ಜೇಡಗಳೂ ಹಾರುತ್ತವೆ!

ಜೇಡಗಳೂ  ಹಾರುತ್ತವೆ!

 “ಬೇಗ ಬೇಗ ಹೆಜ್ಜೆ ಹಾಕಿರಿ, ವಾಪಸ್ ಬರಲು ತಡವಾಗುತ್ತದೆ”. ಎಂದು ಹೇಳಿಕೊಂಡೆ ನಮ್ಮ ಆಶ್ರಮದ ಪಕ್ಕದಲ್ಲಿರುವ ದೊಡ್ಡಿ ಬೆಟ್ಟದ ಚಾರಣಕ್ಕೆಂದು ನಾನು ಮತ್ತು ನನ್ನ ಸ್ನೇಹಿತರು ಹೊರಟೆವು. ಬೇಗ ಹೋಗಿ ಬರಬೇಕೆಂದು ಗಟ್ಟಿ ನಿರ್ಧಾರ ಮನಸಿನಲ್ಲಿ ಮಾಡಿದ್ದರೂ ದಾರಿಯಲ್ಲಿ ಸಿಗುವ ಹೊಸ ಹೊಸ ಸಂಗತಿಗಳನ್ನು ಕಾಣುವಾಗ, ಸುಮ್ಮನೇ ಹೋಗಲಾಗಲಿಲ್ಲ. ಹೊಸದಾಗಿ ಅರಳಿದ ಹೂ, ಹಾಡುವ ಹಕ್ಕಿ, ಜಿಗಿಯುವ ಜೇಡ ಹೀಗೆ ಎಲ್ಲವೂ ಹೊಸದೆನಿಸುತ್ತಿತ್ತು. ಓಹ್..! ಜೇಡ ಎಂದಾಗ ನೆನಪಾಯಿತು. ಇದುವರೆಗೆ ನಾನು ಎಷ್ಟೋ ಬಗೆಯ ಜೇಡಗಳ ಕಂಡಿದ್ದರೂ ಸರಿಯಾಗಿ ಗಮನಿಸಿರಲಿಲ್ಲ. ಉದಾಹರಣೆಗೆ ಜಿಗಿಯುವ ಜೇಡವನ್ನೇ ತೆಗೆದುಕೊಳ್ಳಿ, ಈ ಜೇಡ ಬೇರೆ ಹಲವು ಜೇಡಗಳಂತೆ ನಡೆಯದೇ ಮುಂದೆ ಮುಂದೆ ಸಾಗಲು ಅಥವಾ ಬೇಟೆಯಾಡಲು ಜಿಗಿಯುತ್ತದೆ. ಆದ್ದರಿಂದಲೇ ಅದಕ್ಕೆ ಜಿಗಿಯುವ ಜೇಡ(jumping spider)ಎಂದು ಕರೆಯುತ್ತಾರೆಂದರೆ ತಪ್ಪಾಗಲಾರದು. ಈ ವಿಷಯ ಅದರ ಹೆಸರಿನಲ್ಲೇ ಇದ್ದರೂ ಅದನ್ನು ಹೊರಗೆ ಸರಿಯಾಗಿ ಗಮನಿಸಿರಲಿಲ್ಲ. ಈ ಚಾರಣದ ಸಮಯದಲ್ಲಿ ಬೇಡವೆಂದರೂ ಈ ದೃಶ್ಯ ಕಣ್ಣಿಗೆ ಬೀಳುತ್ತಿತ್ತು.

