ಹಾವೆಂಬ ಸರೀಸೃಪ ಹಾವಾಡಿಗನೆಂಬ ಮಂತ್ರಗಾರ

ಹಾವೆಂಬ ಸರೀಸೃಪ ಹಾವಾಡಿಗನೆಂಬ ಮಂತ್ರಗಾರ

ನಾಗರಹಾವುಗಳು ಹಾವಾಡಿಗನ ಹಾಗೂ ಪ್ರೇಕ್ಷಕನ ಅಚ್ಚುಮೆಚ್ಚಿನ ಹಾವು. ಹಾವಾಡಿಗರು ನಾಗರಹಾವಿನ ಹಲ್ಲು ಕೀಳುವುದಕ್ಕಿಂತಲೂ ಬಹಳಾ ಮೊದಲೇ ಜನರಲ್ಲಿ ಭಕ್ತಿ ಹಾಗೂ ಶ್ರದ್ಧೆಯನ್ನು ಮೂಡಿಸಿತ್ತು. ಕಾಡಿನಲ್ಲಿ ಅಚಾನಕ್ ನಾಗರಹಾವು ಎದುರಾದಾಗ, ಅದು ತಕ್ಷಣ ಹೆಡೆ ಬಿಚ್ಚುವುದನ್ನು ನೋಡುವುದೇ ಜೀವನದಲ್ಲಿ ಮರೆಯಲಾಗದ ಅನನ್ಯ ಅನುಭವ.

ಹಾವುಗಳ ಆಹಾರವಾದ ಇಲಿಗಳು ಮನುಷ್ಯನ ವಾಸಸ್ಥಳದಲ್ಲಿ, ಕಸದ ಗುಡ್ಡೆಗಳಲ್ಲಿ, ಹೊಲಗದ್ದೆಗಳಲ್ಲಿ ಯಥೇಚ್ಛವಾಗಿವೆ. ಅವುಗಳನ್ನು ಹುಡುಕಿಕೊಂಡು ಬರುವ ನಾಗರಹಾವು, ಮನುಷ್ಯರಿಗೆ ಆಗಾಗ ಎದುರಾಗುತ್ತಿರುತ್ತದೆ. ಇದೊಂದು ಮೊದ್ದು ಹಾವಾಗಿದ್ದು, ಆಕ್ರಮಣಾಶೀಲತೆ ಕಡಿಮೆ. ತನ್ನನ್ನು ರಕ್ಷಿಸಿಕೊಳ್ಳುವ ಸಮಯದಲ್ಲಿ ಮತ್ತೇನೂ ಮಾಡಲಾಗದ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಕಚ್ಚುವ ನಿರ್ಧಾರ ಮಾಡುತ್ತದೆ. ಇವುಗಳ ಕಡಿತದಿಂದ ಪ್ರತಿವರ್ಷ ಬಹಳಷ್ಟು ಜನ ಮರಣ ಹೊಂದುತ್ತಾರೆ. ಹೆಡೆ ಎತ್ತುವುದು ಹಾಗೂ ನಂಜೇರಿಸುವ ಅವುಗಳ ವಿಷಕಾರಿ ಕಡಿತ ನಾಗರಹಾವನ್ನು ಪೂಜ್ಯನೀಯವಾಗಿಸಿದೆ. ಹಿಂದೂ ದೇವತೆಗಳಾದ ಈಶ್ವರ, ಗಣೇಶ, ದೇವಸ್ಥಾನದಲ್ಲಿರುವ ಕೆತ್ತನೆಗಳ ಉದ್ದಗಲಕ್ಕೂ ಹಾವುಗಳು ವ್ಯಾಪಿಸಿಕೊಂಡಿವೆ.

