ವೈಲ್ಡ್ ಬೀಸ್ಟ್ ಎಂಬ ಜೀವವೈವಿಧ್ಯದ ವಿಶೇಷ

ವೈಲ್ಡ್ ಬೀಸ್ಟ್ ಎಂಬ ಜೀವವೈವಿಧ್ಯದ ವಿಶೇಷ

©publicdomainpictures.net

ಪೂರ್ವ ಆಫ್ರಿಕಾದಲ್ಲಿ ದನವನ್ನೇ ಹೋಲುವ ಪ್ರಾಣಿಯೊಂದಿದೆ. ಬೋವಿಡೇ (Bovidae) ಕುಟುಂಬಕ್ಕೆ ಸೇರಿದ ಇದರ ಹೆಸರು ವೈಲ್ಡ್ ಬೀಸ್ಟ್ (Wildebeest). ಇವುಗಳ ವಿಶಿಷ್ಟತೆಯೇ ದೊಡ್ಡ ದೊಡ್ಡ ಗುಂಪಿನಲ್ಲಿ ವಾಸಿಸುವುದು. ಇವುಗಳು ಗುಂಪಿನಲ್ಲಿ 10-15 ಲಕ್ಷದಷ್ಟು ಇರುತ್ತವೆ. ಇವುಗಳ ಅಸಂಖ್ಯ ಸಂಖ್ಯೆಯ ದೊಡ್ಡ ಹಿಂಡಾಗಿ ವಾಸಿಸುವುದರಿಂದಲೇ ವೈಲ್ಡ್ ಬೀಸ್ಟ್ ಗಳನ್ನು ಪ್ರಪಂಚದ ಅದ್ಭುತ ಜೀವಿಗಳಲ್ಲಿ ಒಂದು ಎನ್ನಲಾಗುತ್ತದೆ. ಇವುಗಳು ಅತಿ ದೂರದವರೆಗೂ ವಲಸೆ ಹೋಗುವುದಕ್ಕೆ ಹೆಸರುವಾಸಿಯಾಗಿದೆ. ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಿಂದ ಕೀನ್ಯಾದ ಮಸಾಯಿಮಾರ ನದಿಯವರೆಗೂ ಪ್ರದಕ್ಷಿಣಾಕಾರವಾಗಿ ಸಾಗುತ್ತಾ ಸರಿಸುಮಾರು ಮೂರರಿಂದ ನಾಲ್ಕು ಸಾವಿರ ಕಿಲೋಮೀಟರ್ ಕ್ರಮಿಸಬಲ್ಲವು ಎಂದು ನ್ಯಾಷನಲ್ ಜಿಯೋಗ್ರಫಿ ಹೇಳಿದೆ.

ಇವುಗಳ ಅತ್ಯಂತ ದೊಡ್ಡದಾದ ಗುಂಪನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿಯಲು ಹೆಲಿಕಾಪ್ಟರನ್ನೇ ಉಪಯೋಗಿಸಬೇಕಾಗುತ್ತದೆ. ಹೆಲಿಕಾಪ್ಟರ್ ಉಪಯೋಗಿಸಿದರೂ ಇವುಗಳ ಗುಂಪನ್ನು ಸೆರೆ ಹಿಡಿಯಲು ಸಾಧ್ಯವಾಗದಷ್ಟು ದೊಡ್ಡ ಎಕರೆಗಟ್ಟಲೆ ವ್ಯಾಪ್ತಿಯ ಗುಂಪುಗಳಾಗಿ ಇವುಗಳು ಪ್ರಯಾಣ ಬೆಳೆಸುತ್ತವೆ. ಇವುಗಳು ಸಾಗುವಾಗ ನಿಧಾನವಾಗಿ ನಡೆಯುವುದಿಲ್ಲ ಬದಲಿಗೆ ವೇಗವಾಗಿ ಓಡುತ್ತಲೇ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತವೆ. ಇವುಗಳು ಹುಲ್ಲನ್ನು ಮೇಯುವಾಗಲಷ್ಟೇ ನಿಧಾನವಾಗಿ ನಡೆಯುತ್ತವೆ. ವಿಮಾನದಿಂದ ಇವುಗಳ ಗುಂಪುಗಳನ್ನೇನಾದರೂ ನೋಡಿದರೆ ದೊಡ್ಡದಾದ ಇರುವೆಗಳ ರಾಶಿಯು ಚಲಿಸುತ್ತಿರುವಂತೆ ಕಾಣಿಸುತ್ತದೆ.

