‘ಕಾನನ’ಕ್ಕೆ ಹದಿನೈದು ವಸಂತಗಳ ಸಂಭ್ರಮ

‘ಕಾನನ’ಕ್ಕೆ ಹದಿನೈದು ವಸಂತಗಳ ಸಂಭ್ರಮ

© ಅರವಿಂದ ರಂಗನಾಥ್

ಪುಷ್ಯ ಮಾಸದ ಸಣ್ಣ ಚಳಿಗೆ ಬೆಂಗಳೂರು ತಣ್ಣಗೆ ಕುಳಿತಿದ್ದ ಆ ಭಾನುವಾರದ ಸಂಜೆ ಅಲ್ಲೊಂದು ಜಾಗ ಸಾಹಿತ್ಯದ ಕಂಪು ಪಸರಿಸಿ ಬೆಚ್ಚನಾಗಿತ್ತು. ಪಂಪ ಮಹಾಕವಿ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜೇಂದ್ರ ಸಭಾಂಗಣ, ಹೊಸ ಬರಹಗಾರರ ಅಮೋಘ ಸಮಾಗಮಕ್ಕೆ ಸಾಕ್ಷಿಯಾಗಲು ಸಿದ್ಧವಾಗಿತ್ತು. ಕನ್ನಡ ಸಾಹಿತ್ಯ ಲೋಕದ ಮೇರು ದಿಗ್ಗಜರಾದ ರಾಷ್ಟ್ರಕವಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ರವರ ಭಾವಚಿತ್ರಗಳು ವೇದಿಕೆಗೆ ಮೆರುಗು ನೀಡಿದ್ದವು. ಕರ್ನಾಟಕದ ಮೂಲೆಮೂಲೆಯಿಂದ ಆಗಮಿಸಿದ್ದ ಪರಿಸರಾಸಕ್ತ ಬರಹಗಾರರ ಮೇಳವೇ ಮೇಳೈಸಿದಂತಿತ್ತು. ಅದು ಕಾನನ ಇ-ಮಾಸಪತ್ರಿಕೆಯು ಹದಿನೈದು ಸಂಭ್ರಮದ ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಯೋಜಿಸಿದ್ದ ಕಾರ್ಯಕ್ರಮ. ಆದರೆ ಇಡೀ ಕಾರ್ಯಕ್ರಮದಲ್ಲಿ ಕಾನನದ ಬರಹಗಾರರನ್ನು ಮುನ್ನೆಲೆಯಲ್ಲಿ ನಿಲ್ಲಿಸಿದ್ದು ಅದರ ಹೆಗ್ಗಳಿಕೆಯೇ ಸರಿ.

