ವನದಾಳದ ಮಾತು – ಓರಿಯಂಟಲ್ ಡಾಲರ್ ಬರ್ಡ್

ವನದಾಳದ ಮಾತು – ಓರಿಯಂಟಲ್ ಡಾಲರ್ ಬರ್ಡ್

ಮೂಲತಃ ತುಮಕೂರು ಜಿಲ್ಲೆಯವರಾದ ಹೇಮಂತ್ ಕುಮಾರ್ ಎಂ. ಎನ್. ರವರು ಹುಟ್ಟಿ-ಬೆಳೆದದ್ದು ನಗರಕ್ಕೆ ಹತ್ತಿರವಿರುವ ಕುರುಚಲು ಕಾಡು ಇರುವ ಪ್ರದೇಶದಲ್ಲಿ. ಪದವಿ ಮುಗಿದ ಬಳಿಕ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ ಹುದ್ದೆಗೆ ಸೇರಿ, ಕೊಡಗು ಜಿಲ್ಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಸದಾ ನಿತ್ಯಹರಿದ್ವರ್ಣ ಪ್ರದೇಶದಲ್ಲಿ ಮೊದಮೊದಲು ಅವರಿಗೆ ಬೇಸರವಾಗುತ್ತಿತ್ತಂತೆ. ಆದರೆ ಬರಬರುತ್ತ ತಮ್ಮ ಸುತ್ತಲೂ ಇರುವ ಜೀವಸಂಕುಲದ ಮೇಲೆ ಆಸಕ್ತಿ ಹೆಚ್ಚಾಯಿತು ಎನ್ನುವ ಇವರು, ಪ್ರಾಣಿಗಳೆಂದರೆ ಕೇವಲ ಹುಲಿ, ಆನೆ, ಜಿಂಕೆಗಳಷ್ಟೇ ಅಲ್ಲ, ಒಂದು ಸಣ್ಣ ಕೀಟವೂ ಪ್ರಕೃತಿಯಲ್ಲಿ ತನ್ನದೇ ಪಾತ್ರವನ್ನು ವಹಿಸುವುದನ್ನು ಕಂಡು ಅವುಗಳ ಮೇಲಿನ ಆಸಕ್ತಿ ಹೆಚ್ಚಾಯಿತು ಎನ್ನುತ್ತಾರೆ. ಬಯಲು ಸೀಮೆಯಲ್ಲಿ ಕಾಣದಿರುವ ಕೇವಲ ಇಲ್ಲಿ ಮಾತ್ರ ಕಾಣಸಿಗುವ ಪಕ್ಷಿಗಳನ್ನು ಗುರುತಿಸಿದ ಮೇಲೆ ಕಾಡೇ ಹತ್ತಿರವಾಯಿತು ಎನ್ನುವ ಇವರು ಕಳೆದ ಐದು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇವರಿಗೆ ಇಲ್ಲಿ ಸಿಗುವ ಪ್ರಾಣಿ, ಪಕ್ಷಿ, ಹಾವು, ಚಿಟ್ಟೆ, ಕಪ್ಪೆಗಳ ಬಗ್ಗೆ ವಿಶೇಷ ಒಲವು ಇದೆ. ಹಾಗೆಯೇ ಅವುಗಳ ಛಾಯಾಗ್ರಹಣ ಕೂಡ ಮಾಡುತ್ತಾರೆ.

ಓರಿಯಂಟಲ್ ಡಾಲರ್ ಬರ್ಡ್

ಸದಾ ಹಸಿರಾಗಿರುವ ನಿತ್ಯಹರಿದ್ವರ್ಣ ಕಾಡು, ಇನ್ನೇನು ಬೇಸಿಗೆ ಕೊನೆಯಾಗಿ ಮಳೆಗಾಲ ಪ್ರಾರಂಭವಾಗುವುದರಲ್ಲಿತ್ತು. ಅದಾಗಲೇ ಕೆಲವು ಬಾರಿ ವರುಣನ ಸಿಂಚನವಾಗಿದ್ದರೂ ಸಹ, ಪಶ್ಚಿಮ ಘಟ್ಟದ ನಿಜವಾದ ಮಳೆಗಾಲ ಪ್ರಾರಂಭವಾಗುವ ಹಾಗಾಗಿತ್ತು. ದಿನನಿತ್ಯದಂತೆ ಅಂದೂ ಸಹ ಗಸ್ತಿಗೆ ಹೋಗಿದ್ದ ನಾನು ಮತ್ತು ನನ್ನ ಸಿಬ್ಬಂದಿಗಳು, ದಟ್ಟವಾದ ಮೋಡಕವಿದ ವಾತಾವರಣ ಕಂಡು ಸ್ವಲ್ಪ ಬೇಗನೆ ಶಿಬಿರದ ಕಡೆಗೆ ಹೆಜ್ಜೆ ಹಾಕಿದೆವು. ಇನ್ನೇನು ಶಿಬಿರ ತಲುಪಬೇಕೆನ್ನುವಷ್ಟರಲ್ಲಿ ಕಪ್ಪು ಮೋಡ ಸರಿದು ಆಕಾಶ ತಿಳಿಯಾದಂತೆ ಗೋಚರಿಸಿತು, ಶಿಬಿರ ತಲುಪಿ ನನ್ನ ಬ್ಯಾಗು, ಕೋವಿ ತೆಗೆದಿಟ್ಟು ಸ್ವಲ್ಪ ವಿಶ್ರಾಂತಿಗೆಂದು ಬಾಗಿಲ ಬಳಿ ಕುಳಿತುಕೊಂಡೆ. ಇದ್ದಕ್ಕಿದ್ದಂತೆ ಏನೋ ವಿಚಿತ್ರವಾಗಿ ಕೂಗಿದಂತೆ ಸದ್ದಾಯಿತು. ಈ ಶಬ್ದವೇ ವಿಚಿತ್ರವಾಗಿದ್ದು,  ಮುಂಚೆ ಈ ರೀತಿಯ ಶಬ್ದವನ್ನು ಎಂದೂ ಕೇಳಿರಲಿಲ್ಲ. ಯಾವುದೋ ಪಕ್ಷಿಯೇ ಇರಬೇಕೆಂದು ತಕ್ಷಣ ನನ್ನ ಕ್ಯಾಮೆರ ತೆಗೆದುಕೊಂಡು ಹೊರಹೋಗಿ ಶಬ್ದ ಬಂದ ಮರದ ಕಡೆಗೆ ವೀಕ್ಷಿಸಿದೆ. ಎಲೆಗಳೆಲ್ಲಾ ಉದುರಿ ಬೋಳಾಗಿರುವ ತುದಿಯಲ್ಲಿ ಕಾಗೆಯಂತೆ ಕಪ್ಪಾಗಿರುವಂತೆ ಕಾಣುವ ವಿಚಿತ್ರ ಪಕ್ಷಿಯನ್ನು ನೋಡಿದೆ. ಈ ಹಿಂದೆ ಎಂದೂ ಕೂಡ ಇಂತಹ ಪಕ್ಷಿಯನ್ನು ನೋಡಿರಲಿಲ್ಲ. ಯಾವುದಕ್ಕೂ ಇರಲಿ ಎಂದು ತಕ್ಷಣ ನನ್ನ ಕ್ಯಾಮರದಿಂದ ಒಂದೆರಡು ಛಾಯಾಚಿತ್ರಗಳನ್ನು ತೆಗೆದೆ. ನಾನು ಬಂದುದರಿಂದ ಗಾಬರಿಯಾದಂತೆ ಕಂಡುಬಂದ ಪಕ್ಷಿ ಮತ್ತೊಂದು ಕೊಂಬೆಗೆ ಹಾರಿತು. ಈ ರೀತಿ 2-3 ಬಾರಿ ಹಾರಿದರು ಸಹ ಎಲೆಮರೆಯಲ್ಲಿ ಕುಳಿತುಕೊಳ್ಳದೆ, ಬೋಳಾದ ಕೊಂಬೆಯ ಮೇಲೆಯೇ ಕುಳಿತಿತ್ತು.

