ಕಡಲ ತಡಿಯ ರಕ್ಷಕ ಕಾಂಡ್ಲಾವನ

ಕಡಲ ತಡಿಯ ರಕ್ಷಕ ಕಾಂಡ್ಲಾವನ

              © ಗುರುಪ್ರಸಾದ್ ಕೆ. ಆರ್.

ಪ್ರಕೃತಿಯ ಸೃಷ್ಟಿಯ ಮುಂದೆ ಸರಿಸಮನಾಗಿ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ, ನಿಸರ್ಗಕ್ಕೆ ನಿಸರ್ಗವೇ ಸಾಟಿ ಎನ್ನಬಹುದು. ಪರಿಸರವು ತನ್ನೊಳಗೆ ಸಮತೋಲನ ಕಾಯ್ದುಕೊಳ್ಳಲು ವಿಶಿಷ್ಟವಾದ ಕೊಡುಗೆಗಳನ್ನು ನೀಡಿದೆ. ಆ ಕೊಡುಗೆಗಳು ಮನುಷ್ಯನ ಬದುಕಿಗೂ ಅತ್ಯಂತ ಮಹತ್ವ ಹಾಗೂ ಅಮೂಲ್ಯವಾಗಿ ಗೋಚರಿಸುತ್ತವೆ. ಅಂತಹ ಒಂದು ವಿಭಿನ್ನ ಕೊಡುಗೆಯೇ ಪರಿಸರ ಸಮತೋಲನಕ್ಕೆ ಕಾರಣವಾದ ಕಾಂಡ್ಲಾವನ. ಕಡಲಿನ ತೀರದಲ್ಲಿ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ, ಒಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷ ರೀತಿಯ ಕಾಡುಗಳಿಗೆ ‘ಮ್ಯಾಂಗ್ರೋವ್’ ಎಂದು ಕರೆಯುತ್ತಾರೆ. ಮ್ಯಾಂಗ್ರೋವ್ ಎಂಬ ಸಸ್ಯವರ್ಗವು ಜೀವಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ ಆಗಿದ್ದು, ಕನ್ನಡದಲ್ಲಿ ಇದನ್ನೇ ‘ಕಾಂಡ್ಲಾ’ ಎಂದೂ ಕರೆಯುತ್ತಾರೆ. ಮ್ಯಾಂಗ್ರೋವ್ ಎಂದರೆ ನೀರಿನಲ್ಲಿ ಭಾಗಶಃ ಮುಳುಗಿದಂತೆ ಇರುವಂತ ಕಾಡು. ಕಾಂಡ್ಲಾವು ಸಮುದ್ರದ ಉಪ್ಪು ನೀರು ಹಾಗೂ ನದಿ ತೊರೆ, ಹಳ್ಳಗಳಿಂದ ಹರಿದು ಬರುವ ಸಿಹಿನೀರು ಸೇರುವ ಅಳಿವೆ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ ಪ್ರಭೇದ. ಇತರ ಯಾವುದೇ ಸಸ್ಯಗಳು ಬೆಳೆಯದ ಪ್ರದೇಶಗಳಲ್ಲಿ ಕಾಂಡ್ಲಾಗಳು ಬೆಳೆಯುವುದು ಇವುಗಳ ವಿಶೇಷತೆ.

    © ಗುರುಪ್ರಸಾದ್ ಕೆ. ಆರ್.

ಕಾಂಡ್ಲಾ ಕಾಡುಗಳು ಶಾಶ್ವತವಾಗಿ ನೀರಿನಲ್ಲಿ ಮುಳುಗಿ ಇರುವುದರಿಂದ ಅವುಗಳ ಆವಾಸಸ್ಥಾನದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಹಾಗೂ ಇವುಗಳ ಬೇರು ಮತ್ತು ಕಾಂಡಗಳಲ್ಲಿ ಇರುವ ‘ಲೆಂಟಿಸೆಲ್ಸ್’ ಎಂಬ ವಿಶೇಷ ರಚನೆಯ ಸಹಾಯದಿಂದ ವಾತಾವರಣದ ಆಮ್ಲಜನಕವನ್ನು ಹೀರಿಕೊಂಡು ಉಸಿರಾಡುವ ಶಕ್ತಿ ಹೊಂದಿವೆ. ಇವು ನೀರಿನಿಂದ ಹೊರಚಾಚಿರುವ ಬೇರುಗಳ ಸಹಾಯದಿಂದ ಗಾಳಿಯನ್ನು ಹೀರಿಕೊಂಡು ಅವು ಬದುಕುತ್ತವೆ. ಗಾಳಿಯನ್ನು ಬೇರುಗಳಲ್ಲೇ ಹಿಡಿದಿಟ್ಟುಕೊಳ್ಳುವ ಈ ಮರಗಳು ಪ್ರವಾಹದ ಸಂದರ್ಭದಲ್ಲಿ ಮತ್ತೆ ಅವುಗಳನ್ನು ಬಳಸಿಕೊಳ್ಳುತ್ತವೆ. ಇದರಿಂದ ಭೂಮಿಯ ತಾಪಮಾನ ಏರಿಕೆ, ಸಮುದ್ರ ನೀರಿನ ಮಟ್ಟ ಏರುಪೇರು ಮುಂತಾದ ಪರಿಸರ ವೈಪರೀತ್ಯಗಳನ್ನು ತಡೆಯುತ್ತವೆ.

ಭೂಮಿಗೆ ಅಪ್ಪಳಿಸಿದ ಸುನಾಮಿಯ ನಂತರ ಇದರ ಉಪಯೋಗವನ್ನು ಅರಿತ ಜನ, ಇದರ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಕಾಂಡ್ಲಾವನಗಳು (ಮ್ಯಾಂಗ್ರೋವ್ ಕಾಡುಗಳು) ಭೂಮಿಯ ವಾತಾವರಣವನ್ನು ಕಾಪಾಡುವಲ್ಲಿ ವಿಶೇಷ ಪಾತ್ರವಹಿಸುತ್ತವೆ. ಇವುಗಳು ವಾತಾವರಣದಿಂದ ಸಾಮಾನ್ಯ ಕಾಡುಗಳಿಗಿಂತ 5 ರಿಂದ 10 ಪಟ್ಟು ಹೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಂಡು ವಾತಾವರಣಕ್ಕೆ ಆಮ್ಲನಕವನ್ನು ಪೂರೈಸುತ್ತವೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೇರಳವಾಗಿವೆ. ಒಂದು ಎಕರೆ ಪ್ರದೇಶದ ಕಾಂಡ್ಲಾವನವನ್ನು ಸಂರಕ್ಷಿಸಿದರೆ ಅದು ಐದರಿಂದ ಆರು ಎಕರೆ ಸಾಮಾನ್ಯ ಕಾಡನ್ನು ರಕ್ಷಿಸುವುದಕ್ಕೆ ಸಮಾನ ಎಂದು ಸಂಶೋಧನೆಗಳು ಹೇಳುತ್ತವೆ. ಭೂಮಿಯಲ್ಲಿ ನಮ್ಮ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ಬಯಸುವ ಪ್ರತಿಯೊಬ್ಬರೂ ಕಾಂಡ್ಲಾವನಗಳನ್ನು ಸಂರಕ್ಷಿಸಬೇಕೆಂದು ತಜ್ಞರು ಹೇಳುತ್ತಾರೆ.

1999ರಲ್ಲಿ ಒಡಿಶಾದಲ್ಲಿ 160 ಕಿ.ಮೀ. ವೇಗದ ಗಾಳಿಯಿಂದ ಜನರ ಜೀವವನ್ನು, ಆಸ್ತಿಪಾಸ್ತಿಯನ್ನು ಹಾಗೂ 2004ರಲ್ಲಿ ತಮಿಳುನಾಡಿನ ನಾಗಪಟ್ಟಣ ಗ್ರಾಮದ 172 ಕುಟುಂಬಗಳನ್ನು ಸುನಾಮಿ ಅನಾಹುತದಿಂದ ಪಾರು ಮಾಡಿದ ಹೆಗ್ಗಳಿಕೆ ಈ ಕಾಂಡ್ಲಾವನಗಳದ್ದು. ಮ್ಯಾಂಗ್ರೋವ್ಗಳನ್ನು ಕಾಪಾಡುವ ಮೂಲಕ ನಾವು ಅವುಗಳನ್ನು ಉಳಿಸಿದ್ದೇವೆ ಮತ್ತು ಅವುಗಳು ನಮ್ಮನ್ನು ಸುನಾಮಿಯ ಭೀಕರತೆಯಿಂದ ರಕ್ಷಿಸುವ ಮೂಲಕ ನಮ್ಮ ಜೀವ ಮತ್ತು ಆಸ್ತಿಯನ್ನು ಉಳಿಸಿವೆ. ಅಂದರೆ ನಾವು ಪ್ರಕೃತಿಯನ್ನು ಉಳಿಸಿ ಬೆಳೆಸಿದರೆ, ಪ್ರಕೃತಿಯು ಖಂಡಿತ ನಮ್ಮನ್ನು ಉಳಿಸುತ್ತದೆ ಎಂದು ತಮಿಳುನಾಡಿನ ಮೀನುಗಾರರೊಬ್ಬರು ಸುದ್ದಿ ಸಂಸ್ಥೆಯ ಪ್ರತಿನಿಧಿಗೆ ಹೇಳಿದ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಸಮುದ್ರದ ರಕ್ಕಸ ಅಲೆಗಳು, ಸುನಾಮಿ, ಪ್ರವಾಹ, ಕಡಲ್ಕೊರೆತ ಆದಾಗ, ಕಾಂಡ್ಲಾವನದ ಬಲೆಯಂತಹ ಬೇರುಗಳು ಮಣ್ಣನ್ನು ಹಿಡಿದಿಟ್ಟು ಕೊಚ್ಚಿ ಹೋಗದಂತೆ ತಡೆಯುವುದರಿಂದ ಇದಕ್ಕೆ ಕರಾವಳಿಯ ಸೈನಿಕರೆಂಬ ಹೆಸರಿದೆ. ಇದರ ಬೇರುಗಳನ್ನು ದೂರದಿಂದ ನೋಡಿದರೆ ನಡೆದಾಡುವ ಆಕೃತಿಯಂತೆ ಕಾಣಿಸುತ್ತವೆ. ಇವುಗಳ ಬೇರುಗಳು ಮುಂದಕ್ಕೆ ವಿಸ್ತರಣೆ ಆಗುವುದರಿಂದ ಇವುಗಳನ್ನು ನಡೆದಾಡುವ ಮರಗಳೆಂದು ಕರೆಯುತ್ತಾರೆ.

ಕಾಂಡ್ಲಾವನದ ಮಹತ್ವದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜುಲೈ 26ರಂದು ‘ಮ್ಯಾಂಗ್ರೂವ್ ಡೇ’ ಆಚರಿಸಲಾಗುತ್ತದೆ. ‘ಮ್ಯಾಂಗ್ರೂವ್’ ಎಂಬ ಪದವು ಮೂಲವಾಗಿ ಪೋರ್ಚುಗೀಸ್ ಭಾಷೆಯ ‘ಮ್ಯಾಂಗ್ಯೂ’ ಹಾಗೂ ಇಂಗ್ಲಿಷ್‌ನ ‘ಗೋವ್’ ಎಂಬ ಪದಗಳಿಂದ ಉತ್ಪತ್ತಿಯಾದ ಪದವಾಗಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಕಾಂಡ್ಲಾಗಳ ಪಾತ್ರ ದೊಡ್ಡದು. ಕಾಂಡ್ಲಾವು ಉಪ್ಪು ಮತ್ತು ಸಿಹಿ ನೀರು ಎರಡರಲ್ಲೂ ಬೆಳೆಯುತ್ತದೆ. ಅಳಿವೆ ಪ್ರದೇಶಗಳ ನೀರು ಹಾಗೂ ಮಣ್ಣು ಹೆಚ್ಚಿನ ಲವಣಾಂಶ ಹೊಂದಿದ್ದು, ಇಲ್ಲಿ ನೀರಿನ ಉಬ್ಬರ ಇಳಿತದ ತೀವ್ರ ಹೊಡೆತ ಇರುವುದರಿಂದ ಇಲ್ಲಿ ಇತರ ಯಾವುದೇ ಸಸ್ಯಗಳು ಬೆಳೆಯುವುದಿಲ್ಲ. ಆದರೆ, ಕಾಂಡ್ಲಾಗಳು ತನ್ನ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಎಲ್ಲಾ ಸಸ್ಯ ವರ್ಗಕ್ಕಿಂತ ವಿಶಿಷ್ಟ ಸ್ವರೂಪವನ್ನು ಹೊಂದಿದ ಸ್ವಾವಲಂಬಿ ಸಸ್ಯವಾಗಿದೆ. ಕಾಂಡ್ಲಾಗಳು ಕರಾವಳಿ ತೀರದ ಪ್ರಮುಖ ಸಸ್ಯಸಂಪತ್ತಾಗಿದ್ದು, ಇದರ ಕೆಲವು ಭಾಗ ನೀರಿನಲ್ಲಿ ಹಾಗೂ ಇನ್ನುಳಿದ ಭಾಗ ಮಣ್ಣಿನಲ್ಲಿ ಬೆಳೆಯುತ್ತವೆ.

    © ಗುರುಪ್ರಸಾದ್ ಕೆ. ಆರ್.

ಕಾಂಡ್ಲಾ ಪ್ರಭೇದಗಳ ಪೈಕಿ ‘ರೈಜೋಫೋರಾ’ ಮತ್ತು ‘ಬ್ರುಗೇರಿಯಾ’ ತಳಿಗಳಲ್ಲಿ ವಿಶೇಷ ಸಂತಾನೋತ್ಪತ್ತಿಯ ಕ್ರಮವಿದ್ದು, ಇವುಗಳ ಕಾಯಿಗಳು ತಾಯಿ ಮರದಲ್ಲಿ ಇರುವಾಗಲೇ ಮೊಳಕೆ ಒಡೆದು ಬಲಿತ ನಂತರ ನೇರವಾಗಿ ಜೇಡಿಮಣ್ಣಿಗೆ ಬಿದ್ದು ಪ್ರತ್ಯೇಕ ಗಿಡಗಳಾಗಿ ಬೆಳೆಯುತ್ತವೆ. ಇಂತಹ ಸಂತಾನೋತ್ಪತ್ತಿ ಮೂಲಕ ಹುಟ್ಟಿದಂತಹ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ. ಈ ಕ್ರಮವನ್ನು ‘ವಿವಿಪ್ಯಾರಿ ಜರ್ಮಿನೇಷನ್ (Vivipary germination)’ ಎಂದು ಕರೆಯುತ್ತಾರೆ. ‘ಸೋನೋರೆಶಿಯಾ ಅವಿಸಿನಿಯಾ’ ಪ್ರಭೇದದಲ್ಲಿ ಗಿಡಗಳು ನೇರವಾಗಿ ಕಾಯಿಯಾಗುತ್ತವೆ. ಇವುಗಳನ್ನು ಪ್ರತ್ಯೇಕ್ಷಿಸಿ ಸಸ್ಯಕ್ಷೇತ್ರದಲ್ಲಿ ಬೆಳೆಸಿ ನಂತರ ನಾಟಿ ಮಾಡಬಹುದು.

