ಕಾಮನ್ಸ್ ಗಳು ಮತ್ತು ನಾವು
© ಡಬ್ಲ್ಯೂ ಸಿ ಜಿ
ಈ ಬರವಣಿಗೆಯಲ್ಲಿ ನಾನು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಡಬ್ಲ್ಯೂ ಸಿ ಜಿ ತಂಡದ ವತಿಯಿಂದ ನಡೆದ ಎರಡು ದಿನಗಳ “ಕಾಮನ್ಸ್ ಗಳು ಮತ್ತು ನಾವು” ಎನ್ನುವ ಕಾರ್ಯಕ್ರಮದ ಅಪೂರ್ವ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು 13ನೇ ಏಪ್ರಿಲ್ 2023ರ ಶನಿವಾರ ಬೆಳಗ್ಗೆ ಈ ವಿಶೇಷ ಕಾರ್ಯಕ್ರಮಕ್ಕಾಗಿ, ಉತ್ಸಾಹಿ ಗ್ರಾಮೀಣ ಮಕ್ಕಳು ಜಮಾಯಿಸಿದ್ದ ಅಡವಿ ಫೀಲ್ಡ್ ಸ್ಟೇಷನ್ ಗೆ ತಲುಪಿದೆ. ಮಕ್ಕಳ ಕಣ್ಣುಗಳು ಸಂತೋಷ ಮತ್ತು ಕುತೂಹಲದಿಂದ ಕಂಗೊಳಿಸುತ್ತಿದ್ದವು. ಅವರು ದಿನದ ಚಟುವಟಿಕೆಗಳಲ್ಲಿ ಧುಮುಕಲು ಉತ್ಸುಕರಾಗಿದ್ದರು ಎಂಬುದು ಅವರ ಕಣ್ಣುಗಳಲ್ಲಿಯೇ ಸ್ಪಷ್ಟವಾಗಿತ್ತು.
ಬೆಳಗ್ಗೆ 8ರ ಸಮಯಕ್ಕೆ ಆನಂದ್ ರವರು, ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸಲು ಉಪಯೋಗಿಸುವ ಓಪನ್ ಡೇಟಾ ಕಿಟ್ (ಓ.ಡಿ.ಕೆ) ಅಪ್ಲಿಕೇಶನ್ ಅನ್ನು ಎಲ್ಲಾ ಶಿಬಿರಾರ್ಥಿಗಳಿಗೆ ವಿವರಿಸುವುದರೊಂದಿಗೆ ದಿನವನ್ನು ಪ್ರಾರಂಭಿಸಿದರು. ಸಮೀಕ್ಷೆಯಲ್ಲಿ ಕಂಡುಬರುವ ಪಕ್ಷಿ, ಪ್ರಾಣಿ ಚಿಟ್ಟೆ ಮತ್ತು ಹಾವಿನ ಪ್ರಭೇದಗಳ ಮಾಹಿತಿಯನ್ನು ದಾಖಲಿಸಲು ಈ ಅಪ್ಲಿಕೇಶನ್ ನಮಗೆ ಅವಕಾಶ ಮಾಡಿಕೊಟ್ಟಿತು. ಪ್ರತೀ ವಿದ್ಯಾರ್ಥಿಗೆ ಈ ಓ.ಡಿ.ಕೆ ಬಗ್ಗೆ ಕೂಲಂಕುಷವಾಗಿ ತಿಳಿಸುವುದರ ಜೊತೆಗೆ ಮಾಹಿತಿಯನ್ನು ಬರೆದುಕೊಳ್ಳಲು ಪುಸ್ತಕ, ಪೆನ್ನುಗಳನ್ನು ಜೊತೆಗೆ ಪಕ್ಷಿ ಪ್ರಭೇದಗಳನ್ನು ಗುರುತಿಸಲು ಸಹಾಯವಾಗುವಂತಹ ಫೀಲ್ಡ್ ಗೈಡ್ ಗಳನ್ನು ನೀಡಲಾಯಿತು. ನಂತರ ಎಲ್ಲರೂ ಅಡವಿ ಫೀಲ್ಡ್ ಸ್ಟೇಷನ್ ನ ಪಕ್ಕದಲ್ಲಿಯೇ ಇರುವ ಕಾಮನ್ಸ್ ಗೆ ತೆರಳಿ ಪಕ್ಷಿಗಳನ್ನು ವೀಕ್ಷಿಸಿ ದಾಖಲೀಕರಿಸಲು ಶುರುಮಾಡಿದೆವು. ಮಕ್ಕಳು ಅವರಿಗೆ ಪರಿಚಿತವಿರುವ ಪಕ್ಷಿಯನ್ನು ಕಂಡಾಗಲೆಲ್ಲ ಅದರ ಸಂಖ್ಯೆಯನ್ನು ಬರೆದು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ನಾವು ಓ.ಡಿ.ಕೆ ಅಪ್ಲಿಕೇಶನ್‌ನಲ್ಲಿ ಎಲ್ಲಾ ವಿವರಗಳನ್ನು ದಾಖಲಿಸಿಕೊಳ್ಳುತ್ತಿದೆವು.
ದಾರಿಯುದ್ದಕ್ಕೂ ನಮಗೆ ಕಂಡ ಸೂರಕ್ಕಿಗಳು, ಹದ್ದುಗಳು, ಕಾಗೆಗಳು ಇತರ ಪಕ್ಷಿಗಳು ಹಾಗೂ ಪ್ರಾಣಿಗಳನ್ನು ದಾಖಲಿಸಿಕೊಂಡೆವು. ಈ ನಮ್ಮ ಕಾರ್ಯವು ಕೇವಲ ಪಕ್ಷಿಗಳ ಅಂಕಿಯನ್ನು ಸಂಗ್ರಹಿಸುವುದಕ್ಕೆ ಮಾತ್ರ ಸೀಮಿತವಾಗದೆ, ಅವುಗಳ ಬಣ್ಣ, ಆಕಾರ ಮತ್ತು ಆಹಾರ ಪದ್ಧತಿಗಳನ್ನು ಗಮನಿಸಿ ತಿಳಿಯಲು ಬಹಳ ಉಪಯೋಗವಾಯಿತು. ಪಕ್ಷಿ ಗಣತಿಯನ್ನು ನಡೆಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಡಬ್ಲ್ಯೂ ಸಿ ಜಿ ತಂಡದ ಸದಸ್ಯರಾದ ಧನರಾಜ್ ಮತ್ತು ಸುನೀಲ್ ರವರು ಅಮೂಲ್ಯವಾದ ಮಾರ್ಗದರ್ಶನವನ್ನು ನೀಡಿದರು. ನಂತರ ನಾವು ಒಟ್ಟಿಗೆ ತಿಂಡಿಯನ್ನು ಮಾಡುವಾಗ, ವಿದ್ಯಾರ್ಥಿಗಳು ತಮಗೆ ಇದುರಾದ ಪಕ್ಷಿಗಳ ಬಗ್ಗೆ ಉತ್ಸಾಹಭರಿತರಾಗಿ ಚರ್ಚೆಯಲ್ಲಿ ತೊಡಗಿಕೊಂಡರು. ಅವರು ಅಪರಿಚಿತ ಪಕ್ಷಿಗಳ ಬಗ್ಗೆ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದರು, ಅವುಗಳ ಬಗ್ಗೆ ವಿವರವಾಗಿ ಮಾಹಿತಿ ಪಡೆಯುತ್ತಿದ್ದರು ಮತ್ತು ಪಕ್ಷಿಗಳ ಬಗೆಗಿನ ಫೀಲ್ಡ್ ಗೈಡ್ ಗಳನ್ನು ಬಳಸುವ ಬಗೆಯನ್ನು ಇನ್ನೂ ವಿವರವಾಗಿ ತಿಳಿದುಕೊಂಡರು. ಪ್ರತಿ ಸಂಭಾಷಣೆಯೊಂದಿಗೆ, ಅವರ ಜ್ಞಾನವು ವೃದ್ಧಿಸುತ್ತಿತ್ತು ಮತ್ತು ಅವರ ಉತ್ಸಾಹವು ಹೆಚ್ಚಾಗುತ್ತಿತ್ತು.
ಶಿಬಿರದ ಮೂಲ ಉದ್ದೇಶ “ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಅವರ ಸುತ್ತಲಿನ ಕಾಮನ್ಸ್ ಗಳ ಬಗ್ಗೆ ಚಟುವಟಿಕೆಗಳ ಮುಖಾಂತರ ಕಲಿಸುವುದಾಗಿತ್ತು.”
ಮತ್ತೋರ್ವ ಡಬ್ಲ್ಯೂ ಸಿ ಜಿ ಯ ಸದಸ್ಯರಾದ ಅಶ್ವಥ್ ರವರು, ಕಾಮನ್ಸ್ ಗಳು ಎಂದರೇನು? ಅವುಗಳ ಉಪಯೋಗ, ಅವುಗಳ ಸ್ಥಿತಿ ಗತಿಗಳನ್ನು ಮತ್ತು ಇಂದಿನ ಚಟುವಟಿಕೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ಚರ್ಚೆಯ ಮುಖೇನ ತಿಳಿಸಿಕೊಟ್ಟರು. ಎಲ್ಲಾ ಶಿಬಿರಾರ್ಥಿಗಳಿಗೆ ಕಾಮನ್ಸ್ ಗಳ ಬಗ್ಗೆ ಅರಿವಾಗಿದೆ ಎಂದು ತಿಳಿದ ಅಶ್ವಥ ರವರು ಮಕ್ಕಳಿಗೆ ಮುಂದೇನು ಮಾಡಬೇಕೆಂದು ಮಾರ್ಗದರ್ಶನ ನೀಡಿದರು. ಮುಂದಿನ ನಮ್ಮೆಲ್ಲರ ಕಾರ್ಯವು ಕಾಮನ್ಸ್ ಗಳ ಮೇಲೆ ನಮ್ಮ ಹಿಂದಿನ ಪೀಳಿಗೆಯವರು ಎಷ್ಟು ಅವಲಂಬಿತರಾಗಿದ್ದರು ಎಂದು ತಿಳಿಯುವುದು. ಅದಕ್ಕಾಗಿ ಕಾಮನ್ಸ್ ಗಳಲ್ಲಿ ಕಾಣಸಿಗುವ ತಿನ್ನಲು ಯೋಗ್ಯವಾದ ಸೊಪ್ಪುಗಳನ್ನು ಸಂಗ್ರಹಿಸಲು ಹೊರಟೆವು. ಎಲ್ಲಾ ಶಿಬಿರಾರ್ಥಿಗಳು ಸುತ್ತಮುತ್ತಲಿನ ಗ್ರಾಮದವರೇ ಆಗಿದ್ದ ಕಾರಣ ಅವರಿಗೆ ತಿಳಿದಷ್ಟರ ಮಟ್ಟಿಗೆ ಸಾಂಬಾರಿಗೆ ತಮ್ಮ ಅಮ್ಮಂದಿರು ಅಥವಾ ಅಜ್ಜಿಯರು ಉಪಯೋಗಿಸುತ್ತಿದ್ದ ಸೊಪ್ಪುಗಳನ್ನು ಸಂಗ್ರಹಿಸಲು ಸೂಚನೆ ನೀಡಲಾಯಿತು.
ಸೂಚನೆಯಂತೆ ಎಲ್ಲಾ ಶಿಬಿರಾರ್ಥಿಗಳು ಅಡವಿ ಫೀಲ್ಡ್ ಸ್ಟೇಷನ್ ನ ಪಕ್ಕದಲ್ಲಿಯೇ ಇದ್ದ ಗೋಮಾಳ ಪ್ರದೇಶಕ್ಕೆ ಭೇಟಿಯಿತ್ತು ತಮಗೆ ಸರಿ ಎನಿಸಿದ ಸೊಪ್ಪನ್ನು ಕೊಯ್ದು ತಂದರು. ಮೊದಲನೇ ಹಂತದಲ್ಲಿ ಅವರು ತಂದಿದ್ದ ಸೊಪ್ಪುಗಳಲ್ಲಿ ಯಾವುವು ಸಾಂಬಾರಿಗೆ ಉಪಯೋಗಿಸಲು ಯೋಗ್ಯ, ಅವುಗಳ ಪ್ರಾದೇಶಿಕ ಹೆಸರೇನು ಎಂದು ತಿಳಿಯಲು ಅದೇ ಗ್ರಾಮದ ಗ್ರಾಮಸ್ಥರ ನೆರವನ್ನು ಪಡೆಯಲಾಯಿತು. ಅವರ ಸಹಕಾರದಿಂದ ವಿಂಗಡಿಸಿದ ಸೊಪ್ಪಿನ ಪ್ರಭೇದಗಳನ್ನು ತಂದು ಪುಸ್ತಕದಲ್ಲಿಯೂ ಸಹ ಮತ್ತೊಮ್ಮೆ ಪರೀಕ್ಷಿಸಲಾಯಿತು. ಬೆರಗುಗೊಳಿಸುವಂತೆ ಸಾಂಬಾರಿಗೆ ಉಪಯೋಗಿಸಲು ಯೋಗ್ಯವಾದ 15 ಪ್ರಭೇದದ ಸೊಪ್ಪುಗಳನ್ನು ಸಂಗ್ರಹಿಸಿದ್ದೆವು, ಅದು ಕೇವಲ 2 ಗಂಟೆಗಳ ಕಾಲಾವಕಾಶದಲ್ಲಿ. ಎಲ್ಲರಿಗೂ ಆಶ್ಚರ್ಯವಾಯಿತು. ನಮ್ಮ ಸುತ್ತಮುತ್ತಲು ಇಷ್ಟೊಂದು ಸೊಪ್ಪುಗಳು ಸಾಂಬಾರಿಗೆ ಅಮ್ಮ ಅಥವಾ ಅಜ್ಜಿ ಉಪಯೋಗಿಸುತ್ತಾರೆಯೇ? ಎಂದು. ಅವರು ಸಂಗ್ರಹಿಸಿದ ಖಾದ್ಯ ಸೊಪ್ಪನ್ನು ಬೇಯಿಸಿ ತಮ್ಮ ಮಧ್ಯಾಹ್ನದ ಊಟದ ಜೊತೆಗೆ ಪಲ್ಯವಾಗಿಯೂ ಸಹ ಸೇವಿಸಿದರು.
ಮೊದಲನೇ ದಿನದ ಶಿಬಿರದ ಅಂತ್ಯದಲ್ಲಿ ಎಲ್ಲರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಎಲ್ಲರಿಗೂ ಸಾಂಬಾರಿಗೆ ಉಪಯೋಗಿಸುವ ವೈವಿಧ್ಯಮಯ ಸೊಪ್ಪುಗಳನ್ನು ಕಂಡುಹಿಡಿದು, ಅವುಗಳ ಹೆಸರುಗಳನ್ನು ತಿಳಿದು ತುಂಬಾ ಸಂತೋಷವಾಗಿತ್ತು. ಅವರು ವೈಜ್ಞಾನಿಕ ಹೆಸರುಗಳ ಪಟ್ಟಿಯನ್ನು ಸಹ ಸಂಗ್ರಹಿಸಿದರು. ನಾಳೆಯ ಶಿಬಿರದಲ್ಲಿ ಏನು ಚಟುವಟಿಕೆ ಇರುತ್ತದೆ ಎಂದು ಚರ್ಚಿಸುತ್ತಾ ಎಲ್ಲರೂ ಆ ದಿನದ ಶಿಬಿರದಿಂದ ಬೀಳ್ಕೊಂಡರು.
ಎರಡನೇ ದಿನ:
ಮೊದಲನೇ ದಿನದಂತೆಯೇ ಎರಡನೇ ದಿನವೂ ಎಲ್ಲಾ ಶಿಬಿರಾರ್ಥಿಗಳು ಮತ್ತು ಡಬ್ಲ್ಯೂ ಸಿ ಜಿ ಸ್ವಯಂ ಸೇವಕರು, ಸದಸ್ಯರು ಬೆಳಗ್ಗೆ 8 ಗಂಟೆಯಷ್ಟರಲ್ಲಿ ಅಡವಿ ಫೀಲ್ಡ್ ಸ್ಟೇಷನ್ ತಲುಪಿದೆವು. ಮೊದಲನೇ ಚಟುವಟಿಕೆ ಕಾಮನ್ಸ್ ಗಳಲ್ಲಿ ಕಾಣಸಿಗುವ ಪಕ್ಷಿಗಳ ಗಣತಿ ಮಾಡುವುದು. ಹಿಂದಿನ ದಿನದಂದೇ ಎಲ್ಲಾ ಶಿಬಿರಾರ್ಥಿಗಳಿಗೆ ಪಕ್ಷಿ ವೀಕ್ಷಣೆ, ಅವುಗಳನ್ನು ದಾಖಲಿಸಲು ಉಪಯೋಗಿಸುವ ಓ.ಡಿ.ಕೆ ಗಳ ಬಗ್ಗೆ ತಿಳಿದಿದ್ದರಿಂದ ಬೆಳಗಿನ ಉಪಹಾರ ಮುಗಿಸಿದ ನಂತರ ಎಲ್ಲರೂ ಕಾಮನ್ಸ್ ಗಳಲ್ಲಿ ಕಾಣಸಿಗುವ ಪಕ್ಷಿ ಗಣತಿಯ ಕಡೆ ನಡೆದೆವು.
ಸುನೀಲ್ ಮತ್ತು ವಿವೇಕ್ ರವರು ನಮಗೆ ಮಾರ್ಗದರ್ಶಕರಾದರು. ಎಲ್ಲರೂ ಪಕ್ಕದಲ್ಲಿಯೇ ಇದ್ದ ಒಂದು ಕುಂಟೆಯ ಬಳಿ ತಲುಪಿದೆವು. ಆ ಕುಂಟೆಯು ಎಲ್ಲಾ ಶಿಬಿರಾರ್ಥಿಗಳಿಗೆ ಚಿರಪರಿಚಿತವಿತ್ತು. ಆದರೆ ಅದರ ಮಹತ್ವದ ಬಗ್ಗೆ ಎಂದೂ ಯಾರೂ ಯೋಚಿಸಿರಲಿಲ್ಲ. ಆದ ಕಾರಣ ಅದನ್ನು ಮನವರಿಕೆ ಮಾಡಲು ಅಶ್ವಥರವರು ಒಂದು ಚಟುವಟಿಕೆಯನ್ನು ಹೇಳಿದರು. ಎಲ್ಲರನ್ನು ಕೆರೆಯ ಬಳಿ ಕುಳಿತುಕೊಳ್ಳಲು ಹೇಳಿ ಅವರಿಗೆ ಕೆಲವು ಪ್ರಶ್ನೆಗಳನ್ನು ನೀಡಿದರು ಕೆರೆಯ ವಿಸ್ತೀರ್ಣ, ಅದರ ಆಳ, ಕೆರೆಯ ದಡದಲ್ಲಿ ಕಾಣುವ ಮರ, ಬಳ್ಳಿ, ಸಸ್ಯಗಳ ಪ್ರಭೇದ, ಜಲಚರಗಳ ವಿವರ, ಕೆರೆಯ ಬಳಿ ಕಾಣುವ ಪಕ್ಷಿಗಳ ವಿವರಗಳನ್ನು ಗಮನಿಸುವಂತೆ ನಿರ್ದೇಶಿಸಿದರು. ಜೊತೆಗೆ ಅವರಿಗೆ ಬರುವ ರೀತಿಯಲ್ಲಿ ಕೆರೆಯ ಚಿತ್ರವನ್ನು ಸಹ ಬಿಡಿಸಲು ಹೇಳಿದರು. ಇದು ಶಿಬಿರಾರ್ಥಿಗಳಿಗೆ ಏನು ಮಾಡಬೇಕು ಎಂಬುದನ್ನು ತಿಳಿಯಲು ಸಹಕಾರಿಯಾಯಿತು. ಕೆರೆಯ ಬಳಿಯಲ್ಲಿಯೇ ಸರಿ ಸುಮಾರು 3 ಗಂಟೆಗಳ ಕಾಲ ಕಳೆದು ಶಿಬಿರಾರ್ಥಿಗಳು ಎಲ್ಲಾ ಜೀವ ವೈವಿಧ್ಯತೆಯನ್ನು ದಾಖಲಿಸಿದರು. ಈ ಚಟುವಟಿಕೆಯ ನಂತರ ಎಲ್ಲರೂ ಅಡವಿ ಫೀಲ್ಡ್ ಸ್ಟೇಷನ್ ಗೆ ಹಿಂತಿರುಗಿ ಚಿತ್ರಗಳನ್ನು ನೋಡಿ ಕೆರೆಯಲ್ಲಿನ ಜೀವ ವೈವಿಧ್ಯತೆಯ ಬಗ್ಗೆ ಚರ್ಚಿಸಲಾಯಿತು. ಅದರಲ್ಲಿ ಕೆಲವು ಶಿಬಿರಾರ್ಥಿಗಳು ಕೆರೆಯಲ್ಲಿ ಪ್ಲಾಸ್ಟಿಕ್ ಇದ್ದದ್ದನ್ನು ಕಂಡು ಸಂತಾಪ ವ್ಯಕ್ತಪಡಿಸಿದರು. ಊಟದ ಸಮಯವಾಗಿದ್ದರಿಂದ ಮಧ್ಯಾಹ್ನದ ಊಟದ ಸಮಯದ ನಂತರ ಚರ್ಚೆಯನ್ನು ಮುಂದುವರಿಸಲು ಎಲ್ಲರು ಊಟಕ್ಕೆ ತೆರಳಿದೆವು.
ಕೆರೆ:
ಹೆಚ್ಚಿನ ಶಿಬಿರಾರ್ಥಿಗಳು ಪಕ್ಕದಲ್ಲಿಯೇ ಇದ್ದ ಗ್ರಾಮದವರಾಗಿದ್ದರಿಂದ ಪ್ಲಾಸ್ಟಿಕ್ ಅನ್ನು ನಿಮ್ಮ ಊರಿನವರು ಕೆರೆಗೆ ತಂದು ಹಾಕುತಿದ್ದಾರೆಯೇ? ಎಂಬುದರೊಂದಿಗೆ ಕೆರೆಯಲ್ಲಿನ ಪ್ಲಾಸ್ಟಿಕ್ ಬಗ್ಗೆ ಚರ್ಚೆ ಶುರುವಾಯಿತು. ಆ ಶಿಬಿರಾರ್ಥಿಗಳು “ಇದಕ್ಕೆ ನಾವು ಕಾರಣವಲ್ಲ, ನಾವು ಇಷ್ಟೊಂದು ಪ್ಲಾಸ್ಟಿಕ್ ಉಪಯೋಗಿಸುವುದೇ ಇಲ್ಲ, ಇದು ಇಲ್ಲಿಗೆ ವಿಹಾರಕ್ಕೆ ಎಂದು ಬರುವ ನಗರ ವಾಸಿಗಳ ಕೆಲಸ” ಎಂದರು. ಹೀಗೆ ಮುಂದುವರಿದ ಒಂದು ಗಂಟೆಯ ಚರ್ಚೆಯ ಸಾರಾಂಶ ಕಾಮನ್ಸ್ ಗಳನ್ನು ನಾವು ನಿರ್ಲಕ್ಷಿಸುತ್ತಿರುವುದೇ ಮೂಲ ಕಾರಣ ಎಂಬುದು.
ಎಲ್ಲಾ ಶಿಬಿರಾರ್ಥಿಗಳು ಕಾಮನ್ಸ್ ಗಳ ಮೌಲ್ಯವನ್ನು ಅದರ ಪ್ರಾಮುಖ್ಯತೆಯನ್ನು ತಿಳಿದರು. ಶಿಬಿರದ ಅಂತ್ಯಕ್ಕೆ ಎಲ್ಲರಿಗು ಕಾಮನ್ಸ್ ಗಳ ಅಳಿವು ಉಳಿವು ನಮ್ಮ ಕೈಲಿದೆ. ಅದು ನಮ್ಮೆಲ್ಲರ ಸ್ವತ್ತು, ಎಲ್ಲರೂ ಅದರ ಸಂರಕ್ಷಣೆಗೆ ಜೊತೆಯಾಗಬೇಕು ಎಂಬುದರ ಅರಿವಾಯಿತು.
ಈ ಕಾರ್ಯಕ್ರಮವು ಅವರ ಭವಿಷ್ಯದ ಪ್ರಯತ್ನಗಳಿಗೆ ಅಮೂಲ್ಯವಾದ ಒಳಹರಿವುಗಳನ್ನು ಒದಗಿಸುವುದು ಮಾತ್ರವಲ್ಲದೆ ಜವಾಬ್ದಾರಿಯ ಪ್ರಜ್ಞೆಯನ್ನು ಮತ್ತು ಅವರ ಸುತ್ತಮುತ್ತಲಿನ ಪ್ರದೇಶಗಳನ್ನು ರಕ್ಷಿಸುವ ಮತ್ತು ಪಾಲಿಸುವ ಬಯಕೆಯನ್ನು ಹುಟ್ಟುಹಾಕಿದೆ. ಕೃತಜ್ಞತೆ ಮತ್ತು ನವೀಕೃತ ಸಂಕಲ್ಪದೊಂದಿಗೆ, ಈ ಯುವ ಮನಸ್ಸುಗಳು ತಮ್ಮ ಜೀವನದಲ್ಲಿ ಕಲಿತ ಪಾಠಗಳನ್ನು ತಮ್ಮ ಸುತ್ತಲಿನ ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಈ ಯೋಜನೆಗೆ ಸಹಕಾರ ನೀಡಿದ Bengaluru Sustainability Forum (BSF)ಗು, ರಾಮಕೃಷ್ಣ ಮಿಷನ್, ಶಿವನಹಳ್ಳಿ ಹಾಗು ಆಯೋಜಿಸಿದ ಡಬ್ಲ್ಯೂ ಸಿ ಜಿ ತಂಡಕ್ಕೂ ನನ್ನ ಧನ್ಯವಾದಗಳು.
ಲೇಖನ: ಹೂರ್ ಬಾನು
ಚಿಕ್ಕಬಳ್ಳಾಪುರ ಜಿಲ್ಲೆ