ಈ ಹಿಂದೆ ಒಮ್ಮೆ ಗೆಳೆಯನಿಂದ  ಡಾಲರ್ ಪಕ್ಷಿಯ ಬಗ್ಗೆ ಕೇಳಿದ್ದೆ. ಇದು ಅದೇನ? ಎನ್ನುವ ಸಂದೇಶ ಮೂಡಿತು. ಇರಲಿ ಎಂದು ನಿಧಾನವಾಗಿ ಹತ್ತಿರಕ್ಕೆ ಹೋಗುವಂತೆ ಹೋಗಿ ಇನ್ನೆರಡು ಛಾಯಾಚಿತ್ರಗಳನ್ನು ತೆಗೆದುಕೊಂಡೆ, ಆಗಲೇ  ಖಾತರಿಯಾಯ್ತು ಇದು ಡಾಲರ್ ಪಕ್ಷಿ ಎಂದು. ಮನಸ್ಸಿಗೆ ಒಂದು ರೀತಿಯ ಪುಳಕವಾಯಿತು. ಏಕೆಂದರೆ ಈ ಪಕ್ಷಿ ಕಾಣಸಿಗುವುದೇ ಅಪರೂಪ. ಈ ಭಾಗದಲ್ಲಿ  ಬಹಳ ವರ್ಷಗಳ ನಂತರ ಸಿಕ್ಕಿದ್ದು. ಇಷ್ಟು ಯೋಚನೆ ಮಾಡುತ್ತಿರುವಾಗಲೇ ಪಕ್ಷಿಗೆ ಏಕೋ ಬೇಸರವಾದಂತೆ ಕೋಪ ಬಂದಂತೆ ಕಂಡಿತು. ತಾನಿರುವ ಮರವನ್ನು ಬಿಟ್ಟು ಕಾಡಿನೊಳಗೆ ಹಾರಿಹೋಯಿತು. ಒಳ್ಳೆಯ ಛಾಯಾಚಿತ್ರ ಸಿಗಲಿಲ್ಲವಲ್ಲ ಎಂಬ ಬೇಸರ ಉಂಟಾಗಿ, ಶಿಬಿರದ ಕಡೆಗೆ ಹೆಜ್ಜೆ ಹಾಕತೊಡಗಿದೆ, ಆದರೆ ಅದು ಕೆಲವೇ ಕ್ಷಣಗಳಲ್ಲಿ. ಕಾಣಿಸಿಕೊಂಡಿತು  ಹಾರಿಹೋಗಿದ್ದು ಪಕ್ಷಿ ಇನ್ನೊಂದು ಪಕ್ಷಿಯೊಂದಿಗೆ ಬಂದು ಶಿಬಿರದ ಎದುರಿನ ಕೆಳಭಾಗದಲ್ಲಿರುವ ಗಿಡದ ಮೇಲೆ ಕುಳಿತವು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ತಡಮಾಡದೆ ನನ್ನ ಮೂರನೇ ಕಣ್ಣಾದ ಕ್ಯಾಮರದಿಂದ ಪಕ್ಷಿಯ ಚಿತ್ರಗಳನ್ನು ತೆಗೆದೆ. ಏನೋ ನೋಡಿದಂತೆ ಕುತ್ತಿಗೆಯನ್ನು ಆಚೀಚೆ ಆಡಿಸುತ್ತಾ, ಪಕ್ಷಿಯು ನೆಲದ ಕಡೆಗೆ ಹಾರಿ ನಂತರ ಅಲ್ಲಿಯೇ ಬಂದು ಕುಳಿತಿತು. ಆಗಲೇ ತಿಳಿದಿದ್ದು ಅದು ಕೀಟವನ್ನು ಹಿಡಿಯಲು ಹೋಗಿತ್ತೆಂದು. ಈ ಪಕ್ಷಿಯು ರೋಲರ್ ಕುಟುಂಬಕ್ಕೆ ಸೇರಿದ್ದಾಗಿದೆ. ಅಂದರೆ ಇದು ಕರ್ನಾಟಕದ  ರಾಜ್ಯ ಪಕ್ಷಿ ನೀಲಕಂಠ ಪಕ್ಷಿಯ ಕುಟುಂಬಕ್ಕೆ ಸೇರಿದ್ದು. ರೂಪದಲ್ಲಿಯೂ ಸಹ ಇದು ನೀಲಕಂಠ ಪಕ್ಷಿಯನ್ನೇ ಹೋಲುತ್ತದೆ. ಆಸ್ಟ್ರೇಲಿಯದಿಂದ ಜಪಾನ್ ವರೆಗೆ ಹಾಗು ಭಾರತದ ದಕ್ಷಿಣ ಭಾಗ ಪೂರ್ವಕರಾವಳಿಯ ಪ್ರದೇಶಗಳು ಹಾಗೂ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಕಂಡುಬರುತ್ತದೆ.