©pxfuel.com

ಗಂಡು ಮತ್ತು ಹೆಣ್ಣು ವೈಲ್ಡ್ ಬೀಸ್ಟ್ ಗಳು ನೋಡಲು ಒಂದೇ ರೀತಿ ಇದ್ದು, ಗಂಡು ಗಾತ್ರದಲ್ಲಿ ದೊಡ್ಡದಾಗಿರುತ್ತದೆ ಹಾಗೂ ಹೆಚ್ಚು ದಷ್ಟಪುಷ್ಟವಾಗಿರುತ್ತದೆ.  ಇವುಗಳ ಗದ್ದದಲ್ಲಿ ಉದ್ದನೆಯ ಕೂದಲುಗಳಿದ್ದು, ಮೂಗು ಶಂಖದಂತೆ ಮುರುಟಿರುತ್ತದೆ. ಗಂಡು ಮತ್ತು ಹೆಣ್ಣು ವೈಲ್ಡ್ ಬೀಸ್ಟ್ ಗಳಿಗೆ ಯಾವುದೇ ಶಾಶ್ವತವಾದ ಜೋಡಿಗಳಿರುವುದಿಲ್ಲ. ಮೈಲುಗಟ್ಟಲೆ ಹರಡಿಕೊಂಡಿರುವ ಇವುಗಳು ತಮ್ಮ ಗುಂಪಿನಲ್ಲಿ ಒಮ್ಮೆ ಕಣ್ತಪ್ಪಿ ಹೋದರೆ ಮತ್ತೆ ಈ ಜೋಡಿಗಳು ಒಂದಾಗುವುದು ಬಹುತೇಕ ಅಸಾಧ್ಯವೆಂದೇ ಹೇಳಬಹುದು. ಈ ಪ್ರಾಣಿಗಳ ಗ್ರಹಣಶಕ್ತಿ ಅತ್ಯದ್ಭುತವಾಗಿದ್ದು, ಬಾಯಾರಿದಾಗ ಸುಮಾರು ನೂರು ಕಿಲೋಮೀಟರ್ ದೂರದಲ್ಲಿರುವ ನೀರಿನ ಸೆಲೆಯನ್ನು ಬರಿಯ ಗಾಳಿಯ ವಾಸನೆಯಿಂದಲೇ ಗ್ರಹಿಸಿಬಿಡಬಲ್ಲವು. ಪೊಲೀಸ್ ಮತ್ತು ಸೈನ್ಯವು ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುವಂತೆ ವೈಲ್ಡ್ ಬೀಸ್ಟ್ ಗಳೂ ಸಹ ಸರದಿಯ ಪ್ರಕಾರ ಕೆಲಸ ಮಾಡುತ್ತವೆ. ತಮ್ಮ ಗುಂಪಿನಲ್ಲಿರುವ ಲಕ್ಷಗಟ್ಟಲೆ ಸಂಖ್ಯೆಯ ಒಡನಾಡಿಗಳು ಬಳಲಿಕೆಯಿಂದ ಸುಸ್ತಾಗಿ ಮಲಗಿದ್ದಾಗ ಒಂದಷ್ಟು ವೈಲ್ಡ್ ಬೀಸ್ಟ್ ಗಳು ಪಾಳಿಯ ಪ್ರಕಾರ ತಮ್ಮ ದೊಡ್ಡ ಹಿಂಡಿನ ಸುತ್ತಲೂ ಕಾವಲಿಗೆ ನಿಲ್ಲುತ್ತವೆ. ವೈರಿಗಳು ಎಲ್ಲಾದರೂ ಕಾಣಿಸಿಕೊಂಡರೆ ಎಲ್ಲವನ್ನೂ ಎಬ್ಬಿಸಿ ತಮ್ಮ ಗುಂಪನ್ನು ಕಾಪಾಡುತ್ತವೆ.

