ಜಗತ್ತಿನ ಅತ್ಯುತ್ತಮ ನಿಸರ್ಗ ಪ್ರೇಮಿಗಳು

ಜಗತ್ತಿನ ಅತ್ಯುತ್ತಮ ನಿಸರ್ಗ ಪ್ರೇಮಿಗಳು

ಇತಿಹಾಸ: 20ನೇ ದಶಕದ ಆರಂಭದಲ್ಲಿ ಜರ್ಮನಿಯ ಅಲಂಕಾರಿಕ ಹಾವಿನ ಚರ್ಮದ ವ್ಯಾಪಾರಿ ಭಾರತಕ್ಕೆ ಬಂದ. ಅವನಿಗೆ ಚೆಂಗಲ್ಪಟ್ಟು ಬಳಿಯ “ಇರುಳಬುಡಕಟ್ಟಿಗೆ ಸೇರಿದ ಆದಿವಾಸಿಗಳ ಬೇಟೆಯ ಚಾಕಚಕ್ಯತೆ ಬಗ್ಗೆ ಹೇಗೆ ತಿಳಿಯಿತೊ ನಮಗೆ ತಿಳಿಯದು, ವ್ಯಾಪಾರಿಯ ಪ್ರೇರಣೆಯಿಂದ ಇರುಳರು ಜಗತ್ತು ಕಂಡಿರುವ ಭಾರೀ ಹಾವುಗಳ ಮಾರಣ ಹೋಮವನ್ನು ಮಾಡಿದರು. ಮಧ್ಯವರ್ತಿಗಳ ಮುಖಾಂತರ  ಜರ್ಮನರು ಆರಂಭಿಸಿದ ಈ ಉದ್ಯಮ ದೊಡ್ಡದಾಗಿ ಬೆಳೆದು ಹತ್ತು ಮಿಲಿಯನ್ ಗಿಂತಲೂ ಹೆಚ್ಚು ಹಾವುಗಳ ಮಾರಣ ಹೋಮವಾಯಿತು (ಪೌರಾಣಿಕ ಪಾತ್ರದ ಜನುಮಜೇಯನ ಸರ್ಪಯಾಗವನ್ನು ಮೀರಿಸುವಂತೆ). ಮೊದಲು ಇರುಳರಿಂದ ಆರಂಭವಾದ ಹಾವುಗಳ ಬೇಟೆ ದೇಶದಲ್ಲಿರುವ ಎಲ್ಲಾ ಬುಡಕಟ್ಟು ಜನರಿಗೂ ಹಬ್ಬಿತು ಆದರೆ ಯಾರೂ ಇರುಳರಷ್ಟು ಚಾಕಚಕ್ಯರಾಗಿರಲಿಲ್ಲ.

ಈ ದಂಧೆ ಹೆಚ್ಚು ಕಾಲ ನಿಲ್ಲಲಿಲ್ಲ. ಅಂತರರಾಷ್ಟ್ಟೀಯ ಹಾಗೂ ಪ್ರಾದೇಶಿಕ ಸಮುದಾಯದ ಒತ್ತಡದಿಂದ ಹಾವಿನ ಚರ್ಮದ ದಂಧೆ 70ರ ದಶಕದಲ್ಲಿ ಇಳಿಮುಖವಾಯಿತು. 1976ರಲ್ಲಿ ಹಾವಿನ ಚರ್ಮದ ರಪ್ತಿನ ಮೇಲೆ ನಿಷೇಧ ಹೇರಿದ ಮೇಲೆ ಸುಮಾರು ಐದು ಸಾವಿರದಷ್ಟು ಇರುಳಿಗರಿಗೆ ಕೆಲಸವಿಲ್ಲದಂತಾಗಿ ಅವರ ಜೀವನ ಕಷ್ಟಕ್ಕೀಡಾಯಿತು. 1978ರಲ್ಲಿ ಈ ಕೃತಿಯ ಬರಹಗಾರರು (ರೋಮುಲಸ್ ವಿಟಾಕರ್ ಜಾನಕಿ ಲೆನಿನ್), ಅವರಸಮ ಮನಸ್ಕ ಸ್ನೇಹಿತರು ಹಾಗು ಇರುಳರು ಸೇರಿಕೊಂಡು ಇರುಳಿಗರು “ಸಹಕಾರ ಸಂಘ ನಿಗಮ” ಸ್ಥಾಪಿಸಿದರು, ಅವರು ಹಾವುಗಳನ್ನು ಹಿಡಿಯುತ್ತಾರೆ ಆದರೆ ಚರ್ಮಕ್ಕಲ್ಲ ಔಷಧಕ್ಕೆ ಬೇಕಾದ ವಿಷಕ್ಕಾಗಿ ಎಂದು ಬದಲಾಯಿಸಿದರು.