ಇದರ ರೆಕ್ಕೆಗಳ ಮೇಲಿರುವ ಉಂಗುರಾಕಾರದ ಚುಕ್ಕೆಗಳಿಂದ ಇದಕ್ಕೆ ಈ ಹೆಸರು ಬಂದಿದೆ. ಪ್ರೌಢ ವಯಸ್ಕ ಪಕ್ಷಿಯು 27cm ನಿಂದ 31cm ವರೆಗೆ ಉದ್ದವಿರುತ್ತದೆ. ನೀಲಿ ಮಿಶ್ರಿತ ಹಸಿರು ಬಣ್ಣ ಇದರ ಬೆನ್ನು ಮತ್ತು ರೆಕ್ಕೆ ಭಾಗದಲ್ಲಿ ಕಂಡುಬರುತ್ತದೆ. ಇದರ ಸೊಂಟ ಮತ್ತು ಬಾಲದ ಕೆಳಭಾಗ ತೆಳು ನೀಲಿ ಮಿಶ್ರಿತ ಹಸಿರಿನಿಂದ ಕೂಡಿರುತ್ತದೆ. ಕುತ್ತಿಗೆಯ ಭಾಗದಲ್ಲಿ ಹೊಳೆಯುವ ನೀಲಿ ಬಣ್ಣದಿಂದ ಕೂಡಿರುತ್ತದೆ. ಇದರ ರೆಕ್ಕೆಗಳು ಗಾಢ ನೀಲಿ ಬಣ್ಣ ಹೊಂದಿದ್ದು ಇದರಲ್ಲಿ ತಿಳಿ ನೀಲಿ ಬಣ್ಣದ ಸುರುಳಿಗಳಿರುತ್ತವೆ. (ಈ ಸುರುಳಿಗಳನ್ನು ಕೇವಲ ಪಕ್ಷಿಯು ಹಾರುವ ಸಮಯದಲ್ಲಿ ಮಾತ್ರ ನೋಡಲು ಸಾಧ್ಯ) ಕೊಕ್ಕು ಚಿಕ್ಕದಾಗಿದ್ದು ಅಗಲವಾಗಿರುತ್ತದೆ. ಹೆಣ್ಣು ಪಕ್ಷಿಗಿಂತ ಗಂಡು ಪಕ್ಷಿಯು ನೋಡಲು ಸುಂದರವಾಗಿರುತ್ತದೆ.

ಆಗಲೇ ನನಗೆ ತಿಳಿದಿದ್ದು, ನಾನು ಮೊದಲು ನೋಡಿದ್ದು ಗಂಡು ಪಕ್ಷಿಯೆಂದು. ನಾನು ಇನ್ನೂ ಹತ್ತಿರ ಹೋಗಲು ಪ್ರಾರಂಭಿಸಿದಾಗ ಅವುಗಳಿಗೆ ಗಾಬರಿಯಾಗಿ ಅಲ್ಲಿಂದ ಹಾರಿ ಹತ್ತಿರದಲ್ಲೇ ಇದ್ದ ಎತ್ತರವಾದ ತಾರೆ ಮರದ ತುದಿಯಲ್ಲಿದ್ದ ಬೋಳು ಕೊಂಬೆಯ ಮೇಲೆ ಕುಳಿತವು. ಹಾರುವಾಗ ಅವುಗಳ ಛಾಯಾಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದೆನಾದರೂ ಅದು ಸಫಲವಾಗಲಿಲ್ಲ. ಮರಿಗಳಲ್ಲಿ ಕುತ್ತಿಗೆಯ ಭಾಗದಲ್ಲಿ ನೀಲಿ ಬಣ್ಣ ಇರುವುದಿಲ್ಲ. ಹಾಗೂ ಕೊಕ್ಕು ಮತ್ತು ಕಾಲುಗಳು  ಬೂದು ಬಣ್ಣದಿಂದ ಕೂಡಿರುತ್ತವೆ. ಆದರೆ ಪ್ರೌಢ ವಯಸ್ಕ ಪಕ್ಷಿಗಳ ಕಾಲಿನ ಬಣ್ಣ ಕೆಂಪಾಗಿರುತ್ತದೆ. ಸಾಮಾನ್ಯವಾಗಿ ಒಂಟಿಯಾಗಿ ಕಾಣಸಿಗುವ ಈ ಪಕ್ಷಿಗಳು ಕುಳಿತುಕೊಳ್ಳುವಾಗ ಮರಗಳ ಎಲೆಗಳಿಲ್ಲದ, ಬೋಳಾಗಿರುವ ಕಾಂಡ ಅಥವಾ ಕೊಂಬೆಯಲ್ಲಿಯೇ ಕುಳಿತುಕೊಳ್ಳುತ್ತವೆ. ಮೃದುವಾದ, ಬೋಳಾದ, ಮರದ ಪೊಟರೆಗಳಲ್ಲಿ ಗೂಡುಕಟ್ಟುತ್ತವೆ.  ಸೆಪ್ಟೆಂಬರ್ ನಿಂದ ಏಪ್ರಿಲ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ.

ಪಪುವಾ, ನ್ಯೂಗಿನಿಯಾ ಹಾಗೂ ಸಮೀಪದ ದ್ವೀಪಗಳಲ್ಲಿ ಚಳಿಗಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತರ ಮತ್ತು ಪೂರ್ವ ಆಸ್ಟ್ರೇಲಿಯಾದ ಪ್ರದೇಶಕ್ಕೆ ವಲಸೆ ಬರುವ ಇದು ಮಾರ್ಚ್ ನಿಂದ ಏಪ್ರಿಲ್ ನಲ್ಲಿ ಮರಳಿ ಪಪುವಾ, ನ್ಯೂಗಿನಿಯಾ ಹಾಗೂ ಪಕ್ಕದ ದ್ವೀಪಗಳಿಗೆ ವಲಸೆಹೋಗುತ್ತದೆ.  ಇದರ ಕೂಗುವ ಧ್ವನಿಯು ಕರ್ಕಶವಾಗಿದ್ದು ಕುಕ್ ಕುಕ್ ಕುಕ್ ಎಂದು ಒಂದೇ ಸಮನೆ ಎರಡು-ಮೂರುಬಾರಿ ಕೂಗುತ್ತದೆ.