ಕಾನನ ಇ-ಮಾಸಪತ್ರಿಕೆಯು ವೈಲ್ಡ್ ಲೈಫ್ ಕನ್ಸರ್ವೇಷನ್ ಗ್ರೂಪ್ (WCG) ತಂಡದ ಕನಸಿನ ಕೂಸು. ಬನ್ನೇರುಘಟ್ಟದ ಪಕ್ಕದಲ್ಲಿ ನೆಲೆಗೊಂಡಿರುವ ಈ ಸಂಸ್ಥೆ ಅಲ್ಲಿಯ ಪರಿಸರದ ಬಗ್ಗೆ ಪರಿಣಿತಿ ಹೊಂದಿರುವ ಯುವ ಸದಸ್ಯರ ಪಡೆ. ಅವರೆಲ್ಲರೂ ಪ್ರಕೃತಿಯ ಮಡಿಲಿನಲ್ಲೇ ಹುಟ್ಟಿ ಬೆಳೆದವರು. ಕಾನನ ಮಾಸ ಪತ್ರಿಕೆಯನ್ನು ಓದುಗರಿಗೆ ಕೊಡುಗೆ ನೀಡಿರುವುದರ ಜೊತೆಗೆ ಆ ಸಂಸ್ಥೆ ಮಾಡಿರುವ ನಿಸರ್ಗಪರ ಕಾರ್ಯಗಳನ್ನು ನೆನೆದರೆ ಓದುಗರಿಗೆ WCG ತಂಡದ ಕುರಿತು ಹೆಚ್ಚಿನ ಪರಿಚಯವಾಗುತ್ತದೆ. ಈ ಸಂಸ್ಥೆಯು ಬನ್ನೇರುಘಟ್ಟದಿಂದ ಆನೇಕಲ್ ವರೆಗಿನ ರಸ್ತೆ ಬದಿಯ ಸಾಲುಮರಗಳನ್ನು ವೈಜ್ಞಾನಿಕವಾಗಿ ದಾಖಲಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ, ಈ ಅರಣ್ಯ ವ್ಯಾಪ್ತಿಯಲ್ಲಿ ಕಂಡು ಬರುವ ಸುಮಾರು 200 ಪ್ರಭೇದದ ಪಕ್ಷಿಗಳನ್ನು ದಾಖಲಿಸಿದೆ. ಆ ಪ್ರದೇಶದಲ್ಲಿ ಕಂಡು ಬರುವ ಕೀಟ ಸಂಕುಲ, ಚಿಟ್ಟೆಗಳು, ಜೇಡಗಳು, ಉರಗಗಳು, ಕಪ್ಪೆಗಳನ್ನು ದಾಖಲಿಸಿದೆ. ಅರಣ್ಯ ಇಲಾಖೆಯವರು ನಡೆಸುವ ಆನೆ ಗಣತಿಯಲ್ಲಿ ಸಹಕರಿಸಿದೆ. ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ನೆಟ್ಟು ಬೆಳೆಸುತ್ತಿರುವ ಗಿಡ ಮರಗಳಿಗೆ ಬೇಸಿಗೆ ಸಮಯದಲ್ಲಿ ನೀರೆರೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿನ ಕಾಳೇಶ್ವರಿ ಗ್ರಾಮದ ಕೆರೆಯ ಸುಮಾರು ಒಂದು ಎಕರೆ ಜಾಗವನ್ನು ಭೂಗಳ್ಳರಿಂದ ರಕ್ಷಿಸಿ, ಕೆರೆಯ ಆವರಣದಲ್ಲಿ ಸುಮಾರು 500ಕ್ಕಿಂತಲೂ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ನಿರತವಾಗಿದೆ.

ಪರಿಸರದ ಬಗ್ಗೆ ಮಕ್ಕಳಲ್ಲಿ ಕಾಳಜಿ ಮೂಡಿಸಲು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನವರ ಸಹಯೋಗದೊಂದಿಗೆ ಬನ್ನೇರುಘಟ್ಟ ಸುತ್ತ ಮುತ್ತಲಿನ ಸರ್ಕಾರಿ ಶಾಲಾ ಮಕ್ಕಳಿಗೆ ‘ವನ್ಯ ವಿಜ್ಞಾನ ವಿಹಾರ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಮಕ್ಕಳಿಗೆ, ಯುವ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಅವರದ್ದೇ ಕ್ಯಾಂಪ್ ಸೈಟ್ ಆದ ‘ಅಡವಿ ಫೀಲ್ಡ್ ಸ್ಟೇಷನ್’ ನಲ್ಲಿ ಬೇಸಿಗೆ ಶಿಬಿರವನ್ನು, ಹಲವಾರು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸುತ್ತಲೂ ಅರಣ್ಯವಿರುವ ಕಾರಣ ಅದೇ ಅವರಿಗೆ ಪ್ರಯೋಗ ಶಾಲೆಯಾಗಿದೆ. ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು, ಅದರ ಬಗ್ಗೆ ಒಲವು ಮೂಡಿಸಲು ತಂಡದ ಸದಸ್ಯರೇ ಸೆರೆಹಿಡಿದಿರುವ ಹಲವಾರು ಉತ್ತಮ ಛಾಯಾಚಿತ್ರಗಳನ್ನು ಮುದ್ರಿಸಿ ಪ್ರದರ್ಶಿಸುತ್ತಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿದೆ. ನವೆಂಬರ್ 2011 ರಿಂದ ಕನ್ನಡ ಭಾಷೆಯಲ್ಲಿ ‘ಕಾನನ’ ಎಂಬ ಇ-ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ವನ್ಯವಿಜ್ಞಾನ ಕುರಿತಾದ ಕನ್ನಡದ ಏಕೈಕ ಇ-ಮಾಸಪತ್ರಿಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