ನಮ್ಮಲ್ಲಿ ಕೆಲವರು ಜೇಡಗಳನ್ನು ಕೇವಲ ಮನೆಯ ಬಾಗಿಲು  ಸಂದಿಗಳಲ್ಲಿ ಅಥವಾ ಗೋಡೆಯ ಅಂಚಿನಲ್ಲಿ ಕಂಡಿದ್ದಾರೆ. ಈ ಜೇಡಗಳೆಷ್ಟು ಸೋಂಬೇರಿಗಳು! ಒಮ್ಮೆ ಬಲೆ ಎಳೆದು ಕೂತುಬಿಟ್ಟರೆ ಬೇಟೆ(ಕೀಟಗಳು) ಮನೆ ಬಾಗಿಲಿಗೆ ಬಂದು ಕದ ತಟ್ಟುವ ತನಕ ಹಾಗೆಯೇ ಕೂತಿರುತ್ತವೆ, ಎಂಬ ಭಾವನೆ ಇರುತ್ತದೆ. ಆದರೆ ಅವುಗಳನ್ನು ನಮ್ಮ ಅರಿವಿಗೆ ತಕ್ಕಂತೆ ಅಳೆಯುವುದು ಸರಿಯಲ್ಲ. ಕೀಟ ಪ್ರಪಂಚದಲ್ಲಿ ಜೇಡ ಒಂದು ವಿಭಿನ್ನ ಜೀವಿ. ಜೇಡ ದಾರಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಬಲೆಯನ್ನು ಒಂದೇ ರಾತ್ರಿಯಲ್ಲಿ ಹೆಣೆದು ಆಹಾರಕ್ಕಾಗಿ ಕಾಯುತ್ತಾ ಕುಳಿತಿರುವುದನ್ನು ಕೆಲವೊಮ್ಮೆ ನೀವೂ ಗಮನಿಸಬಹುದು. ಆದರೆ  ಎಲ್ಲಾ ಜೇಡಗಳು ಹೀಗೆಯೇ ಇರುವುದಿಲ್ಲ. ಕೆಲವು ಜೇಡಗಳು ತಮ್ಮ ಆಹಾರವನ್ನು ಜಿಗಿದು ಬೇಟೆಯಾಡಿಯೂ ಸಂಪಾದಿಸುತ್ತದೆ. ಹರಿಯುವ ನೀರಿನ ಮೇಲೆ ಬಲೆ ಹೆಣೆದು ಹೊಂಚು ಹಾಕಿ ಬೇಟೆಯಾಡುತ್ತದೆ. ಜಿಗಿಯುತ್ತವೆ, ಕುಣಿಯುತ್ತವೆ, ಹಾರುತ್ತವೆ. ಒಟ್ಟಾರೆ ಹೇಳುವುದಾದರೆ ಜೇಡದ ಬಗ್ಗೆ ನಮಗಿರುವ ಜ್ಞಾನ ಕಡಿಮೆಯೇ. ಅರೆ… ಒಂದು ನಿಮಿಷ ತಾಳಿ, ಜೇಡದ ಬಗ್ಗೆ ಹೊಗಳುತ್ತಾ ಮೈಮರೆತು ಜೇಡಗಳು ಹಾರುತ್ತವೆ ಎಂದುಬಿಟ್ಟೆನಾ? ಹೌದು ಹೇಳಿದ ಹಾಗೆ ತೋರುತ್ತದೆ. ತಪ್ಪೇನಿಲ್ಲ ಬಿಡಿ ಈ ಮಾಸದ ವಿ ವಿ ಅಂಕಣದ ಹೊಸ ಸಂಶೋಧನೆಯ ಅನಾವರಣದಲ್ಲಿ ಈ ವಿಷಯವೇ ಇದೆ.

ಹೌದು ಜೇಡಗಳಿಗೆ ರೆಕ್ಕೆಯಿಲ್ಲದಿದ್ದರೂ ಅವು ಹೊಸ ಜಾಗವನ್ನು ಸೇರಲು ಸಾಗರಗಳ ದಾಟಿ ಕಿಲೋಮೀಟರುಗಟ್ಟಲೆ ಹಾರುತ್ತವೆ! ಹಾಗೆಂದು ಪಕ್ಷಿಯ ಹಾಗೆ ಹಾರುತ್ತದೆ ಎಂದೇನಲ್ಲ. ಹಾರುವ ಹಲ್ಲಿ ಕೇಳಿದ್ದೀರಲ್ಲವೇ, ಹಾಗೆ ಗಾಳಿಯಲ್ಲಿ ತನ್ನ ವಿಶೇಷವಾದ ಅಂಗದಿಂದ ತೇಲಿ ಹೋಗುವುದು ಸಾಧ್ಯವಿದೆ. ಸತ್ಯವಾಗಿ ಹೇಳುತ್ತೇನೆ ಜೇಡವು ಹೀಗೆ ಹಾರಬಲ್ಲುದು ಎಂದು ನನಗೂ ಈ ಮುಂಚೆ ತಿಳಿದಿರಲಿಲ್ಲ. ಇಷ್ಟೇ ಎಂದುಕೊಂಡರೆ? ಇದಕ್ಕಿಂತ ಆಶ್ಚರ್ಯ ಸುದ್ದಿ ಇನ್ನೊಂದಿದೆ. ಅದೇನೆಂದರೆ ಈ ಹಾರುವ ಜೇಡಗಳು ಹಾರಲು ಕೇವಲ ಗಾಳಿಯ ಮೇಲೆ ಅವಲಂಬಿಸಿಲ್ಲ, ಅದರ ಜೊತೆಗೆ ವಿದ್ಯುತ್ ಕಾಂತ(electric charges)ಗಳ ಸಹಾಯವನ್ನೂ ಸಮನಾಗಿ ಪಡೆಯುತ್ತದಂತೆ.

