ಬೋಧಿ ವೃಕ್ಷದ ದಕ್ಷಿಣಾಯನ
“ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ│
ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ”││
ಅಶ್ವತ್ಥದ ಬೇರಿನಲ್ಲಿ ಬ್ರಹ್ಮನಿದ್ದಾನೆ, ಕಾಂಡದಲ್ಲಿ ವಿಷ್ಣುವಿದ್ದಾನೆ,
ಕವಲೊಡೆದ ಎಲೆತಳಿದ ಸಮುಚ್ಛಯ ರುದ್ರರೂಪವದು…
ವೃಕ್ಷರಾಜನ ವರ್ಣನೆ.
ಹಿಂದೂಗಳಿಗೂ ಬೌದ್ಧರಿಗೂ ಅತ್ಯಂತ ಪವಿತ್ರವಾದ ಮರಗಳಲ್ಲಿ ಅಶ್ವತ್ಥವೂ ಒಂದು.
ಸಂಸ್ಕೃತದಲ್ಲಿ: ಅಶ್ವತ್ಥ, ಪಿಪ್ಪಲ, ಬೋಧಿ, ಚಲ, ಕುಂಜರಾಕ್ಷಸ, ಚಲಪತ್ರ, ಅಚ್ಯುತಾವಾಸ, ಪವಿತ್ರಕ, ಶ್ರೀಮಾನ್, ಕ್ಷೀರದ್ರುಮ, ವಿಪ್ರ, ಮಾಂಗಲ್ಯ, ಶ್ಯಾಮಲ, ಗುಹ್ಯಪುಷ್ಪ, ಸತ್ಯ, ಕುಚಿದ್ರುಮ, ಧನುವೃಕ್ಷ, ಚೈತ್ಯದ್ರುಮ. ಕನ್ನಡದಲ್ಲಿ: ಅರಳಿ.
ಅರಳಿಮರ [Ficus religiosa] ಮೊರೇಸಿ [moraceae] ಕುಟುಂಬಕ್ಕೆ ಸೇರಿದೆ. ಕಾಡುಮರವಾಗಿ ಉತ್ತರ ಭಾರತದ ಹಿಮಾಲಯ ತಪ್ಪಲುಗಳ ಕಾಡುಗಳಲ್ಲಿ ಹಾಗೂ ಮಧ್ಯಭಾರತದಲ್ಲಿ ಕಂಡುಬರುತ್ತದೆ. ಇದರ ವರ್ಣತಂತುಗಳ ಸಂಖ್ಯೆ 2n=26. ಮರದ ಕಾಂಡ ಕೆಂಪುಮಿಶ್ರಿತ ಬೂದು ಬಣ್ಣಕ್ಕಿರುತ್ತದೆ. ಎಲೆಗಳಿಗೆ ದೊಡ್ಡ ತೊಟ್ಟುಗಳಿರುತ್ತವೆ. ಎಲೆಗಳು ಕೆಳಗೆ ಹೃದಯಾಕಾರಕ್ಕಿದ್ದು, ತುದಿಯಲ್ಲಿ ಉದ್ದ ಬಾಲದ ಆಕಾರವನ್ನು ಹೊಂದಿರುತ್ತದೆ, ಮರದ ಚಿಗುರೆಲೆಗಳು ಸುಂದರ ತಾಮ್ರ ವರ್ಣವಾಗಿರುತ್ತವೆ. ಎಳೆಯ ಅರಳಿ ಸಸಿಗಳು ಇತರ ಮರಗಳ ಮೇಲೆ ಹುಟ್ಟಿಕೊಂಡು ಕ್ರಮೇಣ ಬೇರೂರಿ ದೊಡ್ಡ ವೃಕ್ಷಗಳಾಗುತ್ತವೆ. ಕೋಟೆಗೋಡೆಗಳ ಮೇಲೂ ಬಂಡೆಸಂದುಗಳಲ್ಲೂ ಪ್ರಾಚೀನ ಸ್ಮಾರಕಗಳ ಮೇಲೂ ಬೆಳೆದಿರುವುದನ್ನು ನಾವು ಕಾಣಬಹುದು. ಪ್ರಾಚೀನ ಸ್ಮಾರಕ ಹಾಗೂ ಕಟ್ಟಡಗಳನ್ನು ಹಾಳು ಮಾಡಬಲ್ಲವು. ಅರಳಿಮರ ಇತರ ಮರಗಳ ಮೇಲೆ ಬೆಳೆದು ಆ ಮರವನ್ನು ತನ್ನ ಬೇರುಗಳಿಂದ ಬಿಗಿದು ಹಿಂಡಿ, ಆಧಾರ ಮರದ ಬೆಳವಣಿಗೆಯನ್ನು ತಡೆದು ಕೊನೆಗೆ ಆಧಾರ ತೆಗೆದುಕೊಂಡಿದ್ದ ಮರವನ್ನೇ ನಾಶಮಾಡಿ ತಾನು ಜಯಪ್ರದನಾಗಿ ಮೆಟ್ಟಿನಿಲ್ಲುತ್ತದೆ.
ಪಕ್ಷಿಗಳು ಹಣ್ಣುಗಳನ್ನು ತಿಂದು ಬೀಜಗಳನ್ನು ಹರಡುತ್ತವೆ. ಎಳೆಕಾಯಿಗಳನ್ನು ಹೋಳು ಮಾಡಿ ನೋಡಿದಾಗ ಗಂಡು, ಹೆಣ್ಣು ಹೂಗಳು ಕಂಡು ಬರುತ್ತವೆ. ಹಣ್ಣುಗಳು ಸಣ್ಣವು, 10-14mm ನಷ್ಟು ಗಾತ್ರದವು. ಮಾಗಿದಾಗ ಮರಗಳ ಕೆಳಗೆ ಸುವಾಸನೆ ಇರುತ್ತದೆ. ಮರವು ಬೃಹದಾಕಾದರಲ್ಲಿ ಭವ್ಯವಾಗಿ ಬೆಳೆಯುವುದರಿಂದ ಪ್ರಾಚೀನ ಸ್ಮಾರಕಗಳು, ಉತ್ತಮ ಕಟ್ಟಡಗಳು ಇರುವ ಹತ್ತಿರ ಬೆಳೆಯಲು ಯೋಗ್ಯವಲ್ಲ, ಕುಬ್ಜ (Bonsai) ಅರಳಿ ಮರಗಳನ್ನು ಅಲಂಕಾರಕ್ಕಾಗಿ ಬೆಳೆಸಿಕೊಳ್ಳುತ್ತಾರೆ.