ಇರುಳರು ಹೇಗೆ ಕಾರ್ಯ ನಿರ್ವಹಿಸುತ್ತಾರೆ

1969 ರಲ್ಲಿ ಹಾವಿನ ಪ್ರತ್ಯೌಷಧ ತಯಾರಿಕಾ ಸಂಸ್ಥೆಯಾದ ಹಫ್ಕಿನ್ ಸಂಸ್ಥೆಗಾಗಿ ಹಾವುಗಳನ್ನು ಸಂಗ್ರಹಿಸುವಾಗ ನಾನು ಇರುಳರನ್ನು ಭೇಟಿಯಾದೆ. ದಿ.ಹ್ಯಾರಿ ಮಿಲ್ಲರ್ ರವರು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಇರುಳರ ಹಾವು ಹಿಡಿಯುವ ನೈಪುಣ್ಯತೆಯನ್ನು ಕುರಿತು ಬರೆದಿದ್ದರು. ಹಾಗೂ ನನಗೆ ಅರ್ಜುನ ಎಂಬ ಇರುಳನನ್ನು ಪರಿಚಯಿಸಿದರು. ಅವನ ನೈಪುಣ್ಯತೆಗೆ ನಾನು ಮಾರುಹೋದೆ. ಇರುಳರ ಶಾಂತ ಸ್ವಭಾವ ನನಗೆ ಬಹಳ ಇಷ್ಟವಾಯಿತು. ಹಾವುಗಳ ಬಗ್ಗೆ ಅವರಿಗಿರುವ  ಜ್ಞಾನವನ್ನು 40 ವರ್ಷಗಳ ಒಡನಾಟದಲ್ಲಿ ನನಗೆ ಕಲಿಸಿದರು.

ಅವರೊಡನೆ ನಾನು ಮೊದಲು ಕಲಿತದ್ದು ಹರಟೆಮಲ್ಲ, ಮೈನ, ಹಾಗು ಅಳಿಲುಗಳು ಹಾವನ್ನು ಕಂಡಾಗ ನೀಡುವ ಎಚ್ಚರಿಕೆಯ ಸಂದೇಶವನ್ನು ಗುರುತಿಸುವುದು.  ಮಳೆ ಬಂದು ಪೊದೆಗಳು ದಟ್ಟವಾಗಿ ಬೆಳೆದಿರುವಾಗ ಹಾವುಗಳ ಇರುವನ್ನು ಗುರುತಿಸಲು ಹಕ್ಕಿಗಳ ಎಚ್ಚರಿಕೆ ಘಂಟೆ ಬಹಳ ಸಹಾಯಕಾರಿಯಾಗುತ್ತದೆ.

ಸಣ್ಣ ಜೇನು ಹುಳುಗಳು  ಹೂವಿನಿಂದ ಸಂಗ್ರಹಿಸುವ ಜೇನನ್ನು ಬಿದಿರುಮೆಳೆಯಿಂದ ಹೇಗೆ ತೆಗೆಯುವುದು, ನಾಲಿಗೆ ತುಟಿಗಳಿಗೆ ಹತ್ತದಹಾಗೆ ಗೆದ್ದಲನ್ನು ಹೇಗೆ ತಿನ್ನುವುದು ಎಂದು ಕಲಿತೆ. ನಂತರ ಹಾವು ಸರಿದು ಹೋಗಿರುವ ಗುರುತಿನಿಂದ ಹಾವನ್ನು ಹೇಗೆ ಪತ್ತೆ ಹಚ್ಚುವುದು ಎನ್ನುವುದನ್ನು ಕಲಿಸಲು ಪ್ರಯತ್ನಿಸಿದರು. ದಶಕಗಳು ಕಳೆದರೂ ನಾನಿನ್ನೂ ಕಲಿಕೆಯ ಹಂತದಲ್ಲೇ ಇರುವೆ. ಸುಡು ಬಿಸಿಲಿರುವ ಭಾರತದಲ್ಲಿ ಹಾವುಗಳು ಬಿಲಗಳಲ್ಲಿ ಇಲಿಗಳನ್ನು ಹಿಡಿದು ತಿಂದು ಬದುಕುತ್ತವೆ ಅಥವಾ ಮರದ ಕೊಂಬೆಗಳಿಗೆ ಸುತ್ತಿಕೊಂಡಿರುತ್ತವೆ. ಇರುಳರು ಇಲಿಬಿಲ, ಹುತ್ತ ಪೊಟರೆಗಳ ಇರುವನ್ನು ಪತ್ತೆಮಾಡುವುದರಲ್ಲಿ ನಿಷ್ಣಾತರು.