ಕೀಟಗಳು ಇವುಗಳ ಮುಖ್ಯ ಆಹಾರವಾಗಿದ್ದು, ಮರಿಗಳು ಪ್ರೌಢವಯಸ್ಸಿಗೆ ಬರುವವರೆಗೂ ತಂದೆ ತಾಯಿಯ ಆರೈಕೆಯಲ್ಲಿಯೇ ಇರುತ್ತವೆ. ವಯಸ್ಸಿಗೆ ಬಂದ ನಂತರ ತಂದೆ ತಾಯಿಯಿಂದ ಬೇರೆಯಾಗುತ್ತದೆ. ಕರ್ನಾಟಕದ ದಕ್ಷಿಣ ಭಾಗ, ಕೇರಳ ಪೂರ್ವ ಕರಾವಳಿಯ ಪ್ರದೇಶಗಳು ಪಶ್ಚಿಮ ಬಂಗಾಳ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಈ ಪಕ್ಷಿ ಕಂಡುಬರುತ್ತದೆ. ಆದರೆ ಈ ಭಾಗದಲ್ಲಿ ಇದೇ ಮೊದಲು ನಾನು ನೋಡಿದ್ದು. ಈ ಪಕ್ಷಿಯನ್ನು ನೋಡಲು ಮತ್ತು ಛಾಯಾಚಿತ್ರ ತೆಗೆಯಲು, ಹಿಮಾಲಯದ ತಪ್ಪಲಿನ ಮಹಾನಂದ ವನ್ಯಧಾಮಕ್ಕೆ ಪಕ್ಷಿ ಪ್ರಿಯರು ಭೇಟಿ ನೀಡುವುದು ಹೆಚ್ಚು. ಆದರೆ ಅಲ್ಲಿಯೂ ಸಹ ಈ ಪಕ್ಷಿಯನ್ನು ನೋಡಲು ಅದೃಷ್ಟ ಬೇಕೇ ಬೇಕು.

ಮರದ ತುದಿಯಲ್ಲಿದ್ದ ಜೋಡಿ ನನ್ನ ಇರುವಿಕೆಯಿಂದ ಕಸಿವಿಸಿಗೊಂಡಂತೆ ಕಂಡಿತು. ತಮ್ಮ ಖಾಸಗೀತನಕ್ಕೆ ಧಕ್ಕೆಯಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದವೇನೋ? ಎನಿಸಿತು. ಪಡುವಣದ ಸೂರ್ಯ ಜಾರುತ್ತಾ ಕತ್ತಲು ಆವರಿಸಲಾರಂಭಿಸಿತು. ಕತ್ತಲಾಗಿದ್ದರಿಂದ ಅವುಗಳು ಕೂಡ ತಮ್ಮ ಮನೆಗೆ ಹೊರಡುವ ಆಲೋಚನೆಯಲ್ಲಿದ್ದವೋ? ಅಥವಾ ತಮ್ಮ ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸುತ್ತಿದ್ದವೋ? ಅಥವಾ ಈ ಮನುಷ್ಯನ ಆಸೆಬುರುಕತನದಿಂದ ಎಲ್ಲಿ ಮುಂದೆ ನಮ್ಮ ಸಂತತಿಗೆ ಕುತ್ತು ಬರುತ್ತದೆಯೋ ಏನೋ ಎಂಬ ಆತಂಕ ಕಾಡಲಾರಂಭಿಸಿದೆ ಎಂಬಂತೆ, ಆ ಮುದ್ದಾದ ಜೋಡಿ ಹಕ್ಕಿಗಳು ಅಲ್ಲಿಂದ ಪುರ್ರೆಂದು  ಜೊತೆಯಾಗಿ ಹಾರುತ್ತ ಕಾಡಿನ ಮರೆಯಲ್ಲಿ ಮರೆಯಾದವು. ನಿಜಕ್ಕೂ ಈ ಜೋಡಿ ಹಕ್ಕಿಗಳ ಆ ಸಂಭಾಷಣೆ ನನ್ನನ್ನು ಅತೀವ ಕುತೂಹಲ, ಬೇಜಾರು ಮತ್ತು ಆತಂಕಕ್ಕೀಡು ಮಾಡಿದ್ದು ಸುಳ್ಳಲ್ಲ.

ಚಿತ್ರ – ಲೇಖನ: ಹೇಮಂತ್ ಕುಮಾರ್ ಎಂ. ಎನ್.
ತುಮಕೂರು ಜಿಲ್ಲೆ.

Print Friendly, PDF & Email
Spread the love
error: Content is protected.