ಹಿಮಾಲಯನ್ ಮೋನಲ್

ಹಿಮಾಲಯನ್ ಮೋನಲ್

© ಭಗವತಿ ಬಿ. ಎಮ್.

 ‘ಹಿಮಾಲಯನ್ ಮೋನಲ್’ ಹೆಸರೇ ಹೇಳುವಂತೆ ಇದು ಹಿಮಾಲಯ ಪರ್ವತ ಪ್ರದೇಶದಲ್ಲಿ ವಾಸಿಸುವ ವಿಶಿಷ್ಟ ಪಕ್ಷಿಯಾಗಿದ್ದು, ನಮ್ಮ ನೆರೆಯ ದೇಶವಾದ ನೇಪಾಳದ ‘ರಾಷ್ಟ್ರ ಪಕ್ಷಿ’ ಯಾಗಿ ಗುರುತಿಸಿಕೊಂಡಿದೆ. ಈ ಪಕ್ಷಿಯನ್ನು ‘ಇಂಪೇನ್ ಮೋನಲ್’ ಅಥವಾ ‘ಇಂಪೇನ್ ಫೆಸೆಂಟ್’ ಎಂದು ಕರೆಯಲಾಗುತ್ತದೆ. ಇದು ‘ಬೇಟೆ ಹಕ್ಕಿ’ಯ ಪ್ರಭೇದಕ್ಕೆ ಸೇರಿದ್ದು, ಇದನ್ನು ನೇಪಾಳದಲ್ಲಿ ‘ಧನ್‌ಫೆ’ ಎಂದೂ ಕರೆಯುತ್ತಾರೆ. ಈ ಪಕ್ಷಿಯು ಉತ್ತರಾಖಂಡ್ ರಾಜ್ಯದ ರಾಜ್ಯ ಪಕ್ಷಿಯೂ ಆಗಿದ್ದು, ಇಲ್ಲಿ ಈ ಪಕ್ಷಿಯನ್ನು ‘ಮೋನಲ್’ ಎಂದು ಕರೆಯುತ್ತಾರೆ. 2007ರ ವರೆಗೆ ಈ ಪಕ್ಷಿಯು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿಯೂ ಗುರುತಿಸಿಕೊಂಡಿದ್ದು, ಈ ಪಕ್ಷಿಯನ್ನು ‘ಏಕ ಜೈವಿಕ ಕುಲ’ ಪ್ರಭೇದಕ್ಕೆ ಸೇರಿದ್ದೆಂದೂ ಗುರುತಿಸಲಾಗಿದೆ. ಅಧ್ಯಯನದ ಪ್ರಕಾರ ವಾಯುವ್ಯ ಭಾರತದಲ್ಲಿರುವ ಗಂಡು ಮೋನಲ್‌ಗಳ ಕಂದು ಬಣ್ಣದ ಉದ್ದನೆಯ ಬಾಲವು ಇತರೆಲ್ಲಾ ಮೋನಲ್‌ಗಳಿಗಿಂತ ಕಡಿಮೆ ಉದ್ದವಿರುವುದನ್ನು ಗುರುತಿಸಲಾಗಿದೆ. ಇವುಗಳ ಎದೆಯ ಭಾಗವು ಗಾಢ ಹಸಿರು ಬಣ್ಣದಿಂದ ಕೂಡಿದ್ದು, ಇವುಗಳಲ್ಲಿರುವ ಉಪ ವರ್ಗಗಳ ಇರುವಿಕೆಯನ್ನು ಸೂಚಿಸುತ್ತದೆ.

