ವನದಾಳದ ಮಾತು – ಕಗ್ಗತ್ತಲ ಕಾನನದಲ್ಲಿ ಕಾಡಾನೆಯಿಂದ ತಪ್ಪಿಸಿಕೊಂಡ ಕತೆ
ಪ್ರಕಾಶ್ ಹೊನ್ನಕೋರೆರವರು ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನವರು. ಕಳೆದ ಎಂಟು ವರ್ಷಗಳಿಂದ ವಿಶೇಷ ಹುಲಿ ಸಂರಕ್ಷಣಾ ದಳ ಬಂಡೀಪುರ ಹಾಗು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಲಾಖಾ ಶ್ವಾನವಾದ ರಾಣಾನನ್ನು ಇವರು ನೋಡಿಕೊಳ್ಳುತ್ತಿದ್ದಾರೆ. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಇವರು ಸಾಕಷ್ಟು ಕಾಡಿನ ಅನುಭವಗಳನ್ನು ಕತೆಯಾಗಿಸಿದ್ದಾರೆ.
ಕಗ್ಗತ್ತಲ ಕಾನನದಲ್ಲಿ ಕಾಡಾನೆಯಿಂದ ತಪ್ಪಿಸಿಕೊಂಡ ಕತೆ‘
ಮುಂದುವರಿದ ಭಾಗ….
ಚೆನ್ನಯ್ಯ ಅಲ್ಲಿರುವ ಸೌದೆಗಳನ್ನು ಜೋಡಿಸಿ ಬೆಂಕಿ ಹಾಕಲು ಶುರು ಮಾಡಿದ, ಹಾಗೆ ತನ್ನ ಜೇಬಿನಿಂದ ಗಣೇಶ್ ಬೀಡಿ ತಗೆದು ಬೆಂಕಿ ಹಚ್ಚಿ ಸೇದಲು, ಬಾಯಿಯಿಂದ ಬರುತ್ತಿರುವ ಹೊಗೆಯು ಹಳೆ KSRTC ಬಸ್ನಿಂದ ಬರುವ ಹೊಗೆಯ ಹಾಗೆ ಬಿಡ್ತಾ, ಶನಿ ಮಹಾತ್ಮೆಯ ಕೆಲವು ಹಾಡುಗಳನ್ನು ಹೇಳಲು ಶುರು ಮಾಡಿದ. ಅಲ್ಲೇ ಇದ್ದ ನಮ್ಮ ಬಸಯ್ಯ ಮಾತ್ರ ಚೆನ್ನಯ್ಯನ ಹಾಡುಗಳನ್ನೇ ತನ್ನ ಲಾಲಿ ಹಾಡು ಎಂದು ತಿಳಿದು ಅಂತಹ ಭಯಾನಕ ಜಾಗದಲ್ಲೂ ಗೊರಕೆಹೊಡಿಯುತ್ತ ನಿದ್ದೆಗೆ ಜಾರಿದ. ಆದ್ರೆ ಮಂಜು ಮಾತ್ರ ಕೈಯಲ್ಲಿದ್ದ ಕೋವಿಯನ್ನು ಪರೀಕ್ಷೆ ಮಾಡುತ್ತ ಕಗ್ಗತ್ತಲ ರಾತ್ರಿಯಲ್ಲಿ ಯಾವುದಕ್ಕೋ ಗುರಿ ಇಡುವ ಹಾಗೆ ಮಾಡಿ ಕೋವಿಯನ್ನು ತೆಗೆದು ತನ್ನ ಪಕ್ಕಕ್ಕಿಟ್ಟ. ನಾವು ಕೆಲ್ಸ ಮಾಡೋ ಊರಿಗೆ ತುಂಬಾ ಹತ್ತಿರದ ಊರಿನವನಾದ ಸಂಜಯ ಮಾತ್ರ ಯಾವುದನ್ನೂ ಲೆಕ್ಕಿಸಿದೆ ಬೆಂಕಿ ಕಾಯಿಸುತ್ತ ಕುಳಿತಿದ್ದ. ಚೆನ್ನಯ್ಯ ತನ್ನ ಬೀಡಿ ಸೇದಿದ ನಂತರ ತನ್ನ ಕಾಡಿನ ಅನುಭವಗಳನ್ನು ಹೇಳಲು ಶುರು ಮಾಡಿದ. ಅವನು ಹುಟ್ಟಿದ್ದು-ಬೆಳೆದಿದ್ದು ಎಲ್ಲಾ ಕಾಡು ಆಗಿರೋದ್ರಿಂದ ಅವನ ಕಥೆಗಳು ತುಂಬಾ ಭಯಾನಕವಾಗಿ ಕೇಳ್ತಾ ಇರೋರು ಅಲ್ಲೇ ಮೂರ್ಛೆ ಹೋಗೋ ತರ ಇದ್ವು, ನಾನು ಮೊದ್ಲೇ ಭಯಗೊಂಡಿದ್ದರಿಂದ ಮಂಜು ಚೆನ್ನಯ್ಯನ್ನನ್ನು ತಡೆದ. ಅವನು ಹೇಳಿದ ಒಂದು ದೆವ್ವದ ಕಥೆ ನನ್ನನ್ನು ತುಂಬಾ ಹೆದರಿಸಿ ಬಿಟ್ಟಿತು.