ಉಪಯೋಗಗಳು
ಮರದ ತೂಕ ಘನ ಅಡಿಗೆ 15 ರಿಂದ 20 ಕೆ.ಜಿಗಳು. ಮರದ ರಸದಿಂದ ಕೆಳ ದರ್ಜೆಯ ರಬ್ಬರ್ ತಯಾರಿಸಲು ಸಾಧ್ಯ. ಗೋನೋರಿಯ, ಅಸ್ತಮಾ, ನಪುಂಸಕತೆ ನಿವಾರಣೆಗಳ ಚಿಕಿತ್ಸೆಗೆ ಔಷಧವಾಗಿ ಉಪಯೋಗವಾಗುತ್ತದೆ. ಮರದ ಎಲೆಗಳನ್ನು ಆಡು, ಕುರಿ, ದನಗಳು ತಿಂದರೆ ಅವು ಹೆಚ್ಚು ಹಾಲು ಕೊಡುತ್ತವೆಂಬ ನಂಬಿಕೆ ಇದೆ. ಇದು ಉತ್ತಮ ನೆರಳು ಕೊಡುವ ಮರ. ತೊಗಟೆಯ ರಸವನ್ನು
• ಕಜ್ಜಿಗೆ ಚಿಕಿತ್ಸೆಕೊಡಲು ಉಪಯೋಗಿಸುತ್ತಾರೆ.
• ಹಣ್ಣಿನ ರಸವನ್ನು ಕಫ಼ ಬರುವ ಕೆಮ್ಮನ್ನು ಗುಣಪಡಿಸಲು ಕುಡಿಯುತ್ತಾರೆ.
• ತೊಗಟೆಯ ಕಷಾಯ ಹುಣ್ಣುಗಳನ್ನು, ವ್ರಣಗಳನ್ನು ಗುಣಪಡಿಸುವ ಶಕ್ತಿ ಪಡೆದಿದೆ.
• ಮುಖ ಸೌಂದರ್ಯ ವರ್ಧಕಗಳಲ್ಲೂ ಇದನ್ನು ಬಳಸಬಹುದು.
• ಹೃದ್ರೋಗಗಳಲ್ಲಿ, ಯೋನಿದೋಷಗಳ ಪರಿಹಾರಕ್ಕಾಗಿ, ರಕ್ತ ಹಾಗೂ ಪಿತ್ತದೋಷಗಳ ಪರಿಹಾರಕ್ಕಾಗಿ ಬಳಸುತ್ತಾರೆ.
• ಹಣ್ಣುಗಳು ತಮ್ಮ ಬೆಳಿಯುವ ಸ್ಥಿತಿಗನುಗುಣವಾಗಿ ಒಗರು, ಹುಳಿ ಮತ್ತು ಸಿಹಿಯಾಗಿರುತ್ತದೆ.
• ರಸದಿಂದ ದೈಹಿಕಶ್ರಮ ನಿವಾರಣೆ.
• ವಾಂತಿ ನಿಲ್ಲಿಸಲು ನಾಲಿಗೆಯ ರುಚಿ, ಗ್ರಹಣ ಶಕ್ತಿ ಕೆಟ್ಟುಹೋದಾಗ ಉಪಯೋಗಿಸುತ್ತಾರೆ.
ಅರಳಿಮರ ದಿವ್ಯವೃಕ್ಷ, ಪಾಪ ನಿವಾರಿಣಿ, ಶ್ರೀಮನ್ನಾರಾಯಣನ ನಿವಾಸ ಬೋಧಿಸತ್ವ ಸ್ವರೂಪ, ಯತಿಗಳಿಗೆ ತೊಗಟೆಯನ್ನೀಯುತ್ತದೆ. ಹಕ್ಕಿಗಳಿಗೆ ಹಣ್ಣು ನೀಡುತ್ತದೆ, ಬಿಸಿಲಿನ ಬೇಗೆಯಲ್ಲಿ ಬಳಲಿದವರಿಗೆ ತಂಪನೀಯುತ್ತದೆ ಎಂಬ ಸಂಸ್ಕೃತ ಸುಭಾಷಿತವೊಂದಿದೆ.
ಅರಳಿಮರದ ಯಾತ್ರೆಯ ಒಂದನೆ ಅಧ್ಯಾಯ
ವೇದಕಾಲದಿಂದಲೂ ಪ್ರಶಂಸೆ ಪಡೆದು, ಇವತ್ತಿಗೂ ಅದನ್ನು ಉಳಿಸಿಕೊಂಡಿರುವ ಮರ ಅರಳಿ ಮರ. ಈ ಮರದ ಚೌಬೀನೆಯಿಂದ ಪಾತ್ರೆಗಳನ್ನು ಕಡೆಯುತ್ತಿದ್ದರೆಂಬ ಸಂಗತಿ ಋಗ್ವೇದದಿಂದ ತಿಳಿದುಬರುತ್ತದೆ. ಅರಳಿಮರದಲ್ಲಿ ಅಗ್ನಿ ಹುದುಗಿರುವುದನ್ನು ವೇದಾನುಯಾಯಿಗಳು ಕಂಡಿದ್ದರು. ಅಶ್ವತ್ಥ ಎಂಬ ಹೆಸರು ಅರಳಿ ಮರಕ್ಕೆ ಹೇಗೆ ಬಂತೆಂಬುದಕ್ಕೂ ತೈತ್ತಿರೀಯಾ ಬ್ರಾಹ್ಮಣದಲ್ಲಿ ಒಂದು ಸುಂದರವಾದ ಕಥೆಯಿದೆ.
