ಹಾವು ಮತ್ತು ನಾವು

© ಭಗವತಿ ಬಿ. ಎಂ.
ಹಾವುಗಳು ಆಹಾರ ಸರಪಳಿಯ ಪ್ರಮುಖ ಕೊಂಡಿಯಾಗಿವೆ. ಪ್ರಪಂಚದಲ್ಲಿ ಒಟ್ಟು 3000 ಕ್ಕಿಂತ ಹೆಚ್ಚು ಪ್ರಭೇದದ ಹಾವುಗಳು ಕಂಡುಬರುತ್ತವೆ. ಭಾರತದಲ್ಲಿ ಒಟ್ಟು 294 ಪ್ರಭೇದದ ಹಾವುಗಳು ಕಂಡು ಬರುತ್ತವೆ. ಹಾವುಗಳೆಂದರೆ ಸಾಮಾನ್ಯವಾಗಿ ಮಾನವನಿಗೆ ವಿಪರೀತ ಭಯ! ಹಾವುಗಳು ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರೂ ಇನ್ನೂ ಕೂಡ ಹಾವುಗಳ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಬಹಳಷ್ಟು ಜನರು ಎಲ್ಲಾ ಹಾವುಗಳು ವಿಷಕಾರಿಯಾಗಿದ್ದು, ಯಾವುದೇ ಹಾವು ಕಚ್ಚಿದರೂ ಮನುಷ್ಯನು ಕ್ಷಣಮಾತ್ರದಲ್ಲಿ ಸಾವನ್ನಪ್ಪುತ್ತಾನೆ ಎಂಬ ಅಲ್ಪ ತಿಳುವಳಿಕೆಯನ್ನು ಹೊಂದಿದ್ದಾರೆ.
ಭಾರತದಲ್ಲಿ ಒಟ್ಟು ನಾಲ್ಕು ಹಾವುಗಳನ್ನು ಅತ್ಯಂತ ವಿಷಕಾರಿ ಹಾವುಗಳೆಂದು ವಿಂಗಡಿಸಿ ಅವುಗಳಿಗೆ “ಬಿಗ್ 4” ಎಂದು ಹೆಸರಿಸಿದ್ದಾರೆ. ಈ ನಾಲ್ಕು ಹಾವುಗಳ ಕಡಿತದಿಂದ ಭಾರತ ದೇಶದಲ್ಲಿ ಪ್ರತಿ ವರ್ಷ ಸರಿ ಸುಮಾರು 50,000 ಜನರು ಸಾವಿಗೀಡಾಗುತ್ತಿದ್ದಾರೆ.
ಅವುಗಳೆಂದರೆ
1) ನಾಗರಹಾವು (Spectacled Cobra)
2) ಕಟ್ಟು ಹಾವು (Common Krait)
3) ಕೊಳಕು ಮಂಡಲ (Russell’s Viper)
4) ಗರಗಸ ಮಂಡಲ (Saw Scaled Viper)




ಈ ಮೇಲಿನ ನಾಲ್ಕು ಹಾವುಗಳ ಕಡಿತದಿಂದ ದೇಶದಲ್ಲಿ ಅತಿ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ರೈತಾಪಿ ಜನರೇ ಹೆಚ್ಚು. ಕಾಳಿಂಗ ಸರ್ಪವು (King Cobra) ಹೆಚ್ಚು ವಿಷವನ್ನು