ಪ್ರಕೃತಿ ಬಿಂಬ

ಕಾಕ © ಹರಿಹರನ್ ಐ. ಎಸ್.
ದಕ್ಷಿಣ ಏಷ್ಯಾ ಮತ್ತು ಆಸ್ಟ್ರೇಲಿಯಾದ ಸಮತಟ್ಟು ಪ್ರದೇಶಗಳ, ಕುರುಚಲು ಕಾಡುಗಳು, ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುವ ಈ ಚಿಟ್ಟೆಗಳು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತವೆ. ಇದನ್ನು ವೈಜ್ಞಾನಿಕವಾಗಿ ಯುಪ್ಲೋಯಾ ಕೋರ್ (Euploea core) ಎಂದು ಕರೆಯಲಾಗುತ್ತದೆ. ಕಪ್ಪು ರೆಕ್ಕಗಳ ಅಂಚಿನಲ್ಲಿ ಬಿಳಿಯ ಮಚ್ಚೆಗಳ ಉದ್ದವಾದ ಸಾಲಿರುತ್ತದೆ. ಈ ಚಿಟ್ಟೆಗಳ ದೇಹದಿಂದ ಬರುವ ವಾಸನೆಯು, ಪರಭಕ್ಷಕಕಗಳು ಇವುಗಳನ್ನು ತಿನ್ನಲಾಗದಂತೆ ಮಾಡುತ್ತದೆ. ಕಣಗಲೆ (Nerium oleander), ವಿವಿಧ ಪ್ರಭೇದದ ಅಂಜೂರದ ಗಿಡಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ನಾವಿಕ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ನೆಪ್ಟಿಸ್ ಹೈಲಾಸ್ (Neptis hylas) ಎಂದು ಕರೆಯಲಾಗುತ್ತದೆ. ಕಡುಗಂದು ಬಣ್ಣವಿರುವ ರೆಕ್ಕೆಯ ಮುಂಭಾಗದ ಅಂಚಿನಿಂದ ಹಿಂಭಾಗದವರೆಗೆ ಬಿಳಿ ಚುಕ್ಕೆಗಳ ಮೂರು ಸಮನಾಂತರ ಪಟ್ಟಿಗಳನ್ನು ಕಾಣಬಹುದು. ಬೆನ್ನಿನ ಭಾಗವು ಹಸಿರು ಹೊಳಪನ್ನು ಹೊಂದಿದೆ. ಒಂದು ಸಲ ರೆಕ್ಕೆ ಬಡಿದು, ಸುಮಾರು ಹೊತ್ತು ತೇಲುತ್ತಿರುತ್ತದೆ, ಗಿಡಗಳ ಮೇಲೆ ಕುಳಿತಾಗ ರೆಕ್ಕೆಗಳನ್ನು ಮುಚ್ಚುವುದು, ತೆರೆಯುವುದು ಮಾಡುತ್ತಿರುತ್ತದೆ. ಯುಫೋರ್ಬಿಯೇಸಿ (Euphorbiaceae) ಕುಟುಂಬಕ್ಕೆ ಸೇರುವ ರಬ್ಬರ್ ಮರಗಳು, ಫ್ಯಾಬೇಸಿ (Fabaceae) ಕುಟುಂಬದ ಕೆಲವು ದ್ವಿದಳ ಸಸ್ಯಗಳು ಮತ್ತು ಮಾಲ್ವೇಸೀ (Malvaceae) ಕುಟುಂಬದ ಹೂಬಿಡುವ ಕೆಲವು ಸಸ್ಯಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

ದಕ್ಷಿಣ ಏಷ್ಯಾ ಖಂಡದ ವಿವಿಧ ಪ್ರದೇಶಗಳ ತೋಟಗಳು, ಪಾಳು ಭೂಮಿ ಮತ್ತು ತೆರೆದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಈ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಲೆಮೊನಿಯಾಸ್ (Junonia lemonias) ಎಂದು ಕರೆಯಲಾಗುತ್ತದೆ. ದೇಹವು ಕಂದು ಬಣ್ಣದ್ದಾಗಿದ್ದು, ರೆಕ್ಕೆಗಳ ಮೇಲೆ ಹಲವಾರು ಕಣ್ಣಿನಂತಹ ಮಚ್ಚೆಗಳು, ಕಪ್ಪು ಹಾಗೂ ನಿಂಬೆ ಹಳದಿ ಬಣ್ಣದ ಚುಕ್ಕೆ ಮತ್ತು ರೇಖೆಗಳನ್ನು ಕಾಣಬಹುದು. ಇವು ತುಂಬಾ ಕ್ರಿಯಾಶೀಲವಾಗಿದ್ದು, ಸೂರ್ಯನ ಕಿರಣಗಳಿಗೆ ರೆಕ್ಕೆಗಳನ್ನು ತೆರೆದು ಕೂರುತ್ತವೆ. ಗಂಡು ಚಿಟ್ಟೆಗಳು ತಮ್ಮದೇ ಆದ ವಾಸಕ್ಷೇತ್ರವನ್ನು ಹೊಂದಿರುತ್ತವೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಮುಳ್ಳು ಗೊರಂಟಿ (Barleria prionitis), ಕೊಳವಳಿಕೆ (Hygrophila schulli), ಬಿಳಿ ಸೆಣಬು (Corchorus capsularis) ಇವುಗಳ ಆತಿಥೇಯ ಸಸ್ಯಗಳಾಗಿವೆ.

ಚಿತ್ರ : ಹರಿಹರನ್ ಐ. ಎಸ್.
ಲೇಖನ: ದೀಪ್ತಿ ಎನ್.