ಹಾವನ್ನು  ಹಿಡಿದ ಕತೆ

ಕಳೆದ ಜುಲೈ ನಲ್ಲಿ ನಾನು ಹಾಗು ನನ್ನ ಹೆಂಡತಿ ಜಾನಕಿ ಕಾಳಿಯೊಡನೆ ಹಾವು ಹಿಡಿಯಲು ಹೋಗಿದ್ದೆವು. ಕಾಳಿ ನನ್ನ ಇರುಳ ಮಿತ್ರ ಚೊಕ್ಕಲಿಂಗಮ್ ನ ಪುತ್ರ. ಅವನು ನಾಗರಹಾವು ಕಟ್ಟಾವು, ಕೊಳಕಮಂಡಲ ಹಾವುಗಳನ್ನು ವಿಷ ಸಂಗ್ರಹಣೆಗಾಗಿ ಹಿಡಿಯುತ್ತಿದ್ದ.

ನಾವು ನಾಗರಹಾವನ್ನು ಹಿಡಿಯುವ ಎಂದು ಭತ್ತದ ಗದ್ದೆಗಳಕಡೆ ಹೋದೆವು. ಅಲ್ಲಿ ಯಥೇಚ್ಛವಾಗಿ ಇಲಿ ಹೆಗ್ಗಣಗಳ ಬಿಲಗಳಿದ್ದವು. ಬಿಲಗಳ ಬಳಿ ಅಲ್ಲಲ್ಲಿ ಹೆಗ್ಗಣ ಅಥವಾ ಏಡಿಯ ಗುರುತುಗಳಿದ್ದವು. ಕೆಲವೆಡೆ ಆಗತಾನೆ ಕೊರೆದ ಬಿಲಗಳಿದ್ದವು. ಕಾಳಿ ಸ್ವಲ್ಪ ನುಣುಪಾಗಿ ಮಣ್ಣು ಒತ್ತಿದ ಹಾಗೆ ಆಗಿ ಹೊಳೆಯುತ್ತಿದ್ದ ಒಂದು ಬಿಲದ ಮುಂದೆ ನಿಂತ. ಅದರೊಳಗೆ ಕೈಯಲ್ಲಿರುವ ಕೊಕ್ಕೆಯನ್ನು ಹಾಕಿ ತಿವಿದು ಸ್ವಲ್ಪ ಮಣ್ಣನ್ನು ಉದಿರಿಸಿದ. ಬಿಲ ತೆರೆದುಕೊಂಡಿತು. ಬಿಲದೊಳಗಡೆ ಹಾವು ಹರಿದಾಡಿರುವ ಗುರುತನ್ನು ನಮಗೆ ತೋರಿಸಿದ. ಬಿಲವನ್ನು ಅಗಲವಾಗಿ ತೋಡುವುದನ್ನು ತಡೆಯಲು ಅಲ್ಯಾವ ಮರದ ಬೇರೂ ಇರದ ಕಾರಣ ಅಗಲವಾದ ಹೊಂಡವನ್ನು ಶೀಘ್ರವಾಗಿ ಜಾಗರೂಕವಾಗಿ ತೆಗೆದನು. ಸ್ವಲ್ಪ ಅಗೆದ ಮೇಲೆ ಕಾಳಿ ಒಂದು ಸಣ್ಣ ಕಡ್ಡಿಯನ್ನು ತೆಗೆದುಕೊಂಡು ಬಿಲದೊಳಗೆ ತೂರಿಸಿದ. ಸುಮಾರು ಒಂದು ಅಡಿ ಒಳ ಹೋದಾಗ ಅತ್ತಕಡೆಯಿಂದ ಯಾರೋ ತಳ್ಳಿದಂತಾಗಿ ಕಡ್ಡಿ ಒಂದಿಂಚು ಆಚೆ ಬಂದಿತು. ಅದನ್ನು ನೋಡಿ ನಕ್ಕ ಕಾಳಿ ಹಾವಿಗೆ ತೊಂದರೆಯಾಗದಂತೆ ಇನ್ನೊಂದಡಿ ಮಣ್ಣನ್ನು ತೆಗೆಯಬಹುದೆಂದು ತೋಡುವುದನ್ನು ಮುಂದುವರೆಸಿದ, ಸ್ವಲ್ಪ ಸಮಯದಲ್ಲೇ ಹಾವು ಹಾಗು ಅದರ 20 ಮೊಟ್ಟೆಗಳು ನಮಗೆ ಕಂಡವು. ಹುಷಾರಾಗಿ ನಾಗರಹಾವನ್ನು ಹಿಡಿದು ಚೀಲಕ್ಕೆ ಹಾಕಿಕೊಂಡ ಹಾಗು ಮೊಟ್ಟೆಗಳನ್ನು ಇರುಳರ ಕೇಂದ್ರದಲ್ಲಿ ಮರಿಮಾಡಲು ಹೆಕ್ಕಿಕೊಂಡ.

