ವನದಾಳದ ಮಾತು – ಮಲೆನಾಡಿನ ಚಿಟ್ಟೆಗಳು

ವನದಾಳದ ಮಾತು – ಮಲೆನಾಡಿನ ಚಿಟ್ಟೆಗಳು

ಸಂತೋಷ ಹಟ್ಟಿರವರು ಮೂಲತಃ ಬಿಜಾಪುರದವರು, ಹುಟ್ಟಿ ಬೆಳೆದದ್ದು ಶಿರಕನಹಳ್ಳಿ. ಅರಣ್ಯ ಪ್ರದೇಶವನ್ನೇ ಹೊಂದಿರದ ಪ್ರದೇಶದಿಂದ ಬಂದು, ಪಶ್ಚಿಮ ಘಟ್ಟಗಳ ಕೊಡಗಿನಲ್ಲಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಮೊದಮೊದಲು ದಟ್ಟಡವಿಯನ್ನು ಕಂಡು ಬೇಸರವಾಗುತ್ತಿತ್ತು. ನಂತರ ಚಿಟ್ಟೆಗಳ ಬಗ್ಗೆ ಮತ್ತು ಅರಣ್ಯದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದಂತೆ ಅರಣ್ಯ ಇಷ್ಟವಾಗತೊಡಗಿತು. ಐದು ವರ್ಷದಿಂದ ಸೇವೆ ಸಲ್ಲಿಸುತಿದ್ದು, ಚಿಟ್ಟೆ ವೀಕ್ಷಣೆ ಹಾಗೂ ದಾಖಲೀಕರಣ ಮಾಡುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ಮುಂದೆ ಚಿಟ್ಟೆಗಳ ಬಗ್ಗೆ ಇನ್ನೂ ಹೆಚ್ಚಿನ ದಾಖಲೀಕರಣ ಹಾಗೂ ಸಂಶೋಧನೆ ಮಾಡುವ ಯೋಚನೆ ಇದೆ.

