ಪ್ರಕೃತಿ ಬಿಂಬ
ಗದ್ದೆ ಮಿಂಚುಳ್ಳಿ © ಚೈತನ್ಯ ಶರ್ಮ
ಏಷ್ಯಾದ ವಿವಿಧ ಭಾಗಗಳ ಜೌಗು ಪ್ರದೇಶಗಳು, ಸರೋವರಗಳು, ಕೃಷಿ ಮತ್ತು ಇತರೆ ಪ್ರದೇಶಗಳ ಬೇಲಿ ಕಂಬಗಳ ಮೇಲೆ ಕಾಣಸಿಗುವ ಈ ಮಿಂಚುಳ್ಳಿಯು ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಹಾಲ್ಸಿಯಾನ್ ಸ್ಮಿರ್ನೆನ್ಸಿಸ್ (Halcyon smyrnensis) ಎಂದು ಕರೆಯಲಾಗುತ್ತದೆ. ಇದು ಕಂದು ಬಣ್ಣದ ದೇಹವನ್ನು ಹೊಂದಿದ್ದು, ನೀಲಿ ಬಣ್ಣದ ಬೆನ್ನು, ರೆಕ್ಕೆಗಳು ಮತ್ತು ಬಾಲವನ್ನು ಹಾಗೂ ಬಿಳಿಯ ಬಣ್ಣದ ಎದೆ ಮತ್ತು ಕುತ್ತಿಗೆಯನ್ನು ಹೊಂದಿರುತ್ತದೆ. ದೊಡ್ಡ ಕೊಕ್ಕು ಮತ್ತು ಕಾಲುಗಳು ಕೆಂಪು ಬಣ್ಣದ್ದಾಗಿರುತ್ತವೆ. ಮಣ್ಣಿನ ಗೋಡೆಗಳಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಗೂಡನ್ನು ಕಟ್ಟುತ್ತದೆ. ಕೀಟಗಳು, ಎರೆಹುಳುಗಳು, ಇಲಿಗಳು, ಹಲ್ಲಿಗಳು, ಹಾವುಗಳು, ಮೀನುಗಳು ಮತ್ತು ಕಪ್ಪೆಗಳನ್ನು ಬೇಟೆಯಾಡುತ್ತದೆ. ಇದು ಸಣ್ಣ ಹಕ್ಕಿಗಳನ್ನೂ ಸಹ ತಮ್ಮ ಆಹಾರವಾಗಿ ಸೇವಿಸುತ್ತದೆ.
ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ತೋಟ, ಅರಣ್ಯ ಪ್ರದೇಶ ಹಾಗೂ ಮ್ಯಾಂಗ್ರೋವ್ ಗಳಲ್ಲಿ ಕಂಡು ಬರುವ ಈ ಬೆಳ್ಗಣ್ಣ ಹಕ್ಕಿಯು ಜೋಸ್ಟೆರೋಪಿಡೆ (Zosteropidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜೋಸ್ಟೆರೋಪ್ಸ್ ಪಾಲ್ಪೆಬ್ರೋಸಸ್ (Zosterops palpebrosus) ಎಂದು ಕರೆಯಲಾಗುತ್ತದೆ. ದೇಹವು ಹಳದಿ ಮಿಶ್ರಿತ ಹಸಿರು ಬಣ್ಣವಿದ್ದು, ಕಣ್ಣ ಸುತ್ತಲೂ ಉಂಗುರಾಕಾರದಲ್ಲಿ ಬಿಳಿಯ ಬಣ್ಣವಿರುತ್ತದೆ. ಹೊಟ್ಟೆಯ ಭಾಗವು ಬೂದು ಮಿಶ್ರಿತ ಬಿಳಿ ಬಣ್ಣವಿರುತ್ತದೆ. ಸಾಮಾನ್ಯವಾಗಿ ಮರಗಳ ಮೇಲೆ ಗುಂಪುಗಳಲ್ಲಿ ಕಾಣಿಸುತ್ತವೆ. ಜೇಡರ ಬಲೆ, ಗಿಡಗಳ ನಾರುಗಳನ್ನು ಉಪಯೋಗಿಸಿ ಕೇವಲ ನಾಲ್ಕು ದಿನಗಳಲ್ಲಿ ಗೂಡನ್ನು ಕಟ್ಟಿ ಎರಡು ತೆಳು ನೀಲಿ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ಹತ್ತು ದಿನಗಳ ನಂತರ ಮೊಟ್ಟೆಯೊಡೆದು ಮರಿ ಹಕ್ಕಿಗಳು ಆಚೆ ಬರುತ್ತವೆ. ಇವು ವಿವಿಧ ರೀತಿಯ ಕೀಟಗಳನ್ನು ಸೇವಿಸುತ್ತವೆ. ಕೆಲವು ಪ್ರಭೇದಗಳು ಮಕರಂದ ಮತ್ತು ಹಣ್ಣುಗಳನ್ನೂ ಸಹ ತಮ್ಮ ಆಹಾರವಾಗಿ ಸೇವಿಸುವುದುಂಟು.
ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ವಿವಿಧ ಪ್ರದೇಶಗಳ ಕಾಡು ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುವ ಈ ಪುಟ್ಟ ಗಿಳಿಯು ಸಿಟ್ಟಾಕುಲಿಡೇ (Psittaculidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಲೋರಿಕ್ಯುಲಸ್ ವರ್ನಾಲಿಸ್ (Loriculus vernalis) ಎಂದು ಕರೆಯಲಾಗುತ್ತದೆ. ಕೇವಲ 14 ಸೆಂ. ಮಿ ಗಾತ್ರದಲ್ಲಿರುವ ಇದರ ದೇಹವು ಹಸಿರು ಬಣ್ಣದ್ದಾಗಿದ್ದು, ಕೊಕ್ಕು ಮತ್ತು ಬಾಲದ ಮೇಲ್ಭಾಗವು (Rump) ಕೆಂಪು ಬಣ್ಣವಿರುತ್ತದೆ. ಗಂಡು ಹಕ್ಕಿಯು, ಕುತ್ತಿಗೆಯ ಮುಂಭಾಗದಲ್ಲಿ ನೀಲಿ ಬಣ್ಣದ ತೇಪೆಯನ್ನು ಹೊಂದಿರುತ್ತದೆ. ಹೆಣ್ಣು ಹಕ್ಕಿಯಲ್ಲಿ ಹಸಿರು ತೇಪೆಯಿರುತ್ತದೆ. ಗುಂಪುಗಳಲ್ಲಿ ವಾಸಿಸುತ್ತಾ ಮರದ ಪೊಟರೆಗಳಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನು ಇಡುತ್ತದೆ. ಹಣ್ಣುಗಳು, ಬೀಜಗಳು, ಹೂವಿನ ಮೊಗ್ಗು ಮತ್ತು ಮಕರಂದವನ್ನು ತಮ್ಮ ಆಹಾರವಾಗಿ ಸೇವಿಸುತ್ತದೆ.
ಚಿತ್ರ : ಚೈತನ್ಯ ಶರ್ಮ
ಲೇಖನ: ದೀಪ್ತಿ ಎನ್.