© ಅರವಿಂದ ರಂಗನಾಥ್

ಕಾನನ ಮಾಸಪತ್ರಿಕೆಯು ತನ್ನ ಧ್ಯೇಯ ‘ನಿಸರ್ಗದೆಡೆಗೆ ಪಯಣ’ ಕ್ಕೆ ತಕ್ಕಂತೆ ಪರಿಸರ, ಜೀವಸಿರಿ, ಕಾಡು, ಸಂರಕ್ಷಣೆ ಕುರಿತಾದ ಪತ್ರಿಕೆಯಾದ್ದರಿಂದ ಬರಹಗಾರರ ಜೊತೆ ಅನೇಕ ಪರಿಸರಾಸಕ್ತರು, ಪರಿಸರ ಹೋರಾಟಗಾರರು, ಸ್ವಯಂ ಸೇವಕರು ಕೂಡ ಉಪಸ್ಥಿತರಿದ್ದದ್ದು ಬರಹಗಾರರ ಉತ್ಸಾಹ ಇಮ್ಮಡಿಗೊಳ್ಳಲು ಕಾರಣವಾಗಿತ್ತು. ಆರಂಭದಲ್ಲಿ ಅರ್ಧ ಮಾತ್ರವೇ ತುಂಬಿದ್ದ ಸಭಾಂಗಣ ಕೆಲವು ನಿಮಿಷಗಳ ನಂತರ ಹಿಂತಿರುಗಿ ನೋಡಿದರೆ ಕುರ್ಚಿಗಳೆಲ್ಲಾ ಭರ್ತಿಯಾಗಿದ್ದವು. ಶಿಲ್ಪಶ್ರೀ ಕಲ್ಲಿಗನೂರು ರವರ ಸುಶ್ರಾವ್ಯ ಕಂಠಸಿರಿಯಲ್ಲಿ ಮೂಡಿಬಂದ ಸೋಲಿಗರ ಕುರಿತಾದ ಜನಪದ ಸಾಲುಗಳು ಇಡೀ ಸಭಾಂಗಣದಲ್ಲಿ ವಿಶಿಷ್ಠ ಅನುಭೂತಿಯನ್ನು ಉಂಟುಮಾಡಿತ್ತು. ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಬೇಕೆಂಬ ಅಲಿಖಿತ ಕಟ್ಟಳೆಯನ್ನು ಮುರಿದು ಜನಪದ ಗೀತೆಯೊಂದಿಗೆ ವೇದಿಕೆಗೆ ಚಾಲನೆ ನೀಡಿದ್ದು ವಿಶೇಷವೆನಿಸಿತು.

ಜ್ಞಾನದ ಧ್ಯೋತಕವಾದ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವಾಗ ದೀಪ ಬೆಳಗುವವರು ಸಹಜವಾಗಿಯೇ ಪಾದರಕ್ಷೆಯನ್ನು ಕಳಚುತ್ತಾರೆ. ಆದರೆ ಗಿಡಕ್ಕೆ ನೀರೆರೆದು ಉದ್ಘಾಟಿಸುವಾಗ ಸಾಮಾನ್ಯವಾಗಿ ಈ ಸಂಪ್ರದಾಯ ಕಾಣುವುದಿಲ್ಲ. ಆದರೆ ಈ ಕಾರ್ಯಕ್ರಮದ ಪ್ರತಿಯೋರ್ವ ಅತಿಥಿಗಳು ತಮ್ಮ ಪಾದರಕ್ಷೆ ತೆಗೆದು ಗಿಡಕ್ಕೆ ನೀರೆರೆದಾಗ ಎಲ್ಲಾ ಜ್ಞಾನದ ಮೂಲ ಪರಿಸರವೇ ಎಂಬುದನ್ನು ಸಾರಿ ಹೇಳಿದಂತಿತ್ತು.

ಶಿವನಹಳ್ಳಿಯ ರಾಮಕೃಷ್ಣ ಮಿಷನ್ನಿನ ಸ್ವಾಮಿ ವಿಷ್ಣುಮಯಾನಂದಜೀ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ವೇದಿಕೆಯಲ್ಲಿ ಆಧ್ಯಾತ್ಮದ ಪ್ರಭೆಯನ್ನು ಹೊಮ್ಮಿಸಿತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಆಗಮಿಸದ ಪೂಜ್ಯರ ಉಪಸ್ಥಿತಿ ಆಯೋಜಕರ ಕಂಗಳಲ್ಲಿ ಸಾರ್ಥಕತೆಯ ಹೊಳಪನ್ನು ಸೃಷ್ಠಿಸಿತ್ತು. ವಿಷ್ಣುಮಯಾನಂದಜೀ ಮಾತುಗಳಲ್ಲಿ ಅವರಿಗಿರುವ ಪರಿಸರದ ನೈಜಕಾಳಜಿಯ ದಿವ್ಯದರ್ಶನವಾಗುತ್ತಿತ್ತು. ತಮ್ಮ ಮಾತಿನುದ್ದಕ್ಕೂ ಪರಿಸರ ಸಂರಕ್ಷಣೆ ಕುರಿತಾಗಿಯೇ ಮಾತನಾಡುತ್ತಿದ್ದ ಅವರು ಆಯೋಜಕರ ಹಿನ್ನೆಲೆಯನ್ನು ಬಲ್ಲವರಾದ್ದರಿಂದ ಪದೇ ಪದೇ ಅವರ ಬೆನ್ನು ತಟ್ಟುವುದನ್ನು ಮರೆಯಲಿಲ್ಲ.