ಮಲೆನಾಡಿನ ಚಿಟ್ಟೆಗಳು

ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಭಾರತದಲ್ಲಿ ಬರುವ ಪಶ್ಚಿಮಘಟ್ಟಗಳು, ಆಗಾಧ ಪ್ರಾಣಿಸಂಪತ್ತು ಮತ್ತು ಸಸ್ಯ ಸಂಪತ್ತಿನ ಆವಾಸ ಸ್ಥಾನವಾಗಿದೆ. ಇಂತಹ ಜೀವವೈವಿಧ್ಯತೆಯ ಆವಾಸ ಸ್ಥಾನದಲ್ಲೇ ನಮ್ಮ ವೃತ್ತಿಯ ಪ್ರಯಾಣ ಶುರುವಾಯಿತು. ಗಸ್ತಿನ ಸಮಯದಲ್ಲಿ ನಾನಾ ಬಗೆಯ ಹಾವು, ಕಪ್ಪೆ, ಕೀಟ ಮತ್ತು ಪಕ್ಷಿಗಳನ್ನು ಕಾಣುತ್ತಿದ್ದೆವು, ಅದರಲ್ಲಿ ಹಾವುಗಳನ್ನು ಕಂಡು ಭಯಪಡುತ್ತಿದ್ದ ನಾವು, ಚಿಟ್ಟೆ, ಪಕ್ಷಿಗಳನ್ನು ಕಂಡು ಸಂತೋಷ ಪಡುತ್ತಿದ್ದೆವು. ಇಲ್ಲಿನ ಮಳೆ ಮತ್ತು ಜಿಗಣೆ ಕಡಿತ ಒಂದು ಹೊಸ ಅನುಭವ. ಹೀಗೆ ಮುಂದುವರೆಯುತ್ತಾ ಬಂದಂತೆ ಕಾಡು ಮನಸ್ಸಿಗೆ ಹತ್ತಿರವಾಗಲಾರಂಭಿಸಿತು. ಒಮ್ಮೆ ಗಸ್ತು ತಿರುಗುವ ಸಮಯದಲ್ಲಿ ನದಿಯ ಪಕ್ಕದಲ್ಲಿ ಆಕರ್ಷಕ ಚಿಟ್ಟೆಗಳ ಗುಂಪೊಂದು ಕಂಡು ಆಶ್ಚರ್ಯವಾಯಿತು. ಒಂದು ಸ್ಥಳದಲ್ಲಿ ಅಷ್ಟೊಂದು ಚಿಟ್ಟೆಗಳನ್ನು ಕಂಡು ಕುತೂಹಲದಿಂದ ವೀಕ್ಷಿಸಿದಾಗ ಅದರಲ್ಲಿಯೇ ಅತ್ಯಾಕರ್ಷಕವಾಗಿ ಕಾಣುವ ಹಸಿರು ಬಣ್ಣದ ಚಿಟ್ಟೆಯೊಂದು ಕಂಡಿತು. ಇದು ನಮಗೆ ಚಿಟ್ಟೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಪ್ರೇರಣೆ ನೀಡಿದ ಕ್ಷಣ. ಅಷ್ಟೊಂದು ಸುಂದರವಾಗಿತ್ತು ಆ ಚಿಟ್ಟೆ (ಪಚ್ಚ ನವಿಲು).ಇಲಾಖೆಯ ಕ್ಯಾಮೆರಾದಲ್ಲಿ ಚಿಟ್ಟೆಯ ಚಿತ್ರವನ್ನು ಸೆರೆಹಿಡಿದು, ಅದರ ಹೆಸರು ಮತ್ತು ಸ್ವಭಾವದ ಬಗ್ಗೆ ಅನುಭವಗಳಿಂದ ತಿಳಿದ ಮೇಲೆ, ಚಿಟ್ಟೆಯ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಉತ್ಸುಕನಾದೆ. ನಂತರ ಗಸ್ತಿಗೆ ಹೋಗುವಾಗ ನಮಗೆ ಸಾಮಾನ್ಯವಾಗಿ ಸಿಗುವ ಚಿಟ್ಟೆಯ ಬಗ್ಗೆ ಮಾಹಿತಿಯನ್ನು ಅನುಭವಿಗಳಿಂದ ಮತ್ತು ಅಂತರ್ಜಾಲದಿಂದ ತಿಳಿಯುತ್ತಾ ಬಂದೆವು.

ರಾತ್ರಿ ಹೊತ್ತು ವಿದ್ಯುತ್ ದೀಪದ ಬಳಿ ಬರುವ ಪತಂಗಗಳನ್ನು ಚಿಟ್ಟೆಯೆಂದು ತಿಳಿದಿದ್ದೆ. ಆದರೆ ನಂತರ ಅದರ ಬಗ್ಗೆ ತಿಳಿದುಕೊಳ್ಳುತ್ತ ಅದು ಚಿಟ್ಟೆಯಲ್ಲ ಅವು ಪತಂಗಗಳೆಂದು.  ಸಾಮಾನ್ಯವಾಗಿ ಚಿಟ್ಟೆಗಳು ಹಗಲಿನಲ್ಲಿ, ಪತಂಗಗಳು ರಾತ್ರಿ ವೇಳೆಯಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತವೆ. ವಿಶ್ರಾಂತಿಯಲ್ಲಿರುವಾಗ ಚಿಟ್ಟೆಗಳು ರೆಕ್ಕೆಯನ್ನು ಮುಚ್ಚಿಕೊಂಡಿರುತ್ತವೆ, ಪತಂಗಗಳು ರೆಕ್ಕೆಯನ್ನು ಹರಡಿಕೊಂಡಿರುತ್ತವೆ. ದಿನ ಕಳೆದಂತೆ ಬೆಳಗಿನ ಝಾವ ಹಾಗೂ ಸಂಜೆ ವೇಳೆಯಲ್ಲಿ ಪತಂಗಗಳಂತೆ ಕಾಣಸಿಗುವ ಸುಂದರವಾದ ಬಣ್ಣಗಳಿಂದ ಕೂಡಿದ ಜಿಗಿ ಚಿಟ್ಟೆ ಹಾಗೂ ಚೇಣಗಳು. ಇವುಗಳನ್ನು ಪತಂಗಗಳು ಮತ್ತು ಚಿಟ್ಟೆಗಳ ನಡುವಿನ ಕೊಂಡಿ ಎನ್ನುತ್ತಾರೆ. ನಂತರ ದಿನಗಳಲ್ಲಿ ಚಿಟ್ಟೆಗಳ ಬಗ್ಗೆ ತಿಳಿದು ಕೊಳ್ಳುತ್ತಾ ಸಾಮನ್ಯವಾಗಿ ಸಿಗುವ Common Crow, Great Eggfly, Common Castor ಇತ್ಯಾದಿ ಹಿಡಿದು ಅತಿ ಅಪರೂಪದ Blue nawab, Abberant oakblue, Purple slotted flitter, Golden flitter ಚಿಟ್ಟೆಗಳ ಛಾಯಾ ಚಿತ್ರವನ್ನು ಸೆರೆಹಿಡಿಯುತ್ತಾ.