ಅದ್ರಲ್ಲೂ ಕಾಡಿನಲ್ಲಿ ಈ ಹೊತ್ತಿನಲ್ಲಿ ಯಾವುದಾದ್ರೂ ದೆವ್ವ ಬಂದ್ರೆ ಏನಪ್ಪ ಮಾಡೋದು ಅಂತ ಚಿಂತೆಯಾಯಿತು. ಯಾಕಂದ್ರೆ ನಮ್ಮಿಂದ 5 ಮೀಟರ್ ದೂರದಲ್ಲಿ ಒಂದು ದೊಡ್ಡ ಆನೆ ಬಂದ್ರು ಗೊತ್ತಾಗದಿರೋ ಅಷ್ಟು ಕಗ್ಗತ್ತಲು. ಆಗಲೇ ನಂಗೆ ಭಯ ಶುರು ಆಗಿ ಜೀವ ಕೈಗೆ ಬರೋ ಹಾಗೆ ಆಗಿತ್ತು. ಅಷ್ಟೋತ್ತಿಗಾಗ್ಲೆ ದೂರದ ಹೊಲಗಳಿಂದ ನಾಯಿಗಳು ಜೋರಾಗಿ ಬೊಗಳುವ ಶಬ್ಧಗಳು ಬರಲು ಪ್ರಾರಂಭವಾಯಿತು. ಅದನ್ನ ಕೇಳಿ ನಮ್ಮ ಕಾಡಲ್ಲಿ ಇರುವ ಕಾಡುನಾಯಿಗಳು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಅನ್ನೋ ಹಾಗೆ ಅರಚಲು ಪ್ರಾರಂಭಿಸಿದವು.
ಆ ಶಬ್ಧಗಳು ಬರ್ತಾ ಇರೊದನ್ನ ಕೇಳಿದ ಮಂಜು ಬೇರೆ ಯಾವುದೋ ಕಡೆ ಇಂದ ಆನೆಗಳು ಹೊಲಕ್ಕೆ ದಾಳಿ ಮಾಡಿವೆ ಅಂದ. ಅಷ್ಟೊತ್ತಿಗೆ ಸಮಯ ಸುಮಾರು 1 ಗಂಟೆ 30 ನಿಮಿಷ. ಇದನ್ನು ಕೇಳಿದ ಚೆನ್ನಯ್ಯನಿಗೆ ಕೋಪ ನೆತ್ತಿಗೆ ಏರಿತು. ಇಷ್ಟು ನಡು ರಾತ್ರಿಯಲ್ಲಿ ನಮ್ಮ ಜೀವದ ಹಂಗು ತೊರೆದು ಕಾಯ್ತಾ ಇದ್ರು, ಈ ದರಿದ್ರದ ಆನೆಗಳು ಮಾತ್ರ ನಮ್ಮ ಕಣ್ಣು ತಪ್ಪಿಸಿ ಗದ್ದೆಗಳಿಗೆ ಹೋಗಿ ನಮ್ಮನ್ನು ಅಧಿಕಾರಿಗಳಿಂದ ಬೈಸಿಕೊಳ್ಳೋ ಹಾಗೆ ಮಾಡುತ್ತವೆ ಅಂದ. ಅದೇ ಕೋಪಕ್ಕೆ ತನ್ನ ಕಿಸೆಯಿಂದ ಇನ್ನೊಂದು ಬೀಡಿ ತೆಗೆದು ಬೆಂಕಿ ಹಚ್ಚಿದ. ಆಮೇಲೆ ತನ್ನಲ್ಲಿರುವ ಪಟಾಕಿ ತೆಗೆದು ಅದಕ್ಕೆ ಕಡ್ಡಿ ಗೀರಿದ. ಚೆನ್ನಯ್ಯ ಹಚ್ಚಿದ ಪಟಾಕಿ ಶಬ್ಧಕ್ಕೆ ಒಂದು ಕ್ಷಣ ಕಾಡು ನಡುಗಿ ಹೋಯಿತು. ಪ್ರಶಾಂತ ಸರೋವರದಲ್ಲಿ ಸುನಾಮಿ ಎದ್ದ ಹಾಗೆ ಆಗಿ! ಆ ಶಬ್ಧಕ್ಕೆ ಕಾಡೊಳಗಿರಿರುವ ಪಕ್ಷಿಗಳು ಕ್ರ ಕರ್ ಕಿರ್ ಎಂದು ವಿಕೃತವಾಗಿ ಶಬ್ಧಮಾಡತೊಡಗಿದವು. ಅದೇ ಸಮಯಕ್ಕೆ ಊರು ನಾಯಿಗಳ ಕಿರುಚಾಟ ಇನ್ನು ತುಂಬಾ ಹೆಚ್ಚಾಗುತ್ತಾ ಹೋಯಿತು ಆವಾಗ ಅಂದಾಜು ಸಮಯ ಬೆಳಗಿನ 2 ಗಂಟೆ 45 ನಿಮಿಷ. ಸಮಯ ಮುಗಿತಾ ಬಂದಿರೋದ್ರಿಂದ ನಾವು ಅಲ್ಲಿಂದ ವಾಪಸ್ ಹೋಗೋಣ ಅಂತ ನಿರ್ಧರಿಸಿದ್ವಿ.
ನಮ್ಮ ತಂಡದ ಕುಂಭಕರ್ಣನಾದ ಬಸಯ್ಯನನ್ನು ಎಬ್ಬಿಸಿಕೊಂಡು ಅಲ್ಲಿಂದ ನಿಧಾನವಾಗಿ ನಾವೆಲ್ಲರೂ ಎದ್ದು ಹೋಗ್ತಾ ಇರಬೇಕಾದ್ರೆ ಮಂಜು ನಾವು ಹೋಗೋ ದಾರಿಯನ್ನು ಬದಲಾಯಿಸಿದ. ಅದಕ್ಕೆ ಕಾರಣ ಇಷ್ಟೇ ನಮಗೆ ಅವಾಗ ದೂರದ ಹೊಲದಿಂದ ನಾಯಿಗಳು ಕೂಗ್ತಾ ಇರೋ ಶಬ್ಧ ಬಂದಿರೋದ್ರಿಂದ ಇವತ್ತು ನಾವು ರೈತರನ್ನು ಮಾತಾಡಸ್ತಾ ಹೋಗೋಣ ಎಂದ. ಅದಕ್ಕೆ ಎಲ್ರು ಆಯಿತು ಎಂದು ಹೋಗ್ತಾ ಇರಬೇಕಾದ್ರೆ ನಿಧಾನವಾಗಿ ಪಶ್ಚಿಮದ ಕಡೆಯಿಂದ ತಂಗಾಳಿ ಬರಲು ಪ್ರಾರಂಭಿಸಿತು. ಇದು ಮಳೆಯ ಮುನ್ಸೂಚನೆ ಎಂದು ನಮ್ಮ ತಂಡದ ಚಾಣಕ್ಯನಾದ ಚೆನ್ನಯ್ಯ ಹೇಳಿದ, ಹಾಗೆ ಸುಮಾರು 1.5 ಕಿಲೋ ಮೀಟರ್ ಬರಬೇಕಾದ್ರೆ ಕಂದಾಯದ ಭೂಮಿಗಳು ಪ್ರಾರಂಭವಾದವು. ಕಾಡಂಚಿನಲ್ಲಿ ವಾಸಿಸುತ್ತಿರುವ ರೈತರು ತಮ್ಮ ಹೊಲಗಳಲ್ಲಿರುವ ದೊಡ್ಡ ದೊಡ್ಡ ಮರಗಳ ಮೇಲೆ ಅಟ್ಟಣಿ ಮಾಡ್ಕೊಂಡು ಆನೆ ಕಾಯುತ್ತ ಇರ್ತಾರೆ. ಹಾಗೆ ಸ್ವಲ್ಪ ದೂರ ಹೋದ ಮೇಲೆ ಅಲ್ಲೆ ಇದ್ದ ಒಬ್ಬ ರೈತ ಕೈಯಲ್ಲಿ ಟಾರ್ಚ್ ಹಿಡಿದು ನಮ್ಮ ಕಡೆ ಬಿಡ್ತಾ “ಸಾರ್ ಇವಾಗ ಈ ಕಡೆ ಇಂದ ಜೋರಾಗಿ ಜನ ಕಿರುಚಾಡ್ತಾ ಇದ್ರು “ ಅಂತ ಹೇಳಿದ. ಆವಾಗ ನಮಗೆ ಯಾರದೋ ಹೊಲಕ್ಕೆ ಆನೆ ಬಂದಿದೆ ಅಂತ ಖಾತ್ರಿಯಾಯಿತು. ಹಾಗೆ ಹುಷಾರಾಗಿ ಆನೆ ಎಲ್ಲಾದ್ರೂ ಇದಿಯಾ ಅಂತ ನೋಡ್ತಾ ಹೆಜ್ಜೆ ಮೇಲೆ ಹೆಜ್ಜೆ ಹಾಕ್ತಾ ಒಬ್ಬರ ಹಿಂದೆ ಒಬ್ಬರ ನಡಿಗೆ ಸಾಗ್ತಾ ಇತ್ತು. ಹಾಗೆ ಅಲ್ಲಿಂದ ನಿಧಾನವಾಗಿ ಗದ್ದೆ ಮೇಲೆ ನಡೀತಾ ಸಾಗಿದ್ವಿ ಎಲ್ಲರಿಗಿಂತ ಮುಂಚೆ ಮಂಜು, ನಂತ್ರ ಸಂಜಯ್ ಆಮೇಲೆ ನಾನು ನನ್ನ ಹಿಂದೆ ಚೆನ್ನಯ್ಯ ಅವನ ಹಿಂದೆ ಬಸಯ್ಯ. ಇದ್ದದ್ದು. ಈ ಸಲ ಮಂಜು ನಮ್ಮ ತಂಡದ ಮುಂದಾಳತ್ವ ವಹಿಸಿದ್ದ ಹಾಗೆ ಯಾವುದಾದ್ರು ಪ್ರಾಣಿಯಿಂದ ಕಾಯುವ ಜವಾಬ್ದಾರಿ ಚೆನ್ನಯ್ಯ ತೆಗೆದುಕೊಂಡಿದ್ದ ಏಕಂದ್ರೆ ನಮ್ಮ ಆಯುಧ ಕೋವಿಯ ಜವಾಬ್ದಾರಿ ಚೆನ್ನಯ್ಯನ ಮೇಲಿತ್ತು. ಹಾಗೆ ಸುಮಾರು 1 ಕಿ ಮಿ ನಡೆದ ನಂತರ ನಮಗೆ ಒಂದು ಊರುಸಿಕ್ತು.
ಊರು ಸಮೀಪಿಸ್ತಾ ಹಾಗೆ ಊರಲ್ಲಿರುವ ನಾಯಿಗಳು ಬೊಗಳುವುದು ಹೆಚ್ಚಾಯಿತು. ಇಲ್ಲಿಂದ ನಮ್ಮ ಕ್ಯಾಂಪಿಗೆ ಸುಮಾರು 4 ಕಿ ಮಿ. ಅದು ಫುಲ್ ಟಾರ್ ರೋಡ್ ಆಗಿತ್ತು. ಈಗ ಊರಲ್ಲಿರೋದ್ರಿಂದ ನನ್ನ ಭಯ ಸ್ವಲ್ಪ ಕಡಿಮೆಯಾಗಿತ್ತು. ಆವಾಗಲೇ ನಿಧನಾವಾಗಿ ಮಳೆ ಶುರುವಾಯಿತು. ಇರೋದು 2 ಛತ್ರಿ ಒಂದ್ರಲ್ಲಿ ಬಸಯ್ಯ ಮತ್ತು ಚೆನ್ನಯ್ಯ ಇನ್ನೊಂದ್ರಲ್ಲಿ ನಾನು, ಮಂಜು ಮತ್ತು ಸಂಜಯ. ಹೀಗೆ ಸುಮಾರು 2.5 ಕಿ ಮಿ ಮಾತಾಡ್ತಾ ಮಾತಾಡ್ತಾ ಬರ್ತಾ ಇದ್ವಿ. ಸ್ವಲ್ಪ ಮಳೇನು ಕಡಿಮೆ ಆಗಿತ್ತು