ಮಿಂಚು ಹುಳುದ ಮಾಯಾ ಜಗತ್ತು
© ಸಂದೀಪ್ ದಾಸ್
ಮಳೆಗಾಲವು ಪ್ರಕೃತಿಯ ಜೀವಂತಿಕೆಗೆ ಹುರುಪನ್ನು ನೀಡುವ ಕಾಲ. ಎಲ್ಲಿ ನೋಡಿದರೂ ಹಚ್ಚ ಹಸುರಿನ ಗಿಡ ಮರಗಳು, ತುಂಬಿ ಹರಿವ ನದಿ ಜಲಪಾತಗಳು, ಆಹಾ! ಅದೆಷ್ಟು ಮನಮೋಹಕ.
ದಿನ ರಾತ್ರಿ ಬಿಡದಂತೆ ಸುರಿವ ಮಳೆಯಿಂದಾಗಿ ಸೂಯ೯ನು ಕಣ್ಮರೆಯಾಗಿಬಿಡುತ್ತಾನೆ. ಮಳೆಯ ಆರ್ಭಟದ ಪರಿಣಾಮದಿಂದ ವಿದ್ಯುತ್ ಖಡಿತವಾಗಿ ಇಡೀ ಊರೇ ಕತ್ತಲಿನ ನಿಗೂಢ ಬಲೆಯಲ್ಲಿ ಸಿಲುಕಿಬಿಡುತ್ತದೆ. ಮಳೆನಿಂತ ತಕ್ಷಣವೇ ನಿಶಾಚರ ಜಗತ್ತಿನ ಜೀವಿಗಳಿಗೆ ಎಚ್ಚರವಾಗಿಬಿಡುತ್ತದೆ. ಚಿಮ್ಮಂಡೆ (ಕ್ರಿಕೆಟ್), ಜೀರುಂಡೆ, ಸಿಕಾಡಗಳ ಭೋರ್ಗರೆವ ಸದ್ದು ಕಿವಿಯಲ್ಲಿ ಪ್ರತಿಧ್ವನಿಸಲಾರಂಭಿಸುತ್ತದೆ. ಇದರ ನಡುವೆ ಮಳೆಗಾಲದ ಅತಿಥಿ ಮಿಂಚುಹುಳುದ ಮಾಯಾ ಜಗತ್ತಿನ ಅನಾವರಣ. ನಭೋಮಂಡಲದ ನಕ್ಷತ್ರಗಳೇ ಭೂಮಿಯ ಮೇಲೆ ಇಳಿದು ಬಂದ ಹಾಗೆ ಕತ್ತಲಿನಲ್ಲಿ ಮಿನುಗುತ್ತ ಕಣ್ಣಿಗೆ ಭ್ರಮಿತ ಉಂಟುಮಾಡುತ್ತವೆ. ಮಿಂಚುಹುಳುಗಳು ಜೀರುಂಡೆ (ಬೀಟಲ್) ಜಾತಿಗೆ ಸೇರಿದ ಕೀಟಗಳು. ಇವು ತಮ್ಮ ಲಾರ್ವಾ ಅವಸ್ಥೆಯಲ್ಲಿ ಮಣ್ಣಿನೊಳಗೆ ಚಳಿ ನಿದ್ದೆಯನ್ನು (ಹೈಬರ್ನೇಟ್) ಮಾಡಿ ಮಳೆಗಾಲದಲ್ಲಿ ವಯಸ್ಕ ಹುಳುಗಳಾಗಿ ಹೊರಬರುತ್ತವೆ. ಗಂಡು ಹುಳುಗಳು ಸಂತಾನೋತ್ಪತ್ತಿಗಾಗಿ ಸಂಗಾತಿಯನ್ನು ಆಕರ್ಷಿಸಲು ಗುಂಪು ಸೇರಿ ಬೆಳಕಿನ ಮಳೆಯಂತೆ ಅಕ್ಷೋಭ ವಾತಾವರಣ ಸೃಷ್ಟಿಸುತ್ತವೆ. ಮಿಂಚುಹುಳುಗಳ ವಿಶೇಷವೆಂದರೆ ಅವು ಜೈವಿಕ ಪ್ರಕಾಶ (ಬಯೋ ಲುಮಿನೆಸೆನ್ಸ್) ವಿದ್ಯಮಾನ ಹೊಂದಿವೆ. ಜೈವಿಕ ಪ್ರಕಾಶವೆಂದರೆ ಒಂದು ಜೀವಿಯು ತನ್ನ ದೇಹದಿಂದ ಬೆಳಕನ್ನು ಹೊರಸೂಸುವುದು. ಈ ಅಪರೂಪದ ವಿದ್ಯಮಾನವು ಕೆಲವು ಜೀವಿಗಳಲ್ಲಿ ಮಾತ್ರ ಕಂಡುಬರುತ್ತದೆ. ಅವುಗಳೆಂದರೆ ಸಮುದ್ರದ ಕೆಲವು