ವನಸುಮ – ಕಕ್ಕೆ ಮರ

ವನಸುಮ – ಕಕ್ಕೆ ಮರ

    © ಸುನೀಲ್ ಆರ್.

English Name: Indian laburnum  

Scientific Name: Cassia fistula L.

ಕಕ್ಕೆ ಮರ ನಮ್ಮ ದೇಶದ ಸ್ಥಳೀಯ ಮರ, ಇದೊಂದು ಸಣ್ಣ ಮರವಾಗಿದ್ದು, ಗರಿಷ್ಟ 40 ಅಡಿ ಎತ್ತರಕ್ಕೆ ಬೆಳೆಯುವ ಗಟ್ಟಿಯಾದ ಮರ. ಇದರ ಸಣ್ಣ ಕೊಂಬೆಗಳು ಕೆಳ ಭಾಗಕ್ಕೆ ಬಾಗಿರುತ್ತವೆ. ಹೊಸದಾದ ಚಿಗುರುಗಳು ತಾಮ್ರದ ಬಣ್ಣವಿದ್ದು ಜೋತಿರುತ್ತವೆ. ಎಲೆಗಳು ದಟ್ಟ ಹಸಿರು ಬಣ್ಣದಿಂದ ಕೂಡಿದ್ದು, ಸಂಯುಕ್ತ ಎಲೆಗಳನ್ನು ಒಳಗೊಂಡಿವೆ. ನಾಲ್ಕರಿಂದ ಎಂಟು ಜೊತೆ ಉಪ ಎಲೆಗಳನ್ನು ಹೊಂದಿರುತ್ತವೆ. ಎಲ್ಲ ಉಷ್ಣವಲಯ ಸಸ್ಯವರ್ಗದ ಮರಗಳಲ್ಲಿ ಅತ್ಯಂತ ಸುಂದರವಾದದ್ದು. ಏಪ್ರಿಲ್ ನಿಂದ ಜೂನ್ ವರಿಗೆ ತನ್ನ ಎಲೆಗಳನ್ನು ಉದುರಿಸಿ ಹಳದಿಯ ಉದ್ದನೆಯ ಗೊಂಚಲು ಹೂವುಗಳನ್ನು ಬಿಡುತ್ತವೆ. ಗೊಂಚಲಿನ ಬುಡ ಅಥವಾ ಮೇಲ್ಭಾಗದಲ್ಲಿರುವ ಹೂವುಗಳು ಅರಳಿರುತ್ತವೆ. ತುದಿ ಅಥವಾ ಕೆಳಭಾಗಕ್ಕೆ ಹೋದಂತೆ ಮೊಗ್ಗುಗಳನ್ನು ಕಾಣಬಹುದು. ಕಕ್ಕೆ ಹೂವುಗಳು ಕೀಟಗಳಿಂದ, ದುಂಬಿಗಳಿಂದ ಮತ್ತು ಕೆಲವು ಸಸ್ತನಿಗಳಿಂದ ಪರಾಗಸ್ಪರ್ಶಗೊಳ್ಳುತ್ತವೆ. ಕಾಣುವ ಹಳದಿ ಬಣ್ಣದ ಇದರ ಹೂವುಗಳು ಸುಂದರವಾಗಿವೆ. ಪೂರ್ಣ ಪ್ರಮಾಣದಲ್ಲಿ ಹೂ ಬಿಟ್ಟ ಗಿಡವನ್ನು ನೋಡುವುದೇ ಒಂದು ಆನಂದ. ಇದು ಕೇರಳ ರಾಜ್ಯದ ರಾಜ್ಯ ಪುಷ್ಪವೂ ಆಗಿದೆ. ‘ಕಕ್ಕೇ ಕಾಯಿ ಕೋಲಲ್ಲ’ ಎಂಬ ಗಾದೆ ಮಾತು ಇಂದಿಗೂ ಪ್ರಚಲಿತದಲ್ಲಿರುವ ಪ್ರಮುಖ ಗಾದೆಯಾಗಿದೆ. ಕೋಲಿನಂತೆ ಉದ್ದವಾದ ಕಾಯಿಗಳು ಹಸಿರು ಬಣ್ಣವಿದ್ದು ಕೆಳಮುಖವಾಗಿ ಜೋಲುತ್ತಿರುತ್ತವೆ. ಕಾಯಿಗಳು ಬಲಿತಂತೆ ಗಾಢ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಒಣಗಿದಾಗ ಅದರೊಳಗಿನ ಬೀಜಗಳು ಟಣ ಟಣ ಎಂದು ಸದ್ದು ಮಾಡುತ್ತವೆ.