ಇವುಗಳು ಸಾಧು ಪ್ರಾಣಿಯಾದರೂ ಪ್ರಾಣಕ್ಕೆ ಅಪಾಯ ಎದುರಾದಾಗ ತಮ್ಮ ಬಲಿಷ್ಠ ಹಿಂಗಾಲುಗಳಿಂದ ಜಾಡಿಸಿ ಒದೆಯುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುತ್ತವೆ. ಇವುಗಳ ಹಿಂಗಾಲುಗಳ ಒದೆತಕ್ಕೆ ಸಿಂಹವೇನಾದರೂ ಸಿಕ್ಕರೆ, ಸಿಂಹದ ಪಕ್ಕೆಲುಬುಗಳು ಮುರಿಯುವುದು ಖಂಡಿತ. ಆಕ್ರಮಣಗೈದ ಪ್ರಾಣಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆನ್ನುವ ಪರಿಸ್ಥಿತಿ ಬಂದಾಗ ತಮ್ಮ ಚೂಪಾದ ಕೊಂಬಿನ ಮೂಲಕ ಎದುರಾಳಿಯ ಹೊಟ್ಟೆಯನ್ನು ಸೀಳಿಬಿಡುವ ಕಲೆಯನ್ನೂ ಇವುಗಳು ಕರಗತ ಮಾಡಿಕೊಂಡಿವೆ. ಅಗಾಧ ಸಂಖ್ಯೆಯ ಝೀಬ್ರಾಗಳು ತಮ್ಮ ವೈರಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಈ ವೈಲ್ಡ್ ಬೀಸ್ಟ್ ಗಳ ವಿಶಾಲ ಗುಂಪಿನಲ್ಲಿ ಸೇರಿಕೊಂಡು ಬದುಕುತ್ತವೆ. ಇವುಗಳ ಬಹುಮುಖ್ಯ ವೈರಿಗಳೆಂದರೆ ಸಿಂಹಗಳು, ಹೈನಾಗಳು, ಮೊಸಳೆಗಳು ಮತ್ತು ಹದ್ದುಗಳು.

ವೈಲ್ಡ್ ಬೀಸ್ಟ್ ಗಳು ಹೊಳೆದಾಟುವ ದೊಡ್ಡ ಯಾತ್ರೆಯು ಕೀನ್ಯಾದ ಮಸಾಯಿಮಾರ ನದಿ ದಂಡೆಯಿಂದ ಪ್ರಾರಂಭವಾಗುತ್ತದೆ. ಇವುಗಳು ವಲಸೆ ಹೋಗಲು ತಯಾರಾದಾಗ ಮಸಾಯಿಮಾರ ನದಿಯ ನೀರಿನ ಆಳ ಕಡಿಮೆ ಇರುವ ದಂಡೆಯುದ್ದಕ್ಕೂ ಇವುಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜಮಾಯಿಸುತ್ತವೆ. ಅಗಾಧ ಸಂಖ್ಯೆಯಲ್ಲಿರುವ ಇವುಗಳ ಗುಂಪಿನಿಂದ ಒಂದು ವೈಲ್ಡ್ ಬೀಸ್ಟ್ ನೀರಿಗೆ ಧುಮುಕಿದರೆ ಸಾಕು ಕ್ಷಣಾರ್ಧದಲ್ಲಿ ಕಿವಿಗಡಚಿಕ್ಕುವ ಸದ್ದುಗಳೊಂದಿಗೆ ಉಳಿದೆಲ್ಲವೂ ಹಿಂದು ಮುಂದು ನೋಡದೇ ಒಟ್ಟಾಗಿ ನದಿಗೆ ಜಿಗಿಯಲಾರಂಭಿಸುತ್ತವೆ. ಇವುಗಳು ನೀರಿಗೆ ಧುಮುಕುವ ವೇಗಕ್ಕೆ ನದಿಯ ದಂಡೆ ಸಂಪೂರ್ಣ ಕುಸಿದು ಸಮತಟ್ಟಾಗಿಬಿಡುತ್ತದೆ. ಇವುಗಳು ನೀರಿಗೆ ಧುಮುಕುವ ವೇಗಕ್ಕೆ ನದಿಯಲ್ಲಿ ನೀರೇ ಕಾಣಿಸುವುದಿಲ್ಲ, ಎಲ್ಲಿ ನೋಡಿದರೂ ವೈಲ್ಡ್ ಬೀಸ್ಟ್ ಗಳು ಮತ್ತು ಅವುಗಳ ಕೋಡುಗಳು ಹಾಗೂ ಮಿಂಚುವ ಅವುಗಳ ಮೈ ಮಾತ್ರ ಕಾಣಿಸುತ್ತದೆ. ನದಿ ದಾಟುವ ಧಾವಂತದಲ್ಲಿ ಒಂದನ್ನೊಂದು ತುಳಿದು ಒಂದರ ಮೇಲೊಂದು ಹಾರಿಕೊಂಡೇ ನೀರಿಗೆ ಧುಮುಕುತ್ತವೆ.