‘ಹಿಮಾಲಯನ್ ಮೋನಲ್’ನ ವೈಜ್ಞಾನಿಕ ಹೆಸರು ‘ಲೇಡಿ ಮೇರಿ ಇಂಪೇ’ Lophophorus impejanus ಆಗಿದ್ದು, ಇದು ಬಂಗಾಳದ ಬ್ರಿಟೀಷ್ ಮುಖ್ಯ ನ್ಯಾಯಾಧೀಶನ ಹೆಂಡತಿ ‘ಸರ್ ಎಲಿಜಬೆತ್ ಇಂಪೇ’ರ ಹೆಸರನ್ನು ನೆನಪಿಸುತ್ತದೆ. ಈ ಪಕ್ಷಿಯು ಗಾತ್ರದಲ್ಲೂ ದೊಡ್ಡದಾಗಿದ್ದು, ಸರಿಸುಮಾರು 70 ಸೆಂ. ಮೀ. ಉದ್ದದೊಂದಿಗೆ ಗಂಡು ಮೋನಲ್ ಸರಾಸರಿ 2380 ಗ್ರಾಂ ತೂಗಿದರೆ, ಹೆಣ್ಣು ಮೋನಲ್ 2150 ಗ್ರಾಂ ತೂಗುತ್ತದೆ. ವಯಸ್ಕ ಗಂಡು ಮೋನಲ್‌ಗಳ ಮೈ ತುಂಬಾ ವೈವಿಧ್ಯಮಯ ಬಣ್ಣದ ಗರಿಗಳು ತುಂಬಿರುವುದರಿಂದ ಎಂಥವರನ್ನೂ ಒಂದೇ ನೋಟಕ್ಕೆ ಆಕರ್ಷಿಸಿಬಿಡುತ್ತವೆ. ಆದರೆ ಹೆಣ್ಣು ಮೋನಲ್‌ಗಳ ಮೈಬಣ್ಣ ಅಷ್ಟೊಂದು ಆಕರ್ಷಕವಾಗಿರದೆ ಕಂದು ಬಣ್ಣದಿಂದ ಕೂಡಿರುತ್ತದೆ. ಗಂಡು ಮೋನಲ್‌ಗಳ ತಲೆಯಲ್ಲಿ ಉದ್ದನೆಯ ಲೋಹೀಯ ಹಸಿರು ವರ್ಣದ ಜುಟ್ಟು, ಬೆನ್ನು ಹಾಗೂ ಕತ್ತಿನಲ್ಲಿರುವ ಗಾಢ ವರ್ಣದ ಪುಕ್ಕಗಳು ಮತ್ತು ಹಾರಾಡುವಾಗ ಆಕರ್ಷಕವಾಗಿ ಕಾಣುವ ಕಂದು ಮತ್ತು ಬಿಳಿ ಮಿಶ್ರಿತ ಉದ್ದನೆಯ ಬಾಲದ ಕಾರಣದಿಂದಾಗಿ ಗಂಡು ಮೋನಲ್‌ಗಳನ್ನು ಸುಲಭವಾಗಿ ಗುರುತಿಸಬಹುದು. ಗಂಡು ಮೋನಲ್‌ಗಳ ಬಾಲದ ಗರಿಯು ಕಂದು ಬಣ್ಣದಿಂದ ಕೂಡಿದ್ದರೆ, ಹೆಣ್ಣು ಮೋನಲ್‌ಗಳ ಬಾಲವು ಕಂದು ಮತ್ತು ಕಪ್ಪು ಬಣ್ಣಗಳ ಮಿಶ್ರಣದಿಂದ ಕೂಡಿರುತ್ತದೆ ಹಾಗೂ ಕತ್ತಿನ ಸುತ್ತ ಬಿಳಿಯ ಪುಕ್ಕಗಳು ಗೋಚರಿಸುತ್ತವೆ. ಒಂದು ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮೋನಲ್‌ಗಳು ಗಾತ್ರದಲ್ಲಿ ಹೊರತುಪಡಿಸಿದರೆ ನೋಡಲು ಒಂದನ್ನೊಂದು ಬಹುತೇಕ ಹೋಲುವುದರಿಂದ ಗುರುತಿಸುವುದು ಸ್ವಲ್ಪ ಕಷ್ಟವೆನ್ನಬಹುದು. ಇವುಗಳ ಕಣ್ಣುಗಳು ಅತ್ಯಂತ ತೀಕ್ಷ್ಣವಾಗಿದ್ದು, ಕಣ್ಣಿನ ಸುತ್ತ ನೀಲಿ ಬಣ್ಣದ ಪುಕ್ಕಗಳಿಂದ ಕೂಡಿ, ಹರಿತವಾದ ಹಾಗೂ ಚೂಪಾದ ಬಾಗಿದ ಕೊಕ್ಕನ್ನು ಹೊಂದಿರುತ್ತವೆ. ಇವುಗಳ ಕಾಲುಗಳು ಅತ್ಯಂತ ಬಲಿಷ್ಟವಾಗಿದ್ದು, ಇವುಗಳು ವೇಗದ ಹಾರಾಟಕ್ಕೂ, ಓಟಕ್ಕೂ ಸೈ ಎನ್ನಿಸಿಕೊಳ್ಳುತ್ತವೆ.