ಪರೋಪಕಾರಿ ಕಾಂಡ್ಲಾ: ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಮರಿಗಳನ್ನು ಪೋಷಿಸಿ ಬೆಳೆಸುತ್ತವೆ. ಅದೇ ರೀತಿ ಕಾಂಡ್ಲಾಗಳು ಪ್ರಾಣಿ ಮತ್ತು ಜಲಚರಗಳಿಗೆ ಆಶ್ರಯ ನೀಡಿ ಪರೋಪಕಾರಿ ಎನಿಸಿವೆ. ಇವುಗಳ ಬಲಿಷ್ಠ ಬೇರುಗಳು ಸಮುದ್ರದ ಅಲೆಗಳಿಗೆ ತಡೆಯೊಡ್ಡಿ ನಿಲ್ಲುತ್ತವೆ. ಹೀಗಾಗಿ ಈ ಸಸ್ಯಕ್ಕೆ ‘ಕಡಲ ತಡಿಯ ರಕ್ಷಕ’ ಎಂಬ ಬಿರುದಿದೆ. ನದಿಯ ಎರಡು ಕಡೆಗಳಲ್ಲಿ ಹಬ್ಬಿ ಬೆಳೆಯುವ ಕಾಂಡ್ಲಾಗಳ ಬೇರುಗಳು ತುಂಬಾ ಆಳಕ್ಕೆ ಇಳಿಯುತ್ತವೆ. ನೀರಿನಿಂದ ಮೇಲೆ ಹಾಗೂ ನೀರಿನ ಆಳದಲ್ಲಿರುವ ಇದರ ಬೇರುಗಳ ನಡುವೆ ಜಲಚರಗಳು ಬೀಡುಬಿಟ್ಟಿರುತ್ತವೆ. ಇಲ್ಲಿನ ಜಲಚರಗಳು ಹಲವಾರು ಪ್ರಭೇದದ ಪಕ್ಷಿಗಳು ಮತ್ತು ಪ್ರಾಣಿಗಳ ಆಹಾರದ ಮೂಲ. ಹಾಗೆಯೇ ಕಾಂಡ್ಲಾಗಳ ಮೇಲೆ ಬಂದು ಕೂರುವ ಹಕ್ಕಿಗಳ ಹಿಕ್ಕೆಗಳು ಇಲ್ಲಿನ ಜಲಚರಗಳಿಗೆ ಆಹಾರವಾಗಿ ಆಹಾರದ ಚಕ್ರವನ್ನು ಸಮತೋಲನದಲ್ಲಿ ಇಡುತ್ತದೆ. ಇದರ ಬೇರಿನ ಅಡಿಯಲ್ಲಿ ನುಸುಳಿಕೊಂಡು ದೊಡ್ಡ ಗಾತ್ರದ ಮೀನುಗಳು ಬರಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ಏಡಿ, ಸೀಗಡಿ, ಚಿಪ್ಪು ಮೀನುಗಳು ಹೆಚ್ಚಾಗಿ ನೆಲೆನಿಂತು ಸಂತಾನೋತ್ಪತ್ತಿ ಮಾಡುತ್ತವೆ. ಹಕ್ಕಿಗಳು ತಮ್ಮ ಸಂಸಾರವನ್ನು ಬೆಳೆಸಲು ಕಾಂಡ್ಲಾವನಗಳ ಕಡೆಗೆ ವಲಸೆ ಬರುತ್ತವೆ. ಕಾಂಡ್ಲಾವು ಪರಿಸರದಲ್ಲಿರುವ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಹೀರಿಕೊಂಡು ವಾತಾವರಣವನ್ನು ತಂಪಾಗಿ ಇಡುತ್ತದೆ.

    © ಗುರುಪ್ರಸಾದ್ ಕೆ. ಆರ್.

ಈ ಸಸ್ಯಗಳು ಹೂವು ಹಣ್ಣುಗಳನ್ನು ನೀಡುವುದರಿಂದ ಕಾಂಡ್ಲಾ ಬೆಳೆಯುವ ಪ್ರದೇಶಗಳಲ್ಲಿ ಜೇನು ನೊಣಗಳ ಸಂಖ್ಯೆಯೂ ಅಧಿಕ. ಉರುವಲು, ಇದ್ದಿಲು, ಹಸಿರು ಸೊಪ್ಪು ಇತ್ಯಾದಿಗಳಿಗೆ ಜನರು ಕಾಂಡ್ಲಾವನ್ನೇ ಆಶ್ರಯಿಸಿದ್ದಾರೆ. ಕೆಸರಿನ ಆಳದಲ್ಲಿ ದಟ್ಟವಾಗಿ ಬೆಳೆದು ನಿಲ್ಲುವ ಇವುಗಳು ಸೂರ್ಯನ ಉರಿಬಿಸಿಲನ್ನು ತಡೆದು ವಾತಾವರಣವನ್ನು ತಂಪಾಗಿಡುತ್ತವೆ. ಕಾಂಡ್ಲಾಗಳು ಸಮುದ್ರ ಮತ್ತು ನದಿ ತೀರದ ಮಣ್ಣಿನ ಸವಕಳಿ ಮತ್ತು ಕೊರೆತ ತಡೆದು ಕರಾವಳಿಗೆ ನೈಸರ್ಗಿಕ ತಡೆ ಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ.

ಪಶ್ಚಿಮ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಳಿವೆಯಲ್ಲಿ ಕಾಂಡ್ಲಾವನ ಹಬ್ಬಿವೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ಅಳಿವೆ, ಗುರುಪುರ, ಮಲ್ಪೆ ಪಾವಂಜೆ, ಉದ್ಯಾವರ, ಪಾಂಗಾಳ, ಬೈಂದೂರು ಹಾಗೂ ಶಿರೂರು ನದಿಯ ಅಳಿವೆಗಳಲ್ಲಿ ಸುಮಾರು ಹದಿನಾಲ್ಕು ವಿಧದ ಕಾಂಡ್ಲಾ ಪ್ರಭೇದಗಳಿವೆ. ನೀರಿನಲ್ಲಿ ಹೆಚ್ಚು ಉಪ್ಪಿನಾಂಶ ಇದ್ದಲ್ಲಿ ಅವಿಸಿನೀಯಾ, ಬ್ರುಗೇರಿಯಾ ಪ್ರಭೇದಗಳು ಹಾಗೂ ಕಡಿಮೆ ಉಪ್ಪಿನಾಂಶ ಇರುವ ಅಳಿವೆಗಳಲ್ಲಿ ಸೋನೋರೆಶಿಯಾ, ರೈಝಫೋರಾ, ಕಾನಸ್, ಕಾಂಡೇಲಿಯಾ ಇತ್ಯಾದಿ ಪ್ರಭೇದಗಳು ಕಂಡುಬರುತ್ತವೆ.

ಕರಾವಳಿ ಪ್ರದೇಶಗಳಲ್ಲಿ ಜನದಟ್ಟಣೆ ಪ್ರತಿ ಚದರ ಕಿ. ಮೀ ಗೆ 500 ರಷ್ಟು ಇದ್ದು ಜನಸಾಂದ್ರತೆ ಹೆಚ್ಚಳ ಅತಿಯಾದ ಸೀಗಡಿ ಕೃಷಿ, ಅತಿಯಾದ ಮೀನುಗಾರಿಕೆ, ಕೈಗಾರಿಕೆ, ಗೇರು ಸಂಸ್ಕರಣಾ ಘಟಕ, ರೈಲು ನಿಲ್ದಾಣ, ರಸಗೊಬ್ಬರ ಕಾರ್ಖಾನೆ, ಮರಳು ಗಣಿಗಾರಿಕೆ, ಸಮುದ್ರ ಕೊರೆತಕ್ಕೆ ಕಲ್ಲಿನ ತಡೆಗೋಡೆ ನಿರ್ಮಾಣ ಇತ್ಯಾದಿ ಕಾರಣಗಳಿಂದ ಕಾಂಡ್ಲಾವನಗಳು ದಿನಕಳೆದಂತೆ ಕ್ಷೀಣಿಸುತ್ತಿವೆ. ಈ ಮಾಂತ್ರಿಕ ವನಗಳು ಮನುಷ್ಯನನ್ನು ನದಿಯನ್ನು ಮತ್ತು ಸಮುದ್ರವನ್ನು ಬೆಸೆದು ಪ್ರಕೃತಿಯ ರಹಸ್ಯಗಳ ಕೊಂಡಿಯಾಗಿದೆ. ಹವಾಮಾನ ವೈಪರೀತ್ಯವನ್ನು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಕಾಂಡ್ಲಾಗಳು ಪರಿಸರ ವ್ಯವಸ್ಥೆಯ ಒಂದು ಭಾಗವೇ ಆಗಿವೆ. ಈ ಕಾಂಡ್ಲಾವನಗಳು ವಿಶೇಷತೆಗಳನ್ನು ಮತ್ತು ಅಷ್ಟೇ ರಹಸ್ಯಗಳನ್ನು ಹೊಂದಿವೆ ಎಂದರೆ ತಪ್ಪಾಗಲಾರದು.

ಲೇಖನ: ಸಂತೋಷ್ ರಾವ್ ಪೆರ್ಮುಡ 
          ದಕ್ಷಿಣ ಕನ್ನಡ ಜಿಲ್ಲೆ

Spread the love
error: Content is protected.