ಹಾವುಗಳಿಗೋಸ್ಕರ ಆಗಸ್ಟ್ ತಿಂಗಳಿನಲ್ಲಿ (ಶ್ರಾವಣಮಾಸದ ಐದನೆ ದಿನ) ನಾಗರ ಪಂಚಮಿಯನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರಿನಲ್ಲಿ ಯುಗಾದಿಯ ನಂತರ ಬರುವ ಮೊದಲ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು. ಮಹಾರಾಷ್ಟ್ರ ಕರ್ನಾಟಕ ಹಾಗೂ ದೇಶದ ಕೆಲವು ಭಾಗಗಳಲ್ಲಿ ನಾಗರಪಂಚಮಿಯನ್ನು ಸಡಗರದಿಂದ ಆಚರಿಸುತ್ತಾರೆ. ಮಹಾರಾಷ್ಟ್ರದ ಬತ್ತೀಸ್ ಶಿರಾಳದಲ್ಲಿ ನಾಗರಪಂಚಮಿಯದಿನ ನೂರಾರು ಹಾವುಗಳನ್ನು ಹಿಡಿದು ಪ್ರದರ್ಶನಕ್ಕಿಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವನ್ಯಮೃಗ  ಸಂರಕ್ಷಣಾ ಕಾಯ್ದೆಯನ್ವಯ ಈ ಆಚರಣೆಯನ್ನು ತಡೆಗಟ್ಟಿದ್ದಾರೆ.

ಮಹಾರಾಷ್ಟ್ರದ ಬತ್ತೀಸ್ ಶಿರಾಳದಲ್ಲಿ ನಾಗರಪಂಚಮಿಗೆ ಹಿಡಿಯುವ ಹಾವುಗಳ ಹಲ್ಲನ್ನು ಕೀಳುವುದಿಲ್ಲ, ಹಲ್ಲನ್ನು ಕಿತ್ತರೆ ಅವುಗಳಿಗೆ ತೊಂದರೆಯಾಗುತ್ತದೆ. ಅಲ್ಲಿಯ ಹುಡುಗರು ಕೇರೆಹಾವು ಹಾಗೂ ವಿಷಕಾರಿಯಲ್ಲದ ಪಟ್ಟೆಹಾವುಗಳನ್ನು ಹಿಡಿದು ಪ್ರವಾಸಿಗರಿಗೆ ಛಾಯಚಿತ್ರಗಳನ್ನು ತೆಗೆಸಿಕೊಳ್ಳಲು ಬಾಡಿಗೆಗೆ ನೀಡುತ್ತಾರೆ. ಈ ಪರಿಪಾಠ ಸೆರೆಯಾದ ಹಾವುಗಳಲ್ಲಿ ಒತ್ತಡವನ್ನುಂಟು ಮಾಡುತ್ತದೆ. ಹಾವುಗಳನ್ನು ಕಾಪಾಡಲು ಇಲ್ಲಿಯ ಜನರಿಗೆ ತಿಳುವಳಿಕೆ ನೀಡುವ ಅವಶ್ಯಕತೆ ಇದೆ. ಮಹರಾಷ್ಟ್ರ ಹೊರತುಪಡಿಸಿ ಭಾರತದ ಇತರೆಡೆಗಳಲ್ಲಿ ಹಾವಾಡಿಗರು ಹಲ್ಲುಕಿತ್ತ ಹಾವುಗಳನ್ನು ಅಥವ ಬಾಯಿ ಹೊಲಿದ ಹಾವುಗಳನ್ನು ಭಕ್ತರ ಸೇವೆಗೆ ನೀಡಿ ಹಣ ಗಳಿಸುತ್ತಾರೆ. ಭಕ್ತರು ಮಕ್ಕಳಿಗೆ ಕೊಡಬೇಕಾದ ಹಾಲನ್ನು ಹಾವಿಗೆರೆದು ದಂಡ ಮಾಡುತ್ತಾರೆ.