ಹೊಂದಿದ್ದರೂ ಈ “ಬಿಗ್ 4” ನಿಂದ ಹೊರಗಿಟ್ಟಿದ್ದಾರೆ. ಕಾಳಿಂಗ ಸರ್ಪದ ಕಡಿತಕ್ಕೊಳಗಾಗಿ ಸಾವನ್ನಪ್ಪಿರುವವರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ, ಅದು ಕೂಡ ಅವುಗಳನ್ನು ಸಂರಕ್ಷಣೆ ಮಾಡುವ ಸಮಯದಲ್ಲಿ ಕಡಿತಕ್ಕೊಳಗಾಗಿ ಸಾವನಪ್ಪಿದ್ದಾರೆ. ಹೀಗಾಗಿ ಈ ಹಾವನ್ನು ಈ ಗುಂಪಿನಿಂದ ಹೊರಗಿಟ್ಟಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ಹಾವುಗಳು ಮಾಂಸಾಹಾರಿಗಳು. ಕಾಳಿಂಗ ಸರ್ಪದಂತಹ ಹಾವುಗಳು ಸ್ವಜಾತಿ ಭಕ್ಷಕಗಳಾದರೆ ಮತ್ತೆ ಕೆಲವು ಹಾವುಗಳು ಪರಭಕ್ಷಕಗಳಾಗಿವೆ. ಪ್ರಮುಖವಾಗಿ ಇವುಗಳ ಮುಖ್ಯ ಆಹಾರ ಸರೀಸೃಪಗಳು, ಸಸ್ತನಿಗಳು, ಪಕ್ಷಿಗಳು ಹಾಗೂ ಉಭಯವಾಸಿಗಳಾಗಿವೆ. ನಾಗರ ಹಾವಿನಂತಹ ವಿಷಕಾರಿ ಹಾವುಗಳು ತಮ್ಮ ಬಲಿಜೀವಿಗೆ ವಿಷವನ್ನು ಚುಚ್ಚಿ ಸಾಯಿಸಿ ನುಂಗಿದರೆ, ಹೆಬ್ಬಾವಿನಂತಹ ಕೆಲವೊಂದು ಹಾವುಗಳು ಬಲಿ ಪ್ರಾಣಿಯ ಮೇಲೆ ಎರಗಿ ಅವುಗಳ ದೇಹವನ್ನು ಸುತ್ತಿ ಉಸಿರುಗಟ್ಟಿಸಿ ಸಾಯಿಸಿ ನುಂಗುತ್ತವೆ.
ಹಾವುಗಳ ವಿಷದಲ್ಲಿ ಎರಡು ತರಹದ ವಿಷವು ಕಂಡುಬರುತ್ತದೆ. ಕೆಲವೊಂದು ಹಾವುಗಳಲ್ಲಿ ನ್ಯೂರೊಟಾಕ್ಸಿಕ್ (Neurotoxic) ವಿಷವು ಕಂಡು ಬರುತ್ತದೆ. ಇದು ಜೀವಿಯ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ. ಮತ್ತೆ ಕೆಲವೊಂದು ಹಾವುಗಳಲ್ಲಿ ಹಿಮೋಟಾಕ್ಸಿಕ್ (Haemotoxic) ಕಂಡು ಬರುತ್ತದೆ. ಇದು ರಕ್ತ, ಮಾಂಸ ಖಂಡಗಳ ಮೇಲೆ ಪ್ರಭಾವ ಬೀರುತ್ತದೆ. ಅಪವಾದ ಎಂಬಂತೆ ಕೆಲವೊಂದು ಹಾವುಗಳು ಎರಡೂ ಗುಣಗಳನ್ನು ಹೊಂದಿರುತ್ತವೆ.