© ಅರವಿಂದ ರಂಗನಾಥ್

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕಂಡದ್ದು ‘ಜಂಗಾಲ’ ಪುಸ್ತಕ ಬಿಡುಗಡೆ. ಕಾನನ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ WCG ಯ ಸಂಸ್ಥಾಪಕ ಸದಸ್ಯರೂ ಆಗಿರುವ ಡಾ. ಅಶ್ವಥ ಕೆ. ಎನ್. ರವರ ರಚನೆಯ ಪುಸ್ತಕ. ಬಾಲ್ಯದಿಂದಲೂ ಕಾಡಿನ ಒಡನಾಟದಲ್ಲಿ ಬೆಳೆದ ಅಶ್ವಥ ಅವರು ತಮ್ಮ ಅನುಭವದ ಬುತ್ತಿಯನ್ನು ಈ ಪುಸ್ತಕದಲ್ಲಿ ಓದುಗರಿಗಾಗಿ ಬಿಚ್ಚಿಟ್ಟಿದ್ದಾರೆ. ವಿಶೇಷವಾಗಿ ಹಕ್ಕಿಗಳ ಬದುಕಿನ ಕತೆಗಳನ್ನು ಸರಳ ಪದಗಳಲ್ಲಿ ಪೋಣಿಸಿ ಹೇಳಿರುವುದು ಸಾಮಾನ್ಯ ಓದುಗನಿಗೂ ಅಪ್ಯಾಯವೆನಿಸುತ್ತದೆ. ‘ಜಂಗಾಲ’ ಎಂಬ ವಿಶಿಷ್ಟ ಶೀರ್ಷಿಕೆಯನ್ನು ತಮ್ಮ ಪುಸ್ತಕಕ್ಕೆ ನೀಡಿ ಓದುಗರ ಕುತೂಹಲ ಹೆಚ್ಚಿಸಿದ್ದಾರೆ. ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಸ್ವಾಮಿ ವಿಷ್ಣುಮಯಾನಂದರು ನಕಾರಾತ್ಮಕವಾದ ರೋಮಾಂಚನಕಾರಿ ಪುಸ್ತಕಗಳಿಗೂ, ಸಹಜತೆಯನ್ನೇ ಮೈಹೊದ್ದ ‘ಜಂಗಾಲ’ದಂತಹ ಪುಸ್ತಕಗಳಿಗೂ ಇರುವ ವ್ಯತ್ಯಾಸವನ್ನು ಸ್ಮರಿಸಿ, ಲೇಖಕರನ್ನು ಅಭಿನಂದಿಸಿದರು. ಇನ್ನು ಪುಸ್ತಕಕ್ಕೆ ಬೆನ್ನುಡಿ ಬರೆದ ಕ್ಷಮಾ ವಿ. ಭಾನುಪ್ರಕಾಶ್ ಮಾತನಾಡಿ ಪುಸ್ತಕದ ಕುರಿತು ಪಕ್ಷಿನೋಟ ನೀಡುವುದರ ಜೊತೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪುಸ್ತಕದ ‘ಹಸಿರು ಪುಕ್ಕ’ ಕತೆಯನ್ನು ಓದಿದ್ದು ಕೇಳುಗರಿಗೆ ಆಹ್ಲಾದತೆಯನ್ನು ನೀಡಿತು. ಕೃತಿಯ ಕರ್ತೃ ಡಾ. ಅಶ್ವಥ ರವರು ಮಾತನಾಡಿ ಬಾಲ್ಯದಿಂದಲೂ ಅವರ ಮೇಲೆ ಪರಿಣಾಮ ಬೀರಿದ ರಾಮಕೃಷ್ಣ ಮಿಷನ್ ಬಗ್ಗೆ ನೆನೆದು ಸ್ವಾಮಿ ವಿಷ್ಣುಮಯಾನಂದರ ಪರಿಸರ ಕಾಳಜಿಯನ್ನು ಶ್ಲಾಘಿಸಿದರು. ಪುಸ್ತಕವನ್ನು ಹೊರತರುವಲ್ಲಿ ಅವರಿಗೆ ಸಹಕರಿಸಿದ ಪ್ರತಿಯೋರ್ವರನ್ನು ಸ್ಮರಿಸುವುದನ್ನು ಅವರು ಮರೆಯಲಿಲ್ಲ.

