆ ಸಸ್ಯ ತಯಾರಿಸಿದ ಶಕ್ತಿಯಲ್ಲಿ ಹೆಚ್ಚು ಭಾಗ ತನ್ನ ರಕ್ಷಣೆಗೆ (ರಾಸಾಯನಿಕದ ಸ್ರವಿಕೆಗೆ) ಖರ್ಚಾಗುತ್ತಿದ್ದರೆ, ಬೇರೆ ಭಾಗಗಳಿಗೆ ಸಿಗುವ ಪ್ರಮಾಣ ಕಡಿಮೆಯೇ. ಅಲ್ಲವೇ…?.
ಮೇಲಿನ ಈ ವೈಜ್ಞಾನಿಕ ವಿಷಯ ನಿಮಗೆ ಅರ್ಥವಾಗಿದ್ದರೆ ಶೀರ್ಷಿಕೆಯಾಗಿ “ಏನೋ ಮಾಡಲು ಹೋಗೀ…“ ಎಂಬುದು ಏಕಿರುವುದೆಂದು ಅರ್ಥವಾಗುತ್ತದೆ. ಸ್ವಲ್ಪ ಯೋಚಿಸಿದರೆ ಕೆಲವು ಬಾರಿ ಏನು ಮಾಡಬಾರದೆಂದು ತಿಳಿದರೆ ಎಷ್ಟೋ ಯಡವಟ್ಟನ್ನು ತಡೆಯಲು ಉಪಯೋಗವಾಗುತ್ತದೆ ಅಲ್ಲವೇ..? ಆದರೆ ಇದು ಕೇವಲ ಒಂದು ಕೋನವಷ್ಟೆ. ಇನ್ನೊಂದು ಕೋನದಿಂದ ನೋಡಿದರೆ ಸಸ್ಯವು ತಾನು ಚೆನ್ನಾಗಿ ಬೆಳೆದು, ತನ್ನ ಸಂತತಿಯನ್ನು ಮುಂದುವರೆಸಲು ಸಾಮರ್ಥ್ಯವುಳ್ಳ ಬೀಜಗಳನ್ನು ತಳೆಯಲು ತಮ್ಮನ್ನು ತಾವು ಕೀಟಗಳಿಗೆ ಅರ್ಪಿಸಿ, ತಮ್ಮ ತ್ಯಾಗದ ಎತ್ತರವು ಎಷ್ಟರ ಮಟ್ಟಕ್ಕೆ ಇದೆ ಎಂಬುದನ್ನೂ ತೋರುತ್ತವೆ. ಹಾಗೂ ವಿಜ್ಞಾನಿಗಳ ಮುಂದಿನ ಸಂಶೋಧನೆಗೆ ಹೊಸ ದಾರಿಯನ್ನು ಹುಡುಕುವಂತೆ ಪ್ರೇರೇಪಿಸಿದಂತಾಗುತ್ತದೆ
ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.