ಹಳ್ಳಿಗಳ ಹೃದಯ ಮತ್ತು ನರನಾಡಿಗಳ ಮಿಡಿತ (ಸಂಕಟ)

ಹಳ್ಳಿಗಳ ಹೃದಯ ಮತ್ತು ನರನಾಡಿಗಳ ಮಿಡಿತ (ಸಂಕಟ)

© ಅರವಿಂದ ರಂಗನಾಥ್

“ಜೀವಜಲ, ನೀ ಯಾರೀಗೂ ಕಡಿಮೆಯಿಲ್ಲ ಬಲಾಬಲ”.
ನೀರು ಎಂಬುದು ಸಕಲ ಜೀವರಾಶಿಗಳಿಗೂ ಬೇಕಾಗಿರುವ ಒಂದು ಅಗತ್ಯ ವಸ್ತು. ಜಲವು ದೇಹಕ್ಕೆ, ದೇಶಕ್ಕೆ ಹಾಗೂ ಭೂಮಂಡಲಕ್ಕೆ ಬಲ. ನೀರು ಉತ್ಪಾದನೆ ಮಾಡುವ ಸರಕಲ್ಲ. ಆದರೆ ಇದನ್ನು ಮಾನವ ಮಾರಾಟದ ಸರಕನ್ನಾಗಿಸಿಕೊಂಡಿರುವುದು ನಮಗೆಲ್ಲ ತಿಳಿದ ವಿಪರ್ಯಾಸದ ವಿಷಯ. ಒಬ್ಬ ಕವಿ ಹೇಳಿದಂತೆ “ನೀರೆಂಬುದು ಬಯಸಿದಾಗಲೆಲ್ಲಾ ಸಿಗುವ ಮಾಯ ವಸ್ತು ಅಲ್ಲಾ”. ಆದರೂ ನೀರಿನ ದುರ್ಬಳಕೆಯೇನೂ ಕಡಿಮೆಯಾಗಿಲ್ಲ. ಭೂಮಿ ರಚನೆಯಾದಾಗಿನಿಂದಲೂ ನೀರು ಭೂತಾಯಿಯನ್ನು ತಬ್ಬಿಕೊಂಡಂತಿದೆ. ನಾಗರೀಕತೆಗಳು ಹುಟ್ಟಿದ್ದು ನದಿ ದಡಗಳಲ್ಲಿ (ನೀರಿನ ತಟಗಳಲ್ಲಿ), ಅದೇ ನಾಗರೀಕತೆಯು ಇಂದಿನ ನದಿಗಳ ಅವನತಿಗೆ ಶಾಪವಾಗಿರುವುದು ದುರಂತ .

ಪ್ರಸ್ತುತ ಜಗತ್ತಿನಲ್ಲಿ ಅನೇಕ ನದಿಗಳು, ಹಳ್ಳಗಳು ಬತ್ತಿಹೋಗುತ್ತಿರುವುದು ಭವಿಷ್ಯತ್ತಿನ ಪ್ರಪಂಚದ  ಭಯಾನಕತೆಯನ್ನು ಆಹ್ವಾನಿಸುವಂತಿದೆ. ನಗರ ಪ್ರದೇಶಗಳಲ್ಲಿ  ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳನ್ನು ದುರಾಸೆಯಿಂದ ಅಕ್ರಮವಾಗಿ ಬಳಸಿಕೊಂಡಿದ್ದು, ಆಕ್ರಮಿಸಿಕೊಳ್ಳದೆ ಉಳಿದ ಕೆರೆಗಳು ತ್ಯಾಜ್ಯ ಸಂಗ್ರಹಾಲಯಗಳಾಗಿವೆ. ನಗರಗಳ ಪಕ್ಕದಲ್ಲಿ ಹರಿಯುತ್ತಿದ್ದ ನದಿಗಳು-ಹಳ್ಳಗಳು ಕಾಣೆಯಾಗಿ ದೊಡ್ಡ ದೊಡ್ಡ ಚರಂಡಿಗಳಾಗಿರುವುದು ಮತ್ತು ಆಗುತ್ತಿರುವುದು. ನಮಗೆಲ್ಲಾ ಗೊತ್ತಿದೆ ಆದರೂ ಗೊತ್ತಿಲ್ಲದಂತೆ ಉದಾಸೀನರಾಗಿದ್ದೇವೆ. ನಗರಗಳಲ್ಲಿ ಕೆರೆಗಳನ್ನು ಮುಚ್ಚಿ ಉದ್ಯಾನ ಮಾಡುವುದು, ಆಟದ ಮೈದಾನಗಳನ್ನು ಮುಚ್ಚಿ ಅಪಾರ್ಟ್‍ಮೆಂಟ್ ಕಟ್ಟುತ್ತಿರುವುದರಿಂದ ಅವುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಶೋಚನೀಯ ಸಂಗತಿ.