ಗಿಳಿಗಳು ಮತ್ತು ಮರಕುಟಿಗ ಹಕ್ಕಿಗಳು ಕೋಲಿನಂತಹ ಕಕ್ಕೇ ಕಾಯಿಯ ಮೇಲೆ ಕುಳಿತು ಅದರ ಬಲವಾದ ಕೊಕ್ಕಿನಿಂದ ಕಚ್ಚಿ ಬೀಜಗಳನ್ನು ತಿನ್ನುತ್ತವೆ. ಈ ಗಿಡದಲ್ಲಿ ಒಂದು ಸುಂದರವಾದ ಜೀರ್ಜಿಂಬೆ ಕಾಣಿಸುತ್ತದೆ. ಇದನ್ನು ಕಕ್ಕೆ ದುಂಬಿಯೆಂದೇ ಕರೆಯುತ್ತಾರೆ. ಕಕ್ಕೆ ದುಂಬಿಗೆ ಮಕ್ಕಳು ದಾರ ಕಟ್ಟಿ ಆಟವಾಡುತ್ತಾರೆ ಹಾಗೂ ಅದನ್ನು ಒಂದು ಬೆಂಕಿ ಪಟ್ಟಣದಲ್ಲಿ ಕೂಡ ಹಾಕಿ ಅದಕ್ಕೆ ಕಕ್ಕೆ ಎಲೆಗಳನ್ನು ತಿನ್ನಲು ಕೊಟ್ಟು ಸಾಕುತ್ತಾರೆ. ಈಗ ಮೊಬೈಲ್ ಬಂದ ಮೇಲೆ. ಅವನ್ನು ಸಾಕುವುದು ಕಡಿಮೆಯಾಗಿದೆ.

ಕಕ್ಕೆ ಮರ ಇದೊಂದು ತೀವ್ರ ನಿರ್ಲಕ್ಷಕೊಳಗಾದ ಸುಂದರವಾದ ಹೂ ಬಿಡುವ ಮರ ಇದರ ಬೆಳವಣಿಗೆ ತುಂಬಾ ನಿಧಾನ ಆದ್ದರಿಂದಲೇ ಏನೋ, ಈ ಗಿಡವನ್ನು ನಗರದ ಅಲಂಕಾರಿಕ ಗಿಡ ಮತ್ತು ಔಷಧೀಯ ಸಸ್ಯವು ಕೂಡ. ವಿದೇಶಗಳಲ್ಲಿ ಇದು ಪ್ರಖ್ಯಾತಿಯಾಗಿದ್ದರೂ ನಮ್ಮ ಲ್ಯಾಂಡ್ಸ್ಕೇಪ್ ಡಿಸೈನರ್ ಗಳಿಗೆ ಪರದೇಶಿ ಸಸ್ಯಗಳೇ ಹೆಚ್ಚು ಮೆಚ್ಚು. ಇಲ್ಲಿ ಮತ್ತೊಂದು ಸಮಸ್ಯೆಯೂ ಕೂಡ ಇದೆ, ಇದರ ಬೀಜಗಳು ಬೇಗ ಮೊಳಕೆಯೊಡೆಯುವುದಿಲ್ಲ, ಕೆಲವು ವೇಳೆ ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. ಸ್ವಲ್ಪ ಸುಲಭದಲ್ಲಿ ಎಂದರೆ ಬೀಜಗಳನ್ನು ಬಿತ್ತುವ ಮುನ್ನ ಕುದಿಯುವ ನೀರಿನಲ್ಲಿ ಹಾಕಿ ತಣ್ಣಗಾದ ನಂತರ ಬಿತ್ತಬಹುದು.