© ಅರವಿಂದ ರಂಗನಾಥ್

ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆದ ಮತ್ತೋರ್ವ ಅತಿಥಿಯೆಂದರೆ ಡಾ. ಸಂಜಯ್ ಗುಬ್ಬಿ. ಬಹುಶಃ ಈ ಹೆಸರಿಗೆ ಹೆಚ್ಚಿನ ಪರಿಚಯದ ಅವಶ್ಯಕತೆಯೇ ಇಲ್ಲ. ವನ್ಯಜೀವಿಗಳ ಕುರಿತು ಕಿಂಚಿತ್ತು ಕಾಳಜಿ ಹೊಂದಿರುವವರಿಗೂ ಸಹ ಈ ಹೆಸರು ಚಿರಪರಿಚಿತ. ವನ್ಯಜೀವಿ ಸಂರಕ್ಷಣೆಯಲ್ಲಿ ಯಾವುದೇ ವೈಯಕ್ತಿಕ ಪ್ರತಿಫಲಾಪೇಕ್ಷೆ ಇಲ್ಲದೆ ತೊಡಗಿಸಿಕೊಂಡು ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜಗಜ್ಜಾಹೀರಾದ ಹೆಸರು ಅದು. ಪೂಚಂತೇ ರವರ ಕರ್ವಾಲೊ ಪುಸ್ತಕ ಓದಿದ ಪ್ರೇರಣೆಯಲ್ಲಿ ‘ಮದುವೆ’ ಎಂಬ ದುರಂತ ನನ್ನ ಜೀವನದಲ್ಲಿ ನಡೆದು ಹೋಯಿತು ಎಂದು ಹೇಳಿ ನೆರೆದವರನ್ನು ಸಣ್ಣ ನಗೆಗಡಲಿನಲ್ಲಿ ತೇಲಿಸಿ, ಸಭಿಕರೊಂದಿಗೆ ಸಂವಾದದಲ್ಲಿ ತೊಡಗಿದ ಅವರು ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ, ಅರಣ್ಯ ಇಲಾಖೆಯ, ಸಂಘ ಸಂಸ್ಥೆಗಳ ಜವಾಬ್ದಾರಿಯಷ್ಟೆ ಆಗಿರದೆ ನಿಸರ್ಗದ ಭಾಗವಾದ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವೆಂಬುದನ್ನು ಮನಗಾಣಿಸಲು ಪ್ರಯತ್ನಿಸಿದರು

ಬಸವನಗುಡಿ ರಾಮಕೃಷ್ಣ ಮಠದ ಸ್ವಾಮಿ ಸೌಖ್ಯಾನಂದಜಿ ಮಾತನಾಡಿ ಪುಟ್ಟ ಪುಟ್ಟ ಮಕ್ಕಳಲ್ಲಿ ಪ್ರಕೃತಿಯ ಕುರಿತು, ಜೀವಚರಗಳ ಕುರಿತು ಪ್ರೀತಿ ಮೂಡಿಸುವ ಕೆಲಸವನ್ನು ಮಾಡಿದರೆ ಮುಂಬರುವ ದಿನಗಳಲ್ಲಿ ಅವುಗಳ ಸಂರಕ್ಷಣೆಗೆ ಯಾವುದೇ ಹೋರಾಟಗಳ ಅವಶ್ಯಕತೆ ಇರುವುದಿಲ್ಲ ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವಿ. ತಡಗಣಿ ಯವರು ಸಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಇಲಾಖೆಯು ಮಾಡಿದ ಹಲವಾರು ಕಾರ್ಯಕ್ರಮಗಳಲ್ಲಿ WCG ತಂಡದ ಸದಸ್ಯರು ಕೈಜೋಡಿಸಿದ ಸಂದರ್ಭಗಳನ್ನು ಮೆಲುಕು ಹಾಕಿದರು. ಶಾಲಾ ಮಕ್ಕಳಲ್ಲಿ ನಿಸರ್ಗ ಪ್ರೇಮ ಬೆಳೆಸಲು ಅಶ್ವಥ ಹಾಗೂ ಶಂಕರಪ್ಪರವರ ಗೆಳೆಯರ ಬಳಗ ಮಾಡುತ್ತಿರುವ ಜಾಗೃತಿ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ನೋಡಿ ಮೆಚ್ಚಿರುವುದಾಗಿ ತಿಳಿಸಿದರು.