ಇನ್ನು ಈ ಸ್ಥಿತಿ ಕೇವಲ ನಗರಗಳಿಗೆ ಮಾತ್ರ  ಸೀಮಿತವಾಗಿಲ್ಲ. ಹಳ್ಳಿಗಳಲ್ಲೂ ಸಹ ಕೆರೆಗಳ, ತೊರೆಗಳ  ಅತಿಕ್ರಮಣ ನಡೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮೂಲ ಕಸುಬಾಗಿದ್ದು, ಕೃಷಿಯ ಸಂತುಷ್ಟಿಗೆ ಬೇಕಿರುವುದು ಜಲ ಮೂಲಗಳು.  ಸಣ್ಣ ಸಣ್ಣ ಹಳ್ಳಗಳು ಸೇರಿ ನದಿಗಳಾಗುತ್ತಾ, ಕೃಷಿಗೆ ನೀರನ್ನು ಪೂರೈಸಿ ಸಾಗರವನ್ನು ಸೇರಿಕೊಳ್ಳುತ್ತಿದ್ದ ಹಳ್ಳಗಳು ಇಂದು ಬರೀ ಬೆಳ್ಳಗೆ ಹೊಳೆಯುವ ಕಲ್ಲುಗಳಿಂದ ತುಂಬಿಹೋಗಿವೆ. ಹಳ್ಳಗಳು ಇದ್ದರೂ ಅವುಗಳಿಗೆ ಜೀವವಿಲ್ಲದಂತಾಗಿವೆ. ಮರಳು ಗಣಿಗಾರಿಕೆ, ಒತ್ತುವರಿಗಳು, ನೀರಿನ ಅತೀ ಬಳಕೆಯ ಸ್ವಾರ್ಥಗಳಿಂದ ಹಳ್ಳಗಳು ದಿನೇ ದಿನೇ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವುದು ಶೋಚನೀಯ ಮತ್ತು ದುಃಖಕರ ಸಂಗತಿ.

ಹಳ್ಳ, ತೊರೆಗಳು ನಮ್ಮ ದೇಹದ ರಕ್ತನಾಳಗಳಿದ್ದಂತೆ, ಕೆರೆಗಳು ಹೃದಯವಿದ್ದಂತೆ. ಜೀವಿಗಳು ಹೃದಯವಿಲ್ಲದೆ-ರಕ್ತನಾಳಗಳಿಲ್ಲದೆ ಬದುಕಲು ಸಾಧ್ಯವೇ? ಅದೇ ರೀತಿ ಗ್ರಾಮೀಣ ಬದುಕೂ ಸಹ ಹಳ್ಳ ಕೊಳ್ಳ ಕೆರೆಗಳು ಸಂತುಷ್ಟಿಯಿಲ್ಲದ ಬದುಕು ದುಸ್ಥರ. ಹಿಂದೆ ಹಳ್ಳಿಗಳು ಉಳಿದಿದ್ದು ಹಳ್ಳಗಳಿಂದ, ಹಳ್ಳ ಕೊಳ್ಳಗಳಲ್ಲಿ ಹರಿಯುತ್ತಿದ್ದ ಜಲಾಧಾರಗಳಿಂದ. ಇಂದು ಹಳ್ಳಗಳೇ ಜನರಿಗೆ ಹಳ್ಳಿಯನ್ನು ಬಿಟ್ಟು ಹೋಗುವುದಕ್ಕೆ ಸೂಚನೆ ನೀಡುತ್ತಿರುವಂತೆ ಭಾಸವಾಗುತ್ತದೆ. ಹಳ್ಳಿಯ ಸೊಬಗನ್ನು ಕಣ್ಣೆದುರಿಗೆ ಕಟ್ಟಿಕೊಡುವ ಒಬ್ಬ ಕವಿ ಹೇಳಿದಂತೆ:

“ಹಳ್ಳ ಕೊಳ್ಳ ಹಾರೋದೇ ನಮ್ ಲಾಂಗ್ ಜಂಪು,
ಬೇಲಿಗೀಲಿ ಎಗರೋದೇ ನಮ್ ಹೈಜಂಪು
ಸೋರೇ ಬುರುಡೆಲ್ ದೋಣಿ ಮಾಡ್ಕೋಂಡ್ ಬೊಂಬಾಟ್
ನಮ್ ಮಿಂಚಿಂಗ್, ಕೆರೆಯ ಒಳಗಿನ ಪರ್ಪಂಚನೇ ನಾವು ಕಾಣುವ…..”

ಎಂಬ ಹಾಡು ರೋಮಾಂಚನವೆನಿಸುತ್ತದೆ. ಆದರೆ ಈಗ ಹಳ್ಳ ಕೊಳ್ಳ ಹಾರಿದರೆ ನಮ್ಮ ಜೀವ ಹಾರುವುದರಲ್ಲಿ ಎರಡು ಮಾತಿಲ್ಲ. ಇನ್ನು ಹಳ್ಳಗಳ ಜೊತೆ ಅವರ ಸಂಬಂಧಿಕರಾದ ಕೆರೆಗಳ ಕಥೆ, ವ್ಯಥೆ. ಪ್ರಸ್ತುತವಾಗಿ ಕೆರೆಗಳಿಗೆ  ನೀರಿನ ಒಳಹರಿವು ಕಡಿಮೆಯಾಗುತ್ತಿದೆ. ಕೆರೆಗಳ ಒತ್ತುವರಿ, ಕೆರೆಗಳಿಗೆ ನೀರು ಬರುತ್ತಿದ್ದ ಕಾಲುವೆಗಳ ಒತ್ತುವರಿಗಳಿಂದ ಇಂದು ಕೆರೆಗಳು ನೀರಿಲ್ಲದೆ ಲಾಟರಿ ಹೊಡೆಯುತ್ತಿವೆ. ಒಂದು ವೇಳೆ ವಾಡಿಕೆಗಿಂತ ಮಳೆ ಹೆಚ್ಚಾಗಿ ಬಂದರೂ, ಕೆರೆಗಳು ತುಂಬಿದರೂ ಕೆರೆಗಳಲ್ಲಿ ನೀರಿನ ಪ್ರಮಾಣ ಬೇಗ ಕಡಿಮೆಯಾಗುತ್ತಿದೆ. ಮೊನ್ನೆ ಇದೇ ವಿಷಯವನ್ನು ಸ್ನೇಹಿತರಿಗೆ ಕೇಳಿದ್ದೆ. ಕೆರೆಗಳು ತುಂಬಿದರೂ ಬೋರ್ವೆಲ್ಗಳು ರಿಚಾರ್ಚ್ ಆಗುತ್ತಿಲ್ಲವಲ್ಲಾ ಏಕೆ ಅಂತಾ? ಆದರೆ ಉತ್ತರ ಬಂದದ್ದು “ಭೂಮಿಯಿಂದ ಇಷ್ಟು ವರ್ಷ ತೆಗೆದುಕೊಂಡಿದ್ದ ಸಾಲಕ್ಕೆ ಬಡ್ಡಿಯನ್ನು ತೆಗೆದುಕೊಳ್ಳುತ್ತಿದೆ, ಬಡ್ಡಿ ತೀರಿದ ಮೇಲೆ ಬೋರ್‍ವೆಲ್‍ಗಳು ರಿಚಾರ್ಚ್ ಆಗುತ್ತವೆ” ಎಂದು ಹೇಳಿದರು. ಅವರು ಹೇಳಿದ್ದು ಕಟು ಸತ್ಯವೇ ಆಗಿದೆ. ಒಟ್ಟಾರೆ ಹೇಳುವುದಾದರೆ ಮಾನವನು ಪರಿಸರದ ಪರಿಸ್ಥಿತಿಯನ್ನು ಬದಲಾಯಿಸಿದಂತೆ ಪರಿಸರವೂ ಮಾನವನಿಗೆ ಪರಿಪರಿಯಾಗಿ ಪರಿಣಾಮವನ್ನು ಒದಗಿಸುತ್ತಾ ಬರುತ್ತಿದೆ.