“ಅಗ್ನಿರ್ದೇವೇಭ್ಯೋ ನಿಲಾಯತ ಅಶ್ವೋ ರೂಪಂ ಕೃತ್ವಾ│
ಸೋsಶ್ವತೇ ಸಂವತ್ಸರಮತಿಷ್ಠತ ತದಶ್ವತ್ಥಸ್ಯಾತ್ಥತ್ವಮ್”││
ಅಗ್ನಿ ತನ್ನನ್ನೇ ಅಶ್ವ(ಕುದುರೆ)ವಾಗಿ ರೂಪಾಂತರಿಸಿಕೊಂಡು ದೇವತೆಗಳಿಂದ ದೂರಹೋಗಿ ಒಂದು ವರ್ಷದ ಕಾಲ ಒಂದು ಮರದೊಳಗೆ ಅವಿತಿಟ್ಟುಕೊಂಡಿದ್ದನು ಹೀಗಾಗಿ ಯಾವ ಮರದಲ್ಲಿ ಅಗ್ನಿ ಅಶ್ವನಾಗಿ ಅವಿತಿಟ್ಟುಕೊಂಡ್ಡಿದ್ದನೋ ಆ ಮರ ಅಶ್ವತ್ಥವೆಂದು ಕರೆಯಲ್ಪಟ್ಟಿತು.
“ಹೇ ಅಗ್ನೇ│ ತ್ವದೀಯಾಃ ಆದ್ರಾಯೋನಯೋsಶ್ವತ್ಥ ವೃಕ್ಷಾದಿರೂಪಾಃ
ಅರ್ದ್ರಾಃ ಕಾರಣವಿಶೇಷಾಸ್ಸಂತಿ” ││
ಶಮೀವೃಕ್ಷದ ಮೇಲೆ ಅಶ್ವತ್ಥ ವೃಕ್ಷ ಬೆಳೆದು ಬೇರು ಬಿಟ್ಟುಕೊಂಡಿದ್ದರೆ, ಯಜ್ಞಕ್ಕೆ ಬೆಂಕಿಯನ್ನು ಉತ್ಪಾದಿಸಲು ಉಪಯೋಗಿಸುವ ಅರಣಿಗಳನ್ನು ಆ ಅಶ್ವತ್ಥ ಮರದಿಂದಲೇ ತಯಾರಿಸುತ್ತಿದ್ದರು. ಈ ಮರ ತನ್ನ ಜೀವನವನ್ನು ಬೇರೊಂದು ಮರದ ಮೇಲೆ ಪ್ರಾರಂಭಿಸುವುದು ಆಗಲೆ ಗೊತ್ತಿತ್ತು.
ಗಾಯಿತ್ರಿಂ ಅಸಿತ್ರಿಷ್ಟು ಅಸಿ” ಎಂದು ಮಂತ್ರೋಚ್ಛಾರಣೆ ಮಾಡುತ್ತ ಕಡೆಗೋಲನ್ನು ಅಧರಾರಣೆಯಲ್ಲಿಟ್ಟು ಕಡೆದು ಅಗ್ನಿಯನ್ನು ಒರಿಸಿ ಯಾಗಾಗ್ನಿಯಾಗಿ ಬಳಸುತ್ತಾರೆ. ಅರಳಿಮರ ಅಗ್ನಿಯ ನಿವಾಸ ಎಂದಿದ್ದರೆ ಹಾಗೆಯೆ ನವಗ್ರಹಗಳಲ್ಲಿ ಗುರು ಗ್ರಹವನ್ನು ಪ್ರತಿಪಾದಿಸುವುದು ಈ ಅರಳಿಯನ್ನೇ, ಅರಳಿ ತನ್ನ ಆಧಾರ ಮರವನ್ನು ನಾಶಮಾಡಿ, ಮೆಟ್ಟಿನಿಲ್ಲುವ ಗುಣಗಳನ್ನು ನೋಡಿ ಅಶ್ವತ್ಥವನ್ನು ಗೂಳಿಯ ಬಲಕ್ಕೂ ಶೌರ್ಯಕ್ಕೂ ಹೋಲಿಸಿದ್ದಾರೆ. ಈ ವಿನಾಶಕತ್ವದ ಕುರುಹಾಗಿ ಅಶ್ವತ್ಥವನ್ನು ವೈಭಾಧ ಎನ್ನುತ್ತಾರೆ.
ಅಥರ್ವಣ ವೇದದಲ್ಲಿ ಈ ಆಧಾರವನ್ನು ಹಿಡಿದು “ಓ ಅಶ್ವತ್ಥ │ ಎದುರಿಗಳನ್ನು ಅಳಿಸು” ಎಂದು ಪ್ರಾರ್ಥಿಸಿ ಯುದ್ದಕ್ಕೆ ಹೊರಡುವ ವಾಡಿಕೆಯಿತ್ತು.