© ಭಗವತಿ ಬಿ. ಎಮ್.

ಈ ಪಕ್ಷಿಯ ಮೂಲ ಅಫ್ಘಾನಿಸ್ಥಾನವಾಗಿದ್ದು, ಇಲ್ಲಿಂದ ವಲಸೆ ಬಂದ ಈ ಪಕ್ಷಿಗಳು ಇಂದು ಹಿಮಾಲಯ ಪರ್ವತ ಶ್ರೇಣಿ, ಪಾಕಿಸ್ತಾನ, ನೇಪಾಳ, ಕಾಶ್ಮೀರ, ದಕ್ಷಿಣ ಟಿಬೆಟ್, ಭೂತಾನ್, ಬರ್ಮಾ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇವುಗಳು ಹೆಚ್ಚಾಗಿ ಸಮಶೀತೋಷ್ಣ ವಲಯದ ಓಕ್ ಮತ್ತು ಕೊನಿಫೆರಸ್ ಅರಣ್ಯಗಳು, ಇಳಿಜಾರು ಹುಲ್ಲುಗಾವಲುಗಳು, ದೊಡ್ಡ ಬಂಡೆಗಳು, ಪರ್ವತ ಶ್ರೇಣಿಗಳು ಮತ್ತು ಸಮುದ್ರ ಮಟ್ಟಕ್ಕಿಂತ ಎತ್ತರದ ಪ್ರದೇಶಗಳಲ್ಲೇ ವಾಸಿಸುತ್ತವೆ. ಇವುಗಳು ದಟ್ಟ ಮಂಜು ಹಾಗೂ ಗಾಢ ಚಳಿಯನ್ನೂ ಸಹಿಸಿಕೊಳ್ಳುತ್ತವಾದ್ದರಿಂದ ಹಿಮ ಹಾಗೂ ಮಣ್ಣನ್ನು ಅಗೆದು ಮರ ಗಿಡಗಳ ಬೇರುಗಳನ್ನು ಹಾಗೂ ಮಣ್ಣಿನಲ್ಲಿ ಹುದುಗಿರುವ ಹುಳು ಹುಪ್ಪಟೆಗಳನ್ನು ತಿಂದು ಬದುಕುತ್ತವೆ. ಇವುಗಳು ಗಂಡು ಮತ್ತು ಹೆಣ್ಣು ಹೆಚ್ಚಾಗಿ ಜೋಡಿಗಳಾಗಿಯೇ ಬದುಕುತ್ತವಾದ್ದರಿಂದ ಏಪ್ರಿಲ್‌ನಿಂದ ಆಗಸ್ಟ್ ತಿಂಗಳುಗಳ ಅವಧಿಯಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಚಳಿಗಾಲದ ಅವಧಿಯಲ್ಲಿ ಅಲ್ಲಲ್ಲಿ ಚದುರಿರುವ ಎಲ್ಲಾ ಮೋನಲ್‌ಗಳು ಒಟ್ಟಾಗಿ ಒಂದೆಡೆ ವಿಶ್ರಾಂತಿಯನ್ನು ಪಡೆಯುತ್ತವೆ. ಹಿಮಾಲಯನ್ ಮೋನಲ್‌ಗಳನ್ನು ತಕ್ಷಣ ಕಂಡಾಗ ನವಿಲಿನಂತೆ ಕಂಡರೂ ಅಚ್ಚರಿ ಪಡಬೇಕಿಲ್ಲ. ನವಿಲಿಗೆ ಹೋಲಿಸಿದಾಗ ಮೋನಲ್‌ಗಳ ನೋಟವೇ ಅತ್ಯಂತ ಆಕರ್ಷಣೀಯವಾಗಿದ್ದು, ನವಿಲಿನ ಅಂದವನ್ನೂ ಮೀರಿಸುತ್ತದೆ. ಕಾಮನಬಿಲ್ಲಿನಂತೆ ಗರಿಯಲ್ಲಿನ ವರ್ಣವೈವಿಧ್ಯ, ಲೋಹೀಯ ತಂತಿಯಂತಹ ಹಸಿರು ಜುಟ್ಟು ಹಾಗೂ ಕಂದು ಬಣ್ಣದ ಜುಟ್ಟುಗಳೇ ಇದರ ವೈಶಿಷ್ಟ್ಯತೆಗಳು.