ಅಷ್ಟೊತ್ತಿಗಾಗಲೇ ನಮ್ಮ ಬಟ್ಟೆಗಳು ಸ್ವಲ್ಪ ತೋಯ್ದು ಹೋಗಿದ್ವು. ನಮ್ಮ ಕ್ಯಾಂಪ್ಗೆ ಹೋಗೋ ದಾರಿ ತುಂಬಾ ಕಿರಿದಾಗಿತ್ತು. ಅದಲ್ಲದೇ ಎರಡೂ ಕಡೆಕಂದಾಯ ಭೂಮಿ ಇರೋದ್ರಿಂದ ಅಲ್ಲಿ ಕೆಲವು ತೆಂಗಿನ ತೋಟಗಳಿದ್ದವು. ಅವುಗಳಿಗೆ ದುರಂತಾ ಎನ್ನುವ ಗಿಡಗಳಿಂದ ಬೇಲಿ ಮಾಡ್ಕೊಂಡಿದ್ರು ಮತ್ತು ಅವು ತುಂಬಾ ಗಟ್ಟಿಯಾಗಿದ್ದವು. ರೋಡಿನ ಎರಡು ಬದಿ ಚರಂಡಿ ಇತ್ತು.
ನಮಗೆ ಸರ್ಕಾರ ನೀಡಿದ್ದ ಕೆಂಪು ಚರ್ಮದ ಬೂಟು ನಡೆಯುತ್ತಿದ್ದರೆ ರಸ್ತೆಯಿಂದ ಟಕ್ ಟಕ್ ಟಕ್ ಅಂತ ಶಬ್ದ ಬರ್ತಾ ಇತ್ತು. ನಮ್ಮ ಬೂಟು ಮಾಡುವ ಸದ್ದು ಆ ರಾತ್ರಿಯಲ್ಲಿ ಎಲ್ಲೋ ಸೈನಿಕರ ಕವಾಯತನ್ನು ಮಾಡುವಾಗ ಬರುವ ಸದ್ದಿನ ಹಾಗೆ ಕೇಳ್ತಾ ಇತ್ತು. ನಾನು,ಮಂಜು ಮತ್ತು ಸಂಜು ಮುಂದೆ ಮಾತಾಡ್ತಾ ಹೋಗ್ತಾ ಇದ್ವಿ, ಚೆನ್ನಯ್ಯ ಹಾಗೂ ಬಸಯ್ಯ ಹಿಂದೆ ಬರ್ತಾ ಇದ್ರು. ಚೆನ್ನಯ್ಯ ನಮ್ಮ ರಕ್ಷಣೆಗೆ ನೀಡಿದ್ದ ಕೋವಿಯನ್ನು ಹಿಡಿದುಕೊಂಡು ಬರ್ತಾ ಇದ್ದ. ಹೀಗೆ ಮಾತಾಡ್ತಾ ಮಾತಾಡ್ತಾ ಬರ್ತಾ ಇರುವಾಗ ನಮ್ಮ ಎಡ ಭಾಗದ ಬೇಲಿಯ ಕಡೆ ಇಂದ ಏನೋ ಒಂದು ರೀತಿಯ ತಿನ್ನೋ ತರ ಶಬ್ಧ ಬರ್ತಾ ಇತ್ತು. ಅದು ನೀರವ ಮೌನ ಆವರಿಸಿರುವ ಜಾಗ, ಅಮಾವಾಸ್ಯೆ ಮುಗಿದು ಕೇವಲ ಮೂರು ದಿನ ಆಗಿದ್ದರಿಂದ ನಮ್ಮ ಪಕ್ಕದಲ್ಲಿ ಏನು ಇದೆ ಎಂದು ತಿಳಿಯಲು ಕೂಡ ಆಗದೆ ಇರೋ ಅಷ್ಟು ಕಗ್ಗತ್ತಲು. ನಾನೆಲ್ಲೋ ಚೆನ್ನಯ್ಯ ಹೇಳಿರೋ ದೆವ್ವ ಬಂದು ಇನ್ನೊಂದು ದೆವ್ವದ ಜೊತೆ ಮಾತಾಡ್ತಾ ಕುಳಿತಿದೆ ಅನ್ಕೊಂಡಿದ್ದೆ.