“ಏತೇ ವೈ ತ್ರಯೋ ಭಕ್ಷಾ ರಾಜನ್ನೀತಿ…
ನ್ಯಗ್ರೋ ಧಸ್ಸಾವರೋಹಾಶ್ವ ಫಲಾನಿಚ ಉದುಂಬರಾಣ್ಯ
ಶ್ವತ್ಥಾನಿ ಪ್ಲಾಕ್ಷಾಣ್ಯಭಿಕ್ಷುಣುಯಾತ್ತಾನಿ ಭಕ್ಷ
ಯೇತ್ಸೋsಸ್ಯಸ್ಸೋ….. ಇವ ಹಿ ದೇವಾಃ│
ಮೇಲಿನ ಮಂತ್ರಗಳಲ್ಲಿ ತಿಳಿಸಿದ ಮರಗಳ ಮತ್ತು ಅದರ ಹಣ್ಣುಗಳ ಉಪಯೋಗವನ್ನು ತಿಳಿಸಿದೆ. ಯಜ್ಞಗಳಲ್ಲಿ ರಾಜನು ಇವುಗಳಿಂದ ಹಿಂಡಿದ ರಸವನ್ನು ತನ್ನ ಭಾಗವಾಗಿ ತೆಗೆದುಕೊಂಡು ಕುಡಿಯಬೇಕು ಎಂದೂ ಅನ್ಯಗ್ರೋಧವೃಕ್ಷದ ಬಿಳಿಲುಗಳನ್ನು ಹಿಂಡಿ ಜೊತೆಗೆ ಉದುಂಬರ, ಅಶ್ವತ್ಥ ಮತ್ತು ಪ್ಲಕ್ಷ ಹಣ್ಣುಗಳ ರಸದೊಂದಿಗೆ ಕುಡಿಯಬೇಕು ಇವು ರಾಜನಿಗೆ ಪೌರುಷ ಶಕ್ತಿ ಮತ್ತು ಉತ್ಸಾಹಗಳನ್ನು ನೀಡುತ್ತವೆಯಾದ್ದರಿಂದ ಇದು ಕ್ಷತ್ರಿಯನಿಗೆ ಸೂಕ್ತ ಆಹಾರ ಎಂದು ಅಥರ್ವಣ ವೇದದಲ್ಲಿದೆ.
ಋಗ್ವೇದದಲ್ಲಿ ಅಶ್ವತ್ಥವನ್ನು ಕ್ಷೇತ್ರ ಎಂದು ವಿವಿಧ ಪ್ರಾಣಿ ಪಕ್ಷಿಗಳಿಗೆ ಫಲಗಳಿಗೆ ಮತ್ತು ಆಶ್ರಯ ನೀಡಿದೆ ಎಂದು ಹೇಳುತ್ತದೆ. (ಋಗ್ವೇದ 1ನೇ ಮಂಡಲದ 164ನೇ ಸೂಕ್ತದ 20ನೇ ಮಾತ್ರ) ಬೌದ್ಧ ಮತದ ಉದಯದೊಂದಿಗೆ ಅಶ್ವತ್ಥ ಚರಿತ್ರೆಯ ಎರಡನೇ ಅಧ್ಯಾಯ ಆರಂಭವಾಗುತ್ತದೆ.
ಗೌತಮನು ಸಾಕ್ಷಾತ್ಕಾರ ಪಡೆದು ಬುದ್ದನಾದದ್ದು ಅಶ್ವತ್ಥ ಮರದಡಿಯಲ್ಲಿ. ಬೌದ್ದರಿಗೆ ಅಶ್ವತ್ಥ[ಬೋದಿಯಾಗಿ] ಒಂದು ಪವಿತ್ರ ವೃಕ್ಷವಾಯಿತು. ಬೋದಿಮರದ ಹೆಸರಿನಲ್ಲಿ ಬೌದ್ಧ ಮತ ಹುಟ್ಟಿತು. ಬುದ್ಧಗಯ ಕ್ಷೇತ್ರದಲ್ಲಿ ಅರಳಿಮರದ ಕೆಳಗೆ ಧ್ಯಾನಾಸಕ್ತನಾಗಿದ್ದಾಗ ಈ ಜಾಗದಲ್ಲಿ ಈಗ ಬೆಳೆಯುತ್ತಿರುವ ಮರ ಇತ್ತೀಚಿನದು. ಆದರೆ ಇದೇ ಬೋದಿ ವೃಕ್ಷದ ಅಡಿಯಲ್ಲಿಯೇ ಸಿದ್ದಾರ್ಥನು ತಪಸ್ಸು ಮಾಡಿದ್ದು ಎಂದು ಸಂಪ್ರದಾಯದ ಹೇಳಿಕೆಯಿದೆ.
ಅಶೋಕನ ಕಾಲದಲ್ಲಿ ಸೃಷ್ಟಿಗೊಂಡ ಬಾರಾಹುತ್ ಶಿಲ್ಪಗಳಲ್ಲಿ ಬುದ್ದನ ಪ್ರತಿಮೆ ಕಾಣದು. ಆಗಿನ ಬೌದ್ಧಿಕರಲ್ಲಿ ಆತನ ಪ್ರತಿಮೆಯನ್ನು ಪೂಜಿಸುವ ಸಂಪ್ರದಾಯವಿರಲಿಲ್ಲ. ಇ. ಬಿ. ಹ್ಯಾವೆಲ್ ಹೇಳುತ್ತಾರೆ “ ಆಗಿನ ವಾಸ್ತು ಶಿಲ್ಪಗಳೆಲ್ಲವೂ ಬೌದ್ಧಮಯ; ಆದರೆ ಬುದ್ದನಿಲ್ಲದ ಬೌದ್ದಮತ” ಬುದ್ದನು ದೈವಿಕ ಪುರುಷನೆಂದಾಗಲಿ ವಿರಕ್ತನೆಂದಾಗಲಿ ಪ್ರತಿಯಾ ರೂಪದಲ್ಲಿ ಪೂಜೆಗೊಳ್ಳುತ್ತಿದಿಲ್ಲ?. ಪೂಜೆಗೊಳ್ಳುತ್ತಿದ್ದ ವಸ್ತುಗಳೆಂದರೆ ಮತ ಧರ್ಮದ ಚಿಹ್ನೆಗಳು, ಪಾದುಕೆಗಳ ಪಡಿಯಚ್ಚು, ಬುದ್ದನ ಪ್ರತ್ಯಕ್ಷರೂಪಕ” ಬೋದಿಮರ” ಭಕ್ತಾದಿಗಳು ಬೋದಿಮರವನ್ನು ಪೂಜಿಸುತ್ತಿರುವ ದೃಶ್ಯಗಳನ್ನು ಅಪ್ಸರೆಯರು ಮರಕ್ಕೆ ವಸ್ತ್ರಾಲಂಕಾರ ಮಾಡುತ್ತಿರುವ ದೃಶ್ಯಗಳನ್ನು ಈ ಶಿಲ್ಪಗಳಲ್ಲಿ ಕಾಣುತ್ತೇವೆ.