© ಅರವಿಂದ ರಂಗನಾಥ್

 ‘ಕಾನನ’ ಪತ್ರಿಕೆಯ ಹದಿನೈದನೇ ವಾರ್ಷಿಕೋತ್ಸವ ಹಾಗೂ ‘ಜಂಗಾಲ’ ಪುಸ್ತಕ ಬಿಡುಗಡೆಯ ಎರಡು ಸಂಭ್ರಮಗಳ ನಡುವೆ ಇಡೀ ಸಭಾಂಗಣ ಕಳೆಗಟ್ಟಿತ್ತು. ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ‘ಕಾನನ’ದ ಕೊಡುಗೆದಾರರನ್ನು ಗೌರವಿಸುವ ಕಾರ್ಯ ಆರಂಭವಾಯಿತು. ಕಾನನ ಬರಹಗಾರರ ತಂಡದಲ್ಲಿನ ವೈವಿಧ್ಯತೆ ವೇದಿಕೆಯ ಮೇಲೆ ಗೋಚರಿಸಲಾರಂಭಿಸಿತು. ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಛಾಯಾಚಿತ್ರಗಾರರು, ಪರಿಸರಾಸಕ್ತರು, ಗೃಹಿಣಿಯರು, ಐಟಿ ಉದ್ಯೋಗಿಗಳು, ಹೀಗೆ ಹಲವು ಕ್ಷೇತ್ರದ ಬರಹಗಾರರು ಒಬ್ಬೊಬ್ಬರಾಗಿಯೇ ವೇದಿಕೆಗೆ ಬಂದು ನೆನಪಿನ ಕಾಣಿಕೆ ಸ್ವೀಕರಿಸಿ ಎಲ್ಲಾ ಅತಿಥಿಗಳೊಡನೆ ಫೋಟೋ ಕ್ಲಿಕ್ಕಿಸಿಕೊಂಡದ್ದು ಮಾತ್ರ ಅವಿಸ್ಮರಣೀಯ. ‘ಕಾನನ’ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಸರದಿ ಬರಹಗಾರರದ್ದಾದಾಗ ಹೊಸ ಲೇಖಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಾನನ ತಂಡಕ್ಕೆ ಧನ್ಯವಾದ ತಿಳಿಸಿದರು.

ಕಾನನ ಪತ್ರಿಕೆಗೂ, ಬರಹಗಾರರಿಗೂ ನೇರ ಕೊಂಡಿಯಾದ ನಾಗೇಶ್ ರವರು ತಮ್ಮ ಸರಳ ಸಹಜ ಶೈಲಿಯಲ್ಲಿ ಕಾರ್ಯಕ್ರಮಕ್ಕೆ ನೆರೆದಿದ್ದವರೆಲ್ಲರನ್ನೂ ವಂದಿಸಿದರು. ದೀಪ್ತಿರವರ ಜೇನುದನಿಯ ಅಚ್ಚುಕಟ್ಟಾದ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮ ಹೊಸ ಬರಹಗಾರರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದಂತು ಸತ್ಯ. ‘ಕಾನನ’ ಇ-ಮಾಸಪತ್ರಿಕೆಯ ತಂಡಕ್ಕೆ ಮತ್ತೊಮ್ಮೆ ಅಭಿನಂದನೆಗಳು.

© ಅರವಿಂದ ರಂಗನಾಥ್
© ಅರವಿಂದ ರಂಗನಾಥ್

ಲೇಖನ: ಶ್ರೀಕಾಂತ್ ಎ. ವಿ.
          ಶಿವಮೊಗ್ಗ ಜಿಲ್ಲೆ

Spread the love
error: Content is protected.