ಅದು ಹೇಗೆ ಸಾಧ್ಯ? ಇದೆಲ್ಲ ನಿಮಗೆ ಹೇಗೆ ತಿಳಿಯಿತು? ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ, ಈ ಜೇಡವು ಹೇಗೆ ಹಾರುತ್ತದೆ/ತೇಲುತ್ತದೆ ಎಂಬುದನ್ನ ಮೊದಲು ತಿಳಿಯಬೇಕಾಗುತ್ತದೆ. ಜೇಡಗಳು ಸೂಕ್ತ ವಾತಾವರಣದ ಸಮಯವನ್ನು ನೋಡಿಕೊಂಡು ನೇರ ಹೋಗಿ ಎತ್ತರದ ಪ್ರದೇಶದಲ್ಲಿ ನಿಂತು ತನ್ನ ಬ್ರಹ್ಮಾಸ್ತ್ರವಾದ ಜೇಡರ ಬಲೆಯನ್ನು ಸ್ರವಿಸುತ್ತದೆ. ಸರಿಯಾದ ವೇಗದಲ್ಲಿ ಗಾಳಿ ಬೀಸಿದೊಡನೆ ಆ ಬಲೆ ಪ್ಯಾರಾಚೂಟ್ ನಂತೆ ಹಿಗ್ಗಿ ಗಾಳಿಯಲ್ಲಿ ತೇಲುತ್ತದೆ. ನಂತರ ಗಾಳಿಯೇ ಜೇಡವನ್ನು ಹೊತ್ತು ಮುಂದೆ ಸಾಗುತ್ತದೆ. ಗಾಳಿಯ ವೇಗ ಪ್ರತೀ ಘಂಟೆಗೆ 11 ಕಿ.ಮೀ. ಕ್ಕಿಂತ ಕಡಿಮೆ ಇದ್ದರೆ ಅದು ಜೇಡಗಳ ಹಾರುವಿಕೆಗೆ ಸೂಕ್ತ ಸಮಯ ಎಂಬುದನ್ನು  ಈಗಾಗಲೇ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಅದೆಲ್ಲ ಸರಿ, ಆದರೆ ವಿದ್ಯುತ್ ಕಾಂತಕ್ಕೂ ಜೇಡಗಳ ಹಾರುವಿಕೆಗೂ ಸಂಬಂಧವೆಲ್ಲಿ ಹೇಳಿದಿರಿ?

 ಅಲ್ಲಿಗೇ ಬರುತಿದ್ದೇನೆ… ಈ ಮೇಲೆ ಹೇಳಿದ ರೀತಿಯಲ್ಲಿ ಹಾರುವ ಜೇಡಗಳು ಸುಮಾರಿವೆ. ಅದರಲ್ಲಿ ಕೆಲವು ಜೇಡಗಳನ್ನು ತೇಲಿಸಲು ಈ ಮೃದು ಗಾಳಿ ಸಾಲದು ಎನ್ನುತ್ತಾರೆ ಇಂಗ್ಲೆಂಡಿನ ಬ್ರಿಸ್ಟೋಲ್ (Bristol) ವಿಶ್ವವಿದ್ಯಾಲಯದ ಇಂದ್ರಿಯ ತಜ್ಞೆ, ಎರಿಕ ಮೊರ್ಲೆ. ಅಷ್ಟೇ ಅಲ್ಲದೆ ಕೆಲವು ಬಾರಿ ಜೇಡ ಹಾರಲು ಬೇಕಾದ ವೇಗದಲ್ಲಿ ಗಾಳಿ ಬೀಸುತ್ತಿದ್ದರೂ ಒಂದೂ ಹಾರುವುದಿಲ್ಲ.

ಹಾಗಾದರೆ ಇದಕ್ಕೆ ಕಾರಣ ಬೇರೆಯೇ ಇರಬೇಕು. ಅಲ್ಲವೇ..?