ನಾವಿದ್ದ ಮುಂದಿನ ಕೆಲದಿನಗಳಲ್ಲಿ ಇರುಳ ಮಿತ್ರರು ನಮ್ಮನ್ನು ಕೊಳಕು ಮಂಡಲ ಹೆಚ್ಚಾಗಿರುವ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿದ್ದ ಪೊದೆಗಳಿಂದ ಎರಡು ದೊಡ್ಡ ಕೊಳಕು ಮಂಡಲದ ಹಾವುಗಳು ಹಾಗು ಅರು ಮರಿ ಹಿಡಿದೆವು. ಮರಿ ಹಾವುಗಳನ್ನು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟೆವು. ನಂತರ ಕಟ್ಟುಹಾವುಗಳನ್ನು ಹಿಡಿಯಲು ಮುಂದಾದೆವು. ಈ ಬಾರಿ ನಮಗೆ ಹಾವು ಪತ್ತೆಮಾಡಲು ಸಹಾಯವಾಗಿದ್ದು  ಹಾವಿನ ಪೊರೆ ಹಾಗು ಅವು ಹರಿದುಹೋಗಿರುವ ಗುರುತುಗಳು. ನಿಶಾಚರಿಯಾದ ಈ ಹಾವನ್ನು ಪತ್ತೆಮಾಡಿ ಹಿಡಿಯುವುದು ಕಷ್ಟ. ನಾವು ಬೆನ್ನತ್ತಿದ ಗಂಡು ಹಾವು ಬೇವಿನಮರದ ಬೇರುಗಳ ನಡುವೆ ಪೊಟರೆಯಲ್ಲಿ ಅವಿತಿತ್ತು. ಇರುಳರಿಗೆ ಇವೆಲ್ಲ ತೊಂದರೆ ಎಂದೇ ಅನಿಸುವುದಿಲ್ಲ..ಈ ವಿಷಕಾರಿ ಹಾವುಗಳನ್ನು ಕ್ಷಣಮಾತ್ರದಲ್ಲೇ ಹಿಡಿದು ಬುಟ್ಟಿಗೆ ಹಾಕಿಕೊಂಡರು. ಬೆಳಗಿನ ಸಮಯದಲ್ಲಿ ಅರಳಿಮರದ ಬಳಿ ಸುರುಳಿಸುರುಳಿಯಾಗಿ ಸುತ್ತಿಕೊಂಡಿರುವ ಸಣ್ಣ ತೀಕ್ಷ್ನ ವಿಷಕಾರಿಯಾದ ಕೊಳಕುಮಂಡಲಹಾವುಗಳನ್ನು ಕಂಡೆವು! ಇರುಳರಿಗೆ ಎಲ್ಲಿ ಯಾವಾಗೆ ಯಾವ ಹಾವನ್ನು ನೋಡಬೆಂಬುದು ರಕ್ತಗತವಾಗಿರುವ ಕಲೆ!

