ಭೀಕರ ಆಕರ್ಷಣೆಗಳು : ಉರಗಪ್ರೇಮಿಗಳಿಂದ ಸಂತ್ರಸ್ತರವರೆಗೂ

ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲಾತಾಣದಲ್ಲಿ ಒಬ್ಬ ಉರಗಪ್ರೇಮಿಯ ಸಾವಿನ ಬಗ್ಗೆ ಓದಿದೆ. ದೈನಂದಿನ ಮಾಧ್ಯಮಗಳು “ಹಾವುಗಳು ಅವನ ಉರಗಪ್ರೇಮವನ್ನು ಅರ್ಥಮಾಡಿಕೊಳ್ಳಲೇ ಇಲ್ಲ ಬದಲಿಗೆ ಅವನ ಸಾವಿಗೆ ಕಾರಣವಾದವು” ಎಂದು ಬಿಂಬಿಸಿದವು. ಇದು ನನ್ನನ್ನು ಯೋಚನೆಗೀಡುಮಾಡಿತು, ಉರಗ ಪ್ರೇಮ ಎಂದರೇನು, ಕಾಳಿಂಗ ಸರ್ಪ ಅಥವಾ ಕೊಳಕುಮಂಡಲದಂಥ ವಿಷಕಾರಿ ಹಾವುಗಳನ್ನು ಎತ್ತಿಕೊಂಡು ಮುದ್ದು ಮಾಡುವುದೆ? ಖಂಡಿತ ಅಲ್ಲ. ಹಾವು ವಿಷಕಾರಿ ಜಂತು , ಹಾವಿನೊಂದಿಗಿರುವ ಪ್ರತಿಕ್ಷಣವೂ ಅಪಾಯಕಾರಿ, ಬೆಂಕಿಯ ಮುಂದೆ ಸುಡದ ಹಾಗೆ ಎಷ್ಟು ಮುತುವರ್ಜಿ ವಹಿಸುತ್ತೇವೆಯೋ, ಹಾವುಗಳೊಡನೆಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಮುತುವರ್ಜಿವಹಿಸುವುದು ನಮಗೆ ಕ್ಷೇಮಕರ. ಸ್ವಲ್ಪ ಎಡವಟ್ಟಾದರೂ ಹಾವನ್ನು ನಿರ್ವಹಿಸುವ ವ್ಯಕ್ತಿ ಹಾಗೂ ಸುತ್ತಲಿರುವ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಗುಜರಾತಿನ ಬರೋಡಾ ನಿವಾಸಿಯಾದ ಅಶ್ವಿನ್ ಡಿಸೆಂಬರ್ 3, 2013ರಂದು ಹಾವಿನ ಕಡಿತದಿಂದ ಸಾವನ್ನಪ್ಪಿದ. Indiansnakes.org ನ ಸಕ್ರಿಯ ಸದ್ದಸ್ಯನಾಗಿದ್ದ ನಾನು ತಕ್ಷಣ ಪ್ರಸಿದ್ಧಿಹೊಂದಲಾಗುವ ನೂರಾರು ಉರಗಪ್ರೇಮಿಗಳನ್ನು ಎಚ್ಚರಿಸುವುದು ನನ್ನ ಉದ್ದೇಶ. ಭಾರತದಲ್ಲಿ ಮೊದಲು ಹಾವುಗಳನ್ನು ಕಂಡೊಡನೆ ಹಾವಾಡಿಗರನ್ನು ಕರೆದು ತಮ್ಮ ಸುತ್ತಲಿರುವಹಾವುಗಳನ್ನು ಹಿಡಿಸುತ್ತಿದ್ದರು. ಮೊದಲು ಹಾವಾಡಿಗರ ಸಂಖ್ಯೆಯೂ ಕಡಿಮೆ ಇತ್ತು ಹಾಗು ಸಾಮಾಜಿಕ ಮಾಧ್ಯಮವೂ ಇರಲಿಲ್ಲ. ಬದಲಾದ ಸನ್ನಿವೇಶಗಳಿಂದ ಇಂದು ಒಬ್ಬ ವ್ಯಕ್ತಿಯು ವಿಷಕಾರಿ ಹಾವನ್ನು ಹಿಡಿದು ನಿಂತಿರುವ ಒಂದು ಛಾಯಾಚಿತ್ರವಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಹೀರೊ ಆಗಿಬಿಡುತ್ತಾರೆ ಹಾಗೂ ಜನರ ವಿಚಿತ್ರ ಪ್ರಶಂಸೆ ನುಡಿಗಳು ಇರುತ್ತವೆ.

ಹಾವಾಡಿಗರು ಕೆಲವೇ ಕೆಲ ಜನ ಇರುತ್ತಿದ್ದರಾದರೆ, ಉರಗಪ್ರೇಮಿಗಳು ಅಸಂಖ್ಯಾತರಿರುವರು. ಕೆಲವರು ತಾವು ಪರಿಣಿತ ಉರಗ ತಜ್ಞರು ಎಂದು ತೋರಿಸಹೋಗಿ ಜೀವಕಳೆದುಕೊಂಡಿದ್ದಾರೆ ಅಥವಾ ಹಾವು ಕಚ್ಚಿದ ಕೈ/ಕಾಲು ಹೀಮೊಟಾಕ್ಸಿನ್ ಪ್ರಭಾವಕ್ಕೆ ಕೊಳೆತು ಹೋಗಿದೆ.

ಇಂದು ಹಾವುಗಳಿಗೆ ಮಾನವೀಯ ಮೌಲ್ಯಗಳನ್ನು ಆರೋಪಿಸುವ ಉರಗಪ್ರೇಮಿಗಳಿಗೆ ಹಾವುಗಳನ್ನುಕಾಪಾಡುವ ಬಗ್ಗೆ ಸರಿಯಾದ ಮಾಹಿತಿನೀಡಬೇಕಿದೆ. ಯಾವ ಸಂದರ್ಭದಲ್ಲಿ ಮನುಷ್ಯ ಹಾವುಗಳನ್ನು ಕಾಪಾಡಲು ಸಜ್ಜಾಗಬೇಕೆನ್ನುವುದು ಬಲು ಮುಖ್ಯ. ಹೇಗೆ ಒಬ್ಬವೈದ್ಯ ಆಪರೇಷನ್ ಮಾಡುವುದನ್ನು ಅನಿವಾರ್ಯ ಎಂದು ತೀರ್ಮಾನಿಸುತ್ತಾನೋ ಹಾಗೆ ಹಾವನ್ನು ಹಿಡಿದು ಸೂಕ್ತ ಸ್ಥಳಕ್ಕೆ ಸಾಗಿಸಬೇಕು. ಮಾನವ ಜೀವಕ್ಕೆ ಯಾ ಹಾವಿನ ಜೀವಕ್ಕೆ ಅಪಾಯವಿದೆ ಎನ್ನುವ ಸಂದರ್ಭಗಳಲ್ಲಿ ಮಾತ್ರ ಹಾವುಗಳನ್ನು ಮನುಷ್ಯನ ಆವಾಸ ಸ್ಥಾನದಿಂದ ಹಿಡಿದು ಹಾವಿನ ಆವಾಸದಲ್ಲಿ ಬಿಡಬೇಕು.

ಈದಿನ ಪ್ರಾಣಿಪಕ್ಷಿಗಳೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳುವ ವಿಕೃತ ರೋಗಿಗಳಿಂದ ವನ್ಯಮೃಗಗಳಿಗೆ ಉರಗಗಳಿಗೆ ಮುಕ್ತಿಬೇಕಿದೆ. ಒಂದು ಅತ್ಯುತ್ತಮ ಛಾಯಾಚಿತ್ರಕ್ಕಾಗಿ ಹಾವುಗಳನ್ನು ಬಿಲಗಳಿಂದ ಹೊರಗೆಳೆದು ತಮಗೆ ಸುಂದರವೆನಿಸುವ ಹಿನ್ನೆಲೆಯಲ್ಲಿರಿಸಿ, ಕ್ಯಾಮೆರ ಸರಿಮಾಡಿಕೊಂಡು ಅಲ್ಲೇ ಹೋಗುತ್ತಿದ್ದ ಹಾವನ್ನು ಕಾಪಾಡಿದಂತೆ ಚಿತ್ರೀಕರಿಸಿಕೊಂಡು ಹಾವಿನ ರಕ್ಷಣೆ ಎಂದು ಕರೆಯುತ್ತಾರೆ. ಆದರಿಂದ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ವರ್ಚಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆ. (ಈ ರೀತಿ ಮಾಡುವುದು ಅಪ್ರಭುದ್ಧ ಹಾಗೂ ಹೊಟ್ಟೆತುಂಬಿರುವ ಲಕ್ಷಣಗಳು). ಈ ಸಾಮಾಜಿಕ ಮಾಧ್ಯಮದ ಕೆಚ್ಚೆದೆಯ ಕಲಿಗಳನ್ನು ಮಟ್ಟಹಾಕಲು ಕಾನೂನಿನ ಸದ್ಬಳಕೆಯಾಗಬೇಕು. ಕಾನೂನಿಲ್ಲದಿದ್ದರೆ ಕಾನೂನನ್ನು ರೂಪಿಸಬೇಕು. ಜನಸಾಮಾನ್ಯರು ಇಂಥ ಚಿತ್ರಗಳನ್ನು ಪ್ರೋತ್ಸಾಹಿಸುವ ಬದಲು ಅರಣ್ಯ ಇಲಾಖೆಗೆ ದೂರುನೀಡಿ ಇಂಥ ವಿಕೃತರನ್ನು ಜೀವಮುಖಿಯಾಗಿ ಪರಿವರ್ತಿಸಬೇಕು. ಮುಂದಿನ ದಿನಗಳಲ್ಲಿ ಇಂಥಚಿತ್ರಗಳು ನಮಗೆ ನೋಡಲು ಸಿಗಬಾರದು.

ಮೂಲ ಲೇಖನ: ಪ್ರಿಯಾಂಕಾ ಕದಮ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ

ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