ಹೌದು ನಿಮ್ಮ ಊಹೆ ಸರಿಯಾಗಿದೆ. ಇದಕ್ಕೆ ಕಾರಣ ಈ ವಿದ್ಯುತ್ ಕಾಂತಗಳೇ. ಅದು ಹೇಗೆಂದು ನೋಡೋಣ. ಭೂಮಿಯ ಸುತ್ತ ಆಯಸ್ಕಾಂತೀಯ ಕ್ಷೇತ್ರ (Magnetic field) ಇರುವಂತೆ ವಿದ್ಯುತ್ ಕ್ಷೇತ್ರ (Electric field)ವೂ ಉಂಟು. ಭೂಮಿಯ ಮೇಲೆ ವಿದ್ಯುತ್ ಕಾಂತಗಳಳುಳ್ಳ (electrically charged) ವಸ್ತುಗಳು ಬೇಕಾದಷ್ಟಿವೆ. ಉದಾಹರಣೆಗೆ ಗಿಡದ ಎಲೆ, ಮರದ ರೆಂಬೆ ಹೀಗೆ ಯಾವ ವಸ್ತುವಾದರೂ ಆಗಬಹುದು ಅವುಗಳ ಸುತ್ತ ವಿದ್ಯುತ್ ಕಾಂತಗಳು ಇರುತ್ತವೆ. ಹಾಗೆಯೇ ಈ ಕಾಂತಗಳ ಶಕ್ತಿ ಒಂದೊಂದು ವಸ್ತುವಿನ ಸುತ್ತಲೂ ಬೇರೆ ಬೇರೆಯಾಗಿರುತ್ತದೆ. ಇಂತಹ ವಸ್ತುಗಳನ್ನು ಭೂಮಿಯ ವಿದ್ಯುತ್ ಕಾಂತಗಳು ಆಕರ್ಷಿಸುತ್ತದೆ (attract) ಅಥವಾ ಹಿಮ್ಮೆಟ್ಟಿಸುತ್ತದೆ (repel). ಹಾಗಾದರೆ ಇದೇ ರೀತಿ ನಮ್ಮ ಈ ಹಾರುವ ಜೇಡದ ಬಲೆಗೂ ವಿದ್ಯುತ್ ಕಾಂತಗಳಿದ್ದು ಅವುಗಳೇ ಜೇಡರ ಬಲೆಯನ್ನು ಮೇಲಕ್ಕೆ ಎತ್ತಿ ತೇಲಿಸಿರಬಹುದಲ್ಲವೇ? ಎಂಬ ಗುಮಾನಿ ಮೊರ್ಲೆಯ್ ಮತ್ತು ರಾಬರ್ಟ್ ತಲೆಯಲ್ಲಿ ಹೊಕ್ಕಿತು. ಇವರಿಬ್ಬರೂ ಬ್ರಿಸ್ಟೋಲ್ ವಿಶ್ವವಿದ್ಯಾಲಯದವರೇ.

ತಮ್ಮ ಅನುಮಾನವನ್ನು ಬಗೆ ಹರಿಸಿಕೊಳ್ಳಲು ಅವರು ಒಂದು ಪ್ರಯೋಗವನ್ನೂ ಮಾಡಿಯೇಬಿಟ್ಟರು. ಅದಕ್ಕಾಗಿ ಮೊದಲು ಅವರ ಪ್ರಯೋಗಾಲಯದಲ್ಲಿ ಇದ್ದಂತಹ ಸ್ವಭಾವಿಕವಾದ ವಿದ್ಯುತ್ ಕಾಂತವನ್ನು ನಿರ್ಬಂಧಿಸಿದರು. ನಂತರ ಕೃತಕ ವಿದ್ಯುತ್ ಕಾಂತಗಳನ್ನು ಲಿನಿಫಿಡೆ(Linyphiidae) ಎಂಬ ವರ್ಗದ ಜೇಡಗಳ ಮೇಲೆ ಪ್ರಯೋಗಿಸಿದರು. ಈ ಕಾಂತಗಳು ಜೇಡಗಳಿಗೆ ತಗುಲಿದ ತಕ್ಷಣ ಜೇಡಗಳು ಮೇಲೆ ಹಾರಲು ಬ್ಯಾಲ್ಲೇರಿನ ನೃತ್ಯದಲ್ಲಿ ನಿಲ್ಲುವಂತೆ ತುದಿಗಾಲಲ್ಲಿ ನಿಂತು ಸಿದ್ಧವಾದವು. ಹಾಗೆಯೇ ಈ ಕಾಂತಗಳನ್ನು ತೆಗೆದಾಗ ಮರಳಿ ಯಥಾಸ್ಥಿತಿಗೆ ಬಂದವು.