ನನ್ನಮಗ ನಿಖಿಲ್ ನೊಂದಿಗೆ ವೈಜ್ಞಾನಿಕ ಲೇಖನಕ್ಕಾಗಿ ಐದು ದಿನ ಹಾವುಗಳ ಬಗ್ಗೆ  ಮಾಹಿತಿಕಲೆಹಾಕುವಾಗ ದಿನಕ್ಕೆ ಸುಮಾರು ಮೂರು ಕಿಲೋಮೀಟರ್ ನಷ್ಟು ದೂರವನ್ನು ಕ್ರಮಿಸಿ ಅಂದಾಜು 55 ಬಗೆಯ  ವಿಷಕಾರಿ ಹಾಗು ವಿಷಕಾರಿಯಲ್ಲದ ಹಾವುಗಳನ್ನು (ಕೇರೆಹಾವು ,ನೀರುಹಾವುಪಟ್ಟೆ ಬೆನ್ನೇಣುಹಾವು (ಸ್ಟ್ರೈಪ್ಡ್ ಕೀಲ್ ಬ್ಯಾಕ್, ಮರಳು ಹಾವು) ಹಿಡಿದು ಅವುಗಳ ಉದ್ದವನ್ನು ಅಳತೆಮಾಡಿ ಬಿಟ್ಟುಬಿಟ್ಟೆವು. ಹನ್ನೊಂದು ಜಾತಿ ಹಾವುಗಳ 158 ಪೊರೆಗಳನ್ನು ಕೂಡಾ ಸಂಗ್ರಹಿಸಿದೆವು. ಪೊರೆಗಳು ಹಾವುಗಳ ಸಂಖ್ಯೆ, ಆರೋಗ್ಯ ಹಾಗು ಯಾವಜಾತಿಯ ಹಾವೆಂದು ಗುರುತಿಸುವುದಕ್ಕೆ ಸಹಾಯ ಮಾಡುತ್ತವೆ.

ಇರುಳರ ಕಲಾನೈಪುಣ್ಯ ಹಾವುಗಳನ್ನು ಪತ್ತೆಮಾಡುವುದಕ್ಕೆ ಸೀಮಿತವಾಗಿಲ್ಲ. ಹೊಲಗದ್ದೆಗಳಲ್ಲಿ ವಿಪರೀತವಾಗಿ ಕಾಟಕೊಡುವ ಇಲಿಗಳನ್ನು ಅವರು ತಿನ್ನುತ್ತಾರೆ.  ಇಲಿಗಳನ್ನು ಪತ್ತೆಮಾಡಿ ಹಿಡಿಯುವ ಅವರ ವೈಖರಿ ಬೆಕ್ಕುಗಳನ್ನೂ ನಾಚಿಸುತ್ತದೆ. ಅವರು ಖಾಲಿ ಬಿಲಗಳನ್ನು ತೋಡಿ ಸಮಯವ್ಯರ್ಥಮಾಡುವುದಿಲ್ಲ. ಬಿಲಗಳ ಬಳಿ ಇಲಿಗಳು ಓಡಾಡಿ ಮಾಡಿರುವ ಹೊಸ ಗುರುತುಗಳು, ಅವುಗಳ ಹಿಕ್ಕೆ, ಇಲಿ ಚಿಗಟೆಯ ಸಹಾಯದಿಂದ ಇಲಿಗಳ ಇರುವನ್ನು ಖಚಿತಪಡಿಸಿಕೊಳ್ಳುತ್ತಾರೆ. ಅವರ ನೈಪುಣ್ಯತೆಯನ್ನು ಕಂಡ ಭಾರತ ಸರ್ಕಾರ ವಿಜ್ಞಾನಹಾಗುತಂತ್ರಜ್ಞಾನ ಇಲಾಖೆಯಿಂದ ಇರುಳರ ಸಂಘಕ್ಕೆ 10 ಲಕ್ಷ ಹಣನೀಡಿ  ಬೆಳೆ ರಕ್ಷಣೆಗಾಗಿ ನೇರವಾಗಿ ಇಲಿ ಹಿಡಿಯುವುದರ ಪರಿಣಾಮದಬಗ್ಗೆ ಅಧ್ಯಯನ ನಡೆಸಿತು. ಇಪ್ಪತ್ತು ತಿಂಗಳ ಕಾಲದಲ್ಲಿ ಒಂದು ಹನಿ ವಿಷ ಬಳಸದೆ  ಇರುಳರು 400,0000 ಇಲಿಗಳನ್ನು ಹಿಡಿದು ಸುಮಾರು 12 ಟನ್ ಆಹಾರ ಧಾನ್ಯವನ್ನು ಇಲಿಗಳಿಂದ ರಕ್ಷಿಸಿದರು. ಆದರೆ ಭಾರತ ಸರ್ಕಾರ ಈಕ್ರಿಯಾಯೋಜನೆಯ ಕಾರ್ಯರೂಪಕ್ಕೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲೇಇಲ್ಲ. ಜೈವಿಕ ಇಲಿನಿಯಂತ್ರಣದ ತಲೆಬರಹದಡಿ ಈ ಕಾರ್ಯಯೋಜನೆಯನ್ನು ಕ್ರಿಯಾ ರೂಪಕ್ಕೆ ತಂದಿದ್ದರೆ ಲಕ್ಷಾಂತರ  ಬುಡಕಟ್ಟುಜನರಿಗೆ ಉದ್ಯೋಗವಾಗುತ್ತಿತ್ತು. ಇಲ್ಲೂ ಕೂಡ ದೊಡ್ಡ ರಾಸಾಯನಿಕ ಕಾರ್ಖಾನೆಯವರ ಕೈವಾಡವಿರುವುದು ಖೇದಕರ ಸಂಗತಿ ..ಇಲಿಪಾಷಾಣ ಎಷ್ಟು ಅಪಾಯಕಾರಿಯಾಗಿದ್ದರೇನು ಬಹುಮೊತ್ತದ ಹಣದ ಮುಂದೆ ವಿಷವೂ ಸಿಹಿಯಾಗುತ್ತದೆ!