ನಮ್ಮ ಪಕ್ಕದಲ್ಲಿ ಅಂದ್ರೆ ಕೇವಲ 10 ಮೀಟರ್ ದೂರದಲ್ಲಿ ಇರೋದು ತೆಂಗಿನ ತೋಟ ಎಂದು ಚೆನ್ನಯ್ಯ ಹೇಳಿದ ಮೇಲೆಯೇ ತಿಳಿಯಿತು. ಚೆನ್ನಯ್ಯ ಅಷ್ಟು ಹೇಳಷ್ಟರಲ್ಲಿ ನಾವು ಮಾತಾಡ್ತಾ ಇರೋದನ್ನ ಅದು ಯಾವಾಗ ಕೇಳಿಸಿಕೊಂಡಿತ್ತೋ ಆ ದೇವ್ರೇ ಬಲ್ಲ. ತನ್ನ ಇಡೀ ರೋಷಾವೇಶಗಳನ್ನು ತಗೆದುಕೊಂಡು ತುಂಬಾ ಜೋರಾಗಿ ಘಿಳಿಡ್ತು. ಆನೆಯು ಮಾಡಿದ ಆ ಶಬ್ದಕ್ಕೆ ನಾವೆಲ್ಲರು ಬೆಚ್ಚಿಬಿದ್ವಿ. ತೋಟದಲ್ಲಿ ತೆಂಗಿನಕಾಯಿಗಳನ್ನು ತಿನ್ನುತ್ತಾ ಇತ್ತು ಅನ್ಸುತ್ತೆ, ತುಂಬಾ ವೇಗವಾಗಿ ಅಲ್ಲಿರುವ ದುರಂತಾದ ಬೇಲಿಯನ್ನು ನುಗ್ಗಿ ನಮ್ಮೆಡೆಗೆ ಘಿಳಿಡುತ್ತಾ ಓಡಿ ಬಂದಿತು. ಚೆನ್ನಯ್ಯ ಮತ್ತು ಬಸಯ್ಯ ತಮ್ಮ ಕೈಯಲ್ಲಿರುವ ಕೋವಿಯನ್ನು ಬಿಸಾಡಿ, ಊರು ಕಡೆ ಓಡಿಹೋಗಿಬಿಟ್ರು, ನಮಗೆ ತಪ್ಪಿಸಿಕೊಳ್ಳಲು ಜಾಗ ಬೇರೆ ಇರ್ಲಿಲ್ಲ, ಹಾಗೆ ನನ್ನ ಜೊತೆಗಿದ್ದ ಮಂಜುಕೂಡ ಕಾಲಿಗೆ ಬುದ್ಧಿ ಹೇಳಿದ. ಮೊದ್ಲೇ ಅವನು ಓಟಗಾರ ಹಾಗೆ ನೋಡ್ತಾ ನೋಡ್ತಾನೆ ಅವನು ಓಡಲು ಶುರುಮಾಡಿದ ಅವನ ಹಿಂದೆ ನಮ್ಮ ಸಂಜಯ ಅವನ ಹಿಂದೆ ನಾನು ನನ್ನ ಹಿಂದೆ ಕಾಡಾನೆ. ಇಷ್ಟೆಲ್ಲ ನಡೆದಿರೋದು ಕೇವಲ 2ರಿಂದ 3 ನಿಮಿಷಗಳಲ್ಲಿ ಅಷ್ಟೇ, ಆನೆಗಳು ನೇರವಾಗಿ ಓಡ್ತಾ ಇದ್ರೆ ಗಂಟೆಗೆ 35 ಕಿಲೋ ಮೀಟರ್ ವೇಗದಲ್ಲಿ ಓಡುತ್ತವೆ. ಹಾಗೆ ಸುಮಾರು 50 ಮೀಟರ್ ಓಡಿರಬಹುದು ಅಷ್ಟೇ, ಹಾಗೆ ಓಡ್ತಾ ಇರಬೇಕಾದ್ರೆ ನನಗೆ ಕಾಲಿಗೆ ಯಾವುದೋ ವಸ್ತು ಬಡಿದು ನಾನು ಸಹ ರೋಡ ಮೇಲೆಯೇ ಬಿದ್ದೆ ಆಮೇಲೆ ಗೊತ್ತಾಗಿದ್ದು ನನ್ನ ಕಾಲಿಗೆ ಅಡ್ಡಲಾಗಿ ಬಿದ್ದಿದ್ದು ಸಂಜಯ (ನಮ್ಮ ಸಂಜಯ್ ಹಾಕಿದ್ದ ಬೂಟು ಕಾಲಿನಿಂದ ಜಾರಿಹೋಗಿ ಅಲ್ಲಿ ಬಿದ್ದಿದ್ದಎಂದು ಆಮೇಲೆ ತಿಳಿಯಿತು) ಮಂಜು ಮಾತ್ರ ಹುಸೇನ್ ಬೋಲ್ಟ್ ತರ ತುಂಬಾ ವೇಗವಾಗಿ ಮುಂದೆ ಓಡಿಹೋಗಿದ್ದ. ನನಗೆ ಇಂದೇ ನನ್ನ ಜೀವನದ ಕೊನೆಯ ಘಳಿಗೆ ಎನಿಸಿಬಿಟ್ಟಿತು. ಆನೆ ಶರವೇಗದಲ್ಲಿ ಬರ್ತಾ ಇರೋ ಸದ್ದು ಭೂಮಿಯಿಂದ ಕೇಳ್ತಾ ಇತ್ತು. ಕೊನೆಬಾರಿಗೆ ಗಣೇಶನನ್ನು ಮನಸಿನಲ್ಲಿಯೇ ನೆನೆದು ಬದುಕಿದ್ರೆ ಕೊನೆವರೆಗೂ ನಿನ್ನ ಭಕ್ತನಾಗಿ ಇರ್ತೀನಿ ಅನ್ನೋ ಪ್ರಮಾಣ ಮಾಡಿದೆ. ದೂರದಲ್ಲೆಲ್ಲೋ ಒಂದು ವಿದ್ಯುತ್ ದೀಪ ಉರಿತಾ ಇತ್ತು ಅದರಿಂದ ಬರುತ್ತಿದ್ದ ಮಬ್ಬು ಬೆಳಕಿನಲ್ಲಿ ನೋಡಿದರೆ ಆನೆ ಓಡುವುದು ಕಾಣುತ್ತಿತ್ತು ನಂಗೆ ಆವಾಗಲೇ ಗೊತ್ತಾಗಿದ್ದು ಅದು ಮಂಜುನನ್ನು ಬೆನ್ನತ್ತಿದೆ ಎಂದು. ಏನಾದ್ರು ಮಾಡಿ ಅವನ್ನನು ಆನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಬೇಕೆಂದು ಧೈರ್ಯಮಾಡಿ ಚೆನ್ನಯ್ಯ ಬಿಸಾಕಿಹೋಗಿದ್ದ ಕೋವಿಯನ್ನು ಕೈಗೆ ಎತ್ತಿಕೊಂಡು ನಿಧಾನವಾಗಿ ನಡೆಯುತ್ತ ಆನೆ ಹೋಗಿದ್ದ ದಾರಿಯಲ್ಲಿಯೇ ಸ್ವಲ್ಪ ದೂರ ಹಿಂಬಾಲಿಸಿದೆ. ಆದರೆ, ಅಷ್ಟೊತ್ತಿಗಾಗಲೇ ನನ್ನ ಕೈ-ಕಾಲು, ಮೈಗಳಿಂದ ರಕ್ತ ಬರ್ತಾ ಇತ್ತು, ನಾನು ಯಾವುದೇ ಕಾರಣಕ್ಕೂ ನಡೆಯದ ಸ್ಥಿತಿಗೆ ತಲುಪಿದ್ದೆ ಅನ್ನೋದು ಅರ್ಥವಾಗುತ್ತಲೇ ಅಲ್ಲೇ ರೋಡಮೇಲೆ ಮಲಗಿಕೊಂಡೆ. ಸ್ವಲ್ಪ ಸಮಯದ ನಂತರ ಊರು ಕಡೆಯ ದಾರಿಯಿಂದ ಚೆನ್ನಯ್ಯ, ಬಸಯ್ಯ ಮತ್ತು ಆ ತೋಟದ ಯಜಮಾನ ಬಂದು ಕೆಳಗೆ ಬಿದ್ದಿದ್ದ ನನ್ನನ್ನು ಎಬ್ಬಿಸಿಕೊಂಡು ಅದೇ ತೋಟದಲ್ಲಿದ್ದ ಮನೆ ಕಡೆಗೆ ಹೋದರು. ಅಲ್ಲಿಗೆ ಸಂಜಯ ಕೂಡ ಬಂದ. ಸುಮಾರು 150 ಮೀಟರ್ ಓಡ್ತಾ ಹೋದ ಮಂಜು ಕೂಡ ಸಮೀಪದಲ್ಲಿದ್ದ ತಂಬಾಕು ಬ್ಯಾರೇನ್ ಹತ್ರಹೋಗಿ ನಿಂತು ಬಿಟ್ಟಿದ್ದ, ಅಲ್ಲಿ ವಿದ್ಯುತ್ ದೀಪ ಇರೋದ್ರಿಂದ ಅಲ್ಲಿಗೆ ಆನೆ ಬರೋದು ಅನುಮಾನ ಇತ್ತು. ಹಾಗೆ ಅಲ್ಲಿ ಕೆಲ್ಸ ಮಾಡೋ ಕೆಲಸದಾಳುಗಳು ಇದ್ರು.