ಇಂತಹ ಭೀಕರ ಪರಿಸ್ಥಿತಿಯನ್ನು ಅರಿತ ಕೆಲವರು ಹಾಗೂ ಸಂಪೂರ್ಣ ಅರಿಯದ ಕೆಲವರು ಇಂದು ದೇಶಾದ್ಯಂತ ನದಿಗಳ ಜೋಡಣೆ ಮಾಡಲು ಹೊರಟಿರುವುದು, ನದಿಗಳ ನೀರನ್ನು ತಿರುಗಿಸಿ ಹರಿಸಲು ಹೊರಟಿರುವುದನ್ನು ನೋಡಿದರೆ ಯಾವ ದೃಷ್ಟಿಯಲ್ಲಿ ಜೋಡಣೆ ಮಾಡಿಕೊಳ್ಳಲು ಹೊರಟಿರುವುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತಿರುವುದು ಸಹಜವಾಗಿದೆ. ಇಂತಹ ಸಂದರ್ಭಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಅವಹಣಿಸುತ್ತಿರುವ ರಾಜಕೀಯ ಪಕ್ಷಗಳು. ಇಲ್ಲಿಯವರೆಗೂ ಯಾವುದಾದರೂ ಒಂದು ಹಳ್ಳವನ್ನಾದರೂ – ತೊರೆಯನ್ನಾದರೂ ಪುನರುಜ್ಜೀವನಗೊಳಿಸಿದ್ದಾರೆಯೇ? ಅಥವಾ ಮರುಜನ್ಮ ನೀಡಿದ್ದಾರೆಯೇ? ಈ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು.

ಇತ್ತೀಚೆಗೆ ನದಿಗಳ ಪುನರುಜ್ಜೀವನದ ಕುರಿತು ಚರ್ಚೆಗಳಾಗುತ್ತಿರುವುದು ಸಕಾರಾತ್ಮಕ ಮಾರ್ಗವಾಗಿದ್ದರೂ, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ವಿಮರ್ಶಾತ್ಮಕವಾಗಿ ಆಲೋಚಿಸಬೇಕಿದೆ. ಏಕೆಂದರೆ ನದಿಗಳು ಏಕಾಏಕಿ ಒಂದೇ ಜಾಗಗಳಲ್ಲಿ ಹುಟ್ಟುವುದಿಲ್ಲ, ಸಣ್ಣ ಸಣ್ಣ ಹಳ್ಳಗಳೆಲ್ಲಾ ಸೇರಿ ನದಿಗಳಾಗುತ್ತವೆ. ಆದ್ದರಿಂದ ಒಂದೇ ಬಾರಿ ನದಿಗಳಿಗೆ ಜೀವಕೊಡಲು ಕಷ್ಟಸಾಧ್ಯವಾದರೂ, ಪರಿಸರದಲ್ಲಿರುವ ಕೆರೆ-ಹಳ್ಳಗಳನ್ನು ಯುವಜನರು, ಸರ್ಕಾರದವರು, ಸಂಘಸಂಸ್ಥೆಗಳಲ್ಲಿರುವವರು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಅದಲ್ಲದೆ ಇವುಗಳಿಗೆ ಮರು ಜೀವವನ್ನು ನೀಡುವ ಮೂಲಕ ಜಲಪಾತ್ರೆಗಳನ್ನು ಮತ್ತೆ ನಳನಳಿಸುವಂತೆ ಮಾಡಬೇಕಿದೆ. ಇದಕ್ಕಾಗಿ ಅರಣ್ಯ ಕೃಷಿಯನ್ನು ಉತ್ತೇಜನ ಮಾಡುವ ಮತ್ತು ಅದರ ಅಳವಡಿಕೆಯೇ ಉತ್ತಮ ಮಾರ್ಗವೆಂದು ಸೂಚಿಸಬಹುದು.

ಚಿತ್ರ ಲೇಖನ: ಜಿ. ಮಂಜುನಾಥ್‍  ಅಮಲಗೊಂದಿ
           ತುಮಕೂರು ಜಿಲ್ಲೆ.

Spread the love
error: Content is protected.