ಇವುಗಳು ಬೇಟೆಗಾರರ ಹಾವಳಿಯಿಂದ ಹಾಗೂ ಮಾನವಜನ್ಯ ಕಾರಣಗಳಿಂದ (ಅರಣ್ಯನಾಶ, ಕಾಂಕ್ರಿಟೀಕರಣ, ಕೈಗಾರಿಕೀಕರಣ, ವಿಷಕಾರಿ ತ್ಯಾಜ್ಯ, ಪರಿಸರ ಮಾಲಿನ್ಯ) ಇಂದು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ಪಶ್ಚಿಮ ಹಿಮಾಲಯದಲ್ಲಿ ಜಲವಿದ್ಯುತ್ ಸ್ಥಾವರಗಳ ಹೆಚ್ಚಳದಿಂದಾಗಿ ಮೋನಲ್‌ಗಳ ವಂಶಾಭಿವೃದ್ಧಿಯು ತೀರಾ ಕುಂಠಿತಗೊಂಡಿದೆ ಎಂದು ಅಧ್ಯಯನವು ಹೇಳುತ್ತದೆ. ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗುವ ಟೊಪ್ಪಿಗಳನ್ನು ಅಲಂಕರಿಸಲು ಗಂಡು ಮೋನಲ್‌ಗಳ ಲೋಹೀಯ ವರ್ಣದ ಜುಟ್ಟನ್ನು ಬಳಸುವುದರಿಂದ ಗಂಡು ಮೋನಲ್‌ಗಳ ಸಂತತಿಯು ಅವನತಿಯತ್ತ ಸಾಗಿದೆ. 1982ನೇ ಇಸವಿಯಲ್ಲಿ ಹಿಮಾಚಲ ಪ್ರದೇಶದ ಸರಕಾರವು ಮೋನಲ್‌ಗಳ ಬೇಟೆಯನ್ನು ನಿಷೇಧಿಸಿ ಕಾನೂನನ್ನು ತಂದಿರುವುದರಿಂದ ತಕ್ಕಮಟ್ಟಿಗೆ ಇವುಗಳ ಸಂತತಿಯು ಪುನಶ್ಚೇತನಗೊಳ್ಳುತ್ತಿದೆ ಎನ್ನಬಹುದು. ಕೆಲವೊಂದು ಪ್ರದೇಶಗಳಲ್ಲಿ ಇವುಗಳ ಸಂಖ್ಯೆಯು ಉತ್ತಮವಾಗಿದ್ದು, ಅಂಕಿ-ಅಂಶಗಳ ಪ್ರಕಾರ ಪ್ರತೀ ಚದರ ಮೈಲಿಗೆ ತಲಾ ಐದು ಜೊತೆಯಂತೆ ಮೋನಲ್‌ಗಳಿವೆ ಎಂದು ಹೇಳಲಾಗಿದೆ. ಈ ಪ್ರಭೇದಕ್ಕಿರುವ ಏಕೈಕ ಗಂಡಾಂತರ ಎಂದರೆ ಅವುಗಳ ಆಕರ್ಷಣೀಯ ವರ್ಣದ ಕಾರಣದಿಂದಾಗಿ ಹಾಗೂ ಇವುಗಳ ಜುಟ್ಟಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆಯ ಕಾರಣದಿಂದಾಗಿ ಇವುಗಳಿಗೆ ಬೇಟೆಗಾರರ ಹಾವಳಿ ಅಧಿಕವಾಗಿದೆ. ಪ್ರಕೃತಿಯ ಕೊಡುಗೆಯಾಗಿರುವ ಈ ವಿಭಿನ್ನ ‘ಹಿಮಾಲಯನ್ ಮೋನಲ್’ಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.

© ಭಗವತಿ ಬಿ. ಎಮ್.

ಹಿಮಾಲಯದ ಸಂಗ್ತಿ ಮತ್ತು ಝೆಮಿತಾಂಗ್ ಕಣಿವೆಗಳಲ್ಲಿ ಮೊನಾಲ್’ಗಳು ಪ್ರಕೃತಿಯ ಮೇಲೆ ಏರುತ್ತಿರುವ ಮಾನವ ಪ್ರಭಾವ, ಅಲ್ಲಿನ ಅರಣ್ಯಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಪ್ರಸರಣ ತಂತಿಗಳು ಮತ್ತು ಹೆಚ್ಚುತ್ತಿರುವ ಜಲವಿದ್ಯುತ್ ಯೋಜನೆಗಳ ಕಾರಣದಿಂದ ಅವಸಾನದ ಅಂಚಿನಲ್ಲಿವೆ.

ಮೋನಲ್ ಪಕ್ಷಿಗಳ ಸಂರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳು:

ಉತ್ತರಾಖಂಡದ ರಾಜ್ಯ ಪಕ್ಷಿ ಹಿಮಾಲಯನ್ ಮೋನಲ್ ಗಳ ಸಂತತಿಯನ್ನು ಉಳಿಸುವ ಉದ್ದೇಶದಿಂದ ಅಲ್ಲಿನ ಅರಣ್ಯ ಇಲಾಖೆಯು ಹಿಮಾಚಲ ಪ್ರದೇಶದ ಮನಾಲಿಯ ನೆಹರು ಫೆಸೆಂಟ್ರಿಯಿಂದ ಎರಡು ಗಂಡು ಮೋನಲ್ ಪಕ್ಷಿಗಳನ್ನು ಪಡೆದುಕೊಂಡು ನೈನಿತಾಲ್‌ನ ಜಿ. ಬಿ. ಪಂತ್ ಹೈ ಆಲ್ಟಿಟ್ಯೂಡ್ ಮೃಗಾಲಯದಲ್ಲಿ ಪಕ್ಷಿಗಳನ್ನು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ (CZA) ಎರಡೂ ರಾಜ್ಯಗಳಿಗೆ ಕಾಡು ಪಕ್ಷಿಗಳನ್ನು ಎಕ್ಸ್-ಸಿಟು ಸಂರಕ್ಷಣೆಗಾಗಿ ವಿನಿಮಯ ಮಾಡಿಕೊಳ್ಳಲು ಅನುಮತಿ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪಟ್ಟಿಯ ‘ಕೆಂಪು’ ವಿಭಾಗದಲ್ಲಿ ಕಾಣಿಸಿಕೊಂಡಿರುವ ಹಿಮಾಲಯನ್ ಮೋನಲ್, ಅತಿಯಾದ ವಿನಾಶ ಮತ್ತು ಅದರ ಆವಾಸಸ್ಥಾನದ ವ್ಯತ್ಯಾಸದಿಂದ ಅಪಾಯವನ್ನೆದುರಿಸುತ್ತಿದೆ. ಉತ್ತರಾಖಂಡದಲ್ಲಿ, ಪಕ್ಷಿಗಳು ಪ್ರಸ್ತುತ ಟ್ರೀಲೈನ್‌ನ ಮೇಲಿರುವ ಹುಲ್ಲಿನ ಇಳಿಜಾರುಗಳಲ್ಲಿ ಕಂಡುಬರುತ್ತವೆ, ಮುಖ್ಯವಾಗಿ ಚೋಪ್ಟಾ, ಮುನ್ಶಿಯಾರಿ, ಕೇದಾರನಾಥ ವನ್ಯಜೀವಿ ಅಭಯಾರಣ್ಯ, ಪಿಂಡಾರಿ ಮತ್ತು ಉತ್ತರಕಾಶಿಯ ದೋಡಿತಾಲ್ ಪ್ರದೇಶದಲ್ಲಿ.

         ಹಿಮಾಲಯನ್ ಮೋನಾಲ್ ಅನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಪಟ್ಟಿಗೆ ಸೇರಿಸಿದ್ದು, ಇವುಗಳನ್ನು ರಕ್ಷಿಸಲು ಹೆಚ್ಚಿನ ಗಮನ ಮತ್ತು ಕಾಳಜಿವಹಿಸಲಾಗುತ್ತಿದ್ದು, ನೈನಿತಾಲ್ ಮೃಗಾಲಯವು ಮೋನಲ್ ಗಳ ಉಳಿವಿಗೆ ಶ್ರಮಿಸುತ್ತಿದೆ. ಅಳಿವಿನಂಚಿನಲ್ಲಿರುವ ಮೋನಲ್ ಗಳನ್ನು ಸಂರಕ್ಷಿಸಲು, ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ (GHNP) ಪ್ರಾಧಿಕಾರವು ಮನಾಲಿಯಲ್ಲಿ ಸುಧಾರಿತ ತಳಿ ಕೇಂದ್ರವನ್ನು ಸ್ಥಾಪಿಸಿದೆ.

ಪಕ್ಷಿಗಳ ಮೇಲೆ ನಿರಂತರ ನಿಗಾ ಇರಿಸಲು, ಪಂಜರಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ನಿರ್ವಹಣೆಯ ಪುಸ್ತಕವನ್ನು ಮಾಡಲಾಗಿದೆ. ಇಲ್ಲಿ ಪ್ರತಿಯೊಂದು ಪಕ್ಷಿಗಳಿಗೂ ಪ್ರತ್ಯೇಕ ಹೆಸರನ್ನು ಇಟ್ಟು ಅವು ಹುಟ್ಟಿದ ದಿನದಿಂದ ಅವುಗಳ ಸಂಪೂರ್ಣ ಅಧ್ಯಯನದ ಅಂಕಿ-ಅಂಶವನ್ನು ನಿರ್ವಹಿಸಲಾಗುತ್ತಿದೆ. ಅಲ್ಲಿನ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಪಕ್ಷಿಗಳಿಗೆ ಪಂಜರಗಳನ್ನು ವಿನ್ಯಾಸಗೊಳಿಸಿದೆ. ಇದರಿಂದಾಗಿ ಭಾರೀ ಹಿಮಪಾತ ಆದಾಗಲೂ ಇದು ಈ ಪಕ್ಷಿಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುತ್ತಿದೆ.

© ಭಗವತಿ ಬಿ. ಎಮ್.

ಲೇಖನ: ಸಂತೋಷ್ ರಾವ್ ಪೆರ್ಮುಡ
            ದಕ್ಷಿಣ ಕನ್ನಡ
ಜಿಲ್ಲೆ

Spread the love
error: Content is protected.