ಸೂಕ್ಷ್ಮಾಣುಜೀವಿಗಳು, ಪಾಚಿಗಳು, ಜೆಲ್ಲಿ ಮೀನುಗಳು ಕೊಳೆತಿನಿಗಳು. ಇದಕ್ಕೆ ಕಾರಣ ಅವುಗಳ ಜೀವಕೋಶದಲ್ಲಿ ನಡೆಯುವ ರಾಸಾಯನಿಕ ಕ್ರಿಯೆ. ಇದರಿಂದಾಗಿ ಒಂದೊಂದು ಜೀವಿಯು ತನ್ನದೇ ಆದ ಬಣ್ಣದ ಬೆಳಕನ್ನು ಹೊರಸೂಸುತ್ತದೆ. ಮಿಂಚುಹುಳುಗಳು ಪ್ರಕಾಶಮಾನವಾದ ಹಳದಿ-ಹಸಿರು ಬಣ್ಣದ ಬೆಳಕನ್ನು ಹೊರಸೂಸುತ್ತವೆ. ಸಂಶೋಧಕರ ಅಧ್ಯಯನದ ಪ್ರಕಾರ ಭಾರತದಲ್ಲಿ 45 ಪ್ರಭೇದದ ಮಿಂಚು ಹುಳುಗಳಿವೆಯೆಂದು ವರದಿಯಾಗಿದ್ದು, ಪಶ್ಚಿಮ ಘಟ್ಟದ ಅಣ್ಣಾಮಲೈ ಹುಲಿ ಸಂರಕ್ಷಣಾ ಧಾಮದಲ್ಲಿ 6 ಪ್ರಭೇದಗಳಿವೆ ಎಂದು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ (NCBS) ಇತ್ತೀಚಿನ ಅಧ್ಯಯನದಲ್ಲಿ ತಿಳಿದುಬಂದಿದೆ.
ಮಿಂಚುಹುಳುಗಳು ಪರಿಸರದ ಆರೋಗ್ಯ ಸೂಚಕ ಜೀವಿಗಳು (ಬಯೋ ಇಂಡಿಕೇಟರ್). ಮಾನವನ ಅನಾಚಾರದ ಫಲವಾಗಿ ನಿಸರ್ಗದ ಜೀವ ವೈವಿಧ್ಯವು ಕ್ಷೀಣಿಸುತ್ತಿದೆ. ಆವಾಸಸ್ಥಾನದ ನಷ್ಟ, ಅತಿಯಾದ ಅನಾವಶ್ಯಕ ಕೀಟನಾಶಕಗಳ ಬಳಕೆ, ನಗರೀಕರಣ, ವಿದ್ಯುತ್ ದೀಪಗಳು ಮಿಂಚುಹುಳುಗಳ ಅಸ್ತಿತ್ವಕ್ಕೆ ದುಷ್ಪರಿಣಾಮ ಬೀರುತ್ತಿವೆ. ಪ್ರಕೃತಿಯ ಪ್ರತಿಯೊಂದು ಜೀವಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಿಸರ್ಗದ ಮೇಲಿನ ಆಕ್ರಮಣವನ್ನು ನಿಲ್ಲಿಸಿದರೆ ಮಾತ್ರ ಸಹಬಾಳ್ವೆ ಸಾಧ್ಯ. ಇಲ್ಲವಾದರೆ ಮುಂದಿನ ಮಳೆಗಾಲದಲ್ಲಿ ಮಿಂಚುಹುಳುಗಳ ಬೆಳಕಿನ ಮಾಯಾ ಜಗತ್ತಿನ ಬದಲು, ಕಲುಷಿತ ಗಾಢಾಂಧಕಾರದೊಳಗೆ ವಿಲೀನವಾಗಬೇಕಾಗುತ್ತದೆ. ಇದರ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜುಲೈ 2ನೇ ದಿನವನ್ನು ವಿಶ್ವ ಮಿಂಚುಹುಳುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿಯು ನಮ್ಮನ್ನು ರಕ್ಷಿಸುತ್ತದೆ.