ದೇಶದಲ್ಲಿ ಆರ್ಥಿಕವಾಗಿ ಲಾಭಗಳಿಸುತ್ತಿರುವ ಕೆಲವೇ  ಸಹಕಾರಿ ಸಂಘಗಳಲ್ಲಿ ಇರುಳರ ಸಂಘ ಕೂಡ ಒಂದು. ಅವರಲ್ಲಿರುವ ಪ್ರತಿಭೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇಲಿ ನಿಯಂತ್ರಣ, ಮೊಸಳೆ ಅಭಿವೃದ್ಧಿ ತಾಂತ್ರಿಕ ಸಹಾಯ ಇವೆಲ್ಲ ಇರುಳರ ಒಂದು ಮುಖವಷ್ಟೆ. Irula Tribal Women’s Welfare Society ಇರುಳರ ಇನ್ನೊಂದು ಅಂಗಸಂಸ್ಥೆ, ಇರುಳ ಹೆಣ್ಣು ಮಕ್ಕಳು ಗಿಡ ಮರಗಳನ್ನು ನೆಟ್ಟು ಬೆಳೆಸುವುದರಲ್ಲಿ ನಿಷ್ಣಾತರು. 1986 ರಿಂದ ಇವರು ಲಕ್ಷಕ್ಕೂ ಮೀರಿ ಗಿಡಗಳನ್ನು  ನೆಟ್ಟು ಬೆಳೆಸಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಭಾರತದೇಶದ ಅತೀಪ್ರಾಚೀನ ಕಡಿಮೆ ಹಣ ಸಂಪಾದಿಸುವ ಬುಡಕಟ್ಟು ಎಂದು ಗುರುತಿಸುವ ಇರುಳರ ಭವಿಷ್ಯ ಉಜ್ವಲವಾಗಿದೆ.

ಇರುಳರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಹೌದು, ಆದರೆ ಅವರ ಪ್ರಕೃತಿಯ ಜ್ಞಾನ ವಿಶ್ವವಿದ್ಯಾಲಯದ ಪ್ರೊಫ಼ೆಸರ್ ಗಳ ಜ್ಞಾನಕ್ಕಿಂತಲೂ ಹೆಚ್ಚಾಗಿದೆ. ಇದು ನಾವು ಯೋಚಿಸಲೇ ಬೇಕಾದ ಸಂಗತಿ.

ಮೂಲ ಲೇಖನ : ರೋಮುಲುಸ್ ವಿಟೇಕರ್
ಜಾನಕಿ ಲೆನಿನ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ .ಬಿ

Print Friendly, PDF & Email
Spread the love
error: Content is protected.