© tanzania-7435163_1920

ಒಟ್ಟಿನಲ್ಲಿ ಇವುಗಳ ಉದ್ದೇಶ ನಾನು ನದಿಯನ್ನು ದಾಟಿ ಇನ್ನೊಂದು ದಡವನ್ನು ಸೇರಬೇಕು ಎಂಬುದಷ್ಟೇ ಇರುತ್ತದೆ. ಈ ಸಂದರ್ಭದಲ್ಲಿ ಅಗಾಧ ಸಂಖ್ಯೆಯ ವೈಲ್ಡ್ ಬೀಸ್ಟ್ ಗಳು ಒಂದಕ್ಕೊಂದು ತುಳಿದುಕೊಂಡೇ ಸತ್ತು ಹೋಗುತ್ತವೆ. ಇವುಗಳ ನದಿ ದಾಟುವ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ಇವುಗಳನ್ನು ಹಿಡಿದು ತಿನ್ನಲು ಮೊಸಳೆಗಳು ನದಿಯಲ್ಲಿ ಎಲ್ಲೆಂದರಲ್ಲಿ ಜಮಾಯಿಸುತ್ತವೆ. ಇವುಗಳು ನದಿಗೆ ಜಿಗಿಯುವ ಸದ್ದು, ಆರ್ಭಟದಂತೆ ಕೇಳಿಸುತ್ತದೆ. ಇದರ ಮಧ್ಯೆ ನದಿ ದಾಟುವ ಒಂದೊಂದೇ ವೈಲ್ಡ್ ಬೀಸ್ಟ್ ಗಳನ್ನು ಹಿಡಿದು ಭಕ್ಷಿಸಲು ಕಾಯುವ ಮೊಸಳೆಗಳ ಗುಂಪು ಇನ್ನೊಂದೆಡೆ. ನದಿ ದಾಟುವ ಪ್ರಕ್ರಿಯೆಯಲ್ಲಿ ಇವುಗಳಿಗೆ ಹಿಪ್ಪೋಪೊಟಮಸ್ (ನೀರಾನೆಗಳು) ರಕ್ಷಕನಾಗಿ ಕೆಲವೊಮ್ಮೆ ಮೊಸಳೆಗಳನ್ನು ಓಡಿಸುತ್ತವೆ. ವೈಲ್ಡ್ ಬೀಸ್ಟ್ ಗಳ ಮಧ್ಯೆ ನಡೆಯುವ ಕಾಲ್ತುಳಿತ, ಮೊಸಳೆಗಳ ಕಾಟ, ನೀರಿನ ಸೆಳೆಯುವ ವೇಗ ಎಲ್ಲವನ್ನೂ ಗೆದ್ದು ವೈಲ್ಡ್ ಬೀಸ್ಟ್ ಗಳು ನದಿಯನ್ನು ಯಶಸ್ವಿಯಾಗಿ ದಾಟಿ ವಿಜಯದ ಸಂಭ್ರಮದೊಂದಿಗೆ ಮುಂದೆ ಸಾಗುತ್ತವೆ. ನದಿಯನ್ನು ದಾಟಿದ ವೈಲ್ಡ್ ಬೀಸ್ಟ್ ಮುಂದಿನ ಜೀವನದ ಪಯಣಕ್ಕೆ ತನ್ನನ್ನು ತಾನು ತೆರೆದುಕೊಂಡು, ಬದುಕಿದ್ದರೆ ಮುಂದಿನ ವರ್ಷ ಮತ್ತೆ ಇದೇ ನದಿಯನ್ನು ದಾಟಿ ಇನ್ನೊಂದು ಕಡೆಗೆ ಸಾಗುತ್ತವೆ.