ಲೇಖನ: ಶ್ರೀನಿವಾಸ್ ಅಯ್ಯಂಗಾರ್
ಉಡುಪಿ ಜಿಲ್ಲೆ
ಮಿಂಚು ಹುಳುಗಳ ಕುರಿತ ಲೇಖನಕ್ಕೆ ಶ್ರೀನಿವಾಸ್ ಅಯ್ಯಂಗಾರ್ ಅವರಿಗೆ ಅಭಿನಂದನೆಗಳು. ಕಾಂಕ್ರೀಟ್ ಅಡವಿಯಾದ ಬೆಂಗಳೂರು ನಗರದಲ್ಲಿ ಯಥೇಚ್ಚವಾಗಿದ್ದ ಇವುಗಳ ಅವನತಿಯನ್ನು ತಡೆಯಲು ಈ ಕೀಟಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಕೆಲವು ಕ್ರಮಕ್ಕೆ ಮುಂದಾಗಿದ್ದು ಇದೀಗ ನಗರದ ಸುತ್ತಮುತ್ತಲಿನ ೧೨ ಸ್ಥಳಗಳನ್ನು “ಹಾಟ್ ಸ್ಪಾಟ್” ಎಂದು ಗುರುತಿಸಿದ್ದಾರೆ. ಅವುಗಳಲ್ಲಿ ಕೆಲವು ಆರ್ಟ್ ಆಫ್ ಲಿವಿಂಗ್, ಜಿ.ಕೆ.ವಿ.ಕೆ., ಹೆಬ್ಬಾಳ್ ಫಾರೆಸ್ಟ್ ನರ್ಸರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ನ್ಯಾಶನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸನ್, ಹೆಸರುಘಟ್ಟ, ನಂದಿ ಬೆಟ್ಟ, ಜಾರಕಬಂಡಿ ಸ್ಟೇಟ್ ಫಾರೆಸ್ಟ್ ಇತ್ಯಾದಿ. ಅತೀಯಾದ ನಗರೀಕರಣ, ಮಿತಿ ಮೀರಿದ ರಾಸಾಯನಿಕಗಳ/ಕೀಟನಾಶಕಗಳ ಬಳಕೆ ಇದರ ವಿನಾಶಕ್ಕೆ ಕಾರಣ ಎನ್ನಲಾಗಿದೆ. ಈ ಕಾರಣಕ್ಕೆ ಒಂದು ಸಮಯದಲ್ಲಿ ಮಲೆನಾಡಿನ ಕಾಫಿ ತೋಟಗಳಲ್ಲಿ ಹೂವು ಅರಳುವ ಸಮಯದಲ್ಲಿದ್ದ (ಪರಾಗ ಸ್ಪರ್ಷಕ್ಕೂ ಇವುಗಳು ನೆರವಾಗುತ್ತೆ) ಇವುಗಳ ಸಂಖ್ಯೆ ಸಾಕಷ್ಟು ಕುಂಠಿತವಾಗಿರುವ ಬಗ್ಗೆ ವರದಿಯಾಗಿದೆ. ಒಟ್ಟಿನಲ್ಲಿ ನಗರೀಕರಣ, ಆಧುನೀಕರಣ, ಯಾಂತ್ರೀಕರಣದ ಕಾರಣಕ್ಕೆ ನಿಸರ್ಗದ ಅನೇಕ ಅಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ…