ಅರಿಯದ ಕಾಮನ್ಸ್

ಅರಿಯದ ಕಾಮನ್ಸ್

© ಡಬ್ಲ್ಯೂ. ಸಿ. ಜಿ.

ಡಬ್ಲ್ಯೂ ಸಿ ಜಿ (WCG) ತಂಡವು ಬನ್ನೇರುಘಟ್ಟದ ಸುತ್ತಮುತ್ತ ‘ಪ್ರಾಜೆಕ್ಟ್ ಕಾಮನ್ಸ್’ ಎಂಬ ಹೊಸ ಯೋಜನೆಯನ್ನು ಶುರುಮಾಡಿದ್ದು ಇದರ ಅಡಿಯಲ್ಲಿ ತಂಡವು ಒಂದು ಸಣ್ಣ ಸಂಶೋಧನೆ ಮಾಡುವುದರ ಜೊತೆ ಜೊತೆಗೆ ಕಾಮನ್ಸ್ ಗಳ ಬಗ್ಗೆ ಜನ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ. ಏನಿದು “ಪ್ರಾಜೆಕ್ಟ್ ಕಾಮನ್ಸ್”? ಇದರ ಉದ್ದೇಶವೇನು? ಕಾಮನ್ಸ್ ಎಂದರೇನು ಎಂದು ಸವಿವರವಾಗಿ ಒಮ್ಮೆ ತಿಳಿಯೋಣ.

ಕಾಮನ್ಸ್ (Commons) ಇಂಗ್ಲೀಷ್ ಪದವಲ್ಲವೇ? ಎನಿಸಬಹುದು ನಿಮಗೆ.  ಹೌದು, ಈ ಕಾಮನ್ಸ್ ಪದಕ್ಕೆ ಕನ್ನಡದಲ್ಲಿ ಪರ್ಯಾಪ್ತವಾದ ಪದ ಇಲ್ಲ ಆದ್ದರಿಂದ ಇಂಗ್ಲೀಷ್ ಪದವನ್ನೇ ಕನ್ನಡದಲ್ಲಿ ಬಳಸಲಾಗಿದೆ.

ಸರ್ಕಾರೇತರ ಸಂಘ ಸಂಸ್ಥೆಗಳು ಒಂದು ಪ್ರದೇಶದಲ್ಲಿ ಯಾವುದಾದರೂ ಪ್ರಾಜೆಕ್ಟ್ ಮಾಡ ಬಯಸಿದಲ್ಲಿ ಕೆಲ ಸರ್ಕಾರಿ ಸಂಸ್ಥೆಗಳ ಅನುಮತಿ ಬೇಕಾಗುತ್ತದೆ. ಹಾಗೆಯೇ, ಈ ‘ಪ್ರಾಜೆಕ್ಟ್ ಕಾಮನ್ಸ್’ ಶುರುಮಾಡುವ ಮುನ್ನ ಇದೇ ರೀತಿಯ ಒಂದು ಸಂದರ್ಭವೂ ಬಂತು.   ನಮ್ಮ ಕಾರ್ಯಕ್ಷೇತ್ರದಲ್ಲಿನ ಪಂಚಾಯಿತಿ ಕಛೇರಿಗೆ ನಮ್ಮ ಪ್ರಾಜೆಕ್ಟ್ ಬಗ್ಗೆ ಸವಿವರವಾಗಿ ಬರೆದ ಒಂದು ಪತ್ರವನ್ನು ಕೂಡ ತೆಗೆದುಕೊಂಡು ಹೋಗಿದ್ದೆವು. ಕಛೇರಿಯ ಬಾಗಿಲಲ್ಲಿ ನಿಂತು “ಸರ್” ಎಂದಾಗ “ಯಸ್… ಕಮ್ ಇನ್” ಎಂಬ ಶಬ್ದ ಬಂತು. ಕಛೇರಿಯ ಒಳಗೆ ಕುಳಿತ ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) “ಹೇಳಿ…? ಏನ್ ಸಮಾಚಾರ” ಎಂದರು. “ಸರ್… ಅದು, ನಾವು ಒಂದು ಪ್ರಾಜೆಕ್ಟ್ ಮಾಡ್ತಿದ್ದೀವಿ” ಎಂದ ತಕ್ಷಣ “ಏನ್ ಪ್ರಾಜೆಕ್ಟ್ ರೀ…?” ಎಂದರು. ನಮ್ಮ ಕೈಲಿದ್ದ ಪತ್ರವನ್ನು ಟೇಬಲ್ ಮೇಲೆ ಇಟ್ಟೆವು.

ಪತ್ರದಲ್ಲಿನ ಸ್ವಲ್ಪ ವಿಷಯವನ್ನು ಓದಿದ ಮರುಕ್ಷಣ “ಏನ್ ರೀ ಇದು… ಕಾಮನ್ಸ್ ಅಂದ್ರೆ”ಎಂದು ಕೇಳಿದರು. “ಸರ್… ಪತ್ರದಲ್ಲಿ ವಿವರವಾಗಿ ಬರೆದಿದೆ ಸರ್” ಎಂದು ಹೇಳಿದೆವು. “ಹೊ… ಹೌದಾ?” ಎಂದು ಪತ್ರವನ್ನು ಓದಲು ಶುರುಮಾಡಿದರು. ಸುಮಾರು ಹತ್ತು ನಿಮಿಷ ತೆಗೆದುಕೊಂಡರು ಪತ್ರವನ್ನು ಓದಲು. ನಂತರ “ಹೇ… ರವಿ, ಎರಡ್ ಚೇರ್ ಹಾಕಪ್ಪ ಇಲ್ಲಿ” ಎಂದರು. ಹೊರಗಡೆ ಇದ್ದ ಅಟೆಂಡರ್ ರವಿ ಎರಡು ಚೇರ್ ಗಳನ್ನು ತಂದು ಪಿಡಿಒ ಟೇಬಲ್ ಎದುರು ಹಾಕಿ “ಕುಳಿತುಕೊಳ್ಳಿ ಸರ್” ಎಂದು ಹೇಳಿ ಹೊರಗೆ ಹೊರಟ. “ನಮ್ಮ ಸುತ್ತಮುತ್ತ ಇರೋ ಸರ್ಕಾರಿ ಜಾಗಗಳಿಗೆ ಕಾಮನ್ಸ್ ಅಂತಾರ…! ಇದು ನಂಗೆ ಗೊತ್ತೇ ಇರ್ಲಿಲ್ಲ ನೋಡಿ ಈ ಪದ” ಎಂದರು. “ಎನಿವೇ… ನಂಗೆ ತುಂಬ ಖುಷಿಯಾಯ್ತು ನೋಡಿ. ನಾವ್ ಮಾಡೋ ಈ ಎಲ್ಲ ಕೆಲ್ಸಗಳನ್ನ ನೀವು ಮಾಡ್ತಿರೋದು”. ಪತ್ರದ ಮೊತ್ತೊಂದು ಓಸಿ ಕಾಪಿಯ ಮೇಲೆ ಸೀಲ್ ಒತ್ತಿ ಡೇಟ್ ಬರೆದು ಸಹಿ ಮಾಡಿ, “ಮತ್ತೆ ಏನಾದ್ರು ಸಹಾಯ ಬೇಕಾದ್ರೆ ಕೇಳಿ”ಎಂದು ನಗು ಮುಖದಲ್ಲಿ ಕಳುಹಿಸಿಕೊಟ್ಟರು. 

         ಮತ್ತೆ, ಸ್ವಲ್ಪ ದಿನಗಳ ನಂತರ ನಮ್ಮ ಅಧ್ಯಯನ ಪ್ರದೇಶದ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಗೆ ಎರಡು ದಿನಗಳ “ಕಾಮನ್ಸ್ ಗಳು ಮತ್ತು ನಾವು” ಎನ್ನುವ ಶೀರ್ಷಿಕೆ ಅಡಿಯಲ್ಲಿ ನಮ್ಮ ಸುತ್ತಮುತ್ತಲಿನ ಕಾಮನ್ಸ್ ಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆವು. ಭಾಗವಹಿಸಿದ ಈಗಿನ ಪೀಳಿಗೆಯ ಮಕ್ಕಳಿಗೆ ಕಾಮನ್ಸ್ ಎಂಬ ಪದ ಗೊತ್ತಿರುವುದು ತುಂಬಾ ಕಷ್ಟವೇ, ಆದರೆ ಕಾಮನ್ಸ್ ನಲ್ಲಿ ಕಂಡುಬರುವ ಗೋಮಾಳ, ಕೆರೆ, ಗುಂಡುತೋಪು, ಸ್ಮಶಾನ ಭೂಮಿ, ರಸ್ತೆಗಳು (ರಸ್ತೆ ಬದಿಯ ಮರಗಳು) ಮತ್ತು ಅರಳಿಕಟ್ಟೆ/ದೇವಸ್ಥಾನಗಳು ಸಾರ್ವಜನಿಕರ ಆಸ್ತಿಗಳೆ ಎಂಬುವುದೇ ಗೊತ್ತಿಲ್ಲದೇ ಇರುವುದು ನೋಡಿ ಸ್ವಲ್ಪ ಚಕಿತರಾದೆವು ಹಾಗೂ ಹಳ್ಳಿಯಲ್ಲಿಯೇ ಬೆಳೆದ ಅದೆಷ್ಟೋ ಮಕ್ಕಳಿಗೆ ಗೋಮಾಳ, ಗುಂಡುತೋಪು, ಗೋ ಕಟ್ಟೆ, ಹುಲ್ಲುಬನ್ನಿ ಮುಂತಾದ ಕಾಮನ್ಸ್ ಗಳೇ ಗೊತ್ತಿಲ್ಲದೇ ಇರುವುದು ತುಂಬಾ ಬೇಸರದ ಸಂಗತಿ. ಕಾಲೇಜು ವಿದ್ಯಾರ್ಥಿಗಳಿಗೆ       “ಕಾಮನ್ಸ್ ಗಳ ಮೇಲೆ ಯುವಕರ ಪಾತ್ರ” ಎಂಬ ಶೀರ್ಷಿಕೆಯಡಿಯಲ್ಲಿ ಮತ್ತೊಂದು ಸಂವಾದ ಕಾರ್ಯಕ್ರಮ ಮಾಡಿದೆವು. ಇದರ ಮೂಲ ಪ್ರಯತ್ನ ಯುವಕರಲ್ಲಿ ಕಾಮನ್ಸ್ ಗಳ ಬಗ್ಗೆ ಅರಿವು ಮೂಡಿಸುವುದಾಗಿತ್ತು. ಸುಮಾರು ಅರವತ್ತು ವಿದ್ಯಾರ್ಥಿಗಳು ಭಾಗವಹಿಸಿ, ಸಂವಾದದಲ್ಲಿ ಮೂಲಭೂತ ಪ್ರಶ್ನೆಗಳಾದ ಕಾಮನ್ಸ್ ಎಂದರೇನು? ಕಾಮನ್ಸ್ ಗಳ ವಿಧಗಳು ಯಾವ್ಯಾವು? ಯಾವುದನ್ನು ಕಾಮನ್ಸ್ ಗಳು ಎಂದು ಕರೆಯುತ್ತೇವೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ ತಿಳಿದರು. ಇವರೆಲ್ಲರಿಗೂ ಕಾಮನ್ಸ್ ಅನ್ನುವ ಪದ ಹೊಸದಿರಬಹುದು ಎಂದು ಆಲೋಚಿಸಿದ ನಾವು ಇನ್ನೂ ಒಂದು ಹಂತ ಕೆಳಗಿಳಿದು ಗೋಮಾಳ, ಗುಂಡುತೋಪು, ಗೋಕಟ್ಟೆ, ಹುಲ್ಲುಬನ್ನಿ ಎಂಬುವುದು ಗೊತ್ತ ಎಂದು ಕೇಳಿದೆವು ವಿಪರ್ಯಾಸವೆಂದರೆ ಇದಕ್ಕೂ ಸಹ ಅವರ ಬಳಿ ಉತ್ತರವಿರಲಿಲ್ಲ.

ಓದುಗರಾದ ನಿಮಗೆ ಯಾಕೆ ಆ ವಿದ್ಯಾರ್ಥಿಗಳಾಗಲಿ ಅಥವಾ ಯುವಕರಾಗಲಿ ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿತ್ತು ಏನು ಇದರ ಪ್ರಾಮುಖ್ಯತೆ ಎಂಬ ಅನುಮಾನ ಬರಬಹುದು. ನಮ್ಮ ಈ ಪೀಳಿಗೆಯ ಮಕ್ಕಳಿಗೆ ಯಾಕೆ ಈ ಮಾಹಿತಿ ತುಂಬಾ ಮುಖ್ಯ ಎಂದು ಸ್ವಲ್ಪ ಹೇಳಲು ಪ್ರಯತ್ನಿಸುತ್ತೇನೆ,

ನೀವೂ ಕೂಡ ಒಮ್ಮೆ ಯೋಚಿಸಿ! ಈ ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗಲಿಲ್ಲ. ಈ ವರ್ಷದ ಮಳೆಗಾಲವೇ ಬೇಸಿಗೆಯ ರೀತಿ ವರ್ತಿಸುತ್ತಿದೆ. ರೈತರು ಆಗಸ್ಟ್ ಮುಗಿದರು ಕೂಡ ಇನ್ನೂ ಬಿತ್ತನೆಯೇ ಮಾಡದಿರುವುದು, ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿರುವುದು, ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿರುವುದು ಎಲ್ಲ ಜನಗಳ ಗಮನಕ್ಕೆ ಬಂದರು ಕೂಡ ನಿಸ್ಸಹಾಯಕರಾಗಿ ದುಡ್ಡು ದುಡಿಯುವುದರಲ್ಲಿ ಬ್ಯುಸಿಯಾಗಿರುವುದು ಶೋಚನೀಯ ಸಂಗತಿ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಹಸಿರುಮನೆ ಪರಿಣಾಮ ಮುಂತಾದ ದೊಡ್ಡ ದೊಡ್ಡ ವಿಚಾರಗಳ ಬಗ್ಗೆ ಆಲೋಚಿಸುವ ಶಕ್ತಿ ಈ ನಮ್ಮ ಜನಸಮುದಾಯಕ್ಕೆ ಎಲ್ಲಿಂದ ಬರಬೇಕು ಹೇಳಿ. ಇಂತಹ ಸಂದರ್ಭದಲ್ಲಿ ಕಾಮನ್ಸ್ ಗಳಾದ ಗೋಮಾಳ, ಗುಂಡುತೋಪು, ರಸ್ತೆ ಬದಿಯ ಮರಗಳು, ಅರಳಿಕಟ್ಟೆ, ಗೋಕಟ್ಟೆ, ಹುಲ್ಲುಬನ್ನಿ ಮುಂತಾದವುಗಳ ಬಗ್ಗೆ ಚಿಂತಿಸುವ ಸಮಯವಾದರೂ ಕೂಡ ಅಲ್ಲಿಂದ ಬರಬೇಕು ಆಲ್ವಾ?

© ಡಬ್ಲ್ಯೂ. ಸಿ. ಜಿ.

 ಆಗಿನ ಕಾಲದಲ್ಲಿ ಪ್ರತಿದಿನದ ಜೀವನ ಶುರುವಾಗುತ್ತಿದ್ದದ್ದು ಮತ್ತು ಕೊನೆಗೊಳ್ಳುತ್ತಿದ್ದದ್ದು ಸರ್ವೇಸಾಮಾನ್ಯವಾಗಿ ಕಾಮನ್ಸ್ ಗಳಲ್ಲಿಯೇ ನೋಡಿ. ಗೊತ್ತೋ ಗೊತ್ತಿಲ್ಲದೆಯೋ ಪ್ರತಿದಿನ ನೀರಿಗಾಗಿ ಕೆರೆಕುಂಟೆ ಬಳಸುತ್ತಿದ್ದುದು, ಮೇವಿಗಾಗಿ – ಗೋಮಾಳ, ಹುಲ್ಲುಗಾವಲು, ಹುಲ್ಲುಬನ್ನಿ ಗಳ ಮೇಲೆ ಅವಲಂಬಿತವಾಗಿದ್ದುದು. ನೆರಳಿಗಾಗಿ – ರಸ್ತೆಬದಿಯ ಮರಗಳು. ಹಣ್ಣುಹಂಪಲು ಮೇವಿಗಾಗಿ – ಗುಂಡುತೋಪು. ಪಂಚಾಯ್ತಿಗಾಗಿ, ಪೂಜೆಗಾಗಿ – ಅರಳಿಕಟ್ಟೆ. ಹೀಗೆ ಹಲವಾರು ದಿನನಿತ್ಯದ ಜೀವನದಲ್ಲಿ ಕಾಮನ್ಸ್ ಗಳನ್ನೂ ಬಳಸುತ್ತಿದ್ದ ಜನ ಸಮುದಾಯಗಳು ಕಾಮನ್ಸ್ ಗಳ ಉಳಿವಿಗಾಗಿ ಮತ್ತು ಅವುಗಳ ಸಂರಕ್ಷಣೆಗಾಗಿ ಹಲವಾರು ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆಗೆ ಅವುಗಳ ಬಳಕೆಯ ಅವಶ್ಯಕತೆಯೇ ಇಲ್ಲದಿರುವಾಗ ಇನ್ನು ಅವುಗಳ ಸಂರಕ್ಷಣೆಯ ಮಾತೆಲ್ಲಿ! ನಗರೀಕರಣದ ಒತ್ತಡದ ಪರಿಣಾಮ ಯಾರೋ ಭೂಗಳ್ಳರ ಪಾಲಾಗುತ್ತಿದ್ದಾವೆ ಈ ಕಾಮನ್ಸ್ ಗಳು. ಇದರ ಪರಿಣಾಮವನ್ನು ಈಗಾಗಲೇ ಬೆಂಗಳೂರಿನಂತಹ ನಗರಗಳು ಎದುರಿಸುತ್ತೇವೆ.

ಕಾಮನ್ಸ್ ಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ ಮತ್ತು ಸಮುದಾಯದ ಸಂಪನ್ಮೂಲಗಳು ಕೂಡ. ಇವು ಜೀವವೈವಿಧ್ಯತೆಯ ಸಮೃದ್ಧ ಭಂಡಾರಗಳಾಗಿದ್ದು, ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ, ಹಲವಾರು ಜೀವಿಗಳಿಗೆ ಆಹಾರ ಮತ್ತು ಮೇವಿನ ಮೂಲವಾಗಿ ಮತ್ತು ಸೂಕ್ಷ್ಮ ಹವಾಮಾನ ನಿಯಂತ್ರಣದ ಕೆಲಸದಲ್ಲಿ ಬಹಳ ಮುಖ್ಯವಾಗಿವೆ. ಇಂತಹ ಸಂದರ್ಭದಲ್ಲಿ ಇಂದಿನ ಯುವ ಪೀಳಿಗೆ, ವಿದ್ಯಾರ್ಥಿಗಳು, ಜನಸಮುದಾಯಗಳು ಕಾಮನ್ಸ್ ಗಳ ಬಗ್ಗೆ ತಿಳಿದುಕೊಳ್ಳಬೇಕು ಜೊತೆಗೆ ಅವುಗಳ ಸಂರಕ್ಷಣೆಯಲ್ಲಿ ಎಲ್ಲರ ಪಾತ್ರ ಬಹಳ ಮುಖ್ಯ ಎಂಬುದನ್ನು ಮನವರಿಕೆ ಮಾಡಿಸಲು ಈ ಯೋಜನೆಯು ಉದ್ದೇಶಿಸಿದೆ. ಇಲ್ಲದಿದ್ದರೆ ನಗರೀಕರಣದ ಒತ್ತಡದಿಂದ ಯಾವುದೋ ಸರ್ಕಾರಿ ಉದ್ದೇಶಗಳಿಗೆ ಅಥವಾ ಯಾರೋ ಭೂಗಳ್ಳರ ಪಾಲಾಗಿ ಹಾಳಾಗುತ್ತವೆ ಮತ್ತು ಅವುಗಳ ಉಪಯೋಗದಿಂದ ಸಮುದಾಯಗಳು ವಂಚಿತರಾಗುತ್ತಾರೆ.

© ಡಬ್ಲ್ಯೂ. ಸಿ. ಜಿ.

ಲೇಖನ: ಡಾ. ಅಶ್ವಥ ಕೆ. ಎನ್.
        ಡಬ್ಲ್ಯೂ.ಸಿ.ಜಿ., ಬೆಂಗಳೂರು ಜಿಲ್ಲೆ

Print Friendly, PDF & Email
Spread the love
error: Content is protected.