ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

            ನಾಮದ ಕೋಳಿ                                                          ©  ಭಗವತಿ ಬಿ. ಎಂ.

ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳ ಸರೋವರ ಹಾಗೂ ಕೊಳಗಳಲ್ಲಿ ಕಂಡುಬರುವ ಈ ಹಕ್ಕಿಯು ರಾಲಿಡೇ (Rallidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಫುಲಿಕಾ ಅಟ್ರಾ (Fulica atra) ಎಂದು ಕರೆಯಲಾಗುತ್ತದೆ‌. ಮೈ ಬಣ್ಣವು ಕಡು ಕಂದು ಬಣ್ಣದಲ್ಲಿದ್ದು, ಬಿಳಿ ಕೊಕ್ಕು ಹಾಗೂ ಬಿಳಿ ಹಣೆಯನ್ನು ಹೊಂದಿದೆ. ಪಾಚಿ, ಹಣ್ಣು, ಬೀಜಗಳು ಮತ್ತು ಇತರೆ ಪಕ್ಷಿಗಳ ಮೊಟ್ಟೆಗಳನ್ನು ಸೇವಿಸುತ್ತದೆ. ಸದಾ ಜೋರಾದ ಗದ್ದಲವನ್ನು ಮಾಡುತ್ತದೆ. ತಮ್ಮ ಎದುರಾಳಿಗಳನ್ನು ಉದ್ದವಾದ ಕಾಲುಗಳಿಂದ ಹೊಡೆಯುವ ಮೂಲಕ ಆಕ್ರಮಣ ಮಾಡುತ್ತವೆ.

ಕೆಂಪು ಟಿಟ್ಟಿಭ                                                                                                  ©  ಭಗವತಿ ಬಿ. ಎಂ.                     

ಭಾರತ, ಬಂಗ್ಲಾದೇಶ, ಪಾಕಿಸ್ತಾನ, ಸಿಲೋನ್ ಮತ್ತು ಬರ್ಮಾದೆಲ್ಲೆಡೆ ಕಾಣುತ್ತದೆ. ನೀರನ್ನು ಹೊಂದಿರುವ ತೆರೆದ ಪ್ರದೇಶಗಳು, ಉಳುಮೆ ಮಾಡಿದ ಹೊಲಗಳಲ್ಲಿ ಕಂಡುಬರುವ ಈ ಕೆಂಪು ಟಿಟ್ಟಿಭ ಚರಾದ್ರಿಡೆ (Charadriidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ವ್ಯಾನೆಲಸ್ ಇಂಡಿಕಸ್ (Vanellus indicus) ಎಂದು ಕರೆಯಲಾಗುತ್ತದೆ. ಕತ್ತು ಮತ್ತು ಎದೆಯ ಭಾಗವು ಕಪ್ಪಾಗಿದ್ದು, ಕಪ್ಪು ತುದಿಯನ್ನು ಹೊಂದಿರುವ ಕೆಂಪು ಕೊಕ್ಕನ್ನು ಹೊಂದಿರುತ್ತದೆ. ಬಿಳಿ ತೇಪೆಯು ಕೆನ್ನೆಯಿಂದ ದೇಹದ ಕೆಳಭಾಗದವರೆಗೂ ಹರಡಿರುತ್ತದೆ. ಕಂದು ಮಿಶ್ರಿತ ಕಪ್ಪು ಬಣ್ಣದ ರೆಕ್ಕೆಗಳಲ್ಲಿನ ಬಿಳಿಯ ತೇಪೆಯು ಹಾರಾಡುವಾಗ ಪ್ರಧಾನವಾಗಿ ಕಾಣುತ್ತದೆ. ಗೊಬ್ಬರದಹುಳು, ಬಸವನ ಹುಳು, ಹಲ್ಲಿ, ಹಾವಿನ ಮರಿಗಳು ಇತ್ಯಾದಿಗಳನ್ನು ತಿನ್ನುತ್ತದೆ. ಕಲ್ಲಿನ ಮೇಲೆ ಅಥವಾ ಗಟ್ಟಿ ನೆಲದ ಮೇಲೆ ಮೊಟ್ಟೆಗಳನ್ನಿಡುತ್ತದೆ ಹಾಗೂ ಗಾಬರಿಯಾದಾಗ ವಿಟ್ಟಿಟಿಟಿವ್ ಎಂದು ಕೂಗುತ್ತಾ ಹಾರುತ್ತದೆ.