ವೈಲ್ಡ್ ಬೀಸ್ಟ್ ಗಳು ಸಾಮಾನ್ಯವಾಗಿ ಮಳೆಗಾಲದ ಅಂತ್ಯದಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಇವುಗಳು ವರ್ಷಕೊಮ್ಮೆ ಮೇವನ್ನರಸಿಕೊಂಡು ವಲಸೆ ಹೋಗುತ್ತವೆ. ಇವುಗಳು ವಲಸೆಯ ಸಂದರ್ಭದಲ್ಲೇ ಕರು ಹಾಕುವುದರಿಂದ ಹಿಂಡಿನ ಎಲ್ಲಾ ವೈಲ್ಡ್ ಬೀಸ್ಟ್ ಗಳು, ತಾಯಿಯು ಮರಿ ಹಾಕುವವರೆಗೂ ಕಾಯುತ್ತಾ ನಿಲ್ಲುತ್ತವೆ ಮತ್ತು ಕೆಲವೇ ಗಂಟೆಗಳಲ್ಲಿ ಈ ಕರುಗಳು ಹಿಂಡಿನೊಂದಿಗೆ ಮುಂದಿನ ಹಾದಿಯೆಡೆಗೆ ಹೆಜ್ಜೆ ಹಾಕುವಷ್ಟು ವೇಗವಾಗಿ ನಡೆಯಲಾರಂಭಿಸುತ್ತವೆ. ಇವುಗಳು ಮರಿ ಹಾಕುತ್ತಿದ್ದಂತೆಯೇ ಹೈನಾಗಳು ಕರುವನ್ನು ತಿನ್ನಲು ಕಾಯುತ್ತಾ ಇರುತ್ತವೆ. ಕೆಲವೊಂದು ಕರುಗಳು ಜನಿಸಿದ ಕೂಡಲೇ ಹೈನಾಗಳಿಗೆ ಆಹಾರವಾಗುವುದೂ ಇದೆ. ಇವುಗಳು ಇಲ್ಲಿನ ಜಾನುವಾರುಗಳೊಂದಿಗೆ ಹೊಂದಿಕೊಂಡು ಹುಲ್ಲುಗಾವಲುಗಳಲ್ಲಿ ಸಹಜೀವನ ಮಾಡುತ್ತವೆ. ಆದರೆ ರೈತರು ತಮ್ಮ ಜಾನುವಾರುಗಳಿಗೆ ವೈಲ್ಡ್ ಬೀಸ್ಟ್ ಗಳಿಂದ ರೋಗ, ಉಣ್ಣೆ, ತಿಗಣೆ ಮುಂತಾದ ಜೀವಿಗಳನ್ನು ಹರಡುತ್ತವೆ ಎಂದು ದೂರುತ್ತಾರೆ.

© Wildebeest_portrait

ಲೇಖನ: ಸಂತೋಷ್ ರಾವ್ ಪೆರ್ಮುಡ
       ದಕ್ಷಿಣ ಕನ್ನಡ ಜಿಲ್ಲೆ

Spread the love
error: Content is protected.