ಹಿಮಾಲಯದ ತಪ್ಪಲಲ್ಲಿ ಹುಟ್ಟಿದ ಬೌದ್ದಮತ ಬೋದಿಮರದ ರೆಂಬೆಗಳಂತೆಯೇ ಎಲ್ಲಾ ದಿಕ್ಕುಗಳಿಗೂ ಚಾಚಿತು. ಅಶ್ವತ್ಥದ ತೌರು ಹಿಮಾಲಯದ ತಪ್ಪಲು ಪ್ರದೇಶವೆ. ಬೌದ್ಧ ಬಿಕ್ಷುಗಳು ಮತ ಪ್ರಚಾರಕ್ಕೆಂದು ಹೋದ ಜಾಗಗಳಿಗೆಲ್ಲಾ ಬೋದಿಯೂ ಅವರೊಂದಿಗೆ ಮೆರವಣಿಗೆ ಮಾಡಿಕೊಂಡು ಹೋಯಿತು. ಈ ದೃಶ್ಯವನ್ನು ಕಾಣಿಸುವ ಶಿಲ್ಪಗಳು ಭಾರತದ ನಾನಾ ಭಾಗಗಳಲ್ಲಿರುವ ಬೌದ್ಧ ಕಟ್ಟಡಗಳಲ್ಲಿ ದೊರೆತಿವೆ. ನಿಂತ ಸ್ಥಳಗಳಲ್ಲಿ ತಂದಿದ್ದ ಸಸಿಯನ್ನು ನೆಟ್ಟು ಬೆಳೆಸಿದರು, ಬೆಳೆದು ಮರವಾಯಿತು.
ಹಿಮಾಲಯದಿಂದ ಶ್ರೀಲಂಕದವರೆಗೂ, ಹಿಮಾಲಯದಿಂದ ಬರ್ಮ, ಸಿಂಗಪುರಗಳವರೆಗೂ ಅಶ್ವತ್ಥಮರ ಭಿಕ್ಷುಗಳು ಕೈಗೊಂಡ ದಕ್ಷಿಣಯಾತ್ರೆಯ ಕುರುಹಾಗಿ ನಿಂತಿದೆ. ಬೌದ್ದಯುಗಕ್ಕೆ ಮೊದಲು ಅರಳಿ ದಕ್ಷಿಣ ಭಾರತದೊಳಕ್ಕೆ ಕಾಲಿಟ್ಟಿರಲಿಲ್ಲ, ಅಷ್ಟೇಕೆ, ಅರಳಿ ಇಂದಿಗೂ ಈ ಭಾಗದಲ್ಲಿ ಊರ ಮರವಾಗಿಯೇ ಉಳಿದಿದೆ, ಕಾಡುಗಳಲ್ಲೆಲ್ಲೂ ದೊರೆಯದು.
ಆದರೆ ಅರಳಿಮರ ಸಹಸ್ರಾರು ವರ್ಷ ಬೆಳೆಯಬಲ್ಲದೆಂಬುದಕ್ಕೆ ಸಾಕ್ಷಿ ಶ್ರೀಲಂಕದ ಕ್ರಿ.ಪೂ 288 ರಲ್ಲಿ ಅಶೋಕ ಚಕ್ರವರ್ತಿ ಬೌದ್ಧಮತವನ್ನು ಇತರ ದೇಶಗಳಿಗೂ ಪ್ರಸಾರ ಮಾಡುತ್ತಿದ್ದಾಗ ಶ್ರಿಲಂಕಾಕ್ಕೆ ಕಳಿಸಿದ್ದ ಅರಳಿಮರ ಕ್ರಿ.ಶ. 1852 ರಲ್ಲೂ ಚೆನ್ನಾಗಿ ಬೆಳೆಯುತ್ತಿತ್ತು. ಅಲ್ ಬರೂನಿ (1030) ಕೂಡ ಈ ಅರಳಿಮರದ ಬಗ್ಗೆ ಉಲ್ಲೇಖಿಸಿದ್ದಾರೆ (ಅನೂರಾಧಪುರದ ಮಹಾ ಬೋಧಿವೃಕ್ಷ ಪಾಹಿಯನ್ (Fahian 399-414 AD) ಇದರ ಬಗ್ಗೆ ಬರೆದಿದ್ದಾರೆ. ಆಗ ಇದರ ವಯಸ್ಸು 2147 ವರ್ಷಗಳು ಅಮೇರಿಕದ ದೀರ್ಘಾಯುಷಿ ಮರಗಳನ್ನು ಬಿಟ್ಟರೆ [4000 ರಿಂದ 5000 ವರ್ಷಗಳು) ಈ ಮರ ಭಾರತದ ದೀರ್ಘಾಯುಷಿ ಮರಗಳಲ್ಲಿ ಒಂದು. ಮರದ ದೀರ್ಘಾಯುಷ್ಯದ ಗುಟ್ಟು ಮರಕ್ಕೆ ಜನರಿಂದ ಸಿಗುವ ರಕ್ಷಣೆ ಮತ್ತು ಪೂಜ್ಯ ಭಾವನೆಗಳು.
ಕಾಳಿಂಗಬೋಧಿ ಜಾತಕದಲ್ಲೂ ಅರಳಿಮರದ ಪ್ರಸಂಗ ಬರುತ್ತದೆ. ಆಗಿನ ಕಾಲದಲ್ಲಿ ಅರಳಿಮರಗಳನ್ನು ನೆಟ್ಟು ಭಿಕ್ಷುಗಳು ಅದರ ಹಣ್ಣುಗಳನ್ನು ಒಂದು ಪ್ರಮುಖ ಆಹಾರ ಪದಾರ್ಥವಾಗಿ ತಿನ್ನುವ ಪದ್ಧತಿ ಇತ್ತೆಂದು ಕಾಣುತ್ತದೆ. ಇಲ್ಲಿ ಮಹಾಬೋಧಿಯಿಂದಲೇ ಬೀಜಗಳನ್ನು ತಂದು ಚೇತನ ವನ ದ್ವಾರದಲ್ಲಿ ಬೋಧಿವೃಕ್ಷವನ್ನು ಬೆಳೆಸಿ ಹಣ್ಣುಗಳನ್ನು ತಿನ್ನಲು ಕಳಿಸಿಕೊಡಿ ಎಂದು ಹೇಳುವ ಪ್ರಸಂಗ ಬರುತ್ತದೆ.
ಮೂರನೆ ಅಧ್ಯಾಯ
ಬೌದ್ಧ ದಿಗ್ವಿಜಯ ಯಾತ್ರೆ ಮುಗಿದ ಬಳಿಕ ಹೊಸ ಚರಿತ್ರೆಯು ಆರಂಭವಾಗುತ್ತದೆ. ಅದೇ ಹಿಂದು ಮತ ಬೌದ್ಧರ ಬೋಧಿಯನ್ನು ಅಶ್ವತ್ಥ ಎಂಬ ಹೆಸರಿನಿಂದಲೇ ವಾಪಸು ಕರೆದುಕೊಂಡರು. ದಕ್ಷಿಣ ಭಾರತದ ನಾನಾ ಗುಡಿಗಳಲ್ಲಿ ಹೊಸಹೊಸ ಹೆಸರಿನಿಂದ ಹೊಸ ರೂಪಗಳು ಹುಟ್ಟಿಕೊಂಡವು ಅಶ್ವತ್ಥ- ಸಂಸ್ಕೃತ, ಅರಸು- ಮಲೆಯಾಳ, ಅರಳಿ, ಅರಣಿ-ಕನ್ನಡ, ಅತ್ತಸ-ತುಳು ಮರವನ್ನು ಪುನಃ ಸ್ವಾಗತಿಸಿಕೊಂಡಾಗ ಬೌದ್ಧರಲ್ಲಿ ಪ್ರಚಾರವಾಗಿದ್ದ ಕೆಲವು ಸಂಪ್ರದಾಯಗಳೂ ಅದರೊಂದಿಗೆ ಹೆಣೆದುಕೊಂಡು ಬಂದವು ಕಾಲಕ್ರಮೇಣ ಕೆಲವು-ಹಲವು ಮಾರ್ಪಾಡುಗಳನ್ನು ಒಳಗೊಂಡು ಹೊಸ ಸಂಪ್ರದಾಯಗಳಿಗೆ ನಾಂದಿಯಾಯಿತು. ಅಶ್ವತ್ಥ ಮರವೆಂದರೆ ಜನರಿಗೆ ಬಹಳ ಭಕ್ತಿ, ದೇವಸ್ಥಾನಗಳ ಹತ್ತಿರ ಇಲ್ಲವೇ ಊರಮಧ್ಯ, ಊರ ಬಾಗಿಲ ಬಳಿ ಅರಳಿಮರವನ್ನು ಬೆಳೆಸುತ್ತಾರೆ. ಮರಕ್ಕೆ ಕಟ್ಟೆ ಕಟ್ಟಿಸಿ ಗಣಪತಿಯಿಂದ-ನಾಗಪ್ರತಿಷ್ಠೆಯವರೆಗೆ ಮೂರ್ತಿಗಳನ್ನು ಸ್ಥಾಪಿಸಿ, ಪೂಜಿಸಿ, ಪ್ರದಕ್ಷಿಣೆ, ನಮಸ್ಕಾರ ಮೊದಲಾದ ವ್ರತಗಳೂ ಆಚರಣೆಗಳೂ ಆರಂಭವಾದವು.
ಸಂತಾನಾಭಿವೃದ್ದಿಗೂ ಅರಳಿಮರದ ಹರಕೆ ಮಾಡಿಕೊಂಡು ಅರಳಿಕಟ್ಟೆಯಲ್ಲಿ ನಾಗಪ್ರತಿಷ್ಟೆ ಮಾಡುತ್ತಾರೆ. ಮಕ್ಕಳಿಗೆ ಅಶ್ವತ್ಥ, ಅಶ್ವತ್ಥ ನಾರಾಯಣ ಎಂದು ಹೆಸರಿಡುವುದು ಬಹು ಸಾಮಾನ್ಯ. ಸಂತಾನಾಭಿವೃದ್ಧಿಗೂ ಅರಳಿಮರಕ್ಕೂ ಅಥರ್ವಣ ವೇದದಲ್ಲಿಯೇ ನಂಟು ಕಾಣುತ್ತದೆ. ಅರಳಿಮರವನ್ನು ಬೇವಿನ ಮರಕ್ಕೆ ವಿವಾಹ ಮಾಡಿಸುವ ಪದ್ದತಿಯನ್ನು ಇಂದಿಗೂ ಕಾಣಬಹುದು. ಶಾಸ್ತ್ರ ಪರಿಚಯವಿಲ್ಲದ ಜನಾಂಗಗಳಲ್ಲಿ ಕೂಡ ಮದುವೆಯ ಸಂದರ್ಭದಲ್ಲಿ ಅರಳಿ ಹಸಿಕೊಂಬೆಯನ್ನು ಚಪ್ಪರದ ನೆಲದಲ್ಲಿ ನೆಡುವ ರೂಡಿಯೋ, ಸಂಪ್ರದಾಯವೋ ಇಂದಿಗೂ ಜೀವಂತವಾಗಿದೆ.
ನಮ್ಮ ಭಗವದ್ಗೀತೆಯ, ಹದಿನೈದನೆಯ ಅಧ್ಯಾಯ (ಜ್ಞಾನ ಕಾಂಡ)ದಲ್ಲಿಯೂ ಅರಳಿಮರವನ್ನು ವೇದ ಋಷಿಗಳು ಈ ಮರ ಜಾತಿಯ ಹಿರಿಯಗಲವನ್ನು ಬಳಲುಗಳನ್ನು ಕಂಡು ಮರವನ್ನು ಸನಾತನವಾದದ್ದೆಂದೂ ಊರ್ದ್ವಮೂಲವಾದದ್ದೆಂದೂ ಕಲ್ಪಿಸಿಕೊಂಡು ಅದರೊಂದಿಗೆ ವಿಶ್ವ ಸಂಸಾರವನ್ನು ಹೋಲಿಸಿದ್ದಾರೆ.
ಬ್ರಹ್ಮ ಜಿಜ್ಞಾಸೆಯಲ್ಲಿ ಆಸಕ್ತರಾಗಿರುವವರಿಗೆ ಅರಳಿಯು ಸತ್ವವನ್ನು ಅರಿಯುವ ಸಂಕೇತವೂ ಸಾಧನಾವೂ ಆಗಿರುವಂತೆಯೇ ಜನಸಾಮಾನ್ಯರಿಗೆ ಜನ್ಮ ಸಾರ್ಥಕ್ಯದ ಕುರುಹಾಗಿದೆ.
ನಮ್ಮಲ್ಲಿ ಪೂಜ್ಯಭಾವನೆಗಳು ಅರಳಿಮರವನ್ನು ಕಡಿಯುವುದಾಗಲೀ ಅಥವಾ ರೆಂಬೆಕೊಂಬೆಗಳನ್ನು ಕತ್ತರಿಸಿವುದಾಗಲೀ ಇವನ್ನು ಹಿಂದೂ ಮತ್ತು ಬೌದ್ಧ ಸಂಪ್ರದಾಯಗಳಿರುವ ಕುಟುಂಬಗಳು ಮಾಡಲಾರವು. ಇದನ್ನು ಮಾಹಾಪಾತಕದಂತೆ ಕಾಣಲಾಗುತ್ತದೆ. ಎಷ್ಟೋ ಜೀವಿಗಳು ಅರಳಿಮರವನ್ನು ಅವಲಂಬಿಸಿರುವುದರಿಂದ ನೆಟ್ಟು ಬೆಳೆಸುವುದೇ ಪುಣ್ಯದ ಕೆಲಸವೆಂದು, ಬೆಳೆದ ಮರಕ್ಕೆ ಪ್ರತಿಷ್ಟೆ ಮಾಡಿ ಕಟ್ಟೆಯನ್ನು ಕಟ್ಟಿ ನಮ್ಮ ಜೀವನಗಳಲ್ಲಿ ತಮ್ಮ ಸ್ವಧರ್ಮ ದೃಷ್ಟಿಯಲ್ಲಿ ಸರಿಯೆಂದು, ಪ್ರೇರಿತವಾದ ಯಾವುದೋ ಒಂದು ಉದ್ದೇಶವನ್ನು ಕಂಡುಕೊಂಡು ಅದನ್ನೇ ಋಣ ತೀರಿಸುವ ಕರ್ತವ್ಯವೆಂದು, ಸಾಧನೆಯೆಂದು, ಎಷ್ಟು ಮಹಾನುಭಾವರು… ಇಂಥವರ ಸತತವಾದ ನಿಷ್ಟೆಯಿಂದಲೇ, ಬೀದಿಗೊಂದು, ಊರಿಗೊಂದು, ಅರಳಿಕಟ್ಟೆ ತಲೆಯೆತ್ತಿದೆ. ಬೇಸಿಗೆಯ ತಾಪದಿಂದ ಪಥಿಕರು ದಣಿವಾರಿಸಿಕೊಳ್ಳಲು ಅರಳಿಕಟ್ಟೆಯ ಮೇಲೆ ಕುಳಿತಾಗ ಅದರ ಕೆಳಗೆ ಹೆಚ್ಚಿನ ಸಾಂದ್ರತೆಯಲ್ಲಿರುವ ಪ್ರಾಣವಾಯು ಆಮ್ಲಜನಕ ಮತ್ತು ತಂಪಾದ ನೆರಳಿನಿಂದ ಆಹ್ಲಾದಗೊಳ್ಳುತ್ತಾರೆ. ಮೈಮನಗಳಲ್ಲಿ ಹೊಸ ಚೈತನ್ಯದ ಸಂಚಲನವಾಗುತ್ತದೆ.
ಅರಳಿ ಬರಿಯ ಮರವಲ್ಲ, ಕಟ್ಟೆ ಬರಿಯ ಕಟ್ಟೆಯಲ್ಲ ಇವೆರಡೂ ಜನಜೀವನದ ಒಂದು ಅವಿಭಾಜ್ಯ ಅಂಗ. ಹಳ್ಳಿಯ ಸಾರ್ವಜನಿಕ ಸಮಾರಂಭಗಳು ಮರದಡಿಯಲ್ಲಿ ನಡೆಯುತ್ತವೆ, ಪಂಚಾಯಿತಿಗಳಿಗೆ ಅರಳಿಮರ ಛಾವಣಿ, ನೆಲಹಾಸು, ಮದುವೆಗಳಿಗೆ, ಉಪನಯನಗಳಿಗೆ ಪ್ರಶಸ್ತವಾದ ಪವಿತ್ರವಾದ ಕಲ್ಯಾಣ ಮಂಟಪ, ಪ್ರವಾಸಿಗಳಿಗೂ ಯಾತ್ರಾರ್ಥಿಗಳಿಗೂ ಧರ್ಮಛತ್ರ. ಮಕ್ಕಳ ಆಟ-ಪಾಠಗಳಿಗೆ ಶಾಲೆ, ಹಿರಿಯರ ವಿಚಾರವಿನಿಮಯಕ್ಕೂ ಆಶ್ರಯ, ಬೀದಿಮಾತಿನ ಕಾಡುಹರಟೆಗೂ ಕೀಟಲೆ ಕೋಟಲೆಗಳಿಗೂ ಮಾತೃಸ್ಥಾನವೂ, ಸೋಮಾರಿಗಳಿಗೆ ಸುಪತ್ತಿಗೆಯಾಗಿ ಜೂಜಿಗೆ ಜನ್ಮಭೂಮಿಯಾಗಿ ಪರಿವರ್ತನೆಯಾಗಿದೆ.