ಹಾವುಗಳಿಗೆ ಕಿವಿಗಳಿಲ್ಲ. ನಾವು ಎಷ್ಟೇ ಕೂಗಿದರೂ ಅವುಗಳಿಗೆ ಕೇಳಿಸುವುದಿಲ್ಲ. ಪುಂಗಿಯ ನಾದಕ್ಕೆ ಹಾವುಗಳು ತಲೆಯಾಡಿಸುತ್ತವೆ ಎಂಬುದು ನಮ್ಮ ತಪ್ಪು ಕಲ್ಪನೆ. ಪುಂಗಿಯ ಚಲನೆಯಲ್ಲಿ ಆದ ಬದಲಾವಣೆಯಿಂದಾಗಿ ಹಾವುಗಳು ಪ್ರತಿಕ್ರಿಯಿಸುತ್ತವೆಯೇ ಹೊರತು ಅದರ ಶಬ್ದದಿಂದಲ್ಲ. ಹಾವುಗಳಿಗೆ ಅವುಗಳ ನಾಲಿಗೆಯೇ ಪ್ರಮುಖವಾದ ಇಂದ್ರಿಯ. ನಾಲಿಗೆ ಮುಖಾಂತರ ಕಂಪನವನ್ನು ಗ್ರಹಿಸಿ ಪ್ರತಿಕ್ರಿಯಿಸುತ್ತವೆ. ಹಾವುಗಳು ಕಣ್ಣು ರೆಪ್ಪೆಯನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ ಹಾವುಗಳು ಹುಟ್ಟಿನ ಪ್ರಾರಂಭದಿಂದ ಸಾಯುವವರೆಗೂ ಪೊರೆ ಕಳಚುತ್ತವೆ. ಹಾವುಗಳು ಹುಟ್ಟಿದ ಕೆಲವೊಂದು ದಿನಕ್ಕೆ ತಮ್ಮ ದೇಹದ ಮೇಲಿನ ತೆಳುವಾದ ಪೊರೆಯನ್ನು ಕಳಚುತ್ತವೆ. ದೊಡ್ಡ ಹಾವುಗಳು ಶರೀರದ ಬೆಳವಣಿಗೆಯಾದಂತೆ ಪೊರೆ ಕಳಚುತ್ತವೆ. ಪೊರೆ ಕಳಚುವ ಸಮಯ ಹತ್ತಿರವಾದಂತೆ ಹಾವುಗಳು ಸುರಕ್ಷಿತ ಜಾಗವನ್ನು ಆಯ್ಕೆ ಮಾಡಿಕೊಂಡು ತನ್ನೆಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ವಿಶ್ರಮಿಸುತ್ತವೆ.

ಹುಟ್ಟಿದ ಹೆಣ್ಣು ಹಾವು ಪ್ರಾಯಕ್ಕೆ ಬಂದ ನಂತರ ಅದಕ್ಕೆ ಬೆದೆ ಬರುತ್ತದೆ. ಈ ಸಮಯದಲ್ಲಿ ಗಂಡು ಹಾವನ್ನು ಮಿಲನಕ್ಕೆ ಆಕರ್ಷಿಸುವುದಕ್ಕಾಗಿ ತನ್ನ ದೇಹದ ವಿಶೇಷವಾದ ಅಂಗದ ಮೂಲಕ ಒಂದು ತೆರನಾದ ವಾಸನಾ ದ್ರವ್ಯವನ್ನು ಬಿಡುಗಡೆಗೊಳಿಸುತ್ತದೆ. ಇದನ್ನು “ಪೆರೊಮನ್” ಎಂದು ಕರೆಯುತ್ತಾರೆ. ಗಾಳಿಯ ಮೂಲಕ ವಾಸನಾ ದ್ರವ್ಯವನ್ನು ಆಲಿಸಿದ ಗಂಡು ಹಾವುಗಳು ಮಿಲನಕ್ಕಾಗಿ ಹೆಣ್ಣು ಹಾವನ್ನು ಅರಸುತ್ತಾ ಹೆಣ್ಣು ಹಾವಿನ ಹತ್ತಿರ ಬರುತ್ತವೆ. ಈ ಸಂದರ್ಭದಲ್ಲಿ ಹಲವಾರು ಗಂಡು ಹಾವುಗಳ ಮಧ್ಯೆ ಮಿಲನ ಪೂರ್ವ ಹೋರಾಟ ನಡೆಯುತ್ತದೆ. ಇದನ್ನು Combat ಎಂದು ಕರೆಯುತ್ತಾರೆ. ಈ ಹೋರಾಟದಲ್ಲಿ ಗೆದ್ದ ಬಲಿಷ್ಠ ಗಂಡು ಹಾವು ಹೆಣ್ಣಿನೊಂದಿಗೆ ಮಿಲನ ಕ್ರಿಯೆಯಲ್ಲಿ ತೊಡಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಗಂಡು ಹಾವುಗಳ ಮಧ್ಯದ ಹೋರಾಟ (Combat) ಗಡಿಹೋರಾಟವಾಗಿರುತ್ತದೆ. ತನ್ನ ಗಡಿ ಒಳಗೆ ಬಂದ ಗಂಡು ಹಾವನ್ನು ಹೋರಾಟದ ಮೂಲಕ ಹೆದರಿಸಿ ಓಡಿಸುತ್ತದೆ, ಸೋತರೆ ತಾನೇ ಗಡಿಯಿಂದ ಹೊರ ಹೋಗುತ್ತದೆ.