ಕೋತಿಗಳು, ಕರಡಿಗಳು, ಗಿಳಿಗಳು ಇವೇ ಮೊದಲಾದ ಪ್ರಾಣಿ-ಪಕ್ಷಿಗಳು ಈ ಗಿಡದ ಬೀಜ ಪ್ರಸಾರ ಮಾಡುತ್ತವೆ. ಕಕ್ಕೆ ಮರವು ತನ್ನ ಬೇರುಗಳ ಮೂಲಕ ಸಾರಜನಕ ಸ್ಥಿರೀಕರಣ ಮಾಡುವಲ್ಲಿ, ರಸ್ತೆಬದಿಯ ಸಾಲು ಮರಗಳಾಗಿ ಮತ್ತು ಬಿರುಗಾಳಿಯನ್ನು ತಡೆಗಟ್ಟಲು ಸಹಾಯ ಮಾಡುವಲ್ಲಿ, ಮಕರಂದದ ಮೂಲವಾಗಿ ಮತ್ತು ಒಂದು ಸಾಂಸ್ಕೃತಿಕವಾಗಿಯೂ ಉಪಯೋಗವಾಗಿದೆ.

ಕಕ್ಕೆ ಮರದ ಔಷಧೀಯ ಗುಣಗಳು:

ಕಕ್ಕೆ ಮರದ (Cassia fistula) ಪ್ರತಿಯೊಂದು ಭಾಗಕ್ಕೂ ಔಷಧೀಯ ಮಹತ್ವವಿದೆ. ಅದರ ಬೇರುಗಳಲ್ಲಿ ಜ್ವರ ನಿವಾರಕ, ಕುಷ್ಠಿ ಗುಣ (astringent) ಮತ್ತು ಬಲವಾದ ವಿಸರ್ಜಕ ಗುಣವಿದೆ (Strong purgative). ಈ ಬೇರುಗಳನ್ನು ಮೂಳೆ ನೋವು, ಮೈಗ್ರೇನ್ ತಲೆನೋವು ಹಾಗೂ ರಕ್ತ ಅಮ್ಲಪಿತ ಸಮಸ್ಯೆಗಳಿಗೆ ಬಳಸುತ್ತಾರೆ. ಬೇರುಗಳಿಂದ ತೆಗೆದ ರಸವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸುಮಾರು 30% ವರೆಗೆ ಇಳಿಸುವ ಶಕ್ತಿಯಿದೆ. ಕಕ್ಕೆ ಮರದ ಕಾಂಡವನ್ನು (ಬಾರ್ಕ್) ಪುಡಿ ರೂಪದಲ್ಲಿ ಅಥವಾ ಕಷಾಯವಾಗಿ ಸೇವಿಸಿದರೆ ಅದು ಕುಷ್ಠ ರೋಗ, ಕಾಮಾಲೆ (ಜಾಂಡಿಸ್), ಸಿಫಿಲಿಸ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ಎಲೆಗಳನ್ನು ಕೀಟ ಕಚ್ಚಿದಾಗ, ಶರೀರದಲ್ಲಿ ಊತ, ವಾತದ ನೋವು, ಮುಖ ಶಕ್ತಿ ಕಡಿಮೆಯಾದಾಗ (facial paralysis), ಚರ್ಮದ ಉರಿ, ರೋಗಗಳಲ್ಲಿ ಬಳಸಬಹುದು. ಹೂವುಗಳು ಮತ್ತು ಬೀಜಕೋಶಗಳನ್ನು ಜ್ವರ ನಿವಾರಕ ಹಾಗೂ ಪಿತ್ತ ನಿವಾರಕವಾಗಿ ಉಪಯೋಗಿಸಲಾಗುತ್ತದೆ. ಕಕ್ಕೆ ಮರದ ಹಣ್ಣುಗಳು ಆಸ್ತಮಾ ಚಿಕಿತ್ಸೆಗಾಗಿ ಉಪಯೋಗವಾಗುತ್ತವೆ ಎಂಬ ವರದಿಯಿದೆ. ಹಣ್ಣಿನ ತಿರುಳನ್ನು ಯಕೃತ್ತಿನ ಅಸ್ವಸ್ಥತೆಗಳಿಗೆ ಉಪಯೋಗಿಸಲಾಗುತ್ತದೆ. ಬೀಜಗಳನ್ನು ಒಣಗಿಸಿ ಮಾಡಿದ ಪುಡಿ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ*.

* ಲೇಖನದಲ್ಲಿನ ಕಕ್ಕೆ ಮರದ ಔಷಧೀಯ ಗುಣಗಳ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನಾ ಲೇಖನಗಳಿಂದ ಕಲೆಹಾಕಲಾಗಿದೆ.

ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
         
ಡಬ್ಲ್ಯೂ. ಸಿ. ಜಿ. ಬೆಂಗಳೂರು
ನಗರ ಜಿಲ್ಲೆ

Spread the love
error: Content is protected.