ಚಿಟ್ಟೆಗಳ  ವಂಶಾಭಿವೃದ್ಧಿ ಪ್ರಕ್ರಿಯೆಯು ನಾಲ್ಕು ಹಂತದಲ್ಲಿ ನಡೆಯುತ್ತದೆ. ನಿರ್ದಿಷ್ಟ ಜಾತಿಯು ಚಿಟ್ಟೆಯು ನಿರ್ದಿಷ್ಟ ಸಸ್ಯದ ಮೇಲೆ ಮೊಟ್ಟೆಯನ್ನಿಟ್ಟು ಅದರಿಂದ ಹೊರ ಬಂದ ಕಂಬಳಿ ಹುಳುಗಳು ಅತಿಥೇಯ ಸಸ್ಯದ ಎಲೆಗಳನ್ನು ತಿಂದುನಂತರ ಕೋಶ ರಚಿಸಿ,ಕೊನೆಯಲ್ಲಿ ವಂಶಾಭಿವೃದ್ಧಿಗೋಸ್ಕರವೆ ಆಕರ್ಷಕ ಚಿಟ್ಟೆಯಾಗಿ ರೂಪುಗೊಳ್ಳುತ್ತದೆ. ಕರ್ನಾಟಕದಲ್ಲಿ ಐದು ಕುಟುಂಬಗಳಾದ

• ಜಿಗಿ ಚಿಟ್ಟೆ (Hesperiidae)
• ನೀಲಿ ಚಿಟ್ಟೆ(Lycaenidae)
• ಅಂಟು ಪಾದದ ಚಿಟ್ಟೆ (Nymphalidae)
• ಬಾಲದ ಚಿಟ್ಟೆ (Papilionidae)
• ಬಿಳಿ ಮತ್ತು ಹಳದಿ ಚಿಟ್ಟೆ (Pieridae)

ಕುಟುಂಬಕ್ಕೆ ಸೇರಿರುವ ಸುಮಾರು 336 ಚಿಟ್ಟೆಗಳನ್ನು ಕಾಣಬಹುದು.

ಚಿಟ್ಟೆಗಳು ಆಹಾರ ಸರಪಳಿಯ ಭಾಗವಾಗಿದ್ದು, ಇವುಗಳು ಸಸ್ಯಗಳ ಪರಾಗಸ್ಪರ್ಶ ಮಾಡಿಕೊಳ್ಳಲು ಸಹಾಯಕವಾಗಿವೆ ಮತ್ತು ಸಸ್ಯಗಳ ಇರುವಿಕೆಯ ಸೂಚಕವಾಗಿವೆ. ಎಲ್ಲದಕ್ಕೂ ಮೂಲವಾಗಿರುವ ಅರಣ್ಯ ಪ್ರದೇಶವು ಕ್ಷೀಣಿಸುತ್ತಿರುವುದು ತುಂಬಾ ದುಃಖಕರ ವಿಷಯವಾಗಿದೆ. ಈಗಿರುವ ಅರಣ್ಯವನ್ನಾದರು ಉಳಿಸಿ ಜೀವವೈವಿಧ್ಯತೆಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಚಿತ್ರ – ಲೇಖನ: ಸಂತೋಷ ಹಟ್ಟಿ

Print Friendly, PDF & Email
Spread the love
error: Content is protected.