ಮಿಲನವಾದ ಕೆಲವೊಂದು ದಿನಗಳ ನಂತರ ಹೆಣ್ಣು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಕೊಳಕು ಮಂಡಲದಂತಹ ಹಾವುಗಳಲ್ಲಿ ದೇಹದ ಒಳಗಡೆಯೇ ಮೊಟ್ಟೆಗಳು ಫಲಿತಗೊಂಡು ಮರಿಗಳು ಹೊರ ಬರುತ್ತವೆ. ಕಾಳಿಂಗ ಸರ್ಪ ಮಾತ್ರ ತರಗೆಲೆಗಳಿಂದ ಗೂಡನ್ನು ರಚಿಸಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ.

ಮೇಲೆ ಹೇಳಿದ ಹಾಗೆ ಭಾರತದಲ್ಲಿ ಹಾವುಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ. ವಿಷಕಾರಿ ಹಾವುಗಳು ಕಚ್ಚಿದಾಗ ದೇವರ ಮೊರೆ ಹೋಗುವುದು, ಮಂತ್ರ ಹಾಕಿಸಿಕೊಳ್ಳುವುದು, ಇಲ್ಲದ ಊಹಾಪೋಹಗಳನ್ನು ನಂಬುವುದು, ಕಚ್ಚಿದ ಹಾವಿನಿಂದಲೇ ಮರಳಿ ಅದೇ ಜಾಗಕ್ಕೆ ಕಚ್ಚಿಸಿಕೊಳ್ಳುವುದು, ಕಚ್ಚಿದ ಹಾವನ್ನು ಸಾಯಿಸುವುದು, ಇಂತಹ ನಂಬಿಕೆಗಳಿಂದಲೇ ಭಾರತದಲ್ಲಿ ಪ್ರತೀ ವರ್ಷ 50,000 ಕ್ಕಿಂತ ಹೆಚ್ಚು ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಹಾವು ಕಚ್ಚಿದಾಗ ಯಾವ ನಂಬಿಕೆಗಳು ಕೆಲಸ ಮಾಡುವುದಿಲ್ಲ, ವಿಷಕಾರಿ ಹಾವು ಕಚ್ಚಿದ್ದು ದೃಢವಾದರೆ, ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ಇದಕ್ಕೆ ಒಂದೇ ಪರಿಹಾರ Antivenom ಹಾಕಿಸಿಕೊಳ್ಳುವುದು. ಕೆಲವೊಂದು ಹಾವುಗಳಿಗೆ ಎರಡು ತಲೆಗಳಿವೆ, ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಶ್ರೀಮಂತರಾಗುತ್ತೇವೆ ಎಂದು ನಂಬಿ ಜನರು ಮೋಸ ಹೋಗುತ್ತಿದ್ದಾರೆ. ಎಲ್ಲಿಯವರೆಗೆ ನಾವು ಮೋಸ ಹೋಗುತ್ತೇವೆಯೋ ಅಲ್ಲಿಯವರೆಗೂ ಜನರು ನಮ್ಮನ್ನು ಮೋಸಗೊಳಿಸುತ್ತಿರುತ್ತಾರೆ. ಈ ಕೃತ್ಯ ಎಸಗುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಕಾನೂನಿನ ಅಡಿಯಲ್ಲಿ ಅಪರಾಧವಾಗಿರುತ್ತದೆ.

ಲೇಖನ: ಬಸನಗೌಡ ಎನ್. ಬಗಲಿ
ಉತ್ತರ ಕನ್ನಡ ಜಿಲ್ಲೆ