ಸ್ವಲ್ಪ ಸಮಯದ ನಂತ್ರ ಅದೇ ರಸ್ತೆಯಲ್ಲಿ ಆನೆ ಬರೋದು ಕಾಣಿಸಿತಂತೆ ಆವಾಗಲೇ ಗೊತ್ತಾಗಿದ್ದು ಅದು ಮಖನಾ ಆನೆ ಎಂದು (ಗಂಡು ಆನೆ ಥರ ರೂಪ ಹೊಂದಿದ್ದು ಆದ್ರೆ ಅದಕ್ಕೆ ಯಾವುದೇ ದಂತ ಇರೋದಿಲ್ಲ ಈ ತರದ ಆನೆಗೆ ಮಖನಾ ಅನ್ನುತ್ತಾರೆ). ಆಮೇಲೆ ಅಲ್ಲಿರುವ ಜನ ತುಂಬಾ ಕಿರುಚಾಡಿದಾಗ ಅದು ಮರಳಿ ಕಾಡು ಕಡೆ ಓಡಿ ಹೋಯ್ತಂತೆ. ಇದಾದ ಸ್ವಲ್ಪ ಸಮಯದ ನಂತರ ಮಂಜು ಸಹ ನಾವಿದ್ದ ಜಾಗಕ್ಕೆ ಬಂದು ನನ್ನ ಸ್ಥಿತಿ ನೋಡಿ ವಾಕಿ ಟಾಕಿಯಿಂದ ಆಫೀಸಿಗೆ ಮೆಸೇಜ್ ಕೊಟ್ಟ, ಸ್ವಲ್ಪ ಸಮಯದ ನಂತರ ನಮ್ಮ ಇಲಾಖೆಯ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಹೋಗಿ ದಾಖಲಾದೆ. ಅಲ್ಲಿ ನನ್ನ ಗಾಯಗಳಿಗೆ ಪ್ರಥಮ ಚಿಕಿತ್ಸೆ ತಗೆದುಕೊಂಡೆ.
ಆದಿನ ನನ್ನ ಪುನರ್ಜನ್ಮ ಹೊಂದಿದ ದಿನ ಅಂದ್ಕೊಂಡು ಅವತ್ತಿನಿಂದ ಗಣೇಶನಿಗೆ ಖಾಯಂ ಭಕ್ತನಾದೆ. ಅವತ್ತೇ ಗೊತ್ತಾಗಿದ್ದು ಜೀವದ ಬೆಲೆ ಏನು ಅಂತ ಮತ್ತು ವನ್ಯಜೀವಿಗಳ ಕೋಪ ಎಂಥದು ಅಂತ. ಈ ಘಟನೆ ನಂತ್ರ ಈ ರೀತಿಯ ಅನೇಕ ಘಟನೆಗಳು ನಡೆದಿವೆ. ಆದ್ರೆ ಈ ಘಟನೆ ಮಾತ್ರ ಇನ್ನೂ ನನ್ನ ಮನದಲ್ಲಿ ಹಚ್ಚು ಹಸಿರಾಗಿದೆ, ನಮ್ಮ ನಿತ್ಯ ಹರಿದ್ವರ್ಣದ ಕಾಡುಗಳ ಹಾಗೆ.
ಚಿತ್ರ – ಲೇಖನ: ಪ್ರಕಾಶ್ ಹೊನ್ನಕೋರೆ
ಬಂಡೀಪುರ ರಾಷ್ಟ್ರೀಯ ಉದ್ಯಾಯನವನ