ಇದೇ ಪ್ರಯೋಗವನ್ನೂ ಮಾಡಿ ಎಲಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಜೇಡವನ್ನು ಗಮನಿಸಿದಾಗ ಜೇಡದ ಕಾಲುಗಳ ಮೇಲಿರುವ ಸೂಕ್ಷ್ಮ ರೋಮಗಳು ಗಾಳಿಗೆ ಹಾಗೂ ವಿದ್ಯುತ್ ಕಾಂತಗಳಿಗೆ ಪ್ರತಿಕ್ರಿಯಿಸುತ್ತಿರುವುದು ಕಂಡು ಬಂದಿತು. ಆದರೆ ಈ ಪ್ರತಿಕ್ರಿಯೆ ಎರಡಕ್ಕೂ ಒಂದೇ ರೀತಿಯಲ್ಲಿ ಇರದೇ, ಮೊದಲು ಗಾಳಿ ಬೀಸಿದಾಗ ರೋಮಗಳು ಸ್ವಲ್ಪ ತಡವಾಗಿ ನೆಟ್ಟಗಾದವು. ಆದರೆ ವಿದ್ಯುತ್ ಕಾಂತಕ್ಕೆ ತಟ್ಟೆಂದು ಎದ್ದು ನಿಂತಿತು. ಹಾಗೂ ಕಾಂತಗಳನ್ನು ತೆಗೆದ 30 ಸೆಕೆಂಡುಗಳಿಗೆ ರೋಮಗಳು ಮೊದಲ ಸ್ಥಿತಿಗೆ ಬಂದವು. ಇದೊಂದು ದೊಡ್ಡ ಆವಿಷ್ಕಾರ. ಬಹುಶಃ ಈ ಕಾರಣಗಳಿಂದಲೇ ಕೆಲವು ಜೇಡಗಳು ಹಾರುತ್ತಿವೆ ಎಂಬ ಸ್ವಲ್ಪ ಗಟ್ಟಿ ನಂಬಿಕೆ ಮೂಡಿದರೂ…

ಇಷ್ಟಕ್ಕೆ ನಾವು ಜೇಡಗಳು ಗಾಳಿಯಲ್ಲಿ ಹಾರಲು ಇವೇ ಕಾರಣವೆಂದು ಹೇಳಲಾಗದು. ಜೇಡಗಳು ಹಾರಲು ತುದಿಗಾಲಲಿದ್ದರೆ ಸಾಕೇ? ಅದನ್ನು ಮೇಲಕ್ಕೆ ಹಾರಿಸಲು ಬೇರೇನೋ ಕಾರಣವಿದೆ ಎನ್ನುತ್ತಾರೆ ಬರ್ಲಿನ್ ವಿಶ್ವವಿದ್ಯಾಲಯದ ಮೂನ್ಸುಂಗ್ ಚೊ. ಜೊತೆಗೆ ಇದನ್ನು ತಿಳಿಯಲು ಇನ್ನೂ ಹೆಚ್ಚು ಸಮಯ – ಸಂಶೋಧನೆಯ ಅವಶ್ಯಕತೆಯಿದೆ ಎಂದು ಕಾಣುತ್ತದೆ!

ಅದೇನೇ ಇರಲಿ, ನಮ್ಮ ಈ ಪುಟ್ಟ ಪುಟ್ಟ ಸಂಶೋಧನೆಗಳಿಂದ ನಿಸರ್ಗದ ನಿಗೂಢತೆಯ ಪುಸ್ತಕವನ್ನೆಲ್ಲಾ ಓದುತ್ತೇನೆಂಬ ಭ್ರಮೆಯನ್ನು ಬಿಟ್ಟು, ಅವಳು ತೆರೆದು ಕೊಡುವ ಒಂದೊಂದೇ ಪುಟವನ್ನು ಓದುತ್ತೇನೆ ಎನ್ನುವುದರಲ್ಲೇ ಹೆಚ್ಚು ನೆಮ್ಮದಿಯಿದೆ ಎಂದು ನನಗನಿಸುತ್ತದೆ.

ನಿಮ್ಮ ಊಹೆಯ ಹಣೆಬರಹಗಳ ಬರೆದು ಈ ಕೆಳಗಿನ ಇ-ವಿಳಾಸಕ್ಕೆ ಕಳುಹಿಸಿ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Spread the love
error: Content is protected.