ಸಾಂಪ್ರದಾಯಿಕ ಹಾವಾಡಿಗ ಕಲೆಯು ನಶಿಸಿಹೋಗುತ್ತಿರುವುದು ದುರಂತವೇ ಆದರೂ ಹಾವಾಡಿಗರು ಸುಂದರಹಾವುಗಳನ್ನು ನಡೆಸಿಕೊಳ್ಳುವ ರೀತಿ ಸಹಿಸಲಾಗುವುದಿಲ್ಲ. 1970 ರಲ್ಲಿ ಇರುಳರ ಸಹಕಾರ ಸಂಘ ಸ್ಥಾಪಿಸುವುದರ ಜೊತೆಗೆ ಹಾವಾಡಿಗಾರ ಸಂಘ ಸ್ಥಾಪಿಸುವ ಯೋಜನೆಯೂ ಇತ್ತು. ಮೂಲದಲ್ಲಿ ಅವರು ಬರಿಗಾಲಿನಲ್ಲಿ ನಡೆದಾಡುವ ಪರಿಸರವಾದಿಗಳೂ ಹೌದು. [barefoot environmental educationists (BEES]. ಅವರು ಹೇಗೆ ವಿಷಕಾರಿಹಾವುಗಳಿಂದ ದೂರವಿರಬೇಕು, ಹಾವಿನ ವಿಷದ ಪ್ರತ್ಯೌಷಧ ಹಾಗೂ ಇನ್ಯಾವುದೇ ಔಷಧವು ಹಾವಿನ ವಿಷದ ಪ್ರಭಾವವನ್ನು ತಡೆಗಟ್ಟಲಾಗದು ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರಿಗಿರುವ ಸಾವಿರಾರು ವರ್ಷಗಳ ಅನುಭವದಿಂದ ಜನರಿಗೆ ತಿಳುವಳಿಕೆ ನೀಡಬಹುದಿತ್ತು. ಅದು ಸಾಧ್ಯವಾಗಲು ಅವರು ಹಾವಿನ ಹಲ್ಲುಗಳನ್ನು ಕೀಳದೆ ಇರುವುದು, ಅವುಗಳ ಬಗ್ಗೆ ಕಟ್ಟು ಕಥೆಗಳನ್ನು ಹರಡದೆ ಇರುವುದು, ಹೀಗೆ ಇಂದಿನ ಕೆಲ ಕಟ್ಟುನಿಟ್ಟಿನ ಕಾನೂನುಗಳನ್ನು ಪಾಲಿಸಬೇಕಿತ್ತು. ಹಾವಾಡಿಗರ‍ ಸಹಕಾರ ಸಂಘವನ್ನು ಸ್ಥಾಪಿಸಲಾಗಲಿಲ್ಲ. ಕಾಲಾನುಕ್ರಮದಲ್ಲಿ ಹಾವಾಡಿಗರು ತುಂಬಾ ಕಡಿಮೆಯಾಗುತ್ತಿದ್ದಾರೆ. ಹಾವುಗಳನ್ನು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಶೆಡ್ಯೂಲ್ 2 ರ ಪ್ರಕಾರ ರಕ್ಷಿಸಲ್ಪಟ್ಟಿರುವುದರಿಂದ, ಅಪ್ಪಣೆ ಇಲ್ಲದೆ ಹಾವುಗಳನ್ನು ಇರಿಸಿಕೊಂಡರೆ ಜೈಲು ಶಿಕ್ಷೆ ಖಾಯಮ್ ಆಗಿದೆ. ಪ್ರಾಣಿದಯಾಸಂಘದವರು ಸುಮಾರು ನಗರಗಳಲ್ಲಿ ಹಾವಾಡಿಗರನ್ನು ಬಂಧಿಸಿ ಅವರಲ್ಲಿರುವ ಹಾವುಗಳನ್ನು ವಶಕ್ಕೆ ಪಡೆದು ಸಂರಕ್ಷಿಸಿದ್ದಾರೆ.

ವರ್ಷಕ್ಕೆ ಸುಮಾರು 40 ಸಾವಿರಜನ ಹಾವಿನ ಕಡಿತಕ್ಕೆ ಬಲಿಯಾಗುವ ದೇಶದಲ್ಲಿ ಹಾವುಗಳನ್ನು ಪೂಜಿಸುತ್ತಾರೆ. ಇಂದಿಗೂ ಬಹಳಷ್ಟು ಜನ ನಾಗರಪಂಚಮಿಯನ್ನು ಹಾವಾಡಿಗರು ಹಿಡಿವ ಹಾವುಗಳೊಂದಿಗೆ ಆಚರಿಸಲು ಇಷ್ಟಪಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ಹಾವುಗಳಿಗೆ ಹಿಂಸೆಯಾಗುತ್ತದೆ. ಪುಂಡ-ಪುಡಾರಿಗಳು ತಮ್ಮ ವ್ಯಕ್ತಿತ್ವವನ್ನು hologramನಲ್ಲಿ ಬಿಂಬಿಸಿಕೊಳ್ಳುವಂತೆ ಹಾವುಗಳ hologram ಮಾಡಿ ಕುಂಕುಮ ಹಾಲು ಉಪಯೋಗಿಸಿ ಪೂಜಿಸಬಹುದೇನೊ!

ಮೂಲ ಲೇಖನ: ರೋಮುಲುಸ್ ವಿಟೇಕರ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ

Spread the love
error: Content is protected.