ಪ್ರಕೃತಿ ಬಿಂಬ

©ವಿಪಿನ್ ಬಾಳಿಗಾ, ಕೊಡಗು, ಕರ್ನಾಟಕ
ಪೊದೆಕಪ್ಪೆಗಳಾದ ನಾವು ಹೆಸರೇ ಹೇಳುವಂತೆ ಪಶ್ಚಿಮಘಟ್ಟದ ಹಾಗು ಈಶಾನ್ಯ ಕಾಡಿನಪೊದೆಗಳಲ್ಲಿ ಕಂಡುಬರುತ್ತೇವೆ. ನಮ್ಮ ಸಂತತಿಯು ಬಲುವಿರಳ. ನಮ್ಮಲ್ಲಿನ ಪ್ರತಿ ಪ್ರಭೇದವು ಬೌಗೋಳಿಕವಾಗಿ ಸೀಮಿತವಾಗಿವೆ. ನಾವುಬದುಕಲು, ಆಹಾರಪಡೆಯಲು, ವಿರಮಿಸಲು, ಸಂತತಿಬೆಳೆಸಲು, ಕಾಡಿನ ಪೊದೆಗಳು ತುಂಬಾ ಅವಶ್ಯ. ಪರಿಸರದಲ್ಲಿ ನಮ್ಮ ಇರುವಿಕೆಯು ಪರಿಸರದ ಸಮತೋಲನವನ್ನು ಸೂಚಿಸುತ್ತದೆ.

©ವಿಪಿನ್ ಬಾಳಿಗಾ, ಕೊಡಗು, ಕರ್ನಾಟಕ
ಬೆಳೆಗಳಿಗೆ ಮಾರಕವಾಗಿರುವ ಕ್ರಿಮಿ. ಕೀಟಗಳನ್ನು ತಿಂದು ನಾವು ಬೆಳೆಗಳನ್ನು ಹಲವಾರುರೋಗ-ರುಜಿನಗಳಿಂದ ಪಾರುಮಾಡುತ್ತಿದ್ದೇವೆ. ವಿಪರ್ಯಾಸವೆಂದರೆ ಮಾನವರು ಸಿಂಪಡಿಸುತ್ತಿರುವ ಕ್ರಿಮಿನಾಶಕಗಳು ನಮ್ಮನ್ನು ಅಳಿವಿನ ಅಂಚಿಗೆ ದೂಡುತ್ತಿವೆ.

©ವಿಪಿನ್ ಬಾಳಿಗಾ, ಕೊಡಗು, ಕರ್ನಾಟಕ
ಮಾನವರು ಕಾಡಿನ ಪೊದೆಯನ್ನು ಕಡಿದಾಗಲೆಲ್ಲ ನಾವು ನಮ್ಮ ಆವಾಸವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮನೆಲೆ ಕಿರಿದಾಗುತ್ತಿದೆ. ನಮ್ಮ ಮೊಟ್ಟೆ-ಮರಿಗಳಿಗೆ ಆಸರೆ ಒದಗಿಸಲಾಗದೆ, ಅವುಗಳು ಬಿಸಿಲಿನ ಧಗೆ ತಾಳಲಾರದೆ, ನಶಿಸಿ ಹೋಗುತ್ತಿವೆ. ಉಳಿದವು ಹಕ್ಕಿಗಳಿಗೆ ಆಹಾರವಾಗುತ್ತಿವೆ. ಹೀಗೇ ಮುಂದುವರಿದರೆ ನಮ್ಮ ಸಂತತಿಯೇ ಭೂಮಿಯಿಂದ ಕಣ್ಮರೆಯಾಗುವ ಕಾಲ ಬಹಳ ದೂರವಿಲ್ಲ.

©ವಿಪಿನ್ ಬಾಳಿಗಾ, ಅಂಬೊಲಿ, ಮಹಾರಾಷ್ಟ್ರ
ಮುಂಗಾರು ದುರ್ಬಲವಾಗುತ್ತಿದೆ. ಮಳೆಯು ಸರಿಯಾದ ಸಮಯದಲ್ಲಿ ಬಾರದಂತಾಗಿದೆ, ಬಂದರೂ ಯಾವುದಕ್ಕೂ ಸಾಲದಂತಾಗಿದೆ. ಮಳೆಗಾಲವು ಬೇಸಿಗೆಯಂತಾಗುತ್ತಿದೆ. ಹೆಚ್ಚು ಉಷ್ಣಾಂಶವಿದ್ದರೆ ನಮ್ಮ ತಳಿಗಳನ್ನು ನಾವು ವೃದ್ಧಿಸಲು ಸಾಧ್ಯವಾಗುವುದಿಲ್ಲ. ನಾವು ಮೊಟ್ಟೆಗಳನ್ನು ರಕ್ಷಿಸಲು ತೇವಾಂಶದ ಪದರದಲ್ಲಿಡುತ್ತೇವಾದರೂ, ಅದು ಒಂದೆರಡು ದಿನದಲ್ಲಿ ಒಣಗಿ ಹೋಗುತ್ತದೆ. ಹಬೆಯನ್ನು ತಾಳದೆ ಗೊದಮಟ್ಟೆಗಳು ಸಾಯುತ್ತವೆ. ಇವೆಲ್ಲಾ ಸವಾಲುಗಳಿಗೆ ಸಿಲುಕಿರುವ ನಮ್ಮ ಭವಿಷ್ಯವು ಕರಾಳವಾಗುತ್ತಿದೆ.

ಪರಿಸರ ಹಾಗೂ ವನ್ಯಜೀವಿಗಳಲ್ಲಿ ಆಸಕ್ತಿಯುಳ್ಳ ಐ ಟಿ ವೃತ್ತಿಯವ ನಾನು. ಚಾರಣ , ಮಳೆಗಾಲ, ಕೀಟ , ಜೇಡ, ಹಾವು, ಉಭಯಚರಗಳು, ಒಳ್ಳೆಯ ಪುಸ್ತಕ ಓದುವುದು, ಪ್ರಯಾಣ, ವಿಧ-ವಿಧದ ಆಹಾರವೆಂದರೆ ಅಪಾರವಾದ ಪ್ರೀತಿ.