ಅರಳಿ ಚರಿತ್ರೆಯ ಅನುಬಂಧವಾಗಿ ಇನ್ನೊಂದು ಸಂಗತಿಯನ್ನು ತಿಳಿಯಬಹುದು ಪ್ರಾಚಿನ ನಾಗರಿಕತೆಯೆಂದು ಪ್ರಸಿದ್ದವಾಗಿರುವ ಹರಪ್ಪ (ಸಿಂಧು ನಾಗರಿಕತೆ) ನಿವೇಶನದಿಂದ ತೋಡಿ ತೆಗೆದ ವಸ್ತುಗಳಲ್ಲಿ ಕೆಲವು ಮೊಹರುಗಳೂ ದೊರೆತಿವೆ. ಅವುಗಳಲ್ಲಿ ಕಾಣುವ ಲಿಪಿಯು ಇನ್ನು ಗೌಪ್ಯವಾಗಿಯೇ ಉಳಿದಿರುವುದರ ಜೊತೆಗೆ ಕೆಲವು ಮೊಹರುಗಳಲ್ಲಿ ಕಾಣಸಿಗುವ ಚಿತ್ರಗಳನ್ನು ಕುರಿತು ಏಕಾಭಿಪ್ರಾಯವಿಲ್ಲ. ಈ ನಾಗರೀಕತೆಯು ವೇದಕಾಲಕ್ಕೂ ಪೂರ್ವವೇ? ವೇದಗಳು ಸಮಕಾಲಿನವೇ? ವೇದ ಕಾಲದಿಂದ ಈಚಿನದೇ ಎಂಬ ವಿಷಯದಲ್ಲೂ ಬೇಕಾದಷ್ಟು ಊಹಾಪೋಹಗಳು ಬೆಳೆಯುತ್ತಿವೆ ಹೊರತು ಖಚಿತ ಅಭಿಪ್ರಾಯವಿಲ್ಲ.
ಈ ವಾದ ವಿವಾದ ಭೂಮಿಯಲ್ಲಿ ಎರಡು, ಮೂರು ಮೊಹರುಗಳ ಮೇಲೆ ಯಾವುದೂ ಗಿಡದ ಎಲೆಗಳ ಚಿತ್ರಣಗೊಂಡಿವೆ. ಹರಪ್ಪ ಸಂಶೋದನೆಗೆ ನಾಂದಿಕರ್ತರಾದ ಸರ್ ಜಾನ್ ಮಾರ್ಷಲ್ ಈ ಚಿತ್ರವನ್ನು ಅರಳಿ ಎಲೆಗಳೊಡನೆ ಹೋಲಿಸಿದ್ದಾರೆ. ಅರಳಿ ವೇದ ಸಂಸ್ಕೃತಿಗೂ ಇದ್ದ ಸಂಬಂಧವನ್ನು ಈ ಮೋಹರುಗಳಿಗೆ ಅನ್ವಯಿಸಿದ್ದಾರೆ.
ಮಾರ್ಷಲ್ ರ ನಿರ್ಣಯವನ್ನು ಅನೇಕರು ಒಪ್ಪಿಕೊಂಡಿದ್ದರು ಕೆಲವರಿಗೆ ಸಂದೇಹ. ಹರಪ್ಪದ ಜನಾಂಗ ವೇದ ಸಂಸ್ಕೃತಿಯನ್ನು ಅವಲಂಬಿಸಿದ್ದಿತು ಎಂಬ ತೀರ್ಪಿನ ಹಿನ್ನೆಲೆಯೆಂದು ಮೊಹರಿನ ಎಲೆಗಳು ಅರಳಿಯದಾಗಿರಬೇಕು ಎಂದು ಭಾವಿಸುತ್ತದೆ. ಇಲ್ಲಿ ಶಿಲ್ಪಿಯ ಕಲ್ಪನೆಯ ಎಲೆಯಾಗಿರಬಹುದಲ್ಲ ಎಂದು ಸಂದೇಹದವರ ಮಾತು.
ವ್ಯಕ್ತಿ ನಾಮ: ಅಶ್ವತ್ಥ, ಅಶ್ವತ್ಥ ನಾರಾಯಣ. ಅಶ್ವತ್ಥ ನರಸಿಂಹ: ಮುತ್ತಗಿಯಲ್ಲಿ ಅಶ್ವತ್ಥ ನರಸಿಂಹ ದೇವಾಲಯವಿದೆ. ವಿಧುರಾಶ್ವತ್ಥ. ಊರು – ಅರಳಿಕೆರೆ, ಅರಳಿಗಟ್ಟ, ಅರಳೂರು ಇದರಿಂದಲೇ ಐತರೇಯ ಬ್ರಾಹ್ಮಣದಲ್ಲಿ “ಯದಶ್ವತ್ತದ್ದ ಸಾಮ್ರಾಜ್ಯಂ ವಾ ಏತದ್ ವನಸ್ವತೀನಾಂ” ಎಂದಿದ್ದಾರೆ ಅಶ್ವತ್ಥ ಮರಗಳ ಚಕ್ರವರ್ತಿ
ಲೇಖನ: ಅಲೋಕ ಬಲ್ಲಾಳಾ
ಚಿತ್ರದುರ್ಗ ಜಿಲ್ಲೆ