                              
ಹುಂಡು ಕೋಳಿ                                                                      ©  ಭಗವತಿ ಬಿ. ಎಂ

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಜೌಗು ಪ್ರದೇಶದ ಸುತ್ತಮುತ್ತಲಿನ ಪೊದೆಗಳೆಡೆಯಲ್ಲಿ ಮತ್ತು ಜೊಂಡಿನ ಸಂದುಗೊಂದುಗಳಲ್ಲಿ ಹಗುರವಾದ ಹೆಜ್ಜೆಗಳನಿಡುತ್ತಾ ನಡೆದಾಡುವ ಚುರುಕಾದ ಹುಂಡು ಕೋಳಿಯು ರಾಲಿಡೇ (Rallidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ (Amaurornis phoenicurus) ಅಮರೊರ್ನಿಸ್ ಫೀನಿಕುರಸ್ ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಕಡು ಬೂದು ಬಣ್ಣವಿದ್ದು, ಕೆಳಭಾಗವು ಬಿಳಿಯ ಬಣ್ಣದಲ್ಲಿರುತ್ತದೆ. ಹಳದಿ ಕೊಕ್ಕು ಹಾಗೂ ಕಾಲುಗಳನ್ನು ಹೊಂದಿರುತ್ತದೆ. ಕೀಟಗಳು, ಸಣ್ಣ ಮೀನುಗಳು, ಧಾನ್ಯಗಳು ಅಥವಾ ಬೀಜಗಳನ್ನು ತಿನ್ನುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಮೊಟ್ಟೆಗಳಿಗೆ ಕಾವು ಕೊಡುತ್ತವೆ ಮತ್ತು ಮರಿಗಳನ್ನು ನೋಡಿಕೊಳ್ಳುತ್ತವೆ. ಬೇಟೆಯಿಂದ ತಪ್ಪಿಸಿಕೊಳ್ಳಲು ಮರಿಗಳು ಸಾಮಾನ್ಯವಾಗಿ ನೀರಿನ ಅಡಿಯಲ್ಲಿ ಧುಮುಕುತ್ತವೆ. ಸಂಜೆ ಹೊತ್ತಿನಲ್ಲಿ ಪೊದೆಗಳೊಳಗೆ ಕುಳಿತು ಕೊರ್ರೊಕೊಕ್ ಕೊಕ್ ಎಂದು ಅವಿರತವಾಗಿ ಕೂಗುತ್ತದೆ.

    ಗೋವಕ್ಕಿ                                                                                                     ©  ಭಗವತಿ ಬಿ. ಎಂ.

ಉಷ್ಣವಲಯ, ಉಪೋಷ್ಣವಲಯ ಮತ್ತು ಬೆಚ್ಚಗಿನ ಸಮಶೀತೋಷ್ಣ ವಲಯಗಳ ಜೌಗು ಪ್ರದೇಶಗಳು, ಜಲಾಶಯಗಳು, ಸರೋವರಗಳು, ನದಿ ತೀರದ ಕಾಡುಗಳು ಮತ್ತು ಎತ್ತರದ ಕಾಡುಗಳಲ್ಲಿ ಕಾಣಸಿಗುವ ಗೋವಕ್ಕಿಯು ಆರ್ಡಿಡೆ (Ardeidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಬುಬುಲ್ಕಸ್ ಕೋರಮಾಂಡಸ್ (Bubulcus coromandus) ಎಂದು ಕರೆಯಲಾಗುತ್ತದೆ. ದೇಹವು ಬಿಳಿಯ ಬಣ್ಣವಿದ್ದು, ಹಳದಿ ಕೊಕ್ಕನ್ನು ಹೊಂದಿರುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ, ತಲೆ, ಕಾಲು ಮತ್ತು ಎದೆಯ ಭಾಗವು ಪ್ರಕಾಶಮಾನವಾದ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ ಹಾಗೆಯೇ ಪ್ರಕಾಶಮಾನವಾದ ಕೊಕ್ಕನ್ನು ಸಹ ಹೊಂದಿರುತ್ತದೆ. ಕೀಟಗಳು, ಮೀನು, ಕಪ್ಪೆಗಳು, ಇತರೆ ಸಸ್ತನಿಗಳು ಮತ್ತು ಪಕ್ಷಿಗಳು ಇವುಗಳ ಆಹಾರವಾಗಿವೆ. ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತಾ, ದನಗಳಲ್ಲಿನ ಕೀಟಗಳನ್ನು ಸೇವಿಸುವುದನ್ನು ಕಾಣಬಹುದು.

ಚಿತ್ರಗಳು : ಭಗವತಿ ಬಿ. ಎಂ.ಸಿ
        ಲೇಖನ : ದೀಪ್ತಿ ಎನ್.

Print Friendly, PDF & Email
Spread the love

Leave a Reply

Your email address will not be published. Required fields are marked *

error: Content is protected.